"*ಸಂತರ, ಜೀವನದ ಶೂನ್ಯ (ಸೊನ್ನೆ) ದೃಷ್ಟಿಕೋನ ಸತ್ಯವೇ ? ಮತ್ತು ಭ್ರಷ್ಟಾಚಾರಿಗಳ ಜೀವನ-ಅಶೂನ್ಯ ದೃಷ್ಟಿಕೋನ ಸತ್ಯವೇ ?*"


ಎಲ್ಲರಿಗೂ ನಮಸ್ಕಾರ 🙏 


ಆತ್ಮೀಯರೇ, 


ಜಗತ್ತಿನ ನಿಜವಾದ ವಿರಾಗಿ ಸಂತರು ಜಗತ್ತಿನಿಂದ ದೂರವಾಗಿ ಅಥವಾ ಜಗತ್ತಿನಲ್ಲಿದ್ದು ಜಗತ್ತಿನ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೆ ಬದುಕುತ್ತಿರುವುದಕ್ಕೆ ಕಾರಣ. ಜಗತ್ತು ಅಥವಾ ಜೀವನವನ್ನು ಶೂನ್ಯ ಎಂದು ತಿಳಿದುಕೊಂಡಿದ್ದು.


ಇದಕ್ಕೆ ವಿರುದ್ಧವಾಗಿ ಈ ಜಗತ್ತಿನಲ್ಲಿರುವ ಅನೇಕ ಭ್ರಷ್ಟಾಚಾರಿಗಳು, ಭ್ರಷ್ಟಾಚಾರ ಮಾಡುತ್ತಿರುವುದಕ್ಕೆ ಕಾರಣ ಜಗತ್ತು ಅಶೂನ್ಯ, ಜಗತ್ತು ಸತ್ಯ ಎಂದು ತಿಳಿದುಕೊಂಡಿರುವುದು. 


ಇಲ್ಲಿ ಪ್ರಶ್ನೆ ಎಂದರೆ ಯಾರ ದೃಷ್ಟಿಕೋನ ಸತ್ಯ ? 

* ಸಂತರ ದೃಷ್ಟಿಕೋನವೇ ? 

* ಭ್ರಷ್ಟಾಚಾರಿಗಳ ದೃಷ್ಟಿಕೋನವೇ ?


ನಾವು ಭ್ರಷ್ಟಾಚಾರ ಮಾಡುವುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಬಹುದು. 


1. ಅನಿವಾರ್ಯ ಕಾರಣ. 

2. ಅವಕಾಶದ ಕಾರಣ. 


*"ಅನಿವಾರ್ಯ ಕಾರಣ"* : ಸತ್ಯ ಮಾರ್ಗದಲ್ಲಿ "ಗಟ್ಟಿ ನಿಷ್ಠೆ" ಉಳ್ಳವರು ಎರಡು ಕಾರಣದಿಂದಲೂ ಭ್ರಷ್ಟಾಚಾರಕ್ಕೆ ಇಳಿಯುವುದಿಲ್ಲ. ಆದರೆ ಸತ್ಯ ಮಾರ್ಗದಲ್ಲಿರುವವರು ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಭ್ರಷ್ಟ ಆಚರಣೆಗಳನ್ನು ಮಾಡುತ್ತಾರೆ.  ಭ್ರಷ್ಟಾಚಾರ ಮಾಡಿದ ನಂತರ ಪಶ್ಚಾತ್ತಾಪ ಪಟ್ಟು ಮುಂದಿನ ದಿನಗಳಲ್ಲಿ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಾರೆ.


