ಮಹಾಶಿವರಾತ್ರಿಯ (04/03/19) ವಿಸ್ಮಯ ಅನುಭವ:
ಮಹಾಶಿವರಾತ್ರಿಯ ವಿಸ್ಮಯ ಅನುಭವ:
ಸ್ನೇಹಿತರೇ ಮೊನ್ನೆ ಶಿವರಾತ್ರಿಯ ಮುನ್ನಾದಿನದ ಭಾಷಣದಲ್ಲಿ, ನಾನು ಶ್ರೀ ಕೃಷ್ಣನ ಶ್ರೇಷ್ಟ ಮಾತನ್ನು ಹೇಳಿದ್ದೆ, ಏನೆಂದರೆ "ನಮ್ಮ ಕೆಲಸಗಳಿಗೆ ಫಲ ಸಿಗುವುದು ಖಚಿತ. ಆದರೆ ಫಲ ಸಿಗುವ ಸಮಯದಲ್ಲಿ ಹೆಚ್ಚು ಕಡಿಮೆ ಆಗಬಹುದು.
ಹಾಗಾಗಿ, ಒಂದು ವೇಳೆ ಫಲದ ನೀರೀಕ್ಷೆಯಿಂದ ಕೆಲಸ ಮಾಡಿ, ನಾವು ಅಂದುಕೊಂಡ ಫಲ ಸಿಗದಿದ್ದರೆ, ನಾವು ಕೆಲಸ ಮಾಡುವುದನ್ನೇ ಬಿಟ್ಟುಬಿಡುತ್ತೇವೆ.
ಆದ್ದರಿಂದ ಫಲದ ನೀರೀಕ್ಷೆ ಬಿಟ್ಟು ಕೆಲಸ ಮಾಡಬೇಕು" ಎಂದು
ಬಹುಶಃ ನನ್ನ ಮೂಲಕ ದೇವರು ಮಾಡಿಸುತ್ತಿರುವ ಕೆಲಸವೆಂದರೆ, ಜ್ಞಾನವನ್ನು ನೆನಪಿಸುವ ಹಾಗೂ ಜ್ಞಾನವನ್ನು ನೀಡುವ ಕೆಲಸ.
ನಾನು ಮಾಡುತ್ತಿರುವುದಕ್ಕೆ ಈಗ ನಿರೀಕ್ಷಿಸಿದಂತೆ ಪ್ರತಿಕ್ರಿಯೆಯ ಫಲ ಸಿಕ್ಕಿಲ್ಲ. ಆದರೂ, ನನ್ನ ಕೆಲಸ ಬಿಡಬಾರದು, ಪ್ರತಿಕ್ರಿಯೆಯ ಫಲದ ನೀರೀಕ್ಷೆಯಿಡದೆ ಕೆಲಸವನ್ನು ಕೆಲಸದ ರೀತಿ ಮಾಡಬೇಕು ಎಂದು ಈ ಪೋಸ್ಟನ್ನು ಹಾಕುತ್ತಿದ್ದೇನೆ.
ಈ ಬಾರಿಯ ಶಿವರಾತ್ರಿ "ಅಖಂಡ ಶಿವನಾಮ ಜಪ"ವನ್ನು ಮಾಡಿದ ಆರನೇ ಮಹಾಶಿವರಾತ್ರಿ ಯಾಗಿತ್ತು. ಇದಕ್ಕೂ ಮೊದಲು, ಜ್ಞಾನದಿಂದ ದೇವರನ್ನು ನಾನು ದರ್ಶನ ಮಾಡುತ್ತಿದ್ದೆ. ಆದರೆ ಈ ಬಾರಿ ಒಂದು ಘಟನೆ ಮೂಲಕ ದೇವರು ಬೇರೆ ರೀತಿಯಲ್ಲಿ ನನ್ನ ಅನುಭವಕ್ಕೆ ಬಂದರು. ಈ ಘಟನೆಯಿಂದ ಓಂ ನಮಃ ಶಿವಾಯ ಮಂತ್ರದ ಶಕ್ತಿಯೂ ನನ್ನ ಅರಿವಿಗೆ ಬಂತು. ಶಿವನ ಇರುವಿಕೆಯ, ಸಾನಿಧ್ಯದ ಅನುಭವವೂ ಆಯಿತು.
ನನ್ನ ಜೀವನದಲ್ಲಿ, ಈ ದೇಹವನ್ನು ಪಡೆದಾಗಿನಿಂದ ಇಲ್ಲಿವರೆಗೆ ಅಂದರೆ ಹುಟ್ಟಿನಿಂದ ಇಲ್ಲಿವರೆಗೆ, ಮೊಟ್ಟಮೊದಲ ಬಾರಿಗೆ ಈ ಹೊಸ ಆಶ್ಚರ್ಯಕರ ಅನುಭವ ನನಗಾಯಿತು.
