*ಒಂದು ಪ್ರಶ್ನೆ, 

ಪ್ರಶ್ನೆ ಎಂದರೆ ಏನು ?*


ಇದೊಂದು ವಿಚಿತ್ರ ಪ್ರಶ್ನೆ ಎನಿಸಬಹುದು. ಈ ಪ್ರಶ್ನೆ ಕೇಳುತ್ತಿರುವ ಕಾರಣ, ಸಾಮಾನ್ಯವಾಗಿ ನಾನು ಏನಾದರೂ ಜ್ಞಾನದ ವಿಷಯ ಹೇಳುವ ಮುಂಚೆ ಪ್ರಶ್ನೆ ಕೇಳುತ್ತೇನೆ. ಈ ಪ್ರಶ್ನೆ ಕೇಳುವ ಉದ್ದೇಶ ಏನು  ? ಎನ್ನುವುದು ಪ್ರಶ್ನೆ.


ಪರಮ ಗುರುಗಳಾದ ಹನುಮಾನ ದೇವರು ತಮ್ಮ ಬ್ರಹ್ಮ ಜ್ಞಾನ ನೀಡುವ ಸಂದರ್ಭದಲ್ಲಿ, ಒಬ್ಬ ಮಾತಂಗ ಪ್ರಶ್ನೆ ಕೇಳುತ್ತಾನೆ. ಆ ಕೂಡಲೇ ಅಲ್ಲಿದ್ದ ಇತರರು ನಗುತ್ತಾರೆ. ಆಗ ಪರಮ ಗುರು, ಹನುಮಾನ  ದೇವರು ನಗುತ್ತಿರುವವರ ಮೇಲೆ ಕೋಪಗೊಳ್ಳುತ್ತಾರೆ.


ಕೋಪಗೊಂಡು ಹೇಳುತ್ತಾರೆ, ಒಬ್ಬ ವ್ಯಕ್ತಿ ಕತ್ತಲೆಯ ಕೋಣೆಯಲ್ಲಿ ಇದ್ದಾನೆ, ಎಂದರೆ ಕತ್ತಲೆಯ ಕೋಣೆಯಿಂದ ಹೊರಗೆ ಬರಲು ಒಂದು ಬೆಳಕಿನ ಕಿರಣ ಬೇಕು. ಆ ಬೆಳಕಿನ ಕಿರಣವೇ ಕತ್ತಲೆಯ ಕೋಣೆಯಿಂದ ಹೊರಗೆ ಬರುವ ದಾರಿಯನ್ನು ತೋರಿಸುತ್ತದೆ. ಬಂಧನದಿಂದ ಬಿಡುಗಡೆಯ ಆಶಾವಾದವನ್ನು ತೋರುತ್ತದೆ. 


ಪ್ರಶ್ನೆ ಎಂದರೆ ಏನು ? ಎನ್ನುವ ಪ್ರಶ್ನೆಗೆ ಉತ್ತರ 


  ಅಜ್ಞಾನದ ಕತ್ತಲೆಯ ಕೋಣೆಯಲ್ಲಿ ಬಂಧನದಲ್ಲಿ ಇರುವವನಿಗೆ, ಸ್ವಾತಂತ್ರ್ಯ ಪಡೆದುಕೊಳ್ಳಲು ಇರುವ "ಜ್ಞಾನದ ಬಾಗಿಲೇ" ಪ್ರಶ್ನೆ. 


(ಹಾಗೆಯೇ, ಅನ್ಯಾಯ ಅನೀತಿ ಅಧರ್ಮ ಅನಾಚಾರಗಳಲ್ಲಿ ಮುಳುಗಿದವರಿಗೆ ಹಾಗೂ ಅಜ್ಞಾನ ಎನ್ನುವ ನಿದ್ರೆಯಲ್ಲಿ ಮಲಗಿದವರಿಗೆ ಎಚ್ಚರಿಸಲು ಇರುವ ಸಾಧನವೇ ಪ್ರಶ್ನೆ.)


