ಕುಂಭ ಮೇಳ


 ಯುವಕರು ಮಕ್ಕಳಿರುವಾಗ ದೇವರಂತೆ ಇರುತ್ತಾರೆ. ಯೌವನಕ್ಕೆ ಕಾಲಿಟ್ಟ ಕೂಡಲೇ ಇಂದಿನ ಪರಿಸರ ವಾತಾವರಣದ ಪ್ರಭಾವದಿಂದ ಬೇರೆಯೇ ಆಗುತ್ತಿದ್ದಾರೆ. ದುಶ್ಚಟ ಹೊಂದಿದ ಜನರ ಸಹವಾಸ. ದುಶ್ಚಟಗಳ ಸಂಗ ಮಾಡಿ. ಯೌವನದಲ್ಲಿ ಮುದುಕರಂತೆ ಕಾಣುತ್ತಿದ್ದಾರೆ. ಈಗಿನ ಬಹುತೇಕ ಹುಡುಗರ (ಎಲ್ಲರೂ ಅಲ್ಲ) ಬಾಯಿಯಲ್ಲಿ ಗುಟ್ಕಾ, ಕಣ್ಣಿನಲ್ಲಿ ಮದ್ಯಪಾನದ ನಶೆ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ, ಅವರನ್ನು ಸದಾಚಾರದ ಸನ್ಮಾರ್ಗದ ಕೆಲಸಗಳಲ್ಲಿ ಕಾಣುವುದು ಅಪರೂಪ. 


ಅದರಲ್ಲಿಯೂ ಯುವ ಸಮೂಹ ಸದಾಚಾರ, ಸನ್ಮಾರ್ಗದ ಕಡೆ ಆಸಕ್ತಿ ತೋರುವುದು ಸಹ ವಿರಳ.


ಯಾವುದೇ ಸದಾಚಾರವು ದೇಹ, ವಚನ, ಮನಸ್ಸು ಈ ಮೂರನ್ನೂ ಒಂದುಗೂಡಿಸಿ ಮಾಡಿದಾಗ ಫಲ ನೀಡುತ್ತದೆ. ದೇವರನ್ನು ತಲುಪುತ್ತದೆ. 


ಈ ಮೂರು ಒಟ್ಟಿಗೆ ಇಲ್ಲದಿದ್ದರೂ ಕೇವಲ ಯಾವುದಾದರೂ ಒಂದನ್ನಾದರೂ  ಸನ್ಮಾರ್ಗದಲ್ಲಿ ತೊಡಗಿಸಿದಾಗ, ಸಮಯ ಕಳೆದಂತೆ ಉಳಿದ ಮೂರು ಸಹ ಒಂದುಗೂಡುತ್ತವೆ. 


ಹೀಗಾಗಿ ಆರಂಭದಲ್ಲಿ ಕನಿಷ್ಠ ಒಂದು ಅಂತ:ಕರಣ ಉತ್ತಮ ಮಾರ್ಗದಲ್ಲಿದ್ದರೆ ಅದು ದೊಡ್ಡ ಸಾಧನೆಯೇ.


ಇದು ಹೇಳುವುದಕ್ಕೆ ಕಾರಣ, 144 ವರ್ಷಗಳಿಗೊಮ್ಮೆ ಬರುವ, ಎರಡು ಪೀಳಿಗೆಯವರಲ್ಲಿ ಒಬ್ಬರು ಮಾತ್ರ ಕಾಣಲು ಸಾಧ್ಯವಾದ ಈಗ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ನನಗೆ ಹೋಗುವ ಮನಸ್ಸಿದ್ದರೂ, ಅವಕಾಶವಿದ್ದರೂ ಕೆಲವು ಕಾರಣಗಳಿಂದ ಹೋಗಲು ಸಾಧ್ಯವಾಗುತ್ತಿಲ್ಲ. 


