*ಶಂಕರಾಚಾರ್ಯರು ಸರಿಯೇ ?ಕನಕದಾಸರು ಸರಿಯೇ?*


ಕನಕದಾಸರು ಇದದ್ದು ಹದಿನೈದನೇ ಶತಮಾನದಲ್ಲಿ. ಇವರು ಕುರುಬ ಜಾತಿಯಲ್ಲಿ ಜನಿಸಿದರು ಸಹ ದಾಸ ಶ್ರೇಷ್ಠರಾದವರು. ದಾಸ ಭಾವದಿಂದ ಶ್ರೀಕೃಷ್ಣನನ್ನೆ ಒಲಿಸಿಕೊಂಡವರು. ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ದೇಶ ಪರ್ಯಟನೆ ಮಾಡಿ ಹಿಂದೂ ಧರ್ಮ ಪುನರುತ್ಥಾನ ಮಾಡಿದವರು. 

ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಸಂದೇಶಗಳು ಜಿಜ್ಞಾಸುಗಳಲ್ಲಿ ವೈರುಧ್ಯವನ್ನು ಉಂಟುಮಾಡುತ್ತವೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ವಿಭಿನ್ನ ಸಂದೇಶ ಬಹಳಷ್ಟು ಗೊಂದಲವುಂಟು ಮಾಡುತ್ತಿವೆ. 

ಆದ್ದರಿಂದ ಶಂಕರಾಚಾರ್ಯರು ಸರಿಯೇ ? ಕನಕದಾಸರು ಸರಿಯೇ? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿವೆ. 

ಒಮ್ಮೆ ಕನಕದಾಸರ ಗುರುಗಳು, ಶಿಷ್ಯರನ್ನು ಉದ್ದೇಶಿಸಿ ವೈಕುಂಠಕ್ಕೆ ಯಾರ್ಯಾರು ಹೋಗುವಿರಿ? ಎಂದು ಪ್ರಶ್ನೆ ಮಾಡುತ್ತಾರೆ. ಆಗ ಎಲ್ಲಾ ಶಿಷ್ಯರು ವೈಕುಂಠ ಎಂದರೆ ಮುಕ್ತಿ ಸ್ಥಳ, ಅಂತಹ ಅತ್ಯುನ್ನತ ಸ್ಥಳಕ್ಕೆ ಹೋಗುವ ಯೋಗ್ಯತೆ ನನ್ನಲಿಲ್ಲ ಎಂದು ಒಬ್ಬೊಬ್ಬರಾಗಿ, ನಾನು ಹೋಗುವುದಿಲ್ಲ, ನಾನು ಹೋಗುವುದಿಲ್ಲ ಎನ್ನುತ್ತಾರೆ. 

ಅದೇ ಪ್ರಶ್ನೆಯನ್ನು ಕನಕದಾಸರಿಗೆ ಕೇಳಿದಾಗ, ಕನಕದಾಸರು ನಾನು ಹೋದರೆ ಹೋಗುತ್ತೇನೆ ಎಂದು ಹೇಳುತ್ತಾರೆ. ಅದನ್ನು ಕೇಳಿದ ಎಲ್ಲಾ ಶಿಷ್ಯರು ದುರಹಂಕಾರಿ ಎಂದು ಕನಕದಾಸರನ್ನು ತೆಗಳುತ್ತಾರೆ. ಆಗ ಗುರುಗಳು ಪೂರ್ಣವಾಗಿ ಅರಿಯದೆ ಮಾತನಾಡಬೇಡಿ ಎಂದು ಹೇಳಿ. ಕನಕದಾಸರಿಗೆ ಇದರ ಅರ್ಥ ಏನೆಂದು ಕೇಳುತ್ತಾರೆ. 

