*"ನಮ್ಮ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಬಹುಮಾನವಾಗಿ ಕೊಡಬೇಕೆಂದಿರುವ ಪುಸ್ತಕದ  ( Immortal talk -1) ಪರಿಚಯ"*


ಎಲ್ಲರಿಗೂ ನಮಸ್ಕಾರ, 


ಆತ್ಮೀಯರೇ,


ಪ್ರೌಢ ಶಾಲಾ ವಿಧ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕನ್ನಡ ಇಂಗ್ಲೀಷ್ ನಿಘಂಟು ನೀಡಲಾಗಿತ್ತು.


ಶಿಕ್ಷಕರ ದಿನಾಚರಣೆ ಹಾಗೂ ಹಿರಿಯ ಮುಖಂಡರು, ಸಮಾಜ ಸೇವಕರಾದ ಶ್ರೀ ಗಣಪತರಾವ ಚಿಮ್ಮನಚೋಡಕರ್ ರವರ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಶಿಕ್ಷಕರ ಅನಿಸಿಕೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಗೌರವ ಸನ್ಮಾನದೊಂದಿಗೆ  ಒಂದು ವಿಶೇಷ ಪುಸ್ತಕ ನೀಡಲು ಬಯಸಿದ್ದೇವೆ.


ಈ ಪುಸ್ತಕ ನಮ್ಮ ಯೋಚನೆ ವಿಚಾರ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಪುಸ್ತಕವಾಗಿದೆ. ಈ ಪುಸ್ತಕದ ಹಿನ್ನೆಲೆ ಹೇಳಬೇಕಾದರೆ, ಇದು ಒಂದು ಮಹಾನ ಉಪನ್ಯಾಸದ ಸಂಕಲನ ಆಗಿದೆ. ಇದು ಯಾರ ಉಪನ್ಯಾಸ ಎಂದು ಹೇಳುವ ಮುಂಚೆ ಇನ್ನೊಂದು ವಿಷಯ ತಿಳಿದುಕೊಳ್ಳುವುದು ಅವಶ್ಯವಾಗಿದೆ.


ತೆತ್ರಾಯುಗದಲ್ಲಿ ಪ್ರಕಟವಾದವರು ಶ್ರೀ ಹನುಮಾನ ದೇವರು. ಅವರು ಇಂದಿಗೂ ಈ ಭೂಮಿಯ ಮೇಲೆ ಚಿರಂಜೀವಿಯಾಗಿದ್ದಾರೆಯೆಂದು ನಂಬಲಾಗಿದೆ. 


ಚಿರಂಜೀವಿಯಾದರೂ ಅವರು ಸಾಮಾನ್ಯವಾಗಿ ಯಾರಿಗೂ ಭೇಟಿ ಆಗುವುದಿಲ್ಲ. ಹಾಗೂ ಯಾರಿಗೂ ಕಾಣುವುದಿಲ್ಲ. ಆದರೆ "ಶ್ರೀಲಂಕಾದಲ್ಲಿ ಒಂದು ಪುಣ್ಯವಂತ ಮಾತಂಗ ಎನ್ನುವ ಬುಡಕಟ್ಟು ಜನಾಂಗ ಇದೆ". 


ಅಲ್ಲಿಗೆ ಹನುಮಾನ ದೇವರು 41 ವರ್ಷಗಳಿಗೊಂದು ಬಾರಿ ಬರುತ್ತಾರೆ. ಅಲ್ಲಿಗೆ ಬರುವ ಅವರು ಆ ಬುಡಕಟ್ಟು ಜನರಿಗೆ ಜ್ಞಾನದ ಉಪದೇಶ ನೀಡುತ್ತಾರೆ. ಈ ಉಪದೇಶವನ್ನು ಅಲ್ಲಿನ ಜನ ತಮ್ಮ ಲಾಗ್ ಬುಕ್ ನಲ್ಲಿ ದಾಖಲಿಸುತ್ತಾರೆ. (ಈ ಬಗ್ಗೆ ಅನುಮಾನ ಇರುವವರು Hanuman 41 years 2014 srilanka ಎಂದು ಜಾಲತಾಣದಲ್ಲಿ ಹುಡುಕಬಹುದು)


