*ಒಬ್ಬ ಶಿಕ್ಷಕರೊಂದಿಗೆ ಒಂದೇ ದಿನದ ಒಡನಾಟ. ಈಗ ಅವರ ಭಾರವಾದ ನೆನಪು ಮೂಡಿದಾಗ, ಎರಡು, ಮೂರು ರೀತಿಯ ಯೋಚನೆಗಳು*
ಎಲ್ಲರಿಗೆ ನಮಸ್ಕಾರಗಳು 🙏,
ಆತ್ಮೀಯರೇ,
2025 ಜನೆವರಿಯಲ್ಲಿ ಸೇಡಂ ತಾಲೂಕಿನ ಒಂದು ಪ್ರಾಥಮಿಕ ಶಾಲೆಯಲ್ಲಿ ನಮ್ಮ ಕಾರ್ಯಕ್ರಮ ಮಾಡಲು ಹೋಗಿದ್ದೇವು. ಆ ಸಂದರ್ಭದಲ್ಲಿ ಶಾಲೆಯಲ್ಲಿದ್ದಂತಹ ಒಬ್ಬ ಯುವ ಉತ್ಸಾಹಿ ಶಿಕ್ಷಕರು ನಮ್ಮ ಜೊತೆ ಶಾಲೆಯ ಬಗ್ಗೆ, ಶಾಲೆ ವಿಧ್ಯಾರ್ಥಿಗಳ ಬಗ್ಗೆ ಕಳಕಳಿಯ ಮಾತುಗಳನ್ನು ಆಡಿದರು.
ಅವರು "ಸರ್ ದಯವಿಟ್ಟು, ಶಾಲಾ ವಿದ್ಯಾರ್ಥಿಗಳು ದಿನಾಲು ಶಾಲೆಗೆ ಬರುವಂತೆ, ಅವರಿಗೆ ಪ್ರೇರಣೆ ಮಾತುಗಳನ್ನಾಡಿ ಪ್ರೋತ್ಸಾಹಿಸಿ, ಎಂದು" ಹೇಳಿದ್ದರು.
ಆ ಶಿಕ್ಷಕರು ಹೇಳಿದ ಇನ್ನೊಂದು ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು. ಅದೇನೆಂದರೆ, ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಿಂದ ಹೊರ ಬಂದು ಪ್ರೌಡ ಶಾಲೆ ಸೇರಿದ ನಂತರವೂ ಹತ್ತನೇ ತರಗತಿಯಲ್ಲಿ ಅವರು ಉತ್ತೀರ್ಣರಾಗುವದಕ್ಕೆ ಸಾಯಂಕಾಲ ವಿಶೇಷ ತರಗತಿ ತೆಗೆದುಕೊಳ್ಳುವ ಕುರಿತು ಅವರು ಹೇಳಿದರು.
ಇಂದು, ಶಿಕ್ಷಕರು ತಾವು ತೆಗೆದುಕೊಳ್ಳುವ ತರಗತಿಯ ವಿದ್ಯಾರ್ಥಿಗಳನ್ನು ಕಾಳಜಿ ಮಾಡುವುದೇ ದೊಡ್ಡ ವಿಷಯ. ಆದರೆ ತಮ್ಮ ಶಾಲೆಯಿಂದ ಹೊರಹೋದ ವಿಧ್ಯಾರ್ಥಿಗಳ ಬಗ್ಗೆಯೂ ಕಾಳಜಿ ಮಾಡುವುದನ್ನು ಕೇಳಿ ನನಗೆ ಬಹಳ ಆಶ್ಚರ್ಯವಾಯಿತು.
ಅವರ ಒಂದು ದಿನದ ಒಡನಾಟದಲ್ಲಿ ಶಾಲೆ, ವಿಧ್ಯಾರ್ಥಿ ಇವುಗಳ ಕಾಳಜಿ ಹೊರತಾಗಿ ಯಾವುದೇ ವೈಯಕ್ತಿಕ ವಿಚಾರಗಳನ್ನು ಅವರು ಮಾತನಾಡಲಿಲ್ಲ.
