ನಾವು ಏನನ್ನು ಹುಡುಕುತ್ತೇವೆ, ಅದುವೇ ಸಿಗುತ್ತದೆ.
ನಾವು ಎಷ್ಟು ವರ್ಷ ಈ ದೇಹದಿಂದ ಜೀವಂತ ಇರಬಹುದು ಎಂದು ಯಾರನ್ನಾದರೂ ಇಂದಿನ ಜಗತ್ತಿನಲ್ಲಿ ಪ್ರಶ್ನಿಸಿದಾಗ ನೂರು ವರ್ಷಗಳ ಒಳಗಡೆಯೇ ಎಲ್ಲರೂ ಹೇಳುತ್ತಾರೆ.
ಹಾಗಾದರೆ ನೂರು ವರ್ಷಗಳಿಗಿಂತ ಹೆಚ್ಚಿಗೆ ಬದುಕಲು ಸಾಧ್ಯವಿಲ್ಲವೇ ?
ಶ್ರೀಕೃಷ್ಣ 125 ವರ್ಷಗಳವರೆಗೂ ಬದುಕಿದ್ದ. ಈ ವಿಷಯ ಹೇಳಿದಾಗ ಅದು ಪುರಾಣ. ಅದನ್ನು ಯಾರು ನೋಡಿದ್ದಾರೆ? ಎಂದು ಪ್ರಶ್ನಿಸಬಹುದು.
ಇನ್ನೂ ಕೆಲವರು ಹಿಮಾಲಯದಲ್ಲಿ ಎಷ್ಟೋ ವರ್ಷಗಳಿಂದ ಬದುಕಿದ್ದಾರೆ. ಅವರ ರಜನಿಕಾಂತ್ ಅಂತಹ ದೊಡ್ಡ ವ್ಯಕ್ತಿಗಳು ಆಶೀರ್ವಾದ ಪಡೆದಿದ್ದಾರೆ. ಹಿಮಾಲಯದ ಈ ವಿಷಯವು ಸಹ ಅನೇಕರಿಗೆ ಆಕಾಶದ ಹೂವಿನಂತೆ ಕಾಣುತ್ತದೆ. ಅವರನ್ನು ನೋಡಿಲ್ಲ. ಆದರೆ ಇಂದು ಯಾವುದೇ ಆಧಾರ ಸಿಗುವುದಿಲ್ಲ. ಹಾಗಾಗಿ ಅಂತಹವರನ್ನು ಹೇಗೆ ನಂಬುವುದು ? ಎನ್ನುವ ವಿಚಾರ.
ವಿಶೇಷ ಶಕ್ತಿವುಳ್ಳ ಮಹಾತ್ಮರು ಜನ ವಸತಿಗಿಂತ ದೂರದಲ್ಲಿ ಇರುತ್ತಾರೆ. ಅವರು ಜನರಿಗೆ ಸಾಮಾನ್ಯರಂತೆ ಸಿಗುವುದು ಬಹಳ ಕಡಿಮೆ.
ಆದರೆ ಓರ್ವ ಮಹಾ ತಪಸ್ವಿ, ಪವಾಡ ಪುರುಷ, ಜನ ಸಮೂಹದ ಮಧ್ಯೆ ಇದ್ದರು. ಹಾಗೂ ಅವರನ್ನು ಭೇಟಿಯಾಗುವ ಇಚ್ಛೆ ಹೊಂದಿದವರಿಗೆ ಸಹಜವಾಗಿ ಸಿಗುತ್ತಿದ್ದರು.
ಅವರು ದಾಖಲೆಗಳಂತೆ ನಾಲ್ಕು ತಲೆಮಾರಿಗಿಂತ ಹೆಚ್ಚಿನ ಪೀಳಿಗೆಯವರನ್ನು ಭೇಟಿಯಾಗಿದ್ದರು. (ಆದರೆ ಅದಕ್ಕೂ ಹೆಚ್ಚು ವರ್ಷಗಳಿಂದಲೂ ಅಂದರೆ 500 ಕ್ಕಿಂತ ಹೆಚ್ಚು ವರ್ಷ ಅವರು ಬದುಕಿದ್ದರು ಎಂದು ಹೇಳುತ್ತಾರೆ)
ಅವರು ಊಟ ಮಾಡಿದ್ದು, ನೀರು ಕುಡಿದದ್ದು ಯಾರು ನೋಡಿಲ್ಲ. ಅವರು ಮಳೆ, ಚಳಿ, ಬಿಸಿಲಿನಲ್ಲಿಯೂ ನಿರ್ವಸ್ತ್ರವಾಗಿ ಇರುತ್ತಿದ್ದರು. ಸಾಮಾನ್ಯ ಜನ ಇನ್ನೂ ನಂಬಲಿಕ್ಕೆ ಸಾಧ್ಯವಾಗದ ಅನೇಕ ಪವಾಡ ಅವರು ಮಾಡಿದ್ದಾರೆ.