*"ಅವಕಾಶ ಕಾರಣ"* : ಆದರೆ ಹಲವರು ಅವಕಾಶ ಸಿಕ್ಕಿದೆ ಎಂದು ತಿಳಿದು ಒಂದರ ಮೇಲೆ ಒಂದರಂತೆ ಭ್ರಷ್ಟಾಚಾರ ಮಾಡುತ್ತಲೇ ಹೋಗುತ್ತಾರೆ.  ಆದರೆ ಮಾಡಿದ ನಂತರ ನಮ್ಮಿಂದ ತಪ್ಪಾಗಿದೆ ಎನ್ನುವ ಪಶ್ಚಾತ್ತಾಪ ಪಡುವುದಿಲ್ಲ. ಇದಕ್ಕೆ ವಿರುದ್ಧವಾಗಿ ಈ ಭ್ರಷ್ಟಾಚಾರವನ್ನು ತಾವಿರುವ ಆ ಸ್ಥಾನದ  ಕೆಲಸದ ರೀತಿ ಎಂದು ಭಾವಿಸುತ್ತಾರೆ. "ಆ ಸ್ಥಾನದಲ್ಲಿದ್ದು ಭ್ರಷ್ಟಾಚಾರ ಮಾಡದಿದ್ದರೆ, ನಾನು ತಪ್ಪು ಮಾಡಿದಂತೆ" ಎಂದು ಭಾವಿಸುತ್ತಾರೆ. 


ಇವರೆಲ್ಲರೂ ಜೀವನ (ಅಥವಾ ಜಗತ್ತು)  ಅಶೂನ್ಯ ಎಂದು ತಿಳಿದವರಾಗಿದ್ದಾರೆ.


ನಿಜಕ್ಕೂ ಜೀವನ (ಅಥವಾ ಜಗತ್ತು) ಎನ್ನುವುದು ಶೂನ್ಯವೇ ? ಅಥವಾ ಅಶೂನ್ಯವೇ ? (ತಮ್ಮ ಮುಂದಿರುವ  ಪ್ರಶ್ನೆಗೆ ಮನದಲ್ಲಿಯೇ ಉತ್ತರಿಸಿ.)


ಈ ಜಗತ್ತಿನಲ್ಲಿ ಕೆಲವರಿಗೆ ಮಾತ್ರ ಜಗತ್ತು, ಜೀವನ ಶೂನ್ಯ ಎನ್ನುವಂತೆ ಕಾಣುತ್ತದೆ. ಆದರೆ ಜಗತ್ತಿನ ಬಹುತೇಕರಿಗೆ ಜಗತ್ತು, ಜೀವನ ಶೂನ್ಯ ಎನ್ನುವುದು ಕಾಣುವುದಿಲ್ಲ. 


ತಮ್ಮೆಲ್ಲರಿಗೂ ನಾನು ಮಾಡುವ ಪ್ರಾರ್ಥನೆಯೆಂದರೆ, ಮಕ್ಕಳಿಗೆ ಜ್ಞಾನದ ಮೂಲವಾಗಿರುವ ತಿಳಿದವರು, ಜ್ಞಾನಿಗಳು, ಶಿಕ್ಷಕ ವೃತ್ತಿಯಲ್ಲಿರುವವರು, ಒಂದು ಸಂದೇಶವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಬೇಕಾಗಿದೆ. 


ಈ ಸಂದೇಶ ನೆನಪಿನಲ್ಲಿದ್ದಾಗ 

 *  ಒಬ್ಬ ವ್ಯಕ್ತಿ ಭ್ರಷ್ಟಾಚಾರ ಮಾಡಲು ಅಳಕುತ್ತಾನೆ. 

* ಭ್ರಷ್ಟಾಚಾರ ಮಾಡಲು ಪದೇ ಪದೇ, ಮತ್ತೆ ಮತ್ತೆ ಯೋಚಿಸುತ್ತಾನೆ

* ಒಂದು ವೇಳೆ ಪದೇ ಪದೇ ಯೋಚಿಸಿಯೂ ಆತ ಭ್ರಷ್ಟಾಚಾರ ಮಾಡಿದರೆ, ಆ ಕೆಲಸದ ನಂತರ ಪಶ್ಚಾತ್ತಾಪ ಪಟ್ಟು ಮುಂದಿನ ಸಲ ತಪ್ಪನ್ನು ತಿದ್ದಿ ಕೊಳ್ಳಲು ಪ್ರಯತ್ನಿಸುತ್ತಾನೆ.


