*"ಈಗ ನಡೆಯುತ್ತಿರುವ ಸಮಯ, ಸುದರ್ಶನ ಪೂರ್ಣ ಚಕ್ರ ಸಿದ್ದಾಂತದ ಸಮಯ*"


ಸುದರ್ಶನ ಪೂರ್ಣ ಚಕ್ರ ಸಿದ್ದಾಂತ ಎಂದರೆ, ಕೊಡುವುದು ಮತ್ತು ತೆಗೆದುಕೊಳ್ಳುವುದು ಒಟ್ಟುಗೂಡಿ ಸೊನ್ನೆಗೆ ಸಮ ಆಗಬೇಕು. 


ಇದನ್ನು ಇನ್ನೊಂದು ರೀತಿ ಹೀಗೆ ಹೇಳಬಹುದು ಅದೇನೆಂದರೆ, ನಾನು ಯಾರಿಂದಲೂ ಏನನ್ನು ಪಡೆದಿಲ್ಲ, ಯಾರು ನನಗೆ ಏನನ್ನು ಕೊಟ್ಟಿಲ್ಲ ಎನ್ನುವ ಭಾವನೆ ನಮಗೆ ಬಂದರೆ ಅದು ಸುದರ್ಶನ ಪೂರ್ಣ ಚಕ್ರ ಸಿದ್ದಾಂತ. 


ಹೇಗೆಂದರೆ, ನಾವು ಪಡೆದಿರುವುದಕ್ಕೆ ಸಮನಾಗಿ ಪುನಃ ಕೊಟ್ಟರೆ, ನಾವು ಯಾರಿಂದಲೂ ಪಡೆದಿಲ್ಲ ಎನ್ನಬಹುದು. ನಾವು ಕೊಟ್ಟಿರುವುದಕ್ಕೆ ಸಮನಾಗಿ ಪಡೆದರೆ, ನಾವು ಯಾರಿಗೂ ಕೊಟ್ಟಿಲ್ಲ ಎನ್ನಬಹುದು. ಇದನ್ನೇ ಸುದರ್ಶನ ಪೂರ್ಣ ಚಕ್ರ ಸಿದ್ದಾಂತ ಹೇಳುತ್ತದೆ.


ನಾನು ಈಗ ಬರೆಯುತ್ತಿರುವ ಲೇಖನ ಮೊದಲೇ ಬರೆಯಬೇಕಿತ್ತು, ಆದರೆ ನನ್ನ ಕೆಲಸ ಮತ್ತು ಈಶಾನ್ಯ ಶಿಕ್ಷಕರ ಚುನಾವಣೆ ತಯಾರಿಯಲ್ಲಿ ಇದರ ಬಗ್ಗೆ ಯೋಚನೆಯೇ ಬರಲಿಲ್ಲ.


ವಿಷಯ ಏನೆಂದರೆ ಈಗ ಒಂದು ರೀತಿಯಲ್ಲಿ ಸುದರ್ಶನ ಪೂರ್ಣ ಚಕ್ರ ಸಿದ್ದಾಂತದ ಪಕ್ಷ (15 ದಿನ) ನಡೆಯುತ್ತಿದೆ.

ಇದನ್ನೇ ಪ್ರಚಲಿತ ಭಾಷೆಯಲ್ಲಿ ಪಿತೃ ಪಕ್ಷ ಎಂದು ಕರೆಯುತ್ತಾರೆ. 


 ಇಲ್ಲಿ ಮುಖ್ಯವಾಗಿ ಸುದರ್ಶನ ಪೂರ್ಣ ಚಕ್ರ ಸಿದ್ದಾಂತದ ಎರಡನೇ ಪ್ರಕ್ರಿಯೆ ನಡೆಯುತ್ತದೆ. ನಾವು ಪಡೆದಿರುವುದಕ್ಕೆ ಪ್ರತಿಯಾಗಿ  *ಪುನಃ ಮರಳಿ ಕೊಡುವುದು*.


*ಪ್ರಶ್ನೆ : ಸತ್ತವರಿಗೆ ಮರಳಿ ಕೊಡುವುದೇ?* 


ಜೀವಂತ ಇರುವವರಿಗೆ ಮರಳಿ ಕೊಡುವುದು ಸರಿ, ಸತ್ತವರಿಗೆ ಮರಳಿ ಕೊಡುವುದು ಮೂಢನಂಬಿಕೆ ಎನ್ನುವ ಮಾತನ್ನು ಆಧುನಿಕ ಚಿಂತಕರು ಹೇಳಬಹುದು. 


