ಒಳಗಿನವರು ? ಹೊರಗಿನವರು ? ಅಥವಾ ಅನಿಕೇತನ ?

ಅದೊಂದು ಸೂರ್ಯ ದೇಶ. ಅಲ್ಲಿ ‌ ಕಲ್ಲು ಪುಷ್ಪಗಳಲ್ಲಿ ಅರಳಿದ ಸುಂದರ, ಸಂಪದ್ಭರಿತ ನಗರ ಕೇಂದ್ರಿತ ಸೀಮೆಕಮಲಾವತಿ ರಾಜ್ಯ. ಅದನ್ನು ಶರಣರಾಜರು ರಾಜ್ಯಭಾರ ಮಾಡುತ್ತಿದ್ದರು. ಆ ರಾಜ್ಯದಲ್ಲಿ ಅನೇಕ ಗುರುಕುಲಗಳು ವಿದ್ಯೆ ನೀಡುತ್ತಿದ್ದವು. ಅವುಗಳಲ್ಲಿ ನಂದಿ ಶಾಲೆಯೆನ್ನುವ ಪುರಾತನ ಗುರುಕುಲವಿತ್ತು. ಅದು ವಿದ್ಯೆ ಜೊತೆಗೆ ಉತ್ತಮ ಗುಣಗಳನ್ನು ಮಕ್ಕಳಲ್ಲಿ ಬಿತ್ತುವುದಕ್ಕೆ ಗುರುತಿಸಲ್ಪಡುತಿತ್ತು.


ಶರಣರಾಜ ಮಂಡಲದಲ್ಲಿ ಪ್ರಭಾವಿ ನಾಯಕರಾಗಿದ್ದ ಅನೇಕರ ಮಕ್ಕಳು ಅಲ್ಲಿ ವಿಧ್ಯೆ ಕಲಿಯುತ್ತಿದ್ದರು. ಅವರಲ್ಲಿ ರವಿತೇಜ ಎನ್ನುವ ವಿಧ್ಯಾರ್ಥಿಯೂ ಇದ್ದ. ಆತನಲ್ಲಿ ಅಲ್ಲಿನ ಗುರುಗಳ ಬಗ್ಗೆ ಗೌರವ ಶ್ರದ್ಧೆ ಇತ್ತು. ಅವರಿಂದ ಅನೇಕ ಉತ್ತಮ ಗುಣಗಳನ್ನು ಆತ ಕಲಿತ. *ಇದರ ಪರಿಣಾಮ ಆತನಲ್ಲಿ ತನ್ನ ಗುರುಕುಲದ ಬಗ್ಗೆ ಎಲ್ಲಿಲ್ಲದ ಪ್ರೇಮ, ಪ್ರೀತಿ, ಗೌರವಾದರ ತುಂಬಿ ತುಳುಕುತ್ತಿತ್ತು*. 


*ಆತ ಎಲ್ಲಿಯೇ ಹೋಗಲಿ ತನ್ನ ಗುರುಕುಲದ ಬಗ್ಗೆ ವರ್ಣನೆ ಮಾಡಿ ಹೊಗಳುತ್ತಿದ್ದ. ತನ್ನನ್ನು ಬೇರೆಯವರು ಬಾವಿಯ ಕಪ್ಪೆಯೆಂದರೂ ತನ್ನ ಗುರುಕುಲದ ಶ್ರೇಷ್ಠತೆ ಕುರಿತು ಮಾತನಾಡುವದನ್ನು ಆತ ಬಿಡುತ್ತಿರಲಿಲ್ಲ*.


ಕಾಲಚಕ್ರ ಉರುಳಿತು. ಆತನ ವಿದ್ಯೆಯ ಏರುಗತಿಯೂ ಕಾರಣಾಂತರದಿಂದ ಕೆಳಮುಖವಾಯಿತು. ಆದರೂ ಗುಣಗಳ ವಿಚಾರದಲ್ಲಿ ಆತನು ಕಿಂಚಿತ್ತು ಕಡಿಮೆ ಆಗಿರಲಿಲ್ಲ. 