ಏಕೆಂದರೆ ಈ ಸಂದೇಶ ಅಷ್ಟು ಗಟ್ಟಿಯಾದ ಬಲಿಷ್ಠವಾದ ಸಂದೇಶವಾಗಿದೆ. ಇದು ಭ್ರಷ್ಟಾಚಾರ ನಿವಾರಣೆಗೆ ಒಂದು ಜ್ಞಾನದ ಅಸ್ತ್ರ ಎಂದೇ ಹೇಳಬಹುದು.


ಅದೇನೆಂದರೆ, ಜೀವನ ಶೂನ್ಯ ಎಂದು ಹೇಳುವ ಬದಲಾಗಿ "ಜೀವನದ ಒಟ್ಟು ಮೊತ್ತ ಶೂನ್ಯ" ಎಂದು ಸಾರುವುದಾಗಿದೆ.


ನಮ್ಮ ಜೀವನದ ಪ್ರತಿ ಕ್ಷಣ, ಪ್ರತಿ ಗಂಟೆ, ಪ್ರತಿ ದಿನ, ಪೂರ್ಣ ಜೀವನ ನಾವು ಎರಡು ಕೆಲಸಗಳನ್ನು ಮಾಡುತ್ತೇವೆ. "ಅದುವೇ ಒಂದು ಕೊಡುವುದು, ಇನ್ನೊಂದು ಪಡೆಯುವುದು."


(ಅಥವಾ ಕೂಡಿಸುವುದು, ಕಳೆಯುವುದು)


ಉದಾಹರಣೆಗೆ, 


* ನಾವು ಜಗತ್ತಿಗೆ ಕಾರ್ಬನ್ ಡೈಆಕ್ಸೈಡ್ ಕೊಡುತ್ತೇವೆ. ಜಗತ್ತಿನಿಂದ ಆಕ್ಸಿಜನ್ ತೆಗೆದುಕೊಳ್ಳುತ್ತೇವೆ. 


* ನಾವು ಕೆಲಸದ ಮೂಲಕ ನಮ್ಮ ಶಕ್ತಿ, ಸಮಯ, ಶ್ರಮ ಕೊಡುತ್ತೇವೆ. ವೇತನದ ಮೂಲಕ ಫಲಿತಾಂಶ ಪಡೆದುಕೊಳ್ಳುತೇವೆ.


* ನಾವು ಬೇರೆಯವರ ಶುಭ ಸಂದರ್ಭದಲ್ಲಿ ಬೇರೆಯವರಿಗೆ ಕಾಣಿಕೆ ಕೊಡುತ್ತೇವೆ. ನಮ್ಮ ಶುಭ ಸಂದರ್ಭದಲ್ಲಿ ಬೇರೆಯವರು ನಮಗೆ ಕಾಣಿಕೆ ಕೊಡುತ್ತಾರೆ.


* ನಾವು ಬೇರೆಯವರಿಗೆ ಸಂತೋಷ, ದುಃಖ, ನೋವು ಕೊಡುತ್ತೇವೆ. ಬೇರೆಯವರಿಂದ ಪುನಃ ನಾವು ಸಂತೋಷ ದುಃಖ ನೋವು ಪಡೆದುಕೊಳ್ಳುತ್ತೇವೆ.


ನಮ್ಮ ಮನಸ್ಸನ್ನು ಪದೇ ಪದೇ ಯಾವುದು ಕಾಡುತ್ತದೆ ಎಂದರೆ, ಎಲ್ಲಿ ಕೊಡುವುದು ತೆಗೆದುಕೊಳ್ಳುವುದು ಪೂರ್ಣ ಚಕ್ರವಾಗಿಲ್ಲ ? ಆ ವಿಷಯ ನಮ್ಮ ಮನಸ್ಸನ್ನು ಬಹಳ ಕಾಡುತ್ತದೆ.