ಅಂತಹ ಪುರುಷರ ದರ್ಶನ ಶ್ರವಣದಿಂದ ನಮ್ಮ ಅನೇಕ ಪಾಪ ನಾಶವಾಗುತ್ತದೆ.
ಅಂತಹ ಮಹಾ ದೇವ ಪುರುಷರೇ ದೆವರಹಾ ಬಾಬಾ. ಇವರು ತಮ್ಮ ಕೊನೆಯ ದಿನಗಳನ್ನು ವೃಂದಾವನ ಹತ್ತಿರ ಕಳೆದರು. ಇವರು 1990 ರವರೆಗೆ ಇದ್ದರು.
ಇತ್ತೀಚೆಗೆ ನನ್ನ ಸ್ಟೇಟಸ್ ನಲ್ಲಿ ನಮ್ಮ ಜೀವನದ ಗುರಿ ಏನು ಇರಬೇಕು, ಎನ್ನುವುದನ್ನು ಹೇಳಿದ್ದೆ.
ಅನೇಕರು ಶ್ರೀಮಂತಿಕೆ, ಯಶಸ್ಸು, ಅಧಿಕಾರ, ಅನಂತ ಸುಖ, ಕೀರ್ತಿ ಹೀಗೆ ತಮ್ಮ ಜೀವನದ ಗುರಿ ಇಟ್ಟುಕೊಂಡಿರುತ್ತಾರೆ.
ನಾನು ಆಗ ವಿಸ್ತಾರವಾಗಿ ಹೇಳಿದ್ದೀಲ್ಲ. ಈಗ ಹೇಳುತ್ತಿದ್ದೇನೆ. ಒಮ್ಮೆ ಯೋಚನೆ ಮಾಡಿ ಮೇಲಿನ ಯಾವುದೇ ತಮ್ಮ ಗುರಿಯಾಗಿರಬಹುದು. ಅವುಗಳನ್ನು ಪಡೆದಾಗ ಖುಷಿಯೂ ಆಗಬಹುದು. ಆದರೆ ಅವು ನಿಮ್ಮ ಹೊರಗೆ ಇರುವಂತಹುದು. ನಿಮ್ಮ ಹೊರಗಡೆ ಇರುವ ಅಸ್ತಿತ್ವಗಳಿಂದ ನಿಮಗೆ ಸಂತೋಷ ಆಗಿದ್ದರೆ, ಅರ್ಥ ನೀವು ಅವುಗಳ ಮೇಲೆ ಅವಲಂಬಿತರಾಗಿದ್ದೀರಿ.
ಅಂದರೆ, ಅವು ಇದ್ದಾಗ ಮಾತ್ರ ಸಂತೋಷ. ಅವು ಇಲ್ಲದಿದ್ದಾಗ ದುಃಖ. ಈ ಕಾರಣದಿಂದಲೇ ನಾನು ಹೇಳಿದ್ದು, ನಮ್ಮ ಜೀವನದ ಗುರಿ ಎಂದರೆ ಅವಲಂಬನೆ ಇಲ್ಲದಂತೆ, ಆಗುವುದು.