ನಮ್ಮ ಕಾರ್ಯಕ್ರಮಕ್ಕೆ ಪಾಲಕರನ್ನು ಕರೆತರಲು ವಿದ್ಯಾರ್ಥಿಗಳನ್ನು ಕಳುಹಿಸಿದರು. ನಾವು ಕಾರ್ಯಕ್ರಮ ಮಾಡುವಾಗ ಬಿಸಿಯೂಟ ತಯಾರಿ ಮಾಡಲು ಹೋಗಿದ್ದರು. ನಮ್ಮ ಕಾರ್ಯಕ್ರಮದ ಕೊನೆಯಲ್ಲಿ, ಬಿಸಿಯೂಟದ ಕೆಲಸದಲ್ಲಿಯೇ ಇದ್ದ ಅವರು, ನಮ್ಮ ಕಾರ್ಯಕ್ರಮದ ವಿಶೇಷತೆ ಗಮನಿಸಿ, ಸಂತೋಷಗೊಂಡು ಕೆಲವು ಮಾತನಾಡಿ ನಮ್ಮ ಉತ್ಸಾಹವನ್ನು ಹೆಚ್ಚಿಸಿದರು.
ಅವರ ಜೊತೆ ಆ ಒಂದು ದಿನದ ಒಡನಾಟದಲ್ಲಿ,
* ಅವರು ತೋರಿದ ಶಾಲೆಯ ಬಗ್ಗೆ ಕಾಳಜಿ,
* ವಿಧ್ಯಾರ್ಥಿಗಳ ಬಗ್ಗೆ ಕಾಳಜಿ
* ಅವರ ಕ್ರಿಯಾಶೀಲತೆ
* ಅವರ ಸಮರ್ಪಣಾ ಭಾವ
ಅವರ ವ್ಯಕ್ತಿತ್ವವನ್ನು ಬಹಳ ನೆನಪಿನಲ್ಲಿ ಉಳಿಯುವಂತೆ ಮಾಡಿತು.
ಇದು ಅವರ ಒಡನಾಟದಲ್ಲಿ ನಮಗೆ ಮೂಡಿದ ಒಂದನೆಯ ವಿಚಾರ.
ಎರಡನೇ ರೀತಿಯ ವಿಚಾರ ಎಂದರೆ, ಈಗ ತಾನೆ ನಡೆದಂತಹ ಶಿಕ್ಷಕರ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೋರಿ, ನಾನು ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರಿಗೆ, ಶಿಕ್ಷಕರಿಗೆ ಫೋನ್ ಕರೆ ಮಾಡುತ್ತಿದ್ದೆ.
ಆ ಸಂದರ್ಭದಲ್ಲಿ ಈ ಶಾಲೆಯ ಶಿಕ್ಷಕರ ವಿಡಿಯೋ ನೋಡಿ ಆ ಒಂದು ವಿಷಯ ಕುರಿತು ಮುಖ್ಯೋಪಾಧ್ಯಾಯರೊಂದಿಗೆ ಮಾತನಾಡಲು ಕರೆ ಮಾಡಿದ್ದೆ. ಆಗ ಮುಖ್ಯ ವಿಷಯ ಮುಗಿದ ನಂತರ ನಾನು, "ವಿಡಿಯೋದಲ್ಲಿ ಅನೇಕ ಶಿಕ್ಷಕರು ಕಾಣುತ್ತಿದ್ದಾರೆ, ಮೇಡಮ್, ಆ ಶಿಕ್ಷಕರು ಕಾಣುತ್ತಿಲ್ಲವಲ್ಲ. ಅವರು ಇಂದು ಶಾಲೆಗೆ ಬಂದಿಲ್ಲವೇ? ಅಥವಾ ಬೇರೆ ಕಡೆ ವರ್ಗಾವಣೆ ಆಗಿದೆಯೇ ?" ಎಂದು ಕೇಳಿದೆ.