*"ಸುದರ್ಶನ ಪೂರ್ಣ ಚಕ್ರ ಸಿದ್ದಾಂತ"* : ಒಂದು ಸಂಗತಿಗೆ ಸಂಬಂಧಿಸಿದಂತೆ ಕೊಡುವುದು, ಪಡೆದುಕೊಳ್ಳುವುದು  ಎರಡು ಸರಿ ಸಮ ಇದ್ದರೆ, ಅದುವೇ ಪೂರ್ಣ ಚಕ್ರ ಸಿದ್ದಾಂತ. ಇವೆರಡರಲ್ಲಿ ಒಂದು ಇಲ್ಲವಾದರೆ ಅಥವಾ ಅಸಮ ಇದ್ದರೆ, ಅದುವೇ ಅಪೂರ್ಣ ಚಕ್ರ.


ಉದಾಹರಣೆಗೆ, ಬೇರೆಯವರಿಂದ ನಾವು ಏನನ್ನೋ ಪಡೆದಿದ್ದೇವೆ, ನಾವು ಅವರಿಗೆ ಅದಕ್ಕೆ ಪ್ರತಿಯಾಗಿ ಏನನ್ನು ಕೊಟ್ಟಿಲ್ಲ ಎಂದಾಗ ಇದು ಅಪೂರ್ಣ ಚಕ್ರ.  

 

ಸೂಕ್ಷ್ಮ ಮನಸ್ಸಿನವರಿಗೆ ಈ ವಿಷಯ ಬಹಳ ಕಾಡುತ್ತದೆ.


ಹಾಗೆಯೇ ಒಂದು ವೇಳೆ ನಾವು ಬೇರೆಯವರಿಗೆ ಏನೋ ಕೊಟ್ಟಿದ್ದೇವೆ, ಅವರು ನಮಗೆ ಅದಕ್ಕೆ ಏನನ್ನು ಕೊಟ್ಟಿಲ್ಲ ಎಂದಾಗ ಅದು ಸಹ ಅಪೂರ್ಣ ಚಕ್ರ. 


ಈ ವಿಷಯ ಬಹುತೇಕ ಎಲ್ಲರ ಮನಸ್ಸನ್ನು ಬಹಳ ಕಾಡುತ್ತದೆ. 


ನಮ್ಮ ಮನಸ್ಸನ್ನು ಕಾಡುವ ಸಂಗತಿಗಳಿಗೆ ಕಾರಣವೆಂದರೆ,  ಕೊಡುವ, ತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣ ಚಕ್ರವಾಗಿ ಬದಲಾಗದೆ, ಅಪೂರ್ಣವಾಗಿರುವುದು.


ಜೀವನದಲ್ಲಿ ಘಟಿಸುವ ಪೂರ್ಣ ಚಕ್ರದ ಸಂಗತಿಯನ್ನೆ, ಸಂತರು ಜೀವನ ಶೂನ್ಯ ಎಂದು ತಿಳಿದು ಸತ್ಯ ಆಚರಣೆಗಳನ್ನು ತಮ್ಮ ಜೀವನದಲ್ಲಿ ಹೊಂದಿದ್ದಾರೆ.


  ನಾವು ಈ ಸತ್ಯ ಸಂದೇಶವನ್ನು ಜಗತ್ತಿನ ಎಲ್ಲರೂ ಸಹ ಒಪ್ಪಿಕೊಳ್ಳುವಂತೆ ಮಾಡಬಹುದು. ಹೇಗೆಂದರೆ,  ಅದನ್ನು ಕೇವಲ ಸ್ವಲ್ಪ ಭಿನ್ನವಾಗಿ ಹೇಳಬೇಕು. 


ಅದುವೇ, ಜೀವನ ಸೊನ್ನೆ ಎಂದು ಹೇಳುವ ಬದಲಾಗಿ "ಜೀವನದ ಒಟ್ಟು ಮೊತ್ತ ಸೊನ್ನೆ" ಎಂದು ಹೇಳುವುದು.


*"ಕಷ್ಟ, ಸುಖ*" : ನಮ್ಮ ಜೀವನ ಹಾಗೂ ಜಗತ್ತಿನ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ  ಅನುಭವಿಸುವ ಕಷ್ಟ ಮತ್ತು ಸುಖಗಳು, ಕೇವಲ ಕಷ್ಟ, ಸುಖಗಳಾಗಿಲ್ಲ. ಅವುಗಳು ಜೀವನದ ಒಟ್ಟು ಮೊತ್ತ ಸೊನ್ನೆ ಆಗುವ ಪ್ರಕ್ರಿಯೆಗಳಾಗಿವೆ.


