ಈ ವರ್ಷದ (2025ರ) ಶಿವರಾತ್ರಿ ಸಂದೇಶ


ನಾವು ದೇವರನ್ನು ಸಂಪರ್ಕ ಮಾಡಲು ಹಾಗೂ ದೇವರಿಂದ ಕೃಪೆ ಪಡೆಯಲು ವ್ರತ ಮಾಡುತ್ತೇವೆ. ನಾವು ಸತ್ಯ ಪ್ರಾಮಾಣಿಕತೆಯಿಂದ ವ್ರತ ಮಾಡಿದಾಗ ಆ ದೇವರು ನಮಗೆ ಪ್ರತಿಸ್ಪಂದಿಸುತ್ತಾನೆ. ಇದು ಆರನೇ ಶಿವರಾತ್ರಿ ಕಾರ್ಯಕ್ರಮದಲ್ಲಿ ನನಗಾದ ಅನುಭವ. ಇದನ್ನು ಈಗಾಗಲೇ ಹಂಚಿಕೊಂಡಿದ್ದೇನೆ.


 ಈ ವರ್ಷದ ಶಿವರಾತ್ರಿಯಂದು ನನಗೆ ಲಭಿಸಿದ ಸಂದೇಶ ನನ್ನ ನಂಬಿಕೆ ವಿಶ್ವಾಸವನ್ನು ಗಟ್ಟಿಗೊಳಿಸಿತು. ಈ ಸಂದೇಶ ನನಗೆ ಎಷ್ಟು ಮುಖ್ಯವಾದುದು ಎನ್ನುವುದು ತಿಳಿಯಬೇಕಾದರೆ ಈ ಸಣ್ಣ ಕತೆ ಓದುವುದು ಮುಖ್ಯವಾಗಿದೆ.


ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಸುಂದರವಾದ ಕುದುರೆಯನ್ನು ಬಹಳ ದುಡ್ಡು ಕೊಟ್ಟು ಖರೀದಿ ಮಾಡಿದ. ಇದನ್ನು ರಾಜನಿಗೆ ಕೊಟ್ಟು ತಾನು ಖರ್ಚು ಮಾಡಿದಕ್ಕಿಂತಲೂ ಹೆಚ್ಚಿನ ಉಡುಗೊರೆಗಳನ್ನು ರಾಜನಿಂದ ಪಡೆಯಬೇಕೆನ್ನುವುದು ಆತನ ಉದ್ದೇಶವಾಗಿತ್ತು. 


ವ್ಯಾಪಾರಿ ಕುದುರೆಯನ್ನು ತನ್ನ ಊರಿಗೆ ತೆಗೆದುಕೊಂಡು ಹೋಗುವಾಗ ಆ ಕುದುರೆಯ ಮೇಲೆ ಮೂರು ಜನ ಕಳ್ಳರ ಕಣ್ಣು ಬೀಳುತ್ತದೆ. ಯಾವುದೇ ರೀತಿಯಿಂದ ಅದನ್ನು ಪಡೆಯಬೇಕು ಎಂದು ಯೋಚಿಸಿ, ಅದಕ್ಕೆ ಒಂದು ಯೋಜನೆ ರೂಪಿಸುತ್ತಾರೆ. 


