*ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ.* 

(ಜೀವನದ ಒಂದು ಘಟನೆ ಆಧಾರಿತ ಲೇಖನ. )


*ಭರವಸೆ ಎನ್ನುವುದು ಜೀವನ.* 

*ಭರವಸೆ, ಕಳೆದುಕೊಳ್ಳುವುದೇ ಸಾವು.* 

*ಭರವಸೆ ಎನ್ನುವುದು ಭವಿಷ್ಯದ ಆಶಾ ಕಿರಣ*. 

*ಭರವಸೆ ಕಳೆದುಕೊಳ್ಳುವುದು ದಾರಿ ಕಾಣದ ಕಗ್ಗತ್ತಲು.* 


ನಾವು ರಾತ್ರಿ ಮಲಗುವುದು ಸಹ ನಾಳೆ ನಾನು ಜೀವಂತವಾಗಿ ಏಳುತ್ತೇನೆ, ಎನ್ನುವ ಭರವಸೆಯಿಂದಲೇ. 

ನಾವು ಬಸನ್ನು ಹತ್ತುವುದು, ಟ್ರೈನನ್ನು ಹತ್ತುವುದು ಸಹ ಡ್ರೈವರ್ ನಮ್ಮನ್ನು ಸುರಕ್ಷಿತವಾಗಿ ನಮ್ಮ ನಿಲ್ದಾಣ ತಲುಪಿಸುತ್ತಾನೆ, ಎನ್ನುವ ಭರವಸೆಯಿಂದ.


ಭರವಸೆ ಎಲ್ಲರ ಜೀವನದಲ್ಲಿ ಬಹು ದೊಡ್ಡ ಪಾತ್ರವನ್ನು ನಿಭಾಯಿಸುತ್ತದೆ. ಇಂತಹ ಭರವಸೆಯನ್ನು ನಾವು ಯಾವಾಗಲೂ ಕಳೆದುಕೊಳ್ಳಬಾರದು. 


*ನಮ್ಮ ಮೇಲೆ ಬೇರೆ ಯಾರಾದರೂ ಒಳ್ಳೆಯ ಭರವಸೆ ಇಟ್ಟಿದ್ದಾರೆ, ಅಂದಾಗ ನಾವು ಎಂದೆಂದಿಗೂ ಅದನ್ನು ಕಳೆದುಕೊಳ್ಳಬಾರದು. ಅವರ ಭರವಸೆಗೆ ಮೋಸ ಮಾಡಬಾರದು.* 


ಇದಕ್ಕೆ ಸಂಬಂಧಿಸಿದಂತೆ ನನ್ನ ಜೀವನದ ಎರಡು ದಶಕಗಳ ಹಿಂದಿನ ಶಾಲಾ ಜೀವನದ ಆ ಘಟನೆಯನ್ನು ನೆನಪಿಸಿಕೊಂಡಾಗ ಆ ಸಮಯ *"ಭರವಸೆಗೆ ಸಂಬಂಧಿಸಿದಂತೆ"* ಎಷ್ಟೊಂದು ಭಯಾನಕವಾಗಿತ್ತು ? ಎನಿಸುತ್ತದೆ.


 ದೇವರು ನನ್ನನ್ನು ನನ್ನ ವ್ಯಕ್ತಿತ್ವದ ಕೊಲೆಯಿಂದ ರಕ್ಷಿಸಿದನಲ್ಲ, ಎಂದು ದೇವರ ಬಗ್ಗೆ ನನ್ನಿಂದ ಈಗಲೂ ಕೃತಜ್ಞತೆ ಹೊರ ಹೊಮ್ಮುತ್ತದೆ.


ನಾನು ಆರನೇ ತರಗತಿಯಲ್ಲಿರುವಾಗ ನಮ್ಮ ಶಿಕ್ಷಕರು, ನಿಮ್ಮ ಪಾಠಗಳು ಮುಗಿದಿವೆ. ಇನ್ನೂ ಮುಂದೆ ನೀವು ಪಾಠಗಳನ್ನು ಓದಿಕೊಂಡು ಬರಬೇಕು. ನಾನು ಪ್ರಶ್ನೆ ಕೇಳುತ್ತೇನೆ ಎಂದು ತರಗತಿಯ ಎಲ್ಲಾ ಮಕ್ಕಳಿಗೆ, ಹೇಳಿದ್ದರು. 


