ಪವಿತ್ರ ಮನಸ್ಸು ಗಂಗೆಯ ಆಸ್ಥಾನ


ಇಂದಿನ ಲೆಕ್ಕದಲ್ಲಿ ಕುಂಭ ಮೇಳದಲ್ಲಿ 45 ಕೋಟಿ ಜನರು ಸ್ನಾನ ಮಾಡಿದ್ದಾರೆ. 


ಇನ್ನೂ ಅದೆಷ್ಟೋ ಜನ ನಮ್ಮಿಂದ ಕುಂಭಮೇಳದಲ್ಲಿ ಭಾಗವಹಿಸಲು ಆಗುತ್ತಿಲ್ಲವಲ್ಲ ಎಂದು ಹಳಹಳಿಸುತ್ತಿದ್ದಾರೆ.


ದೇಶದ ಅತಿ ದೊಡ್ಡ ದೊಡ್ಡ ಧಾರ್ಮಿಕ ವ್ಯಕ್ತಿಗಳು ಜಗದ್ಗುರುಗಳು, ಮಹಾಂತ, ಮಹಾ ಮಂಡಲೇಶ್ವರರು, ನಾಗಾಗಳು, ಅಘೋರಿಗಳು, ಅನೇಕ ಸಾಧು ಸಂತರು ಪ್ರಯತ್ನಿಸುತ್ತಿರುವುದು ತ್ರಿವೇಣಿ ಸಂಗಮದ ಪುಣ್ಯ ನದಿಗಳ ಕೃಪೆಗೆ ಪಾತ್ರರಾಗಲು. ಮೂರು ನದಿಗಳಲ್ಲಿ ಮುಖ್ಯ ನದಿ ಗಂಗೆ. 


ಈಗ ಓದುತ್ತಿರುವ ಕಥೆ ಓದಿದ ನಂತರ ಇದು ಎಷ್ಟು ನಿಜವೋ ಎಷ್ಟು ಕಟ್ಟುಕತೆ ಎನ್ನುವ ಯೋಚನೆ ಎಲ್ಲರಿಗೂ ಬರುತ್ತದೆ. ಆದರೂ ಇದು ಇತಿಹಾಸದ ಒಂದು ಭಾಗವಾಗಿದೆ. ಹೀಗಾಗಿ ಈ ಕಥೆಯನ್ನು ಓದಿದವರಿಗೆ ಆ ಪುಣ್ಯ ಸ್ನಾನ ಮಾಡಿದ ಸ್ವಲ್ಪ ಭಾಗವಾದರೂ ಸಿಕ್ಕೆ ಸಿಗುತ್ತದೆ. ಇದು ನನ್ನ ಪೂರ್ಣ ವಿಶ್ವಾಸ.


ಅದು ವಾರಣಾಸಿಯ ಹತ್ತಿರದ ಗ್ರಾಮ ಅಲ್ಲಿ ನದಿಯಲ್ಲಿ ಸ್ನಾನ ಮಾಡಲು ಒಬ್ಬ ಬ್ರಾಹ್ಮಣ ಹೋಗುವಾಗ ತನ್ನ ಚಪ್ಪಲಿ ರಿಪೇರಿ ಮಾಡಲು ಒಬ್ಬ ಚಮ್ಮಾರನ ಹತ್ತಿರ ಹೋಗುತ್ತಾನೆ. ಚಮ್ಮಾರ ಚಪ್ಪಲಿ ರಿಪೇರಿ ಮಾಡಿದ ನಂತರ ಬ್ರಾಹ್ಮಣನ ಹತ್ತಿರ ದುಡ್ಡನ್ನು ಕೇಳದೆ ಒಂದು ಕೋರಿಕೆ ಮಂಡಿಸುತ್ತಾನೆ. ತಾನು ಉಳಿಸಿದ ಒಂದು ತಾಮ್ರದ ನಾಣ್ಯವನ್ನು ಕೊಟ್ಟು ಗಂಗಾ ನದಿಯಲ್ಲಿ ಹಾಕಲು ಕೇಳುತ್ತಾನೆ. 


