ಮುಖ ಪುಸ್ತಕದಲ್ಲಿ (Facebook) ನಿಜವಾದ ಜ್ಞಾನವನ್ನು ಪಡೆಯಬೇಕು ಎನ್ನುವ ಆಸಕ್ತಿ ಇರುವ ಜನರು ಬಹಳ ಕಡಿಮೆ. ಆದರೂ ಆಸಕ್ತಿ ಇರುವ ಕೆಲವರಿಗಾದರೂ ಸತ್ಯ ಜ್ಞಾನದ ಸಂಗ ಸಿಗಲಿ ಎನ್ನುವ ಉದ್ದೇಶ್ಯದಿಂದ ಈ ಚಿತ್ರವನ್ನು ಪೋಸ್ಟ ಮಾಡಿದ್ದೆ. ಇದಕ್ಕೆ ಮೆಚ್ಚುಗೆಗಳನ್ನು ನೀಡಿದ ಜ್ಞಾನಾಸಕ್ತರಿಗೂ ಹಾಗು ತಮ್ಮ ಪ್ರತಿಕ್ರಿಯೆ ಮೂಲಕ ಚಿತ್ರದ ವಿಷಯ "ಏನು ಇರಬಹುದು" ಎಂದು ತಿಳಿಸಲು ಪ್ರಯತ್ನಿಸಿದವರಿಗೂ ಅನಂತ ಧನ್ಯವಾದಗಳು.
ನಾನು ನಮ್ಮ ಸಂಸ್ಕಾರ ಕೇಂದ್ರದ ಮಕ್ಕಳಿಗೆ ಯಮನು ನಚಿಕೇತನಿಗೆ ಕೊಟ್ಟ ಜ್ಞಾನವನ್ನು ತಿಳಿಸಿ ಹೇಳುತ್ತಿದ್ದೆ. ಆಗ ನನಗೆ ಬಂದ ಯೋಚನೆಯೆಂದರೆ ಮುಖ ಪುಸ್ತಕದ Facebook ಜ್ಞಾನಾಸಕ್ತರಿಗೂ ಈ ಜ್ಞಾನ ಸಿಗಲಿ ಎನ್ನುವ ವಿಚಾರ. ಆದ ಕಾರಣ ಈ ಚಿತ್ರವನ್ನು ನಾನು ಇಲ್ಲಿ ಪೋಸ್ಟ ಮಾಡಿದೆ.
ಈಗ ಈ ಚಿತ್ರದ ಕುರಿತು ಹೇಳುತ್ತೇನೆ.
ಚಿತ್ರದಲ್ಲಿ ಒಂದು ರಥ ಇದೆ. ಐದು ಕುದುರೆಗಳಿವೆ. ರಥದ ಯಜಮಾನ ರಥದಲ್ಲಿ ಕುಳಿತಿದ್ದಾನೆ. ಸಾರಥಿ ರಥ ಓಡಿಸುತ್ತಿದ್ದಾನೆ. ಆತನ ಕೈ ಯಲ್ಲಿ ಐದು ಕುದುರೆಗಳ ಲಗಾಮುಗಳಿವೆ. ರಥದ ಆಕಡೆ ಈಕಡೆ ಕುದುರೆಗೆ ಪ್ರಿಯವಾದ ಹಸಿರು ಮರಗಳಿವೆ.
ಒಂದು ವೇಳೆ ಸಾರಥಿ ಲಗಾಮು ಸರಿಯಾಗಿ ಹಿಡಿಯದಿದ್ದರೆ, ಕುದುರೆಗಳು ತಮಗೆ ಪ್ರಿಯವಾದ ಹಸಿರನ್ನು ತಿನ್ನಲು ಹೋಗುತ್ತವೆ. ಆಗ ರಥ ಮುರಿದು ಬೀಳುತ್ತದೆ. ರಥದಲ್ಲಿ ಕುಳಿತಿರುವ ಯಜಮಾನ ಅಪಾಯಕ್ಕೊಳಗಾಗುತ್ತಾನೆ.
ಆಗ ಅವನ ಪ್ರಯಾಣ ಅಲ್ಲಿಗೆ ನಿಂತು ಹೋಗುತ್ತದೆ.
