*ಪ್ರತಿಯೊಬ್ಬ ವ್ಯಕ್ತಿಗೂ ಇರುವ ಋಣದ ಕರ್ತವ್ಯ*
ಒಬ್ಬ ವ್ಯಕ್ತಿಗೆ ಅನೇಕ ರೀತಿಯ ಋಣ ಕರ್ತವ್ಯಗಳಿವೆ. ಅವುಗಳಲ್ಲಿ ಈ ಸಂದರ್ಭದಲ್ಲಿ ಮಾಡಬೇಕಿರುವುದು ಪಿತೃ ಋಣ ತೀರಿಸುವ ಕರ್ತವ್ಯ.
*ಯಾರು ಪಿತೃ ?*
ಈ ಸಂದರ್ಭಕ್ಕೆ ಹೇಳುವುದಾದರೆ, ಅಗಲಿ ಹೋದ ನಮ್ಮ ವಂಶ ವೃಕ್ಷ ದ ಹಿರಿಯರು ಪಿತೃಗಳು. ಅಗಲಿ ಹೋದ ಸಹೋದರ ಸಹೋದರಿ ಆಗಿರಬಹುದು. ನಮ್ಮ ತಂದೆ ತಾಯಿ ಇಬ್ಬರ ಕಡೆಯಿಂದ ಇರುವ ನಮ್ಮ ಅಜ್ಜ ಅಜ್ಜಿ ಆಗಿರಬಹುದು. ಇವರನ್ನು ನೆನೆದು ಅವರ ಬಗ್ಗೆ ಸದ್ಭಾವನೆ ಹೊಂದಿ ಅವರ ಸಲುವಾಗಿ ಮಾಡುವ ಕಾರ್ಯವೇ ಪಿತೃ ಕಾರ್ಯ.
ಇಂದಿನ ದಿನಗಳಲ್ಲಿ ಅವರು ಮರಣಿಸಿದ ದಿನದಲ್ಲಿ ಅವರನ್ನು ಪುಣ್ಯ ತಿಥಿಯ ಹೆಸರಿನಲ್ಲಿ ನೆನೆಯುವ ಕೆಲಸ ಮಾಡಲಾಗುತ್ತದೆ. ಆದರೆ ಸಾಮೂಹಿಕವಾಗಿ ಅಗಲಿದ ಎಲ್ಲಾ ಹಿರಿಯರನ್ನು ನೆನೆಯುವ ದಿನಗಳೇ ಈಗ ನಡೆಯುತ್ತಿರುವ ಪಿತೃ ಪಕ್ಷ.
ಇದು ಬರುವ *21ನೇ ತಾರೀಖು ರವಿವಾರ ಮಹಾಲಯ ಅಮಾವಾಸ್ಯೆ ದಿನದವರೆಗೆ ಇದೆ. ಈ ದಿನವೇ ಸೂರ್ಯಗ್ರಹಣ ವು ಸಹ ಇದೆ*.
*ಅಗಲಿದ ನಮ್ಮ ಹಿರಿಯರನ್ನು ಏಕೆ ನೆನೆಯಬೇಕು ?*
ಇದಕ್ಕೆ ಹಿರಿಯರು ಹೇಳುವ ಮಾತೆಂದರೆ, ಪಿತೃಗಳ ಶ್ರಾಧ್ಧ ಮಾಡುವುದರಿಂದ ಅವರು ಸಂತೃಪ್ತರಾಗಿ ಹಿರಿಯರು ನಮ್ಮನ್ನು ಆಶೀರ್ವದಿಸುತ್ತಾರೆ. ಇದರಿಂದ ನಮ್ಮ ಮನೆಯ ಕಲಹಗಳು ದೂರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಅವರ ಆಶೀರ್ವಾದದಿಂದ ನಮ್ಮ ವಂಶ ಮುಂದುವರಿಯುತ್ತದೆ.