"*ತಪ್ಪಿಲ್ಲದೆ ಕಷ್ಟ*" : ನಾನು ಇಂದು ಯಾವುದೇ ತಪ್ಪಿಲ್ಲದೆ ಒಂದು ಕಷ್ಟ ಅನುಭವಿಸುತ್ತಿದ್ದೇನೆ, ಎಂದರೆ ಇದರ ಅರ್ಥ ನಾನು ಪೂರ್ಣ ಚಕ್ರವಾಗಿರದ, ಯೋಗ್ಯವಲ್ಲದ ಸುಖ, ಸಂತೋಷ ಈ ಹಿಂದೆ ಅನುಭವಿಸಿದ್ದೇನೆ. 


* ಯೋಗ್ಯ ಸುಖ ಸಂತೋಷ:  ನಾವು ಸೂಕ್ತವಾದ ನಮ್ಮ ಶ್ರಮ ಶಕ್ತಿ ಸಮಯ ಕೊಟ್ಟು ಪಡೆದುಕೊಳ್ಳುವುದು ಸುಖ ಸಂತೋಷಗಳು. *"ಇಲ್ಲಿ ಪೂರ್ಣ ಚಕ್ರದ ಪ್ರಕ್ರಿಯೆ ಆಗಿರುತ್ತದೆ"*.


* ಅಯೋಗ್ಯ ಸುಖ ಸಂತೋಷ :  ನಾವು ಸೂಕ್ತವಾದ ನಮ್ಮ ಶ್ರಮ ಶಕ್ತಿ ಸಮಯ ಕೊಡದೆ ಪಡೆದುಕೊಳ್ಳುವುದು ಸುಖ ಸಂತೋಷಗಳು.

*"ಇಲ್ಲಿ ಪೂರ್ಣ ಚಕ್ರದ ಪ್ರಕ್ರಿಯೆ ಆಗಿರುವುದಿಲ್ಲ."*


* ಕೆಡುಕನ್ನು ಕೊಟ್ಟು ಒಳಿತನ್ನು ಅನುಭವಿಸುವುದು ಅಯೋಗ್ಯ ಸುಖ ಸಂತೋಷ.

* ಒಳಿತನ್ನು ಕೊಡದೆ, ಒಳಿತನ್ನು ಅನುಭವಿಸುವುದು ಅಯೋಗ್ಯ ಸುಖ ಸಂತೋಷ.

* ನಿಯಮಾನುಸಾರ ಒಳಿತನ್ನು ಕೊಟ್ಟು, ಒಳಿತನ್ನು ಅನುಭವಿಸುವುದು ಯೋಗ್ಯ ಸುಖ ಸಂತೋಷ. 


ನಮ್ಮ ಜೀವನದ ಪ್ರತಿಯೊಂದು ಪ್ರಕ್ರಿಯೆ ಪೂರ್ಣ ಚಕ್ರ (ಸೊನ್ನೆ) ಆಗುವತ್ತ ಹೋಗುತ್ತದೆ. ಆದರೆ *ನಾವು ಪಡೆದ ಉತ್ತಮಕ್ಕೆ ಪ್ರತಿಯಾಗಿ ಉತ್ತಮವಾದುದನ್ನು ಕೊಡುವುದಕ್ಕೆ ಲೆಕ್ಕ ಹಾಕಿದಾಗ, ಪ್ರಕೃತಿ ಜಗತ್ತು ಅನಿವಾರ್ಯವಾಗಿ ನಾವು ಉತ್ತಮವಾದುದನ್ನು ಕೊಡುವಂತೆ ಮಾಡುತ್ತದೆ.* 


ನಾವು ಒಪ್ಪಬಹುದು, ಒಪ್ಪದೆ ಇರಬಹುದು ಈ ಜೀವನದ ಪ್ರಕ್ರಿಯೆಗಳು ಪೂರ್ಣ ಚಕ್ರ (ಸೊನ್ನೆ) ಆಗುವತ್ತ ಸಾಗುತ್ತದೆ.


