*ಶಾಲೆ ಎಂದರೆ ಏನು ? ಶಾಲೆ ಎಂದರೆ ಯಾವ ಮನೋಭಾವ ವಿದ್ಯಾರ್ಥಿಗಳಲ್ಲಿ ಇರಬೇಕು ?*


ನಾವು ಶಾಲೆ ಕಲಿಯುವಾಗ ಶಾಲೆ ಎಂದರೆ ಜ್ಞಾನದ ದೇಗುಲ. ಕೈ ಮುಗಿದು ಒಳಗೆ ಬಾ ಎಂದು ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೂ ಸಹ ಶಾಲೆಯೆಂದರೆ ವಿದ್ಯೆ, ಶಿಕ್ಷಣ ಪಡೆಯುವ ಸ್ಥಳವಾಗಿತ್ತು. (ಇನ್ನೂ ಕೆಲವರಿಗೆ ಶಾಲೆ ಎಂದರೆ ಶಿಕ್ಷೆ ಸಿಗುವ ಸ್ಥಳ ಎನ್ನುವ ಭಯದ ಭಾವನೆಯಿತ್ತು. )


ಆದರೆ ಇಂದು ವಿಧ್ಯೆ ಶಿಕ್ಷಣಕ್ಕಿಂತಲೂ ಬೇರೆ ವಿಷಯಗಳು ಶಾಲೆಗಳಲ್ಲಿ ಮೇಲುಗೈ ಪಡೆಯುತ್ತಿವೆ. ಇದಕ್ಕೆ ಕಾರಣ ಇಂದಿನ ವಾತಾವರಣ, ಪರಿಸರ, ಚಲನಚಿತ್ರಗಳು, ಪಾಶ್ಚಾತ್ಯ ಸಂಸ್ಕೃತಿ. 


ವಿದ್ಯಾರ್ಥಿಗಳಲ್ಲಿ ಈಗಿರುವ ಮನೋಭಾವಕ್ಕೆ ಏನೇನೋ ಕಾರಣವಾಗಿರಬಹುದು. ಆದರೆ ಸಮಾಜದ ಪ್ರಜ್ಞಾವಂತ ಜನರು ಕ್ರಿಯಾಶೀಲರಾಗಿದ್ದಲ್ಲಿ. ಶಾಲೆಯ ಬಗ್ಗೆ ತಪ್ಪು ಮನೋಭಾವ ದೂರ ಮಾಡುವುದು ಸಾಧ್ಯವಿದೆ. 


ಈ ಲೇಖನ ಬರೆಯುತ್ತಿರುವುದಕ್ಕೆ ಕಾರಣ, ಇತ್ತೀಚೆಗೆ ನಾನು ನೋಡಿದ ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಒಂದು ವಿಡಿಯೋ. 


ಈ ಹಿಂದೆ ಬೀಳ್ಕೊಡುಗೆ ಸಮಾರಂಭದಲ್ಲಿ ನಮಗೆ ಮಾತನಾಡಲು ಹೇಳಿದಾಗ ಶಾಲೆಯ ಶಿಕ್ಷಕರು, ಶಾಲೆಯ ಪರಿಸರ ಶಾಲೆ ನನಗೆ ಎಷ್ಟು ಸಹಾಯ ಮಾಡಿತು, ಎನ್ನುವುದರ ಕುರಿತು ನಾವು ಮಾತನಾಡುತ್ತಿದ್ದೆವು. 


ಆದರೆ ಒಂದು ಸರ್ಕಾರಿ ಶಾಲೆಯ ವಿದ್ಯಾರ್ಥಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದು ಎಲ್ಲಾ ಪ್ರಜ್ಞಾವಂತ ನಾಗರಿಕರು ಗಂಭೀರವಾಗಿ ಚಿಂತಿಸಬೇಕಾಗಿದೆ. 


ಆ ವಿಧ್ಯಾರ್ಥಿ ಹೀಗೆ ಮಾತನಾಡಲು ಕಾರಣ ಶಾಲೆ ಎಂದರೆ *ಇದರ ಸಲುವಾಗಿಯೇ* ಇರುವಂತಹುದು ಎನ್ನುವ ಭಾವನೆ ಬಲವಾಗಿ ಆತನ ಸುಪ್ತ ಮನಸ್ಸಿನಲ್ಲಿ ಬೇರೂರಿರುವುದು ಕಾರಣ. ಇದನ್ನು ಆತನ ದೇಹ ಭಾಷೆ ಹೇಳುತ್ತಿತ್ತು. ಏಕೆಂದರೆ ಆ ಮಾತುಗಳನ್ನು ಕೇಳಿದ ಕೂಡಲೇ ಅಲ್ಲೇ ಇದ್ದ ಶಿಕ್ಷಕರು, ಆತನನ್ನು ಬೈಯ್ದರು ಸಹ ಆತನು ಉಲ್ಟಾ ಶಿಕ್ಷಕರಿಗೆ ಎದುರು ವಾದಿಸುತ್ತಾನೆ. 


