ಹುಚ್ಚು ಬಾವಿಯ ಕಥೆ

(ಈ ಕಥೆ ಪೂರ್ಣ ಜ್ಞಾನಿಗಳಿಗಲ್ಲ. ಪೂರ್ಣ ಜ್ಞಾನಿಗಳು ಈ ಕಥೆಯಿಂದ ದೂರವೇ ಇರಲಿ.)

ಹುಚ್ಚು ಬಾವಿಯ ಕಥೆ


ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ತಪ್ಪಿಗಾಗಿ ಆತನಿಗೆ ಛೀಮಾರಿ ಹಾಕಿ ಆತನನ್ನು ಊರಿನಿಂದ ಬಹಿಷ್ಕಾರ ಹಾಕಲಾಗುತ್ತದೆ.

ಅಪಮಾನದಿಂದ ಕ್ರೋಧೀತನಾದ ಆತನು ತನ್ನ  ಅಪಮಾನಕ್ಕಾಗಿ ಹಳ್ಳಿಯವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿ ಉಗ್ರ ತಪಸ್ಸು ಆಚರಿಸಿ ಸಿದ್ದಿಗಳನ್ನು ಪಡೆದುಕೊಳ್ಳುತ್ತಾನೆ. ಕೆಲವು ವರ್ಷಗಳ ನಂತರ ಸಿಟ್ಟು, ಆಕ್ರೋಶ, ಸೇಡಿನ ಮನೋಭಾವದಿಂದ ತನ್ನ ಶಿಷ್ಯನೊಂದಿಗೆ ಊರಿಗೆ ಬರುತ್ತಾನೆ. 

ಊರಿನ ಸ್ವಲ್ಪ ದೂರದಲ್ಲಿ ಒಂದು ಬಾವಿ ಇರುತ್ತದೆ. ಊರಿನವರೆಲ್ಲರು ಆ ಬಾವಿ ನೀರನ್ನೆ ಬಳಸುತ್ತಿರುತ್ತಾರೆ. ಆ ವ್ಯಕ್ತಿ ಕೆಲವು ಮಂತ್ರಗಳನ್ನು ಹೇಳಿ ತಾನು ತಂದಿದ್ದ ಗಿಡಮೂಲಿಕೆಗಳನ್ನು ಬಾವಿಯಲ್ಲಿ ಹಾಕುತ್ತಾನೆ. ಆಗ ಶಿಷ್ಯ ಹೀಗೆ ಮಾಡಿದ ಉದ್ದೇಶವೇನೆಂದು ? ಕೇಳುತ್ತಾನೆ. ಆಗ ನನಗೆ ಮಾಡಿರುವ ಅಪಮಾನಕ್ಕಾಗಿ ಸೇಡು ತೀರಿಸಿಕೊಳ್ಳುತ್ತಿದ್ದೇನೆ. ಈಗ ನೋಡು ಈ ಬಾವಿಯ ನೀರು ಕುಡಿಯುವರೆಲ್ಲರೂ ಹುಚ್ಚರಾಗುತ್ತಾರೆ, ಎನ್ನುತ್ತಾನೆ. 

