*"ಜೀವನದಲ್ಲಿ ಕಷ್ಟಗಳು ಬಂದಾಗ ಹೇಳಿಕೊಳ್ಳಬೇಕಾದಂತಹ ತಿಳುವಳಿಕೆಯ ಮಾತು"*
ವೈಕುಂಠದ ಮಹಾರಾಣಿಯಾದಂತಹ ಲಕ್ಷ್ಮಿ ಮಾತೆ ಭೂಲೋಕದ ಜನರ ಕುಕರ್ಮಗಳನ್ನು ನಾಶ ಮಾಡಲು ಭೂಮಿಯನ್ನೇ ತನ್ನ ತಾಯಿಯನ್ನಾಗಿ ಮಾಡಿಕೊಂಡು ಭೂಲೋಕದ ಎಲ್ಲಾ ಜನರ ಕರ್ಮ ಸಂಬಂಧಿಯಾದರು. ಭೂಲೋಕದ ಎಲ್ಲ ಜನರ ಕರ್ಮ ಸಂಬಂಧಿಯಾಗಿ ಅವರ ಪಾಪಕರ್ಮಗಳನ್ನು, ಸೀತೆ ರೂಪದಲ್ಲಿ, ಲಕ್ಷ್ಮಿ ಮಾತೆ ಹೇಗೆ ಅನುಭವಿಸಿ ನಾಶ ಮಾಡಿದರು ? ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ತಿಳಿದಿದ್ದೇವೆ.
ಸೀತಾ ಮಾತೆ ಮದುವೆಯ ನಂತರ ಹಾಗೂ ಕೊನೆಗೆ ಭೂಮಿಯನ್ನು ಸೇರುವವರೆಗೂ ನಿರಂತರವಾಗಿ ಕಷ್ಟಗಳನ್ನೆ ಅನುಭವಿಸಿದರು. ಆ ಕಷ್ಟಗಳನ್ನು ಅನುಭವಿಸುವಾಗ ಜೀವನದ ಒಂದು ಸತ್ಯವನ್ನು ಅವರು ಪದೇ ಪದೇ ಸ್ಮರಿಸಿಕೊಳ್ಳುತ್ತಿದ್ದರು. ಈ ಸತ್ಯ, ಕಷ್ಟಗಳನ್ನು ಎದುರಿಸಲು ಅವರಿಗೆ ಸಹಾಯ ಮಾಡಿತು.
ಈ ಸತ್ಯವನ್ನು ನಾವೆಲ್ಲರೂ ತಿಳಿಯುವುದು ಮತ್ತು ಸದಾ ಕಾಲ ನಮ್ಮ ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಅವಶ್ಯಕವಾಗಿದೆ.
* ಈ ಸತ್ಯವನ್ನು ಸದಾ ಸ್ಮರಣೆ ಮಾಡುವುದರಿಂದ, ಬಹಳಷ್ಟು ತಪ್ಪುಗಳನ್ನು ಮಾಡುವುದರಿಂದ ನಾವು ಪಾರಾಗುತ್ತೇವೆ.
* ಜೀವನದ ಕಷ್ಟಗಳನ್ನು ಕಳೆಯಲು ಸಹ ಈ ಸತ್ಯ ಸಹಾಯ ಮಾಡುತ್ತದೆ.
ಆ ಸತ್ಯ ಯಾವುದೆಂದರೆ, ಜಗತ್ತಿನ ಪ್ರಮುಖವಾದ ನಿಯಮವಾಗಿದೆ. ಆ ನಿಯಮವೇ "ಬದಲಾವಣೆ".
* ಒಂದು ಮಗು ಹುಟ್ಟುತ್ತದೆ. ಅದು ಮಗುವಾಗಿಯೇ ಇರುವುದಿಲ್ಲ. ಮಗು ಬಾಲಕನಾಗುತ್ತಾನೆ.
* ಬಾಲಕ ಯುವಕನಾಗುತ್ತಾನೆ.
* ಯುವಕ ಮಧ್ಯ ವಯಸ್ಕನಾಗುತ್ತಾನೆ.
