ಸ್ವಾತಂತ್ರ್ಯ, ಬಂಧನಗಳಲ್ಲಿ ಉತ್ತಮ ಯಾವುದು?
ಸ್ವಾತಂತ್ರ್ಯ, ಬಂಧನಗಳಲ್ಲಿ ಉತ್ತಮ ಯಾವುದು? ಎನ್ನುವ ಪ್ರಶ್ನೆ ಮಾಡಿದಾಗ ಬಹುತೇಕ ಎಲ್ಲರೂ ಸ್ವಾತಂತ್ರ್ಯವೇ ಉತ್ತಮ ಎಂದು ಹೇಳುತ್ತಾರೆ. ಬಹಳಷ್ಟು ಜನರಿಗೆ ತಮ್ಮ ಮನಸ್ಸಿಗೆ ಬಂದ ಹಾಗೆ ಯೋಚಿಸಲು, ತಮ್ಮ ಮನಸ್ಸಿಗೆ ಬಂದ ಕೆಲಸವನ್ನು ಮಾಡಲು ಬಹಳ ಇಷ್ಟ. ಬೇರೆಯವರು ಕೊಟ್ಟಿದ್ದು ತಿನ್ನುವುದಕ್ಕಿಂತ ತಮಗೆ ಇಷ್ಟಬಂದಂಥ ತಿನಿಸನ್ನು ತಿನ್ನುವುದು ಎಲ್ಲರಿಗೂ ಇಷ್ಟ. ಬೇರೆಯವರು ಹೇಳಿದಂತಹ ಟಿವಿ, ಮೊಬೈಲ್ ಕಾರ್ಯಕ್ರಮವನ್ನು ನೋಡುವದಕ್ಕಿಂತ ತಮಗೆ ಇಷ್ಟ ಬಂದಂತಹ ಕಾರ್ಯಕ್ರಮವನ್ನು ನೋಡುವುದು ಎಲ್ಲರಿಗೂ ಇಷ್ಟ. ಬೇರೆಯವರು ಹೇಳಿದಂತೆ ಕೆಲಸ ಮಾಡುವುದಕ್ಕಿಂತ ತಮಗೆ ಇಷ್ಟಬಂದ ಕೆಲಸ ಮಾಡುವುದು ಎಲ್ಲರಿಗೂ ಇಷ್ಟ. ಈ ರೀತಿಯಾಗಿ ನೋಡಿದಾಗ ಸ್ವಾತಂತ್ರ್ಯ ಎಲ್ಲರಿಗೂ ಇಷ್ಟವಾಗುತ್ತದೆ. ಬೇರೆಯವರು ಆಜ್ಞೆಯಂತೆ ಮಾಡುವುದು ಒಂದು ರೀತಿಯ ಪರತಂತ್ರ, ಅಥವಾ ಬಂಧನ ಎಂದು ಭಾವಿಸುತ್ತೇವೆ. ಹೀಗಾಗಿ ಎಲ್ಲರೂ ಸ್ವಾತಂತ್ರ್ಯವನ್ನು ಉತ್ತಮ ಎಂದು ಭಾವಿಸುತ್ತಾರೆ. ಆದರೆ ಸ್ವಾತಂತ್ರ್ಯ, ಬಂಧನಗಳು ಎರಡು ಬೇರೆ ಬೇರೆ ಪ್ರತ್ಯೇಕ ವಿಷಯಗಳಲ್ಲ. ಇವೆರಡು ಒಂದು ದಾರಕ್ಕೆ ಇರುವ ಎರಡು ತುದಿಗಳಂತೆ ಒಂದಕ್ಕೊಂದು ಅಂಟಿಕೊಂಡಿವೆ. ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಉದಾಹರಣೆಗೆ ಭೂಲೋಕದ ಸ್ವರ್ಗದಂತಿರುವ ಸ್ವಿಟ್ಜರ್ಲೆಂಡ್ (ಅಥವಾ ತಮಗೆ ಇಷ್ಟವಾದ ಇನ್ನಾವುದೋ ಸ್ಥಳವನ್ನು) ಪ್ರವಾಸ ಮಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ, ಎಂದು...