*ಪ್ರಶ್ನೆ ಎಂದರೇನು ? (ಭಾಗ 2)*
ಕಳೆದ ಲೇಖನದಲ್ಲಿ ನಮಗೆ ಗೊತ್ತಿಲ್ಲದೆ ಇರುವುದನ್ನು, ತಿಳಿದವರಿಗೆ ಕೇಳಬೇಕು ಅಥವಾ ಮನಸ್ಸಿನಲ್ಲಿಯೇ ಅದರ ಕುರಿತು ಪ್ರಶ್ನಿಸಬೇಕು ಎಂದು ಹೇಳಲಾಗಿತ್ತು.
ಗೊತ್ತಿಲ್ಲದೆ ಇರುವುದರ ಬಗ್ಗೆ, ಬೇರೆಯವರಿಗೆ ಪ್ರಶ್ನಿಸದಿದ್ದರು ಬಹಳಷ್ಟು ಜನ ಮನಸ್ಸಿನಲ್ಲಿಯೇ ಆ ವಿಷಯದ ಕುರಿತು ಪ್ರಶ್ನೆ ಮಾಡುತ್ತಾರೆ.
ಆದರೆ ಕೆಲವು ಸಂದರ್ಭಗಳಲ್ಲಿ *"ಸಾಧ್ಯವಾದರೆ*", ಅದನ್ನು ಮನಸ್ಸಿನಲ್ಲಿಯೇ ಪ್ರಶ್ನೆ ಮಾಡುವ ಬಗ್ಗೆ ನಾವು ಎಚ್ಚರವಹಿಸಬೇಕು.
ಕಾರಣವೇನೆಂದರೆ ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಪ್ರಶ್ನೆ ಮಾಡಿದಾಗ, ಅದು ಮನಸ್ಸಿನಲ್ಲಿ ಮಾಡಿದರೂ ಸಹ, ಜಗತ್ತು ಅದರ ಬಗ್ಗೆ ಉತ್ತರವನ್ನು ನೀಡುತ್ತದೆ. ಉತ್ತರ ನೀಡುವ ಸಮಯದಲ್ಲಿ ಹೆಚ್ಚು ಕಡಿಮೆಯಾಗಬಹುದು. ಆದರೆ ಉತ್ತರ ಸಿಗುವುದಂತು ಗ್ಯಾರಂಟಿ.
*ಇದು ಎಲ್ಲರಲ್ಲಿಯೂ ಘಟಿಸಿರುತ್ತದೆ. ಆದರೆ ಗಮನಿಸಿರುವುದಿಲ್ಲ. ನನ್ನದೆ ಒಂದು ಉದಾಹರಣೆ ಹೇಳುತ್ತೇನೆ. ನಾನು ಚಿಕ್ಕವನಿರುವಾಗ ನನ್ನ ಸುತ್ತಮುತ್ತ ಇರುವ ಸಂಬಂಧಿಕರು, ಸ್ನೇಹಿತರು, ಪರಿಚಿತರು ನನಗೆ ತಲೆ ನೋಯ್ಯುತ್ತಿದೆಯೆಂದು ತಮ್ಮ ದುಃಖ, ನೋವು ತೋಡಿಕೊಳ್ಳುತ್ತಿದ್ದರು.*
ಅನೇಕರು, ಅನೇಕ ಸಲ ಹೀಗೆ ಹೇಳುವುದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿ ನಾನು ಕೇಳಿಕೊಂಡ ಪ್ರಶ್ನೆ, ಎಲ್ಲರೂ ತಲೆ ನೋವು, ತಲೆ ನೋವು ಎನ್ನುತ್ತಾರೆ. ಇದರ ಬಗ್ಗೆ ನನಗೆ ಗೊತ್ತೇ ಇಲ್ಲವಲ್ಲ. ತಲೆ ನೋವು ಅಂದರೆ ಹೇಗಿರುತ್ತದೆ ? ಎನ್ನುವ ಪ್ರಶ್ನೆಯನ್ನು ಕೇಳಿಕೊಂಡೆ. ಹೀಗೆ ಹಲವು ಸಲ ಕೇಳಿಕೊಂಡ ನಂತರ ಒಮ್ಮೆ ಸ್ವತಃ ನನ್ನ ತಲೆಯೇ ನೋಯಿಸಲು ಆರಂಭಿಸಿತು. ಹೀಗೆ ಅನುಭವದ ಮೂಲಕ ನನ್ನ ಪ್ರಶ್ನೆಗೆ ಪ್ರಕೃತಿ ಉತ್ತರ ನೀಡಿತು.