ಇದಕ್ಕೆ ಒಳ್ಳೆಯ ಉದಾಹರಣೆಯೇ ದೇವರಹಾ ಬಾಬಾ. ಅವರು ಆಹಾರ ನೀರು, ಮಳೆ ಗಾಳಿ, ಬಿಸಿಲು ಯಾವುದರ ಮೇಲೂ ಅವಲಂಬಿತರಾಗಿರಲಿಲ್ಲ. ಅವರು ಸಂಚಾರಕ್ಕೂ ಯಾವುದೇ ವಾಹನದ ಮೇಲೆ ಅವಲಂಬಿಸಿರಲಿಲ್ಲ. ಗಾಳಿಯಲ್ಲಿ, ನೀರಿನಲ್ಲಿ ನಡೆಯುವ ಸಾಮರ್ಥ್ಯ ಅವರಿಗಿತ್ತು. ಒಂದೇ ಸಮಯದಲ್ಲಿ ಬೇರೆ ಬೇರೆ ಕಡೆ ಅವರು ಕಾಣಿಸಿದ್ದಾರೆ.
ಅವರು ಊಟ ಮಾಡಿದ್ದು, ನೀರು ಕುಡಿದದ್ದು ಯಾರು ಕಂಡಿಲ್ಲ. ಅವರ ದರ್ಶನ ಆಶೀರ್ವಾದವನ್ನು ಮೋತಿಲಾಲ ನೆಹರುರಿಂದ ಹಿಡಿದು ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ ಗಾಂಧಿವರೆಗೂ ಪಡೆದುಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಇಂದಿರಾಗಾಂಧಿ, ರಾಜೀವಗಾಂಧಿ ಅವರ ಆಶೀರ್ವಾದ ಪಡೆದಿದ್ದರು.
ಅವರು ಜನರಿಗೆ ಆಶಿರ್ವಾದ ಮಾಡುವಾಗ ತಮ್ಮ ಪಾದವನ್ನು ಅವರ ತಲೆಯ ಮೇಲಿಟ್ಟು ಆಶೀರ್ವಾದ ಮಾಡುತ್ತಿದ್ದರು. ಇಂದಿರಾಗಾಂಧಿ ಪೂರ್ಣ ಸೋತು ಅವರ ಹತ್ತಿರ ಆಶಿರ್ವಾದ ಪಡೆದುಕೊಳ್ಳಲು ಹೋದಾಗ ಅವರಿಗೆ ಕೈ ಯಿಂದ ಆಶಿರ್ವಾದ ಮಾಡುತ್ತಾರೆ. ಇದರ ಮೂಲಕ ಕೈಯನ್ನು ಪಕ್ಷದ ಚಿಹ್ನೆ ಮಾಡಿಕೊಳ್ಳಲು ಸನ್ನೆ ಮಾಡಿದರು ಎಂದು ಹೇಳುತ್ತಾರೆ. ನಂತರದ ಚುನಾವಣೆಯಲ್ಲಿ ಇಂದಿರಾಗಾಂಧಿ ವಿಜಯಿ ಆಗುತ್ತಾರೆ. ಅವರು ಜನರಿಗೆ ಆಶೀರ್ವಾದ ಮಾಡುವಾಗ ತಮ್ಮ ಖಾಲಿ ಬುಟ್ಟಿಗೆ ಕೈ ಹಾಕಿ ಪ್ರಸಾದ ತೆಗೆದುಕೊಡುತ್ತಿದ್ದರು. ಆ ಪ್ರಸಾದ ಎಲ್ಲಿಂದ, ಹೇಗೆ ಖಾಲಿ ಬುಟ್ಟಿಯಲ್ಲಿ ಬರುತ್ತಿತ್ತು ? ಎನ್ನುವುದು ಯಾರಿಗೂ ಗೊತ್ತಿಲ್ಲ.
ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ತಮ್ಮ ಪುಸ್ತಕದಲ್ಲಿ, ಬರೆದಿರುವಂತೆ, ಚಿಕ್ಕವರಿದ್ದಾಗ ರಾಜೇಂದ್ರ ಪ್ರಸಾದರು ತಮ್ಮ ತಂದೆಯ ಜೊತೆ ಅವರ ದರ್ಶನ ಪಡೆದಿದ್ದರು. ಹಾಗೂ ಅವರ ತಂದೆ ಚಿಕ್ಕವರಿದ್ದಾಗಲೂ ಸಹ ದೇವರಹಾ ಬಾಬಾರವರ ದರ್ಶನ ಪಡೆದಿದ್ದರಂತೆ. ಈಗ ಇದನ್ನು ಓದುತ್ತಿರುವವರು ಬಹುಶಃ ಇದನ್ನು ನಂಬಲಿಕ್ಕೇ ಆಗುವುದಿಲ್ಲ.