ಮರುದಿನ ಪಾಠ ಓದಿಕೊಂಡು ಹೋದಾಗ, ಅನೀರೀಕ್ಷಿತವಾಗಿ, ತರಗತಿಯ ಎಲ್ಲಾ ಸುಮಾರು 50 ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ನನ್ನನ್ನೆ ಸೂಚಿಸಿದಾಗ, ಸಣ್ಣ ಹುಡುಗನಾಗಿದ್ದ ನಾನು ಎಲ್ಲಿಲ್ಲದ ಖುಷಿ, ಸಂತೋಷ, ಅಭಿಮಾನದಿಂದ ಉಬ್ಬಿದೆ. 


ಆ ದಿನ ಎಲ್ಲರಿಗೂ ಪ್ರಶ್ನೆ ಕೇಳಿದೆ. ನಂತರ ಮತ್ತೆ ನಾಳೆಯೂ ಪಾಠಗಳನ್ನು ಓದಿಕೊಂಡು ಬನ್ನಿ ಎಂದು ಹೇಳಿದರು. 


ಮರುದಿನವು ಸಹ ನನ್ನಿಂದಲೇ ಪ್ರಶ್ನೆ ಕೇಳಿಸಿದರು. ಮೂರನೇ ದಿನವೂ ಎಂದಿನಂತೆ ನಾನೇ ಪ್ರಶ್ನೆ ಕೇಳುತ್ತಾ ಹೋದೆ. 


ನಮ್ಮದು ಕೋ ಎಜುಕೇಶನ್. ‌ ಆದರೂ ವಿಧ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪರಸ್ಪರ ಮಾತನಾಡಿದ್ದೆ ಬಹಳ ಅಪರೂಪ. ನಾವು ಪರಸ್ಪರ ಮಾತನಾಡುತ್ತಿರಲಿಲ್ಲ. ಬಹುಶಃ ಒಟ್ಟು 50 ಸಂಖ್ಯೆಯಲ್ಲಿ 18 ರಿಂದ 20 ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಎಲ್ಲರೂ ಹುಡುಗರೇ ಇದ್ದರೂ.


ಮೂರನೇ ದಿನ, ಎಲ್ಲಾ ಹುಡುಗರಿಗೆ ಪ್ರಶ್ನೆ ಕೇಳುವುದು ಮುಗಿಯಿತು. ನಂತರ ವಿದ್ಯಾರ್ಥಿನಿಯರಿಗೆ ಪ್ರಶ್ನೆ ಕೇಳಲು ಆರಂಭಿಸಿದೆ. ಇನ್ನೂ ಕೆಲವೇ ವಿದ್ಯಾರ್ಥಿನಿಯರು ಬಾಕಿ ಉಳಿದಿದ್ದರು. 


ಆಗ ಇಡೀ ತರಗತಿಗೆ, ಶಿಕ್ಷಕರಿಗೆ ಹಾಗೂ ನನಗೂ ಸಹ ಊಹಿಸದ, ಅನಿರೀಕ್ಷಿತ, ಆಘಾತ ನೀಡುವ ಪ್ರಸಂಗ ನಡೆಯಿತು.


 ನಾನು ಯಾವ ವಿದ್ಯಾರ್ಥಿನಿಗೆ ಪ್ರಶ್ನೆ ಕೇಳುತ್ತಿದ್ದೆ ಆ ವಿದ್ಯಾರ್ಥಿನಿಯೇ, ಎದ್ದು ನಿಂತು, ನನಗೆ ಆ ಪಾಠದಲ್ಲಿದ್ದ ಪ್ರಶ್ನೆಯನ್ನು ಉಲ್ಟಾ ನನಗೆ ಕೇಳಿದರು. ಅದು ಸಹ ಬಹಳ ಕಷ್ಟಕರವಾದ ಅತಿ ದೊಡ್ಡ ಉತ್ತರದ ಪ್ರಶ್ನೆ, ಅದಾಗಿತ್ತು.


ಆರನೇ ತರಗತಿಯೆಂದರೆ ಬಹುಶಃ ಹನ್ನೆರಡು ವರ್ಷದ ಸಣ್ಣ ಮಕ್ಕಳ ತರಗತಿ. ಆಗ ಶಿಕ್ಷಕರ ಮಾತೆ ವೇದವಾಕ್ಯ ಎನ್ನುವಂತಹ ಸಮಯ. ಶಿಕ್ಷಕರ ನಡೆಯನ್ನು ಪ್ರಶ್ನಿಸುವುದೇ ಸಾಧ್ಯವಿಲ್ಲ ಎನ್ನುವಂತಹ ಸಮಯ. 