ಇನ್ನೊಂದು ಮಾತನ್ನು ಸಹ ಹೇಳುತ್ತಾನೆ, ನೇರವಾಗಿ ಗಂಗೆಯಲ್ಲಿ ನಾಣ್ಯ ಹಾಕಬೇಡಿ ನಿಮ್ಮ ಮಗ ರವಿ ಈ ನಾಣ್ಯ ಕಳುಹಿಸಿದ್ದಾನೆ. ತೆಗೆದುಕೊಳ್ಳಿ, ಎಂದು ಹೇಳಿ. ಆಗ ಗಂಗಾ ಮಾತೆ ಕೈ ಚಾಚಿದರೆ ನಾಣ್ಯ ಕೈಯಲ್ಲಿ ಇಡಿ. ಇಲ್ಲದಿದ್ದರೆ ಬೇಡ ಎನ್ನುತ್ತಾನೆ. 


ಆಗ ಬ್ರಾಹ್ಮಣನಿಗೆ ಖುಷಿಯಾಗುತ್ತದೆ. ಈ ಚಮ್ಮಾರ ನ ಮಾತು ಗಂಗೆ ಹೇಗೆ ಕೇಳುತ್ತಾಳೆ. ಕೇಳಿ ತನ್ನ ಕೈಯನ್ನು ಎಲ್ಲಿ ಚಾಚುತ್ತಾಳೆ. ಈ ನಾಣ್ಯ ನನ್ನ ಪಾಲಿಗಾದಂತೆ ಎಂದು ಯೋಚಿಸುತ್ತಾನೆ. 


ಆದರೆ ಗಂಗೆಯಲ್ಲಿ ಸ್ನಾನ ಮಾಡುವಾಗ ಚಮ್ಮಾರ ಹೇಳಿದಂತೆ, ಗಂಗಾ ಮಾತೆ ನಿಮ್ಮ ಮಗು ರವಿ ಈ ನಾಣ್ಯ ಕಳುಹಿಸಿದ್ದಾನೆ ತೆಗೆದುಕೊಳ್ಳಿ ಎನ್ನುತ್ತಾನೆ. ಆಗ ವಿಸ್ಮಯ ಎನ್ನುವಂತೆ ಒಂದು ಹೆಣ್ಣು ಕೈ ಮೇಲೆ ಏಳುತ್ತದೆ ಆ ನಾಣ್ಯವನ್ನು ಸ್ವೀಕರಿಸುತ್ತದೆ. ಇದು ನಿಜವೋ ಸುಳ್ಳೋ ಎನ್ನುವ ಯೋಚನೆಯಲ್ಲಿಯೇ‌ ಆ ಬ್ರಾಹ್ಮಣ ಭ್ರಾಂತಿಯ ಸ್ಥಿತಿಯಲ್ಲಿರುವಾಗ ಆ ಕೈ ಮತ್ತೆ ಮೇಲೆ ಬಂದು ಒಂದು ಬಂಗಾರದ ಬೆಳೆ ನೀಡುತ್ತದೆ ಹಾಗೂ ಇದು ನನ್ನ ಮಗನಿಗೆ ನೀಡು ಎಂದು ಹೇಳುತ್ತದೆ. ಆತನಿಗೆ ದಿಕ್ಕೆ ತೋಚುವುದಿಲ್ಲ. 


ಆದರೂ ಸಾವರಿಸಿಕೊಂಡು ಗಂಗಾ ಮಾತೆ ಒಬ್ಬ ಚಮ್ಮಾರನಿಗೆ ಈ ಬಳೆ ಕೊಟ್ಟಿದ್ದಾರೆ ಎಂದರೆ ಯಾರು ನಂಬುತ್ತಾರೆ. ಇದನ್ನು ರಾಜನಿಗೆ ಕೊಟ್ಟು ಬಹುಮಾನ ಪಡೆಯಬೇಕು ಎಂದು ರಾಜನಿಗೆ ಕೊಡುತ್ತಾನೆ. ರಾಜನ ರಾಣಿ ಇದೆ ರೀತಿಯ ಇನ್ನೊಂದು ಬಳೆ ಬೇಕೆಂದು ಹಠ ಮಾಡುತ್ತಾಳೆ.  ‌ ಆಗ ರಾಜ ಆ ಬ್ರಾಹ್ಮಣನಿಗೆ ಕರೆದು ನೀನು ಇದೇ ರೀತಿಯ ಇನ್ನೊಂದು ಬಳೆ ತೆಗೆದುಕೊಂಡು ಬಾ ಎನ್ನುತ್ತಾನೆ. ತೆರೆದಿದ್ದರೆ, ನಿನಗೆ ಮರಣದಂಡನೆ ಶಿಕ್ಷೆ ವಿಧಿಸುತ್ತೇನೆ, ಎಂದು ಹೇಳುತ್ತಾನೆ. 