ಆದರೆ ಅವಮಾನಕ್ಕೆ ಅಂಜಿ ಬಹಳಷ್ಟು ಜನ ತಮಗೆ ಒಂದು ವಿಷಯದ ಬಗ್ಗೆ ಗೊತ್ತಿಲ್ಲದೆ ಇದ್ದರೂ ಪ್ರಶ್ನೆ ಕೇಳುವುದೇ ಇಲ್ಲ. ಪ್ರಶ್ನೆ ಕೇಳಿದರೆ, ನಾವು ಇನ್ನೊಬ್ಬರ ದೃಷ್ಟಿಯಲ್ಲಿ ಚಿಕ್ಕವರಾಗುತ್ತೇವೆ. ಅವರಲ್ಲಿ ನಮ್ಮ ಬಗ್ಗೆ ಗೌರವ ಕಡಿಮೆಯಾಗುತ್ತದೆ. ನಮ್ಮನ್ನು ತಿಳುವಳಿಕೆ ಇಲ್ಲದವರು ಎಂದು ಭಾವಿಸುತ್ತಾರೆ, ಎನ್ನುವ ಭಾವನೆಯಿಂದ ನಾವು ನಮಗೆ ಗೊತ್ತಿಲ್ಲದೆ ಇದ್ದರೂ, ಅದರ ಬಗ್ಗೆ ಪ್ರಶ್ನೆಯನ್ನು ಕೇಳುವುದೇ ಇಲ್ಲ. ಆಗ ಜ್ಞಾನದಿಂದ ವಂಚಿತರಾಗಿಯೇ ಇರುತ್ತೇವೆ.


ಒಂದು ವಿಷಯ ನಾವು ನೆನಪಿಡಬೇಕು. *ಯಾರು ಒಂದು ಸ್ವಲ್ಪ ಸಮಯ ಮೂರ್ಖರಾಗಲು ಸಿದ್ದರಾಗಿರುತ್ತಾರೆಯೋ ? ಅವರು ಪೂರ್ಣ ಜೀವನ ಜ್ಞಾನವಂತರಾಗುತ್ತಾರೆ.* ಹೀಗಾಗಿ *ಪ್ರಶ್ನೆ ಕೇಳಿ ಸ್ವಲ್ಪ ಸಮಯ ಮೂರ್ಖರಾಗುವುದು ಉತ್ತಮವೋ ? ಪ್ರಶ್ನೆ ಕೇಳದೆ ದೀರ್ಘ ಕಾಲ ಮೂರ್ಖರಾಗುವುದು ಉತ್ತಮವೋ ?* ಎನ್ನುವುದನ್ನು ನಾವು ಚಿಂತಿಸಬೇಕು.


ರೈತ ಹೊಲದಲ್ಲಿ ಬೆಳೆ ಬೆಳೆಯಲು ಒಮ್ಮೆಗೆ ಬೀಜ ಬಿತ್ತುವುದಿಲ್ಲ. ಹೊಲದಲ್ಲಿ ಬೀಜ ಬಿತ್ತುವ ಮುಂಚೆ ಹೊಲವನ್ನು ನೇಗಿಲು ಹೊಡೆಯಲಾಗುತ್ತದೆ. ನೇಗಿಲು ಹೊಡೆದ ನಂತರ ಮಣ್ಣು ಸಡಿಲವಾಗುತ್ತದೆ. ಆ ಸಮಯದಲ್ಲಿ ಮಳೆ ಬಂದರೆ ಮಣ್ಣು ನೀರನ್ನು ಹೀರಿಕೊಂಡು ಮೆದುವಾಗುತ್ತದೆ. ಆ ಸಮಯದಲ್ಲಿ ಬೀಜವನ್ನು ಬಿತ್ತಿದಾಗ ಹುಲುಸಾದ ಬೆಳೆ ಬೆಳೆಯುತ್ತದೆ. ಕಾರಣ ಗಟ್ಟಿಯಾದ ಭೂಮಿಯಲ್ಲಿ ನೇರವಾಗಿ ಬಿತ್ತನೆ ಮಾಡಿದರೆ ಸರಿಯಾದ ಬೆಳೆ ಬರುವುದಿಲ್ಲ.