ಆದ್ದರಿಂದ ಸಾರಥಿಯಾದವನು ಲಗಾಮುಗಳನ್ನು ಸರಿಯಾಗಿ ಹಿಡಿದು ತಮ್ಮ ಇಚ್ಚೆಯಂತೆ ಓಡುವ ಕುದುರೆಗಳನ್ನು ನಿಯಂತ್ರಿಸಬೇಕು. ಹಾಗೆ ನಿಯಂತ್ರಿಸಿದಾಗ ಮಾತ್ರ ರಥದ ಯಜಮಾನ ಯಾವುದೇ ಅಪಾಯವಿಲ್ಲದೆ ತನ್ನ ಗುರಿ ತಲುಪುತ್ತಾನೆ, ಎನ್ನುವುದೇ ಈ ಚಿತ್ರದ ನೇರವಾದ, ಬಹಿರಂಗ ಸಂದೇಶ.
ಇದರ ಒಳ ರಹಸ್ಯ, ಗೂಢ ಸಂದೇಶ ಏನೆಂದರೆ ಚಿತ್ರದಲ್ಲಿರುವ ರಥವೇ ನಮ್ಮ ಮನುಷ್ಯ ದೇಹ. ಐದು ಕುದುರೆಗಳೇ ನಮ್ಮ ದೇಹದ ಐದು ಇಂದ್ರಿಯಗಳು (ಕಣ್ಣು, ಕಿವಿ, ಮೂಗು ನಾಲಿಗೆ, ಚರ್ಮ). ಕುದುರೆಗೆ ಇರುವ ಲಗಾಮುಗಳು ನಮ್ಮ ಮನಸ್ಸು. ಸಾರಥಿಯೇ ನಮ್ಮ ಬುದ್ಧಿ. ರಥದಲ್ಲಿ ಕುಳಿತಿರುವ ಯಜಮಾನನೇ ನಾವುಗಳಾದ ಆತ್ಮ.
ಐದು ಕುದುರೆಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇವು ಯಾವಾಗಲೂ ತಮಗೆ ಒಳ್ಳೆಯ ಅನುಭವ ನೀಡುವ ಸುಂದರ ದೃಶ್ಯಗಳ ಕಡೆಗೆ, ಇಂಪಾದ ರಾಗಗಳ ಕಡೆಗೆ, ಒಳ್ಳೆಯ ಗಂಧದ ಕಡೆಗೆ, ರುಚಿಕರ ರಸದ ಕಡೆಗೆ ಹಾಗೂ ಮೃದುವಾದ ಸ್ಪರ್ಶಗಳ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತವೆ.
ಇದರಲ್ಲಿ ಅವುಗಳ ಯಾವುದೇ ತಪ್ಪಿಲ್ಲ. ಇದು ಅವುಗಳ ಸಹಜ ಗುಣ. ಹೀಗೆ ಹೋದಾಗ ರಥ ಬೀಳುತ್ತದೆ. ಅಂದರೆ ಇಂದ್ರಿಯಗಳ ಹಿಂದೆ ಬಿದ್ದು, ದೇಹ ಅನೇಕ ರೋಗಗಳಿಗೆ ತುತ್ತಾಗಿ ಸಾಯುತ್ತದೆ. ಯಜಮಾನನಾದ ಆತ್ಮ ಸಂಕಷ್ಟಕ್ಕಿಡಾಗುತ್ತಾನೆ. ತನ್ನ ಗುರಿಯಾದ ಪರಮಾತ್ಮನೊಂದಿಗೆ ಸೇರುವುದೇ ಇಲ್ಲ.
ಒಂದು ವೇಳೆ ಸಾರಥಿಯಾದ ನಮ್ಮ ಬುದ್ದಿ, ಲಗಾಮು ಎನ್ನುವ ನಮ್ಮ ಮನಸ್ಸನ್ನು ನಿಯಂತ್ರಿಸಿದರೆ, ಕುದುರೆಗಳೆನ್ನುವ ಇಂದ್ರಿಯಗಳು ತಮ್ಮ ಆಹಾರವಾದ ರೂಪ, ರಸ, ರಾಗ, ಗಂಧ, ಸ್ಪರ್ಶ ಗಳ ಕಡೆ ಹೋಗದೆ, ದೇಹವೆನ್ನುವ ರಥ ಸರಿಯಾದ ಮಾರ್ಗದಲ್ಲಿ ನಡೆದು ಆತ್ಮ ವಾದ ನಮ್ಮನ್ನು, ಪರಮಾತ್ಮನೊಂದಿಗೆ ಒಂದುಗೂಡಿಸಲು ಸಹಾಯ ಮಾಡುತ್ತದೆ.