ಈ ಉಪನ್ಯಾಸಗಳು ಮೊಟ್ಟಮೊದಲು ನನಗೆ ಸೇತು ಎನ್ನುವ ಒಂದು ವೆಬ್ಸೈಟ್ನಲ್ಲಿ ಲಭಿಸಿದವು. ಅವುಗಳನ್ನು ಓದಿದ ನಂತರ ಅನೇಕ ಹೊಸ ದೃಷ್ಟಿಕೋನಗಳು, ಜಗತ್ತಿನ ಬಗ್ಗೆ ಸತ್ಯ ಇತಿಹಾಸ ಹಾಗೂ ಮುಂಬರುವ ಜಗತ್ತಿನ ಕಲ್ಪನೆ ನನ್ನಲ್ಲಿ ಮೂಡಿತು. (ಈ ಎಲ್ಲಾ ಉಪನ್ಯಾಸಗಳನ್ನು ನನ್ನ ಕೆಲವು ಶಿಷ್ಯರೊಂದಿಗೆ ಹಂಚಿಕೊಂಡಿದ್ದೇನೆ). 


ಸಮಯ ಕಳೆದ ನಂತರ ಈ ಉಪನ್ಯಾಸಗಳೇ ಪುಸ್ತಕದ ರೂಪದಲ್ಲಿ ಪ್ರಕಟವಾಗಿವೆ (ಉಪನ್ಯಾಸ ಹಾಗೂ ಪುಸ್ತಕದಲ್ಲಿ ಅಲ್ಪ ಭಿನ್ನತೆಯಿದೆ).


ಈ ಪುಸ್ತಕ ಈಗ ಕೇವಲ ಇಂಗ್ಲೀಷ್ (Name of book : Immortal talk) ಮತ್ತು ಹಿಂದಿ (ಪುಸ್ತಕದ ಹೆಸರು : ಕಲಿ ಹನುವಾಣಿ) ಭಾಷೆಯಲ್ಲಿ ಲಭ್ಯವಿದೆ. ಇದು ಈಗ ಮೂರು ಭಾಗಗಳಲ್ಲಿ ಬಿಡುಗಡೆಯಾಗಿದೆ.


ಈ ಪುಸ್ತಕ ಜ್ಞಾನ, ವಿಜ್ಞಾನ, ತತ್ವಜ್ಞಾನದ ಸಂಗಮವಾಗಿದೆ . ಜಗತ್ತಿನ ಸತ್ಯ ಇತಿಹಾಸ ಹಾಗೂ ಮುಂಬರುವ ಜಗತ್ತಿನ ಕಲ್ಪನೆ ನೀಡುವಂತಹ ಅದ್ಬುತ ಪುಸ್ತಕ ಇದಾಗಿದೆ. ನಮಗೆ ಗೊತ್ತಿಲ್ಲದ ಅನೇಕ ವಿಚಾರಗಳು ಹನುಮಾನ ದೇವರ ಉಪನ್ಯಾಸದಲ್ಲಿ ಸಿಗುತ್ತವೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ದಶರಥ ಮಹಾರಾಜನಿಗೆ ಎಷ್ಟು ಮಕ್ಕಳು ? ಎಂದಾಗ ಬಹುತೇಕರು ನಾಲ್ಕು ಮಕ್ಕಳು ಎಂದು ಹೇಳುತ್ತಾರೆ. ಆದರೆ ಅವರಿಗೆ ನಿಜವಾಗಿ ಐದು ಮಕ್ಕಳು ಇರುತ್ತಾರೆ. (ಮೊದಲ ಮಗಳು ಶಾಂತಾ. ಈಕೆಯ ನಂತರ ನಾಲ್ಕು ಗಂಡು ಮಕ್ಕಳು.)


