*"ಬಲಿ ಕೊಡಬೇಕೆ ? ಹೌದು _____ ಬಲಿ ಕೊಡಬೇಕು"*


ಸಮಾಜದಲ್ಲಿ, ಜಗತ್ತಿನಲ್ಲಿ ದೇವರಿಗೆ ಸಂಬಂಧಿಸಿದಂತೆ ಬಲಿ ಕೊಡುವ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಬಲಿ ಕೊಡಬೇಕು ಎಂದು ಹೇಳುತ್ತಾರೆ.


ಕೆಲವರು ಯಾರಿಗೂ ಕೆಟ್ಟದ್ದು ಮಾಡದ, ಮುಗ್ಧ ಪ್ರಾಣಿಗಳ ಬಲಿ ಕೊಡಬಾರದು, ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ, ಎಂದು ಹೇಳುತ್ತಾರೆ.


*ಪ್ರಶ್ನೆ*: ಹಾಗಾದರೆ ಬಲಿ ಎಂದರೇನು ?


ಈ ಪ್ರಶ್ನೆಗೆ ಸಿಗುವ ಸರಿಯಾದ ಉತ್ತರವೆಂದರೆ "ತ್ಯಾಗ"  ಮಾಡುವುದು.


*ಪ್ರಶ್ನೆ*: ತ್ಯಾಗ ಎಂದರೇನು ?


ಈ ಪ್ರಶ್ನೆಗೆ ಉತ್ತರ, ನನಗೆ ಸಂಬಂಧಿಸಿದುದು, ನನ್ನ ಸ್ವಂತದ್ದು ಏನಿದೆ ? ಅದನ್ನು ಕಳೆದುಕೊಳ್ಳುವುದೇ‌ ತ್ಯಾಗ.


*ಪ್ರಶ್ನೆ*: ದೇವರು ಬಲಿ ಅಥವಾ ತ್ಯಾಗ ಬಯಸುತ್ತಾನೆಯೇ ?


ಈ ಪ್ರಶ್ನೆಗೆ ಉತ್ತರ, ದೇವರನ್ನು ಕರುಣಾಮಯಿ, ದಯಾಮಯಿ ಎಂದು ಹೇಳುತ್ತೇವೆ. 


*ಪ್ರಶ್ನೆ: ದೇವರು ಕೇವಲ ಮನುಷ್ಯನಿಗೆ ಮಾತ್ರ ಕರುಣಾಮಯಿ, ದಯಾಮಯಿ ಆಗಿದ್ದಾನೆಯೇ ?....*


*ಉತ್ತರ*:: ಎಲ್ಲಾ ಪ್ರಾಣಿಗಳು ದೇವರ ಸೃಷ್ಠಿ. ಹೀಗಾಗಿ ಎಲ್ಲಾ ಪ್ರಾಣಿಗಳಿಗೂ ದೇವರು ಕರುಣಾಮಯಿ, ದಯಾಮಯಿ ಆಗಿದ್ದಾನೆ.


ಈ ಕಾರಣದಿಂದ ದೇವರು ಪ್ರಾಣಿ ಬಲಿ ಬಯಸುತ್ತಾನೆ ಎನ್ನುವುದು ತಪ್ಪಾಗುತ್ತದೆ.

ದೇವರು ನಮ್ಮ ಸ್ವಂತದ್ದು ಏನಿದೆ ? "ಆ ನಮ್ಮ ಸ್ವಂತದ್ದನ್ನು ತನಗೆ ಬಲಿ ನೀಡು"  ಎಂದು ಬಯಸುತ್ತಾನೆ.


*ಪ್ರಶ್ನೆ* : ಈ ಜಗತ್ತಿನಲ್ಲಿ ನಮ್ಮ ಸ್ವಂತದ್ದು ಏನಿದೆ ?

*ಉತ್ತರ*:  ಜಗತ್ತಿನಲ್ಲಿ ಇರುವುದೆಲ್ಲವೂ, ಆ ಭಗವಂತನದ್ದೇ. ನಮ್ಮ ಸ್ವಂತದ್ದು ಏನಾದರೂ ಇದ್ದರೆ, ಅದು "ನಾನು ಎನ್ನುವ ಅಹಂಕಾರದ ತಿಳುವಳಿಕೆ ಮಾತ್ರ" .