ಗುರುಕುಲದಿಂದ ಹೊರಬಂದ ನಂತರ ತಾನಿರುವ ಸ್ಥಳದಲ್ಲಿ ಉಚಿತವಾಗಿ ಶಿಕ್ಷಣ ಹಾಗೂ ಸದ್ಗುಣ ಬಿತ್ತುವ ಒಂದು ಚಿಕ್ಕ ಗುರುಕುಲ ತೆರೆದ. ಅಲ್ಲಿಯ ಜನರಲ್ಲಿ ಬದಲಾವಣೆ ತರಲು ಅಖಂಡ ಶಿವನಾಮ ಜಪ ಮತ್ತಿನ್ನಿತರ ಹೊಸ ಹೊಸ ಆಚರಣೆಗಳನ್ನು ಆರಂಭಿಸಿದ. ಹೀಗೆ ದಿನಗಳು ಕಳೆದವು. ತಾನು ಆರಂಭಿಸಿದ ಚಿಕ್ಕ ಗುರುಕುಲಕ್ಕೆ ಹತ್ತು ವರ್ಷಗಳೇ ತುಂಬಿದವು. ಇದರ ಹತ್ತು ವರ್ಷಗಳ ಸಂಭ್ರಮವನ್ನು ತಾನು ಈ ಭಾಗದಲ್ಲಿ ಆರಂಭಿಸಿದ ನೂತನ *"ಕಾಮ ಪ್ರೇರಣಾ ದಿನಕ್ಕೆ ಬದಲಾಗಿ ಪ್ರೇಮ ಪ್ರೇರಣಾ ದಿನಾಚರಣೆಯನ್ನು"* ತನ್ನ ರಾಜ್ಯದ ಹತ್ತು ಗುರುಕುಲದಲ್ಲಿ ಮಾಡುವ ಮೂಲಕ ಸಂಭ್ರಮಿಸಬೇಕು ಎಂದು ನಿರ್ಧರಿಸಿದ.


ಒಂದೆರಡು ಗುರುಕುಲಗಳಲ್ಲಿ ಯಶಸ್ವಿಯಾಗಿ ತನ್ನ ಯೋಜನೆಯಂತೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ಮಾಡಿದ. 


ಇದರ ನಂತರ ತನ್ನ ಅಭಿಮಾನದ ತಾನು ಕಲಿತ ಗುರುಕುಲದಲ್ಲಿ ಕಾರ್ಯಕ್ರಮ ಆಚರಿಸಿ ಸಂಭ್ರಮ ಖುಷಿ ಹಂಚಿಕೊಳ್ಳಬೇಕೆಂದು ಯೋಚಿಸಿದ. *ತಾನು ಕಲಿತ ಗುರುಕುಲದಲ್ಲಿ ಕಾರ್ಯಕ್ರಮ ಮಾಡುವುದು ಹತ್ತಿಯಷ್ಟು ಹಗುರ ಎಂದು ಭಾವಿಸಿದ. ತಾನು ಕಲಿತ ಗುರುಕುಲದಲ್ಲಿ ತನ್ನ ಕಾರ್ಯಕ್ರಮವೆಂದು ಸಂತೋಷದಿಂದ ಪುಳಕಗೊಂಡ. ಆ ಸಂತೋಷದ ಗಳಿಗೆಗಳನ್ನು ಖುಷಿಯಿಂದ ನೆನೆಯುತ್ತಲೇ ಆ ಸಮಯದ ಗುರುಕುಲ ಮುಖ್ಯಸ್ಥರನ್ನು ಸಂಪರ್ಕಿಸಲು ಚಿಂತಿಸಿದ*. 


