ಯಾವುದರ ರಕ್ಷಣೆ ಈ ಸಮಯದ ಅವಶ್ಯಕತೆ ? ಈ ಸಮಯದ ಅವಶ್ಯಕತೆಯನ್ನು ರಕ್ಷಿಸಲು ಸಾಧ್ಯವೇ ?


ಇಂದಿನ ನಮ್ಮ ದೇಶದ, ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧ, ಧಾರ್ಮಿಕ ಉನ್ಮಾದ, ಪ್ರಕೃತಿ ವಿಕೋಪ ಮುಂಬರುವ ಜಗತ್ತು ಹೇಗಿರಬಹುದು ? ಯಾವ ರೀತಿ ಇರಬಹುದು ? ಎನ್ನುವ ಬಗ್ಗೆ ಒಂದು ಸೂಕ್ಷ್ಮ ಚಿತ್ರಣ ಕೊಡುತ್ತಿದೆ.


ಈ ಚಿತ್ರಣ ಬಹಳವೆಂದರೆ, ಬಹಳ ಭಯಾನಕವಾಗಿದೆ. ಇದು ಹಾಗೆಯೇ ಮುಂದುವರಿದಲ್ಲಿ ಇನ್ನೂ ಕೆಲವು ಶತಮಾನಗಳಲ್ಲಿ ಮನುಷ್ಯ ಸಂತತಿ ಭೂಮಿಯ ಮೇಲೆ ಉಳಿಯಬಹುದೇ ? ಎನ್ನುವ ಕುರಿತು ಸಂದೇಹ ವ್ಯಕ್ತವಾಗುತ್ತದೆ.


ಇದಕ್ಕೆ ಪರಿಹಾರ ಏನು ? ಎನ್ನುವ ಕುರಿತು ಲೇಖನಗಳ ಮೂಲಕ ನನ್ನ  ವಿಚಾರಗಳನ್ನು ವ್ಯಕ್ತಪಡಿಸಿದ್ದೇನೆ. ರಕ್ಷಾ ಬಂಧನದ ಈ ಸಮಯ ವಿಷಯದ ಕುರಿತು ಮತ್ತೆ ಚರ್ಚಿಸಲು ಸುಸಮಯ ಎಂದು ಭಾವಿಸುತ್ತೇನೆ.


ಇದು ಭೂಮಿಯ ಮೇಲಿರುವ ಧರ್ಮಗಳಿಗೆ ಅವು ಆರಂಭವಾದ ಸಮಯ ಇದೆ (ಜನಿಸಿದ ದಿನ). ಅಂದರೆ ಆಯಾ ಧರ್ಮದ ಆರಂಭದ ಸಮಯಕ್ಕೂ  ಮೊದಲು ಆ ಧರ್ಮಗಳು ಜಗತ್ತಿನಲ್ಲಿ ಇರಲಿಲ್ಲ. 


ಆದರೆ ಹಿಂದೂ ಧರ್ಮಕ್ಕೆ ಯಾವುದೇ ಆರಂಭದ ಸಮಯವಿಲ್ಲ. ಇದರಿಂದ ತಿಳಿಯುವ ವಿಷಯವೇನೆಂದರೆ, ಈಗಿರುವ ಯಾವುದೇ ಧರ್ಮಗಳು ಇಲ್ಲದೆ ಇರುವಾಗಲೂ ಕೇವಲ ಹಿಂದೂ ಧರ್ಮ ಮಾತ್ರ ಇತ್ತು. 


ಸಂಸ್ಕೃತದಲ್ಲಿ ಒಂದು ಹೇಳಿಕೆಯಿದೆ, ತೇನ ವಿನಾ ತೃಣಮಪಿ ಚಲತಿ. ಅಂದರೆ, ಆ ಭಗವಂತನ ಇಚ್ಛೆಯಿಲ್ಲದೆ ಒಂದು ಹುಲ್ಲು ಕಡ್ಡಿ ಸಹ ಅಲುಗಾಡುವುದಿಲ್ಲ. ಹಾಗಾದರೆ ವಿಶ್ವದ ಬಹುಸಂಖ್ಯಾತ ಜನರನ್ನು ಹೊಂದಿರುವ ಇಂದಿನ ಹಿಂದೂಯೇತರ ಧರ್ಮಗಳು, ದೇವರ ಇಚ್ಛೆಯಿಲ್ಲದೆ ಹುಟ್ಟಿವೆಯೇ ?