* ಒಂದು ವೇಳೆ ನಾವು ಬೇರೆಯವರಿಂದ ಪಡೆದ ಉತ್ತಮಕ್ಕೆ ಪ್ರತಿಯಾಗಿ ಸ್ವಯಂ ಪ್ರೇರಣೆಯಿಂದ ಉತ್ತಮವಾದುದನ್ನು ಬೇರೆಯವರಿಗೆ ಕೊಟ್ಟರೆ, ನಾವು ಸಂತೋಷವನ್ನು ಹಾಗೂ ಇತರರ ಗೌರವ ಶುಭ ಹಾರೈಕೆಗಳನ್ನು ಪಡೆಯುತ್ತೇನೆ.


ಇದು ಸೇವೆ, ಸಹಾಯ ಉಪಕಾರದ ರೂಪದಲ್ಲಿರುತ್ತದೆ.


* ಒಂದು ವೇಳೆ ನಾವು ಬೇರೆಯವರಿಂದ  ಪಡೆದ ಉತ್ತಮಕ್ಕೆ ಪ್ರತಿಯಾಗಿ  ಸ್ವಯಂ ಪ್ರೇರಣೆಯಿಂದ ಬೇರೆಯವರಿಗೆ ಉತ್ತಮವಾದುದನ್ನು ಕೊಡದೆಯಿದ್ದರೆ ಜಗತ್ತು, ಪ್ರಕೃತಿ ಒತ್ತಾಯಪೂರ್ವಕವಾಗಿ ನಮ್ಮಿಂದ ಉತ್ತಮವಾದುದನ್ನು ಪಡೆದುಕೊಳ್ಳುತ್ತದೆ.


ಇದು ಕಷ್ಟಗಳು, ತಪ್ಪಿಲ್ಲದೆ ಶಿಕ್ಷೆ, ವಿಭಿನ್ನ ರೋಗಗಳು, ಅನ್ಯಾಯ ಅನೀತಿ ರೂಪದಲ್ಲಿರುತ್ತದೆ.


ಈ ಪೂರ್ಣ ಚಕ್ರದ ಸಿದ್ದಾಂತವನ್ನು  ನಾನು ಮನಸ್ಸಿನಲ್ಲಿ ಧರಿಸಿದ್ದೇನೆ. ನನ್ನಿಂದ ಸಹಾಯ, ಸೇವೆ, ಉಪಕಾರ ಯಾವುದೇ ಕೆಲಸ ಆಗುತ್ತಿದ್ದಲ್ಲಿ, ಈ ಪೂರ್ಣ ಚಕ್ರದ ಜ್ಞಾನವೇ ಅದಕ್ಕೆ ಪ್ರೇರಣೆ. 


ಇದಕ್ಕೆ ಸಣ್ಣ ಉದಾಹರಣೆ.


ಒಮ್ಮೆ ಇಬ್ಬರು ಶಿಷ್ಯರೊಂದಿಗೆ ಒಂದು ಧಾರ್ಮಿಕ ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ದಾಸೋಹದಲ್ಲಿ ಊಟ ಮಾಡಿದೆವು. ನಂತರ ನಾನು ಅಲ್ಲಿಯೇ ದೇಣಿಗೆ ಸ್ವೀಕರಿಸಲು ಕುಳಿತಿದ್ದವರಿಗೆ ನಾನು ದೇಣಿಗೆ ನೀಡಲು ಹೋದೆ. ಆಗ ನಮ್ಮ ಶಿಷ್ಯರಲ್ಲಿ ಅವ್ಯಕ್ತ ಭಾವನೆ ನೋಡಿದೆ. ಬಹುಶಃ ಇದು ದಾಸೋಹ ಅಥವಾ ಉಚಿತ ಇದೆ. ಇಲ್ಲಿ ನಾವು ಊಟ ಮಾಡಿರುವುದಕ್ಕೆ ಏಕೆ ನೀಡಬೇಕು ಎನ್ನುವ ವಿಚಾರ ಅವರ ಮನಸ್ಸಿನಲ್ಲಿ ಇದ್ದಿರಬಹುದು.