ಈ ತರಹ ಘಟನೆಗಳನ್ನು ನಾನು ಕೇಳಿದ್ದೆ, ಆದರೆ Practical ಆಗಿ ಮೊದಲ ಬಾರಿಗೆ ಈ ಹೊಸ ಅನುಭವ ನನ್ನ ಅನುಭವಕ್ಕೆ ಬಂತು. ಆದರೆ ಘಟನೆ ನಡೆದ ನಂತರ ಇಂತಹ ಘಟನೆ ನಿಜವಾಗಿಯೂ ನಡೆಯಿತಾ? ಎಂದು ನಾನು ನನಗೆ ಪ್ರಶ್ನಿಸಿಕೊಂಡೆ. ಕಾರಣ ಅದನ್ನು ನಂಬಲಿಕ್ಕೇ ನನಗೆ ಆಗಲಿಲ್ಲ. ಬಹುಶಃ ಇದನ್ನು ಕೇಳಿದ ನಂತರ ತಕ್ಷಣಕ್ಕೆ ನೀವು ಸಹ ನಂಬಲಿಕ್ಕಿಲ್ಲ.
ಈ ಘಟನೆಗೆ ಸಾಕ್ಷಿಯಾಗಿ ರವಿ ಕಣೆಕಲ, ಕಿರಣ ಕಟ್ಟಿಮನಿ, ವಿಶಾಲ ಬಿಬ್ಬಳ್ಳಿ, ಆಕಾಶ ನಡುಕೇರಿ, ಮಹೇಶ ಜೋಗಿ ಮತ್ತು ಘಟನೆಗೆ ಸಂಬಂಧಿಸಿದ ಆ ಮೂರು ವ್ಯಕ್ತಿಗಳು ಇದ್ದಾರೆ.
ನಾನು ಶಿವರಾತ್ರಿ ದಿನ ಮುಂಜಾನೆಯಿಂದ ಆಹಾರ ನೀರು ಸೇವಿಸದ ಕಾರಣ ರಾತ್ರಿಯಲ್ಲಿ ಸ್ವಲ್ಪ ತೊಂದರೆಯಾಗುತ್ತಿತ್ತು. ಹೀಗಾದಾಗ ಹಿಂದಿನ ಅನುಭವಗಳಂತೆ, ನಾನು ಗುಡಿ ಹೊರಗೆ ಕುಳಿತೆ. ( ಹೊರಗೆ ತಣ್ಣನೆಯ ಗಾಳಿಗೆ ಕುಳಿತುಕೊಂಡಾಗ ಏನಾಗುತ್ತದೆಯೋ ಗೊತ್ತಿಲ್ಲ, ಆ ತಣ್ಣನೆಯ ಗಾಳಿಯ ಸಂಪರ್ಕ ಹಾಗೂ ತಣ್ಣನೆಯ ಗಾಳಿಯ ಸೇವನೆಯಿಂದ ದೇಹದಲ್ಲಿ ಶಕ್ತಿ ಬಂದ ಹಾಗೆ ಆಗುತ್ತದೆ ಹಾಗೂ ದೇಹದಲ್ಲಿನ ತೊಂದರೆ ದೂರಾಗುತ್ತದೆ.)
