*"ನಮ್ಮ ಪಾಲುಗಳನ್ನು ಯಾರು ಹಂಚಿಕೊಳ್ಳುತ್ತಾರೆ ?"*


ನಾವು ಗಳಿಸಿದ ಹಣ, ಸಂಪತ್ತು, ಭೂಮಿಯಲ್ಲಿ ಪಾಲನ್ನು ಎಲ್ಲರೂ ಪಡೆಯಲು ಮುಂದಾಗಬಹುದು.


ಆದರೆ ಅದನ್ನು ಪಾಪದ ಮೂಲಕ ಗಳಿಸಿದರೆ, ಆ ಪಾಪದಲ್ಲಿ ಪಾಲು ಪಡೆದುಕೊಳ್ಳಲು ಯಾರು ಮುಂದೆ ಬರುತ್ತಾರೆ ? 


ಯಾರು ಮುಂದೆ ಬರುವುದಿಲ್ಲ. 


ನಾವು ಮಾಡುವ ಪಾಪ ಕರ್ಮದ ಪಾಲನ್ನು ನಾವೇ ಅನುಭವಿಸಬೇಕಾಗುತ್ತದೆ


ಈ ವಿಷಯ ರತ್ನಾಕರ ಎನ್ನುವ ಬೇಡನಿಗೆ ತಿಳಿದಾಗ, ರತ್ನಾಕರ ಎನ್ನುವ ಕೊಲೆ, ಸುಲಿಗೆ, ದರೋಡೆ ಮಾಡುವ ಬೇಡ, ವಾಲ್ಮೀಕಿ ಎನ್ನುವ ಋಷಿಯಾಗಿ ಪರಿವರ್ತನೆಯಾಗುತ್ತಾನೆ.


ಕಥೆ : ಬಹಳ ಹಿಂದೆ ತೆತ್ರಾಯುಗದಲ್ಲಿ ರತ್ನಾಕರ ಎನ್ನುವ ಬೇಡ ಇರುತ್ತಾನೆ. ಕಾಡಿನಲ್ಲಿ ದಾರಿಹೋಕರನ್ನು ದೋಚಿ ಆತನ ಕುಟುಂಬ ಪೋಷಣೆ ಮಾಡುತ್ತಿರುತ್ತಾನೆ. 


ಒಮ್ಮೆ ಆತನ ದಾರಿಯಲ್ಲಿ ನಾರದ ಮಹರ್ಷಿಗಳು ಬರುತ್ತಾರೆ. ಆಗ ರತ್ನಾಕರ ಎಂದಿನಂತೆ ನಾರದರಿಗೆ, ಪ್ರಾಣ ಭಯ ಉಂಟುಮಾಡಿ ದೋಚಲು ಹೋಗುತ್ತಾನೆ. 


ಆಗ ನಾರದ ಮಹರ್ಷಿ 

1. ನೀನು ಕುಟುಂಬಕ್ಕಾಗಿ ಎಷ್ಟು ದೊಡ್ಡ ಪಾಪದ ಕೆಲಸ ಮಾಡುತ್ತಿದ್ದೀಯಾ ? 

2. ಇದರ ಫಲ ನಿನ್ನ ಕುಟುಂಬದಲ್ಲಿ ಯಾರಾದರೂ ಪಡೆಯುತ್ತಾರೆಯೇ ? ಎಂದು ಕೇಳುತ್ತಾರೆ. 


ಆಗ, ರತ್ನಾಕರ ಹೌದು ನನ್ನ ಕುಟುಂಬದಲ್ಲಿ ನನ್ನ ಹೆಂಡತಿ ಮತ್ತು ಕುಟುಂಬಸ್ಥರು  ನನ್ನ ಪಾಪದ ಪಾಲು ತೆಗೆದುಕೊಳ್ಳುತ್ತಾರೆ, ಎಂದು ಹೇಳುತ್ತಾನೆ. ಆಗ ನಾರದ ಮಹರ್ಷಿಯ ಕೋರಿಕೆಯಂತೆ, ಆತ ಮನೆಗೆ ಹೋಗಿ ತನ್ನ ಕುಟುಂಬದವರಲ್ಲಿ, ತನ್ನ ಪಾಪದ ಪಾಲು ತೆಗೆದುಕೊಳ್ಳುತ್ತಿರಲ್ಲವೇ ? ಎಂದು ಕೇಳುತ್ತಾನೆ. 


