*ಒಂದು ಚಿಕ್ಕ ಜೀವ, ಅದೆಷ್ಟು ಉನ್ನತ ಕಾರ್ಯ ?*

ಮಹಾಭಾರತದಲ್ಲಿ ಶ್ರೀಕೃಷ್ಣನ ನಂತರ ಶಕ್ತಿಶಾಲಿ ಯಾರಾಗಿದ್ದರೂ ? ಎಂದು ಕೇಳಿದರೆ ಆಗ ಬರುವ ಉತ್ತರವೇನು ? 

ಆ ಉತ್ತರವೇ ಬ್ರಹ್ಮಚಾರಿ ಭೀಷ್ಮ.

ಅರ್ಜುನ, ಕರ್ಣ ಮಹಾಭಾರತದ ಇನ್ನಿತರ ಯಾರು ಸಹ ಭೀಷ್ಮನ ಶಕ್ತಿಗೆ ಸಮನಾಗಿ ಇರಲಿಲ್ಲ. ಅಷ್ಟೊಂದು ಸಾಮರ್ಥ್ಯ, ಶಕ್ತಿ ಭೀಷ್ಮಾಚಾರ್ಯರಲ್ಲಿತ್ತು.

ಯಾರಲ್ಲಿ ಶಕ್ತಿ, ಶ್ರೀಮಂತಿಕೆ, ಅಧಿಕಾರ, ಜ್ಞಾನ ಇರುತ್ತದೆ, ಅವರಲ್ಲಿ ಸುರಕ್ಷತೆಯ ಭಾವ ಇರುತ್ತದೆ. ನಿರ್ಭಯ ಇರುತ್ತದೆ. ಅಂತಹವರು ಯಾರ ಮೇಲೆ ಬೇಕಾದರೂ ಪ್ರಭಾವ ಬೀರಬಹುದು. ತಮಗೆ ಬೇಕಾದ ಕೆಲಸ ಮಾಡಿಕೊಳ್ಳಬಹುದು.

ಅಂತಹವರು ಪೂರ್ಣ ಅಲ್ಲದಿದ್ದರೂ ಬಹಳಷ್ಟು ಸ್ವಾತಂತ್ರ್ಯ ಅನುಭವಿಸುತ್ತಿರುತ್ತಾರೆ.

ಈ ಎಲ್ಲಾ ಕಾರಣಗಳಿಗಾಗಿ *ನಮ್ಮಲ್ಲಿ ಬಹಳಷ್ಟು ಜನರಿಗೆ ನಾವು ಸಹ ಶಕ್ತಿಶಾಲಿಯಾಗಬೇಕು, ಶ್ರೀಮಂತರಾಗಬೇಕು, ಅಧಿಕಾರವನ್ನು ಹೊಂದಬೇಕು, ಜ್ಞಾನಿಗಳಾಗಬೇಕು ಎನ್ನುವ ಆಸೆ, ವಿಚಾರ. ಇದಕ್ಕೆ ಸಂಬಂಧಿಸಿದ ಪ್ರಯತ್ನ ಸಹ ನಮ್ಮಲ್ಲಿ ಇರುತ್ತದೆ*. 

ಆದರೆ *ಶಕ್ತಿ ಹೊಂದುವುದು, ಶ್ರೀಮಂತಿಕೆ ಹೊಂದುವುದು, ಅಧಿಕಾರ ಹೊಂದುವುದು, ಜ್ಞಾನ ಹೊಂದುವುದು ಕೇವಲ ನಮ್ಮ ಸಲುವಾಗಿ ಮಾತ್ರವೇ ?*

ನಮ್ಮ ಸಲುವಾಗಿ ಇವುಗಳನ್ನು ಪಡೆಯಬೇಕು ಎಂದು ನಾವು *ಇವುಗಳನ್ನು ಪಡೆದರೂ, ನಮಗೆ ಗೊತ್ತಿಲ್ಲದೆ ಇವುಗಳಿಗೆ ಸಂಬಂಧಿಸಿದ ಒಂದು ಜವಾಬ್ದಾರಿ ತನ್ನಿಂದ ತಾನೇ ನಮಗೆ ಬರುತ್ತದೆ*. 

