ಶಿಕ್ಷಕರ ಸ್ಪರ್ಧೆ ಆಯೋಜಿಸಿದಾಗ ಮೂಡಿದ ಆರಂಭಿಕ ಭಾವನೆಗಳು 


ಎಲ್ಲರಿಗೂ ನಮಸ್ಕಾರ,


ನಿನ್ನೆ ದಿನ ಈ ಮೊದಲು ತಿಳಿಸಿದಂತೆ

*ಆದರ್ಶ ಶಿಕ್ಷಕರು ಎಂದರೆ ಹೇಗಿರಬೇಕು ?* ಎನ್ನುವ ಕುರಿತು ಸ್ಪರ್ಧೆಗೆ ಕೊನೆಯ ದಿನವಾಗಿತ್ತು. ಆದರೆ ಇದನ್ನು ಈಗ ನಾಳೆ 29 ಆಗಸ್ಟ್ ವರೆಗೆ ವಿಸ್ತರಿಸಲಾಗಿದೆ.


ನಿಜಕ್ಕೂ ನಾನು ಈ ಸ್ಪರ್ಧೆ ಏರ್ಪಡಿಸಿದ ಕುರಿತು ನನಗೆ ಬಂದ ಯೋಚನೆಗಳು 

* *"ನಾನು ಯಾವ ಲೋಕದಲ್ಲಿ ಇದ್ದೇನೆ ?"*


 * *ಇಂತಹ ಸ್ಪರ್ಧೆ ನಿಜಕ್ಕೂ ನನಗೆ ಬೇಕಿತ್ತಾ ?*


ಎನ್ನುವ ಕುರಿತು ನನ್ನನ್ನು ನಾನು ಪುನರ್ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿತು. 


ಆದರ್ಶ ಶಿಕ್ಷಕರ ಕುರಿತ ಯೋಚನೆಗಳು ಕೇವಲ 05 ನೇ ಸೆಪ್ಟೆಂಬರ್ ಗೆ ಒಂದು ದಿನಕ್ಕೆ ಮಾತ್ರ ಸೀಮಿತವೇ ? ಎಂದು ಯೋಚಿಸುವಂತೆ ಮಾಡಿತು. 


ಇದಕ್ಕೆ ಕಾರಣ ಈ ಸ್ಪರ್ಧೆಗೆ ಸಿಕ್ಕ ಸ್ಪಂದನೆ. ಅದರಲ್ಲಿಯೂ ಮುಖ್ಯವಾಗಿ ಸರ್ಕಾರಿ ಶಿಕ್ಷಕರ ಸ್ಪಂದನೆ. 


ಹೀಗೆಯೇ ಮನಸ್ಸು ಬೇಜಾರಿನಲ್ಲಿ ಇರುವಾಗ ರಾತ್ರಿ ಮೊಬೈಲ್ ಗೆ ಬಂದ ಈ ಸರ್ಕಾರಿ ಶಿಕ್ಷಕರ (ನಂದಕಿಶೋರ) ವಿಡಿಯೋ ಅನಿಸಿಕೆಯನ್ನು ನೋಡಿದೆ. 


ಇದನ್ನು ನೋಡಿದ ನಂತರ ಮನಸ್ಸಿನ ಬೇಜಾರಿಗೆ, ತುಂಬಾ ಹಸಿವಿನಿಂದ ವ್ಯಥೆ ಪಡುವಾಗ ಹೊಟ್ಟೆ ತುಂಬಾ ಸಿಹಿ ಹಾಲು ಕುಡಿದಾಗ ಸಿಗುವ ಸಮಾಧಾನದಂತಹ ಸಮಾಧಾನ, ತೃಪ್ತಿ ನನಗೆ ಲಭಿಸಿತು. 


ಈ ಸ್ಪರ್ಧೆ ಏರ್ಪಡಿಸಿದ್ದು ಸರಿ ಇದೆ. ಸ್ಪರ್ಧೆ ಏರ್ಪಡಿಸಿದಕ್ಕೂ ಸಾರ್ಥಕವಾಯಿತು, ಎನ್ನುವ ಹಾರ್ದಿಕ ಮನೋಭಾವನೆ ನನ್ನಲ್ಲಿ ಮೂಡಿತು. 


