*ಪ್ರಯಾಣದ ಪೂರ್ವ ತಯಾರಿ.*


ನಾವು ರೈಲಿನ ಎಸಿ ಕೋಚ ನಲ್ಲಿ ದೂರದ ಊರಿಗೆ ಪ್ರಯಾಣ ಮಾಡುವಾಗ, ರೈಲಿನಲ್ಲಿಯೇ ಊಟ ಮಾಡುತ್ತೇವೆ, ಮಲಗುತ್ತೇವೆ, ಶೌಚ ಕ್ರಿಯೆ ಮಾಡುತ್ತೇವೆ.  ಕಿಟಕಿಯಿಂದ ಪ್ರಕೃತಿ ಸೌಂದರ್ಯವನ್ನು ನೋಡಿ ಖುಷಿ ಪಡುತ್ತೇವೆ. ಹಾಗೆಯೇ ಜೊತೆಯಲ್ಲಿರುವವರ ಜೊತೆ ಮಾತಾಡುತ್ತೇವೆ. ನಾವು ಬೇರೆಯವರೊಂದಿಗೆ ಶಾಶ್ವತ ಸಂಬಂಧಿಗಳಂತೆ ವರ್ತಿಸುತ್ತಿದ್ದರೂ  ರೈಲಿನಲ್ಲಿ ನಾವು ಬಹಳ ದಿನ ಇರುವುದಿಲ್ಲ ಎನ್ನುವ ಒಂದು ಯೋಚನೆಯಂತು ಖಚಿತವಾಗಿ ನಮ್ಮ ಮನಸ್ಸಿನಲ್ಲಿ ಇದ್ದೇ ಇರುತ್ತದೆ. 


ಇದಕ್ಕಾಗಿಯೇ ನಾವು ಈ ಮೊದಲೇ ಈ ಪ್ರಯಾಣದ ನಂತರ ಯಾವ ಸುಂದರ ಸ್ಥಳಕ್ಕೆ ಹೋಗಿ ಖುಷಿ, ಸಂತೋಷ ಅನುಭವಿಸಬೇಕು, ಎನ್ನುವ ಯೋಜನೆ ರೂಪಿಸಿರುತ್ತೇವೆ. ಅದಕ್ಕಾಗಿ ಹಣ ಸಂಗ್ರಹಿಸಿರುತ್ತೇವೆ.  ಈ ಪೂರ್ವ ತಯಾರಿಯಿಂದ  ಯಾವುದೇ ಭಯವಿಲ್ಲದೆ, ಚಿಂತೆಯಿಲ್ಲದೆ ರೈಲಿನಿಂದ ಇಳಿದು ಮುಂದೆ ಸಾಗುತ್ತೇವೆ.


ರೈಲಿನ ರೀತಿ ನಾವು ಪ್ರತಿನಿತ್ಯ ಸೂರ್ಯ ದೇವರ ಸುತ್ತಲೂ ಸೌರಮಂಡಲದ ಪ್ರಯಾಣವನ್ನು, ಭೂಮಿ ಎನ್ನುವ ವಾಹನದಲ್ಲಿ ಕುಳಿತು ಮಾಡುತ್ತಿದ್ದೇವೆ. 


ಇದು ಅನೇಕರ ಅನುಭವಕ್ಕೆ ಬಾರದೆ ಇರಬಹುದು. ಆದರೆ ನಾವು ಸೌರಮಂಡಲದ ಪ್ರಯಾಣ ಮಾಡುತ್ತಿರುವುದು ಸತ್ಯ. ಈ ಪ್ರಯಾಣದಲ್ಲಿ ಒಮ್ಮೆ ಸೂರ್ಯ ದೇವರ ಸ್ವಲ್ಪ ಹತ್ತಿರಕ್ಕೆ ಹೋಗುತ್ತೇವೆ, ಆಗ ಬಹಳ ಬಿಸಿಯ ಅನುಭವವಾಗುತ್ತದೆ (ಬೇಸಿಗೆ ಕಾಲ). ಇನ್ನೊಂದು ಬಾರಿ ಸೂರ್ಯ ದೇವರ ಸ್ವಲ್ಪ ದೂರಕ್ಕೆ ಹೋಗುತ್ತೇವೆ, ಆಗ ಚಳಿಯ ಅನುಭವವಾಗುತ್ತದೆ (ಚಳಿಗಾಲ). ಹೀಗೆ ಭೂಮಿಯಲ್ಲಿ ಕುಳಿತು ಆಕಾಶದಲ್ಲಿ ನಿರಂತರ ಪ್ರಯಾಣ ಮಾಡುತ್ತಿದ್ದೇವೆ.