ಆತನ ಮನೋಭಾವನೆ ನೋಡಿದಾಗ ಶಾಲೆ ಇರುವುದೇ ಈ ಕೆಲಸಕ್ಕಾಗಿ. ಆದರೆ ಇದು ನಡೆಯಲೇ ಇಲ್ಲ ಎನ್ನುವ ಅಸಮಾಧಾನದ ಭಾವವನ್ನು ಆತ ಹೊರ ಹಾಕುತ್ತಿದ್ದಾನೆ. ಅಷ್ಟೇ ಅಲ್ಲ ನಾನು ಸರಿಯಾಗಿಯೇ ಮಾತನಾಡುತ್ತಿದ್ದೇನೆ ಎಂಬ ಭಾವದಿಂದ ತನ್ನ ಮಾತನ್ನು ಸಮರ್ಥಿಸಿಕೊಂಡು ಮುಂದುವರಿಸುತ್ತಿದ್ದಾನೆ.


ಒಂದು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಯಲ್ಲಿಯೇ ಈ ರೀತಿಯ ಮನೋಭಾವ ಬಂದಾಗ ದೊಡ್ಡ ದೊಡ್ಡ ಊರುಗಳಲ್ಲಿರುವ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿಯ ಮಕ್ಕಳಲ್ಲಿ ಶಾಲೆಯ ಬಗ್ಗೆ ಯಾವ ಮನೋಭಾವ ಇರಬಹುದು ಎನ್ನುವುದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ. ಹಾಗೂ ಪ್ರಜ್ಞಾವಂತರಾದವರು ಈ ಭಾವನೆಗಳನ್ನು ಹೋಗಲಾಡಿಸಲು ನಮ್ಮಿಂದ ಸಾಧ್ಯವಾದ ಪ್ರಯತ್ನವನ್ನು ಮಾಡಬೇಕಾಗಿದೆ.


ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಘಟನೆಯನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದೆನಿಸುತ್ತಿದೆ. ನಾನು ಒಂದು ಶಾಲೆಯಲ್ಲಿ ಕೃತಜ್ಞತೆ, ಕೃತಘ್ನತೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿದ್ದೆ. ಆ ಕಾರ್ಯಕ್ರಮಕ್ಕೂ ಮೊದಲು ಆ ಕುರಿತು ವಿಸ್ತಾರವಾಗಿ ವಿವರಿಸಿದ್ದೆ.


 ಕಾರ್ಯಕ್ರಮ ಎಲ್ಲಾ ಮುಗಿದ ನಂತರ ಆ ಕಾರ್ಯಕ್ರಮದಿಂದ ಪ್ರಭಾವಿತರಾದ ಮಕ್ಕಳು ಒಂದೇ ಸಮನೆ ಧನ್ಯವಾದ ಧನ್ಯವಾದ ಎಂದು ನನ್ನ ಕೈ ಮಿಲಾಯಿಸುವದಕ್ಕೆ ಒಂದು ಸುಮನೆ ಪೈಪೋಟಿಯಿಂದ ಧಾವಿಸಿ ನನ್ನ ಕೈ ಮಿಲಾಯಿಸುತ್ತಾ ತಮ್ಮ ಕೃತಜ್ಞತಾ ಭಾವ ವ್ಯಕ್ತಪಡಿಸುತ್ತಿದ್ದರು. ಅವರಲ್ಲಿ ಬಿತ್ತಿದ ಕೃತಜ್ಞತೆಯ ವಿಚಾರಗಳು ಮನಸ್ಸಿನಲ್ಲಿ ಮೊಳಕೆಯೊಡೆದು ಧನ್ಯವಾದದ ಕೃತಿಯಾಗಿ ನನಗೆ ಕಾಣುತ್ತಿತ್ತು. 


ಇದೆ ಸಂದರ್ಭದಲ್ಲಿ ಇನ್ನೊಂದು ನಾನು ಬಹುಶಃ ಮರೆಯಲಿಕ್ಕೆ ಆಗದಂತಹ ಒಂದು ವರ್ತನೆ ಒಬ್ಬ 4 ಅಥವಾ 5 ನೇ ತರಗತಿಯ ವಿದ್ಯಾರ್ಥಿಯಿಂದ ನನಗೆ ಎದುರಾಯಿತು. 


