*"ಇಂದು ನನ್ನ ಕಾರ್ಯಕ್ರಮ ಇದೆ. ದೇವರೇ, ಇವತ್ತು ಮಳೆ ಬಾರದಿರಲಿ ."*


ನಾನು ಆಫೀಸ್ ಹೋಗುತ್ತಿದ್ದೇನೆ. ನಾನು ಆಫೀಸ್ ಮುಟ್ಟುವತನ ಮಳೆ ಬಾರದೇ ಇರಲಿ ದೇವರೇ. 


ಮಳೆ ಬಂದರೆ ನನ್ನ ವ್ಯಾಪಾರ ನಡೆಯೋದಿಲ್ಲ. ಏನು ಮಾಡಲಿ ?


ಮಳೆ ಬಂದರೆ, ರೋಡ್ ಮೇಲೆ ನೀರು ನಿಂತಿರುತ್ತದೆ. ನಡೆಯುವುದಕ್ಕೆ ಕಷ್ಟ. ಕಾಲು ಹೊಲಸು, ಬಟ್ಟೆ ಹೊಲಸು. 


ಇಂದು ನನ್ನ ಕಾರ್ಯಕ್ರಮ ಇದೆ. ಇವತ್ತು ಮಳೆ ಬರಬಾರದು ದೇವರೇ.


ಮೋಡ ಕವಿದ, ಮಬ್ಬು ವಾತಾವರಣದಲ್ಲಿ, ಮನಸ್ಸಿಗೂ ಮಬ್ಬು, ಬೋರ್ ಹೊಡೆಯುತ್ತದೆ. ಮನಸ್ಸೆ ಬರಲ್ಲ. ಮೋಡ ಇಲ್ಲದ ಸ್ವಚ್ಛ ಆಕಾಶ ಚೆನ್ನಾಗಿರುತ್ತದೆ. 


ಇಂದು ಛತ್ರಿ ತಂದಿಲ್ಲ. ಮಳೆ ಬಂದರೆ ಹೇಗೆ ? 


ಮಳೆ ಬಂದರೆ ನನ್ನ ಲಾರಿ ಹಸಿ ಆಗುತ್ತದೆ. ಸಿಮೆಂಟು ತುಂಬುವುದಕ್ಕೆ ಆಗಲ್ಲ. 


ಈ ರೀತಿಯ ಒಂದಲ್ಲ ಒಂದು ಯೋಚನೆ ಇದನ್ನು ಓದುತ್ತಿರುವ ನಾವೆಲ್ಲರೂ ಮಾಡಿಯೇ ಇರುತ್ತೇವೆ.


ಈ ಮೊದಲು ಕೃಷಿ ಪ್ರಧಾನ ಅರ್ಥ ವ್ಯವಸ್ಥೆಯಿತ್ತು. ಕೃಷಿಯಿದ್ದರೆ ಸಂಪತ್ತು ಎನ್ನುವ ಭಾವನೆಯಿತ್ತು. ಆಗ ಎಲ್ಲರೂ ಕೃಷಿಗೆ ಬೇಕಾದಂತಹ ಮಳೆ ಬಯಸುತ್ತಿದ್ದರು. 


ಈಗ ನಮ್ಮ ಅರ್ಥ ವ್ಯವಸ್ಥೆ ನೌಕರಿ, ಉದ್ಯಮ, ಕಾರ್ಖಾನೆ, ಅಂಗಡಿ ಮುಂತಾದವುಗಳ ಮೇಲೆ ಅವಲಂಬಿತವಾಗಿದೆ. ಹಣಕ್ಕಾಗಿ ನೇರವಾಗಿ ಕೃಷಿಯ ಮೇಲೆ ಅವಲಂಬಿತರಾದವರು ಕಡಿಮೆ. 


ಇಂದಿನ ದಿನಗಳಲ್ಲಿ ರೈತ ಮಾತ್ರ ನೇರವಾಗಿ ಕೃಷಿಯ ಮೇಲೆ ಅವಲಂಬಿತನಾಗಿದ್ದಾನೆ. ಆದ್ದರಿಂದ ರೈತ ಮಳೆಯನ್ನು ಎಷ್ಟು ಬಯಸುತ್ತಾನೆ ? ರೈತನನ್ನು ಬಿಟ್ಟು ಬೇರೆಯವರು ಮಳೆಯನ್ನು ಅಷ್ಟೊಂದು ಬಯಸುವುದಿಲ್ಲ. 


ಬಹಳಷ್ಟು ಜನರು ಹೇಳುವುದಿಲ್ಲ. ಆದರೆ ಅವರ ಮಾನಸಿಕ ಸ್ಥಿತಿ *ಉತ್ತಮ ಮಳೆ, ಎಂದರೆ ನಮ್ಮ ಜೀವನ* ಎನ್ನುವ ಭಾವನೆಗೆ ಬದಲಾಗಿ, *"ಮಳೆ ಎಂದರೆ ಅಲರ್ಜಿ"* ಎಂಬ ಭಾವನೆಯಿದೆ. 


ಈ ಭಾವನೆ ಎಲ್ಲಿಯವರೆಗೆ ಇರುತ್ತದೆಯೆಂದರೆ, ಕುಡಿಯುವ ನೀರಿಗೆ ಹಾಹಾಕಾರ ಏಳುವ ವರೆಗೂ ಇರುತ್ತದೆ. ಯಾವಾಗ ಕುಡಿಯಲು ಬಳಸಲು ನೀರು ಸಿಗುವುದಿಲ್ಲವೋ ಆಗ, ಮಳೆ ಬೇಕು ಎಂದು ಬಯಸುತ್ತೇವೆ.