ರೈಲಿನಲ್ಲಿರುವಾಗ ಎಲ್ಲಿಯವರೆಗೆ ನಮ್ಮ ದೃಷ್ಟಿ ರೈಲು ಗಾಡಿಯಿಂದ ಹೊರಗಿನ ಜಗತ್ತಿಗೆ ಹೋಗುವುದಿಲ್ಲವೋ ಅಲ್ಲಿವರೆಗೆ ರೈಲು ಗಾಡಿ ಚಲಿಸುತ್ತಿರುವುದು ನಮ್ಮ ಅನುಭವಕ್ಕೆ ಬರುವುದಿಲ್ಲ. 


ಇದೇ ರೀತಿ ನಮ್ಮ ದೃಷ್ಟಿ ಕೇವಲ ಭೂಮಿಯ ಒಳಗಡೆಯ ಘಟನೆಗಳ ನಡುವೆ ಮುಳುಗಿರುವದರಿಂದ ನಾವು 

ಭೂಮಿ ಎನ್ನುವ ವಾಹನದಲ್ಲಿ ಕುಳಿತು ಈ ಸೌರಮಂಡಲದ ಸುತ್ತಲೂ ಆಕಾಶದಲ್ಲಿ ಪ್ರಯಾಣ ಮಾಡುತ್ತಿರುವುದು ಅನೇಕರ ಅನುಭವಕ್ಕೆ ಬರುವುದಿಲ್ಲ. 


ಇನ್ನೊಂದು ಮಹತ್ವದ ವಿಷಯವೆಂದರೆ, ಯಾವ ರೀತಿ ರೈಲಿನ ಪ್ರಯಾಣ ಅಂತ್ಯವಾಗುವುದೋ, ಅದೇ ರೀತಿ ಭೂಮಿಯಲ್ಲಿ ನಮ್ಮ ದೈಹಿಕ ಜೀವನದ ಪ್ರಯಾಣವು ಒಂದು ದಿನ ಅಂತ್ಯವಾಗಲಿದೆ.


ರೈಲಿನ ಪ್ರಯಾಣ ಅಂತ್ಯವಾದಾಗ ಯಾವುದೇ ಭಯ, ಚಿಂತೆಯಿಲ್ಲದೆ ನಾವು ರೈಲನ್ನು ಬಿಟ್ಟು ಹೋಗುತ್ತೇವೆ. ಏಕೆಂದರೆ ಇದಕ್ಕಾಗಿ ನಾವು ಮೊದಲೇ ಪೂರ್ವ ತಯಾರಿ ಮಾಡಿ ಅದಕ್ಕಾಗಿ ಬೇಕಾಗುವ ಹಣವನ್ನು ಮೊದಲೇ ಸಂಗ್ರಹಿಸಿರುತ್ತೇವೆ. 


ಆದರೆ ಈ ಭೂಮಿಯ ಜೀವನ ಪ್ರಯಾಣ ಮುಗಿಸುವಾಗ ಅನೇಕರಿಗೆ ಭಯ, ದುಃಖ, ಚಿಂತೆ ಕಾಡಲು ಆರಂಭಿಸುತ್ತದೆ. ಇದಕ್ಕೆ ಕಾರಣ ನಾವು ಈ ಭೂಮಿಯ ಪ್ರಯಾಣದ ಅಂತ್ಯವಾಗುವ ಕುರಿತು ಯೋಚನೆಯನ್ನೇ ಮಾಡುವುದಿಲ್ಲ. 


 ಹೀಗಾಗಿ ಮುಂದಿನ ಪ್ರಯಾಣದ ಬಗ್ಗೆ  ಪೂರ್ವ ತಯಾರಿ ಮಾಡಿ, ಪುಣ್ಯ ಎನ್ನುವ ಹಣವನ್ನು ಸಹ ಸಂಗ್ರಹ ಮಾಡುವುದಿಲ್ಲ.. ಅದಕ್ಕಾಗಿ ಈ ಪ್ರಯಾಣದ ಅಂತ್ಯದಲ್ಲಿ ನಮಗೆ ಭಯ, ಚಿಂತೆ, ದುಃಖ ಕಾಡುತ್ತದೆ. 