ಹಾಗಾದರೆ ಈ ಧರ್ಮಗಳನ್ನು ಹುಟ್ಟಿಸಿರುವದರ ಹಿಂದೆ ದೇವರ ಇಚ್ಛೆ ಏನಾಗಿತ್ತು ?


ಒಂದು ವಿಷಯ ನಾವೆಲ್ಲರೂ ಮನದಟ್ಟು ಮಾಡಿಕೊಳ್ಳಬೇಕು, ಅದೇನೆಂದರೆ ದೇವರು ಈ ಜಗತ್ತಿನಲ್ಲಿರುವ ಯಾವ ಧರ್ಮದ ಪಕ್ಷಪಾತಿಯೂ ಅಲ್ಲ. ಯಾವ ಧರ್ಮದ ವಿರೋಧಿಯೂ ಅಲ್ಲ. 


ದೇವರು ಭೂಮಿಯ ಮೇಲೆ ಯಾವುದರ ಪಕ್ಷಪಾತಿ ಅಂದರೆ ಮನುಷ್ಯತ್ವದ ಪಕ್ಷಪಾತಿ. ದೇವರು ಭೂಮಿಯ ಮೇಲೆ ಯಾವುದರ ವಿರೋಧಿ ಅಂದರೆ ಅಮಾನವೀಯತೆಯ ವಿರೋಧಿ. 


ಹಾಗಾದರೆ ಅನ್ಯ ಧರ್ಮಗಳ ಉದಯದ ಹಿಂದೆ ದೇವರ ಇಚ್ಛೆ ಏನಾಗಿತ್ತು ?


ಸಮಯ ಗತಿಸಿದಂತೆ ಪುರಾತನ ಕಾಲದಲ್ಲಿ ಇದ್ದಂತಹ ಒಂದೇ ಧರ್ಮದಲ್ಲಿ ಅಮಾನವೀಯ ಆಚರಣೆಗಳು ಆರಂಭವಾದವು. ಆ ಅಮಾನವೀಯ ಆಚರಣೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಅನ್ಯ ಧರ್ಮಗಳ ಉದಯವಾಯಿತು. 


ಆಗ ಇದ್ದಂತಹ ಧರ್ಮದಲ್ಲಿ ಮನುಷ್ಯತ್ವಕ್ಕೆ ಸಂಬಂಧಿಸಿದಂತೆ ಯಾವುದರ ಕೊರತೆ ಉಂಟಾಗಿದೆ ಆ ಕೊರತೆ ಪೂರ್ಣ ಮಾಡುವ ಉದ್ದೇಶವೇ ಅನ್ಯ ಧರ್ಮಗಳ ಉದಯಕ್ಕೆ ಕಾರಣ.


ಆದರೆ ವಿಪರ್ಯಾಸವೆಂದರೆ ಒಂದು ರೋಗಕ್ಕೆ ಪರಿಹಾರವಾಗಿ ಕಂಡುಕೊಂಡ ಔಷಧವೇ ಸಮಯ ಕಳೆದಂತೆ ಕ್ರಮೇಣ ವಿಷವಾಗಿ ಪರಿವರ್ತನೆಯಾಗುತ್ತಿದೆ.


ಇದಕ್ಕೊಂದು ನಿದರ್ಶನ, ಒಂದು ಧರ್ಮದ ಗ್ರಂಥದ ಕುರಿತು ಆ ಧರ್ಮದ ಪಂಡಿತ ತನ್ನ ಪ್ರವಚನದಲ್ಲಿ, ಹೇಳುವ ಮಾತೆಂದರೆ, 

"ನಮ್ಮ ಧರ್ಮ ಗ್ರಂಥದ ಈ ಅಧ್ಯಾಯದ ಈ ಸಾಲಿನಲ್ಲಿ ಸ್ಪಷ್ಟವಾಗಿ ಬರೆದಿದೆ, ನಮ್ಮ ಮತ/ ನಮ್ಮ ಧರ್ಮದ ಹೊರತುಪಡಿಸಿ ಬೇರೆ ನಂಬಿಕೆಗೆ ಸೇರಿದ ಯಾವುದೇ ವ್ಯಕ್ತಿ ಕಂಡ ಕೂಡಲೇ ಆತನನ್ನು ಕೊಲೆ ಮಾಡು, ಎಂದು ಹೇಳಲಾಗಿದೆ"  ಎನ್ನುವ ಮಾತನ್ನು ಹೇಳುತ್ತಾನೆ.