ಆಗ ಬ್ರಾಹ್ಮಣ ಗಾಬರಿಯಾಗುತ್ತಾನೆ. ನಾನು ಮೊದಲೇ ಗಂಗಾ ಮಾತೆಯ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದೇನೆ. ಗಂಗಾ ಮಾತೆ ನನ್ನ ಮಾತು ಕೇಳುವುದಿಲ್ಲ. ಈಗ ಚಮ್ಮಾರ ಮಾತ್ರ ನನ್ನನ್ನು ಸಾವಿನಿಂದ ಕಾಪಾಡುತ್ತಾನೆ ಎಂದು. ಆತನ ಹತ್ತಿರ ಹೋಗಿ ಎಲ್ಲಾ ವಿಷಯಗಳನ್ನು ಹೇಳುತ್ತಾನೆ. 


ಸತ್ಯವನ್ನು ಕೇಳಿದ ನಂತರವೂ ಆತ ಕೋಪ ಮಾಡಿಕೊಳ್ಳುವುದಿಲ್ಲ. ಆ ಚಮ್ಮಾರ ತಾನು ಪ್ರಾಣಿಗಳ ಚರ್ಮ ಹದ ಮಾಡಲು ಬಳಸುತ್ತಿದ್ದ ದೊಡ್ಡ ಪಾತ್ರೆಯ ನೀರಿನಲ್ಲಿ ಗಂಗಾ ಮಾತೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಆಗ ಆ ಪಾತ್ರೆಯ ನೀರು ಗಂಗೆಯಷ್ಟೇ ಪರಿಶುದ್ಧವಾಗುತ್ತದೆ.


ಆ ಶುಭ್ರ ನೀರಿನ ತಳದಲ್ಲಿ ಅನೇಕ ಬಳೆಗಳು ಕಾಣುತ್ತವೆ. ಆಗ ಚಮ್ಮಾರ ಬ್ರಾಹ್ಮಣನಿಗೆ ನಿನಗೆ ಯಾವ ಬೆಳೆ ಬೇಕು ತೆಗೆದುಕೋ ಎನ್ನುತ್ತಾನೆ. 


ಆಗ ಬ್ರಾಹ್ಮಣ ಬೆಳೆ ತೆಗೆದುಕೊಂಡು ರಾಜನಿಗೆ ಕೊಟ್ಟು ಚಮ್ಮಾರನ ಎಲ್ಲಾ ವಿಷಯವನ್ನು ಹೇಳುತ್ತಾನೆ. ಈ ವಿಷಯ ತಿಳಿದ ಕೂಡಲೇ ರಾಜ ತನ್ನ ಪರಿವಾರದವರನ್ನೇಲ್ಲಾ ಕರೆದುಕೊಂಡು ಚಮ್ಮಾರರನಿಗೆ ಸನ್ಮಾನ ಮಾಡಲು ಆತನಿರುವ ಗುಡಿಸಲಿಗೆ ಹೋಗುತ್ತಾನೆ. ಆತನಿಗೆ ಶರಣಾಗಿ ಆತನನ್ನು ಸನ್ಮಾನ ಮಾಡುತ್ತಾನೆ. ರಾಜ ಇದು ಹೇಗೆ ಸಾಧ್ಯವಾಯಿತು ಎಂದು ಕೇಳಿದಾಗ ನಮ್ಮ ಮನಸ್ಸು ಪರಿಶುದ್ಧವಿದ್ದರೆ ನಾವು ಇರುವ ಸ್ಥಳದಲ್ಲಿಯೇ ಗಂಗೆ ಬರುತ್ತಾಳೆ. ನಮ್ಮ ಮನಸ್ಸು ಶುದ್ಧವಾಗಿ ಇಟ್ಟುಕೊಳ್ಳಬೇಕು. ಅದೇ ಗಂಗೆಯ ಆಸ್ಥಾನ ಎಂದು ಹೇಳುತ್ತಾರೆ.