ಗುರುಕುಲದ ಕೆಲವು ಪ್ರಕಲ್ಪಗಳಿಗೆ ತನ್ನ ತಂದೆ ಹಾಗೂ ಹಿರಿಯ ಸಹೋದರ ಮೇಲ್ವಿಚಾರಣೆ ಸಮಿತಿ ಸದಸ್ಯರು ಆಗಿದ್ದರು ಸಹ ಅವರನ್ನು ತನ್ನ ಕೆಲಸಕ್ಕೆ ಶಿಫಾರಸ್ಸು ಮಾಡಲು ಕೇಳದೆ, ತಾನು ಕಲಿತ ಹೆಮ್ಮೆಯ ನನ್ನ ಪ್ರೀತಿಯ ಗುರುಕುಲಕ್ಕೆ ನನ್ನ ಹೊರತು ಬೇರೆಯವರನ್ನು ಏಕೆ ಕೇಳಬೇಕು ? ಎನ್ನುವ ಅಭಿಮಾನದಿಂದ ತುಂಬು ವಿಶ್ವಾಸದಿಂದ ಸ್ವತಃ ಬದಲಾದ ಸಮಯದ ಬದಲಾದ ಗುರುಕುಲದ ಪ್ರಮುಖರನ್ನು ಸಂಪರ್ಕಿಸಿದ. ಆಗ ಸ್ವಲ್ಪ ಹೊತ್ತು ಯೋಚಿಸಿದ ಪ್ರಮುಖರು, ನಮ್ಮ ವಿದ್ಯಾರ್ಥಿಗಳ ಮೂಲಕವೇ ನೀವು ಕಾರ್ಯಕ್ರಮ ಮಾಡುವುದಾದರೆ ಮಾಡಿ ಆದರೆ ನಮ್ಮ ಗುರುಕುಲದ ಒಳಗೆ ಬೇಡ. ಗುರುಕುಲ ಆವರಣ ಬಿಟ್ಟು ಹೊರಗೆ ಮಾಡಿ ಎನ್ನುವ ಮಾತನ್ನು ಅವರಿಂದ ಕೇಳಿದ. 


*ಈ ಮಾತನ್ನು ಕೇಳಿದ ಗುರುಕುಲದ ಹುಚ್ಚು ಅಭಿಮಾನಿ ರವಿತೇಜನಿಗೆ ಸಿಡಿಲು ಬಡಿದಷ್ಟೇ ಆಘಾತವಾಯಿತು. ಅರಗಿಸಿಕೊಳ್ಳಲು ಕಷ್ಟವಾಯಿತು*. 


ರೋಧಿಸಿದ. ತನಗೆ ಸಿಕ್ಕ ಸಿಕ್ಕವರ ಜೊತೆ ತನ್ನೊಂದಿಗೆ ನಡೆದ ತಿರಸ್ಕಾರ ನಡೆಯನ್ನು ಹಂಚಿಕೊಂಡ. *ಭಗ್ನಪ್ರೇಮದಲ್ಲಿ ಕಾಡುವ ನೋವಿನಂತಹ ನೋವನ್ನು ರವಿತೇಜ ಅನುಭವಿಸಿದ. ಆದರೆ ಆತನ ದುಃಖ, ನೋವು ಅರಣ್ಯರೋಧನವಾಗಿತ್ತು. ಆನೆಯ ಎದುರು ಇರುವೆಯ ಅಳುವಾಯಿತು. ಇದಕ್ಕೆ ಯಾರು ಸೂಕ್ತವಾಗಿ ಪ್ರತಿಸ್ಪಂದಿಸಲಿಲ್ಲ. ಪ್ರಮುಖರ ಪ್ರಮುಖರು ಮೌನವಾದರು*.


ನಾವು ಯಾರನ್ನು ಎಷ್ಟು ಪ್ರೀತಿಸಿದರೇನು ? ಯಾರ ಬಗ್ಗೆ ಎಷ್ಟು ಅಭಿಮಾನ ಇಟ್ಟುಕೊಂಡರೇನು ? ನಮ್ಮ ಸ್ಥಿತಿ ಅವರ ನೋಟದಲ್ಲಿ ಕೆಳಮಟ್ಟದಾಗಿದ್ದರೆ ನಾವು ಅವರಿಗೆ ಕಸಕ್ಕೆ ಸಮ ಎಂದು ಹಳಹಳಿಸಿದ. 