ಆ ಯೋಜನೆಯಂತೆ ಒಬ್ಬ ಕಳ್ಳ ವ್ಯಾಪಾರಿಯ ದಾರಿಯಲ್ಲಿ ಎದುರಾಗಿ, ಏನಪ್ಪಾ ಎಂತಹ ಕತ್ತೆಯನ್ನು ತೆಗೆದುಕೊಂಡು ಹೋಗುತ್ತಿರುವೆ ಸ್ವಲ್ಪವೂ ಸರಿಯಾಗಿಲ್ಲ, ಎಂದು ಬಹಳ ಅಸಮಾಧಾನದಿಂದ ಹೇಳಿದ. ಇದನ್ನು ಕೇಳಿ ಒಮ್ಮೆಲೆ ಸಿಟ್ಟಿಗೆ ಬಂದ ವ್ಯಾಪಾರಿ, ನಿನಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲವೇ? ಎಷ್ಟೊಂದು ಸುಂದರವಾದ ಕುದುರೆಯಿದೆ. ನೀನು ಕತ್ತೆಯೆಂದು ಹೇಳುತ್ತಿರುವೆಯಲ್ಲ ? ಎಂದು ಕೇಳುತ್ತಾನೆ. ಆಗ ಆ ಕಳ್ಳ, ನಿನಗೆ ಭ್ರಮೆ ಹಿಡಿದಿದೆ. ಇದು ಕತ್ತೆ. ಜನರನ್ನೆ ಕೇಳು ಹೋಗು ಎನ್ನುತ್ತಾನೆ. 


ವ್ಯಾಪಾರಿಯ ಮನಸ್ಸಿಗೆ ಸ್ವಲ್ಪ ಬೇಸರವಾದರೂ ಸಹ ಏನೋ ಇವನಿಗೆ ತಲೆ ಕೆಟ್ಟಿದೆಯೆಂದು ಮುಂದೆ ಹೋಗುತ್ತಾನೆ. ಸ್ವಲ್ಪ ಮುಂದೆ ಚಲಿಸಿದ ನಂತರ...


ಆಗ ಎರಡನೇ ಕಳ್ಳ ಏನಪ್ಪಾ ಈ ಕತ್ತೆಗೆ ಏನಾದರೂ ಊಟ ಕೊಟ್ಟಿದೀಯಾ ? ಉಪವಾಸ ಹಾಕಿದ್ದೀಯಾ ? ಎಷ್ಟೊಂದು ಸೋರಗಿದೆ, ಎಂದು ಅನುಕಂಪ ತೋರಿಸುವಂತೆ ನುಡಿದ.. 


  ಇದನ್ನು ಕೇಳಿದ ವ್ಯಾಪಾರಿ ಇನ್ನಷ್ಟು ಸಿಟ್ಟಿಗೆ ಬಂದು ಇದು ಕುದುರೆ, ನಿನ್ನ ಕಣ್ಣನ್ನು ವೈದ್ಯರಿಗೆ ತೋರಿಸು. ನಿನಗೆ ಸರಿಯಾಗಿ ಕಾಣುತ್ತಿಲ್ಲ, ಎನ್ನುತ್ತಾನೆ. ಆಗ ಆ ಕಳ್ಳ ನಿನಗೆ ಹುಚ್ಚು ಹಿಡಿದಿರುವ ಹಾಗಿದೆ. ನೀನೇ ಯಾವುದಾದರೂ ವೈದ್ಯರಿಗೆ ತೋರಿಸು ಎನ್ನುತ್ತಾನೆ. ವ್ಯಾಪಾರಿ ನನಗಲ್ಲ ನಿನಗೆ ಹುಚ್ಚು ಹಿಡಿದಿದೆ ಹೋಗೋ ಎಂದು ಬೈಯ್ಯುತ್ತಾ ಮುಂದಕ್ಕೆ ಹೋಗುತ್ತಾನೆ. 


ಸುಂದರವಾದ ಕುದುರೆಯನ್ನು ಖರೀದಿಸಿ, ಹೆಮ್ಮೆಯಿಂದ ಖುಷಿಯಿಂದ ವ್ಯಾಪಾರಿ ಹೋಗುತ್ತಿದ್ದ. ರಾಜನಿಗೆ ಕುದುರೆಯನ್ನು ಕಾಣಿಕೆಯಾಗಿ ಕೊಟ್ಟು ದೊಡ್ಡ ಪುರಸ್ಕಾರ ಪಡೆಯಬೇಕು ಎನ್ನುವ ಅತ್ಯುತ್ಸಾಹದಲ್ಲಿ ಹೋಗುತ್ತಿದ್ದ ವ್ಯಾಪಾರಿಗೆ ಈ ಆಗಂತುಕರ ಮಾತುಗಳು ಆತನ ಉತ್ಸಾಹವನ್ನೆ ಕುಂದಿಸಿದವು.  ಈ ಇಬ್ಬರ ಪ್ರತಿಕ್ರಿಯೆಗಳು ವ್ಯಾಪಾರಿಯ ಮನಸ್ಸು ಅಶಾಂತಿ ಮೂಡಿಸಿದವು. ಯಾರಾದರು ನನ್ನನ್ನು ಸಮರ್ಥಿಸಿ ನನಗೆ ಪ್ರೋತ್ಸಾಹಿಸಲಿ ಎಂದು ಪ್ರಾರ್ಥಿಸುತ್ತಾ ಹಾಗೆ ಮುನ್ನಡೆಯುತ್ತಾನೆ. 