ಇಂದು ಗಂಗಾ ತ್ರಿವೇಣಿ ಕೃಪೆಗೆ ಪಾತ್ರರಾಗಲು ದೇಶದ ವಿದೇಶದ ಆಧ್ಯಾತ್ಮ ಜೀವಿಗಳು, ಜಗದ್ಗುರುಗಳು, ಸಾಧು, ಸಂತರು ಗಂಗಾ ಮಾತೆಯ ಕೃಪೆಗೆ ಪಾತ್ರರಾಗಲು ಏನೇನೋ ಮಾಡುತ್ತಿದ್ದೇವೆ. ಆದರೆ ಅಂದು ಚಮ್ಮಾರ ರವಿದಾಸರು ತಾವು ಇದ್ದಲ್ಲಿಗೆ ಗಂಗೆಯನ್ನು ಆಹ್ವಾನಿಸಿದರು. 


ಇಂದು ಆ ಮಹಾತ್ಮಾ ಸಂತ ರವಿದಾಸ ಜಯಂತಿ. ನಾವುಗಂಗಾ ಸ್ನಾನ ಮಾಡಿಲ್ಲದರೂ ನಮ್ಮ ಮನಸ್ಸು ಹೇಗಿದೆ ಎನ್ನುವುದನ್ನು ಪರಿಶೀಲಿಸೋಣ. ರವಿದಾಸ ಸತ್ತ ಪ್ರಾಣಿಗಳ ಚರ್ಮದಿಂದ ಚಪ್ಪಲಿ ಮಾಡುವ ಕಾಯಕ ಮಾಡುತ್ತಿದ್ದರೂ, ಅವರ ಕೈಗೆ ರಕ್ತ ಮೆತ್ತಿರುತಿತ್ತು. ಆದರೂ ಅವರ ಪವಿತ್ರ ಮನಸ್ಸನ್ನು ಗಂಗಾ ಮಾತೆ ನೋಡಿದಳು. ಅದಕ್ಕೆ ಅವರ ಪಾತ್ರೆಯಲ್ಲಿಯೇ ಪ್ರತ್ಯಕ್ಷಳಾದಳು.


 ನಮ್ಮ ಮನಸ್ಸು ಸಹ ಕಪಟತನ ಹಾಗೂ ದುಷ್ಟ, ಕಾಮ, ಕ್ರೋಧ ಲೋಭ ಮೋಹ ಮದ ಮತ್ಸರಗಳ ಗುಣಗಳಿಂದ ಮುಕ್ತರಾಗಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಪವಿತ್ರವಾಗಿದ್ದಲ್ಲಿ, ನಾವು ಗಂಗೆ ಇರುವ ಕಡೆ ಹೋಗುವ ಅವಶ್ಯಕತೆ ಇಲ್ಲ. ನಾವು ಕರೆದ ಕಡೆ ಗಂಗೆ ಬರುತ್ತಾಳೆ. ಈ ಸಂಗತಿಯನ್ನೆ ಸಂತ ರವಿದಾಸರ ಕಥೆ ಹೇಳುತ್ತದೆ.


ನಾವೆಲ್ಲರೂ ನಮ್ಮ ಮನಸ್ಸನ್ನು ಪವಿತ್ರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸೋಣ. ಆಗ ಗಂಗೆ ನಾವಿರುವ ಸ್ಥಳದಲ್ಲಿಯೇ ಬರುತ್ತಾಳೆ. 


ಎಲ್ಲರಿಗೂ ಸಂತ ರವಿದಾಸ ಜಯಂತಿಯ ಶುಭಾಶಯಗಳು. 


ಓಂ ನಮಃ ಶಿವಾಯ


✍️ URAIN NAMAH 

ಈ ಪದ ಸತ್ಯ ಯುಗದ ಮುನ್ನುಡಿ 

ಈ ಪದ ಯುಗ ಪರಿವರ್ತನೆಗೆ ನಾಂದಿ 


(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ)


ಸಂತ ರವಿದಾಸ ಜಯಂತಿ

12/02/2025

Comments

Popular posts from this blog

ಅಂಧ ಹೇಳವರು