ಆದರೆ ಇದಕ್ಕೆ ಸಂಬಂಧಿಸಿದ ಆಧಾರಗಳು ಇವೆ. ಹಾಗೂ ದೇವರಹಾ ಬಾಬಾ ಒಬ್ಬ ಪತ್ರಕರ್ತನಿಗೆ ಕೊಟ್ಟ ಸಂದರ್ಶನದ ವಿಡಿಯೋ ಸಹ ಯೂಟ್ಯೂಬ್ ನಲ್ಲಿ ದಾಖಲೆ ಇದೆ.
ಆರಂಭದಲ್ಲಿ ಒಬ್ಬ ವ್ಯಕ್ತಿ ಎಷ್ಟು ವರ್ಷಗಳವರೆಗೆ ಜೀವಿಸಬಹುದು ಎನ್ನುವ ಪ್ರಶ್ನೆ ಮಾಡಿದಾಗ ಬಹುತೇಕ ಎಲ್ಲರ ಮನಸ್ಸಿನಲ್ಲಿ ನೂರು ವರ್ಷಗಳ ಒಳಗಡೆಯೇ ವಿಚಾರ ಬಂದಿರುತ್ತದೆ. ಕಾರಣ ನಾವು ಅಂತಹ ದೀರ್ಘ ಜೀವಿಗಳು ಬದುಕಿರುವ ಉದಾಹರಣೆ ಕಂಡಿಲ್ಲ. ಅದೇ ರೀತಿ ಅವಲಂಬನೆ ಇಲ್ಲದಂತೆ ಆಗುವುದು ನಮ್ಮ ಜೀವನದ ಉದ್ದೇಶವೆಂದು ಹೇಳಿದಾಗಲೂ ಅದು ಹಲವರಿಗೆ ಅಸಾಧ್ಯದಂತೆ ಕಂಡಿರಬೇಕು.
ಆದರೆ ದೇವರಹಾ ಬಾಬಾರವರಂತಹ ಉದಾಹರಣೆಗಳನ್ನು ಕೇಳಿದಾಗ, ನಮ್ಮಿಂದ ಅಂತಹ ಉನ್ನತ ಮಟ್ಟಕ್ಕೆ ಏರುವುದು ಅಸಾಧ್ಯ ಎನ್ನುವ ಭಾವನೆ ನಮ್ಮಲ್ಲಿ ಇರಬಹುದು. ಆದರೆ ಅಂತಹ ಮಟ್ಟಕ್ಕೆ ಏರುವ ಒಂದು ಸಾಧ್ಯತೆ ಅಂತೂ ಇದ್ದೇ ಇದೆ ಎನ್ನುವ ಯೋಚನೆ ನಮ್ಮಲ್ಲಿ ಮೂಡುತ್ತದೆ.
ಇದನ್ನು ಹಂಚಿಕೊಳ್ಳುತ್ತಿರುವದರ ಉದ್ದೇಶ ಇಷ್ಟೇ ಏನೆಂದರೆ ಎರಡು ನೂರು ವರ್ಷಗಳ ಹಿಂದೆ ಟನ್ನುಗಟ್ಟಲೆ ಭಾರವಾದ ಕಬ್ಬಿಣದಂತಹ ಲೋಹ ಆಕಾಶದಲ್ಲಿ ತೇಲುವುದು ಸಾಧ್ಯವಿಲ್ಲ, ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂದು ಅದು ಸಾಧ್ಯವಾಗಿದೆ.
ಕಾರಣ ಇಂದಿನ ವಿಮಾನಗಳ ಹಿಂದಿರುವ ಒಂದು ರೀತಿಯ ಯೋಚನೆ. ಅದುವೇ ಭಾರವಾದ ಹಕ್ಕಿಗಳು ಆಕಾಶದಲ್ಲಿ ಹಾರುವುದಕ್ಕೆ ಸಾಧ್ಯವಾಗುವುದಾದರೆ, ಭಾರವಾದ ಲೋಹಗಳು ಹಾರುವುದಕ್ಕೆ ಏಕೆ ಸಾಧ್ಯವಿಲ್ಲ, ಎನ್ನುವ ಯೋಚನೆ.