ಹೀಗೆ ಹೇಳುವಾಗ ಅಲ್ಲಿಂದ ಹಾದುಹೋಗುತ್ತಿದ್ದ ಹಳ್ಳಿಯ ಒಬ್ಬ ವ್ಯಕ್ತಿಗೆ ಈ ಮಾತು ಕೇಳಿಸುತ್ತದೆ. ಆಗ ಕತ್ತಲಾಗುತ್ತಿರುವದರಿಂದ ಯಾರು ಸರಿಯಾಗಿ ಕಾಣುವುದಿಲ್ಲ. ಕೇವಲ ನೀರು ಕುಡಿದರೆ ಹೇಗೆ ಹುಚ್ಚರಾಗುತ್ತಾರೆ ? ಇದು ನಂಬಲಿಕ್ಕೆ ಸಾಧ್ಯವಿಲ್ಲವೆಂದು ಆ ಮಾತನ್ನು ಹಗುರವಾಗಿ ತೆಗೆದುಕೊಂಡು ತನ್ನ ಮನೆಗೆ ಹೋಗುತ್ತಾನೆ. ಆದರೂ ಯಾವುದಕ್ಕೂ ಇರಲಿ, ಎಂದು ತನ್ನ ಹೆಂಡತಿಗೆ ವಿಷಯ ತಿಳಿಸಿ, ನಾಳೆ ಬಾವಿಯಿಂದ ನೀರು ತರುವುದು ಬೇಡ. ನೀರು ಬೇಕಾದರೆ ಹಳ್ಳದಿಂದ ತೆಗೆದುಕೊಂಡು ಬಾ, ಎಂದು ಹೇಳುತ್ತಾನೆ.

ಮರುದಿನ ಗಂಡ ಕೆಲಸದಿಂದ ಮನೆಗೆ ಬಂದ ನಂತರ ಊರಿನ ಬಹಳಷ್ಟು ಜನ ಹುಚ್ಚರಂತೆ ವರ್ತಿಸುತ್ತಿದ್ದಾರೆ, ಎಂದು ಹೆಂಡತಿ ಹೇಳುತ್ತಾಳೆ. ಆಗ ಗಂಡ, ಯಾವುದಕ್ಕೂ ನಾವು ಬಾವಿ ನೀರು ಕುಡಿಯದೆ ಇರುವುದು ಒಳ್ಳೆಯದಾಯಿತು. ನಾನು ನಿನ್ನೆ ಕೇಳಿದ್ದು ಸತ್ಯವೇ ಇದೆ, ಎನ್ನುತ್ತಾನೆ.

ಆಗ ಹೆಂಡತಿ ಈಗ ಹುಚ್ಚರಾಗದೆ ಉಳಿದಿರುವ ಜನರಿಗಾದರೂ ಬಾವಿ ನೀರು ಕುಡಿಯದಂತೆ ಹೇಳೋಣವೇ ? ಎಂದು ಕೇಳುತ್ತಾಳೆ. ಆಗ ಗಂಡ ಬೇಡ, ಬೇಡ. ಈ ವಿಷಯ ನಮಗೆ ಮಾತ್ರ ಗೊತ್ತಿದೆ. ಆದ್ದರಿಂದ ಹುಚ್ಚರಂತೆ ವರ್ತಿಸುತ್ತಿರುವ ಜನರ, ಮನೆಯವರು ನಮ್ಮನ್ನೆ ಅನುಮಾನದಿಂದ ನೋಡಿದರೆ ಏನು ಮಾಡೋಣ ? ನಾವೇ ಬಾವಿಗೆ ಏನಾದರೂ ಮಾಡಿದ್ದೇವೆ? ಎಂದು ತಿಳಿದರೆ ಏನು ಮಾಡುವುದು ? ಈಗ ನಾವು ಬಾವಿ ನೀರು ಕುಡಿಯದ ಕಾರಣ ನಮಗಂತೂ ಏನು ಆಗುವುದಿಲ್ಲವಲ್ಲ ? ಅಷ್ಟು ಸಾಕು, ಸುಮ್ಮನಿರು ಎನ್ನುತ್ತಾನೆ.

ನಾಲ್ಕೈದು ದಿನಗಳಲ್ಲಿ ಆ ದಂಪತಿಯನ್ನು ಬಿಟ್ಟು, ಹಳ್ಳಿಯ ಎಲ್ಲಾ ಜನರು  ಹುಚ್ಚರಾಗುತ್ತಾರೆ.