ರಾತ್ರಿ ಒಂದರ ಆಸುಪಾಸಿನಲ್ಲಿ ಇರಬಹುದು, ಈ ರೀತಿ ತೊಂದರೆ ಆದಾಗ ಗುಡಿಯ ಮುಂದೆ ಇರುವ ಮನೆಯ ಕಟ್ಟೆ ಹತ್ತಿರ ಕಣ್ಣು ಮುಚ್ಚಿ ಕುಳಿತಿದ್ದೆ. ಸ್ವಲ್ಪ ಹೊತ್ತಿನ ನಂತರ ಗುಡಿಯ ಒಳಗಡೆ ಇದ್ದ ಕಿರಣ ಸಹ, ಸರ್ ಒಳಗೆ ಕುಂತ್ರೆ ಒಂದೇ ಸಮನೇ ನಿದ್ರೆ ಬರುತ್ತಿದೆ, ಅದಕ್ಕಾಗಿ ಇಲ್ಲೆ ಗಾಳಿಗೆ ತಿರುಗಾಡುತ್ತೇನೆ ಎಂದು ಹೊರಗೆ ತಿರುಗುತ್ತಿದ್ದ. ಆಗ ರಸ್ತೆಯ ಆಚೆ ಸಂಧಿಯಲ್ಲಿ ಗದ್ದಲದ, ಮಗು ಕಿರುಚಿದ ಸಪ್ಪಳ ಬರ್ತಾ ಇತ್ತು. ಆಗ ಕಿರಣ್, "ಸರ್ ಒಳಗೆ ನಡೀರಿ, ಯಾರಿಗೋ ದೇವ್ವ ಹಿಡಿದ ಹಾಗೆ ಕಾಣುತ್ತಿದೆ", ಎಂದು ಹೇಳಿದ ಹಾಗೂ ಗುಡಿಯ ಒಳಗಡೆ ಹೋಗಿ ಕುಳಿತುಕೊಂಡ
ಇದು ನನಗೆ ಮೊದಲ ಅನುಭವ, ಆಗ ಕಿರಣ್ ಹೇಳಿದಂತೆ ಕಟ್ಟೆಯಿಂದ ಎದ್ದು ಗುಡಿ ಗೇಟ್ ಬಳಿ ನಿಂತುಕೊಂಡೆ. ಅಲ್ಲಿ ಮೂವರು ದೊಡ್ಡವರು ಹಾಗೂ ಒಂದು ಕೂಸು ಇತ್ತು. ಅವರು ತಾಯಿ, ಮಗಳು, ಮಗಳ ಗಂಡ ಎಂದು ಆ ನಂತರ ತಿಳಿಯಿತು.
ನಾನು ಗೇಟ್ ಬಳಿ ನಿಂತು ನೋಡುತ್ತಿದ್ದೆ, ಹಾಗೂ ಅವರು ನೇರವಾಗಿ ರೋಡಿಗೆ ಹೋಗುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರ ತಾಯಿ ತನ್ನ ಮಗಳನ್ನು ಗುಡಿಗೆ ಕರೆದುಕೊಂಡು ಬಂದಳು. ನಾನು ಆಗಲೂ ಗೇಟ್ ಬಳಿಯೇ ನಿಂತಿದ್ದೆ.
ಆಗ ನನ್ನೆದುರು ಬಂದ ಮಗಳು, ಇಲ್ಲಿ ಏನ್ ನಡಿಲತದಾ ? ಎಂದು ಮುಖ ವಕ್ರ ಮಾಡಿ ಕೇಳಿದಳು. ಮತ್ತೆ ಆಕೆಯೇ, ದೇವರು ಅನಲತರೇನು? ಎಂದು ಕೇಳಿದಳು. ಆಗ ನಾನು ಹೌದು ಅಂದೆ. ಮತ್ತೆ ಆಕೆ ಒಬ್ಬರೆ ಅನಲತರ ಅಲ್ಲ? ಎಂದು ಕೇಳಿದಳು. ಆಗ ನಾನು, ಇಲ್ಲಿ ಕುಳಿತವರೆಲ್ಲರೂ ಅಂದಿದ್ದಾರೆ, ಈಗ ಈತ ಹೇಳುತ್ತಿದ್ದಾನೆ ಎಂದೆ. ಆಕೆ ಹೌದಾ ಎಂದಳು.
ಆಗ ನಾನು ನಿನಗೆ ದೇವರು ಒಳ್ಳೆಯದು ಮಾಡ್ತಾನೆ. ನೀನು ಹೋಗು ಎಂದೆ. ಆಕೆ ಒಮ್ಮೆಗೆ ಸಿಟ್ಟಿನ ಭಾವನೆಯನ್ನು ತಂದು, ಭಯ ಹುಟ್ಟಿಸುವ ಮುಖದಿಂದ ಏನಪ್ಪಾ, ದೇವರು ಏನು ಒಳ್ಳೆಯದೂ ಮಾಡ್ಯಾನ, ಎಂದು ರಭಸದಿಂದ ಹೇಳಿದಳು. ಆಕೆಯ ಮಾತಿನಲ್ಲಿ ದೇವರ ಬಗ್ಗೆ ಅಸಮಾಧಾನ, ಅತೃಪ್ತಿ, ಸಿಟ್ಟು, ಕೋಪ ಕಾಣುತಿತ್ತು. ಆಗ ಅವರ ತಾಯಿ ಆಕೆಯನ್ನು ಉದ್ದೇಶಿಸಿ, ಇನ್ನೊಮ್ಮೆ ನೀನು ಬಂದರೆ ನಿನ್ನ ಕಣ್ಣು ಕಿತ್ತಿಹಾಕ್ತಿನಿ ಎಂದಳು. ಅದಕ್ಕೆ ಆಕೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಆಗ ನಾನು, ಹಿಂದೆ ನಿನಗೆ ದೇವರು ಒಳ್ಳೆಯದು ಮಾಡಿರಲಿಕ್ಕಿಲ್ಲ. ಇನ್ನು ಮುಂದೆ ದೇವರು ಒಳ್ಳೆಯದು ಮಾಡ್ತಾನೆ. ನಾನು ದೇವರಿಗೆ ಪ್ರಾರ್ಥನೆ ಮಾಡ್ತೀನಿ. ನಿನಗೆ ಬೆಳಕು ಸಿಗ್ತದ, ನಿನಗೆ ಇನ್ನೂಂದು ಜನ್ಮ ಸಿಗ್ತದ, ನೀನು ಈ ದೇಹ ಬಿಟ್ಟು ಹೋಗು ಎಂದೆ.
