ಗುರು ಅಂದರೆ ಯಾರು ?
ಸಬ ಧರತಿ ಕಾಗದ ಕರುಂ,
ಲೇಖನಿ ಸಬ ಬನರಾಯ
ಸಾತ ಸಮುದ್ರ ಕೀ ಮಾಸಿ ಕರುಂ
ಗುರು ಗುಣ ಲಿಖಾ ನ ಜಾಯ
ಭಾವಾರ್ಥ
ನಮಗೆ ಏನಾದರೂ ಬರೆಯಬೇಕಾದರೆ ಕಾಗದ, ಪೆನ್ನು ಮತ್ತು ಶಾಹಿ ಬೇಕು. ಬರೆಯುವದಕ್ಕೆ ಪೆಪರಿನ ಕಾಗದಕ್ಕೆ ಬದಲಾಗಿ ಮನುಷ್ಯ, ಪ್ರಾಣಿ, ಪಶು, ಪಕ್ಷಿ, ಗಿಡ ಮರ ಪರ್ವತ ಹೊಂದಿರುವ ಅತ್ಯಂತ ವಿಶಾಲವಾಗಿರುವ ಇಡೀ ಭೂಮಿಯನ್ನೇ ಕಾಗದವನ್ನಾಗಿ ಮಾಡಿಕೊಂಡರು.... .
ಇಡೀ ಜಗತ್ತಿನಲ್ಲಿರುವ ಅಷ್ಟು ಗಿಡ ಮರಗಳನ್ನು ಲೇಖನಿಯನ್ನಾಗಿ ಮಾಡಿಕೊಂಡರು... .
ಎಲ್ಲಾ ಏಳು ಸಮುದ್ರದ ನೀರನ್ನೇ ಶಾಹಿಯನ್ನಾಗಿ ಬಳಸಿದರೂ ಸಹ ಗುರುವಿನ ಗುಣವನ್ನು, ಗುರುವಿನ ಮಹತ್ವವನ್ನು, ಗುರುವಿನ ಶ್ರೇಷ್ಠತೆಯನ್ನು ಹೇಳಲು ಸಾಧ್ಯವಿಲ್ಲ.
ಈ ಮಾತನ್ನು ಹೇಳಿದವರು ಯಾರೋ ಸಾಮಾನ್ಯ ವ್ಯಕ್ತಿಯಲ್ಲ. ಸಂತ ಶ್ರೇಷ್ಠರಾದ ಕಬೀರ್ ದಾಸರು ಈ ಮಾತನ್ನು ಹೇಳಿದ್ದಾರೆ. ಅಷ್ಟೊಂದು ಮಹಾನ್ ಶ್ರೇಷ್ಠ ಸಂತರೇ ಹೀಗೆ ಹೇಳಿದ್ದಾರೆಂದರೆ, ಗುರುವಿನ ಮಹತ್ವ ಎಷ್ಟಿರಬಹುದು ? ಎನ್ನುವುದನ್ನು ಯೋಚಿಸಬೇಕಾದ ವಿಷಯ.
ಅಂತಹ ಗುರುವಿಗೆ ನಮ್ಮ ಶ್ರದ್ದಾ, ಭಕ್ತಿ, ಸಮರ್ಪಣೆ, ಧನ್ಯವಾದ ಅರ್ಪಿಸುವ ದಿನವೇ ಗುರು ಪೂರ್ಣಿಮೆ.
ನಮಗೆ ಎರಡು ಕಣ್ಣುಗಳಿವೆ. ಈ ಎರಡು ಕಣ್ಣಿನಿಂದ ನಮಗೆ ಜಗತ್ತಿನ ವಸ್ತುಗಳು ತಿಳಿಯುತ್ತವೆ. ಆದರೆ ಯಾರಿಗೆ ಎರಡು ಕಣ್ಣುಗಳು ಇಲ್ಲ. ಅವರಿಗೆ ಯಾವುದು ತಿಳಿಯುವುದಿಲ್ಲ. ಅವರ ಸಂಪೂರ್ಣ ಜೀವನ ಕತ್ತಲೆಯೇ ಆಗಿರುತ್ತದೆ.
ಸತ್ಯ ಜ್ಞಾನದ ವಿಷಯದಲ್ಲಿ, ಗುರುವಿಲ್ಲದ ಜೀವನವೂ ಸಹ ಎರಡು ಕಣ್ಣುಗಳು ಇಲ್ಲದ ಕುರುಡನಂತೆ, ಅಂಧಕಾರದಿಂದ ಕೂಡಿರುತ್ತದೆ.