ಅವರ ಜ್ಞಾನ ಹೇಗಿದೆ ಎನ್ನುವ ಕಿರು ಪರಿಚಯ ಸಿಗಲು ಇನ್ನೊಂದು ಪ್ರಶ್ನೆಯಿದೆ. ಇದನ್ನು ಉತ್ತರಿಸಲು ನೀವೇ ಪ್ರಯತ್ನಿಸಿ. 


ಹನುಮಾನ ದೇವರು ಒಂದು ಪ್ರವಚನದಲ್ಲಿ ಒಂದು ಪ್ರಶ್ನೆ ಮಾತಂಗ ಜನರಿಗೆ ಕೇಳುತ್ತಾರೆ. (ಅವರು ಬಳಸಿದ ವಸ್ತುವಿಗೆ ಬದಲಾಗಿ ನಾನು "ಮೋಬೈಲ್" ಮೂಲಕ ಈ ಪ್ರಶ್ನೆ ತಮ್ಮ ಮುಂದೆ ಇಡುತ್ತಿದ್ದೇನೆ. )


 ಅದೇನೆಂದರೆ, "ನಾನು ನೀವು ಎದುರು ಬದರು ಕುಳಿತಿದ್ದೇವೆ ಎಂದು ಭಾವಿಸಿಕೊಳ್ಳಿ.  ಈಗ ನನ್ನಲ್ಲಿ ಮೊಬೈಲ್ ಇದೆ. ಈ ಮೊಬೈಲ್ ನೀವು ಇಲ್ಲವಾಗಿ ಮಾಡಬೇಕು. ಒಂದು ಶರತ್ತು ಏನೆಂದರೆ ಇದನ್ನು ನೀವು ಮುಟ್ಟಬಾರದು. ಮೋಬೈಲ್ ಇಲ್ಲವಾಗಿ ನೀವು ಹೇಗೆ ಮಾಡುತ್ತೀರಿ ?" 

( ಈ ಲೇಖನ ಓದುತ್ತಿರುವ ತಾವು ಈ ಪ್ರಶ್ನೆಗೆ ಉತ್ತರಿಸಿ.)


ಈ ರೀತಿಯ ಪ್ರಶ್ನೋತ್ತರಗಳ ಮೂಲಕ ಅನೇಕ ಸೂಕ್ಷ್ಮ ಜ್ಞಾನವನ್ನು ಹನುಮಾನ ದೇವರು ತಮ್ಮ ಉಪನ್ಯಾಸದಲ್ಲಿ ನೀಡಿದ್ದಾರೆ.


ಅವರ ಪ್ರವಚನದಲ್ಲಿ ಬರುವ ಇತರ ವಿಷಯಗಳೆಂದರೆ,


* ಸತ್ಯ ಯುಗದಲ್ಲಿ ಘಟಿಸಿದ ಮೊಟ್ಟಮೊದಲ ಹಿಂಸೆ ಯಾವುದಾಗಿತ್ತು ?


* ಸತ್ಯ ಯುಗದಲ್ಲಿ ನಾವು ಬಯಸಿದ ಇಚ್ಛೆ ಪೂರ್ಣಗೊಳಿಸಲು ಕೆಲಸ ಮಾಡುವುದು ಆವಶ್ಯಕವಾಗಿತ್ತೆ ?


* ಸತ್ಯ ಯುಗದಲ್ಲಿ ಹುಟ್ಟು ಸಾವುಗಳು ಇದ್ದವೇ ?


* ಸತ್ಯ ಯುಗ ಕುಸಿತಕ್ಕೆ ಕಾರಣವೇನು ?


* ಕಲಿಯುಗದಲ್ಲಿ ಕಲ್ಕಿ ಕುದುರೆ ಮೇಲೆ ಕುಳಿತು ಖಡ್ಗ ಹಿಡಿದು ಬರುವರೇ? ಕುದುರೆ ಎಂದರೇನು ?  ಈ ಖಡ್ಗ ಎಂದರೆ ಯಾವುದು ?