ಆಗ ಅವರ ತಾಯಿ, ಗುಡಿ ಒಳಗೆ ನಡಿ, ಎಂದಳು. ಆಗ ಅಂಜಿಕೊಳ್ಳುತ್ತ, ಅಳುತ್ತಾ ನಾ ಒಲ್ಲ ಎಂದಳು. ಆಗ ನಾನು ಓಂ ನಮಃ ಶಿವಾಯ ಹೇಳು ಅಂದೆ. ನಂತರ ಆಕೆ ತಲೆ ಗುಡೀಯ ಛಿಡಿಗೆ ತಾಗಿಸುತ್ತಾ ಕುಳಿತಳು. ನಾನು ಒಂದೇ ಸಮನೇ ಓಂ ನಮಃ ಶಿವಾಯ ಮಂತ್ರ ಜಪಿಸಿದೆ. ಆಗ ಸ್ವಲ್ಪ ಹೊತ್ತಿನ ನಂತರ ಆಕೆ, ಮಲಗಿದವರು ಹೇಗೆ
ಎಚ್ಚರವಾಗುತ್ತಾರೋ, ಆ ರೀತಿ ಎಚ್ಚರಗೊಂಡು, ತಲೆ ಎತ್ತಿ, "ಎ ಯವ್ವ ನಾ ಮನ್ಯಾಗ ಮಲಕೊಂಡಿದ್ದೆ, ಇಲ್ಲಿಗೆ ಹೆಂಗಾ ಬಂದೆ ?" ಅಂದಳು.
ಆಗ ನಾನು ಆಕೆಯ ತಲೆ ಮೇಲೆ ಕೈ ಇಟ್ಟು ಮತ್ತೆ ಮಂತ್ರ ಹೇಳಿದೆ. ನಂತರ ಆಕೆ ಎದ್ದು ನಿಂತು ಯವ್ವ ನಾನು ಪ್ರತಿ ಸಲ ಶಿವರಾತ್ರಿ ಗೆ ಒಪ್ಪತ್ತು ಮಾಡ್ತಿದ್ದೆ, ಈ ಸಲ ಮಾಡಿಲ್ಲ ಅಂದಳು. ಮತ್ತೆ ಆಕೆ, ನಾನು ಒಳಗೆ ಬರಬಹುದೇ ಎಂದು ನನಗೆ ಕೇಳಿದಳು. ಆಗ ನಾನು ಬರಬಹುದು,ಎಂದೇ.
ನಂತರ ಆಕೆ ದೇವರಿಗೆ ಬೇಡಿಕೊಂಡು ಸ್ವಲ್ಪ ಕುಳಿತಳು. ವಿಭೂತಿ ತೆಗೆದುಕೊಂಡು ಕೈಯಲ್ಲಿ ಹಿಡಿದುಕೊಂಡಳು. ಆಗ ನಾನು ವಿಶಾಲ ಗೆ ವಿಭೂತಿ ಹಚ್ಚಲು ಹೇಳಿದೆ. ವಿಶಾಲ ಅವರಿಗೆ ಹೇಳ್ರಿ ಅವರೇ ಹಚ್ಕೋತಾರ ಅಂದ. ಆಗ ಆ ಮಹಿಳೆಗೆ ವಿಭೂತಿ ಹಚ್ಚಿಕೊಳ್ಳಲು ಹೇಳಿದ ನಂತರ ಆಕೆ ಹಚ್ಚಿಕೊಂಡಳು. ನಂತರ ಹೋಗುವಾಗ ಅವರ ತಾಯಿ ವಿಭೂತಿ ಅಲ್ಲೆ ಇಡಲು ಹೇಳಿದಳು. ಆದರೆ ಆ ಮಹಿಳೆ ಈ ವಿಭೂತಿ ಒಯ್ಯಬಹುದಾ? ಎಂದು ಕೇಳಿದಳು. ಆಗ ನಾನು ಒಯ್ರಿ ಅಂದೆ.
