ನಿಜವಾಗಿಯೂ ಇದು ಸತ್ಯವೇ ? ಹೀಗೆ ಆಗಲೂ ಸಾಧ್ಯವೇ ?
ನಿಜವಾಗಿಯೂ ಇದು ಸತ್ಯವೇ ? ಹೀಗೆ ಆಗಲೂ ಸಾಧ್ಯವೇ ?
ನಾವು ಹನುಮಾನ ದೇವರ ಜೀವನದ ಒಂದು ಘಟನೆಯನ್ನು ಕೇಳಿದಾಗ ನಮ್ಮಲ್ಲಿ ಈ ಮೇಲಿನಂತೆ ಯೋಚನೆ ಬರುತ್ತದೆ.
ರಾಮ ಸೀತೆಯರು ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ, ಸೀತೆ ತಮಗೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುವ ಉದ್ದೇಶದಿಂದ ಎಲ್ಲ ಕಪಿ ಸೈನ್ಯಕ್ಕೆ ಭೋಜನ ಏರ್ಪಡಿಸಿ, ಉಡುಗೊರೆಯನ್ನು ನೀಡುತ್ತಿರುತ್ತಾರೆ. ಎಲ್ಲರ ಸರದಿ ಮುಗಿದ ಮೇಲೆ ಹನುಮಾನ ದೇವರ ಸರದಿ ಬರುತ್ತದೆ.
ಆಗ ಸೀತಾ ಮಾತೆ ಹನುಮಾನ ದೇವರಿಗೆ ತನ್ನ ಕೊರಳಲ್ಲಿರುವ ಅತ್ಯಂತ ಬೆಲೆಬಾಳುವ ಮುತ್ತಿನ ಹಾರವನ್ನೇ ಉಡುಗೊರೆಯಾಗಿ ಕೊಡುತ್ತಾರೆ. ಆಗ ಅದನ್ನು ಪಡೆದು ಹನುಮಾನ ದೇವರು ಬಹಳ ಖುಷಿ ಪಡಬಹುದೆಂದು, ಸೀತಾ ಮಾತೆ ನಿರೀಕ್ಷಿಸುತ್ತಿರುತ್ತಾರೆ.
ಆದರೆ ಹನುಮಾನ ದೇವರು, ಮುತ್ತಿನ ಹಾರದ ಒಂದೊಂದು ಮುತ್ತುಗಳನ್ನು ಒಡೆಯಲು ಪ್ರಾರಂಭಿಸುತ್ತಾರೆ. ಉಡುಗೊರೆಯಿಂದ ಸಂತೋಷ ಪಡಬಹುದೆಂದು ನಿರೀಕ್ಷಿಸಿದ್ದ ಸೀತಾ ಮಾತೆಗೆ ಪ್ರಭು ಹನುಮಂತರ ಈ ಕೃತ್ಯ ಬಹಳ ಸಿಟ್ಟು ತರುತ್ತದೆ.
ಆಗ ಸೀತಾ ಮಾತೆ ಸಿಟ್ಟಿನಿಂದ, ನಾನು ಪ್ರೀತಿಯಿಂದ ಕೊಟ್ಟಿರುವ ಸರವನ್ನು ನೀನು ಒಡೆಯುತ್ತಿರುವೆ. ನೀನು ನನಗೆ ಕೊಡುವ ಗೌರವ ಏನು ? ಎಂದು ಸೀತಾ ಮಾತೆ ಸಿಟ್ಟಿನಿಂದ ಕೇಳುತ್ತಾರೆ.
ಆಗ ಹನುಮಾನ ಪ್ರಭು, ಮಾ ನಾನು ನಿಮಗೆ ಆಗೌರವ ತೋರಿಸುತ್ತಿಲ್ಲ. ನೀವು ಕೊಟ್ಟಿರುವ ಮುತ್ತಿನ ಹಾರದ ಈ ಮುತ್ತುಗಳಲ್ಲಿ ಶ್ರೀರಾಮ ಇದ್ದಾನೆಯೇ ? ಎಂದು ನೋಡಿದೆ. ನನ್ನ ಹೃದಯದಲ್ಲಿ ಶ್ರೀ ರಾಮನಿಲ್ಲದ ಯಾವುದೇ ವಸ್ತುವಿಗೆ ಯಾವುದೇ ರೀತಿಯ ಬೆಲೆಯಿಲ್ಲ, ಎನ್ನುತ್ತಾರೆ.