*ಆದ್ದರಿಂದ ಕೆಲವು ಸಲ ನಾವು ಪ್ರಶ್ನೆ ಕೇಳುವ ಮುಂಚೆ ಎಚ್ಚರದಲ್ಲಿರಬೇಕು. ಸಾಧ್ಯವಾದರೆ ಋಣಾತ್ಮಕ ಸಂಗತಿಗಳ ಬಗ್ಗೆ ಪ್ರಶ್ನಿಸಬಾರದು.*
ಇದಕ್ಕೆ ಸಂಬಂಧಿಸಿದಂತೆ ನನ್ನ ಗಮನಕ್ಕೆ ಬಂದ ಕೆಲವು ಉದಾಹರಣೆಗಳನ್ನು ನೀಡುತ್ತಿದ್ದೇನೆ. ನಮ್ಮ ಪ್ರಶ್ನೆಗಳಿಗೆ ಜಗತ್ತು ಹೇಗೆ ಪ್ರತಿ ಸ್ಪಂದಿಸುತ್ತದೆ ಎನ್ನುವುದಕ್ಕೆ ಇವುಗಳನ್ನು ಹೇಳುತ್ತಿದ್ದೇನೆಯೇ, ಹೊರತು ಯಾವುದನ್ನು, ಸರಿ ಎಂದು ಸಮರ್ಥಿಸುತ್ತಿಲ್ಲ. ಆದ್ದರಿಂದ ಓದುಗರು ಇವು "ಸರಿ" ಎಂದು ಅಪಾರ್ಥ ಮಾಡಿಕೊಳ್ಳಬಾರದು.
ಉದಾಹರಣೆಗೆಗಳು :
👉 ನರಕ ಎಂದರೇನು ? ನರಕ ಹೇಗೆ ಇರುತ್ತದೆ ?
👉 ಇನ್ನೂ ಕೆಲವರಿಗೆ ಶತ್ರುಗಳು ಇರುವುದಿಲ್ಲ. ಆಗ ಅವರು ಶತ್ರುಗಳು ಎಂದರೆ ಹೇಗೆ ಇರುತ್ತಾರೆ ? ಅಥವಾ
👉 ಯಾರೋ ಯಾವುದೋ ತಡೆಯಲು ಅಸಾಧ್ಯವಾದ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಾಗ, ಈ ರೀತಿ ಏಕೆ ಮಾಡಿಕೊಳ್ಳಬೇಕು ? ಅಂತಹ ನೋವನ್ನು ಎದುರಿಸಬೇಕು.
ಎನ್ನುವ ಪ್ರಶ್ನೆಯನ್ನು ಪದೇ, ಪದೇ ನಮ್ಮಲ್ಲಿಯೇ ಕೇಳುತ್ತಾ ಹೋದರೆ ಪ್ರಕೃತಿ ನಮಗೆ ಅವುಗಳ ಬಗ್ಗೆ ತಿಳುವಳಿಕೆ ಕೊಡುತ್ತದೆ. ಇನ್ನೂ ಹೆಚ್ಚು ಅದರ ಬಗ್ಗೆ ಪ್ರಶ್ನೆ ಇದ್ದಲ್ಲಿ ಅವುಗಳಿಗೆ ಸಂಬಂಧಿಸಿದಂತಹ ನೋವಿನ ಅನುಭವಗಳನ್ನು ಅನುಭವಿಸುವಂತೆ ಮಾಡಿ ಪ್ರಕೃತಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.
ಈ ರೀತಿ ಏನೇನೋ ನಮಗೆ ಗೊತ್ತಿಲ್ಲದ ಪ್ರಶ್ನೆಗಳನ್ನು ಜಗತ್ತಿಗೆ ಕೇಳಿದಾಗ ಅವುಗಳ ಅನುಭವಗಳನ್ನು ಜಗತ್ತು ನಮಗೆ ನೀಡಿ ಅವುಗಳ ಪರಿಚಯ ಮಾಡಿಸುತ್ತದೆ.
ಹಾಗಾಗಿ *"ಸಾಧ್ಯವಾದಲ್ಲಿ"* ನಾವು ಆದಷ್ಟು ಅಂತಹ ಋಣಾತ್ಮಕ ಪ್ರಶ್ನೆಗಳನ್ನು ಜಗತ್ತಿಗೆ ಕೇಳಲು ಹೋಗಬಾರದು.