ನಂತರ ಅವರು ಮನೆಗೆ ಹೋದರು.
ಇದಾದ ನಂತರ ನನ್ನ ಜೊತೆ ಕುಳಿತಿದ್ದೆವರೆಲ್ಲಾ ಆಶ್ಚರ್ಯದಿಂದ, ಭಯದಿಂದ ಇದನ್ನು ಗುಡಿಯಲ್ಲಿ ಕುಳಿತು ನೋಡುತ್ತಿದ್ದರು. ಆಗ ನಾನು ವಿಶಾಲಗೆ, ಈ ವಿಷಯ ನಾಳೆ ಹೇಳಿದರೆ ಬಹುಶಃ ಬಹಳಷ್ಟು ಜನ ನಂಬಲಿಕ್ಕಿಲ್ಲ ಎಂದು ಹೇಳಿದೆ. ಆತ ಹೌದು ಸರ್ ಅಂದ.
ನಾನು ಜೀವನದಲ್ಲಿ ಇಲ್ಲಿವರೆಗೆ ಆತ್ಮ ಗಳೊಂದಿಗೆ ಎದುರು ಬದರು ನಿಂತು ಮಾತಾಡಿರಲಿಲ್ಲ. ದೆವ್ವಗಳ ಬಗ್ಗೆ ಕೇಳಿದ್ದೆ ಆದರೆ ನನ್ನ ಸುಪ್ತ ಮನಸ್ಸಿಗೆ ಅಷ್ಟೊಂದು ವಿಶ್ವಾಸ ಇರಲಿಲ್ಲ.
ಆಕೆಯ ತಾಯಿ, ಆಕೆಯನ್ನು ಗುಡಿ ಒಳಗೆ ನಡಿ ಅಂದಾಗ ಆಕೆ ಒಲ್ಲ ಅಂದಳು. ಆದರೆ ನಂತರ ಆಕೆಯೇ ನಾನು ಗುಡಿ ಒಳಗೆ ಬರಬಹುದೇ? ಎಂದು ಕೇಳಿದಳು. ಹಾಗೆಯೇ ಆಕೆ ತಾನು ಮನೆಯಲ್ಲಿ ಮಲಗಿದ್ದೆ, ಇಲ್ಲಿಗೆ ಹೇಗೆ ಬಂದೆ? ಎಂದಳು.
ನಾನು ಆಕೆಗೆ, ದೇವರು ನಿನಗೆ ಒಳ್ಳೆಯದು ಮಾಡುತ್ತಾನೆ ಅಂದಾಗ ಆಕೆ ಆಕ್ರೋಶ ತೋರಿದಳು. ನಂತರ ಆಕೆಗೆ ಪ್ರಜ್ಞೆ ಬಂದಾಗ, ಸ್ವತಃ ಆಕೆ "ನಾನು ಗುಡಿಯ ಒಳಗೆ ಬರಬಹುದೇ?" ಎಂದಳು.
ಈ ಎಲ್ಲ ವರ್ತನೆ, ಆ ದೇಹದಲ್ಲಿ ಒಂದು ಬೇರೆ ಆತ್ಮ ಇತ್ತು, ಎನ್ನುವ ಬಗ್ಗೆ ಮನದಟ್ಟು ಮಾಡಿತು. ಹಾಗೆ ಆಕೆ ಮೊದಲು ಗುಡಿ ಒಳಗೆ ಬರಲು ಒಪ್ಪದೇ ಇರಲು ಕಾರಣ ಗುಡಿ ಯಲ್ಲಿ ಶಿವನ ಸಾನಿಧ್ಯವೇ ಎನ್ನುವುದನ್ನು ತಿಳಿಸಿತು. ಹಾಗೆ ಮಂತ್ರ ಜಪ ಮಾಡಿದ ನಂತರವೇ ಆ ಆತ್ಮ ಹೊರ ಹೋದ ಕಾರಣ ಮಂತ್ರಕ್ಕೆ ಎಷ್ಟು ಶಕ್ತಿ ಇದೆ ಎನ್ನುವುದನ್ನು ಸಹ ತಿಳಿಸಿತು.