ಅಂತಹ ಸಮಯದಲ್ಲಿ ಶಿಕ್ಷಕರು ಕೇವಲ ನನಗೆ ಮಾತ್ರ ಪ್ರಶ್ನೆ ಕೇಳು ಎಂದು ಹೇಳಿದ್ದರು. ಹಾಗೂ ಶಿಕ್ಷಕರು ತರಗತಿಯಲ್ಲಿಯೇ ಇದ್ದರೂ,


ಆ ಸ್ಥಿತಿಯಲ್ಲಿಯೂ ಶಿಕ್ಷಕರು ಏನ್ನೇನ್ನುತ್ತಾರೆ ? ಎನ್ನುವ ಕಿಂಚಿತ್ತು ಭಯವಿಲ್ಲದೆ, ಅದು ಒಬ್ಬ ವಿಧ್ಯಾರ್ಥಿನಿ ಹೀಗೆ ಧೈರ್ಯದಿಂದ ಪ್ರಶ್ನಿಸುವ ಮನೋಭಾವ ತೋರಿದಾಗ ಇಡೀ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಾನು ಅವಾಕ್ಕಾದೇವು.


ಅದನ್ನು ಆ ವಿಧ್ಯಾರ್ಥಿನಿ ಶಿಕ್ಷಕರಿಗೆ ತೋರಿದ ಬಂಡಾಯ ಎನ್ನಬೇಕೋ ?  


ಶಿಕ್ಷಕರ ನಿರ್ಧಾರವನ್ನು ಪ್ರಶ್ನೆ ಮಾಡುವ ಒಂದು ಹುಡುಗಿಯ ಧೈರ್ಯ ಎನ್ನಬೇಕೋ ? ಗೊತ್ತಾಗಲಿಲ್ಲ.


ಆದರೂ, ಅನಿರೀಕ್ಷಿತ ಆಘಾತ ಸಾವರಿಸಿಕೊಂಡು, ಆ ವಿಧ್ಯಾರ್ಥಿನಿ ಪ್ರಶ್ನೆ ಕೇಳಿಲ್ಲ, ಶಿಕ್ಷಕರೇ ಕೇಳಿದ್ದಾರೆ ಎನ್ನುವಂತೆ ಆ ಪ್ರಶ್ನೆಗೆ ಸಂಬಂಧಿಸಿದ ದೀರ್ಘ ಉತ್ತರ ನೀಡಿದೆ.


ಆ ನಂತರ ನನ್ನಲ್ಲಿ ಮೂಡಿದ ಯೋಚನೆಗಳೆಂದರೆ, ಎಂದಿನಂತೆ ಶಿಕ್ಷಕರು ನನಗೆನೇ ಪ್ರಶ್ನೆ ಕೇಳಲು ಹೇಳುತ್ತಾರೆ, ಎನ್ನುವುದು ನನಗೆ ಗೊತ್ತಿತ್ತು. ಈ ಕಾರಣದಿಂದ ಒಂದು ವೇಳೆ ನಾನು ಎಲ್ಲಾ ಪ್ರಶ್ನೆಗಳನ್ನು ಅಥವಾ ದೀರ್ಘ ಉತ್ತರದ ಪ್ರಶ್ನೆಯನ್ನು ಓದದೆ, ಶಾಲೆಗೆ ಹೋಗಿದ್ದಲ್ಲಿ, 


ಆ ವಿಧ್ಯಾರ್ಥಿನಿ ಪ್ರಶ್ನೆಯನ್ನು ಕೇಳಿದಾಗ, ಅದು ದೀರ್ಘ ಉತ್ತರದ ಪ್ರಶ್ನೆಗೆ ಉತ್ತರ ಹೇಳದಿದ್ದಾಗ ಇಡೀ ತರಗತಿಯಲ್ಲಿ ನನ್ನ ಪರಿಸ್ಥಿತಿ ಏನಾಗುತ್ತಿತ್ತು ?


ನನಗೆ ಎಷ್ಟು ಅವಮಾನ ಆಗುತ್ತಿತ್ತು ?