ಊರಿನ ಅರ್ಧ ಜನ ಹುಚ್ಚರಾಗಿದ್ದಾಗ ಸಾಮಾನ್ಯ ಜನ ಅವರನ್ನು ನೋಡಿ ದುಃಖಿಸುತ್ತಿದ್ದರು. ಅವರನ್ನು ಮರಳಿ ಹೇಗೆ ಸಾಮಾನ್ಯರಂತೆ ಮಾಡಬೇಕೆಂದು ಚಿಂತಿಸುತ್ತಿದ್ದರು. ಇದರಿಂದ ಅವರು ತಮ್ಮ ಜೀವನದ ನೆಮ್ಮದಿಯನ್ನೇ ಕಳೆದುಕೊಂಡಿದ್ದರು. 

ಯಾವಾಗ ಉಳಿದ ಅರ್ಧ ಜನರು ಸಹ ಹುಚ್ಚರಾದರೋ ಆಗ ಅವರ ದುಃಖ, ನೋವು, ಚಿಂತೆ ಎಲ್ಲವೂ ಮಾಯವಾಯಿತು. ಅವರಿಗೆ 
 ಬೇರೆಯವರು ಹುಚ್ಚರಂತೆ ಕಾಣಲಿಲ್ಲ. ತಾವು ಸಹ ಹುಚ್ಚರಾಗಿದ್ದೇವೆಂದು ಅನಿಸಲಿಲ್ಲ.

ಎಲ್ಲರ ವರ್ತನೆ ಒಂದೇ ರೀತಿ ಇತ್ತು. ಅವರಲ್ಲಿ ಯಾರಲ್ಲಿಯೂ ಕುಂದು ಕೊರತೆಗಳು ಕಾಣಲಿಲ್ಲ. ಅವರೆಲ್ಲರೂ ತಮ್ಮದೇ ಲೋಕದಲ್ಲಿ ಕಾರಣವಿಲ್ಲದೆ ಕುಣಿದಾಡುತ್ತಿದರು. ಕಾರಣವಿಲ್ಲದೆ ನಗುತ್ತಿದ್ದರು, ಅಳುತ್ತಿದ್ದರು. ಹೊಟ್ಟೆಗೆ ಹಸಿವಾದಾಗ, ತಮ್ಮ ಅವಶ್ಯಕತೆ ಪೂರ್ಣ ಮಾಡಿಕೊಳ್ಳಲು ತಮಗೆ ಸಿಕ್ಕಿದನ್ನು ತಿನ್ನುತ್ತಿದ್ದರು. ತಮಗೆ ಸಿಕ್ಕಿದ್ದು ತಿನ್ನಬೇಕಾದದ್ದೋ ? ತಿನ್ನಬಾರದಂಥದ್ದೋ ? ಇವುಗಳ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ತಮಗೆ ಸಿಕ್ಕಿದ್ದು ತಮ್ಮದೋ, ಬೇರೆಯವರದೋ ಎನ್ನುವ ವಿಚಾರವೂ ಬರುತ್ತಿರಲಿಲ್ಲ. ಹೀಗೆ ಎಲ್ಲರೂ ಬದುಕುತ್ತಿದ್ದರು.

 ಹೆಣ್ಣು, ಗಂಡುಗಳು ತಮಗೆ ತಿಳಿದಂತೆ, ತಮಗೆ ಸಿಕ್ಕ ಸಿಕ್ಕ ಬಟ್ಟೆಗಳನ್ನೆ ಧರಿಸುತ್ತಿದ್ದರು. ಕೆಲವರು ಬಟ್ಟೆ ಹಾಕಿಕೊಂಡು ಹರಿಯುತ್ತಿದ್ದರು. ಕೆಲವರು ದೇಹದ ಮೇಲಿನ ಭಾಗದಲ್ಲಿ ಹಾಕಿಕೊಳ್ಳುವುದನ್ನು ಕೆಳಗಿನ ಭಾಗದಲ್ಲಿ, ಕೆಳ ಭಾಗದ್ದು ತಲೆ ಮೇಲೆ ಹಾಕಿಕೊಳ್ಳುತ್ತಿದ್ದರು. ಕೆಲ ಹೆಣ್ಣು ಗಂಡು ಬಟ್ಟೆಯ ಪರಿವೇ ಇಲ್ಲದೆ ತಮ್ಮದೇ ಲೋಕದಲ್ಲಿ ಬದುಕುತ್ತಿದ್ದರು.