ನಂತರ ನನಗೆ ಅನ್ನಿಸಿದ್ದೆನೆಂದರೆ ತನ್ನ ಅಸ್ತಿತ್ವವನ್ನು ತಿಳಿಸಲು ಹಾಗೂ ಮಂತ್ರ ಶಕ್ತಿಯನ್ನು ತೋರಿಸಲು ಆ ದೇವರೆ, ಭೂತಗಳ ಒಡೆಯ ಭೂತನಾಥನೇ ಅಂತಹ ಘಟನೆ ಘಟಿಸುವಂತೆ ಮಾಡಿದ್ದನೇ? ಎಂದು ನನಗೆ ಯೋಚಿಸುವಂತೆ ಮಾಡಿತು.
ನಂತರ ಆ ಆತ್ಮಕ್ಕೆ ನಾನು ಕೊಟ್ಟ ಮಾತಿನಂತೆ, ಆ ಆತ್ಮಕ್ಕೆ ಇನ್ನೊಂದು ಜನ್ಮ ಸಿಗುವಂತೆ ದೇವರಲ್ಲಿ ಬೇಡಿಕೊಂಡೆ. ಹಾಗೆಯೇ ಆ ಮಹಿಳೆಯ ದೇಹದಲ್ಲಿ ಇನ್ನು ಮುಂದೆ ಬೇರೆ ಯಾವುದೇ ಆತ್ಮ ಸೇರದೆ ಇರಲಿ ಎಂದು ಪ್ರಾರ್ಥನೆ ಮಾಡಿದೆ.
ಇದು ಈ ಶಿವರಾತ್ರಿಯಂದು ನನಗೆ ಮತ್ತು ಜೊತೆ ಇದ್ದ ನನ್ನ ಸಂಗಡಿಗರಾದ ರವಿ ಕಣೇಕಲ, ಕಿರಣ್ ಕಟ್ಟಿಮನಿ, ವಿಶಾಲ, ಆಕಾಶ ನಡುಕೇರಿ, ಮಹೇಶ ಜೋಗಿ ಹಾಗೂ ಆ ಮೂರೂ ವ್ಯಕ್ತಿಗಳಿಗೂ ಮರೆಯಲು ಆಗದ ಅನುಭವ.
ಇದರ ನಂತರ ನನ್ನ ಸುಪ್ತ ಮನಸ್ಸಿಗೂ ಬರುತ್ತಿರುವ ನಂಬಿಕೆಯೆಂದರೇ, ಈ ಜಗತ್ತಿನಲ್ಲಿ "ದೇಹವಿಲ್ಲದ ಆತ್ಮಗಳಿರುವದು ಸಹ ನಿಜ" ಎನ್ನುವ ವಿಚಾರ.
ನಾನು ಶಿವರಾತ್ರಿಯ ಮುನ್ನಾ ದಿನದ ಭಾಷಣದಲ್ಲಿ
(ಲಿಂಕ್ ನೋಡಿ https://m.facebook.com/story.php?story_fbid=1748520778581566&id=100002709832756)
ಹೂವಿನ ಹಾರವನ್ನು ಉದಾಹರಣೆಯನ್ನಾಗಿ ಮಾಡಿಕೊಂಡು,
ದೇಹವೆಂದರೆ ಹೂವಿನ ಹಾರದಂತೆ; ಹೇಗೆ ಹೂವಿನ ಹಾರ ಬದಲಾಗುತ್ತದೆ, ಬಾಡಿ ಹೋಗುತ್ತದೆ ಹಾಗು ಉದುರಿ ಹೋಗುತ್ತದೆ. ಆದರೆ ಧಾರಕ್ಕೆ ಏನು ಆಗುವದಿಲ್ಲ. ಅದೇ ರೀತಿ ದೇಹವು ಬಾಲ್ಯ, ಯೌವನ, ಮುಪ್ಪಾಗಿ ಬದಲಾಗುತ್ತದೆ. ಹಾಗು ದೇಹಕ್ಕೆ ಸಾವು ಬರುತ್ತದೆ. ಆದರೆ ಆತ್ಮಕ್ಕೆ ಏನು ಆಗುವದಿಲ್ಲ. ಆತ್ಮಕ್ಕೆ ಹುಟ್ಟು ಇಲ್ಲ, ಸಾವಿಲ್ಲ. ಆತ್ಮ ಶಾಶ್ವತ ಎಂದು ಹೇಳಿದ್ದೆ. ಈ ಜ್ಞಾನ ಕೇವಲ ತಾತ್ವಿಕ ವಾಗಿತ್ತು. ಆದರೆ ಹೀಗೆ ಹೇಳಿದ ಮರುದಿನವೇ ಅಂದರೆ ಶಿವರಾತ್ರಿಯಂದು ನಾನು ತಾತ್ವಿಕವಾಗಿ ಹೇಳಿದ್ದನ್ನು, ಆ ಶಿವ ಪರಮಾತ್ಮ ಪ್ರಾಯೋಗಿಕವಾಗಿ ಅನುಭವಕ್ಕೆ ಬರುವಂತೆ ಮಾಡಿದ.
