ಧನ್ಯವಾದಗಳು
ಒಬ್ಬ ರಾಜನಿಗೆ ಕೆಟ್ಟದ್ದು ಆದಾಗ ಅವನ ಮಂತ್ರಿ ದುಃಖ ಪಡಬೇಕೇ ?
ಸಂತೋಷ ಪಡಬೇಕೇ?
ರಾಜನಿಗೆ ತೊಂದರೆ ಆದಾಗ ಸಂತೋಷ ಪಡುತ್ತಾನೆ. ಮುಂದೇನಾಯಿತು....
ರಾಜ ಮಂತ್ರಿಯ ಪುಟ್ಟ ಕಥೆ
ಒಬ್ಬ ರಾಜನ ಉಗುರುಗಳನ್ನು ಕ್ಷೌರಿಕ ಕತ್ತರಿಸುವಾಗ ಕತ್ತಿಯು ರಾಜನ ಬೆರಳಿನ ಸ್ವಲ್ಪ ಭಾಗವನ್ನು ಕತ್ತರಿಸಿ ಬಿಡುತ್ತದೆ.
ಆಗ ಅಲ್ಲಿಯೇ ಇರುವ ಮಂತ್ರಿ ಇದ್ದಕ್ಕಿದ್ದಂತೆ ಖುಷಿಯಿಂದ, ದೇವರೇ ! ಬಹಳ ಒಳ್ಳೆಯದಾಯಿತು. ನಿಮಗೆ ಅನಂತ ಧನ್ಯವಾದಗಳು ಎನ್ನುತ್ತಾನೆ.
(ಇಂತಹ ಸ್ಥಿತಿಯಲ್ಲಿ ರಾಜನ ಸ್ಥಾನದಲ್ಲಿ ನಾವು ನೀವು ಇದ್ದರೆ ಏನು ಮಾಡುತ್ತಿದ್ದೆವು?)
ನಿರೀಕ್ಷೆಯಂತೆ ರಾಜ ಮಂತ್ರಿಯನ್ನು ರಾಜ್ಯದಿಂದ ಗಡಿಪಾರು ಮಾಡುತ್ತಾನೆ.
ಸ್ವಲ್ಪ ದಿನಗಳ ನಂತರ ರಾಜ ಬೇಟೆಯಾಡಲು ಸೈನಿಕರೊಂದಿಗೆ ಕಾಡಿಗೆ ಹೋಗುತ್ತಾನೆ. ಆಗ ದಟ್ಟವಾದ ಕಾಡಿನಲ್ಲಿ ಸೈನಿಕರು ರಾಜ ಬೇರ್ಪಟ್ಟು, ರಾಜ ಒಂಟಿಯಾಗುತ್ತಾನೆ.
ಆಗ ರಾಜ, ದೇವಿಯ ಆರಾಧನೆ ಮಾಡುತ್ತಿರುವ ಕಾಡು ಜನರಿಗೆ ಸಿಗುತ್ತಾನೆ. ಅವರು ರಾಜನನ್ನು ಕಂಡು ದೇವಿಯ ಬಲಿಗೆ ಒಳ್ಳೆಯ ಬೇಟೆಯೇ ಸಿಕ್ಕಿತ್ತು, ಎಂದು ಖುಷಿಪಡುತ್ತಾರೆ.
ರಾಜನನ್ನು ಬಲಿ ಕೊಡಲು ಸಿದ್ಧಪಡಿಸಿ, ಕೊನೆಯದಾಗಿ ಆತನ ದೇಹದಲ್ಲಿ ಯಾವುದೇ ನ್ಯೂನತೆ ಇಲ್ಲ, ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಇಡೀ ದೇಹವನ್ನು ನೋಡಿದಾಗ, ಬೆರಳಿನ ಭಾಗ ಕತ್ತರಿಸಿರುವುದು ನೋಡಿ ರಾಜ ಬಲಿಗೆ ಯೋಗ್ಯನಲ್ಲ ಎಂದು ತಿಳಿದು ಆತನನ್ನು ಬಿಟ್ಟುಬಿಡುತ್ತಾರೆ.
ಆಗ ರಾಜನಿಗೆ ಮಂತ್ರಿಯ ಮಾತು ನೆನಪು ಬರುತ್ತದೆ. ಒಂದು ವೇಳೆ ನನ್ನ ಬೆರಳು ಕತ್ತರಿಸದಿದ್ದರೆ, ಇಂದು ನನ್ನ ಜೀವನವೇ ಹೋಗುತ್ತಿತ್ತು. ಬೆರಳು ಕತ್ತರಿಸಿರುವದರಿಂದ ನನಗೂ ನಿಜಕ್ಕೂ ಒಳ್ಳೆಯದಾಗಿದೆ. ಇದಕ್ಕಾಗಿ ಮಂತ್ರಿ ಧನ್ಯವಾದ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಮಂತ್ರಿಗೆ ಗಡಿ ಪಾರು ಮಾಡಿ ತಪ್ಪು ಮಾಡಿದೆ, ಎಂದು ಪುನಃ ಮಂತ್ರಿಯನ್ನು ಕರೆಯಿಸಿಕೊಳ್ಳುತ್ತಾನೆ.