* ಜಗತ್ತಿನ ಪ್ರತಿಯೊಂದು ಜೀವಿ ಭೂಮಿಯಲ್ಲಿ ಹುಟ್ಟಲು ಕಾರಣವೇನು ? 


* ಪ್ರತಿಯೊಬ್ಬ ವ್ಯಕ್ತಿಯಲ್ಲಿ ಎಷ್ಟು "ಬುದ್ಧಿಗಳು" ಇವೆ ?


* ವಾಸ್ತವ ಎಂದರೇನು ? ಈ ಜಗತ್ತು ವಾಸ್ತವವೇ? ನಾವು ಕಾಣುವ ಕನಸುಗಳು ವಾಸ್ತವವೇ ? ಯಾವುದು ವಾಸ್ತವ ?


* ರೇಣುಕಾ ಯಲ್ಲಮ್ಮಳ ಚಂಚಲ ಮನಸ್ಸಿನ ಕಾರಣಕ್ಕಾಗಿ ಆಕೆ ರುಂಡ ಕತ್ತರಿಸಿಲ್ಲ. ಆಕೆಯ ರುಂಡ ಕತ್ತರಿಸಲು ನಿಜವಾದ ಕಾರಣವೇನು ? 


* ಸೀತೆ ಭೂಮಿಯಲ್ಲಿ ಜನ್ಮ ಪಡೆಯಲು ಕಾರಣವೇನು ?


* ರಾಮಾಯಣದ ಪಾತ್ರಗಳ ಅರ್ಥ ಮತ್ತು ಈಗ ಆ ಪಾತ್ರಗಳು ನಮ್ಮ ದೈನಂದಿನ ಜೀವನದಲ್ಲಿಯೂ ಯಾವ ರೀತಿ ಸಹಾಯ ಮಾಡಬಹುದು ?


* ಜಗತ್ತಿನ ಜೀವಿಗಳ ಪ್ರಜ್ಞೆಯ ಎಷ್ಟು ವಿಧಗಳು ಇವೆ ?


* ನಿಜಕ್ಕೂ ನಳ ನೀಲರೇ ರಾಮಸೇತು ನಿರ್ಮಿಸಿದರೆ ? 

* ನಿಜವಾಗಿ ರಾಮಸೇತು ಹೇಗೆ ನಿರ್ಮಾಣವಾಯಿತು?


* ಶಿವಲಿಂಗ ಎಂದರೇನು ?


* ಶ್ರೀಕೃಷ್ಣ ಸುಧಾಮಾ ನಿಜಕ್ಕೂ ಬಾಲ್ಯ ಸ್ನೇಹಿತರೇ ? ಸಾಪೇಕ್ಷತಾ ಹಾಗೂ ನೀರಪೇಕ್ಷತಾ ಸಂಗತಿಗಳು.


* ಶಿವ ಈ ಜಗತ್ತಿನಲ್ಲಿ ಯಾವ ರೀತಿ ಇದ್ದಾರೆ ?  


* ತಾಡಕಾ ವನ ಹೇಗಿತ್ತು ?


ಹೀಗೆ ಅನೇಕ ವಿಷಯಗಳನ್ನು ನಾವು ಹನುಮಾನ ದೇವರ ಪ್ರವಚನದಲ್ಲಿ ನೋಡುತ್ತೇವೆ. 