ತಮ್ಮ ಗುರುಕುಲದ ಆವರಣ ಬಿಟ್ಟು ಹೊರಗೆ ಕಾರ್ಯಕ್ರಮ ಮಾಡಿ ಅಂದಾಗ *ನಾನು ಈ ಗುರುಕುಲಕ್ಕೆ ಹೊರಗಿನವನೇ ?* ಎಂದು ಹುಚ್ಚನಂತೆ ತನ್ನನ್ನು ತಾನೇ ಪ್ರಶ್ನಿಸಿಕೊಂಡ. ಸ್ವಲ್ಪ ಸಮಯದ ನಂತರ ತನ್ನ ಪ್ರಶ್ನೆಗೆ ತಾನೇ ಉತ್ತರ ಕಂಡುಕೊಂಡ *ನಾನು ಗುರುಕುಲದವನೇ, ಆದರೆ ಆ ಸಂಬಂಧ ಗುರುಕುಲ ನನ್ನ ಹಿಂದಿನ ಆಚಾರ್ಯರು ಇರುವವರಿಗೆ ಮಾತ್ರ ಇತ್ತು. ಇಂದು ನಾನು ಗುರುಕುಲಕ್ಕೆ ಹೊರಗಿನವನು ಎನ್ನುವುದನ್ನು ಒಪ್ಪಿಕೊಳ್ಳಬೇಕು*. ಆದ್ದರಿಂದಲೇ ಗುರುಕುಲದ ಹೊರಗೆ ಸಂಭ್ರಮ ಆಚರಿಸಲು ಹೇಳಿದ್ದಾರೆ, ಎಂದು ಸಮಾಧಾನಪಟ್ಟುಕೊಂಡು, ನನಗೂ ಗುರುಕುಲಕ್ಕೆ ಅಷ್ಟು ಸಮಯಕ್ಕೆ ಮಾತ್ರ ಸಂಬಂಧವಿತ್ತು. ಇನ್ನೂ ಮುಂದೆ ರೋಧಿಸಬಾರದು ಯಾರಿಗೂ ದೂರು ಹೇಳಿಕೊಳ್ಳಬಾರದು ಎಂದು ನಿರ್ಧರಿಸಿದ.


ಆತನಲ್ಲಿ ಒಂದೇ ವಿಚಾರ ಮೂಡಿತು ನಮ್ಮ ಸ್ಥಿತಿ ಉತ್ತಮವಾಗಿದ್ದರೆ ನಾವು ಇನ್ನೊಂದಕ್ಕೆ, ಇನ್ನೊಬ್ಬರಿಗೆ ತೋರುವ ಪ್ರೀತಿ, ಅಭಿಮಾನಕ್ಕೆ ಏನಾದರೂ ಬೆಲೆ ಇದೆ. ನಮ್ಮ ಸ್ಥಿತಿಯೇ ಉತ್ತಮವಾಗಿಲ್ಲದಿದ್ದರೆ ಜೀವಕ್ಕಿಂತ ಹೆಚ್ಚಿನ ಅಭಿಮಾನ ಇಟ್ಟುಕೊಂಡರು, ಜೀವಕ್ಕಿಂತ ಹೆಚ್ಚು ಪ್ರೀತಿಸಿದರು ಎಲ್ಲವೂ ಕಾಲ ಕಸಕ್ಕೆ ಸಮ.


