ಸಾಧುಗಳನ್ನು ಸಾಯಿಸಿದ ಪಾಪಕರ್ಮದ ಫಲ ಯಾರಿಗೆ ?
ಒಂದು ಕಥೆ. ಬಹಳ ಪುರಾತನ ಕಾಲದಲ್ಲಿ ಒಂದು ದಿನ, ಒಂದು ಊರಿಗೆ ಸಾಧುಗಳ ದೊಡ್ಡ ಗುಂಪು ಬಂದಿತ್ತು. ಆ ಊರಿನ ಶಾಸಕ, ಅವರಿಗೆ ಸರಿಯಾದ ಆತಿಥ್ಯ ನೀಡಿ ಅವರಿಂದ ಆಶಿರ್ವಾದ ಪಡೆಯಬೇಕೆಂದು ತನ್ನ ಅತಿಥಿ ಗೃಹದಲ್ಲಿ ಆಶ್ರಯ ನೀಡಿದ. ಮರುದಿನ ಸಿಹಿಯಾದ ಪಾಯಸವನ್ನು ಅವರಿಗೆ ಊಟದಲ್ಲಿ ನೀಡಿ ಅವರನ್ನು ಖುಷಿಪಡಿಸಬೇಕು ಎನ್ನುವ ಉದ್ದೇಶದಿಂದ ತನ್ನ ಸೇವಕನಿಗೆ ಊರ ಹೊರಗಿರುವ ದೂರದ ಗೋ ಶಾಲೆಯಿಂದ ಹಾಲನ್ನು ತರಲು ಹೇಳಿದ.
ಸೇವಕ ದೂರದ ಗೋ ಶಾಲೆಗೆ ನಡೆದುಕೊಂಡು ಹೋಗಿ ಹಾಲನ್ನು ಒಂದು ಕೊಡದಲ್ಲಿ ಹೊತ್ತುಕೊಂಡು ಬರುತ್ತಿದ್ದ. ಬರುವಾಗ ದಾರಿ ಮಧ್ಯೆ ಆಯಾಸವಾಯಿತು. ದಣಿವಾರಿಸಿಕೊಳ್ಳಲು ಒಂದು ಗಿಡದ ಕೆಳಗೆ ಕೊಡುವನ್ನಿಟ್ಟು ವಿಶ್ರಾಂತಿ ಮಾಡುತ್ತಿದ್ದ, ಆತನಿಗೆ ಹಾಗೆಯೇ ಸ್ವಲ್ಪ ನಿದ್ರೆ ಆವರಿಸಿತು.
ಆ ಸಮಯದಲ್ಲಿಯೇ ಒಂದು ಹದ್ದು ಹಾವನ್ನು ಹಿಡಿದುಕೊಂಡು ಹಾರುತ್ತಾ ಬಂದು ಆ ಗಿಡದ ಮೇಲೆ ಕುಳಿತು ಅದನ್ನು ತಿನ್ನತೊಡಗಿತು. ಆ ಸಮಯದಲ್ಲಿ ಹಾವಿನ ವಿಷದ ಹನಿಗಳು ಆ ಕೊಡದಲ್ಲಿ ಬಿದ್ದವು. ಸ್ವಲ್ಪ ಸಮಯದ ನಂತರ ಸೇವಕನಿಗೆ ಎಚ್ಚರವಾಯಿತು. ನಂತರ ಆ ಹಾಲಿನ ಕೊಡವನ್ನು ಹೊತ್ತುಕೊಂಡು ಶಾಸಕನ ಮನೆಗೆ ಬಂದು ಹಾಲಿನ ಕೊಡವನ್ನು ಅಡುಗೆ ಮಾಡುವವರಿಗೆ ನೀಡಿದ. ಅಡುಗೆ ಮಾಡುವವರು ಮರುದಿನ ಆ ಹಾಲನ್ನೆ ಬಳಸಿ ಪಾಯಸವನ್ನು ಮಾಡಿದರು.
ಆ ವಿಷದ ಹಾಲಿನ ಪಾಯಸವನ್ನು ಸೇವಿಸಿದ ಸಾಧುಗಳು ತೀರಿಕೊಂಡರು.
