ಸ್ವಾತಂತ್ರ್ಯ, ಬಂಧನಗಳಲ್ಲಿ ಉತ್ತಮ ಯಾವುದು?



ಸ್ವಾತಂತ್ರ್ಯ, ಬಂಧನಗಳಲ್ಲಿ ಉತ್ತಮ ಯಾವುದು? 

ಎನ್ನುವ ಪ್ರಶ್ನೆ ಮಾಡಿದಾಗ ಬಹುತೇಕ ಎಲ್ಲರೂ ಸ್ವಾತಂತ್ರ್ಯವೇ ಉತ್ತಮ ಎಂದು ಹೇಳುತ್ತಾರೆ.


ಬಹಳಷ್ಟು ಜನರಿಗೆ  ತಮ್ಮ ಮನಸ್ಸಿಗೆ ಬಂದ ಹಾಗೆ ಯೋಚಿಸಲು, ತಮ್ಮ ಮನಸ್ಸಿಗೆ ಬಂದ ಕೆಲಸವನ್ನು ಮಾಡಲು ಬಹಳ ಇಷ್ಟ‌.


ಬೇರೆಯವರು ಕೊಟ್ಟಿದ್ದು ತಿನ್ನುವುದಕ್ಕಿಂತ ತಮಗೆ ಇಷ್ಟಬಂದಂಥ ತಿನಿಸನ್ನು ತಿನ್ನುವುದು ಎಲ್ಲರಿಗೂ ಇಷ್ಟ.


ಬೇರೆಯವರು ಹೇಳಿದಂತಹ ಟಿವಿ, ಮೊಬೈಲ್ ಕಾರ್ಯಕ್ರಮವನ್ನು ನೋಡುವದಕ್ಕಿಂತ ತಮಗೆ ಇಷ್ಟ ಬಂದಂತಹ ಕಾರ್ಯಕ್ರಮವನ್ನು ನೋಡುವುದು ಎಲ್ಲರಿಗೂ ಇಷ್ಟ. ಬೇರೆಯವರು ಹೇಳಿದಂತೆ ಕೆಲಸ ಮಾಡುವುದಕ್ಕಿಂತ ತಮಗೆ ಇಷ್ಟಬಂದ ಕೆಲಸ ಮಾಡುವುದು ಎಲ್ಲರಿಗೂ ಇಷ್ಟ. 


ಈ ರೀತಿಯಾಗಿ ನೋಡಿದಾಗ ಸ್ವಾತಂತ್ರ್ಯ ಎಲ್ಲರಿಗೂ ಇಷ್ಟವಾಗುತ್ತದೆ. ಬೇರೆಯವರು ಆಜ್ಞೆಯಂತೆ ಮಾಡುವುದು  ಒಂದು ರೀತಿಯ ಪರತಂತ್ರ, ಅಥವಾ ಬಂಧನ ಎಂದು ಭಾವಿಸುತ್ತೇವೆ. 


ಹೀಗಾಗಿ ಎಲ್ಲರೂ ಸ್ವಾತಂತ್ರ್ಯವನ್ನು ಉತ್ತಮ ಎಂದು ಭಾವಿಸುತ್ತಾರೆ.


ಆದರೆ ಸ್ವಾತಂತ್ರ್ಯ, ಬಂಧನಗಳು ಎರಡು ಬೇರೆ ಬೇರೆ ಪ್ರತ್ಯೇಕ ವಿಷಯಗಳಲ್ಲ. ಇವೆರಡು ಒಂದು ದಾರಕ್ಕೆ ಇರುವ ಎರಡು ತುದಿಗಳಂತೆ ಒಂದಕ್ಕೊಂದು ಅಂಟಿಕೊಂಡಿವೆ. ಒಂದನ್ನು ಬಿಟ್ಟು ಇನ್ನೊಂದು ಇಲ್ಲ.