ಆಗ ಮುಖ್ಯೋಪಾಧ್ಯಾಯರು ನೀಡಿದ ಪ್ರತಿಕ್ರಿಯೆ ಕೇಳಿ ಜೀವನದ ಬಗೆಗಿನ ಉತ್ಸಾಹವೇ ನನ್ನಲ್ಲಿ ಕುಸಿದು ಬಿತ್ತು !!! ನಾವು ಭೂಮಿಯಲ್ಲಿ, ಈ ಜಗತ್ತು ಸತ್ಯ ಎಂದು ನಂಬಿ, ನಾವು ಬದುಕಲು ಮಾಡಬೇಕಾದ, ಮಾಡಬಾರದ ಏನೇನೋ ಕೆಲಸ ಮಾಡುತ್ತಾ ಬದುಕುತ್ತಿದ್ದೇವೆ. ಆದರೆ ಇದೆಲ್ಲಾ ಶೂನ್ಯವೇ ? ವ್ಯರ್ಥವೇ ? ಎನ್ನುವ ಯೋಚನೆ ನನ್ನ ಮನಸ್ಸಿನಲ್ಲಿ ಬಂದು ಹೋಯಿತು.
ಕಾರಣ, ಆ ಉತ್ಸಾಹಿ ಯುವ ಶಿಕ್ಷಕರು ಎಲ್ಲಿ ? ಎಂದು ಕೇಳಿದಾಗ ಬಂದಂತಹ ಉತ್ತರ ....
ಅವರು ಈಗ ಇಲ್ಲಾ ಸರ್!!!! ಹೃದಯಾಘಾತದಿಂದ ತೀರಿಕೊಂಡಿದ್ದಾರೆ!!!, ಎಂದು ಹೇಳಿದರು.
ಇದನ್ನು ಕೇಳಿ ದೊಡ್ಡ ಆಘಾತದೊಂದಿಗೆ 😧, ಬಹಳ ದುಃಖವೂ 😔 ಸಹ ನನಗೆ ಆಯಿತು. ಇಂತಹ ಒಬ್ಬ ಒಳ್ಳೆಯ ಶಿಕ್ಷಕರನ್ನು ಆ ವಿಧಿ ಕರೆದುಕೊಂಡು ಬಿಟ್ಟಿತ್ತಲ್ಲ, ಎನ್ನುವ ಅಸಮಾಧಾನವೂ ನನ್ನಲ್ಲಿ ಮೂಡಿತು.
ಅವರು ಇಲ್ಲವಾದಾಗಲೂ, ಆ ವಿಷಯ ನನಗೆ ಗೊತ್ತಾಗಲಿಲ್ಲ. ಈಗ ಅವರ ಕೊರತೆ ಆ ಶಾಲೆಯಲ್ಲಿ ಕಂಡು ಬರುತ್ತಿಲ್ಲ. ಜಗತ್ತಿನಲ್ಲಿ ಅದು ಕಂಡು ಬರುತ್ತಿಲ್ಲ. ಆ ಶಾಲೆ ಮೊದಲಿನಂತೆ ನಡೆಯುತ್ತಿದೆ. ಜಗತ್ತು ಮೊದಲಿನಂತೆಯೇ ನಡೆಯುತ್ತಿದೆ.
ಹೀಗೆಯೇ, ನಾವು ಮುಂದೊಮ್ಮೆ ಒಂದು ದಿನ, ಈ ಜಗತ್ತನ್ನು ಬಿಟ್ಟು ಹೋದಾಗಲೂ
* ಜಗತ್ತಿಗೆ ಏನಾದರೂ ವ್ಯತ್ಯಾಸವಾಗುವುದೇ ?
* ನಾವು ಇಲ್ಲಾ, ಎಂದಾಗ ಜಗತ್ತಿನಲ್ಲಿ ಏನಾದರೂ ಕೊರತೆ ಕಾಣುವುದೇ?
ಎನ್ನುವ ಪ್ರಶ್ನೆ ನನ್ನನ್ನೂ ಬಹಳ ಕಾಡಿತು.
* ಇಲ್ಲಿ ಮಾಡಿದ ಎಲ್ಲವೂ ವ್ಯರ್ಥವೇ ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿತು.