ಆಗ ಕನಕದಾಸರು ನನ್ನಲ್ಲಿರುವ *ನಾನು* ಎನ್ನುವ ಅಹಂಕಾರ ನನ್ನಿಂದ ದೂರವಾದರೆ, ನಾನು ಮುಕ್ತಿ ಕ್ಷೇತ್ರ ವೈಕುಂಠಕ್ಕೆ ಹೋಗುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಗುರುಗಳು ಕನಕದಾಸರನ್ನು ಸಂತೋಷದಿಂದ ಹರಸುತ್ತಾರೆ.

ದೇವರನ್ನು ಪಡೆಯಲು, ಮುಕ್ತಿಯನ್ನು ಹೊಂದಲು ನಮ್ಮೆಲ್ಲರಲ್ಲಿರುವ ಮುಖ್ಯ ತೊಡಕೆಂದರೆ ಅಹಂಕಾರ. ಈ ಅಹಂಕಾರವನ್ನು ನಾಶ ಮಾಡಿಕೊಂಡಾಗ ಮಾತ್ರ ನಾವು ದೇವರನ್ನು ಪಡೆಯಲು ಸಾಧ್ಯ. ಹೀಗಾಗಿ ನಾನು ಎನ್ನುವ ಅಹಂಕಾರವನ್ನು ಕಳೆದುಕೊಳ್ಳಬೇಕು ಎನ್ನುವ ಸಂದೇಶವನ್ನು ಕನಕದಾಸರು ನೀಡುತ್ತಾರೆ.

ಜ್ಞಾನವನ್ನು ತಿಳಿದುಕೊಳ್ಳುವ ಆಸಕ್ತಿಯಿರುವವರಿಗೆ ಗೊಂದಲವಾಗುತ್ತಿರುವುದು ಇಲ್ಲಿಯೇ. ಒಂದು ಕಡೆ ಜೀವನದ ಪರಮ ಲಕ್ಷ್ಯ ಸಾಧಿಸಲು ಕನಕದಾಸರು ಅಹಂಕಾರ ಕಳೆದುಕೊಳ್ಳಬೇಕು ಎಂದು ಹೇಳಿದರೆ, ಇನ್ನೊಂದು ಕಡೆ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದು ಹೇಳುತ್ತಾರೆ. (ಅಹಂ ಬ್ರಹ್ಮಾಸ್ಮಿ ಮೂಲತಃ ಉಪನಿಷತ್ತಿನ ವಾಕ್ಯ.)

ಹೀಗಾಗಿ ಜೀವನದಲ್ಲಿ ಯಾರ ಸಂದೇಶವನ್ನು ಪಾಲಿಸಬೇಕು ? ಯಾರ ಹೇಳಿಕೆ ಸರಿ, ಯಾವುದು ತಪ್ಪು ಎನ್ನುವ ಗೊಂದಲ ಜನಸಾಮಾನ್ಯರಲ್ಲಿ ಉಂಟಾಗುತ್ತದೆ.

ಇದಕ್ಕೆ ಕುತೂಹಲ ಮೂಡಿಸುವ ಉತ್ತರವೆಂದರೆ ಕನಕದಾಸರು ತಪ್ಪಲ್ಲ. ಶಂಕರರು ತಪ್ಪಲ್ಲ. ಇಬ್ಬರು ಸರಿಯಾದುದನ್ನೆ ಹೇಳಿದ್ದಾರೆ. ಕನಕದಾಸರು ಅಹಂಕಾರ ಕಳೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದೇ ರೀತಿ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದಿದ್ದಾರೆ.