ಉದಾಹರಣೆಗೆ  ಭೂಲೋಕದ ಸ್ವರ್ಗದಂತಿರುವ ಸ್ವಿಟ್ಜರ್ಲೆಂಡ್ (ಅಥವಾ ತಮಗೆ ಇಷ್ಟವಾದ ಇನ್ನಾವುದೋ ಸ್ಥಳವನ್ನು) ಪ್ರವಾಸ ಮಾಡುವುದು  ಮನಸ್ಸಿಗೆ ಖುಷಿ ನೀಡುತ್ತದೆ, ಎಂದು ಅದರ ಬಗ್ಗೆ  ಆಸೆ ಪಡುವುದು ಮತ್ತು ಆ ದಿಸೆಯಲ್ಲಿ ಯೋಚಿಸುವುದು ನಮ್ಮ ಸ್ವಾತಂತ್ರವೇ ಆಗಿರಬಹುದು. 


ಆದರೆ ಈ ನಮ್ಮ ಸ್ವತಂತ್ರ ಆಸೆ ನಿಜವಾಗಬೇಕಾದರೆ, ಸತ್ಯ ವಾಗಬೇಕಾದರೆ ಅದಕ್ಕಾಗಿ ನಾವು ಬಂಧನದಲ್ಲಿರಬೇಕಾಗುತ್ತದೆ.


ಅಂದರೆ ನಮಗೆ ಇಷ್ಟವಾದ ಸ್ಥಳದ ಪ್ರವಾಸಕ್ಕೆ ಹೋಗುವುದಕ್ಕಾಗಿ ನಾವು ಹಣ ಸಂಪಾದನೆ ಮಾಡಬೇಕಾಗುತ್ತದೆ. 


ಹಣ ಸಂಪಾದನೆಗಾಗಿ ಇನ್ನೊಬ್ಬರ ಕೆಳಗೆ ಇಷ್ಟವಿಲ್ಲದಿದ್ದರೂ ಕಷ್ಟಪಟ್ಟು ಅವರು ಹೇಳಿದಂತೆ ಶ್ರಮಪಡಬೇಕಾಗುತ್ತದೆ. 


ಇನ್ನೊಬ್ಬರು ಆಜ್ಞೆಯಂತೆ, ಮನಸ್ಸಿಗೆ ಹಿಡಿಸದ ಕಷ್ಟದ ಕೆಲಸಗಳನ್ನು ಮಾಡುವುದು ಒಂದು ರೀತಿಯ ಬಂಧನವೇ ಆಗಿದೆ.


 ಅದೇ ರೀತಿ ಒಬ್ಬ ವಿದ್ಯಾರ್ಥಿ ತನ್ನ ಇಷ್ಟ ಬಂದಂತಹ ಮೆಡಿಕಲ್ ಇಂಜಿನಿಯರಿಂಗ್ ಕೋರ್ಸ್ ಅಥವಾ ಇಷ್ಟವಾದ ಕೆಲಸ ನೌಕರಿ ಆಯ್ಕೆ ಮಾಡುವುದು ಆತನ ಸ್ವಾತಂತ್ರ್ಯ.


ತಮಗೆ ಇಷ್ಟವಾಗಿರುವದನ್ನು ಆಯ್ಕೆ ಮಾಡುವ ಮೊದಲು, ಅವರು ಏಕಾಗ್ರತೆಯಿಂದ ಅಧ್ಯಯನ ಮಾಡಬೇಕಾಗುತ್ತದೆ ಮನಸ್ಸನ್ನು ಏಕಾಗ್ರತೆಯಿಂದ ಒಂದೇ ಕಡೆಗೆ ನಿಲ್ಲಿಸಬೇಕಾಗುತ್ತದೆ.


ಈ ರೀತಿ ಮನಸ್ಸನ್ನು ಒಂದೇ ಕಡೆ ನಿಲ್ಲಿಸುವ ಪ್ರಕ್ರಿಯೆ (ಏಕಾಗ್ರತೆ) ಸಹ ಒಂದು ರೀತಿಯ ಬಂಧನವಾಗಿದೆ. 


