*"ಸೂಚನೆಗಳ ಅಪಾರ್ಥದಿಂದ ಆದಂತಹ ಬಹು ದೊಡ್ಡ ಅನಾಹುತಗಳು"*
ಸ್ಕಂದ ಮಾತಾ ದೇವಿ, ಅಷ್ಟು ದೊಡ್ಡ ದೇವಿ, ಆದರೆ ಸೂಚನೆಗಳನ್ನು ಅರ್ಥ ಮಾಡಿಕೊಳ್ಳಿ ಎನ್ನುವ ಚಿಕ್ಕ ಸಂದೇಶ ಕೊಡುತ್ತಿದ್ದಾರೆ, ಎನ್ನುವ ಭಾವನೆ ಹಲವರಲ್ಲಿ ಮೂಡಿರಬಹುದು.
ಆದರೆ ಈ ಹಿಂದೆ ಘಟಿಸಿದ ಅನಾಹುತಗಳನ್ನು ಯೋಚಿಸಿದಾಗ ಈ ಸಂದೇಶ ಎಷ್ಟು ದೊಡ್ಡದು ? ಎನ್ನುವುದು ತಿಳಿಯುತ್ತದೆ.
ರಾಮಾಯಣದ ವನವಾಸದಲ್ಲಿ ಸೀತಾಮಾತೆ, ಬಂಗಾರದ ವರ್ಣದ ಜಿಂಕೆಯನ್ನು ನೋಡಿ, ಅದು ಬೇಕು ಎನ್ನುವ ಹಠ ಮಾಡಿದಳು. ಅದನ್ನು ತರಲು ಶ್ರೀರಾಮ ಹೋದಾಗ ರಾವಣ ಸೀತೆಯನ್ನು ಅಪಹರಿಸಿದ.
*ಬಂಗಾರದ ಬಣ್ಣದ ಜಿಂಕೆ ನಿಜವಾದ ಜಿಂಕೆಯಲ್ಲ, ಮಾಯಾ ಜಿಂಕೆ, ಎನ್ನುವ ನಿಜ ಸಂಗತಿ ಸೀತಾ ಮಾತೆಗೆ ಅರ್ಥವಾಗಿದ್ದರೆ ಅಥವಾ ಅದನ್ನು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟಿದ್ದರೆ,, ಸೀತಾ ಮಾತೆ ಆ ಹಠ ಮಾಡುತ್ತಿರಲಿಲ್ಲ. ಶ್ರೀರಾಮ ಸೀತೆ ಬಿಟ್ಟು ಹೋಗುತ್ತಿರಲಿಲ್ಲ. ರಾವಣ ಸೀತೆಯನ್ನು ಅಪಹರಿಸುತ್ತಿರಲಿಲ್ಲ*.
2. ರಾವಣ ಸಾಧು ವೇಷ ಹಾಕಿಕೊಂಡು ಬಿಕ್ಷೆ ಬೇಡಲು ಸೀತಾ ಮಾತೆಯ ಗುಡಿಸಲಿಗೆ ಬಂದಾಗ, ಆತನನ್ನು ಸಾಧು ಎಂದು ನಿರ್ಣಯ ಮಾಡುವ ಮೊದಲು, ಸೀತಾ ಮಾತೆ ಆತನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಮಯ ನೀಡಿದ್ದರೆ ?
* ಬಂಗಾರದ ಜಿಂಕೆ ಕಾಣುವುದಕ್ಕೂ,
* ಪತಿ ಶ್ರೀರಾಮ ಹೊರಹೋಗುವುದಕ್ಕೂ
* ಇದೇ ಸಂದರ್ಭದಲ್ಲಿ ಅರಣ್ಯದಲ್ಲಿ ಸಾಧು ಬಿಕ್ಷೆ ಬೇಡಲು ಬಂದಿರುವುದಕ್ಕೂ, ಒಂದಕ್ಕೊಂದು ಸಂಬಂಧ ಇದೆಯೇ ? ಎನ್ನುವ ವಿಚಾರ ಸೀತಾ ಮಾತೆಗೆ ಬರುತ್ತಿತ್ತೇನೋ ?
*ಆದರೆ ಸೀತಾ ಮಾತೆ ಸಂಗತಿಯನ್ನು ಅರ್ಥ ಮಾಡಿಕೊಳ್ಳಲು ಸಮಯವನ್ನೆ ನೀಡಲಿಲ್ಲ. ರಾವಣನನ್ನು, ಸಾಧು ಎಂದು ತಕ್ಷಣ ಅಪಾರ್ಥ ಮಾಡಿಕೊಂಡ ಕಾರಣ ಸೀತಾ ಮಾತೆಯ ಅಪಹರಣವೇ ಆಯಿತು*.
3. ವಾಲಿ ಸುಗ್ರೀವ ಖಾಸಾ ಸಹೋದರರು. ಆದರೆ ಒಮ್ಮೆ ವಾಲಿ ಒಬ್ಬ ರಾಕ್ಷಸನೊಂದಿಗೆ ಹೋರಾಡುತ್ತಾ ಒಂದು ಗವಿ ಪ್ರವೇಶಿಸಿದ.