ನಾನು ಇಲ್ಲಿ *"ಸಾಧ್ಯವಾದಲ್ಲಿ"* ಎನ್ನುವ ಪ್ರಶ್ನೆಯನ್ನು ಬಳಸುತ್ತಿದ್ದೇನೆ, ಕಾರಣವೇನೆಂದರೆ ಅನೇಕ ಸಲ ನಾವು ಎಷ್ಟು ಪ್ರಯತ್ನಪಟ್ಟರೂ ನಮಗೆ ಋಣಾತ್ಮಕ ಪ್ರಶ್ನೆಗಳನ್ನು ಕೇಳದೆಯೇ, ಇರುವುದಕ್ಕೆ ಸಾಧ್ಯವಾಗುವುದಿಲ್ಲ.
* ಏಕೆಂದರೆ ನಾವು ಏನನ್ನು ಕೇಳುತ್ತೇವೆ ? ಏನನ್ನು ನೋಡುತ್ತೇವೆ ? ಅದಕ್ಕೆ ಸಂಬಂಧಿಸಿದಂತೆ ನಮ್ಮ ಪ್ರಶ್ನೆಗಳು ಇರುತ್ತವೆ. ಹಾಗೂ
* ನಾವು ನೋಡುವುದು, ಕೇಳುವುದು ನಾವು ಇರುವ ಪರಿಸರದ ಮೇಲೆ ಅವಲಂಬಿಸಿದೆ.
* ನಾವು ಇರುವ ಪರಿಸರ ನಮ್ಮ ವರ್ತಮಾನದ ಕೆಲಸಗಳು ಹಾಗೂ ನಮ್ಮ ಭೂತಕಾಲದ ಕರ್ಮಗಳ ಮೇಲೆ ಅವಲಂಬಿಸಿದೆ.
ಹೀಗಾಗಿ ಒಂದು ವೇಳೆ ನಮ್ಮ ಕರ್ಮಗಳೇ ಋಣಾತ್ಮಕ ಇದ್ದಲ್ಲಿ, ನಮ್ಮ ಸುತ್ತಮುತ್ತಲಿನ ಪರಿಸರ ಋಣಾತ್ಮಕವಾಗಿಯೇ ಇರುತ್ತದೆ. ಆಗ ನಮಗೆ ಗೊತ್ತಿಲ್ಲದೆ ನಾವು ಋಣಾತ್ಮಕ ಪ್ರಶ್ನೆಗಳನ್ನು ಕೇಳಲೇ ಬೇಕೆನ್ನುವಂತಹ ಸಂದರ್ಭ, ಸನ್ನಿವೇಶಗಳನ್ನು ನಮ್ಮ ಪರಿಸರ ಸೃಷ್ಠಿ ಮಾಡುತ್ತದೆ. ಆಗ ನಾವು ಜಗತ್ತಿಗೆ ಋಣಾತ್ಮಕ ಪ್ರಶ್ನೆಗಳನ್ನೇ ಕೇಳುತ್ತೇವೆ. ಆಗ ಋಣಾತ್ಮಕ ಅನುಭವಗಳ (ದುಃಖ, ಕಷ್ಟ, ನೋವುಗಳ) ಮೂಲಕ ನಮ್ಮ ಋಣಾತ್ಮಕ ಪ್ರಶ್ನೆಗಳಿಗೆ, ಋಣಾತ್ಮಕ ಅನುಭವದ ಉತ್ತರಗಳನ್ನೇ ಪಡೆಯುತ್ತೇವೆ.
ನಾನು ಚಿಕ್ಕಂದಿನಲ್ಲಿ ಯುಗಗಳ ಬಗ್ಗೆ ಕೇಳಿದ್ದೆ. ಕಲಿಯುಗದ ನಂತರ ಸತ್ಯ ಯುಗ ಬರುತ್ತದೆಯೆಂದು ಕೇಳಿದ ನಂತರ, ಸತ್ಯ ಯುಗ ಎಂದರೆ ಹೇಗಿರುತ್ತದೆ ? ಎನ್ನುವ ಪ್ರಶ್ನೆ ಹಲವು ಸಲ ನನ್ನ ಮನಸ್ಸಿನಲ್ಲಿ ಬಂದಿತ್ತು.