ಹೊಟ್ಟೆ, ಬಟ್ಟೆಯಂತೆ, ನಿದ್ರೆಯನ್ನು ಸಹ ಹಗಲು ರಾತ್ರಿಗಳ ಪರಿವೆಯಿಲ್ಲದೆ ಸಿಕ್ಕ, ಸಿಕ್ಕ ಹಾಗೆ ಮಾಡುತ್ತಿದ್ದರು. ಯಾವುದೇ ತಂದೆ, ತಾಯಿ, ಅಣ್ಣ ತಂಗಿ, ಗಂಡ ಹೆಂಡತಿ ಮುಂತಾದ ಸಂಬಂಧಗಳ ಅರಿವನ್ನೆ ಕಳೆದುಕೊಂಡಿದ್ದರು. ಮೈಥುನ ಅವಶ್ಯಕತೆ ಬಂದಾಗ ಸಿಕ್ಕ ಸಿಕ್ಕಂತೆ,  ಸಿಕ್ಕವರೊಂದಿಗೆ ತಮ್ಮ ಅವಶ್ಯಕತೆ ಪೂರ್ಣ ಮಾಡಿಕೊಳ್ಳುತ್ತಿದ್ದರು. ಕೆಲವರಿಗೆ ಹೆಣ್ಣು, ಗಂಡು ಎನ್ನುವ ಭೇದವು ಬುದ್ದಿಯಿಂದ ಕಾಣೆಯಾಗಿತ್ತು. ಆದ್ದರಿಂದ ಮೈಥುನದ  ಅವಶ್ಯಕತೆ ಕಂಡಾಗ ಅವರಲ್ಲಿ ಹೆಣ್ಣು ಗಂಡು ಎನ್ನುವ ಭೇದವು ಕಾಣೆಯಾಗಿತ್ತು.

ಹೀಗೆ ತಮಗೆ ಮನಸ್ಸಿಗೆ ಬಂದಂತೆ ಬದುಕುತ್ತಿದ್ದರು. ಆದರೆ ಅವರೆಲ್ಲರ ಬದುಕಿನಲ್ಲಿ ಒಂದು ಸಾಮ್ಯತೆಯಿತ್ತು. ಏಕತೆ ಇತ್ತು. ಆ ಸಾಮ್ಯತೆ, ಏಕತೆಯೇ "ಹುಚ್ಚುತನ". 

ಈ ಎಲ್ಲಾ ಬದಲಾವಣೆಯನ್ನು ಹುಚ್ಚರಾಗದೆ ಸಾಮಾನ್ಯರಾಗಿಯೇ ಉಳಿದಂತಹ ಆ ದಂಪತಿ ನೋಡುತ್ತಿದ್ದರು. ಆ ಭಯಂಕರ ದೃಶ್ಯಗಳನ್ನು ನೋಡಿ, ತಮ್ಮನ್ನು ಹುಚ್ಚರಾಗದಂತೆ ಕಾಪಾಡಿದ ಆ ಭಗವಂತನಿಗೆ  ಅಂತರಹೃದಯದಿಂದ ಅನಂತ ಧನ್ಯವಾದ, ಅನಂತ ಕೃತಜ್ಞತೆ ಹೇಳುತ್ತಿದ್ದರು. 