ಜ್ಞಾನವನ್ನು ಪಡೆಯಲು ಸಹ ಮೆದುಳು ಎನ್ನುವ ಹೊಲದಲ್ಲಿ ಪ್ರಶ್ನೆಗಳು ಎನ್ನುವ ನೆಗಿಲನ್ನು ಹೊಡೆಯಬೇಕಾಗುತ್ತದೆ. ಇದು ಮೆದುಳಿಗೆ ಒಂದು ರೀತಿಯ ವ್ಯಾಯಾಮ.


 ಏಕೆ ? ಯಾರು ? ಏನು ? ಎಲ್ಲಿ ? ಹೇಗೆ ? ಯಾವಾಗ ? ಯಾವ ರೀತಿ ? ಈ ರೀತಿ *"ಪ್ರಶ್ನೆಗಳು ಎನ್ನುವ ನೆಗಿಲಿನಿಂದ"* ಮೆದುಳು ಎನ್ನುವ ಹೊಲ ಸಡಿಲವಾದಾಗ, ಬೀಜ ಎನ್ನುವ ಉತ್ತರ ಮೆದುಳಿನಲ್ಲಿ ನಾಟುತ್ತದೆ. ಆಗ ಆನಂದ, ಪೂರ್ಣತೆ, ಸಂತೃಪ್ತಿಯೆನ್ನುವ ಬೆಳೆ ಬೆಳೆಯಲು ಸಹಾಯವಾಗುತ್ತದೆ. 


ನೇಗಿಲು ಹೊಡೆಯದಿದ್ದರೆ ಬೀಜ ನಾಟುವುದಿಲ್ಲ, ಮೊಳಕೆಯೊಡೆಯುವುದಿಲ್ಲ. ಅದಕ್ಕೆ ರೀತಿ ಪ್ರಶ್ನೆಗಳೇ ಇಲ್ಲದಿದ್ದರೆ ಉತ್ತರ ತಲೆಯಲ್ಲಿ ಇಳಿಯುವುದಿಲ್ಲ ಹಾಗೂ ಕೇಳಿದ ಉತ್ತರ ನೆನಪಿನಲ್ಲಿ ಸಹ ಇರುವುದಿಲ್ಲ.


ಪ್ರಶ್ನೆ ಎನ್ನುವುದು, ಗೊತ್ತಿಲ್ಲದೆಯಿರುವದರ ಕುರಿತು ಒಂದು ರೀತಿಯ ಆಸಕ್ತಿ. ಇದನ್ನೇ ಜ್ಞಾನಕ್ಕೆ ಸಂಬಂಧಿಸಿದಂತೆ ಜಿಜ್ಞಾಸೆ ಎನ್ನುತ್ತಾರೆ. ಈ ಜಿಜ್ಞಾಸೆ ಶಿಷ್ಯನಲ್ಲಿರುವ ಜ್ಞಾನದ ಹಸಿವನ್ನು ತೋರಿಸುತ್ತದೆ. ಹಸಿವೆಯಾದಾಗ ಎಂತಹ ಆಹಾರವೂ ರುಚಿಸುತ್ತದೆ. ಹಾಗೂ ಸೇವಿಸಿದ ಆಹಾರವೂ ಸರಿಯಾಗಿ ಜೀರ್ಣವಾಗುತ್ತದೆ. 