ಶ್ರಾದ್ಧ ಮಾಡದಿದ್ದರೆ ಅವರು ನಿರಾಶರಾಗಿ ಬಿಸಿ ಉಸಿರನ್ನು ಹಾಕುತ್ತಾರೆ. ಇದು ನಮ್ಮ ಕೌಟುಂಬಿಕ ಕಲಹಕ್ಕೆ ಕಾರಣವಾಗಿ ಕುಟುಂಬದಲ್ಲಿ ಅಶಾಂತಿ ನೆಲೆಸುತ್ತದೆ. ನಮ್ಮ ವಂಶ ಮುಂದುವರಿಸಲು ಸಂತಾನ ಯೋಗ ಕೂಡಿ ಬರಲಿಕ್ಕಿಲ್ಲ, ಎಂದು ಹೇಳುತ್ತಾರೆ.
ಇದಕ್ಕಿಂತ ಮುಖ್ಯವಾಗಿ ನಾವೇ ನಮ್ಮ ಸಾಮಾನ್ಯ ಜ್ಞಾನದಂತೆ ಯೋಚನೆ ಮಾಡಿದಾಗ ನಾವು ಪಡೆದಿರುವ ನಮ್ಮ ಈ ದೇಹದ ಋಣ ತೀರಿಸುವದಕ್ಕಾಗಿ ನಾವು ಶ್ರಾದ್ಧ ಮಾಡಬೇಕು.
ನಾವು ನಮ್ಮ ದೇಹವನ್ನು ಸ್ವತಃ ಪಡೆದಿಲ್ಲ. ಇದನ್ನು ನಮ್ಮ ತಂದೆ ತಾಯಿ ನೀಡಿದ್ದು. ಅವರಿಗೆ ಅವರ ತಂದೆ ತಾಯಿ ನೀಡಿದ್ದು. ಹೀಗೆ ನಮ್ಮ ಪೂರ್ವಿಕರ ರಕ್ತ ನಮ್ಮ ದೇಹದಲ್ಲಿ ಹರಿಯುತ್ತಿದೆ. ಅವರ ಡಿಎನ್ಎ ನಮ್ಮ ಡಿಎನ್ಎ ಆಗಿದೆ. ಹೀಗಾಗಿ ಈ ದೇಹ ಋಣದಿಂದ ಹೊರಬರುವದಕ್ಕಾಗಿ ನಾವು ಶ್ರಾದ್ಧ ಮಾಡುವ ಅವಶ್ಯಕತೆಯಿದೆ.
*ನಾವು ಶ್ರಾದ್ಧದಲ್ಲಿ ಅರ್ಪಿಸಿರುವುದು ಅವರಿಗೆ ತಲುಪುತ್ತದೆಯೇ ?*
ಇದಕ್ಕಾಗಿ ನಾವು *ಶ್ರಾದ್ಧ ಎಂದರೆ ಏನು ?*
ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ.
ಅಗಲಿಹೋದ ನಮ್ಮ ವಂಶಜರನ್ನು ಶ್ರದ್ಧೆ ನಂಬಿಕೆಯಿಂದ ನೆನೆದು ಮಾಡುವ ಕೆಲಸವೇ ಶ್ರಾದ್ಧ.
ನಾವು ಅರ್ಪಣೆ ಮಾಡಿರುವುದು ಅವರಿಗೆ ತಲುಪುವುದೇ ? ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ.