ಒಂದು ದಿನ ಹೀಗೆ ದೇವರಿಗೆ ಕೃತಜ್ಞತೆ ಹೇಳುವಾಗ ಹಳ್ಳಿಯ ಎಲ್ಲಾ ಹುಚ್ಚರು ಇವರ ಮನೆಯನ್ನು, ಇವರನ್ನು ಸುತ್ತುವರಿದರು. ಅವರಲ್ಲಿ ಅತಿ ಹೆಚ್ಚು ಹುಚ್ಚನಾದವನು ಎಲ್ಲಾ ಹುಚ್ಚರ ನಾಯಕತ್ವ ವಹಿಸಿದ್ದನ್ನು. ಆತ ಜೋರಾಗಿ ಧಿಕ್ಕಾರ, ಧಿಕ್ಕಾರ ಎಂದು ಕೂಗಿದನು. ನಂತರ ಜೊತೆಯಲ್ಲಿದ್ದವರೆಲ್ಲಾ ಧಿಕ್ಕಾರ ಧಿಕ್ಕಾರ  ಎಂದು ಕೂಗಿದರು. ಧಿಕ್ಕಾರದ ಧ್ವನಿ ಗುಡುಗು ಸಿಡಿಲಿನಂತೆ ಕೇಳುತ್ತಿತ್ತು.

ನಂತರ ನಾಯಕ ಮಾತನಾಡಲು ಆರಂಬಿಸಿದ, ನೋಡಿ ನೋಡಿ ಇವರ ವೇಷಭೂಷಣ ನೋಡಿ ಮನುಷ್ಯತ್ವ ನಾಚಿಕೆ ಪಡುವಂತಹ ವೇಷ ತೊಟ್ಟಿದ್ದಾರೆ. ತಾವಿಬ್ಬರೇ ಇರ್ತಾರೆ ಯಾರ ಜೊತೆಗೆ ಸೇರುವುದಿಲ್ಲ. ಹೇಗೆಗೋ ಮಾತಾಡ್ತಾರೆ, ಏನೇನೋ ತಿಂತಾರೆ. ಸಿಕ್ಕ ಸಿಕ್ಕ ಚಿತ್ರಗಳಿಗೆ, ಸಿಕ್ಕ ಸಿಕ್ಕ ಮೂರ್ತಿಗೆ ಕೈ ಮುಗಿಯುತ್ತಾರೆ. ನನಗನ್ನಿಸುತ್ತದೆ ಇವರಿಗೆ ಹುಚ್ಚು ಹಿಡಿದಿದೆ.

 ಇವರು ನಮ್ಮ ಜೊತೆಗಿದ್ದರೆ ನಮಗೂ ಹುಚ್ಚು ಹಿಡಿಯುತ್ತದೆ. ಇವರಿಂದ ಮನುಷ್ಯತ್ವ ನಾಶವಾಗುತ್ತದೆ. ಇವರಿರಬಾರದು ಇವರನ್ನು ನಾಶ ಮಾಡಬೇಕೆಂದು ಕೂಗುತ್ತಾನೆ. ಆಗ ಅಲ್ಲಿ ಸೇರಿದ್ದ ಹುಚ್ಚರೆಲ್ಲರೂ ಹೌದು ನಾಯಕ ಹೌದು. ಇವರಿಗೆ ಹುಚ್ಚು ಹಿಡಿದಿದೆ. ಇವರು ಮನುಷ್ಯತ್ವಕ್ಕೆ ಕಂಟಕ. ಇವರನ್ನು ನಾಶ ಮಾಡಬೇಕು ಎಂದು ಕೂಗುತ್ತಾರೆ. 

ಇವರನ್ನು ಯಾವ ರೀತಿ ನಾಶ ಮಾಡಬೇಕೆಂದು ಎಲ್ಲರಿಗೂ ಒಮ್ಮತದ ನಿರ್ಣಯಕ್ಕೆ ಬರಲು ಆಗುವುದಿಲ್ಲ. ಆಗ ಅವರು ಗಹನವಾದ ಚರ್ಚೆಯಲ್ಲಿ  ತಲ್ಲೀನರಾಗಿದ್ದಾಗ ಆ ವ್ಯಕ್ತಿಯ ಹೆಂಡತಿ ಹೇಗೋ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಮರಳುತ್ತಾಳೆ.