ನನಗೆ ಅವಮಾನ ಆದರೆ ಚಿಂತೆಯಿಲ್ಲ. ನನ್ನ ಮೇಲೆ ಅಭಿಮಾನ, ಪ್ರೀತಿ, ನಂಬಿಕೆ ಹೊಂದಿದ ಶಿಕ್ಷಕರಿಗೆ ಎಷ್ಟು ಮುಖಭಂಗ ಆಗುತ್ತಿತ್ತು ?


 ನನಗೆ ಪ್ರಶ್ನೆ ಕೇಳಲು ಹೇಳಿದ ಶಿಕ್ಷಕರ ನಿರ್ಧಾರ ಎಷ್ಟು ಪ್ರಶ್ನೆಗೆ ಒಳಪಡುತ್ತಿತ್ತು ?


ನನಗೆ ಅಪಮಾನ ಆದರೂ ಚಿಂತೆಯಿಲ್ಲ. ನನ್ನ ಮೇಲೆ ಭರವಸೆ ಇಟ್ಟವರಿಗೆ ಅವಮಾನ ಆಗಬಾರದು ಎನ್ನುವ ಮನೋಭಾವ ಹೊಂದಿದ ನನಗೆ ಆ ಸಮಯವನ್ನು ನೆನೆಸಿಕೊಂಡರೆ ಇಂದಿಗೂ ಎದೆ ಝಲ ಎನ್ನುತ್ತದೆ.


 ಇದಕ್ಕಾಗಿ ದೇವರಿಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ. 


ಏಕೆಂದರೆ ನಾನೇ ಪ್ರಶ್ನೆ ಕೇಳುವನಿದ್ದೇನೆ, ಹೀಗಾಗಿ, ನಾನು ಓದುವ ಅವಶ್ಯಕತೆ ಏನಿದೆ ? ಎನ್ನುವ ದುರ್ಬುದ್ಧಿ ನನ್ನಲ್ಲಿ ಸುಳಿಯದಂತೆ ಆ ದೇವರು ನನ್ನನ್ನು ಕಾಪಾಡಿದ. ಎಲ್ಲರಂತೆ ನಾನು ಸಹ ಓದಿಕೊಂಡು ಹೋಗುವಂತೆ ದೇವರು ಮಾಡಿದವನಲ್ಲ, ಎನ್ನುವ ಭಾವನೆಯಿಂದ. 


ಒಂದು ವೇಳೆ ಆ ಸಮಯದಲ್ಲಿ ದೇವರು ನನಗೆ ಸದ್ಬುದ್ಧಿ ಕೊಡದಿದ್ದರೆ ಆ ಶಿಕ್ಷಕರು ನನ್ನ ಮೇಲಿಟ್ಟ ಅಭಿಮಾನ ಪ್ರೀತಿ ನಂಬಿಕೆಯ ಕೊಲೆಯೇ ಆಗುತ್ತಿತ್ತು. ಇದಕ್ಕಾಗಿ ಆ ದೇವರಿಗೆ ಇಂದಿಗೂ ಧನ್ಯವಾದ ಹೇಳುತ್ತೇನೆ. 


ಇದಕ್ಕಾಗಿಯೇ ಪೀಠಿಕೆಯಲ್ಲಿ ಹೇಳಿದ್ದು ನಂಬಿಕೆ ಕಳೆದುಕೊಳ್ಳುವುದು, ವ್ಯಕ್ತಿತ್ವದ ಕೊಲೆ.


ಇದರ ಹಿನ್ನೆಲೆಯಲ್ಲಿಯೇ ನನ್ನ ಮೇಲಿಟ್ಟ ಅಭಿಮಾನ, ಪ್ರೀತಿ ನಂಬಿಕೆಗೆ ಕೃತಜ್ಞತೆ ಹೇಳುವ ಉದ್ದೇಶದಿಂದಲೇ ಎರಡು ದಶಕಗಳ ನಂತರ ನನ್ನ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ ಅವರ ಪ್ರೀತಿ, ನಂಬಿಕೆ, ಅಭಿಮಾನಕ್ಕೆ ಕೃತಜ್ಞತೆ ಹೇಳುವ ಪ್ರಯತ್ನ ಮಾಡಿದೆ.