ಈ ಜಗತ್ತು ಶಕ್ತಿಮಯವಾಗಿದೆ. ಈ ಜಗತ್ತಿನಲ್ಲಿರುವ ಪ್ರತಿಯೊಂದು ಶಕ್ತಿಯ ರೂಪವೇ ಆಗಿದೆ. *ಶಕ್ತಿಯ ಒಂದು ನಿಯಮವೆಂದರೆ* ಇದನ್ನು ಸೃಷ್ಟಿಸಲು ಸಾಧ್ಯವಿಲ್ಲ. ನಾಶಪಡಿಸಲು ಸಾಧ್ಯವಿಲ್ಲ . ಇದು ಕೇವಲ ಪರಿವರ್ತನೆ ಹೊಂದುತ್ತದೆ. (ಇದು ವಿಜ್ಞಾನದ ನಿಯಮ). ಹೀಗೆ ನಾವು ಶ್ರಾದ್ಧ ಸಮಯದಲ್ಲಿ ಏನೇ ಅರ್ಪಿಸಿದರು ಅದು ನಾಶವಾಗುವುದಿಲ್ಲ. ನಮ್ಮ ಶ್ರದ್ಧೆಯ ಕೇಂದ್ರಕ್ಕೆ ತಲುಪುತ್ತದೆ.
*ಇದು ಹೇಗೆ ?*
ಇದು ಹೇಗೆ, ಎನ್ನುವ ಪ್ರಶ್ನೆ ನಮ್ಮಲ್ಲಿ ಬರಬಹುದು. ಇದಕ್ಕೆ ಒಂದು ಉದಾಹರಣೆ ನೋಡೋಣ.
ನಮ್ಮಲ್ಲಿ ಈಗ ದುಡ್ಡು ಮಾತ್ರ ಇದೆ. ಮೊಬೈಲ್ ಫೋನ್ ಆಗಲಿ, ಮೊಬೈಲ್ ಆಪ್ ಆಗಲಿ ಇಲ್ಲ. ಆಗ ನಮ್ಮಲ್ಲಿರುವ ದುಡ್ಡನ್ನು ದೂರದ ಊರಿನಲ್ಲಿರುವವರಿಗೆ ಕಳುಹಿಸಬೇಕಾದರೆ, ನಾವು ಮೊಬೈಲ್ ಇರುವ ಸ್ನೇಹಿತನಿಗೆ ದುಡ್ಡನ್ನು ಕೊಟ್ಟು ಫೋನ್ ಪೇ ಮೂಲಕ ಬೇರೆಯವರಿಗೆ ಕಳುಹಿಸುತ್ತೇವೆ. ಈ ಸಂದರ್ಭದಲ್ಲಿ ನಾವು ಕೊಟ್ಟ ಹಣ ಇಲ್ಲಿಯೇ ಇದ್ದರೂ, ದೂರದ ವ್ಯಕ್ತಿಗಳಿಗೆ ಯಾವ ರೀತಿ ಹಣ ತಲುಪುವುದೋ ? ಅದೇ ರೀತಿ ಶ್ರಾದ್ಧದಲ್ಲಿ ಅರ್ಪಿಸಿದ ವಸ್ತುಗಳಿಗೆ ಸಮನಾದ ಶಕ್ತಿ ನಾವು ಇಚ್ಛಿಸಿದ ಹಿರಿಯರಿಗೆ ಅವರಿರುವ ಸ್ಥಳದಲ್ಲಿ ಶಕ್ತಿ ತಲುಪುತ್ತದೆ.
*ಶ್ರಾದ್ಧ ವಿಧಾನಗಳು*
ಶಾಸ್ತ್ರೋಕ್ತವಾಗಿ ಈ ದಿನಗಳಲ್ಲಿ ಪಿಂಡ ಪ್ರಧಾನ ಎನ್ನುವ ವಿಧಿಯನ್ನು ಆಚರಿಸಲಾಗುತ್ತದೆ. ಇದಕ್ಕಾಗಿ ಇದನ್ನು ಮಾಡುವವರನ್ನು ಆಹ್ವಾನಿಸುತ್ತಾರೆ.