ಹಾಗೆಯೇ ನನಗೆ ಬಂದ ಇನ್ನೊಂದು ಯೋಚನೆ ಎಂದರೆ, ನಮಗೂ ಅವುಗಳಿಗೂ ಬಹಳ ದೊಡ್ಡ ವ್ಯತ್ಯಾಸವೇನು ಇಲ್ಲ. ನಾವಿಬ್ಬರೂ ಮೂಲತಃ ಒಂದೇ ಆತ್ಮಗಳೇ ಆಗಿದ್ದೇವೆ. ಆದರೆ ವ್ಯತ್ಯಾಸವೆಂದರೆ ನಾವು ಅಂಗಾಂಗಗಳನ್ನು ಹೊಂದಿರುವ ಆತ್ಮಗಳು. ಆದರೆ ಅವು ಅಂಗವಿಕಲ, ದೇಹ ವಿಕಲ ಆತ್ಮಗಳು.
ಆದರೆ ನಾವು ಮಾಡುತ್ತಿರುವ ತಪ್ಪೆನೆಂದರೆ ನಮ್ಮನ್ನು ನಾವು ಆತ್ಮ ಎಂದು ಅರಿಯದೇ ನಮ್ಮನ್ನು ದೇಹವೆಂದು ಭಾವಿಸುತ್ತಿದ್ದೇವೆ. ಹಾಗೂ ನಮಗೆ ಹುಟ್ಟು ಸಾವು ಇದೆ ಎಂದು ಭಾವಿಸುತ್ತಿದ್ದೇವೆ.
ದೇಹದ ಸುಖವನ್ನು ನಮ್ಮ ಸುಖ, ದೇಹದ ಕಷ್ಟವನ್ನು ನಮ್ಮ ಕಷ್ಟವೆಂದು ಭಾವಿಸುತ್ತಿದ್ದೇವೆಯೇ, ಹೊರತು ಬಂದು ಹೋಗುವ ಕಷ್ಟ, ಸುಖಗಳಿಗೆ ನಾವು ಸಾಕ್ಷಿಗಳು ಎಂದು ಅರಿಯುತ್ತಿಲ್ಲ.
ಹಾಗೂ ಕಷ್ಟ, ಸುಖಗಳು ತಾತ್ಕಾಲಿಕ, ನಾವು ಶಾಶ್ವತ ಎನ್ನುವುದನ್ನು ತಿಳಿಯುತ್ತಿಲ್ಲ.
ನನಗೆ ಬಂದ ಇನ್ನೊಂದು ಭಾವನೆ ಎಂದರೆ, ದೇಹವಿಲ್ಲದ ಆತ್ಮಗಳ ಕುರಿತು ಅನುಕಂಪ. ಪಾಪ ಅವುಗಳು ಸಹ ಈ ಜಗತ್ತಿನಲ್ಲಿ ಇವೆ. ಆದರೆ ಅವುಗಳಿಗೆ ಏನಾದರೂ ಅನುಭವಿಸಬೇಕೆಂದರೆ ದೇಹವಿಲ್ಲ. ಅದಕ್ಕಾಗಿ ಏನಾದರೂ ಅನುಭವಿಸಲು ಇನ್ನೊಬ್ಬರ ದೇಹ ಸೇರುತ್ತವೆ. ಆಗ ದೇಹದ ಸಂಬಂಧಿಕರು, ತಂತ್ರ, ಮಂತ್ರಗಳ ಮೂಲಕ ಅವುಗಳನ್ನು ಹೊಡೆದೋಡಿಸುತ್ತಾರೆ.
ಅಂದರೆ ಯಾವ ಆತ್ಮಗಳಿಗೆ ದೇಹವಿಲ್ಲವೋ ಅವುಗಳಿಗೆ, ದೇಹದ ಮಹತ್ವ ತಿಳಿದಿದೆ. ಹಾಗೂ ದೇಹಕ್ಕಾಗಿ, ದೇಹ ಸೇರಲು ಪಡಬಾರದ ಪಾಡು ಪಡುತ್ತವೆ. ಆದರೆ ದೇಹವನ್ನು ಪಡೆದಿರುವ ನಮಗೆ, ದೇಹ ನಮಗೆ ಎಷ್ಟು ಸಹಾಯ ಮಾಡುತ್ತಿದೆ, ಈ ದೇಹಕ್ಕೆ ನಾವು ಎಷ್ಟು ಕೃತಜ್ಞತೆಯಿಂದ ಇರಬೇಕು, ಎಷ್ಟು ಧನ್ಯವಾದಗಳನ್ನು ಹೇಳಬೇಕು ಎನ್ನುವುದನ್ನು ಯೋಚಿಸುತ್ತಿಲ್ಲ.