ಈ ಅನಿಸಿಕೆಯಲ್ಲಿ ನಾವು ಈ ಮೊದಲು ಕೊಟ್ಟ ನಿಯಮದಂತೆ, ಶಿಕ್ಷಕರು, ಮೂರೇ ನಿಮಿಷ ಸಮಯ ಉಪಯೋಗಿಸಿಕೊಂಡರೂ ಸಹ, ಈ ಅನಿಸಿಕೆ ಕೇಳಿದಾಗ 


* ಇಂದು ಹುಡುಕಿದರೂ ದುರ್ಲಭವಾದಂತಹ ಆದರ್ಶ ಶಿಕ್ಷಕರ ಚಿತ್ರಣವನ್ನು ಈ ಅನಿಸಿಕೆ ನೀಡುತ್ತದೆ.

 * ನಮ್ಮ, ಆದರ್ಶ ಶಿಕ್ಷಕ ಹೇಗಿರಬೇಕು? ಎಂಬ ಅನಿಸಿಕೆ ಸ್ಪರ್ಧೆಯ ಹುಡುಕಾಟ ಬಹುಶಃ ಇಂತಹ ಅನಿಸಿಕೆಗಾಗಿಯೇ ಆಗಿತ್ತೇನೋ ಅನಿಸುತ್ತದೆ. 

* ಈ ಒಂದಲ್ಲ ಹಲವಾರು ಬಾರಿ ಈ ಅನಿಸಿಕೆ ಮತ್ತೆ ಮತ್ತೆ ನೋಡಿದೆ.

* ಅವರ ಮಾತುಗಳು ಸಹ ಒಳಗಿನಿಂದ ಅಂತರಂಗದಿಂದ ಬಂದಂತೆ ಇದ್ದವು. 


ಈ ಅನಿಸಿಕೆಯಲ್ಲಿ ಯಾವುದೇ ಮಾತ್ಸರ್ಯವಿಲ್ಲದೆ *ತಾವು ನೋಡಿದ, ತಮಗೆ ಕಂಡಂತಹ* ತಾಲೂಕಿನ ಇಬ್ಬರು ಆದರ್ಶ ಶಿಕ್ಷಕರ ಹೆಸರುಗಳನ್ನು ಅವರು ಹೇಳಿದ್ದಾರೆ. ಅವರ ಮಾತುಗಳನ್ನು ವ್ಯಕ್ತಪಡಿಸುವಿಕೆಯ ರೀತಿ, ನೋಡಿದಾಗ ಇದು ನಿಜ ಇರಲೂಬಹುದು ಎನ್ನುವ ಯೋಚನೆ ನಮ್ಮಲ್ಲಿ ಮೂಡುತ್ತಿದೆ. 


*ಈ ಸ್ಪರ್ಧೆ ಆಯೋಜಿಸಿದ್ದೆ, ಆದರ್ಶ ಶಿಕ್ಷಕರಿಗೆ ಸಂಬಂಧಿಸಿದಂತಹ ವಿಚಾರಗಳು, ಯೋಚನೆಗಳು ಇಡೀ ತಾಲೂಕಿನ ಎಲ್ಲಾ ಶಿಕ್ಷಕರ ಮನ: ಪಟಲದಲ್ಲಿ ಮತ್ತೆ ಮತ್ತೆ ಹರಿದಾಡಲಿ.* ಎನ್ನುವ ಆಶಯದಿಂದ.


ಈ ಮೂಲಕ ಈಗ ಶಿಕ್ಷಕರು ಯಾವ ಮಟ್ಟದಲ್ಲಿ ಇದ್ದಾರೆ, ಆ ಮಟ್ಟದಿಂದ ಇನ್ನೊಂದು ಮಟ್ಟ ಮೇಲೆ ಏರಲಿ ಎನ್ನುವ ಸದಾಶಯ, ಸದುದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಯಿತು.


ಈ ಸ್ಪರ್ಧೆಗೆ ನೀಡಿದ ಶೀರ್ಷಿಕೆಯೇ *ಶಿಕ್ಷಕರು ಸತ್ಯ ಯುಗ ನಿರ್ಮಾಪಕರು* ಎನ್ನುವುದಾಗಿತ್ತು.


