*ವೃತ್ತಿ ಧರ್ಮ* ಜೀವನದಲ್ಲಿ ಎಲ್ಲರೂ ಒಂದೊಂದು ವೃತ್ತಿಗಳನ್ನು ಮಾಡುತ್ತೇವೆ. ನಮ್ಮ ವೃತ್ತಿಗಳನ್ನು ನಾವು ಮಾಡುವುದರಿಂದ ನಮಗೆ ಅದಕ್ಕೆ ಸಂಬಂಧಿಸಿದಂತಹ ಫಲ ಅಥವಾ ವೇತನ ಸಿಗುತ್ತದೆ. ಹೀಗಾಗಿ ನಮ್ಮ ವೃತ್ತಿ ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತದೆ, ಅದಕ್ಕೆ ತಕ್ಕಂತೆ ಇತರ ನಿರೀಕ್ಷೆ ಮಾಡದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ನಾವು ನಮ್ಮ ವೃತ್ತಿ ಧರ್ಮ ಪಾಲಿಸಿದಂತೆ. ಆದರೆ ನಾವು ದಾರಿ ತಪ್ಪುತ್ತಿರುವುದು, ಸಮಾಜ, ದೇಶ ದಾರಿ ತಪ್ಪುತ್ತಿರುವುದು ಇಲ್ಲಿಯೇ. ನಾವು ನಮ್ಮ ಸ್ವಂತ ವೃತ್ತಿ ಮಾಡಲು ಅಡ್ಡಡ್ಡ ನಿರೀಕ್ಷೆಗಳನ್ನು ವೃತ್ತಿಗೆ ಸಂಬಂಧಿಸಿದವರಿಂದ ಇಟ್ಟುಕೊಳ್ಳುತ್ತೇವೆ. ಈ ಕಾರಣದಿಂದಲೇ ಇಂದು ಎಲ್ಲೆಡೆ ಭ್ರಷ್ಟಾಚಾರ, ಲಂಚ, ಅನಾಚಾರಗಳು ತಾಂಡವವಾಡುತ್ತಿದೆ. ಯಾರಿಗೂ ಸರಿಯಾದ ರೀತಿಯಲ್ಲಿ ಸರ್ಕಾರದ ಸೇವೆಗಳಾಗಲಿ, ಇನ್ನಿತರ ಉದ್ದೇಶಗಳ ಸೇವೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ. ಇದರಿಂದ ವ್ಯಕ್ತಿ ತನ್ನ ದೃಷ್ಟಿಯಲ್ಲಿ ಚಿಕ್ಕವನಾಗುತ್ತಾನೆ. ಸಮಾಜ, ದೇಶ, ದೇವರ ದೃಷ್ಟಿಯಲ್ಲಿಯೂ ದೋಷಿಗಳಾಗುತ್ತೇವೆ. ಇದನ್ನು ಹೇಳಲು ಕಾರಣ ಇಂದಿನ ಒಂದು ಘಟನೆ ಒಬ್ಬರ ಜೀವನದ ಭೂತಕಾಲಕ್ಕೆ ಕರೆದುಕೊಂಡುಹೋಯಿತು. ಅದು ಬಹುಶಃ ಇಪ್ಪತ್ತು ವರ್ಷಗಳ ಹಿಂದಿನ ವಿಷಯ. ಆತ ಡಿಗ್ರಿ ಓದುತ್ತಿದ್ದ ಸಮಯ. ದೇಹದ ಅನಾರೋಗ್ಯದ ಸಮಸ್ಯೆ ಆತನನ್ನು ಕಾಡುತ್ತಿತ್ತು. ಆಗ ಒಂದು ನಡು ರಾತ್ರಿ ಒಮ್ಮಿಂದೊಮ್ಮೆಲೆ ಸಮಸ್ಯೆ ಉಲ್ಬಣವಾಯಿತು. ಆ ಕುಟುಂಬದವರೆಲ್ಲರೂ ಗಾಬರಿಯಾದರು....