ಹಸಿವೆ ಇಲ್ಲದವರಿಗೆ ಎಂತಹ ಭಕ್ಷ್ಯ ಭೋಜನ ನೀಡಿದರು ರುಚಿಸುವುದಿಲ್ಲ. ಹಾಗೆ ನೀಡಿದ ಆಹಾರವು ಅವರಲ್ಲಿ ಜೀರ್ಣವಾಗುವುದಿಲ್ಲ. ಹೀಗಾಗಿ ಆಹಾರವು ವ್ಯರ್ಥ, ಆಹಾರವನ್ನು ತಯಾರಿಸಿದ ಸಮಯವೂ ವ್ಯರ್ಥ ಹಾಗೂ ಆಹಾರ ಸೇವಿಸಿದವರ ಆರೋಗ್ಯವು ಹಾಳು. 


ಇದರಂತೆ ಜ್ಞಾನದ ಹಸಿವೆ ಇಲ್ಲದವರಿಗೆ *ಜ್ಞಾನ ನೀಡುವವರ ಸಮಯ, ಶಕ್ತಿ ಎರಡು ವ್ಯರ್ಥ.*


ಹೀಗಾಗಿ ಪಡೆದ ಜ್ಞಾನ ಜೀರ್ಣವಾಗಲು, ಜೀರ್ಣವಾದ ಜ್ಞಾನ ನಮ್ಮ ಶಕ್ತಿಯಾಗಿ ಮಾರ್ಪಡಲು ಹಾಗೂ ಜ್ಞಾನ ನೀಡುವವರ ಸಮಯ, ಶಕ್ತಿ ಸದುಪಯೋಗವಾಗಬೇಕಾದರೆ, ಅದನ್ನು ಪಡೆಯುವವರಲ್ಲಿ ಜಿಜ್ಞಾಸೆ ಎನ್ನುವ ಜ್ಞಾನದ ಹಸಿವು ಬೇಕು. 


ಈ ಜಿಜ್ಞಾಸೆಯೇ ಪ್ರಶ್ನೆಗಳ ರೂಪದಲ್ಲಿರುತ್ತದೆ. ಆಧುನಿಕ ವಿಜ್ಞಾನದಲ್ಲಿ ಸರ್ ಐಸಾಕ್ ನ್ಯೂಟನ್ ಎನ್ನುವ ವಿಜ್ಞಾನಿ ಗುರುತ್ವಾಕರ್ಷಣೆ ನಿಯಮ ಕಂಡು ಹಿಡಿದರು. ಈ ಸಂಶೋಧನೆಯ ಹಿಂದೆ ಇದದ್ದೇ, ಸೇಬೀನ ಹಣ್ಣು ನೇರವಾಗಿ ಕೆಳಗೆಯೇ ಏಕೆ ಬೀಳುತ್ತದೆ ? ಆಚೆ, ಈಚೆ ಪಕ್ಕದಲ್ಲಿ ಏಕೆ ಬೀಳುವುದಿಲ್ಲ ? ಮೇಲೆ ಏಕೆ ಹೋಗುವುದಿಲ್ಲ? ಎನ್ನುವ ಪ್ರಶ್ನೆ.


ಇದೇ ರೀತಿ ಮನುಷ್ಯನ ದುಃಖಗಳಿಗೆ ಕಾರಣವೇನು ? ಮನುಷ್ಯ ದುಃಖಗಳಿಂದ ಮುಕ್ತನಾಗುವ ಉಪಾಯವೇನು ? ಎನ್ನುವ ಪ್ರಶ್ನೆಗೆ ಉತ್ತರ ಪಡೆಯಲು ಹೋದಾಗಲೇ ಯುವರಾಜ ಗೌತಮನು, ಬುದ್ಧನಾಗಿ ಪರಿವರ್ತನೆಯಾದ.


ಹೀಗೆ ಪ್ರಶ್ನೆಗಳಿಂದಲೇ ವಿಜ್ಞಾನವೂ, ಜ್ಞಾನವೂ, ಆಧ್ಯಾತ್ಮವೂ ಬೆಳೆದುಬಂದಿದೆ.