ಗುರುವಿಲ್ಲದ ಜೀವನ ಒಂದು ಗಾಣದ ಸುತ್ತ ತಿರುಗುವ ಗಾಣದ ಎತ್ತಿನ ಜೀವನದಂತೆಯೇ ಆಗಿರುತ್ತದೆ.
ಗಾಣದ ಎತ್ತು ನಿರಂತರ ಚಲಿಸುತ್ತಿರುತ್ತದೆ. ಅದು, ತಾನು ಶ್ರಮ ಪಟ್ಟು ದುಡಿಯುತ್ತಿದ್ದೇನೆ. ಇಷ್ಟೊಂದು ಚಲಿಸುತ್ತಿದ್ದೇನೆ. ನಾನು ಇಷ್ಟೊಂದು ಮುಂದುವರಿದಿದ್ದೇನೆ, ಎಂದು ತಿಳಿದಿರುತ್ತದೆ. ಆದರೆ ಅದು ಇರುವ ಸ್ಥಳದಲ್ಲಿಯೇ ಇರುತ್ತದೆ. ತನ್ನ ಜೀವನದಲ್ಲಿ ಹೊಸ ಮುನ್ನಡೆಯನ್ನೇ ಕಂಡಿರುವುದಿಲ್ಲ. ಆದರೆ ಅದು ಯೋಚಿಸುತ್ತದೆ, ನಾನು ಮುಂದೆ ಹೋಗುತ್ತಿದ್ದೇನೆ, ನನ್ನ ಅಭಿವೃದ್ಧಿಯಾಗುತ್ತಿದೆಯೆಂದು.
ನಾವು ಸಹ ಜೀವನದಲ್ಲಿ ಮುಂದುವರಿಯುತ್ತಿದ್ದೇವೆ, ಅಭಿವೃದ್ದಿ ಸಾಧಿಸುತ್ತಿದ್ದೇವೆ ಎಂದೆ ನಮಗೆ ಅನಿಸುತ್ತದೆ. ಆದರೆ ಗುರುವಿಲ್ಲದೆ ನಾವು ಎಲ್ಲಿದ್ದೇವೆ ? ನಾವು ಏನು? ನಾವು ಎಲ್ಲಿಗೆ ತಲುಪಬೇಕು ? ಯಾವ ರೀತಿ ತಲುಪಬೇಕು ? ಯಾವುದು ನಮಗೆ ಗೊತ್ತಾಗುವುದಿಲ್ಲ.
ಪದೇ ಪದೇ ಜನನ ಅದೇ ಇಂದ್ರಿಯಗಳಿಗೆ ಸಂಬಂಧಿಸಿದ ಬಯಕೆಗಳು, ಪದೇ ಪದೇ ಅದನ್ನು ಪಡೆಯಲು ಹೋರಾಟ ...
ಪದೇ ಪದೇ ಇಷ್ಟ, ಅನಿಷ್ಟದ ರಾಗ (ಪ್ರೀತಿ) ದ್ವೇಷಗಳು. ಇವುಗಳು ಪೂರ್ಣ ಮಾಡುವುದರಲ್ಲಿಯೇ ನಮ್ಮ ಸಮಯ ಶಕ್ತಿಯ ಹಾಳು ಮಾಡಿಕೊಳ್ಳುವುದು. ಸಮಯ ಶಕ್ತಿ ಕಳೆದುಕೊಂಡು ಮತ್ತೆ ಮರಣ.
ಮತ್ತೆ ಜನನ ಮತ್ತೆ ಇಂದ್ರಿಯಗಳ ಬಯಕೆ, ಮತ್ತೆ ಇಷ್ಟ ಅನಿಷ್ಟಗಳ ರಾಗ, ದ್ವೇಷಗಳು, ಅಹಂಕಾರದ ಪೋಷಣೆ. ಹೀಗೆ ಗಾಣದ ಎತ್ತು ಒಂದು ಸುತ್ತು ಚಲಿಸಿದ ನಂತರ ಪುನಃ ಎಲ್ಲಿಂದ ಅದರ ಚಲನೆ ಆರಂಭವಾಗಿತ್ತು, ಅಲ್ಲಿಂದಲೇ ಮತ್ತೆ ತನ್ನ ಪ್ರಯಾಣ ಆರಂಭಿಸುತ್ತದೆ.