ಈ ಜಗತ್ತಿನಲ್ಲಿ ಒಬ್ಬ ಲೇಖಕ ಯಾವುದೇ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಬರೆಯಲಿ. ಅವರ ಜೀವನ ಚರಿತ್ರೆಯಲ್ಲಿ ಅವರ ಶಿಕ್ಷಕರ ಹೆಸರು ಹೇಳದೆ ಮುಂದುವರಿಯಬಹುದು. ಆದರೆ ಯಾವುದೇ ಲೇಖಕ ಅಂಬೇಡ್ಕರ್ ಕುರಿತು ಜೀವನ ಚರಿತ್ರೆ ಬರೆದಾಗ ಅವರಿಗೆ ಪಾಠ ಹೇಳಿದ ಅವರ ಶಿಕ್ಷಕರ ಹೆಸರನ್ನು ಬಿಡುವುದು ಸಾಧ್ಯವೇ ಇಲ್ಲಾ. 


ಸ್ವಾತಂತ್ರ್ಯಕ್ಕಿಂತ ಮೊದಲಿನ ಸಂದರ್ಭದಲ್ಲಿ ಸಮಾಜದ ಕಟ್ಟುಪಾಡು, ವಿಧಿ, ನಿಷೇಧ, ಬಹಿಷ್ಕಾರದ ಆತಂಕಗಳನ್ನು ಎದುರಿಸಿ ಒಬ್ಬ ಶಿಕ್ಷಕ ತನ್ನ ಕರ್ತವ್ಯ ನಿಷ್ಠೆ, ವೃತ್ತಿ ಪ್ರಜ್ಞೆ ಮೆರೆಯುವುದನ್ನು ಅಂದಿನ ವರ್ತಮಾನ ಸಮಯಕ್ಕೆ ತಕ್ಕಂತೆ, ಇಂದು ಕಲ್ಪಿಸಿಕೊಳ್ಳುವುದು ಬಹಳ 

ದು:ಸಾಧ್ಯವಾಗುತ್ತದೆ.  


ವಿಜ್ಞಾನಿ,ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಇಂದು ಯಾರೇ ನೋಡಿದಾಗ, ಅವರನ್ನು ಇಂದು ಪ್ರತ್ಯೇಕ ಧರ್ಮದವರು ಎಂದು ಯಾರು ನೋಡಲು ಸಾಧ್ಯವೇ ಇಲ್ಲಾ. ಅವರನ್ನು ಒಬ್ಬ ಭಾರತೀಯ ದೇಶ ಪ್ರೇಮಿ ಎನ್ನುವ ಮನೋಭಾವನೆಯಿಂದಲೇ ಎಲ್ಲರೂ ನೋಡುತ್ತಾರೆ. ಇದರ ಮೂಲ ಎಲ್ಲಿದೆ? ಎಂದು ಹುಡುಕಿದಾಗ ಅವರ ರಾಮೇಶ್ವರಂ ನ ಶಿಕ್ಷಕರಲ್ಲಿ ಸಿಗುತ್ತದೆ.


ಬಾಲ್ಯದಲ್ಲಿ ಇವರ ಬ್ರಾಹ್ಮಣ ಸ್ನೇಹಿತ ಒಬ್ಬ ಬ್ರಾಹ್ಮಣ ಶಿಕ್ಷಕರಲ್ಲಿ ವಿದ್ಯೆ ಪಡೆಯಲು ಹೋಗುತ್ತಿದ್ದ. ತನ್ನ ಸ್ನೇಹಿತನನ್ನು ಅನುಸರಿಸಿ ಇವರು ಸಹ ಶಿಕ್ಷಣ ಪಡೆಯಲು ಹೋದಾಗ ಇವರ ಧರ್ಮವನ್ನು ಕೇಳಿಯೂ ಇವರನ್ನು ಯಾವುದೇ ಭೇದಭಾವ ಮಾಡದೆ ಶಿಕ್ಷಣ ನೀಡಿದರು. ಇದು ಎಪಿಜೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿ, *ತಮ್ಮ ಧರ್ಮ ವೈಯಕ್ತಿಕ, ತಾವು ಭಾರತೀಯ ಸಾರ್ವಜನಿಕ*, ಎನ್ನುವ ಛಾಪು ಅವರ ಎಲ್ಲಾ ನಡೆ ನುಡಿಗಳಲ್ಲಿ ನಮಗೆ ಕಾಣಲು ಸಿಗುತ್ತದೆ. 