ಇದಲ್ಲದೆ, ನಾವು ಶ್ರಾದ್ಧ ಮಾಡಬೇಕು ಎಂದು ಬಯಸಿರುವವರ ಹೆಸರಿನಲ್ಲಿ ಅನ್ನದಾನ ಮಾಡಿದಾಗ,
ಅವರ ಹೆಸರಿನಲ್ಲಿ ಪೂಜೆ, ಹೋಮ, ಹವನ ಜಪ, ತಪ, ಮಾಡಿ ಅದರ ಪುಣ್ಯ ಫಲ ಅವರಿಗೆ ಸಿಗಲಿ ಎಂದು ಬೇಡಿಕೊಂಡರೂ ಸಹ ಒಂದು ರೀತಿಯ ಶ್ರಾಧ್ಧವಾಗುತ್ತದೆ.
ನಮಗೆ ಇಷ್ಟು ಸಹ ಸಾಧ್ಯವಿಲ್ಲದಿದ್ದರೆ ಒಂದು ಸರಳ ವಿಧಾನವೂ ಇದೆ. ಅದೆಂದರೆ, *ನಾವು ಮುಂಜಾನೆ ಸ್ನಾನ ಮಾಡಿದ ನಂತರ ಒಂದು ತಂಬಿಗೆಯಲ್ಲಿ ನೀರನ್ನು ತೆಗೆದುಕೊಂಡು ನಮ್ಮ ಅಗಲಿದ ಹಿರಿಯರನ್ನು ನೆನಪಿಸಿಕೊಂಡು ಸೂರ್ಯ ದೇವರ ಮುಂದೆ ನಿಂತು, ಹೇ ಸೂರ್ಯ ದೇವ, ಈ ಜಲ ಹಾಗೂ ನಮ್ಮ ಶ್ರದ್ಧೆ, ಭಕ್ತಿಯೂ ನಿಮ್ಮ ಶಕ್ತಿಯ ಮೂಲಕ ನಮ್ಮ ಹಿರಿಯರನ್ನು ತಲುಪಿ ಅವರನ್ನು ಸಂತೃಪ್ತಿ ನೀಡಲಿ ಎಂದು ಸೂರ್ಯ ದೇವರ ಶಕ್ತಿಯ ಮೂಲಕ ಜಲವನ್ನು ಸಹ ಅರ್ಪಣೆ ಮಾಡಬಹುದು*.
ಹೀಗೆ ನಮ್ಮ ಪೂರ್ವಿಕರನ್ನು ನೆನೆದು ಈ ದೇಹದ ಋಣವನ್ನು ಕಳೆದುಕೊಳ್ಳುವ ಅಲ್ಪ ಪ್ರಯತ್ನವನ್ನಾದರೂ ಮಾಡೋಣ.
ಕೊನೆಯದಾಗಿ ಒಂದು ಪ್ರಸಂಗವನ್ನು ನೆನೆದು ಈ ಲೇಖನ ಮುಗಿಸುತ್ತೇನೆ. ಮೊಘಲ್ ದೊರೆ ಔರಂಗಜೇಬ್ ತನ್ನ ತಂದೆ ಶಹಜಹಾನ್ ನನ್ನು ಜೈಲಿನ ಬಂಧನದಲ್ಲಿಟ್ಟು ರಾಜ್ಯವಾಳುತಿರುತ್ತಾನೆ. ಆ ಬಂಧನದಲ್ಲಿ ತನ್ನ ತಂದೆಗೆ ಕುಡಿಯಲು ನೀರಿನ ವ್ಯವಸ್ಥೆಯನ್ನು ಸಹ ಮಾಡಿರುವುದಿಲ್ಲ. ಬಾಯಾರಿಕೆ ನೀಗಿಸುವುದಕ್ಕಾಗಿ ಶಹಜಹಾನ್ ನೀರಿನ ವ್ಯವಸ್ಥೆ ಮಾಡಲು ಸೈನಿಕರಿಗೆ ಹೇಳಿದಾಗ, ದೊರೆ ನಮಗೆ ಇದನ್ನು ಹೇಳಿಲ್ಲ ಎಂದು ಸೈನಿಕರು ನೀರಿನ ವ್ಯವಸ್ಥೆ ಮಾಡಲು ನಿರಾಕರಿಸುತ್ತಾರೆ.