ನನಗೆ ಪಿಯುಸಿಯಲ್ಲಿ ಸತ್ಯ ಯುಗದ ಕಲ್ಪನೆ ಮೂಡಿತ್ತು ಮತ್ತು ನನ್ನ ಜೀವನದಲ್ಲಿ ಯಾರು ಊಹಿಸದ ಘಟನೆಯಾಯಿತು. ಆ ಸಮಯದ ನಂತರ ಅದನ್ನು ಮರೆತುಬಿಟ್ಟಿದ್ದೆ. ಹನುಮಾನ ದೇವರ ಈ 

ಉಪನ್ಯಾಸಗಳನ್ನು ಓದಿದಾಗ ಪುನಃ ಸತ್ಯ ಯುಗದ ಚಿಂತನೆ ವಿಚಾರ ಪುನಃ ನನ್ನಲ್ಲಿ ಜಾಗೃತಗೊಂಡಿವೆ. ನನ್ನ ಜೀವನದ ಉದ್ದೇಶವೇ ಸತ್ಯ ಯುಗಕ್ಕೆ ಪೂರಕವಾದಂತಹ ವಾತಾವರಣವನ್ನು ಈ ಜಗತ್ತಿನಲ್ಲಿ ನಿರ್ಮಿಸುವುದು ಎಂದು

ನಾನು ಭಾವಿಸಿದ್ದೇನೆ. ಇದರ ನಿಮಿತ್ತ ಈ ಟ್ರಸ್ಟ್ ಸ್ಥಾಪಿಸಿ ಕಾರ್ಯನಿರತನಾಗಿದ್ದೇನೆ.


ಜಗತ್ತಿನ ಈಗಿನ ವಾಸ್ತವಿಕ ಚಿತ್ರಣ ನೋಡಿದಾಗ, ಸತ್ಯ ಯುಗ ಹೇಗೆ ಸಾಧ್ಯ? ಎನ್ನುವ ಅನುಮಾನಗಳು, ನಿಮ್ಮೆಲ್ಲರಂತೆ, ನನ್ನಲ್ಲಿಯೂ ಈ ಮೊದಲು ಮೂಡುತ್ತಿದ್ದವು. ಆದರೆ ಈ ದಿಕ್ಕಿನಲ್ಲಿಯೇ ಹನುಮಾನ ದೇವರ ಚಿಂತನೆ ನನಗೆ ಲಭಿಸಿರುವುದರಿಂದ ಎಲ್ಲಾ ಭಾರ ಅವರ ಮೇಲೆ ಹಾಕಿ ನಡೆಯುತ್ತಿದ್ದೇನೆ. (ಈ ಹಿನ್ನೆಲೆಯಲ್ಲಿಯೇ ಟ್ರಸ್ಟ್ ಲೋಗೋ ದಲ್ಲಿ ಹನುಮಾನ ದೇವರ ಚಿತ್ರವನ್ನು ಚಿತ್ರಿಸಿದ್ದೇನೆ.)


ಈ ಪುಸ್ತಕದಿಂದ ಸರ್ವರ ಜ್ಞಾನ ವಿಕಸಿತವಾಗಲಿ, ಎಂದು ಬಯಸುತ್ತೇನೆ. ಎಲ್ಲರೂ ತಮ್ಮ ಮೂಲ ಸ್ವರೂಪವನ್ನು ಪಡೆಯಲಿ ಎಂದು ಪ್ರಾರ್ಥಿಸುತ್ತೇನೆ. 


ಕೊನೆಯಲ್ಲಿ ಹನುಮಾನ ದೇವರು ಉಪನ್ಯಾಸದಲ್ಲಿ ಹೇಳಿರುವ ಒಂದು ಮಾತನ್ನು ಹೇಳುವ ಮೂಲಕ ಲೇಖನಕ್ಕೆ ವಿರಾಮ ನೀಡುತ್ತೇನೆ. 


ಅವರು ಹೇಳಿರುವುದು ಏನೆಂದರೆ, "*ಒಬ್ಬ ಮಲಗಿರುವ ವ್ಯಕ್ತಿಯನ್ನು ಎಚ್ಚರಿಸಬಹುದು. ಆದರೆ ಮಲಗಿದಂತೆ ನಟನೆ ಮಾಡುವವರನ್ನು ಎಚ್ಚರಿಸಲು ಸಾಧ್ಯವಿಲ್ಲ. ಇದೇ ರೀತಿ ಜ್ಞಾನದ ಕೊರತೆ ನನ್ನಲ್ಲಿ ಇದೆ, ಎನ್ನುವವರಿಗೆ ಜ್ಞಾನ ನೀಡಬಹುದು. ನನ್ನಲ್ಲಿ ಈಗಾಗಲೇ ಸಾಕಷ್ಟು ಜ್ಞಾನ ಇದೆ, ಎನ್ನುವವರಿಗೆ ಜ್ಞಾನ ನೀಡಲು ಸಾಧ್ಯವಿಲ್ಲ*". 