ಅಲ್ಲಿ ಮೂರನೇ ಕಳ್ಳ ಒಂದು ಚಿಕ್ಕ ಗುಡಿಯ ಮುಂದೆ ಒಬ್ಬ ಪೂಜಾರಿಯಂತೆ ವೇಷ ಮರೆಸಿಕೊಂಡು ಏನೋ ಗ್ರಂಥ ಓದುತ್ತಿರುವಂತೆ ನಟಿಸುತ್ತಾ ಕುಳಿತಿರುತ್ತಾನೆ. 


ಆತನನ್ನು ನೋಡಿದ ವ್ಯಾಪಾರಿ ಆ ವ್ಯಕ್ತಿಗಳು ಕಪಟತನದಿಂದ ನನ್ನ ವಿಶ್ವಾಸ ಕೆಡಿಸುವ ಮಾತಾಡಿದ್ದಾರೆ. ಈತನಂತೂ ಧಾರ್ಮಿಕನಿದ್ದಾನೆ ಮತ್ತು ಸತ್ಯವನ್ನು ಹೇಳುತ್ತಾನೆ ಈತನಿಗೆ ಕೇಳಬೇಕು ಎಂದು ಆತನ ಹತ್ತಿರ ಹೋಗಿ, ಧರ್ಮಿಷ್ಠರೇ ಈಗ ತಾನೇ ಹೊಸ ಕುದುರೆ ಖರೀದಿ ಮಾಡಿದ್ದೇನೆ, ಇದಕ್ಕೆ ಆಶೀರ್ವಾದ ಮಾಡಿ ಎಂದು ವಿನಂತಿಸುತ್ತಾನೆ.


ಆಗ ಆ ಪೂಜಾರಿ, ಕುದುರೆ ಎಲ್ಲಿದೆ ? ಕತ್ತೆಯೆಂದು ಹೇಳುವ ಬದಲಿಗೆ ಕುದುರೆಯೆಂದು ಬಾಯಿ ತಪ್ಪಿ ಹೇಳಿದೆಯೇನು ? ಎಂದು ಕೇಳಿದ. ಆಗ ವ್ಯಾಪಾರಿಗೆ ಆತನ ಮಾತು ಕೇಳಿ, ಏನು ಹೇಳಬೇಕೆಂದು ತೋಚದೆ ಮೌನವಾದ. 


ಪೂಜಾರಿ ಮುಂದುವರಿದು ಇನ್ನೂ ಸ್ವಲ್ಪ ದಿನ ರಾಜನಿಂದ ದೂರವಿರು, ರಾಜನಿಂದ ನಿನಗೆ ಗಂಡಾಂತರವಿದೆ, ಎಂದು ಹೇಳುತ್ತಾನೆ. 


ಈ ಮಾತು ಕೇಳಿ ವ್ಯಾಪಾರಿಯ ಆಸೆಯೆಲ್ಲಾ ನುಚ್ಚುನೂರಾಯಿತು. ರಾಜನಿಗೂ ಕುದುರೆ, ಕತ್ತೆಯಂತೆ ಕಂಡು ನನಗೆ ಶಿಕ್ಷೆ ವಿಧಿಸುತ್ತಾನೆಯೋನೋ ? ಎನ್ನುವ ಭಯದಿಂದ, ಈ ಕುದುರೆ ತನಗೆ ಅಪಶಕುನವೆಂದು ಅಲ್ಲಿಯೇ ಬಿಟ್ಟು ಹೋಗುತ್ತಾನೆ. 