ಪ್ರತಿಯೊಂದು ಜೀವಿಯ ಮುಖ್ಯವಾದ ಕೆಲಸವೇ ಸುಖವನ್ನು, ಸಂತೋಷವನ್ನು ಹುಡುಕುವುದಾಗಿದೆ. ಆದರೆ ಕುದರೆಗಳ (ಇಂದ್ರಿಯಗಳ) ಮೂಲಕ ಎಂದಿಗೂ ಶಾಶ್ವತ ಸುಖ, ಸಂತೋಷ ಸಿಗುವದಿಲ್ಲ. ಜಗತ್ತು ನಿರಂತರ ಬದಲಾಗುತ್ತಿದೆ. ಜಗತ್ತಿನಂತೆ ಇಂದ್ರಿಯಗಳ ಅನುಭವಗಳಾದ ಸುಖ, ದುಃಖಗಳು ಸಹ ನಿರಂತರ ಬದಲಾಗುತ್ತಿರುತ್ತವೆ. ಈ ಪರಿಸ್ಥಿತಿಯಲ್ಲಿಯೂ ಸಹ ಶಾಶ್ವತ ಸುಖದ ಅವಕಾಶವೂ ಈ ಜಗತ್ತಿನಲ್ಲಿದೆ. ಅದುವೇ ಆತ್ಮ ಪರಮಾತ್ಮನೊಂದಿಗೆ ಒಂದಾಗುವ ಸುಖ.
ಈ ಸುಖವನ್ನು ಪಡೆಯುವದಕ್ಕಾಗಿಯೇ ಪುಣ್ಯವಂತ ಆತ್ಮಗಳಾದ ನಾವು ಮನುಷ್ಯ ದೇಹ ಎನ್ನುವ ರಥದಲ್ಲಿ ಕುಳಿತು ನಮ್ಮ ಪ್ರಯಾಣವನ್ನು ನಡೆಸುತ್ತಿದ್ದೇವೆ. ಆದರೆ ಕುದರೆಗಳಾದ ಇಂದ್ರಿಯಗಳಿಂದಲೇ ನಮಗೆ ನಿಜವಾದ ಸುಖವಿದೆ ಎನ್ನುವ ಅಜ್ಞಾನ, ನಮ್ಮ ಸಾರಥಿಯಾದ ಬುದ್ಧಿಯನ್ನು ನಿರಂತರ ನಂಬಿಸಲು ಪ್ರಯತ್ನಿಸುತ್ತಿದೆ. ಈ ಅಜ್ಞಾನವನ್ನು ಬೇಟೆಯಾಡುತ್ತ, ಮನಸ್ಸೆನ್ನುವ ಲಗಾಮನ್ನು ಹಿಡಿದು, ಇಂದ್ರಿಯಗಳೆನ್ನುವ ಕುದರೆಗಳನ್ನು ನಿಯಂತ್ರಿಸುತ್ತ, ಮನುಷ್ಯ ದೇಹ ಎನ್ನುವ ರಥವನ್ನು ಸರಿಯಾದ ದಿಕ್ಕಿನಲ್ಲಿ ನಡೆಯಿಸೋಣ. ಆಗ ನಮ್ಮ ಆತ್ಮ, ಪರಮಾತ್ಮ ಎನ್ನುವ ಪರಮಾನಂದ, ಪರಮ ಸುಖ ಎನ್ನುವ ತನ್ನ ಗುರಿಯನ್ನು ತಲುಪುತ್ತದೆ.
ಇದೇ ಈ ಚಿತ್ರದ ಮೂಲಕ ನಾನು ಹೇಳಬೇಕೆಂದುಕೊಂಡಿದ್ದ ವಿಷಯ.
( ಕೊನೆಯದಾಗಿ, ಶ್ರೇಷ್ಠ ಮನುಷ್ಯ ದೇಹ ಎನ್ನುವ ರಥದಲ್ಲಿ ಕುಳಿತಿರುವ ನಾವುಗಳು, “ರಥವನ್ನೇ (ದೇಹವನ್ನೇ) ನಾನು ಎಂದು ಭಾವಿಸುವ” ಅಜ್ಞಾನದಲ್ಲಿ ಇದ್ದೇವೆ. ಈ ಅಜ್ಞಾನದಿಂದ ನಾವೆಲ್ಲರೂ ಹೊರಬರೋಣ.)
ಎಲ್ಲರಿಗು ಅನಂತ ವಂದನೆಗಳು.
ಓಂ ನಮಃ ಶಿವಾಯ
✍️ URAIN NAMAH
ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್
2/12/2018

Comments
Post a Comment