ಆ ಹುಡುಗ ಕೈಯ ಎರಡು ಬೆರಳುಗಳ ನಡುವೆ ಏನನ್ನೋ ಒತ್ತಿಹಿಡಿದು ತನ್ನ ಕೈ ಮುಂದೆ ಚಾಚಿದ. ಆತನ ಪುಟ್ಟ ಮುಖದಲ್ಲಿ‌ ಮುಗ್ಧತೆಯ ಮಂದಹಾಸ ಎದ್ದು ಕಾಣುತ್ತಿತ್ತು. ನಾನು ಏನೆಂದು ನೋಡಿದಾಗ ಆ ಪುಟ್ಟ ಕೈಗಳಲ್ಲಿ ಹತ್ತು ರೂಪಾಯಿಯ ನೋಟು ಇತ್ತು. 


ಒಂದು ಸಣ್ಣ ಹಳ್ಳಿ, ಅದರಲ್ಲಿ ಸರ್ಕಾರಿ ಶಾಲೆ. ಅಲ್ಲಿ ಇರುವುದು ಬಹುತೇಕ ಬಡ ಮಕ್ಕಳೇ. ನಮಗೆ, ದೊಡ್ಡವರಿಗೆ ಹತ್ತು ರೂಪಾಯಿ ಎಂದರೆ ಯಾವುದೇ ದೊಡ್ಡ ವಿಷಯವಲ್ಲ. 


ಆದರೆ ಆ ಪುಟ್ಟ ಬಡ ಬಾಲಕನಿಗೆ ಹತ್ತು ರೂಪಾಯಿ ದೊಡ್ಡ ವಿಚಾರವಾಗಿದ್ದರೂ, ತನಗೆ ತಿಂಡಿ ತಿನ್ನಲು ಮನೆಯಲ್ಲಿ ನೀಡಿದ ಹತ್ತು ರೂಪಾಯಿಗಳನ್ನೆ ನನಗೆ ನೀಡಲು ಕೈ ಚಾಚಿದ. ಇದನ್ನು ನಿರೀಕ್ಷಿಸಿರದ ನನಗೆ ಆ ಪುಟ್ಟ ಹುಡುಗನ ಮುಗ್ಧ ಕೃತಜ್ಞತಾ ಭಾವನೆ ಕಂಡು ಮೂಕ ವಿಸ್ಮೀತನಾದೆ. ಪ್ರೀತಿಯಿಂದ ಆತನಿಗೆ ಒಂದು ಸಣ್ಣ ಕಾಣಿಕೆ ನೀಡಿದೆ.


ಆಗ ನನಗೆ ಮೂಡಿದ ಭಾವ ಎಂದರೆ ತಿಳುವಳಿಕೆಯಿರುವ ನಾವು ನಮ್ಮಷ್ಟಕ್ಕೆ ನಾವು ಇದ್ದರೆ, ಜಗತ್ತಿನಲ್ಲಿ ನಡೆಯುತ್ತಿರುವ ತಪ್ಪುಗಳನ್ನು ನಾವು ಮಾಡದೆ ಇದ್ದರೂ, ಆ ತಪ್ಪುಗಳಲ್ಲಿ ನಾವು ಪಾಲುದಾರರಾಗುತ್ತೇವೆ.


ಜಗತ್ತಿನಲ್ಲಿ ಅನೇಕ ಸಮಸ್ಯೆಗಳಿವೆ. ಎಲ್ಲಾ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅವುಗಳಿಗೆ ಪರಿಹಾರದ ಎಲ್ಲಾ ಕೆಲಸಗಳನ್ನು ನಮ್ಮಿಂದ ಮಾಡುವುದಕ್ಕೆ ಸಾಧ್ಯವಿಲ್ಲ. 


ಆದರೆ ನಮ್ಮ ಬಿಡುವಿನ ಸಮಯದಲ್ಲಿ ನಮ್ಮಿಂದ ಯಾವುದು ಸಾಧ್ಯವೋ ಅಂತಹ ಉತ್ತಮ ಕೆಲಸಗಳನ್ನು ಮಾಡೋಣ. 


ಜಗತ್ತಿನಲ್ಲಿ ನಡೆಯುತ್ತಿರುವ ಅಪರಾಧಗಳನ್ನು ನೋಡಿಯು ನಿಷ್ಕ್ರಿಯರಾಗಿ ಕುಳಿತರೆ, ಅಥವಾ ಅಪರಾಧಿಗಳನ್ನು ಬೈಯುತ್ತಾ ಕುಳಿತರೆ ಅದರಿಂದ ಸಮಾಜಕ್ಕೆ ಏನು ಲಾಭವಿದೆ ? ಎಷ್ಟು ಲಾಭವಿದೆ ?


ಇದನ್ನು ಹೊರತುಪಡಿಸಿ ಸಮಸ್ಯೆಗಳಿಗೆ ಕಾರಣವನ್ನು ಚಿಂತಿಸಿ. ನಮ್ಮ ಕೈಲಾದಷ್ಟು ಪರಿಸರ, ವಾತಾವರಣವನ್ನು ಬದಲಿಸುವ ಒಂದು ಸಣ್ಣ ಪ್ರಯತ್ನ ಮಾಡೋಣ. 