ಒಂದು ವೇಳೆ ಏಕಾಗ್ರತೆಯಿಂದ ಅಧ್ಯಯನ ಮಾಡದೆ ಮನಸ್ಸನ್ನು ಇಷ್ಟಬಂದಂತೆ (ಚಂಚಲವಾಗಿ) ಚಲಿಸಲು ಬಿಟ್ಟಲ್ಲಿ, ಅಥವಾ ಸ್ವತಂತ್ರವಾಗಿ ತನ್ನ ಇಚ್ಛೆಯಂತೆ ಅಲೆದಾಡಲು ಬಿಟ್ಟಲ್ಲಿ ಭವಿಷ್ಯದಲ್ಲಿ ನಮ್ಮ ಸ್ವಾತಂತ್ರ್ಯ ಯಾವುದಿದೆಯೋ, ಆ ಸ್ವತಂತ್ರಕ್ಕೆ ಅಡಚಣೆ ಉಂಟಾಗುತ್ತದೆ.


 ಇಷ್ಟವಿಲ್ಲದಿದ್ದರೂ ನಾವು ಇನ್ನೊಂದು ಕೋರ್ಸ್ ಮಾಡಬೇಕಾಗುತ್ತದೆ, ಅಥವಾ ಇಷ್ಟವಿಲ್ಲದಿದ್ದರೂ, ಇನ್ನೊಂದು ಕಷ್ಟದ, ಕಡಿಮೆ ವೇತನದ ಕೆಲಸ ಮಾಡಬೇಕಾಗುತ್ತದೆ.


 ಇಷ್ಟವಿಲ್ಲದಿದ್ದರೂ ಯಾವುದನ್ನು ಮಾಡುತ್ತೇವೆಯೋ ಅದು ಬಂಧನವೇ ಆಗಿದೆ.


ಹೀಗೆ ಸ್ವಾತಂತ್ರ್ಯ, ಬಂಧನಗಳು ಒಂದಕ್ಕೊಂದು ಅಂಟಿಕೊಂಡಿವೆ. ಒಂದು ಇನ್ನೊಂದನ್ನು ಬಿಟ್ಟು ಇಲ್ಲ. ಎರಡು ಜೊತೆ ಜೊತೆಯಾಗಿಯೇ ಇವೆ.


ಕಷ್ಟ ಸುಖ, ಹುಟ್ಟು ಸಾವು ಎನ್ನುವ ಜೀವನದ ಚಕ್ರಗಳು ಸಹ ಒಂದು ಬಂಧನಗಳಾಗಿವೆ. ನಮಗೆ ಇಷ್ಟವಿಲ್ಲದಿದ್ದರೂ ಇವುಗಳನ್ನು ಅನುಭವಿಸಲೇಬೇಕು. ಈ ಚಕ್ರಗಳಿಂದ

ಬಿಡುಗಡೆ ಎನ್ನುವ ಸ್ವಾತಂತ್ರ್ಯ ಪಡೆಯಬೇಕಾದರೆ ನಮ್ಮ ಮನಸ್ಸನ್ನು ವರ್ತಮಾನದಲ್ಲಿ ವ್ರತ, ಜಪ, ತಪ, ಏಕಾಗ್ರತೆಯ ಎನ್ನುವ ಬಂಧನದಲ್ಲಿ ಇಡಬೇಕಾಗುತ್ತದೆ.


ಒಂದು ವೇಳೆ ವರ್ತಮಾನದಲ್ಲಿ ನಮ್ಮನ್ನು, ನಮ್ಮ ಮನಸ್ಸನ್ನು ಈ ರೀತಿಯ ಬಂಧನದಲ್ಲಿ ಇಡದೇ ಸ್ವಾತಂತ್ರ್ಯವಾಗಿ ಬಿಟ್ಟಲ್ಲಿ, ಭವಿಷ್ಯದಲ್ಲಿ ಕಷ್ಟ, ನೋವು ಎನ್ನುವ ಬಂಧನದಲ್ಲಿ ಸಿಲುಕಬೇಕಾಗುತ್ತದೆ.