ಈ ವಿಷಯವನ್ನು ಯಾರು ತಿಳಿದುಕೊಂಡು ಅದರಂತೆ *ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆಯೋ, ಅವರು ನಿಜಕ್ಕೂ ಲೋಕದ ಎಲ್ಲರ ದೃಷ್ಟಿಯಲ್ಲಿ, ಬಹುದೊಡ್ಡ ವ್ಯಕ್ತಿಯಾಗುತ್ತಾರೆ*.

ಆದರೆ ಯಾರು ಈ ಜವಾಬ್ದಾರಿಯನ್ನು ಅರಿತು, ಅದನ್ನು ನಿಭಾಯಿಸುವುದಿಲ್ಲವೋ, ಆತ ಎಷ್ಟೇ ದೊಡ್ಡ ಶಕ್ತಿಶಾಲಿಯಾದರೂ, ಎಷ್ಟೇ ದೊಡ್ಡ ಶ್ರೀಮಂತರಾದರು, ಎಷ್ಟೇ ದೊಡ್ಡ ಅಧಿಕಾರಿಯಾದರೂ, ಎಷ್ಟೇ ಜ್ಞಾನಿಯಾಗಿದ್ದರೂ, ಆತ ಬಹು ಚಿಕ್ಕ ವ್ಯಕ್ತಿಯಾಗುತ್ತಾನೆ. ಇದಕ್ಕೆ ದೊಡ್ಡ ಉದಾಹರಣೆ ಭಿಷ್ಮಾಚಾರ್ಯ.

ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ಶ್ರೀ ಕೃಷ್ಣನ ನಂತರ ಅತ್ಯಂತ ಶಕ್ತಿಶಾಲಯಾದಂತಹ ಭೀಷ್ಮಾಚಾರ್ಯರು ಕುಳಿತಿರುವ ಸ್ಥಳಕ್ಕೆ ಹೋಗಿ ಒಬ್ಬ ಅಬಲೆ ನಾರಿ ದ್ರೌಪದಿ ದೈನ್ಯ ಭಾವದಿಂದ ಮಾನ ರಕ್ಷಣೆಯ ಭಿಕ್ಷೆಯನ್ನು ಬೇಡುತ್ತಾಳೆ.

 *ಆಗ ಭೀಷ್ಮರು ತಮ್ಮ ಶಕ್ತಿಯನ್ನು ಬಳಸಿ ದ್ರೌಪದಿಯ ಮಾನ ರಕ್ಷಣೆ ಮಾಡುವುದಂತು ದೂರದ ವಿಷಯ, ಕನಿಷ್ಠ ದುರ್ಯೋಧನ ದುಶ್ಯಾಸನರ ವಿರುದ್ಧ ಒಂದು ಪ್ರತಿಭಟನೆಯ ಮಾತನ್ನು ಸಹ ಆಡಲಿಲ್ಲ. ಹೀಗಿರುವಾಗ ಅವರು ಅಷ್ಟು ಶಕ್ತಿಶಾಲಿಯಾಗಿದ್ದು ಸಹ ಯಾವ ಪ್ರಯೋಜನಕ್ಕೆ ಬಂತು ?*

*ಇಂತಹ ವ್ಯಕ್ತಿಗಳು ಎಷ್ಟೇ ಶಕ್ತಿಶಾಲಿಯಾಗಿದ್ದರು ಸಮಾಜದ ಕಣ್ಣಲ್ಲಿ ಅತ್ಯಂತ ಚಿಕ್ಕ ವ್ಯಕ್ತಿಗಳಾಗುತ್ತಾರೆ*.