ಅದೇ ರೀತಿ ಇಂದಿನ ಪರಿಸ್ಥಿತಿಯಲ್ಲಿ ಸತ್ಯ ಯುಗದ ಬಗ್ಗೆ ಹೇಳುವುದು ತಲೆ ಬುಡವಿಲ್ಲದಂತೆ ಅನಿಸಬಹುದು. ಆದರೆ ಯಾವುದು ಸಹ ಜಗತ್ತಿನಲ್ಲಿ ಒಮ್ಮಿಂದೊಮ್ಮೆಲೆ ಘಟಿಸುವುದಿಲ್ಲ. ಒಂದು ಘಟನೆಗೂ ಮುಂಚೆ ಅದರ ಕುರಿತು ಯೋಚನೆಗಳು ಮೂಡುತ್ತವೆ. ನಿರಂತರವಾದ ಆ ಯೋಚನೆಗಳೇ ಮುಂದೆ ಕೆಲಸಗಳಾಗಿ ಪರಿವರ್ತನೆಯಾಗುತ್ತವೆ. ನಮಗೆ ಬ್ರಿಟಿಷರಿಂದ ಒಮ್ಮೆಗೆ ಸ್ವಾತಂತ್ರ್ಯ ಸಿಗಲಿಲ್ಲ. ಮೊದಲು ಸ್ವಾತಂತ್ರ್ಯದ ಯೋಚನೆಗಳು ಆರಂಭವಾಯಿತು. ನಂತರ ಅದರಂತೆ ಹೋರಾಟ. ಹೋರಾಟದಿಂದ ಸ್ವಾತಂತ್ರ್ಯ. ಹೀಗೆ ಮೊದಲು ಯೋಚನೆಗಳೇ ಘಟನೆಗಳಾಗುತ್ತವೆ. ಯೋಚನೆಗಳು ಘಟನೆಗಳಾಗಲೂ ಅನೇಕ ವರ್ಷಗಳೇ ಬೇಕಾಗಬಹುದು. ಆದರೆ ನಾವು ನಿರಂತರ ಯೋಚನೆ ಮಾಡುವುದು ಒಂದಿಲ್ಲ ಒಂದು ದಿನ ವಾಸ್ತವವಾಗಿ ಬದಲಾಗುವುದು ಸತ್ಯ.
ಈ ಜಗತ್ತಿನ ಇಂದಿನ ಸಮಾಚಾರ ಕೇಳಿದಾಗ ಅನ್ಯಾಯ, ಹಿಂಸೆ, ಭಯೋತ್ಪಾದನೆ, ಅನೈತಿಕತೆ, ಅಧರ್ಮ, ಭ್ರಷ್ಟಾಚಾರ, ಕೊಲೆಗಳು, ಮೋಸ, ವಂಚನೆ, ಮನುಷ್ಯರ ಪಶು ವರ್ತನೆಗಳನ್ನೆ ಕೇಳುತ್ತೇವೆ. ಇದಕ್ಕೆಲ್ಲಾ ಏನೇನೋ ಕಾರಣವಾಗಿರಬಹುದು. ಆದರೆ ಎಲ್ಲಾ ಅನೀತಿ, ಅಧರ್ಮ, ಅನ್ಯಾಯಕ್ಕೂ ಮೂಲ ಕಾರಣ ಕಲಿಯುಗ. ಆದ್ದರಿಂದ ಇವೆಲ್ಲಾ ನಾಶವಾಗಬೇಕಾದರೆ ಮೊದಲು ಕಲಿಯುಗ ಬದಲಾಗಬೇಕು.
ಇದು ಬದಲಾಗಲು ಮೊಟ್ಟಮೊದಲು ಸತ್ಯ ಯುಗದ ಇಚ್ಛೆ ನಮ್ಮಲ್ಲಿ ಮೂಡಬೇಕು. ಆಗ ನಮ್ಮ ಆಸಕ್ತಿ ವಿಚಾರ, ವರ್ತನೆ, ಕೆಲಸ ಮಾಡುವ ವಿಧಾನ ಹಂತ ಹಂತವಾಗಿ ಬದಲಾಗುತ್ತದೆ. ಇದು ಯುಗ ಪರಿವರ್ತನೆಗೆ ಕಾರಣವಾಗುತ್ತದೆ.