ಆದರೆ ಸಾವು ಎಂದರೇನು ? ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಈ ದೇಹ ಇಲ್ಲವಾಗುವುದನ್ನು ಸಾವು ಎಂದು ಕರೆಯುತ್ತಾರೆ. ಆದರೆ ನಾವು ದೇಹವೇ ? ಎನ್ನುವುದನ್ನು ನಾವು ಪ್ರಶ್ನಿಸಿಕೊಳ್ಳಬೇಕು. 


ನಾವು ದೇಹ ಆಗಿದ್ದಲ್ಲಿ, ನಿದ್ರೆಯ ಸ್ಥಿತಿಯಲ್ಲಿ ನಮ್ಮ ದೇಹ ಜೀವಂತ ಇದ್ದರೂ, ನಮಗೆ ಹೊರಗಿನ ಜಗತ್ತಿನ ಚಟುವಟಿಕೆ ಏಕೆ ತಿಳಿಯುವುದಿಲ್ಲ ? ಏಕೆಂದರೆ ಆಗ ನಮ್ಮ ದೇಹ ಜೀವಂತ ಇದ್ದರೂ ನಮ್ಮ ಪ್ರಜ್ಞೆ ಆಗ ಎಚ್ಚರಿಕೆ ಕಳೆದುಕೊಂಡಿರುತ್ತದೆ. 


ಇದರರ್ಥ ಪ್ರಜ್ಞೆ ಬೇರೆ ದೇಹ ಬೇರೆ. ವ್ಯಕ್ತಿ ಸತ್ತಾಗ ದೇಹ ಇಲ್ಲದಿದ್ದರೂ ಪ್ರಜ್ಞೆ ಇರುತ್ತದೆ. ಸತ್ತಂತಹ ವ್ಯಕ್ತಿ ಇನ್ನೊಂದು ಸೂಕ್ಷ್ಮ ಶರೀರ ಹೊಂದಿರುತ್ತಾನೆ.


 ಈಗಿರುವ ನಮ್ಮ ದೇಹ ಘನ, ದ್ರವ, ಅನಿಲ, ಬೆಂಕಿ, ಆಕಾಶ ಎನ್ನುವ ಐದು ವಸ್ತುಗಳಿಂದ ಆಗಿದೆ. ಸೂಕ್ಷ್ಮ ಶರೀರ ಕೇವಲ ಅನಿಲ, ಬೆಂಕಿ, ಆಕಾಶ ಹೊಂದಿದೆ. 


ಇಂತಹ ಸೂಕ್ಷ್ಮ ಶರೀರ  ಹೊಂದಿರುವ ಅಗಲಿಹೋದ ನಮ್ಮ  ಪೂರ್ವಜರಿಗೆ ನಾವು ಅವರಿಂದ ಪಡೆದಿರುವುದಕ್ಕೆ ಪ್ರತಿಯಾಗಿ ನೀಡುವುದೇ ಪಿತೃ ಪಕ್ಷ. ಅಥವಾ  ಶ್ರಾಧ್ಧ ಪಕ್ಷ ಕರೆಯುತ್ತಾರೆ. 


*"ನಾವು ದೇವರಿಂದ ಪಡೆದಿದ್ದೇವೆ. ಪಿತೃಗಳಿಂದ ಪಡೆದಿಲ್ಲ"*


ನಮಗೆ ಜನ್ಮ ನೀಡಿದವರು ಪೋಷಣೆ ಮಾಡಿದವರು ಒಂದು ಹಂತಕ್ಕೆ ತಲುಪಿಸಿದವರು ಪಿತೃಗಳು. ಆದರೂ ಕೆಲವರು ಮೇಲಿನ ರೀತಿಯಿಂದಲೂ ಯೋಚಿಸಬಹುದು. 


ಹೌದು, ದೇವರು ಎಲ್ಲವನ್ನು ಕೊಡುತ್ತಾನೆ. ಆದರೆ 


* ನಮಗೆ ಈಗ ಲಭಿಸಿರುವ ದೇಹ ಯಾರಿಂದ ನೇರವಾಗಿ ನಮಗೆ ಲಭಿಸಿದೆ ? 


* ಈಗ ನಮ್ಮ ದೇಹದಲ್ಲಿರುವ ಡಿ.ಎನ್.ಎ ಯಾರದ್ದಾಗಿದೆ ? 