ತಿಳುವಳಿಕೆಯಿರುವ ಒಂದು ಧರ್ಮದ ಪಂಡಿತನೇ ಈ ರೀತಿ ಹೇಳುತ್ತಾನೆ ಅಂದರೆ, ಈ ಮಾತುಗಳನ್ನು ಕೇಳಿದ ತಿಳುವಳಿಕೆಯಿಲ್ಲದ ಆ ಧರ್ಮದ ವ್ಯಕ್ತಿಗಳು, ಅನುಯಾಯಿಗಳು ಯಾವ ರೀತಿ ನಡೆದುಕೊಳ್ಳಬಹುದು ? 


ಅನ್ಯ ಧರ್ಮೀಯರ ಸಂಖ್ಯೆ ಕಡಿಮೆಯಾದ ಸ್ಥಳಗಳಲ್ಲಿ ಇದೇ ರೀತಿಯ ನಡುವಳಿಕೆಗಳನ್ನು ನಾವು ಜಗತ್ತಿನಲ್ಲಿ ನೋಡುತ್ತಿದ್ದೇವೆ. 


ಆಗ ಮನುಷ್ಯನಲ್ಲಿ ಕೊರತೆಯಿದ್ದ ಸಹೋದರತೆ, ಸಮಾನತೆ, ಭ್ರಾತೃತ್ವದ ಗುಣಗಳನ್ನು ಪೂರ್ಣ ಮಾಡುವ ಉದ್ದೇಶದಿಂದ ದೇವರು ಯಾವ ಮತ, ಧರ್ಮವನ್ನು ಸೃಷ್ಟಿಸಿದ್ದಾನೆಯೋ ಅದೇ ಮತ, ಧರ್ಮದ ಪಂಡಿತರು ಕೇವಲ ಧರ್ಮ, ಮತದ ಆಧಾರದ ಮೇಲೆ ಮನುಷ್ಯರನ್ನು ಕೊಲ್ಲುವ ಮಾತಾಡಿದರೆ ಆ ದೇವರು ಇಷ್ಟಪಡುವನೆ ?


ದೇವರು ಯಾವುದೇ ಮತ/ಧರ್ಮದ ಅಮಾನವೀಯ ವರ್ತನೆಗಳನ್ನು ಇಷ್ಟಪಡುವುದಿಲ್ಲ.


ಎಲ್ಲಿಯವರೆಗೆ ಭೂಮಿಯ ಮೇಲೆ ಮನುಷ್ಯನಲ್ಲಿ ಮಾನವೀಯತೆ ಇರುತ್ತದೆ ಅಲ್ಲಿಯವರೆಗೆ ಭೂಮಿಯಲ್ಲಿ ಮನುಷ್ಯ ಬದುಕುತ್ತಾನೆ. ಮಾನವೀಯತೆ ಮರೆಯಾದಾಗ ಮನುಷ್ಯನು ಮರೆಯಾಗುತ್ತಾನೆ. ಸೃಷ್ಟಿಯ ವಿನಾಶ ಆರಂಭವಾಗುತ್ತದೆ. 


ಆದ್ದರಿಂದ ಈ ಜಗತ್ತಿನಲ್ಲಿ ಇಂದು "ಯಾವುದರ ರಕ್ಷಣೆ ಈ ಸಮಯದ ಅವಶ್ಯಕತೆ ?" ಎನ್ನುವುದಕ್ಕೆ ಉತ್ತರ.


ಮತ, ಧರ್ಮಗಳಿಗೆ ಹೊರತಾದ "ಮನುಷ್ಯತ್ವವನ್ನು" ರಕ್ಷಿಸುವುದೇ ಈ ಸಮಯದ ಅವಶ್ಯಕತೆಯಾಗಿದೆ.


ಹಾಗಾದರೆ, ಮನುಷ್ಯ ಅಂದರೆ ಯಾರು ?