ಮಂತ್ರಿಯನ್ನು ಕರೆಯಿಸಿಕೊಂಡು ರಾಜ ಕೇಳುತ್ತಾನೆ, ನನಗೆ ಬೆರಳು ಕತ್ತರಿಸಿರುವದರಿಂದ ನನಗೆ ಒಳ್ಳೆಯದೆ ಆಗುತ್ತದೆ ಎಂದು ಹೇಗೆ ಗೊತ್ತಾಯಿತು? ಎಂದು ಕೇಳುತ್ತಾನೆ.
ಆಗ ಮಂತ್ರಿ ಹೇಳುತ್ತಾನೆ, ನಿಮಗೆ ಹೀಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ. ಆದರೆ ನನ್ನ ಜೀವನದಲ್ಲಿ ಏನೇ ಘಟಿಸಿದರೂ ಧನ್ಯವಾದ ಹೇಳುವ ಅಭ್ಯಾಸ ಇದೆ ಮತ್ತು ಈ ಅಭ್ಯಾಸದಿಂದ ನನಗೆ ಒಳ್ಳೆಯದೆ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳುತ್ತಾನೆ.
ಆಗ ರಾಜ ಹೇಳುತ್ತಾನೆ, ನೀನು ಧನ್ಯವಾದ ಹೇಳಿದ್ದರಿಂದ, ನಿನಗೆ ಗಡಿಪಾರಿನ ಶಿಕ್ಷೆ ಆಯಿತು. ನಿನಗೆ ಎಲ್ಲಿ ಒಳ್ಳೆಯದು ಆಗಿದೆ ಎಂದು ಕೇಳುತ್ತಾನೆ.
ಆಗ ಮಂತ್ರಿ ಹೇಳುತ್ತಾನೆ, ನೀವು ಒಂದು ವೇಳೆ ನನ್ನನ್ನು ಗಡಿಪಾರು ಮಾಡದಿದ್ದರೆ ನೀವು ಎಲ್ಲೇ ಇದ್ದರೂ ನಿಮ್ಮ ಜೊತೆ, ನಿಮ್ಮ ಹಿಂದೆ ನಾನು ಇರುತ್ತಿದ್ದೆ. ನೀವು ಕಾಡಿನ ಜನರಿಗೆ ಸಿಕ್ಕಿದಾಗಲು ನಿಮ್ಮ ಜೊತೆಯೇ ನಾನು ಇರುತ್ತಿದ್ದೆ. ಆಗ ಬಲಿಗೆ ನೀವು ಅಯೋಗ್ಯರು ಎಂದು ಕಾಡಿನ ಜನರಿಗೆ ಗೊತ್ತಾದ ನಂತರ ನಿಮ್ಮ ಪಕ್ಕದಲ್ಲಿಯೇ ಇರುವ ನನ್ನನ್ನು ಬಲಿ ಕೊಡುತ್ತಿದ್ದರು.
ನೀವು ಗಡಿಪಾರು ಮಾಡಿರುವುದರಿಂದ ನನ್ನ ಪ್ರಾಣ ಸಹ ಉಳಿಯಿತು. ಇಲ್ಲದಿದ್ದರೆ ನಾನು ಇಂದು ಇರುತ್ತಿರಲಿಲ್ಲ. ಈ ರೀತಿಯಾಗಿ ಗಡಿಪಾರಿನ ಶಿಕ್ಷೆಯಿಂದ ನನಗೆ ಒಳ್ಳೆಯದೆ ಆಗಿದೆ. ಇದಕ್ಕಾಗಿ ಆ ದೇವರಿಗೆ ಮತ್ತೊಮ್ಮೆ ಅನಂತ ಧನ್ಯವಾದಗಳು, ಎಂದು ಹೇಳುತ್ತಾನೆ.
ನಾವು ಮಂತ್ರಿಯಂತೆ ಜೋರಾಗಿ ಧನ್ಯವಾದ ಹೇಳದಿದ್ದರೂ, ಜೀವನದ ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ದೇವರಿಗೆ ಧನ್ಯವಾದ ಹೇಳುವುದನ್ನು ಅಭ್ಯಾಸ ಮಾಡೋಣ. ಆಗ ನಿಜಕ್ಕೂ ನಮ್ಮ ಜೀವನದಲ್ಲಿ ಒಳ್ಳೆಯದೇ ಆಗುತ್ತದೆ ಮತ್ತು ಅದು ನಮ್ಮ ಅನುಭವಕ್ಕೆ ಬರುತ್ತದೆ.
Comments
Post a Comment