ಚರಿತ್ರೆಯಲ್ಲಿ ಇಂತಹದ್ದೆ ಇನ್ನೊಂದು ಘಟನೆ ನಡೆಯಿತು. ಅದುವೇ ರಾವಣನಿಂದ ಸೀತಾಪಹರಣಾ. *ಆ ಘಟನೆಯ ಸಂದರ್ಭದಲ್ಲಿ ಮನುಷ್ಯನು ಅಲ್ಲದ ಒಂದು ಪಕ್ಷಿ, ತನ್ನ ಶಕ್ತಿಯ ಕುರಿತು ಸಹ ಚಿಂತಿಸದೆ ಶಕ್ತಿಶಾಲಿ ರಾವಣನ ದುಷ್ಟ ಕೆಲಸಕ್ಕೆ ಅಡ್ಡಿಯಾಗಿ ಒಬ್ಬ ಅಬಲೆ ನಾರಿಯ ಮಾನ ರಕ್ಷಿಸಲು ಪ್ರಯತ್ನಿಸಿದ್ದಲ್ಲದೆ, ಸ್ತ್ರೀ ಮಾನ ರಕ್ಷಣೆಯ ಧರ್ಮ ಕಾರ್ಯಕ್ಕಾಗಿ ತನ್ನ ಜೀವನವನ್ನೇ ಅರ್ಪಣೆ ಮಾಡುತ್ತದೆ*. 

*ಇಂತಹ ಉದಾತ್ತ ಕೆಲಸಕ್ಕೆ ಸಾವನ್ನಪ್ಪಿದ ಪಕ್ಷಿ ಜಟಾಯು ಎಲ್ಲಿ ನಿಲ್ಲುತ್ತದೆ ? ಮಹಾಭಾರತದಲ್ಲಿಯೇ ಶಕ್ತಿಶಾಲಿ ಭೀಷ್ಮ ಎಲ್ಲಿ ನಿಲ್ಲುತ್ತಾರೆ ? ನೀವೇ ಯೋಚಿಸಿ*.

ಈ ಕಥೆ ನಾನು ಕೇಳಿದ ನಂತರ, ಯಾವಾಗ ಅದರ ನೆನಪು ಬರುತ್ತಿತ್ತು, ಆಗೆಲ್ಲಾ ಜಟಾಯು ಪಕ್ಷಿ ಬಗ್ಗೆ ಸದಾ ಗೌರವಾದರದ ಭಾವ ಮೂಡುತ್ತಿತ್ತು. ಆ ಪುಣ್ಯ ಭೂಮಿಯನ್ನು ನಾನು ಯಾವಾಗ ಸಂದರ್ಶಿಸಿ ನನ್ನ ಅಹೋಭಾವ ವ್ಯಕ್ತಪಡಿಸುತ್ತೇನೆ ಎನ್ನುವ ಆತುರತೆ ನನ್ನನ್ನು ಕಾಡುತ್ತಿತ್ತು. 

ಎಷ್ಟೋ ದಿನಗಳನ್ನು ಕಳೆದ ನಂತರ ನಿನ್ನೆಯ ದಿನ ಇದಕ್ಕೆ ಕಾಲ ಕೂಡಿ ಬಂತು. ಅನೇಕ ಕ್ಷೇತ್ರಗಳ ದರ್ಶನದ ಅವಕಾಶ ನಮ್ಮ ಮುಂದಿದ್ದರೂ ನಾನು ಆಯ್ಕೆ ಮಾಡಿದ್ದು, ಜಟಾಯುವಿನ ಲೇಪಾಕ್ಷಿಯ ಪುಣ್ಯಭೂಮಿ. ಈ ಕ್ಷೇತ್ರವನ್ನು ಸಂದರ್ಶಿಸಿ ನನ್ನ ಅಹೋಭಾವ ವ್ಯಕ್ತಪಡಿಸಿದೆ, ಧನ್ಯನಾದೆ.

ಜಟಾಯುವಿನ ಬಲಿದಾನ ತೇತ್ರಾಯುಗದಲ್ಲಿ ನಡೆದಿದ್ದು. ಆದರೂ ಆ ಪಕ್ಷಿಯ ಹೆಸರು ಇನ್ನೂ ಅಳಿಯದೆ ಉಳಿದಿದೆ. ಪಕ್ಷಿ ಮರಣಿಸಿದ ಕ್ಷೇತ್ರ ಇನ್ನೂ ಪುಣ್ಯಭೂಮಿಯಾಗಿ ಎಲ್ಲರನ್ನೂ ಸೆಳೆಯುತ್ತಿದೆ. 