ಹೀಗಾಗಿ ಒಂದು ವಿಷಯವನ್ನು ನಾವು ಪದೇ ಪದೇ ನೆನಪಿಸಿಕೊಳ್ಳಬೇಕು. ಅದೆಂದರೆ, ಎಲ್ಲಾ ಪ್ರಯಾಣಕ್ಕೂ ಅಂತ್ಯ ಇರುವಂತೆ ಈ ಭೂಮಿಯ ವಾಹನದಲ್ಲಿ ಈ ದೈಹಿಕ ಜೀವನದ ಪ್ರಯಾಣವು ಒಂದು ದಿನ ಅಂತ್ಯ ಕಾಣಲಿದೆ. ಇದಕ್ಕಾಗಿ ಮುಂದಿನ ಜೀವನದ ಪ್ರಯಾಣಕ್ಕಾಗಿ ಬೇಕಾಗುವ ಪುಣ್ಯ ಎನ್ನುವ ಹಣವನ್ನು ನಾವು ಈಗಲೇ ಸಂಪಾದಿಸಲು ಆರಂಭಿಸಬೇಕು. 


ಈ ಜಗತ್ತಿನಲ್ಲಿ ನಮ್ಮನ್ನು ನಂಬುವ, ನಮ್ಮನ್ನು ಗೌರವಿಸುವ ಮನಸ್ಸಾಕ್ಷಿಯನ್ನು ನಿರ್ಮಾಣ ಮಾಡುವುದಕ್ಕಿಂತಲೂ ದೊಡ್ಡ ಪುಣ್ಯ ಈ  ಜಗತ್ತಿನಲ್ಲಿ  ಯಾವುದು ಇಲ್ಲ.  ಈ ದೊಡ್ಡ ಪುಣ್ಯ ಪಡೆಯಬೇಕಾದರೆ ಸತ್ಯ, ನ್ಯಾಯ, ನೀತಿ, ಧರ್ಮದ ನಡೆ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ನಮ್ಮಿಂದ ಸಾಧ್ಯವಾಗುವ ಸಹಾಯವನ್ನು ಇತರರಿಗೆ ಮಾಡಬೇಕಾಗುತ್ತದೆ.


ಇದು ಈ ಜೀವನದ ನಂತರದ ಪ್ರಯಾಣಕ್ಕಾಗಿ ನಮ್ಮ ಪೂರ್ವ ತಯಾರಿಯಾಗಿದೆ. ಹೀಗೆ ಮಾಡುವುದರಿಂದ ನಾವು ನಿರ್ಭಯವಾಗಿ, ನಿಶ್ಚಿಂತೆಯಿಂದ, ದುಃಖವಿಲ್ಲದೆ ಈ ಪ್ರಯಾಣ ಮುಗಿಸಿ ಮುಂದಿನ ಪ್ರಯಾಣಕ್ಕೆ ಸಂತೋಷದಿಂದ ಹೊರಡಬಹುದು. 


ಏಕೆಂದರೆ ನಮ್ಮಲ್ಲಿ ಪುಣ್ಯ ಎನ್ನುವ ಹಣ ಸಂಗ್ರಹ ಆಗಿರುವುದರಿಂದ, ನಮ್ಮ ಮುಂದಿನ ಉತ್ತಮ ಪ್ರಯಾಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.


ಹೀಗಾಗಿ ನಾವೆಲ್ಲರೂ ಜೀವನ ಪ್ರಯಾಣದ ಅಂತ್ಯದ ಕುರಿತು ಯೋಚಿಸೋಣ.ನಮ್ಮ ಮುಂದಿನ ಪ್ರಯಾಣದ ಕುರಿತು ಈಗಿನಿಂದಲೇ ಪೂರ್ವ ತಯಾರಿ ಮಾಡೋಣ. 


ಇದಕ್ಕಾಗಿ *ಉತ್ತಮ ಕೆಲಸಗಳು ಎನ್ನುವ* ಹಾಗೂ *ನಮ್ಮ ಮನಸ್ಸಾಕ್ಷಿ ನಮ್ಮನ್ನು ಗೌರವಿಸುವಂತೆ ಬದುಕುವ* ಪುಣ್ಯ ಸಂಪಾದನೆ ಈಗಿನಿಂದಲೇ ಆರಂಭಿಸೋಣ. 

ಯಾವುದೇ ದುಃಖ, ಭಯ, ಚಿಂತೆಯಿಲ್ಲದೆ ಈ ಜೀವನ ಪ್ರಯಾಣವನ್ನು ಅಂತ್ಯಗೊಳಿಸೋಣ.


ಎಲ್ಲರಿಗೂ ಒಳ್ಳೆಯದಾಗಲಿ. 


ಓಂ ನಮಃ ಶಿವಾಯ


✍️ URAIN NAMAH

ಈ ಪದ ಸತ್ಯ ಯುಗದ ಮುನ್ನುಡಿ 

ಈ ಪದ ಯುಗ ಪರಿವರ್ತನೆಗೆ ನಾಂದಿ 


(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ )

Comments

Popular posts from this blog

ಅಂಧ ಹೇಳವರು