"ಆದ್ದರಿಂದ ದೇವರು ಈ ಅಹಂಕಾರ ತಿಳುವಳಿಕೆಯ ಬಲಿಯನ್ನು ಬಯಸುತ್ತಾನೆ. ನಾವು, ನಮ್ಮ ಅಹಂಕಾರದ ಬಲಿಯನ್ನು ದೇವರಿಗೆ ಕೊಡಬೇಕು".


*ಪ್ರಶ್ನೆ*: ಆದರೂ ಬಲಿ ಪದ್ಧತಿ ಏಕೆ ಬೆಳೆದಿದೆ ?

*ಉತ್ತರ* : ವಿಜ್ಞಾನದಲ್ಲಿ ಮಂಗನಿಂದ ಮಾನವ ಎನ್ನುವ ಡಾರ್ವಿನ್ನನ ಪ್ರಾಣಿಗಳ ವಿಕಾಸವಾದ ಇದೆ.


ಇದೇ ರೀತಿ ಉತ್ತಮ ಕರ್ಮ, ಕೆಟ್ಟ  ಕರ್ಮಗಳ ಆಧಾರದ ಮೇಲೆ ಜೀವಾತ್ಮಗಳ ವಿಕಾಸದ ನಿಯಮವೂ ಜಗತ್ತಿನಲ್ಲಿದೆ.


ಇದರ ಪ್ರಕಾರ..

*ಕರ್ಮದ ನಿಯಮದಂತೆ ಒಂದು ಪ್ರಾಣಿ ಮರಣದ ನಂತರ, ಅದರ ಉತ್ತಮ ಮತ್ತು ಕೆಟ್ಟ ಕರ್ಮ ಅನುಸಾರ ಇನ್ನೊಂದು ಪ್ರಾಣಿಯಾಗಿ ಜನ್ಮ ಪಡೆಯುತ್ತದೆ*.



ಪ್ರತಿಯೊಂದು ಜೀವಿಗಳು ಕೆಲವು ಮುಖ್ಯ ಅಭ್ಯಾಸವನ್ನು ಹೊಂದಿರುತ್ತವೆ.

ಉದಾಹರಣೆಗೆ: ಕೋಗಿಲೆ ಕೂಗುವುದು, ನವಿಲು ಕುಣಿಯುವುದು. ನರಿ ಮೋಸ ಮಾಡುವುದು. ಎಮ್ಮೆ ಕೆಲಸ ಮಾಡದೆ, ಕುಂತಲ್ಲೆ ಕುಳಿತಿರುವುದು. ಕುರಿ ಆಡು ಮೇಕೆ ಮ್ಯಾ... , ಮ್ಯಾ...  ಎನ್ನುವುದು.


ಹೀಗೆ ಜೀವಿಗಳಿಗೆ ಅನೇಕ ಅಭ್ಯಾಸಗಳಿವೆ. ನಾವು ಸಹ ಜೀವಾತ್ಮ ವಿಕಾಸದಲ್ಲಿ ಈ ಪ್ರಾಣಿಗಳಾಗಿಯೇ ಬಂದಿದ್ದೇವೆ. ಈ ಮನುಷ್ಯ ಶರೀರದಲ್ಲಿಯೂ ಪ್ರಾಣಿಗಳ ಕೆಟ್ಟ ಅಭ್ಯಾಸ ನಮ್ಮಲ್ಲಿ ಉಳಿದುಕೊಂಡಿದೆ. ನರಿಯಂತೆ ಮೋಸ ಮಾಡುವುದು. ಎಮ್ಮೆಯಂತೆ ಮೈಗಳ್ಳತನ, ಮಾಡುವುದು. ಕುರಿಯಂತೆ ಮ್ಯಾ..., ಮ್ಯಾ.... ಅಂದರೆ ನಾನು, ನಾನು ಎನ್ನುವುದು.


*ಈಗ ನಾವು ಮನುಷ್ಯರಾಗಿರುವದರಿಂದ, ನಮ್ಮಲ್ಲಿ ಇನ್ನೂ ಉಳಿದುಕೊಂಡಿರುವ ಪ್ರಾಣಿಗಳ ಅಭ್ಯಾಸ ಬಲಿ ಕೊಡಲು ದೇವರು ಬಯಸುತ್ತಾನೆ.* ಹೊರತು ಪ್ರಾಣಿಗಳನ್ನೆ ತನಗೆ ಬಲಿ ಕೊಡು, ಎಂದು ಬಯಸುವುದಿಲ್ಲ.