ಆತ ಹೋದ ನಂತರ ಕಳ್ಳರು ಆ ಕುದುರೆಯನ್ನು ಮಾರಿ ಹಣ ಹಂಚಿಕೊಳ್ಳುತ್ತಾರೆ. 


ಇಷ್ಟು ಕಥೆ. ಈ ಕಥೆ ಹೇಳುವುದೇನೆಂದರೆ ನಮ್ಮ ಸುತ್ತ ಮುತ್ತಲಿನ ಪರಿಸರದಿಂದ ಬರುವ ಸಂದೇಶಗಳು ಒಬ್ಬ ವ್ಯಕ್ತಿಯ ಮನಸ್ಸಿನ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ. 


ಸುತ್ತಮುತ್ತಲಿನ ಸಂದೇಶಗಳು ಒಬ್ಬ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಒಂದು ಪ್ರದೇಶದ ವಾತಾವರಣದ ಮೇಲೆಯೂ, ಅಲ್ಲಿಯ ಜನರ ವಿಚಾರಗಳ ಮೇಲೆಯೂ ಪರಿಣಾಮ ಬೀರುತ್ತವೆ.


ಮನಸ್ಸಿನ ಯೋಚನೆಗಳೇ ನಮ್ಮ ಕೆಲಸವನ್ನು ನಿರ್ಣಯಿಸುವುದರಿಂದ ಸುತ್ತಮುತ್ತಲಿನ ಸಂದೇಶ ಬಹಳ ಮಹತ್ವ ಪಡೆದುಕೊಳ್ಳುತ್ತದೆ.


ನಾನು ಸತ್ಯ ಯುಗ ಪ್ರಾರಂಭಕ್ಕಾಗಿ ಪ್ರಯತ್ನ ಆರಂಬಿಸಿದ ನಂತರ ನನ್ನ ವಿಶ್ವಾಸ ಕೇಡಿಸುವಂತಹ ಸಂದೇಶಗಳು ದೊರೆತವು. ಹಾಗೂ ನನ್ನ ವಿಶ್ವಾಸಕ್ಕೆ ಬಲ ನೀಡುವಂತಹ ಸಕಾರಾತ್ಮಕ ಸಂದೇಶಗಳು ಸಹ ನನಗೆ ಸಿಕ್ಕಿದೆ. ಆದರೆ ಅದು ತೀರಾ ಕಡಿಮೆ ಹಾಗೂ ಅದು ವ್ಯಕ್ತಿಗಳ ಮೂಲಕ. 


ಈ ಶಿವರಾತ್ರಿಯ ಮುನ್ನಾ ದಿನ ಅಭಿಷೇಕ ಪೂಜೆ, ಮಹಾ ಪ್ರಸಾದ, ಶಿವರಾತ್ರಿ ಮಹಾತ್ಮೆ ಕಾರ್ಯಕ್ರಮ. ಶಿವರಾತ್ರಿಯಂದು ಅಖಂಡ ನಾಮ ಜಪ, ನಿರಾಹಾರ ವ್ರತ, ಜಾಗರಣೆ ಹೀಗೆ ಎರಡು ಮೂರು ದಿನ ನಿರಂತರ ಸ್ವಲ್ಪವೂ ಬಿಡುವಿಲ್ಲದೆ ಶಿವರಾತ್ರಿ ಕಾರ್ಯಕ್ರಮದಲ್ಲಿ ವ್ಯಸ್ತನಾಗಿದ್ದೆ.