ಹೀಗಾಗಿ ಸ್ವಾತಂತ್ರ್ಯ ಬಂಧನಗಳಲ್ಲಿ ಯಾವುದು ಉತ್ತಮ ಎನ್ನುವುದರ ಬಗ್ಗೆ ಚಿಂತಿಸಿದಾಗ ನಮಗೆ ತಿಳಿಯುವ ವಿಚಾರವೆಂದರೆ ,


 ಯಾವ ಸ್ವಾತಂತ್ರ್ಯದಿಂದ ಭವಿಷ್ಯದಲ್ಲಿ ಬಂಧನಕ್ಕೆ ಸಿಲುಕಿಕೊಳ್ಳುತ್ತೇವೆಯೋ, ಅಂತಹ ಸ್ವಾತಂತ್ರ್ಯ ಕ್ಕಿಂತಲೂ  "ಬಂಧನವೇ ಉತ್ತಮ".


ಯಾವ ಬಂಧನದಿಂದ ನಾವು ಭವಿಷ್ಯತ್ತಿನಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಳ್ಳುತ್ತೇವೆ ಅಂತಹ "ಬಂಧನ" ಸ್ವಾತಂತ್ರ್ಯಕ್ಕಿಂತಲೂ ಉತ್ತಮವಾದದ್ದು.


ಎಲ್ಲರಿಗೂ ಸ್ವಾತಂತ್ರ್ಯ ಪ್ರಿಯವಾದದ್ದು. ಆದರೆ ಸ್ವಾತಂತ್ರ್ಯ ಪುಕ್ಕಟೆಯಾಗಿ ಸಿಗುವುದಿಲ್ಲ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನದ 27 ವರ್ಷಗಳನ್ನು  ಬಂಧನದಲ್ಲಿ ಸವೆಸಿದರು. 


ಇದೇ ರೀತಿ ಭಾರತದ ಅನೇಕ ಋಷಿ, ಮುನಿಗಳ ಜೀವನವನ್ನು ನೋಡಿದಾಗ ಅನೇಕ ವರ್ಷಗಳನ್ನು ತಪಸ್ಸು ಎನ್ನುವ ಬಂಧನದಲ್ಲಿ ಕಳೆದಿದ್ದಾರೆ. ಆಗ ಸ್ವಾತಂತ್ರ್ಯ ಎನ್ನುವ ಶ್ರೇಷ್ಠ ಸಿದ್ಧಿಗಳನ್ನು ಪಡೆದಿದ್ದಾರೆ. ಕಟ್ಟಕಡೆಗೆ ಮುಕ್ತಿ ಎನ್ನುವ ಸ್ವಾತಂತ್ರ್ಯವನ್ನು ಪಡೆದಿದ್ದಾರೆ.


ಹೀಗಾಗಿ ನಮ್ಮ ಜೀವನ ಶ್ರೇಷ್ಠ ಉನ್ನತಿಯನ್ನು ಹೊಂದುವಂತಾಗಲು ನಮ್ಮ ಮನಸ್ಸನ್ನು ಚಂಚಲತೆ ಎನ್ನುವ ಸ್ವಚ್ಛಂದ ಸ್ವಾತಂತ್ರ್ಯದಿಂದ ದೂರಗೊಳಿಸಿ, ಏಕಾಗ್ರತೆ ಎನ್ನುವ ಬಂಧನದಲ್ಲಿ ನಿಲ್ಲಿಸೋಣ. ನಮ್ಮ ಭವಿಷ್ಯವನ್ನು ಉಜ್ವಲಗೋಳಿಸೋಣ.


ಓಂ ನಮಃ ಶಿವಾಯ


Comments

Popular posts from this blog

ಅಂಧ ಹೇಳವರು