ಇನ್ನೊಂದು ಮಹತ್ವದ ವಿಷಯ, ಪ್ರಶ್ನೆಯೆಂಬ ನೇಗಿಲಿನಿಂದ, ಯಾವ ವ್ಯಕ್ತಿಯ ಮೆದುಳು ಎನ್ನುವ ಹೊಲವನ್ನು ಸಡಿಲ ಮಾಡಲಾಗಿರುತ್ತದೆಯೋ, ಅಲ್ಲಿ ಯಾವುದೇ ರೀತಿಯಿಂದ ಪ್ರಕೃತಿಯೂ, ಉತ್ತರ ಎಂಬ ಬೀಜವನ್ನು ಬಿತ್ತುತ್ತದೆ.


ಹೀಗಾಗಿ ನಮಗೆ ತಿಳಿಯದ ವಿಷಯಗಳ ಕುರಿತು ತಿಳಿದವರ ಹತ್ತಿರ ಅಥವಾ ಮನಸ್ಸಿನಲ್ಲಿಯೇ ಪ್ರಶ್ನೆ ಕೇಳಬೇಕು. ಆಗ ಸಮಾಧಾನ ನೀಡುವ ಉತ್ತರ ಸಿಗುತ್ತದೆ. ಈ ಉತ್ತರ ಮುಂದಿನ ನಮ್ಮ ಮುಂದಿನ ಉತ್ತಮ ಜೀವನ ನಿರ್ಮಾಣ ಮಾಡಲು ಸಹಾಯವಾಗುತ್ತದೆ.


ನ್ಯೂಟನ್ ಮತ್ತು ಬುದ್ಧರಂತೆ ನನ್ನಲ್ಲಿ ಮೂಡಿದ ಪ್ರಶ್ನೆಗಳೇ ಜಗತ್ತಿನ ಮನುಷ್ಯರಲ್ಲಿರುವ ಅನ್ಯಾಯ, ಅನೀತಿ, ಅಧರ್ಮ, ಹಿಂಸೆ, ಮೃಗೀಯ ವರ್ತನೆಗಳು, ಅನೈತಿಕತೆ, ಮೋಸ, ವಂಚನೆ, ಭ್ರಷ್ಟಾಚಾರ, ವಿಕಾರಗಳು, ವಿಕೃತಿಗಳಿಗೆ ಕಾರಣವೇನು ? 

ಹಾಗೂ ಇವು ನಿರ್ಮೂಲವಾಗಬೇಕಾದರೆ ಏನು ಮಾಡಬೇಕು ? ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ನಾನು ಉತ್ತರ ಕಂಡುಕೊಂಡಿದ್ದೇನೆ. 


ಆ ಉತ್ತರವೇ ಜಗತ್ತಿನ ಮನುಷ್ಯರ ಎಲ್ಲಾ ರೀತಿಯ ಅನಾಚಾರಗಳಿಗೆ ಮೂಲ ಕಾರಣ ಕಲಿಯುಗ. ಅನಾಚಾರ ನಿರ್ಮೂಲ ಮಾಡಲು ಬೇಕಾಗಿರುವ ಪರಿಹಾರವೇ ಸತ್ಯ ಯುಗ. ಈಗ ಬರುವ ಮತ್ತೊಂದು ಪ್ರಶ್ನೆ ಸತ್ಯ ಯುಗ ಹೇಗೆ ನಿರ್ಮಾಣವಾಗುತ್ತದೆ ? ಎನ್ನುವುದು. 


ಈ ಪ್ರಶ್ನೆಗೂ ಸಹ ಪ್ರಕೃತಿ ಉತ್ತರಿಸಲಿದೆ.