ಇದಕ್ಕೆ ಹಲವು ವರ್ಷಗಳ ನಂತರ ನಂಬಲರ್ಹವಾದ ಮೂಲದಿಂದ ಉತ್ತರ ಸಿಕ್ಕಿದೆ. ಅದನ್ನು ಮುಂದಿನ ಲೇಖನಗಳಲ್ಲಿ ಹಂಚಿಕೊಳ್ಳುತ್ತೇನೆ.
ಈ ಮೇಲಿನ ಸಂಗತಿಗಳಿಂದ ನಮಗೆ ಖಚಿತವಾಗುವುದೇನೆಂದರೆ, ನಾವು ನಮ್ಮ ಕರ್ಮಗಳಿಗನುಸಾರವಾಗಿ, ನಮ್ಮ ಅನುಭವಗಳ ಮೂಲಕ ಯಾವ ಉತ್ತರ (ಅಥವಾ ತಿಳುವಳಿಕೆ) ಪಡೆಯಬೇಕಾಗಿದೆಯೋ ಅಂತಹ ವಾತಾವರಣದಲ್ಲಿಯೇ ನಾವು ಇರುತ್ತೇವೆ.
ಅಂತಹ ವಾತಾವರಣದಲ್ಲಿ ಇದ್ದಾಗ ನಮಗೆ ಗೊತ್ತಿಲ್ಲದೆ ಅಂತಹ ಪ್ರಶ್ನೆಗಳನ್ನೇ ಜಗತ್ತಿಗೆ ಕೇಳುತ್ತೇವೆ.
ಅಂತಹ ಪ್ರಶ್ನೆಗಳಿಗೆ ಅಂತಹ ಒಳ್ಳೆಯ/ಕೆಟ್ಟ ಅನುಭವಗಳ ಮೂಲಕ ಅಂತಹ ಉತ್ತರಗಳನ್ನೇ ಪಡೆಯುತ್ತೇವೆ.
(ಧನಾತ್ಮಕ ಪ್ರಶ್ನೆಗೆ ಧನಾತ್ಮಕ ಉತ್ತರ. ಋಣಾತ್ಮಕ ಪ್ರಶ್ನೆಗೆ ಋಣಾತ್ಮಕ ಉತ್ತರ.)
ಹೀಗಾಗಿ ತಾವು ಈಗ ಈ ಧನಾತ್ಮಕ ಲೇಖನ ಓದುತ್ತಿದ್ದಿರೆಂದರೆ, ಇದರರ್ಥ ತಾವು ಉತ್ತಮ ಪರಿಸರದಲ್ಲಿಯೇ ಇದ್ದೀರಿ.
ತಾವು ಉತ್ತಮ ಪರಿಸರದಲ್ಲಿ ಇದ್ದೀರಿ ಎಂದರೆ ತಮಗೆ ಉತ್ತಮ ಕರ್ಮಗಳೇ ಇವೆ.
ಉತ್ತಮ ಕರ್ಮಗಳಿಗೆ ಉತ್ತಮ ಫಲವೇ ಸಿಗಲಿದೆ. ಹೀಗಾಗಿ ಸತ್ಯ ಯುಗದ ಕುರಿತು ತಾವು ಧನಾತ್ಮಕ ಪ್ರಶ್ನೆಗಳನ್ನೇ ಜಗತ್ತಿಗೆ ಏಕೆ ಕೇಳಬಾರದು ?
* ಸತ್ಯ ಯುಗ ಎಂದರೇನು ?
* ಸತ್ಯ ಯುಗ ಹೇಗೆ ಇರುತ್ತದೆ ?
* ಸತ್ಯ ಯುಗದಲ್ಲಿ ಇರಬೇಕಾದರೆ ಯೋಗ್ಯತೆ ಏನು ?
* ನನ್ನಲ್ಲಿ ಆ ಯೋಗ್ಯತೆ ಇದೆಯೇ ?
* ಆ ಯೋಗ್ಯತೆ ಪಡೆದುಕೊಳ್ಳಲು ಏನು ಮಾಡಬೇಕು ?
* ಆ ಯೋಗ್ಯತೆ ಪಡೆದುಕೊಳ್ಳಲು ನಾನು ಪ್ರಯತ್ನ ಮಾಡುತ್ತಿದ್ದೇನೆಯೇ?