ಸೀಮೆಕಮಲಾವತಿ ರಾಜ್ಯದ ಮಂಡಲದ ಪ್ರಭಾವಿ ಆಗಿದ್ದ ಹಾಗೂ ಗುರುಕುಲ ಪ್ರಕಲ್ಪಗಳ ಸದಸ್ಯರಾಗಿದ್ದ ತನ್ನ ತಂದೆ, ಅಣ್ಣನ ಮೂಲಕ ಗುರುಕುಲದ ಪ್ರಮುಖರನ್ನು ಸಂಪರ್ಕಿಸಿದರೆ ಆಗ ಅವರು ಇದೆ ರೀತಿ ಹೇಳುತ್ತಿದ್ದರೆ ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ. ಒಂದು ಕವನದ ಮೂಲಕ ತನ್ನನ್ನೇ ಸಂತೈಸಿಕೊಂಡ


****


*ಒಳಗಿನವರು ಹೊರಗಿನವರು*


ಹಳಹಳಿಸದಿರು ಮನವೇ 

ಜೀರ್ಣಿಸಿಕೋ ಜಗದ ವಾಸ್ತವ 


ನಮ್ಮ ಅವಶ್ಯಕತೆ ಇದ್ದರೆ 

ನಾವು ಉತ್ತಮ ಸ್ಥಾನಮಾನದಲ್ಲಿದ್ದರೆ

ನಮ್ಮಲ್ಲಿ ಅಭಿಮಾನವಿಲ್ಲದಿದ್ದರೂ

ನಮ್ಮಲ್ಲಿ ಪ್ರೇಮ ಭಾವವಿಲ್ಲದಿದ್ದರೂ

ಎದುರಿನವರಿಗೆ ನಾವು ಅಂತರಂಗದೊಳಗಿನವರು, ಬೇಕಾದವರು


ನಮ್ಮ ಅವಶ್ಯಕತೆಯೇ ಇಲ್ಲದಿದ್ದರೆ

ನಾವು ಉತ್ತಮ ಸ್ಥಾನದಲ್ಲಿಲ್ಲದಿದ್ದರೆ

ನಮ್ಮಲ್ಲಿ ಎಷ್ಟು ಅಭಿಮಾನವಿದ್ದರೇನು ? 

ನಮ್ಮಲ್ಲಿ ಎಷ್ಟು ಪ್ರೀತಿಯಿದ್ದರೇನು ?

ನಾವು ಬಹಿರಂಗದಹೊರಗಿನವರು, ನಾವು ಗೊತ್ತಿಲ್ಲದವರು


ಹಳಹಳಿಸದಿರು ಮನವೇ

ಜೀರ್ಣಿಸಿಕೋ ಜಗದ ವಾಸ್ತವ


******


ಆದರೂ ತನ್ನ ಸಂಕಲ್ಪ ಬಿಡಲಿಲ್ಲ ಅನೇಕ ಗುರುಕುಲಗಳನ್ನು ತನ್ನ ಸ್ವ ಪ್ರಯತ್ನದಿಂದ ಸಂಪರ್ಕಿಸಿದ, ಕೆಲಸದ ನಡುವೆಯೂ ತಿರುಗಾಡಿದ, ಅಲೆದಾಡಿದ. ಭರವಸೆ ಮೂಡಿಸಿದ ಅನ್ಯ ವ್ಯಕ್ತಿಗಳು ಸಹ ಖಾಲಿ ಕೈ ತೋರಿಸಿದರು, ಹತಾಶೆಗೊಳಿಸಿದರು.


 ಆದರೂ ಪ್ರಯತ್ನ ಬಿಡಲಿಲ್ಲ. ಅನೇಕ ಪ್ರಯತ್ನಗಳ ನಂತರ ರಾಜ್ಯದ ಬೇರೆ, ಬೇರೆ ಗುರುಕುಲಗಳಲ್ಲಿ ತಾನು ಯೋಜಿಸಿದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ರಾಜ್ಯದ ಇತರರಿಗೆ ಮಾದರಿಯಾಗುವಂತೆ, ಇತರರು ಕೂಡ ತನ್ನನ್ನು ಅನುಸರಿಸುವಂತೆ ಪ್ರೇರಣೆ ಮೂಡಿಸುವ ಕಾರ್ಯಕ್ರಮ ಮಾಡಿದ. ತನು ಮನ ಧನ ವ್ಯಯಿಸಿದ. ಸಂಭ್ರಮ ಆಚರಣೆಯೊಂದಿಗೆ ಸದ್ಭಾವದ ದೈವಿ ತರಂಗಗಳನ್ನು ಸೀಮೆಕಲಾವತಿ ರಾಜ್ಯದಲ್ಲಿ ಹರಡಿದ.