ಇಷ್ಟು ಕಥೆ. ಈಗ ಕರ್ಮದ ಆಧಾರದಲ್ಲಿ ಸಾಧುಗಳ ಸಾವಿಗೆ ಯಾರಿಗೆ ಶಿಕ್ಷೆ ಸಿಗಬೇಕು ಎನ್ನುವುದು ಪ್ರಶ್ನೆಯಾಗಿಯೇ ಉಳಿಯಿತು. ಏಕೆಂದರೆ..
* ಶಾಸಕ ಸಾಧುಗಳಿಗೆ ಸಂತೋಷ ಪಡಿಸಬೇಕು ಎನ್ನುವ ಉತ್ತಮ ಉದ್ದೇಶದಿಂದ ಹಾಲನ್ನು ತರಲು ಹೇಳಿದ.
* ಸೇವಕ ಹಾಲಿನಲ್ಲಿ ವಿಷ ಬೆರೆಸಿರಲಿಲ್ಲ. ಆತನಿಗೆ ಗೊತ್ತಿಲ್ಲದೆ ಕೊಡದಲ್ಲಿ ವಿಷ ಸೇರಿತ್ತು.
* ಹದ್ದು ಕೊಡದಲ್ಲಿ ವಿಷ ಬೀಳಲಿ ಎಂದು ಆ ಗಿಡದ ಮೇಲೆ ಕೂಡಲಿಲ್ಲ. ಅದು ಹಾವನ್ನು ತಿನ್ನುವಾಗ ಅದಕ್ಕೆ ಗೊತ್ತಿಲ್ಲದೆ ಕೊಡದಲ್ಲಿ ವಿಷ ಬಿತ್ತು.
* ಅಡುಗೆ ಮಾಡುವವರು ಸಹ ಯಾವುದೇ ದುರುದ್ದೇಶವಿಲ್ಲದೆ ಸಹಜವಾಗಿ ಪಾಯಸ ಮಾಡಿದರು.
ಆದರೂ ಇದನ್ನು ಸೇವಿಸಿದ ಸಾಧುಗಳು ಸತ್ತರು. ಇದರ ಕರ್ಮಫಲ ಯಾರಿಗೆ ನೀಡಬೇಕು ? ಎನ್ನುವುದು ಪ್ರಶ್ನೆಯಾಗಿಯೇ ಉಳಿಯಿತು . ನ್ಯಾಯ ನಿರ್ಧಾರ ಮಾಡುವ ಯಮ ಹಾಗೂ ಚಿತ್ರಗುಪ್ತರಿಗೂ ಇದು ತಿಳಿಯಲಿಲ್ಲ.
ಇದಕ್ಕಾಗಿಯೇ ಅವರು ಸೂಕ್ಷ್ಮ ರೂಪದಿಂದ ಆ ಊರಿಗೆ ಬಂದು ಇದರ ಕರ್ಮ ಫಲ ಯಾರಿಗೆ ಸಲ್ಲಬೇಕು ? ಎಂದು ಊರ ತುಂಬಾ ಸುತ್ತಾಡುತ್ತಿದ್ದರು.
ಆಗ ಒಂದು ಗಿಡದ ಕಟ್ಟೆ ಸುತ್ತಲೂ ನೂರಾರು ಜನರ ದೊಡ್ಡ ಗುಂಪು ನೆರೆದಿತ್ತು. ಅಲ್ಲಿ ದೊಡ್ಡ ಸಭೆಯೇ ನಡೆಯುತ್ತಿತ್ತು.
ಐದಾರು ಜನ ಮುಖಂಡರು, ಜನರಿಗೆ ಶಾಸಕನೇ ಉದ್ದೇಶಪೂರ್ವಕವಾಗಿ ಸಾಧುಗಳಿಗೆ ವಿಷದಿಂದ ಕೂಡಿದ ಆಹಾರವನ್ನು ನೀಡಿ ಸಾಯಿಸಿದ್ದಾನೆ. ಆತ ಶಾಸಕರಾಗಿರಲು ಯೋಗ್ಯನಲ್ಲ, ಎಂದು ಯಾವುದೇ ಸಾಕ್ಷಿ ಪ್ರಮಾಣವಿಲ್ಲದೆ ಶಾಸಕನ ತೇಜೋವಧೆ ಮಾಡುತ್ತಿದ್ದರು. ಆಗ ಹಲವು ಜನ ಅವರ ಮಾತುಗಳ ಪ್ರಭಾವಕ್ಕೊಳಗಾಗಿ, ಹೌದು ಹೌದು ಎಂದು ಅವರು ಸಹ ಶಾಸಕನ ತೇಜೋವಧೆ ಮಾಡಲು ಆರಂಭಿಸಿದರು.