ನಾವು ಚಿಕ್ಕವರಿದ್ದಾಗ ಒಂದೆರಡು ವರ್ಷ ನೀರಿಲ್ಲದೆ ಪರಿಸ್ಥಿತಿ ಹೇಗಿರುತ್ತದೆ ? ಎಂದು ಅನುಭವಿಸಿದ್ದೇವೆ. ಆಗ ನಾವು ನೀರಿಗಾಗಿ ಸೈಕಲ್ ತೆಗೆದುಕೊಂಡು ಅಲೆದಾಡಿದ ನೆನಪು ಈಗಲೂ ಇದೆ. ನೀರಿಗಾಗಿ ನಡೆದ ಜಗಳಗಳು, ಜಗಳ ಮಾಡಿದ ವ್ಯಕ್ತಿಗಳು ಎದುರಿಗೆ ಬಂದಾಗ ಇನ್ನೂ ಆ ನೆನಪುಗಳು ಮತ್ತೆ ಮರುಕಳಿಸುತ್ತವೆ.


ಆದ್ದರಿಂದ ನೀರನ್ನು ಕಾಪಾಡುವುದಕ್ಕಾಗಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. 


ಅದೇ ರೀತಿ ನಮಗೆ ಯಾವುದೇ ತೊಂದರೆಯಾದರೂ ಪರವಾಗಿಲ್ಲ, ನಮಗೆ ಯಾವುದೇ ಅಡ್ಡಿ ಅಡಚಣೆ ಬಂದರೂ ತೊಂದರೆಯಿಲ್ಲ, ಮಳೆ ಬರಲಿ ಎಂದು, ಪೂರ್ಣ ಮನಸ್ಸಿನಿಂದ ನಿರಂತರವಾಗಿ ಬಯಸಬೇಕು. ನಾವೆಲ್ಲರೂ ಉತ್ತಮ ಮಳೆಗೆ ಗೌರವ ಕೊಡಬೇಕು. ಉತ್ತಮ ಮಳೆಗೆ ಮಹತ್ವ ಕೊಡಬೇಕು. ಅದಕ್ಕಾಗಿ ಪ್ರಾರ್ಥಿಸಬೇಕು. .


ನಾವು ಮಳೆ ಬರುತ್ತಿಲ್ಲ, ಮಳೆ ಬರುತ್ತಿಲ್ಲ ಎಷ್ಟೊಂದು ತೊಂದರೆಯಾಗುತ್ತಿದೆ ಎನ್ನುತ್ತಾ ..

* ಕೇವಲ Victim Card ಸಂತ್ರಸ್ತತನ ತೋರಿಸದೆ, 

* ಮಳೆ ಬಂದಿಲ್ಲ ಕೇವಲ ದೂರುವಂತಹ ಕೆಲಸ ಮಾಡದೆ, 

* ಮಳೆಗಾಗಿ ಕೇವಲ ಮಾತಿನ ಕಾಳಜಿ ವ್ಯಕ್ತಪಡಿಸದೆ, 

* ನಮಗೆ ಏನು ಬೇಕು ? ಅದರ ಪ್ರಾಮಾಣಿಕ ಇಚ್ಛೆ ವ್ಯಕ್ತಪಡಿಸಿ ಅದರಂತೆ ಪ್ರಾಮಾಣಿಕವಾಗಿ ನಡೆಯಬೇಕು.


ಕೆಲವು ಜನ ನಾವು ಬಯಸಿದಂತೆ ಆಗುವುದಿದ್ದರೆ, ನಾನು ಇಂದು ಕೋಟ್ಯಾಧಿಪತಿ ಆಗಬೇಕಿತ್ತು. ನಾವು ಬಯಸಿದರೆ ಮಳೆ ಬರುತ್ತದೆಯೇ ? ಎಂದು ಕೇಳುತ್ತಾರೆ. 


ಪ್ರಜಾಪ್ರಭುತ್ವದಲ್ಲಿ ಬಹುಮತ ಎನ್ನುವ ವಿಚಾರ ಹೇಗಿದೆಯೋ ? ಅದೇ ರೀತಿ ವಿಜ್ಞಾನದಲ್ಲಿ Collective Consciousness ಎನ್ನುವ ವಿಚಾರ ಬರುತ್ತದೆ. ಅಂದರೆ ಪ್ರಜ್ಞಾ ಸಮೂಹದ ಇಚ್ಛೆ. 


ಪ್ರಜ್ಞೆಯ ಸಮೂಹ, ಏನನ್ನು ಬಯಸುತ್ತದೆ ? ಅದು ಜಗತ್ತಿನಲ್ಲಿ ಆಗುತ್ತದೆ. 


ನಮ್ಮ collective consciousness ಪ್ರಜ್ಞಾ ಸಮೂಹದ ಕೋರಿಕೆಗೆ ಮಳೆ ಖಂಡಿತಾ ಬರುತ್ತದೆ. ಆದ್ದರಿಂದ ನಮ್ಮ ಪ್ರಜ್ಞೆಯಿಂದ ಮಳೆಯನ್ನು ಬಯಸೋಣ. ಮಳೆಯನ್ನು ಚಿಂತಿಸೋಣ. ಮಳೆಗಾಗಿ ಪ್ರಾರ್ಥಿಸೋಣ.


ಎಲ್ಲರಿಗೂ ವಂದನೆಗಳು


ಇಂತಿ ತಮ್ಮ 


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ 

******"********" "


*

Comments

Popular posts from this blog