ಸ್ವಲ್ಪ ಸಮಯದ ನಂತರ ಒಳಗಿನಿಂದ ರಕ್ತ ಬರುವುದನ್ನು ನೋಡಿದ ಸುಗ್ರೀವ, ರಾಕ್ಷಸ ತನ್ನ ಅಣ್ಣನನ್ನು ಕೊಂದಿದ್ದಾನೆ. ರಾಕ್ಷಸ ಹೊರಗೆ ಬಂದರೆ ನನ್ನನ್ನು ಕೊಲ್ಲುತ್ತಾನೆ ಎಂದು ಸುಗ್ರೀವ ಗವಿಯ ಕಿಂಡಿಯನ್ನು ದೊಡ್ಡ ಗುಂಡು ಕಲ್ಲಿನಿಂದ ಮುಚ್ಚಿದ.
ಆದರೆ ವಾಲಿಯೇ ರಾಕ್ಷಸನನ್ನು ಕೊಂದಿದ್ದ, ರಾಕ್ಷಸನ ರಕ್ತ ಹೊರಗಡೆ ಬಂದಿತ್ತು.
ಗವಿಯ ಕಿಂಡಿಗೆ ದೊಡ್ಡ ಕಲ್ಲು ಹೆಚ್ಚಿರುವುದನ್ನು ನೋಡಿದ ವಾಲಿ, ಸುಗ್ರೀವ ತನ್ನ ರಾಜ್ಯ ಕಬಳಿಸಲು ಹೀಗೆ ಮಾಡಿದ್ದಾನೆ ಎಂದು ಆತನನ್ನು ಕೊಲ್ಲಲು ಹೋಗುತ್ತಾನೆ. ಆಗ ಸುಗ್ರೀವ ಶ್ರೀರಾಮನ ಸಹಾಯದಿಂದ ತನ್ನ ಅಣ್ಣನನ್ನು ಸಾಯಿಸುತ್ತಾನೆ.
*ಇಲ್ಲಿ ಮೊದಲಿಗೆ ಸುಗ್ರೀವ, ರಾಕ್ಷಸ ತನ್ನ ಅಣ್ಣನನ್ನು ಕೊಂದಿದ್ದಾನೆ ಎಂದು ಘಟನೆಯನ್ನು ಅಪಾರ್ಥ ಮಾಡಿಕೊಂಡ. ನಂತರ ವಾಲಿ, ಸುಗ್ರೀವನನ್ನು ಅಪಾರ್ಥ ಮಾಡಿಕೊಂಡ. ಸೂಚನೆಗಳ ಅಪಾರ್ಥ ವಾಲಿ, ಸುಗ್ರೀವ ಖಾಸಾ ಸಹೋದರರನ್ನು ವೈರಿಗಳಾಗುವಂತೆ ಮಾಡಿತು. ಒಬ್ಬರ ಪ್ರಾಣ ಇನ್ನೊಬ್ಬರು ತೆಗೆದರು.*
ಅಪಾರ್ಥದ ಕಾರಣದಿಂದ ಶ್ರೀರಾಮರಿಗೂ ದ್ವಾಪರ ಯುಗದ ವರೆಗೆ ಕರ್ಮ ಹತ್ತಿತು. ಸುಗ್ರೀವನಿಗೆ ಸಹಾಯ ಮಾಡಲು ವಾಲಿಯನ್ನು ಕೊಂದ ಕಾರಣ ದ್ವಾಪರದಲ್ಲಿ ಬೇಡನ ರೂಪದಲ್ಲಿ ವಾಲಿ ಶ್ರೀಕೃಷ್ಣನ ಅಂತ್ಯಕ್ಕೆ ಕಾರಣನಾದ.
ಈಗಿನ ಕಾಲದ ಸೂಚನೆ ಅಪಾರ್ಥಕ್ಕೆ ಉದಾಹರಣೆಗಳೆಂದರೆ, *ಫೋನ್ ಗಳಿಗೆ ಬರುವ ಲಾಟರಿ ಹಣದ ಸಂದೇಶದ. ಯಾವುದೋ ಹಣದ ಸುಳ್ಳು ಸಂದೇಶಗಳು. ಹನಿಟ್ರ್ಯಾಪ ಸಂದೇಶಗಳು. ಇವುಗಳಿಂದ ಎಷ್ಟೋ ಜನ ಮಾನ ಹಣ ಜೀವವನ್ನು ಕಳೆದುಕೊಂಡಿದ್ದಾರೆ*.
ಸೂಚನೆಗಳ ಅಪಾರ್ಥಗಳು ಎಷ್ಟು ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತವೆ, ಎನ್ನುವುದಕ್ಕೆ ಇವು ಉದಾಹರಣೆ. ಆದ್ದರಿಂದಲೇ ಸ್ಕಂದ ಮಾತಾ ಸೂಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಮಗೆ ಸಂದೇಶ ನೀಡುತ್ತಿದ್ದಾರೆ.
*ಸೂಚನೆ ಸರಿಯಾಗಿ ಅರ್ಥವಾಗಲು ನಮ್ಮ ಪ್ರಯತ್ನವೂ ಬೇಕು, ದೇವರ ಕೃಪೆಯೂ ಬೇಕು*.
ಸೂಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಕೃಪೆಯನ್ನು ನಮ್ಮೆಲ್ಲರ ಮೇಲೆ ಸ್ಕಂದ ಮಾತೆ ಹರಿಸಲಿ ಎಂದು ಪ್ರಾರ್ಥಿಸುತ್ತಾ..
ಎಲ್ಲರಿಗೂ ವಂದನೆಗಳು.
ಇಂತಿ ತಮ್ಮ
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ

Comments
Post a Comment