ನನಗೆ ಪೂರ್ಣ ಬಿಡುವು ಸಿಕ್ಕಿದ್ದು. ಜಾಗರಣೆಯ ಮರುದಿನ ಮುಂಜಾನೆ. ಆಗ ವಿಶ್ರಾಂತ ಸ್ಥಿತಿಯಲ್ಲಿ ಮೊಬೈಲ್ ಸಂದೇಶಗಳನ್ನು ನೋಡುತ್ತಿದ್ದೆ. ಆಗ ನಾನು ನೋಡಿದ ಮೊದಲ ಸಂದೇಶ ನಿಜಕ್ಕೂ ನನ್ನ ಖುಷಿಗೆ ಎಣೆಯಿಲ್ಲದಂತೆ ಮಾಡಿತು. ಕಾರಣ ನಮ್ಮ ವ್ರತ ಶಿವನಿಗೆ ತಲುಪಿದೆ. ಹೀಗಾಗಿ, ಶಿವನೇ ಈ ಸಂದೇಶವನ್ನು ನನಗೆ ತಲುಪಿಸಲು ಎಲ್ಲೋ ದೂರದಲ್ಲಿರುವ ನನ್ನ ಶಿಷ್ಯನಿಗೆ ಪ್ರೇರಣೆ ನೀಡಿದ್ದಾನೆ, ಅನ್ನಿಸಿತು. 

 ನನ್ನ ನಂಬಿಕೆಯನ್ನು ಈ ಸಂದೇಶ ಗಟ್ಟಿಗೊಳಿಸಿದೆ. ನೀನು ಸರಿಯಾದ ದಾರಿಯಲ್ಲಿ ನಡೆಯುತ್ತಿರುವೆ. ಇನ್ನೂ ಮುನ್ನಡೆ ಎಂದು ಬೆನ್ನು ತಟ್ಟಿದೆ.


ಹಾಗೂ ನಾವೆಲ್ಲರೂ ಈ ಬಗ್ಗೆ ಇನ್ನೂ ಹೆಚ್ಚು ಯೋಚಿಸುವಂತೆ, ಇನ್ನೂ ಹೆಚ್ಚು ಕೆಲಸ ಮಾಡುವಂತೆ ನಮಗೆ ಜವಾಬ್ದಾರಿಯ ಭಾರವನ್ನು ಹೊರಿಸಿದೆ, ಎಂದೆನಿಸುತ್ತಿದೆ. 


ಇದಕ್ಕಾಗಿ ದೇವರು ತೋರಿಸಿದ ಮಾರ್ಗದಲ್ಲಿ ಮುನ್ನಡೆಯೋಣ. 


ಸತ್ಯ ಯುಗಕ್ಕಾಗಿ ಅಧಿಕೃತವಾಗಿ ಹೋದ ವರ್ಷ ಬಲಿ ಪಾಡ್ಯಮಿಯ ದಿನ ಸೇಡಂ ನಲ್ಲಿ (ಬ್ರಹ್ಮ ಕುಮಾರಿ ಆಶ್ರಮದಲ್ಲಿ) ಸತ್ಯ ಯುಗದ ಘೋಷಣೆ ಮೊಳಗಿತು.

ಈ ಘೋಷಣೆ ಒಂದು ದಿನ ವಿಶ್ವದಾದ್ಯಂತ ಪ್ರಸರಿಸಿ ಸತ್ಯ ಯುಗದ ಪರವಾದ ವಾತಾವರಣವನ್ನು ಖಂಡಿತ ನಿರ್ಮಿಸಲಿದೆ. ಸೇಡಂ ನೆಲದಲ್ಲಿ ಆರಂಭವಾದ ಈ ಸಂಗತಿಯನ್ನು ಭವಿಷ್ಯದಲ್ಲಿ ಜಗತ್ತು ಸ್ಮರಿಸುತ್ತದೆ. ನಿಶ್ಚಿತವಾಗಿಯೂ ಅಂತಹ ಸತ್ಯ ಯುಗದ ದಿನಗಳು ಬರಲಿವೆ.