ಆ ದೇವರು ಇಂದು ಸಹ ನನ್ನ ಮೇಲೆ ಯಾರು ಯಾವುದಕ್ಕಾಗಿ ನಂಬಿಕೆ ಇಟ್ಟಿದ್ದಾರೆ, ಆ ನಂಬಿಕೆ ನಾನು ಕಳೆದುಕೊಳ್ಳದೆ ಇರಲಿ. ಇದಕ್ಕಿಂತಲೂ ಮುಖ್ಯವಾಗಿ ನನ್ನ ಮೇಲೆ ನನಗಿರುವ ನಂಬಿಕೆ ನಾಶವಾಗದಿರಲಿ ಎಂದು ಪ್ರಾರ್ಥಿಸುತ್ತೇನೆ. 


ಇದಕ್ಕೆ ಕಾರಣ, ಇದೇ ಕಾರ್ಯಕ್ರಮದಲ್ಲಿ ನನ್ನ ಶಿಕ್ಷಕರು, ನನ್ನ ತಂದೆ ತಾಯಿ, ನನ್ನ ಅಭಿಮಾನಿಗಳ, ನನ್ನ ಶಿಷ್ಯರ ಸಮ್ಮುಖದಲ್ಲಿ ನನ್ನ ಮುಂದಿನ ಜೀವನದ ಉದ್ದೇಶದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ.


ನನ್ನ ಜೀವನದ ಮುಂದಿನ ಉದ್ದೇಶದ ಬಗ್ಗೆ ಎಷ್ಟು ಜನ ನಂಬುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಏಕೆಂದರೆ,‌ *ಮುಂದಿನ ಜೀವನದ ಉದ್ದೇಶ ಒಂದು ಸಣ್ಣ ಗುಬ್ಬಿ ವಿಶಾಲವಾದ, ಆಳವಾದ, ವಿಸ್ತಾರವಾದ ಸಮುದ್ರವನ್ನು ಬತ್ತಿಸುವ* ಉದ್ದೇಶ ಹೊಂದಿದ ಚಿತ್ರಣವನ್ನು ನೀಡುತ್ತದೆ. 


ಇದರ ಬಗ್ಗೆ, *"ನಂಬಿಕೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ - ಭಾಗ 2"* ರಲ್ಲಿ ಬರೆಯುತ್ತೇನೆ. 


ತಾವು ತಮ್ಮ ಜೀವನದ ಬಗ್ಗೆ, 

ತಮ್ಮ ಜೀವನದ ಉನ್ನತಿಯ ಬಗ್ಗೆ, 

ತಮ್ಮ ಉತ್ತಮ ವ್ಯಕ್ತಿತ್ವದ ಬಗ್ಗೆ ನಂಬಿಕೆ ಕಳೆದುಕೊಳ್ಳದಿರಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತಾ...


ಈ ಲೇಖನ ಓದಿದ ತಮ್ಮೆಲ್ಲರಿಗೂ ವಂದನೆಗಳು.


(ಈ ಘಟನೆಗೆ ಸಂಬಂಧಿಸಿದಂತೆ ದೇವರ ಜೊತೆ ಜೊತೆ ಆ ವಿಧ್ಯಾರ್ಥಿನಿಗೂ ಆನಂತ ಧನ್ಯವಾದ ಹೇಳುತ್ತೇನೆ. ಒಂದು ವೇಳೆ ಅವರು ಧೈರ್ಯದಿಂದ ಎದ್ದು ನಿಂತು ಪ್ರಶ್ನೆ ಕೇಳದಿದ್ದರೆ, ನಾನು ಶಿಕ್ಷಕರ ಮಾತನ್ನು ಪ್ರಾಮಾಣಿಕತೆಯಿಂದ ಪಾಲಿಸುತ್ತಿದ್ದ ವಿಚಾರ ಹಾಗೂ ಅವರು ನನಗೆ ಜವಾಬ್ದಾರಿ ಕೊಟ್ಟರು ಆ ಜವಾಬ್ದಾರಿ ದುರುಪಯೋಗ ಮಾಡಿಕೊಳ್ಳದೆ, ಶಿಕ್ಷಕರು ಹೇಳಿದಂತೆ ಓದಿಕೊಂಡು ಬಂದಿದ್ದು ಯಾರಿಗೂ ಗೊತ್ತಾಗುತ್ತಿರಲಿಲ್ಲ. )


ಓಂ ನಮಃ ಶಿವಾಯ


✍️ URAIN NAMAH 

(ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆ ನಾಂದಿ)


(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ ಸೇಡಂ)

Comments

Popular posts from this blog

ಅಂಧ ಹೇಳವರು