 ಎಲ್ಲಾ ಮಾಡಿದ ನಂತರ ಆತನ ಈ ಮೊದಲ ವಿಚಾರಗಳು ಅಂತ್ಯದಲ್ಲಿ ಹಾಗೆಯೇ ಉಳಿಯಲಿಲ್ಲ. *ಆಗುವುದೆಲ್ಲವು ಒಳ್ಳೆಯದಕ್ಕೆ ಆಗುತ್ತದೆ ಎನ್ನುವ ಗೀತೆಯ ಮಾತನ್ನು ನೆನಪಿಸಿಕೊಂಡ.* 


ಸಂತರು, ನಮ್ಮ ಜೀವಾತ್ಮದ ಒಳಿತಿಗಾಗಿ ನಾನು ನನ್ನದು ಎನ್ನುವುದನ್ನು ಬಿಡಬೇಕು ಎಂದು ಹೇಳುವುದನ್ನು ಕೇವಲ ಮಾತಿನಲ್ಲಿ ಇಲ್ಲಿವರೆಗೆ ಕೇಳಿದ್ದೆ. ಆದರೆ ಹಾಗೆ ಏಕೆ ಹೇಳಿದರು ಎನ್ನುವುದು ಈಗ ಪ್ರಾಯೋಗಿಕವಾಗಿ ರಾಜ್ಯದ ಅನೇಕ ಗುರುಕುಲಗಳ ಪ್ರೀತಿ, ಪ್ರೇಮದ ಸವಿಯುಂಡಾಗ ಅರಿಯಲು ಸಾಧ್ಯವಾಯಿತೆಂದು ಚಿಂತಿಸಿದ.


*ನನ್ನ ಗುರುಕುಲದಿಂದ ಹೊರಗೆ ಹಾಕಿರುವುದರಿಂದ ನನಗೆ ಇಂದು ರಾಜ್ಯದ ಎಲ್ಲಾ ಗುರುಕುಲಗಳು ನನ್ನದೆ ಅನಿಸುತ್ತಿವೆ. ಇಲ್ಲದಿದ್ದರೆ ಇಂದು ಕೇವಲ ಒಂದಕ್ಕೆ ಮಾತ್ರ ಅಂಟಿಕೊಂಡಿರುತ್ತಿದ್ದೆ*. 


ಎಲ್ಲಿಯವರೆಗೆ ನಾನು ನನ್ನದು ಎನ್ನುವುದು ಇರುತ್ತದೆ ಅಲ್ಲಿವರೆಗೆ ಪೂರ್ಣ ವಿಶ್ವವೇ ನನ್ನದು ಎನ್ನುವ ವಿಶಾಲ ಭಾವ ಮೂಡುವುದಿಲ್ಲ. ಪೂರ್ಣ ವಿಶ್ವವೇ ನನ್ನದು ಆಗುವುದಿಲ್ಲ. ಹೀಗಾಗಿ ಏನಾಯಿತು ಒಳ್ಳೆಯದೇ ಆಯಿತು. ನನ್ನಲ್ಲಿಯ ಒಂದು ಭಾಗದ "ನಾನು, ನನ್ನದು" ಎನ್ನುವುದು ಹೊರಟು ಹೋಯಿತು.


ಈಗ ಎಲ್ಲರೂ ನನ್ನವರೆ. ಹೊರಗೆ ಹಾಕಿದವರು ನನ್ನವರೆ. ಇಡೀ ರಾಜ್ಯವೇ ನನ್ನದು, ಎನ್ನುವ ವಿಶಾಲ ಭಾವದಲ್ಲಿ ಶಾಂತನಾದ.


