*ವೃತ್ತಿ ಧರ್ಮ*
ಜೀವನದಲ್ಲಿ ಎಲ್ಲರೂ ಒಂದೊಂದು ವೃತ್ತಿಗಳನ್ನು ಮಾಡುತ್ತೇವೆ. ನಮ್ಮ ವೃತ್ತಿಗಳನ್ನು ನಾವು ಮಾಡುವುದರಿಂದ ನಮಗೆ ಅದಕ್ಕೆ ಸಂಬಂಧಿಸಿದಂತಹ ಫಲ ಅಥವಾ ವೇತನ ಸಿಗುತ್ತದೆ. ಹೀಗಾಗಿ ನಮ್ಮ ವೃತ್ತಿ ನಮ್ಮಿಂದ ಏನನ್ನು ನಿರೀಕ್ಷೆ ಮಾಡುತ್ತದೆ, ಅದಕ್ಕೆ ತಕ್ಕಂತೆ ಇತರ ನಿರೀಕ್ಷೆ ಮಾಡದೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ನಾವು ನಮ್ಮ ವೃತ್ತಿ ಧರ್ಮ ಪಾಲಿಸಿದಂತೆ.
ಆದರೆ ನಾವು ದಾರಿ ತಪ್ಪುತ್ತಿರುವುದು, ಸಮಾಜ, ದೇಶ ದಾರಿ ತಪ್ಪುತ್ತಿರುವುದು ಇಲ್ಲಿಯೇ. ನಾವು ನಮ್ಮ ಸ್ವಂತ ವೃತ್ತಿ ಮಾಡಲು ಅಡ್ಡಡ್ಡ ನಿರೀಕ್ಷೆಗಳನ್ನು ವೃತ್ತಿಗೆ ಸಂಬಂಧಿಸಿದವರಿಂದ ಇಟ್ಟುಕೊಳ್ಳುತ್ತೇವೆ.
ಈ ಕಾರಣದಿಂದಲೇ ಇಂದು ಎಲ್ಲೆಡೆ ಭ್ರಷ್ಟಾಚಾರ, ಲಂಚ, ಅನಾಚಾರಗಳು ತಾಂಡವವಾಡುತ್ತಿದೆ. ಯಾರಿಗೂ ಸರಿಯಾದ ರೀತಿಯಲ್ಲಿ ಸರ್ಕಾರದ ಸೇವೆಗಳಾಗಲಿ, ಇನ್ನಿತರ ಉದ್ದೇಶಗಳ ಸೇವೆಗಳು ಸರಿಯಾಗಿ ಲಭ್ಯವಾಗುತ್ತಿಲ್ಲ.
ಇದರಿಂದ ವ್ಯಕ್ತಿ ತನ್ನ ದೃಷ್ಟಿಯಲ್ಲಿ ಚಿಕ್ಕವನಾಗುತ್ತಾನೆ. ಸಮಾಜ, ದೇಶ, ದೇವರ ದೃಷ್ಟಿಯಲ್ಲಿಯೂ ದೋಷಿಗಳಾಗುತ್ತೇವೆ.
ಇದನ್ನು ಹೇಳಲು ಕಾರಣ ಇಂದಿನ ಒಂದು ಘಟನೆ ಒಬ್ಬರ ಜೀವನದ ಭೂತಕಾಲಕ್ಕೆ ಕರೆದುಕೊಂಡುಹೋಯಿತು.
ಅದು ಬಹುಶಃ ಇಪ್ಪತ್ತು ವರ್ಷಗಳ ಹಿಂದಿನ ವಿಷಯ. ಆತ ಡಿಗ್ರಿ ಓದುತ್ತಿದ್ದ ಸಮಯ. ದೇಹದ ಅನಾರೋಗ್ಯದ ಸಮಸ್ಯೆ ಆತನನ್ನು ಕಾಡುತ್ತಿತ್ತು. ಆಗ ಒಂದು ನಡು ರಾತ್ರಿ ಒಮ್ಮಿಂದೊಮ್ಮೆಲೆ ಸಮಸ್ಯೆ ಉಲ್ಬಣವಾಯಿತು. ಆ ಕುಟುಂಬದವರೆಲ್ಲರೂ ಗಾಬರಿಯಾದರು. ವೈದ್ಯರ ಹತ್ತಿರ ಹೋಗಲು ನೋಡು ರಾತ್ರಿಯಲ್ಲಿ ಯಾವುದೇ ವಾಹನ ಸಿಗಲಿಲ್ಲ. ಆ ಗಂಭೀರ ಅಪಾಯದ ಸ್ಥಿತಿಯಲ್ಲಿಯೇ ಹಾಗೆ ನಡೆಯುತ್ತಾ ಕುಟುಂಬದವರು ಒಟ್ಟಿಗೆ ಹೋದರು. ಒಂದಿಬ್ಬರು ಡಾಕ್ಟರ್ ಗಳ ಮನೆ ಹತ್ತಿರ ಕೂಗಿದರು ಯಾರು ಏಳಲಿಲ್ಲ.