ವೃತ್ತಾಕಾರವಾಗಿ ಚಲಿಸಿದ್ದಲ್ಲಿಯೇ ಚಲಿಸುತ್ತಿದ್ದರೂ ತಾನು ಎಷ್ಟೋ ದೂರ ಸಾಗಿದ್ದೇನೆ. ಯಾವುದೋ ಪ್ರಗತಿ ಸಾಧಿಸಿದ್ದೇನೆ ಎಂದು ಯೋಚಿಸುವಂತೆ ನಮ್ಮ ಜೀವನವು A ಯಿಂದ ಆರಂಭಿಸಿ B C D ಗೆ ಮುಕ್ತಾಯವಾದರೆ, ಪುನಃ A ಯಿಂದಲೇ ನಮ್ಮ ಪ್ರಯಾಣ ಮತ್ತೆ ಆರಂಭಿಸುತ್ತೇವೆ.
ಕಾರಣ ಎತ್ತಿನಂತೆ ನಮಗೂ ಸಹ ಅಜ್ಞಾನ ಎನ್ನುವ ಪಟ್ಟಿ ನಮ್ಮ ಕಣ್ಣಿಗೆ ಕಟ್ಟಲಾಗಿದೆ. ಈ ಪಟ್ಟಿ ಸರಿಸುವುದು ಗುರುವಿನಿಂದ ಮಾತ್ರ ಸಾಧ್ಯ.
ಆಗ ಮಾತ್ರ ನಾವು ಯಾರು ? ನಾವು ಎಲ್ಲಿದ್ದೇವೆ ? ನಮ್ಮ ಗುರಿ ಏನು? ಅದನ್ನು ಪಡೆಯಬೇಕಾಗಿರುವುದು ಹೇಗೆ ? ಎನ್ನುವುದು ತಿಳಿಯುತ್ತದೆ.
ಜೀವನದಲ್ಲಿ ಕಷ್ಟಪಟ್ಟು ದುಡಿದು ಧನ, ಸಂಪತ್ತು, ಆಸ್ತಿ ಏನನ್ನೇ ಸಂಪಾದಿಸಿದರೂ ಹೋಗುವಾಗ ಬೇರೆಯವರಿಗೆ ಬಿಟ್ಟು ಹೋಗಬೇಕಾಗುತ್ತದೆ. ಈ ಕಾರಣದಿಂದ ಮುಂದಿನ ಜೀವನದಲ್ಲಿ ಪುನಃ ಹೊಸ ಸಂಪಾದನೆಯಲ್ಲಿ ನಿರತರಾಗುತ್ತೇವೆ.
ಆದರೆ ಗುರುವಿಗೆ ಶರಣಾಗಿ ನಾವು ನಡೆದಲ್ಲಿ ನಾವು ಈಗ ಸಂಪಾದಿಸಿರುವುದು ಸಹ ಬಿಟ್ಟು ಹೋಗುವ ಅವಶ್ಯಕತೆಯಿಲ್ಲ. ಅದು ನಮ್ಮೊಂದಿಗೆ ನಮ್ಮ ಮುಂದಿನ ಹಂತದ ಪ್ರಯಾಣಕ್ಕೆ ಸಹಾಯ ಮಾಡುತ್ತದೆ. ಅಂತಹ ಸಂಪಾದನೆ ಗುರು ಮಾಡಿಸುತ್ತಾರೆ. ಹೀಗೆ ನಾವು ಗುರುವಿನಿಂದ ನಮ್ಮ ಜೀವನದಲ್ಲಿ ಗಾಣದ ಎತ್ತಿನಂತೆ ನಿಂತಲ್ಲೆ ನಿಲ್ಲದೆ ಪ್ರಗತಿಯ ಉನ್ನತಿಯನ್ನು ಹೊಂದುತ್ತದೆ.
ಒಂದು ಇರುವೆ ತನ್ನ ಶಕ್ತಿ ಸಾಮರ್ಥ್ಯದಿಂದ ದಕ್ಷಿಣದ ಭಾರತದ ತುದಿಯಿಂದ ಉತ್ತರ ದಿಲ್ಲಿಗೆ ತಲುಪಲು ಎಷ್ಟೋ ಶತಮಾನಗಳು ಬೇಕಾಗಬಹುದು. ಅಲ್ಲಿವರೆಗೆ ಎಷ್ಟೋ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಆದರೆ ಅದೇ ಇರುವೆಯನ್ನು ವಿಮಾನದಲ್ಲಿ ಹತ್ತಿಸಿದಾಗ ಅದು ಈ ಜನ್ಮದಲ್ಲಿಯೇ ದಿಲ್ಲಿ ತಲುಪುತ್ತದೆ. ಆ ಇರುವೆಯೇ ನಾವಾದರೆ ಗುರುವೇ ಆ ವಿಮಾನ.