ಆದರೆ ಸ್ಪರ್ಧೆ ಮುಗಿದ ನಂತರ, ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ, ನೀವು ಸ್ಪರ್ಧೆಯಲ್ಲಿ ವ್ಯಕ್ತಪಡಿಸಿದ ಅನಿಸಿಕೆ, ಬರಹ ರೂಪದಲ್ಲಿ ಕೊಡಿ ಹಾಗೂ ಅದರಲ್ಲಿ ತಾವು ಕಂಡಂತಹ ಆದರ್ಶ ಶಿಕ್ಷಕರ ಹೆಸರನ್ನು ಹೇಳಿ ಎಂದು ಹೇಳಿದ್ದೆ.
ಆಗ ಆ ಶಾಲೆಯಿಂದ ಭಾಗವಹಿಸಿದ ಶಿಕ್ಷಕರು, ಆಗಲಿ ಹೋದ ತಮ್ಮ ಸಹೋದ್ಯೋಗಿಯ ಹೆಸರನ್ನೆ ಆದರ್ಶ ಶಿಕ್ಷಕರ ಸಾಲಿನಲ್ಲಿ ಹೆಸರಿಸಿ, ಇನ್ನೂ ಕೆಲವು ನನಗೆ ಗೊತ್ತಿಲ್ಲದ ಸಂಗತಿಗಳನ್ನು ಅವರು ಬರೆದಿದ್ದಾರೆ.
ನಾನು ಅಲ್ಲಿಗೆ ಹೋದಾಗ, ಅವರ ಕುರಿತು ಒಳ್ಳೆಯ ಅಭಿಪ್ರಾಯ ನನ್ನಲ್ಲಿ ಮೂಡಲು ಒಂದು ದಿನದ, ಒಂದು ಸಮಯದ ಮಟ್ಟಿಗೆ, ಅವರು ವಿಧ್ಯಾರ್ಥಿಗಳ ಕುರಿತು, ಶಾಲೆ ಕುರಿತು "ಕಾಳಜಿಯ ನಟನೆ" ಮಾಡಿರುವ ಸಾಧ್ಯತೆ ಇರಬಹುದಿತ್ತು. ಆದರೆ ಅವರ ಜೊತೆ ನಿತ್ಯ ಏಳುವ ಕೂಡುವ ಸಹೋದ್ಯೋಗಿಗಳ ಜೊತೆ ನಟನೆ, ಅಥವಾ ನಾಟಕ ಮಾಡಲು ಸಾಧ್ಯವಿಲ್ಲ. ಅವರ ವಿಧ್ಯಾರ್ಥಿಗಳ ಕುರಿತು, ಶಾಲೆ ಕುರಿತು ಅವರ ಕರ್ತವ್ಯದ ನಿಷ್ಠೆ, ಕಾಳಜಿ ಸತ್ಯವಾಗಿಯೇ ಇತ್ತು.
ಅವರ ಸಹೋದ್ಯೋಗಿ ಶಿಕ್ಷಕರ ಮಾತನ್ನು ಓದಿ, ಆ ಶಿಕ್ಷಕರ ಬಗ್ಗೆ ನನ್ನಲ್ಲಿದ್ದ, ಶ್ರದ್ಧೆ ಗೌರವ ಇನ್ನೂ ಹೆಚ್ಚಾಯಿತು. ಅವರಿಗೆ, ತನ್ನಿಂದ ತಾನೇ ನನ್ನ "ಕಣ್ಣೀರಿನ ಭಾವದ" ಶ್ರದ್ಧಾಂಜಲಿ ಅರ್ಪಣೆಯಾಯಿತು. ಇದು ಕೇವಲ ಶ್ರದ್ಧಾಂಜಲಿ ಆಗಿರದೆ, ಈ ಜಗತ್ತಿನಲ್ಲಿ ಅವರ ಕೊರತೆಯನ್ನು ಸೂಚಿಸುತ್ತಿತ್ತು.