ಒಂದು ವಿಷಯವನ್ನು ನಾವು ಮರೆಯದಿರೋಣ, ತಪ್ಪು ಕೆಲಸ ಆಗುತ್ತದೆ ಎಂದರೆ, ಆ ತಪ್ಪನ್ನು ಮಾಡಿದವನು ಮಾತ್ರ ತಪ್ಪಿತಸ್ಥನಲ್ಲ. ಆ ತಪ್ಪಿಗೆ ಪ್ರಚೋದನೆ ಎಲ್ಲಿಂದ ಸಿಕ್ಕಿದೆ ಅವರು ಸಹ ತಪ್ಪಿತಸ್ಥರೇ. ತಪ್ಪಾದಾಗ ತಪ್ಪನ್ನು ನೋಡುತ್ತಾ ಸುಮ್ಮನೆ ಕುಳಿತವರು, ಹಾಗೂ ತಪ್ಪನ್ನು ಬೆಂಬಲಿಸುವವರು ಅಷ್ಟೆ ತಪ್ಪಿತಸ್ಥರು. 


ಬಹುಶಃ ಬೀಳ್ಕೊಡುಗೆ ಸಮಾರಂಭದಲ್ಲಿ ವಿಧ್ಯಾರ್ಥಿ ಆಡಿದ ಮಾತುಗಳನ್ನು ಪ್ರಸ್ತಾಪ ಮಾಡದಿದ್ದರೆ, ಈ ಲೇಖನದ ಪೂರ್ಣ ಆಶಯ ಎಲ್ಲರಿಗೂ ತಲುಪಲಿಕ್ಕಿಲ್ಲವೆಂದು, ಆತನ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ. 

(ಇದಕ್ಕಾಗಿಯೇ ವಿಡಿಯೋ ಸಹ ಶೇರ್ ಮಾಡುತ್ತಿದ್ದೇನೆ)


ಬಿಳ್ಕೋಡುಗೆ ಭಾಷಣದಲ್ಲಿ ಸರ್ಕಾರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ದುಃಖದಿಂದ, ನೋವಿನಿಂದ ಅಸಮಾಧಾನದಿಂದ ಹೇಳಿದ ಮಾತೆಂದರೆ, ನಾವು ಎಲ್ಲರೂ ಮೂರು ವರ್ಷಗಳಿಂದ ಜೊತೆಯಲ್ಲಿ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದೇವೆ, ಆದರೂ ಒಬ್ಬ ಹುಡುಗಿಯೂ ಸಹ ನಮ್ಮನ್ನು ಪ್ರೀತಿಸಲಿಲ್ಲ, ಎಂದು ಹೇಳುತ್ತಾನೆ. ನಡುವೆ ಶಿಕ್ಷಕರು ಬೈಯ್ದುರು ತಾನು ಹೇಳಿದ್ದು ತಪ್ಪಲ್ಲ ಸರಿ ಎಂದು ಸಮರ್ಥಿಸಿಕೊಳ್ಳುತ್ತಾನೆ. ಆತನ ಪ್ರಕಾರ ಶಾಲೆ ಎಂದರೆ ಹುಡುಗ ಹುಡುಗಿ ಪ್ರೀತಿಸುವ ಸ್ಥಳ. 


ಫೆಬ್ರವರಿ ತಿಂಗಳ ಈ ಸಮಯದಲ್ಲಿ *ರೋಜ್ ಡೇ, ಚಾಕಲೇಟ್ ಡೇ, ಕಿಸ್ ಡೇ, ಹಗ್ ಡೇ, ಚಾರಿತ್ರ್ಯ ನಾಶ ಡೇ* ಗಳು ಈಗಾಗಲೇ ಆರಂಭವಾಗಿದೆ. 


ಹಾಗಾಗಿ ನಾವೆಲ್ಲರೂ ಈ ಕುಸಂಸ್ಕೃತಿ, ಕೆಟ್ಟ ವಾತಾವರಣ ತೊಲಗಿಸಲು ನಮ್ಮ ಕೈಲಾದ ಪ್ರಯತ್ನವನ್ನು ನಾವು ಮಾಡೋಣ. 


ಶಾಲೆಗಳು ಪವಿತ್ರ ದೇಗುಲ ಎನ್ನುವ ಭಾವ ಪುನಃ ಎಲ್ಲರಲ್ಲಿ ಸ್ಥಾಪಿಸಲು ಪ್ರಯತ್ನಿಸೋಣ.


ಎಲ್ಲರಿಗೂ ವಂದನೆಗಳು


ಓಂ ನಮಃ ಶಿವಾಯ


✍️ URAIN NAMAH


(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ)

Comments

Popular posts from this blog

ಅಂಧ ಹೇಳವರು