ಆಗ ಆತನ ಹೆಂಡತಿ ಮತ್ತು ಕುಟುಂಬದವರು, ನೀನು ನಮ್ಮನ್ನು ಸಾಕುವುದು ನಿನ್ನ ಕರ್ತವ್ಯ, ನಿನ್ನ ಪಾಪದಲ್ಲಿ ನಾವು ಏಕೆ ಪಾಲು ಪಡೆಯಬೇಕು ? ಎಂದು ಪ್ರಶ್ನೆ ಮಾಡುತ್ತಾರೆ.


ಇದರಿಂದ ದುಃಖಿತನಾದ ರತ್ನಾಕರ ತಾನು ಮಾಡಿದ್ದು ಎಲ್ಲವೂ ವ್ಯರ್ಥ ಎಂದು ಭಾವಿಸಿ, ಕುಟುಂಬ ತ್ಯಜಿಸಿ, ನಾರದ ಮುನಿಗಳಿಂದ ರಾಮ ನಾಮದ ದೀಕ್ಷೆ ಪಡೆದು ತಪಸ್ಸು ಮಾಡುತ್ತಾನೆ. ಆತನು ತಪಸ್ಸಿನಲ್ಲಿ ಎಷ್ಟೊಂದು ಮೈಮರೆಯುತ್ತಾನೆಂದರೆ, ಆತನ ದೇಹದ ಸುತ್ತಲೂ ಗೆದ್ದಲುಗಳು ಹುತ್ತವನ್ನು ಕಟ್ಟುತ್ತವೆ. ಹುತ್ತವನ್ನು ಸಂಸ್ಕೃತದಲ್ಲಿ ವಾಲ್ಮೀಕ ಎಂದು ಕರೆಯುವುದರಿಂದ ಅವರ ಹೆಸರು ವಾಲ್ಮೀಕಿ ಋಷಿ ಎಂದಾಗುತ್ತದೆ. 


ತಪಸ್ಸಿನ ಪ್ರಭಾವದಿಂದ ತಮ್ಮ ಎಲ್ಲಾ ಪಾಪಗಳನ್ನು ಕಳೆದುಕೊಂಡು, ಎಲ್ಲರಿಂದಲೂ ಹೊಗಳಲ್ಪಡುವ, ಎಲ್ಲರಿಂದಲೂ ಓದಲ್ಪಡುವ, ಗೌರವಿಸಲ್ಪಡುವ  ರಾಮಾಯಣ ಗ್ರಂಥವನ್ನು, ಅವರು ರಚಿಸುತ್ತಾರೆ. 


ಹುಟ್ಟಿದ್ದು, ಬೇಡ ಜಾತಿಯಲ್ಲಿ,

ಜ್ಞಾನೋದಯವಾದ ನಂತರ ಉತ್ತಮ ಕರ್ಮ ಮಾಡಿದರು.  ಪಂಡಿತರನ್ನು ಮೀರಿಸುವಂತೆ ದೊಡ್ಡ ಋಷಿಯಾದರು.


ನಾವು 

* ಯಾವ ಜಾತಿಯಲ್ಲಿ ಹುಟ್ಟಿದ್ದೇವೆ ಎನ್ನುವುದು ನಮಗೆ ಮುಖ್ಯವಲ್ಲ. 

* ನಾವು ಪಡೆಯುವ ಜ್ಞಾನ ಒಳ್ಳೆಯದೋ ? ಕೆಟ್ಟದ್ದು ? ಅದು ಮುಖ್ಯ. 

* ನಾವು ಮಾಡುವ ಕರ್ಮ, ಒಳ್ಳೆಯದೋ ? ಕೆಟ್ಟದ್ದು ? ಅದು ಮುಖ್ಯ. 


ರತ್ನಾಕರನ ಜೀವನದಿಂದ, ಅವರು ಪಡೆದ ಜ್ಞಾನ ಹಾಗೂ ಜ್ಞಾನದಂತೆ ಮಾಡಿದ ಕರ್ಮದ ಪ್ರಾಧಾನ್ಯತೆ ಎಷ್ಟು ? ಎನ್ನುವುದು ತಿಳಿಯುತ್ತದೆ. 


ನಾವು 

* ತಿಳಿದವರಿಂದ ಉತ್ತಮ ಜ್ಞಾನ ಪಡೆಯೋಣ. 

* ಉತ್ತಮ ಕರ್ಮ ಮಾಡೋಣ. 

* ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ. 


ಎಲ್ಲರಿಗೂ ವಾಲ್ಮೀಕಿ ಜಯಂತಿಯ ಶುಭಾಶಯಗಳು..


ಇಂತಿ ತಮ್ಮ 


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ 

Comments

Popular posts from this blog