*ಪ್ರಯಾಣದ ಪೂರ್ವ ತಯಾರಿ.* ನಾವು ರೈಲಿನ ಎಸಿ ಕೋಚ ನಲ್ಲಿ ದೂರದ ಊರಿಗೆ ಪ್ರಯಾಣ ಮಾಡುವಾಗ, ರೈಲಿನಲ್ಲಿಯೇ ಊಟ ಮಾಡುತ್ತೇವೆ, ಮಲಗುತ್ತೇವೆ, ಶೌಚ ಕ್ರಿಯೆ ಮಾಡುತ್ತೇವೆ. ಕಿಟಕಿಯಿಂದ ಪ್ರಕೃತಿ ಸೌಂದರ್ಯವನ್ನು ನೋಡಿ ಖುಷಿ ಪಡುತ್ತೇವೆ. ಹಾಗೆಯೇ ಜೊತೆಯಲ್ಲಿರುವವರ ಜೊತೆ ಮಾತಾಡುತ್ತೇವೆ. ನಾವು ಬೇರೆಯವರೊಂದಿಗೆ ಶಾಶ್ವತ ಸಂಬಂಧಿಗಳಂತೆ ವರ್ತಿಸುತ್ತಿದ್ದರೂ ರೈಲಿನಲ್ಲಿ ನಾವು ಬಹಳ ದಿನ ಇರುವುದಿಲ್ಲ ಎನ್ನುವ ಒಂದು ಯೋಚನೆಯಂತು ಖಚಿತವಾಗಿ ನಮ್ಮ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಇದಕ್ಕಾಗಿಯೇ ನಾವು ಈ ಮೊದಲೇ ಈ ಪ್ರಯಾಣದ ನಂತರ ಯಾವ ಸುಂದರ ಸ್ಥಳಕ್ಕೆ ಹೋಗಿ ಖುಷಿ, ಸಂತೋಷ ಅನುಭವಿಸಬೇಕು, ಎನ್ನುವ ಯೋಜನೆ ರೂಪಿಸಿರುತ್ತೇವೆ. ಅದಕ್ಕಾಗಿ ಹಣ ಸಂಗ್ರಹಿಸಿರುತ್ತೇವೆ. ಈ ಪೂರ್ವ ತಯಾರಿಯಿಂದ ಯಾವುದೇ ಭಯವಿಲ್ಲದೆ, ಚಿಂತೆಯಿಲ್ಲದೆ ರೈಲಿನಿಂದ ಇಳಿದು ಮುಂದೆ ಸಾಗುತ್ತೇವೆ. ರೈಲಿನ ರೀತಿ ನಾವು ಪ್ರತಿನಿತ್ಯ ಸೂರ್ಯ ದೇವರ ಸುತ್ತಲೂ ಸೌರಮಂಡಲದ ಪ್ರಯಾಣವನ್ನು, ಭೂಮಿ ಎನ್ನುವ ವಾಹನದಲ್ಲಿ ಕುಳಿತು ಮಾಡುತ್ತಿದ್ದೇವೆ. ಇದು ಅನೇಕರ ಅನುಭವಕ್ಕೆ ಬಾರದೆ ಇರಬಹುದು. ಆದರೆ ನಾವು ಸೌರಮಂಡಲದ ಪ್ರಯಾಣ ಮಾಡುತ್ತಿರುವುದು ಸತ್ಯ. ಈ ಪ್ರಯಾಣದಲ್ಲಿ ಒಮ್ಮೆ ಸೂರ್ಯ ದೇವರ ಸ್ವಲ್ಪ ಹತ್ತಿರಕ್ಕೆ ಹೋಗುತ್ತೇವೆ, ಆಗ ಬಹಳ ಬಿಸಿಯ ಅನುಭವವಾಗುತ್ತದೆ (ಬೇಸಿಗೆ ಕಾಲ). ಇನ್ನೊಂದು ಬಾರಿ ಸೂರ್ಯ ದೇವರ ಸ್ವಲ್ಪ ದೂರಕ್ಕೆ ಹೋಗುತ್ತ...