ಬಹುತೇಕರಲ್ಲಿ ಉಚಿತ ಎನ್ನುವ ವಿಷಯ ಮನೆ ಮಾಡಿದೆ. ಈ ಜಗತ್ತಿನಲ್ಲಿ ಯಾವುದು ಉಚಿತವಲ್ಲ. ನೀರು, ಗಾಳಿ, ಬೆಳಕು, ಭೂಮಿ, ಪ್ರಕೃತಿ ಉಚಿತ ಎಂದು ಭಾವಿಸಿದರೆ ಅದು ನಮ್ಮ ತಪ್ಪಾಗುತ್ತದೆ.


ಯಾವುದರಿಂದ ನಮಗೆ ಕಿಂಚಿತ್ತು ಲಾಭವಾಗಿದೆ, ಅದಕ್ಕೆ ಪ್ರತಿಯಾಗಿ ನಾವು ಏನಾದರೂ ಪುನಃ ಮರಳಿ ಕೊಡಲೇಬೇಕು. ಇದುವೇ ಪೂರ್ಣ ಚಕ್ರದ ಸಿದ್ದಾಂತ.


ಈ ಪೂರ್ಣ ಚಕ್ರದ ಸಿದ್ದಾಂತವನ್ನು ಅಥವಾ ಜೀವನದ ಒಟ್ಟು ಮೊತ್ತ ಸೊನ್ನೆ ಎನ್ನುವ ವಿಷಯವನ್ನು ಅನೇಕ ವರ್ಷಗಳಿಂದ ನಾನು ಮಕ್ಕಳಿಗೆ ಕಲಿಸುತ್ತಿದ್ದೇನೆ.


ಈ ಹಿನ್ನೆಲೆಯಲ್ಲಿ ಎಲ್ಲಾ ತಿಳಿದವರಿಗೂ ಜ್ಞಾನಿಗಳಿಗೂ,  ಶಿಕ್ಷಕ ವೃಂದಕ್ಕೂ ನಾನು ಕೇಳಿಕೊಳ್ಳುವುದೆನೆಂದರೆ, "ಜೀವನದ ಒಟ್ಟು ಮೊತ್ತ ಸೊನ್ನೆ " ಎನ್ನುವ ಸಂದೇಶವನ್ನು ಜಗತ್ತಿನಾದ್ಯಂತ ನಾವೆಲ್ಲರೂ ಪ್ರಸಾರ ಮಾಡೋಣ. ಇದು ಭ್ರಷ್ಟಾಚಾರವನ್ನು ತಡೆಯಲು ಹಾಗೂ ಸದಾಚಾರ ಹೆಚ್ಚಾಗಲು ಇದು ತನ್ನ ಪ್ರಭಾವ ಬೀರಿಯೇ ಬೀರುತ್ತದೆ. 


ಇದರ ಮೂಲಕ ಕಲಿಯುಗ ಕೊನೆಗೊಳಿಸಿ, ಸತ್ಯ ಯುಗವನ್ನು ಪುನಃ ಸ್ಥಾಪನೆಯಾಗುವಂತೆ ನೋಡಿಕೊಳ್ಳೋಣ ಎಂದು ಎಲ್ಲರಲ್ಲಿಯೂ ಪ್ರಾರ್ಥಿಸುತ್ತೇನೆ.


ಅಂತಿಮ ನಿರ್ಣಯ


"ಜೀವನ ಸೊನ್ನೆ, ಅಲ್ಲಾ

ಜೀವನದ ಒಟ್ಟು ಮೊತ್ತ ಸೊನ್ನೆ."


ಇದುವೇ, "ಸುದರ್ಶನ ಪೂರ್ಣ ಚಕ್ರ ಸಿದ್ದಾಂತ" 


ಧನ್ಯವಾದಗಳೊಂದಿಗೆ


ಇಂತಿ ತಮ್ಮ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ



Comments

Popular posts from this blog