*ಶಂಕರರು ಹೇಳಿದ್ದು ಯಾವ ರೀತಿ ಸರಿ ಎನ್ನುವುದನ್ನು ನೋಡೋಣ. ಶಂಕರರು ಹೇಳಿದ್ದು "ಅಹಂ ಬ್ರಹ್ಮಾಸ್ಮಿ" ಎಂದು.
ಇಲ್ಲಿ ಅಹಂ ಮತ್ತು ಅಹಂಕಾರ ಈ ಎರಡು ಪದಗಳು ಒಂದೇ ರೀತಿಯಾಗಿ ಕಂಡರೂ, ಈ ಎರಡು ಪದಗಳ ನಡುವೆ ಭೂಮಿ ಆಕಾಶದಷ್ಟು ಅಂತರವಿದೆ. ಅಹಂಕಾರ ಎನ್ನುವ ಪದದಲ್ಲಿ "ಅಹಂ" ಜೊತೆಗೆ "ಆಕಾರ" ಎನ್ನುವ ಪದ ಜೊತೆಗೂಡಿದೆ*. 

ನಮ್ಮೆಲ್ಲರಿಗೂ ನಾನು ಶ್ರೇಷ್ಠ ಅವರು ಕನಿಷ್ಟ, ಎನ್ನುವ ಭಾವ ಬರಲು ಮುಖ್ಯ ಕಾರಣ *ನಮ್ಮನ್ನು ನಾವು ಆಕಾರಗಳೊಂದಿಗೆ ಗುರುತಿಸಿಕೊಳ್ಳುತ್ತಿರುವುದು. ಅಂದರೆ ನಮ್ಮನ್ನು ನಾವು ದೇಹ ಎನ್ನುವ ಆಕಾರದೊಂದಿಗೆ ಗುರುತಿಸಿಕೊಂಡಿದ್ದೇವೆ. ಈ ಆಕಾರವೇ ನಮ್ಮ ಎಲ್ಲಾ ರೀತಿಯ ಅಹಂಕಾರಕ್ಕೆ ಮೂಲ ಕಾರಣ*. 

ನಾವು ಮೂಲತಃ ದೇಹವಲ್ಲ. ಆದರೂ ಬದಲಾಗುವ ದೇಹದ ರೂಪ, ಆಕಾರ ಗಾತ್ರ, ಬುದ್ದಿ, ಹಾಗೂ ದೇಹದ ಸಂಬಂಧಗಳೋಂದಿಗೆ ಗುರುತಿಸಿಕೊಳ್ಳುವ ಕಾರಣ ನಮ್ಮಲ್ಲಿ ನಾನು ಗುಣದಿಂದ ಶ್ರೇಷ್ಠ, ನಾನು ದೇಹದ ಯಾವುದೋ ಕೌಶಲ್ಯದಿಂದ ಶ್ರೇಷ್ಠ, ಬುದ್ದಿಯ ಕೌಶಲ್ಯದಿಂದ ಶ್ರೇಷ್ಠ, ದೇಹದ ರೂಪದಿಂದ ಶ್ರೇಷ್ಠ, ಬುದ್ದಿಯ ಜ್ಞಾನದಿಂದ ಶ್ರೇಷ್ಠ, ಈ ದೇಹದ ಸಂಬಂಧಗಳಿಂದ ನಾನು ಶ್ರೇಷ್ಠ. ಇನ್ನಿತರ ಅನೇಕ ಶ್ರೇಷ್ಠ ಎನ್ನುವ ಭಾವನೆಗಳು ಬರುತ್ತವೆ. (ಅಥವಾ ನಾನು ಕನಿಷ್ಟ ಎನ್ನುವ ಭಾವ ಬರುತ್ತದೆ.) ಇದು ನಾವು ಬ್ರಹ್ಮನೊಂದಿಗೆ ಒಂದಾಗಲು ತಡೆಯುತ್ತಿದೆ.

ಆದ್ದರಿಂದ ಎಲ್ಲಿಯವರೆಗೆ ನಮ್ಮ ಅಹಂ ಗೆ ಅನೇಕ ಆಕಾರಗಳು ಇರುತ್ತವೆಯೋ ಹಾಗೂ ಎಲ್ಲಿವರೆಗೆ ನಮ್ಮ ಅಹಂ ನ್ನು ಅನೇಕ ಆಕಾರಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ, ಅಲ್ಲಿವರೆಗೆ ನಮ್ಮ ಅಹಂ, ಬ್ರಹ್ಮ ಆಗುವುದಕ್ಕೆ ಸಾಧ್ಯವೇ ಇಲ್ಲ. 