ಆದರೆ ನಮ್ಮ ಬಸವನಗರದ ಹುಡುಗ  ಜನ ನಿಬಿಡ, ಚಳಿಯಿಂದ ಕೊರೆಯುವ ದೂರದ ಉತ್ತರ ಪ್ರದೇಶದ ಪ್ರಯಾಗಕ್ಕೆ ಹೋಗುವ ಮನಸ್ಸು ಮಾಡಿದ್ದಲ್ಲದೆ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾನೆ.


ಈತನಿಗೆ ನಮ್ಮ ಕಡೆಯಿಂದ ತುಂಬು ಹೃದಯದ ಶುಭಾಶಯಗಳು. ಈ ಉತ್ತಮ ಆಸಕ್ತಿ ನಿನ್ನ ಜೀವನದಲ್ಲಿ ಮಂಗಳವನ್ನುಂಟು ಮಾಡಲಿ ಎಂದು ಹಾರೈಸುತ್ತೇನೆ. 


ಕುಂಭ ಮೇಳದ ಬಗ್ಗೆ ಹೇಳುವುದಾದರೆ ಕುಂಭ ಮೇಳದ ಈ ಸಮಯದಲ್ಲಿ ಅಮೃತದ ಅಂಶ ನೀರಿನಲ್ಲಿ ಪುನಃ ಪ್ರಕಟವಾಗುವುದರಿಂದ ಅನೇಕ ದೋಷಗಳು ಪಾಪಗಳು ನಾಶವಾಗುತ್ತವೆ ಎಂದು ಹೇಳಲಾಗಿದೆ.


ವೈಯಕ್ತಿಕವಾಗಿ ನಾನು ಇದರ ಬಗ್ಗೆ ಹೇಳುವುದಾದರೆ, ಗಾಳಿ ಬೆಂಕಿ ಭೂಮಿ ಇವುಗಳಿಗೆ ಹೋಲಿಸಿದರೆ ನೀರಿಗೆ ಭಾವನೆಗಳನ್ನು ಗ್ರಹಿಸುವ ಹಾಗೂ ಭಾವನೆಯಂತೆ ನೀರಿನ ಅಣು ರಚನೆ, ನೀರಿನ ಸ್ವಭಾವ, ನೀರಿನ ಶಕ್ತಿ ಪರಿವರ್ತನೆಯಾಗುತ್ತದೆ. ಅನೇಕ ವೈಜ್ಞಾನಿಕ ಸಂಶೋಧನೆಗಳಿಂದ ಇದು ಸಾಬೀತಾಗಿದೆ. 


ಒಂದು ಲೋಟ ನೀರು ಮುಂದೆ ಇಟ್ಟುಕೊಂಡು ಕೇವಲ ಕೊಲೆ, ಹಿಂಸೆ, ನೋವು, ದುಃಖಗಳ ಋಣಾತ್ಮಕ ಮಾತುಗಳನ್ನು ಮತ್ತು ಭಾವನೆಗಳನ್ನು ಹೊರ ಹಾಕಿದಲ್ಲಿ ಆ ನೀರಿನಲ್ಲಿ ಬಹು ಬೇಗ ಋಣಾತ್ಮಕ ಶಕ್ತಿ ಬರುತ್ತದೆ. 


ಅದೇ ಒಂದು ಲೋಟ ನೀರನ್ನು ಇಟ್ಟುಕೊಂಡು ಸಂತೋಷ, ಭಕ್ತಿ, ಶ್ರದ್ಧೆ, ಪ್ರೀತಿ ಪ್ರೇಮದ ಸಕಾರಾತ್ಮಕ ಮಾತುಗಳನ್ನು,  ಭಾವನೆಗಳನ್ನು ಹಾಕಿದಾಗ ಆ ನೀರಿನ ಅಣು ರಚನೆ, ನೀರಿನ ಸ್ವಭಾವ, ನೀರಿನ ಶಕ್ತಿ ಅತಿ ವೇಗವಾಗಿ ಸಕಾರಾತ್ಮಕವಾಗಿ ಪರಿವರ್ತನೆಯಾಗುತ್ತದೆ. 