ನಾನು ಕೇವಲ ಈ ಎರಡು ಉದಾಹರಣೆ ಏಕೆ ಹೇಳಿದೆ, ಎಂದರೆ, ಅಂಬೇಡ್ಕರ್ ಆಗಲಿ, ಎಪಿಜೆ ಆಗಲಿ *ಈ ಇಬ್ಬರು ಶ್ರೇಷ್ಠ ವ್ಯಕ್ತಿಗಳ ಜೀವನದಲ್ಲಿ ಅಂತಹ ಆದರ್ಶ ಶಿಕ್ಷಕರು ಸಿಗದೆ ಇದ್ದಲ್ಲಿ ಏನಾಗುತ್ತಿತ್ತು ?* ಈಗ ಈ ಇಬ್ಬರನ್ನು ಯಾವ ಶ್ರೇಷ್ಠ ಸ್ಥಾನದಲ್ಲಿ ನಾವು ನೋಡುತ್ತಿದ್ದೇವೆ ? ಆ ಸ್ಥಾನದಲ್ಲಿ ನೋಡಲು ಸಾಧ್ಯವಾಗುತ್ತಿತ್ತೆ ? ಎನ್ನುವುದನ್ನು ನಾವೆಲ್ಲರೂ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.


ಈ ದೃಷ್ಟಿಯಿಂದ ಶಿಕ್ಷಣ, ಶಿಕ್ಷಕರಿಗೆ ಈ ಜಗತ್ತಿನಲ್ಲಿ ಅಷ್ಟೊಂದು ಪ್ರಾಮುಖ್ಯತೆ ಪ್ರಾಪ್ತವಾಗಿದೆ. ಈ ಹಿನ್ನೆಲೆಯಲ್ಲಿಯೇ ಈ ಸ್ಪರ್ಧೆಗೆ ನಾವು ನೀಡಿದ ಶೀರ್ಷಿಕೆ *ಶಿಕ್ಷಕರು ಸತ್ಯ ಯುಗದ ನಿರ್ಮಾಪಕರು*.


ನಮ್ಮ ಕನಸು, ಯೋಜನೆ ಏನೇ ಇರಬಹುದು? ಆದರೆ ಶಿಕ್ಷಕರ ಸಹಾಯವಿಲ್ಲದೆ ಅದು ಪೂರ್ಣ ಮಾಡುವುದು ಸಾಧ್ಯವೇ ಇಲ್ಲಾ. ಅದಕ್ಕಾಗಿಯೇ ನಿಜವಾಗಿ ಶಿಕ್ಷಕರೇ ನಿಜವಾದ ಸತ್ಪಜೆಗಳ, ಸತ್ಯ, ನ್ಯಾಯ ನೀತಿ ಮಾರ್ಗಿಗಳ, ನಿರ್ಮಾಪಕರು. ಈ ಕಾರಣದಿಂದಲೇ ಈ ಸ್ಪರ್ಧೆ ಆಯೋಜಿಸಿದ್ದು.


ಹಾಗೆ, ಎಲ್ಲಾ ಕಡೆ ಆದರ್ಶ ಶಿಕ್ಷಕರ ಯೋಚನೆ, ವಿಚಾರ ಹರಿದಾಡಲಿ ಎನ್ನುವ ಉದ್ದೇಶದಿಂದ ಯೂಟ್ಯೂಬ್ ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ಇರುವಂತೆ ಈ ಅನಿಸಿಕೆಗಳನ್ನು ಪ್ರಕಟ ಮಾಡಬೇಕು ಎನ್ನುವ ಉದ್ದೇಶ ಈ ಮೊದಲು ಇತ್ತು. 