ಯಾರು ವಿಚಾರಗಳಲ್ಲಿ, ವರ್ತನೆಯಲ್ಲಿ, ನಡುವಳಿಕೆಯಲ್ಲಿ ಪ್ರಾಣಿಗಳಿಗಿಂತ ಶ್ರೇಷ್ಠರಾಗಿದ್ದಾರೆಯೋ ಆತನೇ ಮನುಷ್ಯ. ಅಂತಹ ವ್ಯಕ್ತಿಯಲ್ಲಿರುವ ಗುಣವೇ ಮನುಷ್ಯತ್ವ. ಈ ಮನುಷ್ಯತ್ವದ ರಕ್ಷಣೆಯೇ ಇಂದಿನ ಅವಶ್ಯಕತೆಯಾಗಿದೆ. 


ಈ ಮನುಷ್ಯತ್ವದ ರಕ್ಷಣೆಗೆ ಇರುವ ದಾರಿಯೇ 


👉 ಪ್ರತಿಯೊಬ್ಬ ವ್ಯಕ್ತಿ ಬಾಹ್ಯದಲ್ಲಿಯೂ, ಅಂತರಂಗದಲ್ಲಿಯೂ ಸತ್ಯವನ್ನು ಧರಿಸುವುದು. 


👉 ಇಂದಿನ ಸಮಸ್ಯೆಗಳ ಪರಿಹಾರಕ್ಕೆ ಇರುವ ಮಾರ್ಗವೇ, "ಸತ್ಯವೆಂದರೆ ಏನು ?" ಎಂದು ಕಂಡುಕೊಳ್ಳುವುದು.


 👉 ಪ್ರತಿಯೊಬ್ಬ ವ್ಯಕ್ತಿಯೂ ಸತ್ಯಯುಗಕ್ಕಾಗಿ ಇಚ್ಛೆ ವ್ಯಕ್ತಪಡಿಸುವುದು.


ಹೀಗೆ ಮಾಡಿದರೆ ಸತ್ಯಯುಗ ಬರುವುದು ಸಾಧ್ಯವೇ ? ಇದಕ್ಕೆ ಏನಾದರೂ ನಿದರ್ಶನವಿದೆಯೇ ಎಂದು ಕೇಳಬಹುದು. ಇದಕ್ಕಾಗಿ ನಮಗೆ ಸಂಬಂಧಿಸಿದ ಒಂದು ವಿಚಾರವನ್ನು ಸ್ಮರಣೆ ಮಾಡಿಕೊಳ್ಳೋಣ.


ನಾವು ಯಾವುದೇ ಕೆಲಸದಲ್ಲಿ ಪೂರ್ಣ ಮಗ್ನರಾಗಿದ್ದಾಗ ನಮಗೆ ಊಟ ಮಾಡುವುದು ಸಹ ಮರೆತು ಹೋಗುತ್ತದೆ. ಆದರೂ ದೇಹಕ್ಕೆ ಆಹಾರದ ಅವಶ್ಯಕತೆ ಇದೆ ಎನ್ನುವ ನೆನಪು ಬರುತ್ತದೆ. 


ಇದು ಯಾವಾಗವೆಂದರೆ, ನಮ್ಮ ದೇಹದ ಪ್ರತಿಯೊಂದು ಜೀವಕೋಶಗಳು, ನಮ್ಮ ಶಕ್ತಿ ಕಡಿಮೆಯಾಗುತ್ತಿದೆ, ನಮಗೆ  ಆಹಾರ ಕೊಡಿ, ಎಂದು ಚಿತ್ಕಾರದ ಮೂಲಕ ಮೆದುಳಿಗೆ ಸಂದೇಶ ಕಳುಹಿಸಿದಾಗ. 


ಇದೇ ರೀತಿ ಆದಿಯೂ ಕಾಣದ, ಅಂತ್ಯವು ಕಾಣದ, ವಿರಾಟ ಪುರುಷ ಆ ಪರಮಾತ್ಮನ ದೇಹದಲ್ಲಿ ನಾವೆಲ್ಲರೂ ಸಹ ಕೇವಲ ಒಂದು ಜೀವಕೋಶಕ್ಕೆ ಸಮ. 