ಆಗ ಸೀತಾ ಮಾತೆ, ಹಾಗಾದರೆ ನಿನ್ನ ಸ್ವಂತ ಹೃದಯದಲ್ಲಿ ಶ್ರೀರಾಮ ಇಲ್ಲದೆ ಇದ್ದರೆ ಅದನ್ನು ಸಹ ಹೀಗೆ ತುಂಡು ಮಾಡುವೆಯಾ ? ಎನ್ನುತ್ತಾರೆ.
ಆಗ ಹನುಮಾನ ದೇವರು, ತಮ್ಮ ಎದೆಯನ್ನು ಸೀಳಿ ಅಲ್ಲಿ ಶ್ರೀ ರಾಮ ಸೀತೆ ಇರುವುದನ್ನು ತೋರಿಸುತ್ತಾರೆ.
ಈ ಕಥೆ ಕೇಳಿದಾಗ ನಿಜವಾಗಿಯೂ ಹೀಗೆ ಹೃದಯದಲ್ಲಿ ರಾಮ ಸೀತೆಯರು ಕಂಡರೆ ? ಹೃದಯದಲ್ಲಿ ಹೀಗೆ ಯಾರನ್ನಾದರೂ ಇಟ್ಟುಕೊಳ್ಳಲು ಸಾಧ್ಯವೇ ? ಇದು ಸತ್ಯವೇ ? ಇದು ಸಾಧ್ಯವೇ ? ಯಾವ ಯೋಚನೆ ನಮ್ಮೆಲ್ಲರಿಗೂ ಬರುತ್ತದೆ.
ಆದರೆ ಇದು ಸತ್ಯ. ಇದು ಸಾಧ್ಯ. ನಾವು, ನಮ್ಮ ಎದೆಯನ್ನು (ಮನಸ್ಸಿನಿಂದ) ಸೀಳಿಕೊಂಡಾಗ ನಮ್ಮ ಹೃದಯದಲ್ಲಿ ತುಂಬಿಕೊಂಡಿರುವುದು ನಮಗೆ ಕಾಣಿಸುತ್ತಿದೆ.
ನಾವು ನಮ್ಮ ಎದೆ ಸೀಳಿಕೊಂಡಾಗ ನಾವು ಏನನ್ನು ಕಾಣುತ್ತೇವೆಂದರೆ ?
ಯಾರು ನಮಗೆ ಮೋಸ ಮಾಡಿದ್ದಾರೆ ? ಅವರನ್ನು ತುಂಬಿಕೊಂಡಿದ್ದೇವೆ ನಾವು ಕಾಣುತ್ತೇವೆ.
ಯಾರು ನಮಗೆ ಕೆಟ್ಟದ್ದು ಮಾಡಿದ್ದಾರೆ ? ಅವರನ್ನು ನಮ್ಮ ಹೃದಯದಲ್ಲಿ ಕಾಣುತ್ತೇವೆ.
ಜೀವನದಲ್ಲಿ ಯಾರು ನಮ್ಮನ್ನು ಹಿಂದೆ ಹಾಕಿ ಮುಂದೆ ಹೋಗಿದ್ದಾರೆ ?
ಅವರನ್ನು ನಮ್ಮ ಹೃದಯದಲ್ಲಿ ಕಾಣುತ್ತೇವೆ.
ಯಾರು ನಮಗೆ ಮುಂದೆ ಮೋಸ ಮಾಡಬಹುದು ? ಅವರನ್ನು ನಮ್ಮ ಹೃದಯದಲ್ಲಿ ಕಾಣುತ್ತೇವೆ.