ನಡೆಯುತ್ತಲೇ ಸ್ವಲ್ಪ ಮುಂದೆ ಹೋದಾಗ ಇನ್ನೊಬ್ಬ ಡಾಕ್ಟರ್ ಮನೆ, ಆ ಡಾಕ್ಟರ್ ಹತ್ತಿರ ಇವರು ಎಂದಿಗೂ ತೋರಿಸುತ್ತಲೇ ಇರಲಿಲ್ಲ. ಈಗ ನಡು ರಾತ್ರಿ ಗಂಭೀರ ಸಮಸ್ಯೆಗೆ ಅವರ ಮನೆ ಹತ್ತಿರ ಬಂದಿದ್ದೇವೆ. ಏಳುತ್ತಾರೋ, ಇಲ್ಲವೋ ಎನ್ನುವ ಅನುಮಾನ. ಆದರೂ ಕುಟುಂಬದವರು ಡಾಕ್ಟರ್ ಅವರನ್ನು ಕೂಗಿದರು. ಆಗ ಸ್ವಲ್ಪ ಹೊತ್ತಿನಲ್ಲಿಯೇ ಡಾಕ್ಟರ್ ಹೊರಗೆ ಬಂದು ವಿಚಾರಿಸಿ. ಒಳಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರು. ಆಗ ಇಡೀ ಪರಿವಾರದ ಮನಸ್ಸಿನಲ್ಲಿ ಮನೆ ಮಾಡಿದ್ದ ಆತಂಕದ ಕ್ಷಣಗಳು ದೂರವಾದವು. ಆ ವ್ಯಕ್ತಿಯೂ ಆ ಸಮಯದ ಅಪಾಯದಿಂದ ಪಾರಾದ.
ಇದನ್ನೇ ನಾನು ವೃತ್ತಿ ಧರ್ಮ ಎಂದು ಕರೆಯುತ್ತೇನೆ. ಒಬ್ಬರು ಸಾಯುವ ಸ್ಥಿತಿಯಲ್ಲಿದ್ದಾರೆ ಆದರೂ ಡಾಕ್ಟರ್ ಆದವರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಮಹತ್ವ ಕೊಡುತ್ತಿದ್ದರೆ ವೈದ್ಯನಾಗಿರುವದರ ಫಲವೇನು ?
ಇದೇ ರೀತಿ ಅನೇಕ ರೀತಿಯ ವೃತ್ತಿಗಳವರು ಅನೇಕ ವೃತ್ತಿಗಳನ್ನು ಮಾಡುತ್ತಿದ್ದರು ಯಾರು ತಮಗೂ ಒಂದು ವೃತ್ತಿ ಧರ್ಮ ಇದೆ. ಅದನ್ನು ಪಾಲನೆ ಮಾಡಬೇಕು ಎನ್ನುವ ಚಿಂತನೆ ಮಾಡುತ್ತಿಲ್ಲ. ಹುಸಿ ಜಂಬವನ್ನು ತೋರಿಸುತ್ತಾ, ಅನೇಕ ಸ್ವ ಹಿತದ ಲೋಭಿಗಳಾಗಿ ತಮ್ಮ ದೃಷ್ಟಿಯಲ್ಲಿ ತಾವೇ ಚಿಕ್ಕವರಾಗುತ್ತಿದ್ದಾರೆ. ಜನರ ಹಿಡಿ ಶಾಪಕ್ಕೆ ಗುರಿಯಾಗುತ್ತಿದ್ದಾರೆ.
ಈಗ ಹೇಳಿರುವ ವೈದ್ಯ ಮತ್ತಾರು ಅಲ್ಲ. ಇಂದು ನಿಧನರಾದ ಡಾಕ್ಟರ್ ಪಿ.ಎಚ. ಶಾಹ.
ಕೆಲವರಿಗೆ ವೃತ್ತಿ ಧರ್ಮ ಪಾಲಿಸುವುದರಿಂದ ಏನು ಸಿಗುತ್ತದೆ ? ಎನ್ನುವ ಪ್ರಶ್ನೆ ಕಾಡಬಹುದು. ಅದಕ್ಕೆ ಉತ್ತರ, ನಾವು ಇರಬಹುದು, ಇಲ್ಲದೆ ಇರಬಹುದು. ಆದರೆ ನಮ್ಮ ವೃತ್ತಿ ಧರ್ಮದಿಂದ ಸಹಾಯ ಪಡೆದ ಪ್ರಾಮಾಣಿಕ ವ್ಯಕ್ತಿಯ ಮನಸ್ಸು, ಪ್ರಾಮಾಣಿಕವಾಗಿ ನಮಗಾಗಿ ಮಿಡಿಯುತ್ತದೆ.
ಡಾ. ಪಿ.ಎಚ್.ಶಾಹ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ದೇವರು ಅವರ ಆತ್ಮಕ್ಕೆ ಉತ್ತಮ ಗತಿ ನೀಡುವಂತಾಗಲಿ.
ಓಂ ನಮಃ ಶಿವಾಯ.
✍️ URAIN NAMAH
(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ)

Comments
Post a Comment