* ಮಧ್ಯ ವಯಸ್ಕ ಮುಪ್ಪಾಗುತ್ತಾನೆ.
* ಸಮಯ ಮುಂಜಾನೆಯಿಂದ ಮಧ್ಯಾಹ್ನವಾಗುತ್ತದೆ ಮಧ್ಯಾಹ್ನದಿಂದ ಸಂಜೆ ಮತ್ತು ರಾತ್ರಿ ಆಗುತ್ತದೆ
* ಕೆಟ್ಟವರು ಒಳ್ಳೆಯವರು ಆಗಬಹುದು ಒಳ್ಳೆಯವರು ಕೆಟ್ಟವರು ಆಗಬಹುದು
* ಋತುಗಳು ಮಳೆಗಾಲದಿಂದ ಚಳಿಗಾಲಕ್ಕೆ ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಬದಲಾಗುತ್ತದೆ.
* ಇದೇ ರೀತಿ ಜೀವನದಲ್ಲಿ ಸಂಬಂಧಗಳು ಬದಲಾಗುತ್ತವೆ. ವ್ಯಕ್ತಿಗಳು ಬದಲಾಗುತ್ತಾರೆ.
* ಜೀವನದಲ್ಲಿ ಘಟಿಸುವ ಘಟನೆಗಳು ಬದಲಾಗುತ್ತವೆ.
* ಜೀವನದ ಕಷ್ಟ ಸುಖ ನೋವು ನಲಿವು ಎಲ್ಲವೂ ಬದಲಾಗುತ್ತದೆ.
ಇದು ನಮಗೆ ಗೊತ್ತಿದ್ದರೂ ಸಹ,
1. ಸುಖ ಬಂದಾಗ ಸುಖ ಶಾಶ್ವತವಿರಲಿ ಎಂದು ಬಯಸುತ್ತೇವೆ.
2. ಕಷ್ಟಗಳು ಬಂದಾಗ ಇವುಗಳು ನಮ್ಮ ಜೀವನದಿಂದ ಹೋಗುವುದೇ ಇಲ್ಲವೇನೋ ಎನ್ನುವಂತೆ, ಜೀವನದಲ್ಲಿ ಧೈರ್ಯ ಕಳೆದುಕೊಳ್ಳುತ್ತೇವೆ. ಹತಾಶರಾಗುತ್ತೇವೆ.
ಸೀತಾ ಮಾತೆ ತಮಗೆ ಎಂತಹ ಕಷ್ಟಗಳೇ ಬಂದರೂ ಸಹ ಜಗತ್ತಿನ ಈ ಸತ್ಯವನ್ನು ಸ್ಮರಣೆ ಮಾಡುತ್ತಿದ್ದರು. ಅದುವೇ, "*ಈ ಕಷ್ಟದ ಈ ಸಮಯ ಸಹ ಕಳೆದುಹೋಗುತ್ತದೆ*" .
ಆದರೆ ನಾವು ಈ ವಿಷಯವನ್ನು ಮರೆಯುತ್ತೇವೆ. ಸುಖ ಶಾಶ್ವತವನ್ನಾಗಿ, ಮಾಡಿಕೊಳ್ಳಲು ಮಾಡಬಾರದ ಮೋಸ ವಂಚನೆ, ಅನ್ಯಾಯ ಅನಾಚಾರಗಳ ಕೆಲಸ ಮಾಡುತ್ತೇವೆ.
ಕಷ್ಟಗಳು ನಮ್ಮಿಂದ ಹೋಗುವುದಿಲ್ಲವೇನೋ ಎನ್ನುವಂತೆ, ಜೀವನಕ್ಕೆ, ಜಗತ್ತಿಗೆ ದೇವರಿಗೆ ಬೇಸರ ತೋರುತ್ತೇವೆ, ಶಪಿಸುತ್ತೇವೆ.
ನಮಗೆ ಜೀವನದಲ್ಲಿ ಎಷ್ಟೇ ದೊಡ್ಡ ಸುಖ ಸಂತೋಷದ ಕ್ಷಣಗಳು ಬರಲಿ. ಆ ಸಮಯ ಕಳೆದುಹೋಗುವುದು ಖಚಿತ.