ಅವರಲ್ಲಿ ಕೆಲವರಿಗೆ ಏನನ್ನು ನಿರ್ಧರಿಸಲು ಆಗದೆ ಅಲ್ಲಿಂದ ಹೊರಟು ಹೋದರು.
ಇದೆಲ್ಲವನ್ನು ನೋಡುತ್ತಿದ್ದ, ಯಮ ದೇವನು ಚಿತ್ರಗುಪ್ತನಿಗೆ, ಈಗ ಸಾಧುಗಳ ಸಾವಿನ ಫಲಾನುಭವಿಗಳು ಸಿಕ್ಕಿದ್ದಾರೆ, ಎಂದು ಹೇಳಿದ. ಆಗ ಚಿತ್ರಗುಪ್ತ ಯಾರವರು ? ಎಂದು ಕುತೂಹಲದಿಂದ ಕೇಳಿದ.
ಸತ್ಯ ಏನೆಂದು ಗೊತ್ತಿಲ್ಲದಿದ್ದರೂ ದುರುದ್ದೇಶದಿಂದ ತಮ್ಮ ಸ್ವಹಿತಾಸಕ್ತಿ ಸಾಧನೆಗಾಗಿ ಅಮಾಯಕ ಶಾಸಕನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಿಂದಿಸುತ್ತಿರುವ ಮುಖಂಡರಿಗೆ ಸಾಧುಗಳನ್ನು ಸಾಯಿಸಿದ ಪಾಪ ಕರ್ಮದ ಅರ್ಧ ಭಾಗವನ್ನು ಹಂಚು.
ಹಾಗೆಯೇ, ಯಾವುದು ಸರಿ, ಯಾವುದು ತಪ್ಪು ಎಂದು ವಿವೇಚಿಸದೆ ಅವರ ಪ್ರಭಾವಕ್ಕೊಳಗಾಗಿ, ಅವರು ಹೇಳಿರುವುದೇ ಸತ್ಯ ಎಂದು ಒಪ್ಪಿಕೊಳ್ಳುತ್ತಿರುವವರಿಗೆ ಸಾಧುಗಳ ಸಾವಿನ ಕಾಲು ಭಾಗ ಕರ್ಮ ಫಲವನ್ನು ನೀಡು.
ಶಾಸಕರಿಂದ ಮೊದಲಾಗಿ ಅಡುಗೆ ಮಾಡುವವರ ವರೆಗೆ ಪಾಯಸ ಮಾಡುವಲ್ಲಿ ಅಜಾಗ್ರತೆವಹಿಸಿದವರು ಈ ಜನಗಳ ತೇಜೋವಧೆಯಿಂದ ಉಳಿದ ಕಾಲುಭಾಗ ಕರ್ಮಫಲವನ್ನು ಈಗಾಗಲೇ ಅನುಭವಿಸುತ್ತಿದ್ದಾರೆ ಹೀಗಾಗಿ ಪುನಃ ಮತ್ತೆ ಬೇರೆ ಶಿಕ್ಷೆ ಬೇಡ ಎಂದು ಹೇಳಿದ..
ಹೀಗೆ ಸಾಧುಗಳ ಸಾವಿನ ಕರ್ಮ ಫಲದ ತೀರ್ಮಾನವನ್ನು ಯಮ ನಿರ್ಧರಿಸಿದ.