*"ಹನುಮಾನ ದೇವರು ನೀಡಿರುವ ಕಲ್ಕಿಯ ಸ್ವರೂಪ ಏನೆಂದರೆ, ಕಲ್ಕಿ ವೇಗವಾಗಿ ಓಡುವ ಕುದುರೆ ಮೇಲೆ ಕುಳಿತು ಬರುತ್ತಾರೆ. ಆ ಕುದುರೆ ಯಾವುದೆಂದರೆ, ವಿಧ್ಯುತ ಶಕ್ತಿ*." 


*"ಅವರ ಕೈಯಲ್ಲಿ ಖಡ್ಗದಿಂದ ಕೆಟ್ಟವರನ್ನು ನಾಶ ಮಾಡುತ್ತಾರೆ ಎಂದು ಹೇಳಲಾಗಿದೆ. ಅವರ ಕೈಯಲ್ಲಿರುವ ಆ ಖಡ್ಗ ಯಾವುದೆಂದರೆ, ಜ್ಞಾನದ ಖಡ್ಗ."*


ಆದ್ದರಿಂದ ತಮ್ಮೆಲ್ಲರಲ್ಲಿ ನಾನು ಮಾಡಿಕೊಳ್ಳುವ ವಿನಂತಿಯೆಂದರೆ ಈ ಅದ್ಭುತ ಜ್ಞಾನವನ್ನು ನಾವು ಪಡೆದುಕೊಳ್ಳೋಣ. ಇದನ್ನು ಪಡೆದುಕೊಂಡು ನೇರವಾಗಿ ಹಾಗೂ ವಿಧ್ಯುತ ಶಕ್ತಿಯ ಸಹಾಯದಿಂದ (ಅನೇರವಾಗಿ) ಇದನ್ನು ಎಲ್ಲಾ ಕಡೆ ಪ್ರಸಾರ ಮಾಡುತ್ತಾ ಎಲ್ಲರಲ್ಲಿ ಅಡಗಿರುವ ಕಲಿ ಎನ್ನುವ ಅಜ್ಞಾನವನ್ನು ನಾವು ನಾಶ ಮಾಡೋಣ. ತನ್ಮೂಲಕ  ಜಗತ್ತಿನಲ್ಲಿ ಪುನಃ ಸತ್ಯ ಯುಗವನ್ನು ಸ್ಥಾಪನೆ ಮಾಡೋಣ. 


"ಸತ್ಯ ಯುಗದ ಈ ಕಾರ್ಯದಲ್ಲಿ ಬರುವಂತಹ ಅಡ್ಡಿ ಅಡಚಣೆಗಳನ್ನು ಆ ವಿಘ್ನೇಶ್ವರನು ನಾಶ ಮಾಡಲಿ ಎಂದು ವಿನಾಯಕ ಚತುರ್ಥಿಯ ಈ ದಿನ ವಿಘ್ನೇಶ್ವರನಿಗೆ ಪ್ರಾರ್ಥಿಸುತ್ತಾ." 


ತಮ್ಮೆಲ್ಲರಿಗೂ ವಿನಾಯಕ ಚತುರ್ಥಿಯ ಶುಭಾಶಯವನ್ನು ಕೋರುತ್ತೇನೆ.


ಓಂ ನಮಃ ಶಿವಾಯ. 


ಧನ್ಯವಾದಗಳೊಂದಿಗೆ, 


ಇಂತಿ ತಮ್ಮ


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ


Comments

Popular posts from this blog