ಆ ಸಂದರ್ಭದಲ್ಲಿ ಶಹಜಹಾನ್ ಮಗನಿಗೆ ಒಂದು ಪತ್ರ ಬರೆಯುತ್ತಾನೆ. ಅದರಲ್ಲಿ ಆತ ಬರೆದಿದ್ದೆನೆಂದರೆ ಹಿಂದೂಗಳು ಸತ್ತನಂತರವೂ ತಮ್ಮ ಪೂರ್ವಿಕರ ನೆನೆದು ಶ್ರಾದ್ಧ ಮಾಡುತ್ತಾರೆ. ಆದರೆ ಜೀವಂತವಿರುವ ನಿನ್ನ ತಂದೆಗೆ ನೀನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಲ್ಲ, ಎಂದು ಬರೆಯುತ್ತಾನೆ.
ಈ ದಿಕ್ಕಿನಲ್ಲಿ ಯೋಚಿಸಿದಾಗ ಶ್ರಾದ್ಧ ಮಾಡುವುದರಿಂದ ಇನ್ನೊಂದು ಸೈಡ ಎಫೆಕ್ಟ್ ಏನೆಂದರೆ, ಶ್ರಾಧ್ಧ ಕಾರ್ಯಗಳನ್ನು ಮಾಡುವುದನ್ನು ಸಹಜವಾಗಿ ನಮ್ಮ ಮುಂದಿನ ಪೀಳಿಗೆಯಾದ ನಮ್ಮ ಮಕ್ಕಳು ನೋಡುತ್ತಾರೆ. ಇದರಿಂದ ಮಕ್ಕಳಲ್ಲಿ ಸಹಜವಾಗಿ ಹಿರಿಯರ ಪ್ರತಿ ತಂದೆ ತಾಯಿ ಪ್ರತಿ ಶ್ರದ್ಧೆ ನಂಬಿಕೆಗಳು ಬೆಳೆಯುತ್ತವೆ. ಅವರು ದೊಡ್ಡವರಾದ ನಂತರ ಜೀವಂತ ತಂದೆ ತಾಯಿಗಳನ್ನು ಒಳ್ಳೆಯ ರೀತಿಯಿಂದ ನೋಡಿಕೊಳ್ಳಬೇಕು, ಎನ್ನುವ ಸಂಸ್ಕಾರ ಅವರ ಮನಸ್ಸಿನ ಮೇಲೆ ತನ್ನಿಂದ ತಾನೆ ಬೀಳುತ್ತದೆ.
ಹೀಗೆ ಶ್ರಾದ್ಧ ನೇರವಾಗಿ ಒಂದು ರೀತಿಯಿಂದ ಕೆಲಸ ಮಾಡಿದರೆ, ಅನೇರವಾಗಿ ಇನ್ನೊಂದು ರೀತಿಯಲ್ಲಿ ಕೆಲಸ ಮಾಡುತ್ತದೆ.
ಆದ್ದರಿಂದ ಮುಂಬರುವ ರವಿವಾರದೊಳಗೆ ನಮ್ಮ ಕರ್ತವ್ಯ ಆಗಿರುವ ಶ್ರಾದ್ಧ ಕಾರ್ಯ ಮಾಡಿ, ಈ ದೇಹದ ಕಾರಣವಾಗಿರುವ ನಮ್ಮ ಪಿತೃಗಳ ಋಣವನ್ನು ತೀರಿಸುವ ಪ್ರಯತ್ನ ಮಾಡೋಣ.
ಎಲ್ಲರಿಗೂ ವಂದನೆಗಳು
ಓಂ ನಮ್ಮ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ
ಈ ಪದ ಯುಗ ಪರಿವರ್ತನೆಗೆ ನಾಂದಿ
(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್. )
Comments
Post a Comment