ತಾವು ಸಹ ಆ ಸತ್ಯ ಯುಗದ ಭಾಗವಾಗುವ ಇಚ್ಛೆ ಹೊಂದುವಿರೆಂದು ನಾನು ನಿರೀಕ್ಷಿಸುತ್ತೇನೆ. ಅದಕ್ಕಾಗಿ ಮಾರ್ಗ ಯಾವುದು ? ಅದರ ಯೋಜನೆಗಳು ಏನು ? ಎನ್ನುವುದನ್ನು ಈ ಲೇಖನದ ಭಾಗ ಎರಡರಲ್ಲಿ ನೋಡೋಣ. 


ಒಂದು ಹೂ ಗಿಡದಿಂದ ಕೆಳಗಡೆ ಬಿದ್ದರೆ ದೊಡ್ಡ ವಿಷಯವಲ್ಲ. ಆದರೆ ಅದೇ ಗಿಡದಿಂದ ತೆಗೆದ ಹೂ ದೇವರ ಮುಡಿಗೆ ಏರಿಸಿದ ನಂತರ ಕೆಳಗೆ ಬಿದ್ದರೆ ದೇವರ ಪ್ರಸಾದವಾಗುತ್ತದೆ.


 ಇದೇ ರೀತಿ ಈ ವಿಡಿಯೋ ಬೇರೆ ದಿನ ನನಗೆ ಬಂದಿದ್ದರೆ ನಂಬಿಕೆ ಗಟ್ಟಿ ಗೊಳಿಸುವ ಒಂದು ವಿಷಯ ಮಾತ್ರ ಆಗಿರುತ್ತಿತ್ತು.  ತ್ಯಾಗದಿಂದ ಕೂಡಿದ ಶಿವರಾತ್ರಿ ವ್ರತದ ಮರುದಿನ, ಈ ವಿಡಿಯೋ ಸಂದೇಶ ಬಂದಿರುವ ಕಾರಣ ಇದು ಶಿವನ ಪ್ರಸಾದವೇ ಸರಿ.


https://youtu.be/uChSnin-lYg?si=6n3bUfOfAQvdjtpu


ಮೊದ ಮೊದಲು ಸತ್ಯ ಯುಗ ಎನ್ನುವುದು ಆಧ್ಯಾತ್ಮಿಕ ವ್ಯಕ್ತಿಗಳು ಮಾತಾಡುವ ವಿಷಯವಾಗಿತ್ತು. ಆದರೆ ಲೌಕಿಕದಲ್ಲಿ ಪೂರ್ಣವಾಗಿ ಮುಳುಗಿರುವ ಜನರ ಮಧ್ಯೆ ಸತ್ಯ ಯುಗದ ಚಿಂತನೆ ಈ ವಿಡಿಯೋದಲ್ಲಿ ಕಾಣಬಹುದು. ಇದು ಮುಂಬರುವ ಸತ್ಯ ಯುಗದ ಸೂಚಕವಾಗಿದೆ.


ಹೀಗಾಗಿ, ಈಗ ಮತ್ತಷ್ಟು ಗಟ್ಟಿಯಾಗಿ ಹೇಳೋಣ..


*"ಕಲಿಯುಗ ಕೊನೆಗೊಳ್ಳಲಿ

ಸತ್ಯ ಯುಗ ಪುನಃ ಆರಂಭವಾಗಲಿ"*


*"ಕಲಿಯುಗ ಕೊನೆಗೊಳ್ಳಲಿ 

ಸತ್ಯ ಯುಗ ಪುನಃ ಆರಂಭವಾಗಲಿ"*


*"ಕಲಿಯುಗ ಕೊನೆಗೊಳ್ಳಲಿ 

ಸತ್ಯ ಯುಗ ಪುನಃ ಆರಂಭವಾಗಲಿ"*


ಎಲ್ಲರಿಗೂ ವಂದನೆಗಳು


ಓಂ ನಮಃ ಶಿವಾಯ


✍️ URAIN NAMAH

ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆಗೆ ನಾಂದಿ


(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ)

https://youtu.be/uChSnin-lYg?si=6n3bUfOfAQvdjtpu


Comments

Popular posts from this blog

ಅಂಧ ಹೇಳವರು