ಯಾವಾಗ ನಮ್ಮ ಅಹಂ ಎಲ್ಲಾ ಆಕಾರಗಳನ್ನು ಕಳೆದುಕೊಳ್ಳುತ್ತದೆಯೋ, ಕೇವಲ ಆಕಾರ ರಹಿತ ಅಹಂ ಉಳಿಯುತ್ತದೆಯೋ, ಆಗ ಮಾತ್ರ ಅಹಂ ಬ್ರಹ್ಮ ಆಗುವುದಕ್ಕೆ ಸಾಧ್ಯ.

ಅಂದರೆ ಯಾವಾಗ ನಮ್ಮ ತಿಳುವಳಿಕೆಯಲ್ಲಿ ಅಥವಾ ಪ್ರಜ್ಞೆಯಲ್ಲಿ ನನಗೆ ಈ ರೀತಿಯ ಗುಣ ಆಕಾರ ಇದೆ ಎನ್ನುವ ಗುರುತು ಇರುತ್ತದೆಯೋ ಅಲ್ಲಿವರೆಗೆ ನಾವು ಬ್ರಹ್ಮ ಪದವಿ ಮುಟ್ಟುವುದು ಸಾಧ್ಯವಿಲ್ಲ. 

ಆದ್ದರಿಂದ ಶಂಕರಾಚಾರ್ಯ ಹಾಗೂ ಕನಕದಾಸರು ಹೇಳಿರುವುದರಲ್ಲಿ ಯಾವುದೇ ಭಿನ್ನತೆ ಇಲ್ಲ. ಈ ರೀತಿಯಾಗಿ ಇಬ್ಬರು ಸರಿಯೇ ಆಗಿದ್ದಾರೆ. 

ಈ ಲೇಖನದ ಉದ್ದೇಶವೆಂದರೆ, ನಾವೆಲ್ಲರೂ ದೇಹ ಎನ್ನುವ ಆಕಾರ ಪಡೆಯುವ ಮುಂಚೆ ಮೂಲತಃ ಬ್ರಹ್ಮವೇ ಆಗಿದ್ದೇವು. ಕಲಿಯುಗದ ಅಂತ್ಯಕಾಲದಲ್ಲಿ ಪುನಃ ನಾವು ಬ್ರಹ್ಮವೇ ಆಗುವ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಅದಕ್ಕೆ ಪೂರ್ವಭಾವಿಯಾಗಿ ಈಗಿನಿಂದಲೇ ನಾವು ನಮ್ಮನ್ನು ದೇಹದಿಂದ ಗುರುತಿಸಿಕೊಳ್ಳದೆ, ಪ್ರಜ್ಞೆ, ಆತ್ಮದೊಂದಿಗೆ ಗುರುತಿಸಿಕೊಳ್ಳಬೇಕಾಗಿದೆ. 

ನಮ್ಮನ್ನು ಆತ್ಮ, ಪ್ರಜ್ಞೆಯೊಂದಿಗೆ ಗುರುತಿಸಿಕೊಳ್ಳುವ ಈ ಪ್ರಯತ್ನ ಆರಂಭಿಸಿದ ಕೂಡಲೇ, ನಾವು ಆತ್ಮ, ಪ್ರಜ್ಞೆ ಎನ್ನುವ ತಿಳುವಳಿಕೆ ಮನಸ್ಸಿನಲ್ಲಿ ದೃಢವಾಗಿ ನಿಲ್ಲುವುದಿಲ್ಲ. ಪುನಃ ನಮಗೆ ಗೊತ್ತಿಲ್ಲದೆ ನಾನು ದೇಹ ಎನ್ನುವ ಭಾವ ಮತ್ತೆ, ಮತ್ತೆ ಬರುತ್ತಲೇ ಇರುತ್ತದೆ. 