ಈ ಕಾರಣದಿಂದ ಎಲ್ಲೆಲ್ಲಿಂದಲೋ ಬಂದಿರುವ ಅದೆಷ್ಟೋ ಸಾಧು ಸಂತರು ತಪಸ್ವಿಗಳು ನದಿಗಳ ಸಂಗಮದಲ್ಲಿ ಬಿಡಾರಹೂಡಿ ಧಾರ್ಮಿಕ ಪ್ರವಚನ, ಅನುಷ್ಠಾನ, ಜಪ ತಪ ಕೈಗೊಳ್ಳುವುದರ ಪ್ರಭಾವ ನೀರಿನ ಮೇಲೆಯೂ ಆಗುತ್ತದೆ. ಅಂತಹ ನೀರಿನಲ್ಲಿ ಸ್ನಾನ ಮಾಡುವವರ ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಉಂಟಾಗಬಹುದು. 


ಇನ್ನೊಂದು ಮೂಲದ ಪ್ರಕಾರ ಈ ಸಮಯದಲ್ಲಿ ಗ್ರಹಗಳು ಒಂದು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಸೂರ್ಯ ದೇವರ ಬೆಳಕಿನ ಅಂಶ ತ್ರಿವೇಣಿ ಸಂಗಮದ ನೀರಿನಲ್ಲಿ ಅಮೃತದಂತಹ ಪರಿಣಾಮದ ಉಂಟುಮಾಡುತ್ತದೆ ಎಂದು ಹೇಳುತ್ತಾರೆ. 


ಅದು ಏನೇ ಇರಲಿ. ಒಂದಂತೂ ಸತ್ಯ. ಕುಂಭ ಮೇಳದಲ್ಲಿ ನಮ್ಮ ಕಣ್ಣಿನಿಂದ, ಕಿವಿಯಿಂದ, ಸ್ಪರ್ಶ ಎಲ್ಲಾ ಇಂದ್ರಿಯಗಳಿಂದ ಕೇವಲ ಉತ್ತಮ ಧಾರ್ಮಿಕ ಸಜ್ಜನರ ಸತ್ಸಂಗವೇ ಆಗುತ್ತದೆ. 


ಈ ಸತ್ಸಂಗ ನಮ್ಮ ಯೋಚನೆಗಳನ್ನು ಬದಲಾಯಿಸುತ್ತದೆ. ಯೋಚನೆಗಳು ಕೆಲಸವನ್ನು ಬದಲಾಯಿಸುತ್ತವೆ. ಉತ್ತಮ ಕೆಲಸದಿಂದ ಪುಣ್ಯವೇ ನಮಗೆ ಲಭಿಸುತ್ತದೆ. ಹೀಗಾಗಿ ನಮ್ಮ ಜೀವನ ಉನ್ನತಿಗೆರಲು ಈ ಕುಂಭ ಮೇಳ ಒಂದು ಒಳ್ಳೆಯ ಸುವರ್ಣಾವಕಾಶ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.


ಬಡವರಾದರೂ, ಕುಟುಂಬದಲ್ಲಿ ಉನ್ನತ ಮಾರ್ಗದರ್ಶನ ಇಲ್ಲದಿದ್ದರೂ, ಇಂತಹ ಉತ್ತಮ ಕಾರ್ಯಕ್ಕೆ ಕೈ ಹಾಕಿರುವ ಹುಡುಗನಿಗೆ ಅಭಿನಂದನೆಗಳು. 


ಎಲ್ಲಾ ಪ್ರಯಾಣವನ್ನು ಉತ್ತಮವಾಗಿ ಮುಗಿಸಿ ಕ್ಷೇಮವಾಗಿ ಹಿಂದಿರುಗಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.


ಓಂ ನಮಃ ಶಿವಾಯ.


✍️ URAIN NAMAH 

ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆಗೆ ನಾಂದಿ


(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್.)

Comments

Popular posts from this blog

ಅಂಧ ಹೇಳವರು