ಅದುವೇ ನಮ್ಮ ಪಿತೃಗಳದ್ದು. ಅವರಿಂದ ಪಡೆದಿರುವುದಕ್ಕೆ ಪ್ರತಿಯಾಗಿ ಪುನಃ ಅವರನ್ನು ಸ್ಮರಿಸಿಕೊಂಡು ಗೌರವ ಶ್ರದ್ಧೆಯಿಂದ ನಾವು ಅವರಿಗೆ ಏನಾದರೂ ನೀಡುವುದೇ ಶ್ರಾದ್ಧ.


*"ಅವರಿಗೆ ನಾವು ಇಲ್ಲಿ ನೀಡಿದರೆ ಅಲ್ಲಿ ತಲುಪುವುದೇ?*"


ಹೀಗೆ ಕೆಲವರು ಪ್ರಶ್ನಿಸಬಹುದು. ಒಂದು ಉದಾಹರಣೆ ನೋಡೋಣ. ಒಬ್ಬ  ಮೊಬೈಲ್ ಫೋನ್ ಇಲ್ಲದಿರುವ ವ್ಯಕ್ತಿ ತನ್ನ ದುಡ್ಡನ್ನು ದೂರದ ಊರಿನ ತಮ್ಮ ಸಂಬಂಧಿಕರಿಗೆ ಕಳುಹಿಸಲು, ತನ್ನಲ್ಲಿರುವ ಹಣವನ್ನು ಒಬ್ಬ ಫೋನ್ ಪೇ ಹೊಂದಿರುವ ಮೋಬೈಲ್ ಇರುವ ಕೊಟ್ಟು  ದೂರದ ಊರಿನಲ್ಲಿರುವ ವ್ಯಕ್ತಿಗೆ ಹಣ ಕಳುಹಿಸಲು ಹೇಳುತ್ತಾನೆ.


 ಆಗ ಆತ ಫೋನ್ ಪೇ ಮೂಲಕ ಹಣ ಕಳುಹಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ ವ್ಯಕ್ತಿ ನೀಡಿದ ನೋಟಿನ ಹಣ ಇಲ್ಲಿಯೇ ಉಳಿದಿರುತ್ತದೆ. ಆದರೆ ಹಣದ ಮೌಲ್ಯ ಅಲ್ಲಿಗೆ ಹೋಗಿರುತ್ತದೆ. ಇದೇ ರೀತಿ ನಾವು ನಮ್ಮ ಪಿತೃಗಳಿಗೆ ನೀಡಿದ ಆಹಾರ ಇತ್ಯಾದಿ ವಸ್ತುಗಳು ಇಲ್ಲಿಯೇ ಉಳಿದರೂ ಅದರಲ್ಲಿಯ ಶಕ್ತಿ ನಾವು ಸ್ಮರಿಸುವ ನಮ್ಮ ಪೂರ್ವಜರಿಗೆ ತಲುಪುತ್ತದೆ. ಏಕೆಂದರೆ ವಿಜ್ಞಾನದ ನಿಯಮದಂತೆ ಶಕ್ತಿ ಸೃಷ್ಟಿಸಲು ಸಾಧ್ಯವಿಲ್ಲ. ನಾಶ ಪಡಿಸಲು ಸಾಧ್ಯವಿಲ್ಲ. ಶಕ್ತಿ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಹರಿಯುತ್ತದೆ.


*ಈ ಕ್ರಿಯೆ  ಹದಿನೈದು ದಿನಗಳ ಕಾಲ ಏಕಿದೆ ?*


ಇದಕ್ಕೆ ಒಂದು ಉದಾಹರಣೆ : ನಮ್ಮ ದೇಶದ ಚಂದ್ರಾಯನ 3 ನೌಕೆ ಯಶಸ್ವಿಯಾಗಿ ಚಂದ್ರನಲ್ಲಿ ಹದಿನಾಲ್ಕು ದಿನಗಳವರೆಗೆ ಕೆಲಸ ಮಾಡಿ ತನ್ನ ಸಾಮರ್ಥ್ಯ ಕಳೆದುಕೊಂಡಿತು. ಏಕೆಂದರೆ ಇಲ್ಲಿ ಭೂಮಿಯಲ್ಲಿ ಸರಿಸುಮಾರು 12 ಗಂಟೆ ದಿನ, 12 ಗಂಟೆ ರಾತ್ರಿ ಇರುವಂತೆ, ಚಂದ್ರಲೋಕದಲ್ಲಿ ಭೂಮಿಯ ಹದಿನೈದು ದಿನಕ್ಕೆ ಒಂದು ಹಗಲು, ಇನ್ನೊಂದು ಹದಿನೈದು ದಿನಕ್ಕೆ ರಾತ್ರಿ ಇರುತ್ತದೆ. ಚಂದ್ರಯಾನ ನೌಕೆ  ಚಂದ್ರ ಲೋಕದ ಹಗಲಿನಲ್ಲಿ ಸೂರ್ಯನ ಸೌರ ಶಕ್ತಿಯಿಂದ ಕೆಲಸ ಮಾಡಿ, ಚಂದ್ರ ಲೋಕದ ರಾತ್ರಿಯಲ್ಲಿ ತನ್ನ ಕೆಲಸ ನಿಲ್ಲಿಸಿತು. 