ಆದರೆ ನಿರಂತರ ನಮ್ಮನ್ನು ಆತ್ಮ, ಪ್ರಜ್ಞೆ ಎಂದು ಚಿಂತನೆ ಮಾಡುವುದರಿಂದ ಒಂದಿಲ್ಲ ಒಂದು ದಿನ, ನಾವು ಆತ್ಮ ಅಥವಾ ಪ್ರಜ್ಞೆಯೇ ಎನ್ನುವ ದೃಡ ಭಾವ ಬರುತ್ತದೆ. 

ಆಗ ನಾವು ಬ್ರಹ್ಮವೇ ಎನ್ನುವ ತಿಳುವಳಿಕೆ ಸಹ ಬರುತ್ತದೆ.

ಹೀಗಾಗಿ ನಮ್ಮ ಅಂತರಂಗದಲ್ಲಿ ನಮ್ಮನ್ನು ನಾವು ದೇಹದಿಂದ ಗುರುತಿಸಿಕೊಳ್ಳುವುದನ್ನು ಕಡಿಮೆ ಮಾಡಿ. ಪ್ರಜ್ಞೆಯೊಂದಿಗೆ ಗುರುತಿಸಿಕೊಳ್ಳುವುದನ್ನು ಅಭ್ಯಾಸ ಮಾಡೋಣ. ಈ ಅಭ್ಯಾಸ ನಮ್ಮನ್ನು ನಮ್ಮ ಮೂಲದೊಂದಿಗೆ ಒಂದುಗೂಡಿಸಲಿದೆ.

ಇದಕ್ಕೆ ಒಂದು ಉದಾಹರಣೆಯಾಗಿ, ನಮ್ಮ ಶಿಷ್ಯ ರೂಪದಲ್ಲಿ ಬಂದಿರುವ ಒಂದು ಶರೀರಧಾರಿ ಆತ್ಮ, ತನ್ನ ಶರೀರ ಜನ್ಮ ದಿನದಂದು ನನ್ನೊಂದಿಗೆ ಮಾಡಿದ ಸಂವಹನವನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ತಾವು ಸಹ ಈ ರೀತಿಯ ಅಭ್ಯಾಸವನ್ನು ಮಾಡಿ. (ವಿಶೇಷವಾಗಿ ತಮ್ಮ ದೇಹ ಜನಿಸಿದ ದಿನದಂದು ತಪ್ಪದೆ ಮಾಡಿ.) 

ಈ ರೀತಿಯ ಅಭ್ಯಾಸ, ಒಂದು ದಿನ ತಾವು ಸಹ ಆಕಾರ ರಹಿತ "ಅಹಂ" ಎನ್ನುವ ಪ್ರಜ್ಞೆ ತಮ್ಮಲ್ಲಿ ಮೂಡಿಸಲಿದೆ. ಆಕಾರ ರಹಿತ "ಅಹಂ", ಅದುವೇ ಬ್ರಹ್ಮವಾಗಲಿದೆ. 

ಮತ್ತು ಈ ಶರೀರಧಾರಿ ಬ್ರಹ್ಮನೇ ಸತ್ಯ ಯುಗವನ್ನು ನಿರ್ಮಾಣ ಮಾಡಲಿದ್ದಾನೆ. ಆ ಸಮಯ ಬೇಗ ಬರಲಿ ಎಂದು ಬ್ರಹ್ಮರಲ್ಲಿ ಪ್ರಾರ್ಥಿಸುತ್ತಾ...

ಎಲ್ಲರಿಗೂ ವಂದನೆಗಳು

ಓಂ ನಮಃ ಶಿವಾಯ 

✍️ URAIN NAMAH 
ಈ ಪದ, ಸತ್ಯ ಯುಗದ ಮುನ್ನುಡಿ
ಈ ಪದ, ಯುಗ ಪರಿವರ್ತನೆಗೆ ನಾಂದಿ

(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ)

Comments