ಕೊನೆಯದಾಗಿ ಹೇಳುವುದಾದರೆ ಯಾರಿಗೆ ಕಲಿಯುಗದಲ್ಲಿ ಇರಬೇಕು ಎನ್ನುವ ಇಚ್ಛೆ ಇದೆ, ಅವರು ಖಂಡಿತವಾಗಿ ಕಲಿಯುಗದ ಅನ್ಯಾಯ, ಅಧರ್ಮ, ಹಿಂಸೆ, ಭಯೋತ್ಪಾದನೆ, ಮೋಸ, ವಂಚನೆಗಳ, ಪ್ರಭಾವದಲ್ಲಿಯೇ ಬದುಕುವ ಸಾಧ್ಯತೆ ಹೆಚ್ಚು ಇದೆ.
ಅದೇ ಯಾರಿಗೆ ಸತ್ಯ ಯುಗದಲ್ಲಿ ಬದುಕಬೇಕು ಎನ್ನುವ ಇಚ್ಛೆ ಇದೆ, ಅವರಿಗೆ ಸತ್ಯಯುಗದ ಜೀವನ ರೀತಿ ಗೋಚರಿಸಲು ಆರಂಭವಾಗುತ್ತದೆ.
ಈಗ ಭೂಮಿಯಲ್ಲಿ ಕಲಿಯುಗದಲ್ಲಿದ್ದರೂ ದೇವರಾಹಾ ಬಾಬಾ ಸತ್ಯ ಯುಗದ ಜೀವನದಂತೆಯೇ ಬದುಕುತ್ತಿದ್ದರು. ಇಂತಹ ಅನೇಕ ಮಹಾತ್ಮರು ಈಗಲೂ ಜಗತ್ತಿನಲ್ಲಿ, ಈ ಭೂಮಿಯಲ್ಲಿ ಇದ್ದಾರೆ. ಆದರೆ ಕಲಿಯುಗದ ಮಾಯೆ ಅಂತಹವರನ್ನು ನೋಡಲು ಬೀಡುತ್ತಿಲ್ಲ.
ನಮ್ಮ ಇಚ್ಛೆಯಂತೆ, ನಮ್ಮ ಯೋಚನೆ ಇರುತ್ತದೆ. ನಮ್ಮ ಯೋಚನೆಗಳೇ ಜೀವನದ ಘಟನೆಗಳನ್ನು ಆಕರ್ಷಿಸುತ್ತವೆ.
ದೇವರಹಾ ಬಾಬಾ ಜೀವನ ಘಟನೆ ತಾವು ಓದಿರುವುದರಿಂದ ತಮ್ಮ ಯೋಚನೆಗಳು ಸ್ವಲ್ಪವಾದರೂ ಸತ್ಯ ಯುಗದ ಆಕರ್ಷಣೆ ಮಾಡಿರಬಹುದು ಎಂದು ಭಾವಿಸುತ್ತೇನೆ.
ಇದಕ್ಕಾಗಿಯೇ ಇಂತಹ ಉನ್ನತ, ದುರ್ಲಭ ವಿಚಾರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಯಾರು ಏನನ್ನು ಹುಡುಕುತ್ತಾರೋ, ಒಂದಿಲ್ಲ ಒಂದು ದಿನ ಅವರಿಗೆ ಅದೇ ಸಿಗುತ್ತದೆ. ಯಾರು ಕಲಿ (ಯುಗ) ಹುಡುಕುತ್ತಾರೋ ಅವರಿಗೆ ಕಲಿಯೇ ಸಿಗುತ್ತಾನೆ. ಯಾರು ಸತ್ಯ ( ಯುಗ) ಹುಡುಕುತ್ತಾರೋ ಅವರಿಗೆ ಸತ್ಯವೇ ಸಿಗುತ್ತದೆ.
ಎಲ್ಲರಿಗೂ ಒಳ್ಳೆಯದಾಗಲಿ, ಶುಭವಾಗಲಿ.
ಓಂ ನಮಃ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ.
ಯುಗ ಪರಿವರ್ತನೆಗೆ ನಾಂದಿ.
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್.ಸೇಡಂ)
Comments
Post a Comment