ಚಂದ್ರ ಲೋಉದಂತೆ ಪಿತೃ ಲೋಕದ ಹಗಲು ರಾತ್ರಿ ನಮ್ಮ ಭೂಲೋಕದ ಹದಿನೈದು ದಿನಕ್ಕೆ ಸಮ ಎಂದು ಹೇಳುತ್ತಾರೆ. ಹಾಗಾಗಿ ಹದಿನೈದು ದಿನಗಳವರೆಗೆ ನಮ್ಮ ಪೂರ್ವಜರನ್ನು ನೆನೆದು ಅವರಿಗೆ ಆಹಾರ ಸಮರ್ಪಿಸುತ್ತಾರೆ. 


ಇಲ್ಲಿನ ಹದಿನೈದು ದಿನ ಪಿತೃ ಲೋಕದ ಒಂದು ದಿನಕ್ಕೆ ಸಮ. ಹಾಗಾಗಿ ಪಿತೃಗಳು ಸಂಜೆವರೆಗೂ ತಮ್ಮವರು ಏನಾದರೂ ನೀಡುವರು ಎಂದು ಕಾಯುತ್ತಾರೆ. ನೀಡಿದರೆ ಹರಸಿ, ಆಶೀರ್ವದಿಸಿ ಹೋಗುತ್ತಾರೆ. ಇದರಿಂದ ನಮಗೆ ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆ. 


 ನೀಡದಿದ್ದರೆ ನಿಟ್ಟುಸಿರು ಬಿಟ್ಟು ಹೋಗುತ್ತಾರೆ. ಇದರಿಂದ ಕೆಟ್ಟದ್ದು ಆಗುತ್ತದೆ, ಎನ್ನುವ ನಂಬಿಕೆ. 


10 ನೇ ತಾರೀಖು ಪಿತೃ ಪಕ್ಷದ ಕೊನೆಯ ದಿನ ಮಹಾಲಯ ಅಮಾವಾಸ್ಯೆ. ಇದರ ಬಗ್ಗೆ ನಂಬಿಕೆ ಇರುವವರು 10 ನೇ ತಾರೀಖು  ಪಿತೃಗಳದ್ದು ಸ್ಮರಿಸಿ ಗೌರವ ಶ್ರದ್ಧೆ ಮೂಲಕ ಏನಾದರೂ ಅರ್ಪಿಸಿ ಸುದರ್ಶನ ಪೂರ್ಣ ಚಕ್ರ ಪ್ರಕ್ರಿಯೆಯನ್ನು ಮಾಡೋಣ ಎಂದು ಹೇಳುತ್ತಾ...


ಮತ್ತೊಮ್ಮೆ ಹೇಳುವೆ ಜೀವನವೆಂದರೆ ಸುದರ್ಶನ ಪೂರ್ಣ ಚಕ್ರದ ಸಿದ್ಧಾಂತದಂತೆ ಎಲ್ಲವನ್ನು ಪೂರ್ಣ ಮಾಡಿಕೊಳ್ಳುವ ಪ್ರಕ್ರಿಯೆ. ಅಥವಾ ನಮ್ಮ ಜೀವನದ ಒಟ್ಟು ಮೊತ್ತ ಸೊನ್ನೆ ಮಾಡಿಕೊಳ್ಳುವ ಪ್ರಕ್ರಿಯೆ. 


ನಮ್ಮ ಜೀವನದ ಒಟ್ಟು ಮೊತ್ತ ಸೊನ್ನೆ ಮಾಡುವ ಕಡೆಗೆ ನಾವು ಗಮನ ನೀಡೋಣ ಎಂದು ತಿಳಿಸುತ್ತಾ...


ಎಲ್ಲರಿಗೂ ಧನ್ಯವಾದಗಳು..


ಇಂತಿ ತಮ್ಮ 

ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ 08/10/2026

Comments

Popular posts from this blog