ಇದೆ ರೀತಿಯ ಕೊರತೆ ಅಲ್ಲಿಯ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಆ ಊರಿನ ಜನರಲ್ಲಿಯೂ ಕಂಡುಬರುತ್ತಿದೆ ಎಂದು ಅವರ ಸಹೋದ್ಯೋಗಿ ಶಿಕ್ಷಕರ ಬರಹದ ಮೂಲಕ ನನಗೆ ತಿಳಿಯಲ್ಪಟ್ಟಿತ್ತು.
ಆಗ ನನಗೆ ಮೂಡಿ ಬಂದ ಭಾವ ಎಂದರೆ, ಖಂಡಿತ ನಮ್ಮ ಕಾರ್ಯ ಕೆಲಸ ಅತ್ಯುತ್ತಮವಾಗಿದ್ದಲ್ಲಿ ನಾವು ಈ ಜಗತ್ತು ಬಿಟ್ಟು ಹೋದಾಗ ಸ್ವಲ್ಪವಾದರೂ ನಮ್ಮ ಕೊರತೆ ನೋವು, ಈ ಜಗತ್ತಿನಲ್ಲಿ, ಈ ಜಗತ್ತಿನ ಸತ್ಯ ಜನರಲ್ಲಿ ಕಂಡು ಬರುತ್ತದೆ.
ಯಾವುದು ವ್ಯರ್ಥವಲ್ಲ. ನಮ್ಮ ನಿಜವಾದ ಕೆಲಸ, ಸೇವೆ, ಪರೋಪಕಾರ ಜಗತ್ತಿನಲ್ಲಿ, ಜಗತ್ತಿನ ಸತ್ಯವಾದ ಜನರ ಮನಸ್ಸಿನಲ್ಲಿ ಸದಾ ವಿರಾಜಮಾನವಾಗಿರುತ್ತದೆ.
ನಾವು ಸಹ ಜಗತ್ತಿನಿಂದ ಹೋದಾಗಲೂ ನಮ್ಮ ಕರ್ತವ್ಯ ನಿಷ್ಠೆ, ಸೇವೆ, ಪರೋಪಕಾರದ ಕಾರಣಕ್ಕಾಗಿ ಈ ಜಗತ್ತಿನ ಸತ್ಯವಾದ ಜನ ನಮ್ಮ ಕುರಿತು ಆಳವಾದ ಮನಸ್ಸಿನಿಂದ ಶ್ರದ್ಧಾಂಜಲಿ ವ್ಯಕ್ತಪಡಿಸುವಂತಹ ಕೆಲಸ ನಾವು ಮಾಡೋಣ. ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳೋಣ.
ಕೊನೆಯಲ್ಲಿ ಆ ಶಿಕ್ಷಕರ,ಆ ಶಾಲೆಯ, ಅವರನ್ನು ನೆನೆದ ಸಹೋದ್ಯೋಗಿ ಹೆಸರು ಹೇಳಿ ಈ ಲೇಖನ ಮುಗಿಸುತ್ತೇನೆ.
ನಮ್ಮಿಂದ ಆಗಲಿದೆ ಆದರ್ಶ ಶಿಕ್ಷಕರು : ದಿ. ಶ್ರೀ ರೋಹಿತ
ಶಾಲೆ : ಹೂಡಾ. ಬಿ ಸರ್ಕಾರಿ ಪ್ರಾಥಮಿಕ ಶಾಲೆ
ಇವರ ಕುರಿತು ಇವರನ್ನು ಕೇಳಬಹುದು.
ಅವರ ಸಹೋದ್ಯೋಗಿ : ಶ್ರೀ ಮ. ಆರೀಫ
ಶಾಲೆ ಮುಖ್ಯೋಪಾಧ್ಯಾಯರು : ಶ್ರೀಮತಿ ಕಸ್ತೂರಿ ಸೇಡಂಕರ್
ಧನ್ಯವಾದಗಳೊಂದಿಗೆ
ಇಂತಿ ತಮ್ಮ
ಸೂರ್ಯ ನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ


Comments
Post a Comment