ನಿಜಕ್ಕೂ ಕರ್ಮ ಫಲ ಎನ್ನುವುದು *ಮುಖ್ಯವಾಗಿ* ನಾವು ಯಾವ ಕೆಲಸ ಮಾಡುತ್ತೇವೆ ಎನ್ನುವುದರ ಮೇಲೆ ಅವಲಂಬಿಸುವುದಿಲ್ಲ. ನಾವು ಮಾಡುವ ಕೆಲಸದ ಹಿಂದೆ ಯಾವ ಉದ್ದೇಶ ಇದೆ ಎನ್ನುವುದರ ಮೇಲೆ *ಮುಖ್ಯವಾಗಿ* ಅವಲಂಬಿಸಿದೆ.
ಒಬ್ಬ ಶಸ್ತ್ರ ಚಿಕಿತ್ಸಕ ಹಾಗೂ ಕೊಲೆಗಾರ ಇಬ್ಬರು ತಮ್ಮ ಕೆಲಸಗಳಿಗೆ ಹರಿತವಾದ ಚಾಕುವನ್ನು ಉಪಯೋಗಿಸುತ್ತಾರೆ. ಆದರೆ ವೈದ್ಯರ ಕೆಲಸ ಮುಗಿದ ನಂತರ, ನಾವು ಅವರಿಗೆ ದುಡ್ಡು ಕೊಟ್ಟು ಧನ್ಯವಾದ ಹೇಳಿ ಬರುತ್ತೇವೆ. ಆದರೆ ಕೊಲೆಗಾರನನ್ನು ದಂಡಿಸಿ, ಪೋಲಿಸರಿಗೆ ಒಪ್ಪಿಸುತ್ತೇವೆ. ಕಾರಣ ಇಬ್ಬರು ತಮ್ಮ ಕೆಲಸದ ಹಿಂದೆ ಹೊಂದಿರುವ ವಿಭಿನ್ನ ಉದ್ದೇಶ. ಒಬ್ಬರಿಗೆ ನಮಗೆ ಒಳ್ಳೆಯದಾಗಲಿ ಎನ್ನುವ ಉದ್ದೇಶವಿದೆ. ಇನ್ನೊಬ್ಬರಿಗೆ ಕೆಟ್ಟದಾಗಲಿ ಎನ್ನುವ ಉದ್ದೇಶವಿದೆ. ಹೀಗೆ ನಾವು ಮಾಡುವ ಕೆಲಸಕ್ಕಿಂತ, ಕೆಲಸದ ಹಿಂದಿನ ಉದ್ದೇಶ ಮುಖ್ಯವಾಗಿರುತ್ತದೆ.
ಅದೇ ರೀತಿ ಯಾವುದೋ ತಪ್ಪು, ಅನ್ಯಾಯ, ಅನಾಚಾರ ನಡೆದಾಗ ನಾವು ಸಹ ಸರಿ, ತಪ್ಪುಗಳ ತೀರ್ಮಾನ ಮಾಡುವಲ್ಲಿ ಎಡವುತ್ತೇವೆ. ಅಥವಾ ದುರುದ್ದೇಶದಿಂದ ನಮಗೆ ಆಗಿಬರದ ವ್ಯಕ್ತಿಗಳನ್ನು ದೋಷಿಗಳನ್ನಾಗಿ ಮಾಡಿ ಅವರನ್ನು ನಿಂದಿಸುತ್ತೇವೆ. ಅವರ ವ್ಯಕ್ತಿತ್ವವನ್ನೆ ತೇಜೋವಧೆ ಮಾಡಿ ಅವರು ನೋವಿನಿಂದ ಜೀವಂತ ನರಕಯಾತನೆ ಅನುಭವಿಸುವಂತೆ ಮಾಡುತ್ತೇವೆ.
ಇದಕ್ಕಾಗಿಯೇ ಹಿರಿಯರು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತನ್ನು ಹೇಳಿದ್ದಾರೆ. ಇದಕ್ಕೆ ನಾವು ಚಿಕ್ಕಂದಿನಲ್ಲಿ ಕೇಳಿದ ಮಹಿಳೆ ಮತ್ತು ಮುಂಗುಸಿ ಕಥೆ ಸೂಕ್ತವಾದ ಉದಾಹರಣೆಯಾಗಿದೆ.
