* ಯಾವುದು ಸತ್ಯ?ಯಾವುದು ಸುಳ್ಳು? *


ನಾನು ಸತ್ಯ, ನಾವು ಸತ್ಯ
ಬದಲಾಡದಿರುವದು, ಬದಲಾಗದಿರುವದು ಸತ್ಯ
ನನ್ನದು ಸುಳ್ಳು, ನಮ್ಮದು ಸುಳ್ಳು
ಬದಲಾಡುವದು, ಬದಲಾಗುವದು ಸುಳ್ಳು



ನೋಡುಗ ನಾನು, ನೋಡಲ್ಪಡುವದು ನಾನಲ್ಲ
ಸುಂದರ ಕುರೂಪ ಜಗತ್ತು ಬದಲಾದರೂ
ಬಾಲ್ಯ ಯೌವ್ವನ ಮುಪ್ಪಿನ ಈ ದೇಹ ಬದಲಾದರೂ
ನೋಡುಗ ನಾನು ಬದಲಾಗನು
ಬದಲಾಗದ ನಾನು ನಾವು ಸತ್ಯ.
ಬದಲಾಗುವ ನನ್ನದು, ನಮ್ಮದು ಸುಳ್ಳು


ಕೇಳುಗ ನಾನು, ಕೇಳಲ್ಪಡುವದು ನಾನಲ್ಲ
ಇಂಪು ಕರ್ಕಶ ಜಗಧ್ವನಿ ಬದಲಾದರೂ,
ಬಾಲ್ಯ ಯೌವ್ವನ ಮುಪ್ಪಿನ ನನ್ನಧ್ವನಿ ಬದಲಾದರು
ಕೇಳುಗ ನಾನು ಬದಲಾಗನು
ಬದಲಾಗದ ನಾನು ನಾವು ಸತ್ಯ.
ಬದಲಾಗುವ ನನ್ನದು, ನಮ್ಮದು ಸುಳ್ಳು


ಮೂಸುವನು ನಾನು, ಮೂಸಲ್ಪಡುವದು ನಾನಲ್ಲ
ಸುಗಂಧ ದುರ್ಗಂಧದ ಜಗದವಾಸನೆ ಬದಲಾದರೂ
ಶುಚಿ ಅಶುಚಿ ಈ ದೇಹದವಾಸನೆ ಬದಲಾದರೂ,
ವಾಸನೆ ಆಸ್ವಾದಿಸುವ ನಾನು ಬದಲಾಗನು
ಬದಲಾಗದ ನಾನು ನಾವು ಸತ್ಯ.
ಬದಲಾಗುವ ನನ್ನದು, ನಮ್ಮದು ಸುಳ್ಳು


ರುಚಿಸುವವನು ನಾನು, ರುಚಿಗಳು ನಾನಲ್ಲ
ಸೇವಿಸುವ ಆಹಾರದ ಸಿಹಿ ಕಹಿ ರುಚಿ ಬದಲಾದರೂ
ರೋಗ ನೀರೋಗದಲ್ಲಿ, ಈ ನಾಲಿಗೆ ರುಚಿ ಬದಲಾದರೂ
ರುಚಿ ನೋಡುವವ ನಾನು ಬದಲಾಗನು
ಬದಲಾಗದ ನಾನು ನಾವು ಸತ್ಯ.
ಬದಲಾಗುವ ನನ್ನದು, ನಮ್ಮದು ಸುಳ್ಳು


ಸ್ಪರ್ಶನುಭವಿ ನಾನು, ಸ್ಪರ್ಶಿಸಲ್ಪಡುವದು ನಾನಲ್ಲ
ಹಿತ ಅಹಿತ ಜಗದ ಸ್ಪರ್ಶ ಬದಲಾದರೂ
ಬಾಲ್ಯ ಯೌವ್ವನ ಮುಪ್ಪಿನ ಈ ದೇಹ ಸ್ಪರ್ಶ ಬದಲಾದರೂ
ಸ್ಪರ್ಶನುಭವಿ ನಾನು ಬದಲಾಗನು
ಬದಲಾಗದ ನಾನು ನಾವು ಸತ್ಯ.
ಬದಲಾಗುವ ನನ್ನದು, ನಮ್ಮದು ಸುಳ್ಳು


ಎಲ್ಲಾ ಅನುಭವಿ ನಾನು, ಅನುಭವಗಳು ನಾನಲ್ಲ
ಜಗದ ಸುಖ, ದು:ಖ ಬದಲಾದರೂ
ಈ ದೇಹದ ಸುಖ ದು:ಖ ಬದಲಾದರೂ
ಸುಖಿಸುವವ, ದು:ಖಿಸುವವ ನಾನು ಬದಲಾಗನು
ಬದಲಾಗದ ನಾನು ನಾವು ಸತ್ಯ.
ಬದಲಾಗುವ ನನ್ನದು, ನಮ್ಮದು ಸುಳ್ಳು


ಬದಲಾಗುವದಕ್ಕೆ ಜನ್ಮವಿದೆ ಸಾವಿದೆ
ಬದಲಾಗದ ಕ್ಕೆ ಜನ್ಮವಿಲ್ಲ, ಸಾವಿಲ್ಲ
ನನ್ನದು ಬದಲಾದರೂ, ನಾನು ಬದಲಾಗುವದಿಲ್ಲ
ಬದಲಾಗದ ನಾನು, ನಾವು ಸತ್ಯ.
ಬದಲಾಗುವ ನನ್ನದು ನಮ್ಮದು ಸುಳ್ಳು

ಬದಲಾಗುವ ರೂಪ ಆಕಾರದ ದೇಹದೊಳಗೆ,
ತಾನು ರೂಪ_ಆಕರರಹಿತ, ಬದಲಾಗದವನೆಂದರಿತು,
ಬದಲಾಗುವ ಲೋಕದಲ್ಲಿ, ಬದಲಾಗದನ್ನು
ಹಾಲಿನಲ್ಲಿ ತುಪ್ಪದಂತೆ ಹುಡುಕುವದು,
ಹುಡುಕಿ ಪಡೆಯುವದೇ ಜೀವನದ ಪರಮ ಸತ್ಯ

ಇದರ ಹೊರತು ಪಡೆಯುವ ಎಲ್ಲ,
ಒಂದು ದಿನ ಬಿಟ್ಟು ಹೋಗುವ ಪರಮ ಸುಳ್ಳು

ಎಲ್ಲ ಅನುಭವ ಪಡೆವ, ನಾನು ಏನು ಇಲ್ಲ
ಎಲ್ಲ ಅನುಭವ ಕೊಡುವ ಜ್ಯೋತಿಸ್ವರೂಪ ನೀನೇ ಎಲ್ಲ.
© Urain Namah 4/7/2018

Comments

Popular posts from this blog

ಅಂಧ ಹೇಳವರು