*ಭೀಷ್ಮರಂತೆ ನಾವು ಸಹ ಎಷ್ಟೇ ಶಕ್ತಿಶಾಲಿಗಳಾಗಿದ್ದರು, ದೊಡ್ಡ ಶ್ರೀಮಂತರಾಗಿದ್ದರೂ, ದೊಡ್ಡ ಅಧಿಕಾರಿಗಳಾಗಿದ್ದರೂ, ದೊಡ್ಡ ಜ್ಞಾನಿಗಳಾಗಿದ್ದರೂ‌ ನಮ್ಮ ಶಕ್ತಿ, ಶ್ರೀಮಂತಿಕೆ, ಅಧಿಕಾರ, ಜ್ಞಾನ ಅವಶ್ಯಕತೆಯಿರುವ ದುರ್ಬಲರ ಸಹಾಯಕ್ಕೆ ಬರದಿದ್ದರೆ ಅವುಗಳು ಎಷ್ಟಿದ್ದರೂ ವ್ಯರ್ಥ‌*. 

ಇವುಗಳನ್ನು ಹೊಂದಿ ನಮ್ಮನ್ನು ನಾವು ಎಷ್ಟೇ ದೊಡ್ಡ ವ್ಯಕ್ತಿಯೆಂದು ತಿಳಿದುಕೊಳ್ಳಬಹುದು. ಆದರೆ ಸಮಾಜದ ದೃಷ್ಟಿಯಲ್ಲಿ, ಲೋಕದ ದೃಷ್ಟಿಯಲ್ಲಿ ನಾವು ಅತ್ಯಂತ ಚಿಕ್ಕ ವ್ಯಕ್ತಿಗಳಾಗುತ್ತೇವೆ.

*ಲೋಕದ ದೃಷ್ಟಿಯಲ್ಲಿ ದೊಡ್ಡ ವ್ಯಕ್ತಿಯಾಗಲು ಶಕ್ತಿ, ಹಣ, ಅಧಿಕಾರ, ಜ್ಞಾನ ಇರುವುದು ಮುಖ್ಯವಲ್ಲ. ನಮ್ಮಲ್ಲಿರುವ ಶಕ್ತಿ, ಹಣ, ಅಧಿಕಾರ, ಜ್ಞಾನವನ್ನು ಅವಶ್ಯಕತೆಯಿರುವ ದುರ್ಬಲರಿಗಾಗಿ ಹೇಗೆ ಬಳಸುತ್ತಿದ್ದೇವೆ ? ಎನ್ನುವುದು ಮುಖ್ಯ*. 

ಈ ನಿಟ್ಟಿನಲ್ಲಿ ಜಟಾಯು ಪಕ್ಷಿಯ ಜೀವನ ನಮ್ಮೆಲ್ಲರಿಗೂ ಒಂದು ಪ್ರೇರಣೆಯಾಗಲಿ. ನಾವು ಸಹ ನಮಗೆ ಲಭಿಸಿದ ಶಕ್ತಿ, ಹಣ, ಅಧಿಕಾರ, ಜ್ಞಾನವನ್ನು ದುರ್ಬಲರ ರಕ್ಷಣೆಗಾಗಿ, ದುರ್ಬಲರ ಉನ್ನತಿಗಾಗಿ ಬಳಸೋಣ. ಇಂತಹ ಧರ್ಮ ಬುದ್ಧಿ ಎಲ್ಲರಲ್ಲಿಯೂ ಬಂದಲ್ಲಿ ಸತ್ಯ ಯುಗ ಪುನಃ ಸ್ಥಾಪನೆಯಾಗುವದರಲ್ಲಿ ಸಂಶಯವಿಲ್ಲ. 

ಈ ಭೂಮಿಯ ಮೇಲೆ ಪುನಃ ಸತ್ಯ ಯುಗ ಸ್ಥಾಪನೆಯಾಗಲಿ ಎಂದು ಆಶಿಸುತ್ತಾ. 

ಎಲ್ಲರಿಗೂ ವಂದನೆಗಳು. 

ಓಂ ನಮಃ ಶಿವಾಯ 

✍️ URAIN NAMAH 
 ಈ ಪದ ಸತ್ಯ ಯುಗದ ಮುನ್ನುಡಿ 
 ಈ ಪದ ಯುಗ ಪರಿವರ್ತನೆಗೆ ನಾಂದಿ

19/12/2024

(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ)

Comments