ಮುಂದುವರಿದು, ಕುವೆಂಪು ಈ ಕಾರಣದಿಂದಾಗಿಯೇ ಬಹುಶಃ ಅನಿಕೇತನ ಕವಿತೆ ಬರೆದಿರಬಹುದು ಎಂದು ಚಿಂತಿಸಿದ. 


ಓ! ನನ್ನ ಚೇತನ

ಆಗು ನೀ ಅನಿಕೇತನ ||


ರೂಪ ರೂಪಗಳನು ದಾಟಿ

ನಾಮ ಕೋಟಿಗಳನು ಮೀಟಿ

ಎದೆಯ ಬಿರಿಯ ಭಾವದೀಟಿ


ನೂರು ಮತದ ಹೊಟ್ಟ ತೂರಿ

ಎಲ್ಲ ತತ್ವದೆಲ್ಲೆ ಮೀರಿ

ನಿರ್ದಿಗಂತವಾಗಿ ಏರಿ


ಎಲ್ಲಿಯೂ ನಿಲ್ಲದಿರು

ಮನೆಯನೆಂದು ಕಟ್ಟದಿರು

ಕೊನೆಯನೆಂದು ಮುಟ್ಟದಿರು

ಓ! ಅನಂತವಾಗಿರು


ಅನಂತ ತಾನ್ ಅನಂತವಾಗಿ

ಆಗುತಿಹನೆ ನಿತ್ಯಯೋಗಿ

ಅನಂತ ನೀ ಅನಂತವಾಗು

ಆಗು ಆಗು ಆಗು ಆಗು


ಓ ನನ್ನ ಚೇತನ 

ಆಗು ನೀನು ಅನಿಕೇತನ

ರೂಪ ರೂಪವ ದಾಟಿ

ಭಾವಗಳೆಲ್ಲವನ್ನು ಮೀಟಿ 

ಎದೆಯ ಭೀರಿಯೆ ಭಾವ ದಾಟಿ

ಓ ನನ್ನ ಚೇತನ 

ಆಗು ನೀ ಅನೀಕೇತನ


ಓ ನನ್ನ ಚೇತನ 

ಆಗು ನೀ ಅನಿಕೇತನ......


ಈ ಕವಿತೆಗೆ ರವಿತೇಜ ತನ್ನ ಸಾಲುಗಳನ್ನು ಸೇರಿಸಿದ


ನಾನು ನನ್ನದು ಎಂದು ಕಟ್ಟಿಕೊಂಡು

ದ್ವೇಷ ಅಸೂಯೆ ಇಟ್ಟುಕೊಂಡು

ಏನನ್ನು ತೆಗೆದುಕೊಂಡು 

ಹೋಗುವುದಿದೆ ರವಿತೇಜ ? 

ಆಗು ನಿನ್ನ ಕಿರಣಗಳಂತೆ

ಜಗದಗಲ, ಮುಗಿಲಗಲ, ತುಂಬಾ ವಿಶಾಲ 

ಒಳಗಿನವರು ಹೋರಗಿನವರು ಎಂಬ ಬೇಧ ಬಿಟ್ಟು

ಎಲ್ಲರೂ ದೇವರವರು ಎಂಬ ವಿಚಾರವಿಟ್ಟು

ಆಗು ನೀನು ಖಾಲಿ, 

ಆಗ ದೇವರೊಲುಮೆ ನಿನ್ನ ಪಾಲಿ


ನೀನೆ ಎಲ್ಲಾ 

ನಿನ್ನ ಹೊರತು 

ನಾನು ಏನು ಇಲ್ಲಾ...

U R ALL, I NOT


✍️ URAIN NAMAH 

(ಈ ಪದ ಸತ್ಯ ಯುಗಕ್ಕೆ ಮುನ್ನುಡಿ 

ಈ ಪದ ಯುಗ ಪರಿವರ್ತನೆಗೆ ನಾಂದಿ) 


(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ)


********

Comments

Popular posts from this blog

ಅಂಧ ಹೇಳವರು