ನಮ್ಮನ್ನು ಯಾರು ಒಂದು ದಿನ ಬಿಟ್ಟು ಹೋಗುತ್ತಾರೆ ? ಅವರನ್ನು ನಮ್ಮ ಹೃದಯದಲ್ಲಿ ಕಾಣುತ್ತೇವೆ.
ಹೀಗೆ ಕೆಟ್ಟವರನ್ನು, ಶತ್ರುಗಳನ್ನು, ಮಿತ್ರರನ್ನು, ಪ್ರೀತಿಯ ಬಂಧು ಬಾಂಧವರನ್ನು ನಮ್ಮ ಹೃದಯದಲ್ಲಿ ತುಂಬಿಕೊಂಡಿದ್ದೇವೆ. ಹೀಗೆ ಅಸತ್ಯವನ್ನೇ ನಿರಂತರ ಬದಲಾಗುವವರನ್ನೇ ನಾವು ನಮ್ಮ ಹೃದಯದಲ್ಲಿ ತುಂಬಿಕೊಂಡಿದ್ದೇವೆ. ನಮ್ಮ ಹೃದಯದಲ್ಲಿರುವ ಎಲ್ಲರೂ ಒಂದಿಲ್ಲ, ಒಂದು ದಿನ ನಮ್ಮನ್ನು ಬಿಟ್ಟು ಹೋಗುತ್ತಾರೆ. ಆಗ ನಮ್ಮ ಹೃದಯಕ್ಕೆ ದುಃಖವೇ ಗತಿಯಾಗುತ್ತದೆ.
ಹನುಮಾನ ಜಯಂತಿಯ ಈ ದಿನ ನಾವು ನಮ್ಮನ್ನೇ ಒಂದು ಪ್ರಶ್ನೆ ಮಾಡಿಕೊಳ್ಳೋಣ ಅದೇನೆಂದರೆ ನಾವು ಸಹ ಪ್ರಭು ಹನುಮಂತರಂತೆ ಶಾಶ್ವತ ಸತ್ಯವಾಗಿರುವ ದೇವರನ್ನೆ ನಮ್ಮ ಹೃದಯದಲ್ಲಿ ಏಕೆ ಇಟ್ಟುಕೊಳ್ಳಬಾರದು ?
ಕ್ಷಣ ಕ್ಷಣ ಬದಲಾಗುತ್ತಿರುವ ಈ ನಶ್ವರ ಪ್ರಪಂಚದಲ್ಲಿ ಎಂದಿಗೂ ಬದಲಾಗದ ಈಶ್ವರನಿಗೆ ನಮ್ಮ ಹೃದಯದಲ್ಲಿ ಏಕೆ ಸ್ಥಾನ ಕೊಡಬಾರದು ?
ಸದಾ ಮೃತ್ಯುವಿನ ಹತ್ತಿರಕ್ಕೆ ಜಾರುತಿರುವ ಹೃದಯದಲ್ಲಿ ಶಾಶ್ವತ ಅಮೃತತ್ವಕ್ಕೆ ಏಕೆ ಸ್ಥಾನ ಕೊಡಬಾರದು ?
ಈ ಪ್ರಶ್ನೆಯನ್ನು ಇಂದು ನಾವೆಲ್ಲರೂ ನಮಗೆ ಕೇಳಿಕೊಳ್ಳೋಣ. ನಮ್ಮ ಹೃದಯದಲ್ಲಿ ಈಗ ಯಾರಿದ್ದಾರೆ ? ಎನ್ನುವುದನ್ನು ಗಮನಿಸೋಣ.
ಇನ್ನು ಮುಂದೆ ಯಾರನ್ನು ನಮ್ಮ ಹೃದಯದಲ್ಲಿ ಇಟ್ಟುಕೊಳ್ಳಬೇಕು, ಎನ್ನುವುದರ ಬಗ್ಗೆ ಚಿಂತಿಸೋಣ.
ಎಲ್ಲರಿಗೂ ಹನುಮಾನ ಜಯಂತಿಯ ಶುಭಾಶಯಗಳು.

Comments
Post a Comment