ನಾವುಗಳು ಈ ದೇಹದಲ್ಲಿರುವ ಅತಿಥಿಗಳು ಎನ್ನುವುದನ್ನು ಮರೆತು. ನಾವೇ ದೇಹದ ಯಜಮಾನರಂತೆ ಅಹಂಕಾರದಿಂದ ನಡೆದುಕೊಳ್ಳುತ್ತೇವೆ. ನಮಗೆ ಸಹಾಯ ಮಾಡುತ್ತಿರುವ ದೇಹಕ್ಕೆ ಗೌರವ ತೋರುವುದಿಲ್ಲ, ಧನ್ಯವಾದವಂತು ಹೇಳುವುದೇ ಇಲ್ಲ. ಇದಕ್ಕೆ ವಿರುದ್ಧವಾಗಿ ದೇಹ ನಮ್ಮ ಸೇವಕ ಎಂದು ಕನಿಷ್ಠವಾಗಿ ಕಾಣುತ್ತೇವೆ.
ಇದನ್ನು ಓದುತ್ತಿರುವ ದೇಹ ಹೊಂದಿರುವ ಎಲ್ಲಾ ಆತ್ಮಗಳೇ, ನಾನು ಹೇಳುವುದು ಇಷ್ಟೇ, ನಾವೆಲ್ಲರೂ ಮೂಲತಃ ಆತ್ಮಗಳು. ಹೀಗಾಗಿ ನಾವು ಆತ್ಮಗಳು ಎನ್ನುವುದನ್ನು ಒಪ್ಪಿಕೊಳ್ಳೋಣ. ಒಪ್ಪಿಕೊಂಡು "ನಾವು ಆತ್ಮಗಳು" ಎನ್ನುವುದನ್ನು ಸದಾ ನೆನಪಿನಲ್ಲಿ ಇಡಲು ಪ್ರಯತ್ನಿಸೋಣ.
ಹಾಗೆಯೇ ಈ ದೇಹವೆನ್ನುವದು ನಮ್ಮ ಯಜಮಾನ, ನಾವು ಈ ದೇಹದಲ್ಲಿರುವ ಅತಿಥಿಗಳು ಎನ್ನುವುದನ್ನು ತಿಳಿಯೋಣ. ಇದನ್ನು ತಿಳಿದು ದೇಹ ನಮಗೆ ಮಾಡುತ್ತಿರುವ ಸಹಾಯಕ್ಕೆ ಸದಾ ಧನ್ಯವಾದ ಹೇಳುತ್ತಾ, ದೇಹಕ್ಕೆ ಕೃತಜ್ಞರಾಗಿರೋಣ. ಆಗ ಆ ದೇವರಿಗೂ ನಿಮಗೂ ಯಾವುದೇ ವ್ಯತ್ಯಾಸವಿರುವುದಿಲ್ಲ.
ಆಗ ಆ ದೇವರಲ್ಲಿ ಯಾವ ಜ್ಞಾನವಿದೇಯೋ ಆ ಜ್ಞಾನ ಹಂತ ಹಂತವಾಗಿ ನಿಮ್ಮಲ್ಲಿ ಬರುತ್ತದೆ. ಆ ದೇವರಲ್ಲಿ ಯಾವ ಶಕ್ತಿಯಿದೆಯೋ, ಆ ಶಕ್ತಿ ಹಂತ ಹಂತವಾಗಿ ನಿಮ್ಮಲ್ಲಿ ಬರುತ್ತದೆ.
ಬಹುಶಃ ಈ ಸಂದೇಶವನ್ನೆ ಆ ಶಿವನು, ಮಹಾಶಿವರಾತ್ರಿಯ ಆ ಘಟನೆಯಿಂದ ತಮಗೆ ನೀಡಲು ಬಯಸಿದ್ದಾನೆ, ಎನ್ನುವುದು ನನ್ನ ಅನಿಸಿಕೆ.
ಎಲ್ಲರಿಗೂ ನಮಸ್ಕಾರಗಳು.
ಎಲ್ಲಾ ಸಹೋದರಿಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.
ಓಂ ನಮಃ ಶಿವಾಯ
8/03/2019 ಗುರುವಾರ ರಾತ್ರಿ 10:00
https://m.facebook.com/story.php?story_fbid=1748520778581566&id=100002709832756.
Comments
Post a Comment