ಆದರೆ ಶಿಕ್ಷಕರಿಂದ ಬಂದ ಅಭಿಪ್ರಾಯ ಗೌರವಿಸುವ ಹಿನ್ನೆಲೆಯಲ್ಲಿ, ಯಾರು ಸಾರ್ವಜನಿಕರ ವೀಕ್ಷಣೆಗೆ ಒಪ್ಪಿಗೆ ನೀಡಿಲ್ಲ, ಅವರ ಅನಿಸಿಕೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ಲಭಿಸದಂತೆ ನೋಡಿಕೊಳ್ಳಲಾಗುತ್ತಿದೆ.


ನಮಗೆ ಕಳುಹಿಸಿದ ಉಳಿದ ಶಿಕ್ಷಕರು ಸಹ ಉತ್ತಮವಾಗಿ ಮಾತನಾಡಿದ್ದಾರೆ. 


ಆದರೆ ಈ ಅನಿಸಿಕೆ ಕಳುಹಿಸಿರುವ ಶಿಕ್ಷಕರಿಗೆ ನಾನು ಒಂದು ಸಂದೇಶ ಕಳುಹಿಸಿದ್ದೇನೆ ಏನೆಂದರೆ, *ಸರ್ ನಿಮ್ಮ ಈ ಅನಿಸಿಕೆ ನೀವು ಬೇಡವೆಂದರೂ ಸಾರ್ವಜನಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಕುರಿತು ಯೋಚಿಸುತ್ತಿದ್ದೇನೆ*, ಎಂದು. 


ಬಹುಶಃ ಅವರು ನಿರಾಕರಿಸಲಾರರು. ನಾವು ಜಾಲತಾಣದಲ್ಲಿ ಅಥವಾ ಗುಂಪುಗಳಲ್ಲಿ ಹಾಕಿದ ಎಲ್ಲಾ ವಿಡಿಯೋ ಎಲ್ಲರೂ ನೋಡಿಲಿಕ್ಕಿಲ್ಲ. ಆದರೆ ಎಲ್ಲರಿಗೆ ನಾನು ಮಾಡುವ ವಿನಂತಿಯೆಂದರೆ, ನಾಡಿದ್ದು ಈ ವಿಡಿಯೋ ಗುಂಪುಗಳಲ್ಲಿ, ಜಾಲತಾಣದಲ್ಲಿ ಹಾಕುತ್ತಿದ್ದೇನೆ. 


*ತಾವು ಮೂರು ನಿಮಿಷಗಳ ಈ ವಿಡಿಯೋ ನೋಡಲು ಇಂದೇ ಯೋಜಿಸಿ, ಬಿಡುವು ಮಾಡಿಕೊಳ್ಳಬೇಕು, ಎಂದು ಇಂದೇ ತಮ್ಮನ್ನು ಕೋರುತ್ತಿದ್ದೇನೆ.*


ಅಂದ ಹಾಗೆ, ಅನಿಸಿಕೆ ಕಳುಹಿಸಲು ನಾಳೆ ಕಟ್ಟ ಕಡೆಯ ದಿನ. ಯಾರಿಗೆ ಆಸಕ್ತಿ ಇದೆ ಅವರು ನಾಳೆ ವರೆಗೆ *ಮಾತ್ರ* ಕಳುಹಿಸಬಹುದು. 


ಬಂದಂತಹ ಅನಿಸಿಕೆಗಳಲ್ಲಿಯೇ ನಿರ್ಣಾಯಕರು ನಾಲ್ಕು ವಿಭಾಗಗಳಿಂದ ಮೊದಲ ಮೂರು ಅನಿಸಿಕೆಗಳನ್ನು ಆಯ್ಕೆ ಮಾಡುವರು, ಎಂದು ಈ ಮೂಲಕ ತಮಗೆ ತಿಳಿಸಲು ಬಯಸುತ್ತೇನೆ. 


ದಯವಿಟ್ಟು ನಾಡಿದ್ದು ಈ ವಿಡಿಯೋ ನೋಡಲು ಬಿಡುವು ಮಾಡಿಕೊಳ್ಳಿ, ಎಂದು ಮತ್ತೊಮ್ಮೆ ಕೇಳಿಕೊಳ್ಳುತ್ತಾ...


ಧನ್ಯವಾದಗಳೊಂದಿಗೆ


ಇಂತಿ ತಮ್ಮ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments

Popular posts from this blog