ನಾವೆಲ್ಲರೂ ನಮ್ಮ 

👉 ಧಾರಣೆ ಮೂಲಕ, 

👉 ನಮ್ಮ ಆಚರಣೆ ಮೂಲಕ ನಮಗೆ ಸತ್ಯಯುಗ ಬೇಕು, ಎಂದು 

👉 ನಮ್ಮ ಅಂತರಂಗದಿಂದ ಚಿತ್ಕಾರ ಮಾಡಿದಾಗ ಖಂಡಿತಾ ವಿರಾಟ ಪುರುಷ ಭಗವಂತನ ಪ್ರತಿಕ್ರಿಯೆ ರೂಪದಲ್ಲಿ ಸತ್ಯಯುಗ ಆರಂಭ ಆಗಿರುತ್ತದೆ.


 ಇದಕ್ಕಾಗಿ ಸತ್ಯ ಯುಗದ ನಮ್ಮ ಹಂಬಲಕ್ಕೆ ಒಂದು ಮೂರ್ತ ಸ್ವರೂಪ ನೀಡಲು ನಾವು ಸತ್ಯವನ್ನು ನಮ್ಮ ಆಚರಣೆಗಳಲ್ಲಿ, ವಿಚಾರಗಳಲ್ಲಿ ಧರಿಸಲು ಪ್ರಯತ್ನಿಸೋಣ. 


ಪ್ರಯತ್ನಗಳಲ್ಲಿ ಸೋಲಾಗಬಹುದು. ನಾವು ನಮ್ಮ ಆಚರಣೆಗಳಲ್ಲಿ, ನಮ್ಮ ವಿಚಾರಗಳಲ್ಲಿ ಮತ್ತೆ ಮತ್ತೆ ಕೆಳಗೆ ಬೀಳಬಹುದು. ಆದರೂ ಪುನಃ ಮತ್ತೆ, ಮತ್ತೆ ಸತ್ಯ ದಲ್ಲಿ ದೃಢವಾಗಿ ನಿಲ್ಲಲ್ಲು ಪ್ರಯತ್ನಿಸೋಣ. 


ನಮ್ಮ ನಿರಂತರ ಅಭ್ಯಾಸ, ನಮ್ಮ ನಿರಂತರ ಪ್ರಯತ್ನದಿಂದ ನಾವು ಬಾಹ್ಯದಲ್ಲಿ ಸತ್ಯವನ್ನು ಧರಿಸಿದಲ್ಲಿ, ನಮ್ಮ ಅಂತರಂಗದಲ್ಲಿಯೂ ಸಹ ನಮಗೆ ಸತ್ಯ ಗೋಚರವಾಗಲು ಆರಂಭಿಸುತ್ತದೆ. 


ಆಗ ಪ್ರಪ್ರಥಮವಾಗಿ ನಮ್ಮಲ್ಲಿರುವ ವ್ಯಕ್ತಿಗತ ಸಮಸ್ಯೆಗಳು ನಾಶವಾಗಿ ವ್ಯಕ್ತಿಗತವಾಗಿ ನಮ್ಮಲ್ಲಿ ಸತ್ಯಯುಗದ ನಿರ್ಮಾಣವಾಗುತ್ತದೆ. 


ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಳವಾದಾಗ ಸತ್ಯಯುಗದ ವಿಸ್ತಾರವೂ ಹೆಚ್ಚಾಗುತ್ತದೆ. ಭವಿಷ್ಯದ ಒಂದು ಸಮಯದಲ್ಲಿ ಪೂರ್ಣ ವಿಶ್ವವೇ ಸತ್ಯಯುಗವಾಗಿ ಪರಿವರ್ತನೆಯಾಗುತ್ತದೆ.


ಈ ಆಶಯಕ್ಕೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸುವಿರಿ ಎಂದು ನೀರಿಕ್ಷಿಸುತ್ತಾ ....


ಎಲ್ಲರಿಗೂ ವಂದನೆಗಳು

ಎಲ್ಲರಿಗೂ ಒಳ್ಳೆಯದಾಗಲಿ


ಓಂ ನಮಃ ಶಿವಾಯ


✍️ URAIN NAMAH 

ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆಗೆ ನಾಂದಿ


(ಈ ಲೇಖನ ನೂಲು ಹುಣ್ಣಿಮೆಯಂದು  ಸೇಡಂ ನಗರದ "ರಕ್ಷಾ ಬಂಧನ"  ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ನಾನು ಮಾಡಿದ ಭಾಷಣದ ಪ್ರಮುಖಾಂಶಗಳು.  -ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ ಸೇಡಂ, )

Comments

Popular posts from this blog

ಅಂಧ ಹೇಳವರು