ಹೀಗೆ ನಾವು ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಾ ಇದ್ದರೆ, ಈ ಪ್ರಶ್ನೆಗಳಿಗೆ ತಿಳುವಳಿಕೆ ಮೂಲಕ, ಅನುಭವದ ಮೂಲಕ ನಾವು ಜಗತ್ತಿನಿಂದ ಖಚಿತವಾಗಿ ಉತ್ತರಗಳನ್ನು ಪಡೆದೆ, ಪಡೆಯುತ್ತೇವೆ.
ಹಾಗಾಗಿ ಈ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳನ್ನು, ಅನುಭವಗಳ ರೂಪದಿಂದ ಜಗತ್ತಿನಿಂದ ಪಡೆದೆ ಪಡೆಯುತ್ತೇವೆ. ಪಡೆಯುವ ಸಮಯದಲ್ಲಿ ಹೆಚ್ಚು ಕಡಿಮೆಯಾಗಬಹುದು. ಆದರೆ ನಮ್ಮ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಜಗತ್ತು ಖಂಡಿತ ಸಮಂಜಸ ಉತ್ತರ ನೀಡುತ್ತದೆ.
ಹೀಗಾಗಿ ಈ ಲೇಖನ ಓದುತ್ತಿರುವ ತಾವು ಸತ್ಯ ಯುಗದ ಕುರಿತು ಮೇಲಿನ ಪ್ರಶ್ನೆಗಳನ್ನು ಜಗತ್ತಿಗೆ ಕೇಳಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ.
ತನ್ಮೂಲಕ ಸತ್ಯ ಯುಗವನ್ನು ಆಕರ್ಷಿಸುವಲ್ಲಿ ತಾವು ಸಹ ತಮ್ಮ ಅಳಿಲು ಸೇವೆ ಸಲ್ಲಿಸುವಿರೆಂದು ನಂಬುತ್ತೇನೆ.
ಸದಾಶಯಗಳೊಂದಿಗೆ. ತಮ್ಮೆಲ್ಲರಿಗೂ ಒಳಿತನ್ನೇ ಬಯಸುತ್ತಾ. ಧನ್ಯವಾದಗಳೊಂದಿಗೆ,
ಕೊನೆಯಲ್ಲಿ ಮತ್ತೊಮ್ಮೆ ಲೇಖನ ಸಾರಾಂಶ.
1) ಪ್ರಶ್ನೆ = ನಮ್ಮ ಇಂದ್ರಿಯಗಳಿಂದ ನಮಗೆ ತಿಳಿಯುವ ವಿಷಯ, ಸಂಗತಿಗಳ ಬಗ್ಗೆ.
2) ನಮ್ಮ ಇಂದ್ರಿಯಗಳಿಗೆ ತಿಳಿಯುವಂತಹದ್ದು = ನಾವು ಇರುವ ಪರಿಸರದಿಂದ
3) ನಾವು ಇರುವ ಪರಿಸರ = ನಮ್ಮ ಕರ್ಮಗಳ ಅನುಸಾರ
4) a) ನಮ್ಮ ಕರ್ಮವೇ ಋಣಾತ್ಮಕ ಆಗಿದ್ದಲ್ಲಿ ಋಣಾತ್ಮಕ ಪ್ರಶ್ನೆಯನ್ನೇ ಕೇಳುತ್ತೇವೆ. ಅಥವಾ
b) ನಮ್ಮ ಕರ್ಮ ಧನಾತ್ಮಕ ಆಗಿದ್ದಲ್ಲಿ ಧನಾತ್ಮಕ ಪ್ರಶ್ನೆಗಳನ್ನು ಕೇಳುತ್ತೇವೆ.
5) a)ನಮ್ಮ ಪ್ರಶ್ನೆಗಳೇ ಋಣಾತ್ಮಕವಾಗಿದ್ದಲ್ಲಿ ಋಣಾತ್ಮಕ ಅನುಭವಗಳ ಮೂಲಕ ಋಣಾತ್ಮಕ ಉತ್ತರ ಪಡೆಯುತ್ತೇವೆ. ಅಥವಾ
b) ನಮ್ಮ ಪ್ರಶ್ನೆಗಳು ಧನಾತ್ಮಕವಾಗಿದ್ದಲ್ಲಿ ಧನಾತ್ಮಕ ಅನುಭವಗಳ ಮೂಲಕ ಧನಾತ್ಮಕ ಉತ್ತರ ಪಡೆಯುತ್ತೇವೆ
ಓಂ ನಮಃ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ.
ಈ ಪದ ಯುಗ ಪರಿವರ್ತನೆಗೆ ನಾಂದಿ.
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ.)
30/07/2024

Comments
Post a Comment