ಈ ಕಥೆಯಲ್ಲಿನ ಸಾಧುಗಳ ಸಾವಿನ ರೀತಿಯ ಘಟನೆಗಳು ನಮ್ಮ ಜೀವನದಲ್ಲಿ ಘಟಿಸಿದಾಗ ದುರುದ್ದೇಶದಿಂದ, ಸ್ವಹಿತಾಸಕ್ತಿ ಸಾಧನೆಗಾಗಿ ನಾವು ಸಹ ಇನ್ನೊಬ್ಬರ ತೇಜೋವಧೆ ಮಾಡಬಾರದು.
ಅದೇ ರೀತಿ ಯಾವುದೇ ವಿಷಯವನ್ನು ನಿರ್ಧರಿಸುವಾಗ ಪ್ರತ್ಯಕ್ಷ ಕಂಡರೂ ಆ ವಿಷಯವನ್ನು ಪ್ರಮಾಣಿಸಿ ನೋಡಬೇಕು.
ಇಲ್ಲದಿದ್ದರೆ ಯಮನ ನಿರ್ಧಾರದಂತೆ ನಾವು ನೇರವಾಗಿ ಮಾಡದ ಕರ್ಮದ ಫಲವನ್ನು ಸಹ ನಾವು ಅನುಭವಿಸಬೇಕಾಗುತ್ತದೆ.
ನಮ್ಮೆಲ್ಲರಿಗೂ ಭಗವಂತ ಸದ್ಬುದ್ಧಿ ನೀಡಿ ಮುನ್ನಡೆಸಲಿ.
ಎಲ್ಲರಿಗೂ ವಂದನೆಗಳು
ಓಂ ನಮಃ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ
ಈ ಪದ ಯುಗ ಪರಿವರ್ತನೆಗೆ ನಾಂದಿ
(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ)
(ಮಹಿಳೆ ಮತ್ತು ಮುಂಗುಸಿ ಕಥೆ:
ತನ್ನ ಮಗುವನ್ನು ಮುಂಗಸಿಯ ರಕ್ಷಣೆಯಲ್ಲಿ ಬಿಟ್ಟು ನೀರು ತರಲು ಹೋದ ಮಹಿಳೆ, ಪುನಃ ಮನೆಗೆ ಬರುವಾಗ ಮುಂಗುಸಿಯ ಬಾಯಿಗೆ ರಕ್ತ ಮೆತ್ತಿರುವುದನ್ನು ನೋಡಿದ ಕೂಡಲೇ ಮಹಿಳೆ ದುಡುಕಿ ನಿರ್ಧಾರ ತೆಗೆದುಕೊಂಡು ಮುಂಗುಸಿಯ ಮೇಲೆ ಕೊಡವನ್ನು ಹಾಕಿ ಸಾಯಿಸುತ್ತಾಳೆ.
ಒಳಗೆ ಹೋಗಿ ಮಗು ಖುಷಿಯಿಂದ ಆಟವಾಡುವುದನ್ನು ನೋಡಿದಾಗ ತನಗೆ ತಾನೆ ಶಪಿಸಿಕೊಳ್ಳುತ್ತಾಳೆ. ಮಗುವನ್ನು ರಕ್ಷಿಸಲು ಹಾವಿನ ಜೊತೆ ಹೋರಾಡಿ ಹಾವನ್ನು ಸಾಯಿಸಿದ ವಿಚಾರವನ್ನು ತಿಳಿಸಲು ಉತ್ಸಾಹದಿಂದ ತನ್ನ ಬರುವಿಕೆಯನ್ನೆ ಕಾತರದಿಂದ ಕಾಯ್ದುಕೊಂಡು ಕುಳಿತಿದ್ದ ತನ್ನ ಕುಟುಂಬದ ಹಿತೈಷಿ ಮುಂಗುಸಿಯನ್ನೆ ನಾನು ಸಾಯಿಸಿದೆನಲ್ಲ ? ಎಂದು ಬಹುವಾಗಿ ಪಶ್ಚಾತ್ತಾಪ ಪಡುತ್ತಾಳೆ. ಆಕೆ ಎಷ್ಟೇ ಪಶ್ಚಾತ್ತಾಪ ಪಟ್ಟರು ಮುಂಗುಸಿ ಪುನಃ ಜೀವಂತವಾಗುವುದಿಲ್ಲ.
ಇದಕ್ಕಾಗಿಯೇ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು.)
Comments
Post a Comment