ಅಧಿಕ ಮಾಸ. ಅಧಿಕ ಮಾಸ, ಅಧಿಕ ಮಾಸ ಈಗ ಎಲ್ಲಾ ಕಡೆ ಬಹಳಷ್ಟು ಕೇಳಿ ಬರುತ್ತಿರುವ ಶಬ್ದ. ಅಧಿಕ ಮಾಸ ಹಾಗೆ ಎಂದರೇನು ? ಎನ್ನುವ ಪ್ರಶ್ನೆ ಎಲ್ಲರ ಮನಸಿನಲ್ಲಿರುತ್ತದೆ. ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಈ ವಿಷಯದ ಬಗ್ಗೆ ಗಮನಹರಿಸೋಣ. ಹಿಂದೂ ಧರ್ಮದ ಹಬ್ಬಗಳು ಹೆಚ್ಚು ಕಡಿಮೆ ಒಂದೇ ರೀತಿಯ ಕಾಲದಲ್ಲಿ ಬರುತ್ತವೆ. ಉದಾಹರಣೆಗೆ, ಯುಗಾದಿ ಬೇಸಿಗೆ ಆರಂಭದಲ್ಲಿಯೇ ಬರುತ್ತದೆ. ಗಣೇಶ ಹಬ್ಬ, ಮಳೆಗಾಲದಲ್ಲಿಯೇ ಬರುತ್ತದೆ. ದಸರಾ ದೀಪಾವಳಿ ಚಳಿಗಾಲ ಸಂದರ್ಭದಲ್ಲಿಯೇ ಬರುತ್ತದೆ. ಆದರೆ ಮುಸ್ಲಿಂ ಧರ್ಮದ ರಂಜಾನ್ ಹಬ್ಬ, ಒಂದು ಸಲ ಮಳೆಗಾಲದಲ್ಲಿ ಬಂದರೆ, ಒಂದು ಸಲ ಚಳಿಗಾಲ, ಇನ್ನೊಂದು ಸಲ ಬೇಸಿಗೆಯಲ್ಲಿ ಬರುತ್ತದೆ. ಇದಕ್ಕೆ ಕಾರಣ ಮುಸ್ಲಿಂ ಧರ್ಮ ಪೂರ್ಣವಾಗಿ ಚಂದ್ರ ವರ್ಷದ ಕ್ಯಾಲೆಂಡರ್ ಮೇಲೆ ಅವಲಂಬಿತವಾಗಿದೆ. ಸೂರ್ಯ ಆಧಾರಿತ ಕ್ಯಾಲೆಂಡರ್ ಗೆ ಒಂದು ವರ್ಷಕ್ಕೆ 365 ದಿನಗಳು ಬೇಕಾದರೆ, ಒಂದು ಚಂದ್ರ ವರ್ಷಕ್ಕೆ 354 ದಿನಗಳನ್ನು ತೆಗೆದುಕೊಳ್ಳುತ್ತದೆ. *ಸೂರ್ಯ ವರ್ಷ ಎಂದರೇನು ?* ಭೂಮಿ ಸೂರ್ಯನಿಗೆ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ 365 ದಿನ. ಇದನ್ನು ಸೌರಮಾನ ಕಾಲ ಗಣನೆ ಎಂದು ಕರೆಯುತ್ತಾರೆ. *ಚಂದ್ರ ವರ್ಷ ಎಂದರೇನು ?* ಚಂದ್ರ ಭೂಮಿಯ ಸುತ್ತಲೂ ಹನ್ನೆರಡು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ 354 ದಿನ. ಇದನ್ನು ಚಾಂದ್ರಮಾನ ಕಾಲ ಗಣನೆ ಎಂದು ಕರೆಯುತ್ತಾರೆ. ಹಿಂದೂ ಧರ್ಮದ ಕಾಲಗಣನೆ ಸೌ...