ಜಗತ್ತಿನ ಸಮಸ್ಯೆಗಳು ಕೇವಲ ಜಗತ್ತಿಗೆ ಸೀಮಿತವಾಗಿರುವುದಿಲ್ಲ. ಈ ಸಮಸ್ಯೆಗಳು ನಮ್ಮನ್ನು, ನಿಮ್ಮನ್ನು, ನಿಮ್ಮ ಸಂಬಂಧಿಕರನ್ನು, ಬಂಧು, ಬಳಗದವರನ್ನು ಸಮಸ್ಯೆಗಳು ತೊಂದರೆ ದುಃಖ ಕಷ್ಟಗಳನ್ನು ನೀಡುತ್ತವೆ.


ಈಗ ನಾನು ನಿಮಗೆ ಕೇಳುವ ಪ್ರಶ್ನೆ. ನಿಮ್ಮನ್ನು, ನಿಮ್ಮ ಸಂಬಂಧಿಕರನ್ನು, ಬಂಧು ಬಳಗದವರನ್ನು ಅನ್ಯಾಯ, ಅನೀತಿ, ಅಧರ್ಮ, ಹಿಂಸೆ, ಮೃಗೀಯ ವರ್ತನೆಗಳು, ಅನೈತಿಕತೆ, ಮೋಸ, ವಂಚನೆ, ಭ್ರಷ್ಟಾಚಾರ, ವಿಕಾರಗಳು, ವಿಕೃತಿಗಳಿಂದ ಮತ್ತು ಪ್ರಕೃತಿ ವಿಕೋಪಗಳಿಂದ ಪಾರು ಮಾಡುವುದು ಯಾವುದು ?


ದೇವರು ಎನ್ನುವ ಪರಮ ಸತ್ಯ ಬಿಟ್ಟು ಅನ್ಯ ಮಾರ್ಗವಿಲ್ಲ. ಇದು ಇರುವುದು ನಮ್ಮೆಲ್ಲರ ಒಳಗಡೆಯೇ. ಪ್ರತಿಯೊಬ್ಬರಲ್ಲಿ ಈ ಪರಮ ಸತ್ಯ ನೆಲೆ ನಿಂತಾಗ ಇಡೀ ಜಗತ್ತೇ ಸತ್ಯ ಯುಗವಾಗಿ ಪರಿವರ್ತನೆಯಾಗುತ್ತದೆ.‌ 


ಇದಕ್ಕಾಗಿ 


ಎಲ್ಲರ ಮನಸ್ಸಿನಿಂದ ಒಂದು ಇಚ್ಛೆ ಹೊರಹೊಮ್ಮಲಿ, ಸತ್ಯ ಯುಗ ಬೇಗ ನಿರ್ಮಾಣವಾಗಲಿ...


ಎಲ್ಲರ ಮನಸ್ಸಿನಿಂದ ಒಂದು ಇಚ್ಛೆ ಹೊರಹೊಮ್ಮಲಿ, ಸತ್ಯ ಯುಗ ಬೇಗ ನಿರ್ಮಾಣವಾಗಲಿ...


ಸತ್ಯ ಯುಗ ಬೇಗ ನಿರ್ಮಾಣವಾಗಲಿ...


ಎಲ್ಲರಿಗೂ ಒಳ್ಳೆಯದಾಗಲಿ


ಓಂ ನಮಃ ಶಿವಾಯ 


✍️ URAIN NAMAH 

ಈ ಪದ ಸತ್ಯ ಯುಗದ ಮುನ್ನುಡಿ.

ಈ ಪದ ಯುಗ ಪರಿವರ್ತನೆಗೆ ನಾಂದಿ.


(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ )


27/07/2024

ಶನಿವಾರ, (ಪರಮ ಗುರು, ಸತ್ಯ ಯುಗದ ಮಾರ್ಗದರ್ಶಕ ಹನುಮಾನ ದೇವರನ್ನು ನೆನಪಿಸುವ ವಾರ)

Comments