ಕೊಳೆಯಾದ ದುರ್ಗಂಧ ಬೀರುವ ಬಟ್ಟೆಯನ್ನು ನಾವೇ ಧರಿಸುವುದಿಲ್ಲ. ಆದ್ದರಿಂದ ಇದನ್ನು ದೇವರಿಗೂ ಸಹ ಅರ್ಪಿಸುವುದಿಲ್ಲ. ಆದರೆ ಒಂದು ಸಾಬೂನು ಕೊಳೆಯಾದ ಬಟ್ಟೆಯನ್ನು ಶುಭ್ರ ಮಾಡುತ್ತದೆ. ಆ ನಿರ್ಮಲ ಬಟ್ಟೆಯೇ ದೇವರಿಗೆ ಅರ್ಪಿತವಾಗುತ್ತದೆ. ಇದೇ ರೀತಿ ನಮ್ಮಲ್ಲಿರುವ ಅಂತರಂಗದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎನ್ನುವ ದುರ್ಗಂಧ ಅನಾಚಾರ ಎನ್ನುವ ಹೋಲಸನ್ನು ತೋಳೆದು ದೈವತ್ವದ ಯೋಗ್ಯತೆಯನ್ನು ನೀಡುವವರೇ ಗುರು.
ಗುರುವಿನ ಸಾನ್ನಿಧ್ಯದ ಫಲ ಇದು ಆದರೆ,
ಗುರು ಇಲ್ಲದ ಬಾಳು ನಿಂತಲ್ಲೇ ನಿಲ್ಲುವ ಜೊತೆಗೆ ಆ ಸ್ಥಾನಕ್ಕಿಂತ ಕೆಳಗೆ ಕುಸಿಯುವ ಸಾಧ್ಯತೆಯೂ ಇದೆ.
ಇಂತಹ ಗುರುವಿನ ಕೃಪೆಗೆ ಪಾತ್ರರಾಗಲು ಇರುವ ವಿಶೇಷ ದಿನವೇ ಗುರು ಪೂರ್ಣಿಮಾ. ನಮಗೆ ವರ್ಷಪೂರ್ತಿ ಜ್ಞಾನವನ್ನು, ಪ್ರೇರಣೆಯನ್ನು ನೀಡುತ್ತಾ ನಮ್ಮನ್ನು ಮುನ್ನಡೆಸುತ್ತಿರುವ ಗುರುವಿಗೆ ನಮ್ಮ ಅಹೋಭಾವ, ಗುರು ಕಾಣಿಕೆ, ನಮ್ಮ ಧನ್ಯವಾದ ಅರ್ಪಿಸುವ ದಿನವೇ ಗುರುಪೂರ್ಣಿಮಾ.
ಇದು ರವಿವಾರ ಜುಲೈ 21 ರಂದು ಇದೆ. ತಾವೆಲ್ಲರೂ ತಮ್ಮ ಗುರುವಿಗೆ ಶರಣಾಗಿ ಈ ಬ್ರಹ್ಮಾಂಡದ ಗುರು ತತ್ವದ "ಸತ್" ಕೃಪೆಗೆ ಪಾತ್ರರಾಗಿ.
ಈ "ಸತ್" ಕೃಪೆಯಿಂದ ಮಾತ್ರ ದುಃಖ, ಭಯ, ಚಿಂತೆ, ರಾಗ, ದ್ವೇಷಗಳಿಂದ ಮುಕ್ತರಾಗಿ ಶಾಶ್ವತ ಅಮೃತತ್ವವನ್ನು ಪಡೆಯುವುದು ಸಾಧ್ಯ.
ಇದುವೇ ಮುಂದಿನ ಸತ್ಯ ಯುಗಕ್ಕೆ ದಾರಿ.
ಎಲ್ಲರಿಗೂ ಒಳ್ಳೆಯದಾಗಲಿ.
ಓಂ ನಮಃ ಶಿವಾಯ.
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ. ಯುಗ ಪರಿವರ್ತನೆಗೆ ನಾಂದಿ.
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ ಸೇಡಂ.)
20/07/2024

Comments
Post a Comment