ಸುಖ ಕಳೆದುಹೋಗುವುದಾದರೆ, ಕಷ್ಟಗಳು ಸಹ ಶಾಶ್ವತವಾಗಿ ನಿಲ್ಲುವಂತಹದಲ್ಲ.
ಜಗತ್ತಿನಲ್ಲಿ ಎಲ್ಲವೂ ತಾತ್ಕಾಲಿಕ. ಎಲ್ಲವೂ ಬದಲಾಗುತ್ತದೆ, ಎನ್ನುವ ಸತ್ಯವನ್ನು ನಾವು ಸದಾ ಸ್ಮರಿಸಬೇಕಾಗಿದೆ. ಈ ಸತ್ಯದ ನಿರಂತರ ಸ್ಮರಣೆಯಿಂದ ನಾವು ಸುಖಕ್ಕೆ ಅಂಟಿಕೊಳ್ಳುವುದಿಲ್ಲ. ಕಷ್ಟಗಳಿಂದ ದೂರ ಓಡಿಹೋಗುವುದಿಲ್ಲ.
ಆದ್ದರಿಂದ ಕಷ್ಟಗಳು ಬಂದಾಗ,
"ಸುಖ ಬದಲಾದಂತೆ ಕಷ್ಟಗಳು ಸಹ ಬದಲಾಗುತ್ತವೆ" . ಕಷ್ಟಗಳು ಸಹ ಶಾಶ್ವತ ಇರುವುದಿಲ್ಲ ಎನ್ನುವುದನ್ನು ಪದೇ ಪದೇ ಸ್ಮರಿಸಿಕೊಳ್ಳುತ್ತಾ ಕಷ್ಟಗಳಿಗೆ ಎದೆಗುಂದದೆ, ಧೈರ್ಯವಾಗಿ ಎದುರಿಸೋಣ.
********* "******* ***********
*ಶಾಶ್ವತದ ಇಚ್ಛೆ* : ಜಗತ್ತಿನಲ್ಲಿ *ಎಲ್ಲವೂ ಬದಲಾಗುತ್ತದೆ* ಎನ್ನುವ ತಿಳುವಳಿಕೆ
ಈ ಜಗತ್ತಿನ ಯಾವುದು ಶಾಶ್ವತವಲ್ಲ, ಎಲ್ಲವೂ ತಾತ್ಕಾಲಿಕ ಎನ್ನುವ ಸತ್ಯವನ್ನು ಹೇಳುತ್ತದೆ.
ಹೀಗಾಗಿ ಜಗತ್ತಿನಲ್ಲಿ ಶಾಶ್ವತವಾದದನ್ನು ತಿಳಿಯಲು ಪ್ರಯತ್ನಿಸಬೇಕಾಗಿದೆ. ಹಾಗೂ ಶಾಶ್ವತವಾದದನ್ನು ಪಡೆಯಲು ಪ್ರಯತ್ನಿಸಬೇಕಾಗಿದೆ.
ಈ ಜಗತ್ತಿನ ಶಾಶ್ವತವಾದದನ್ನು ಸತ್ಯ ಜ್ಞಾನದಲ್ಲಿ ಮಾತ್ರ ನಾವು ಪಡೆಯುತ್ತೇವೆ. ಈ ಸತ್ಯ ಜ್ಞಾನವೇ ನಮ್ಮನ್ನು ವೈಯಕ್ತಿಕವಾಗಿ ಸತ್ಯ ಯುಗದಲ್ಲಿಯೂ ನೆಲೆಸುವಂತೆ ಮಾಡುತ್ತದೆ.
ನಮ್ಮನ್ನು ವೈಯಕ್ತಿಕವಾಗಿ ಸತ್ಯಯುಗದಲ್ಲಿ ನೆಲೆಸುವಂತೆ ಮಾಡುವ ಸತ್ಯ ಯಾವುದೆನ್ನುವದನ್ನು, ಮುಂದಿನ ಸಂಚಿಕೆಯಲ್ಲಿ ನೋಡೋಣ.
ಎಲ್ಲರಿಗೂ ವಂದನೆಗಳು.
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments
Post a Comment