*ಆದರೆ ನಾವು ಇದನ್ನು ಅರ್ಥ ಮಾಡಿಕೊಳ್ಳದೆ, ಪ್ರಾಣಿಗಳ ಅಭ್ಯಾಸ ನಮ್ಮಲ್ಲಿ ಹಾಗೆಯೇ ಇಟ್ಟುಕೊಂಡು, ಪ್ರಾಣಿಗಳನ್ನೆ ಬಲಿ ಕೊಡುತ್ತಿದ್ದೇವೆ*.


ಹೀಗೆ ತಪ್ಪು ತಿಳುವಳಿಕೆಯಿಂದ ಬಲಿ ಪದ್ಧತಿ ಬೆಳೆದುಬಂದಿದೆ.


***"" "" "" "******"*****


ಈ ಬಲಿ ಎನ್ನುವ ಶಬ್ದವನ್ನು ತಿಳಿದುಕೊಂಡರೆ, ನಿಜವಾದ ಬಲಿ ನಮಗೆ ತಿಳಿಯುತ್ತದೆ.


*ಬಲಿ ಕಥೆ* : ಸತ್ಯ ಯುಗದಲ್ಲಿ, ವಾಮನ ಮೂರು ಹೆಜ್ಜೆಗಳ ದಾನವನ್ನು ಯಜ್ಞ ಮಾಡುತ್ತಿರುವ ಬಲಿ ಚಕ್ರವರ್ತಿಗೆ ಕೇಳುತ್ತಾನೆ. ವಾಮನ, ವಿರಾಟ ಸ್ವರೂಪ ಹೊಂದಿ, ಎರಡು ಹೆಜ್ಜೆಗಳಲ್ಲಿ 1.ಭೂಮಿಯನ್ನು, 2. ಆಕಾಶವನ್ನು ಅಳೆದು, ಮೂರನೇ ಹೆಜ್ಜೆ ಎಲ್ಲಿಡಬೇಕು ? ಎಂದು ಕೇಳುತ್ತಾನೆ.


ಆಗ ಬಲಿ ಚಕ್ರವರ್ತಿ ಯಾವುದೋ ಪ್ರಾಣಿಯನ್ನು ಮುಂದು ಮಾಡದೆ, ತನ್ನ ಸ್ವಂತ ತಲೆಯನ್ನು ಮುಂದೆ ಮಾಡುತ್ತಾನೆ.


"*ಇದಕ್ಕಾಗಿಯೇ ಅಂದಿನಿಂದ ತ್ಯಾಗದ ಮತ್ತೊಂದು ಹೆಸರೇ ಬಲಿ ಆಗಿದೆ*"


ಇಂತಹ ನಿಜವಾದ ತ್ಯಾಗವನ್ನು ಅರ್ಥ ಮಾಡಿಕೊಳ್ಳೋಣ. *ಬಲಿಯಂತೆ ನಮ್ಮನ್ನು ನಾವು ತ್ಯಾಗ ಮಾಡಲು ಸಾಧ್ಯವಾಗದಿದ್ದರೂ, ನಮ್ಮಲ್ಲಿರುವ ಅಹಂಕಾರವನ್ನಾದರೂ ದೇವರಿಗೆ ಬಲಿ ನೀಡೋಣ.*


ಆದ್ದರಿಂದ, ಬಲಿ ಕೊಡಬೇಕೆ ? ಎನ್ನುವ ಪ್ರಶ್ನೆಗೆ ಉತ್ತರ....


*"ಹೌದು. ಬಲಿ ಕೊಡಬೇಕು. ನಮ್ಮ ಅಹಂಕಾರದ ಬಲಿ ಕೊಡಬೇಕು."*


ಎಲ್ಲರಿಗೂ, ವರ್ಷದಲ್ಲಿ ಮೂರುವರೆ ಮುಹೂರ್ತಗಳಲ್ಲಿ, ಒಂದು ಶ್ರೇಷ್ಠ ಮುಹೂರ್ತವಾಗಿರುವ ಬಲಿ ಪಾಡ್ಯಮಿ ಹಬ್ಬದ ಹಾರ್ಧಿಕ ಶುಭಾಶಯಗಳು.


ಇಂತಿ ತಮ್ಮ


ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ


(*ದೇವರಲ್ಲಿ ಪ್ರಾರ್ಥನೆ : ಈ ಜ್ಞಾನ ಪುಣ್ಯ ಫಲದ ಭಾಗ, ಈ ಲೇಖನವನ್ನು ಹಂಚಿಕೊಳ್ಳುವವರಿಗೂ ಸಿಗಲಿ🙏*)

Comments

Popular posts from this blog