ಆಗ ಆಕೆ ಗಂಡನಿಗೆ ಹೇಳುತ್ತಾಳೆ ನಾನು ದೇವರ ಗುಡಿಗೆ ಹೋಗಿದ್ದೇ ಅಲ್ಲಿಂದ ತೀರ್ಥ ತಂದಿದ್ದೇನೆ ಕುಡಿಯಿರಿ. ಇದನ್ನು ಕುಡಿದರೆ ನಾವು ಮೃತ್ಯುವಿನ ಈ ಅಪಾಯದಿಂದ ಪಾರಾಗುತ್ತೇವೆ, ಎಂದು ಗಂಡನಿಗೆ ಲೋಟ ನೀಡುತ್ತಾಳೆ. ಆಗ ಗಂಡ ಅರ್ಧ ಲೋಟ ಕುಡಿದ  ನಂತರ, ಲೋಟವನ್ನು ಗಂಡನ ಕೈಯಿಂದ ಕಸಿದುಕೊಂಡು ಹೆಂಡತಿ ತಾನು ಸಹ ಕುಡಿಯುತ್ತಾಳೆ. 

(ಕುಡಿದ ನಂತರ ಹುಚ್ಚರ ನಡುವೆಯಿರುವ ದಂಪತಿ ಬದುಕುತ್ತಾರೆಯೇ ? ಅಥವಾ  ಹಳ್ಳಿಯ ಎಲ್ಲಾ ಹುಚ್ಚರ ಸಿಟ್ಟು ಆಕ್ರೋಶಕ್ಕೆ ಬಲಿಪಶು  ಆಗುತ್ತಾರೆಯೇ ? ಎನ್ನುವುದನ್ನು ಆಮೇಲೆ ನೋಡೋಣ. ಅಲ್ಲಿಯವರೆಗೆ ನೀವೇ ಊಹೆ ಮಾಡಿ.)

***********

ಅಕ್ಷಯ ತೃತಿಯಾ ದಿನದಂದು_ಜೀವಿಗಳ ಶ್ರೇಣಿಯ ಉನ್ನತ ಸಾಧ್ಯತೆ ಬಯಸುವವರ ಹುಡುಕಾಟದಲ್ಲಿ.


ಇದೊಂದು ಹಳ್ಳಿಯ ಕಥೆ. ಆದರೆ ಪ್ರಜ್ಞಾವಂತರಾದ ನಿಮಗೆ ಇದು ಈಗಿನ ಜಗತ್ತಿನ ಕಥೆಯೇ ಆಗಿದೆಯೆಂದು  ಅನಿಸುತ್ತಿಲ್ಲವೇ ?

ಈಗಾಗಲೇ ಈ ಕಥೆಯಲ್ಲಿರುವಂತಹದ್ದೆ ಪರಿಸ್ಥಿತಿ ವಿದೇಶಗಳಲ್ಲಿ ವ್ಯಾಪಿಸುತ್ತಿಲ್ಲವೇ ? ಅದು  ನಮ್ಮ ದೇಶದಲ್ಲಿಯೂ ಬರುತ್ತಿಲ್ಲವೇ ?

ಆಧುನಿಕತೆ ಹೆಸರಿನಲ್ಲಿ ವಿದೇಶಗಳಲ್ಲಿ ಮನುಷ್ಯನ ಅವಶ್ಯಕತೆಯಾದ ಊಟ ಬಟ್ಟೆ ನಿದ್ರೆ ಮೈಥುನ ಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮನುಷ್ಯತ್ವದ ನೀತಿ ನಿಯಮಗಳು ಮರೆಯಾಗುತ್ತಿವೆ. ಮೂಲ ಎಲ್ಲಾ ನೈತಿಕತೆ, ಮಾನವೀಯ ಮೌಲ್ಯಗಳು ಹಳೆಯ ಕಾಲದ ಕೆಲಸಕ್ಕೆ ಬಾರದ ಸರಕುಗಳಂತೆ ಕಾಣಲಾಗುತ್ತಿದೆ. ಮೂಲಭೂತವಾದವು ಪ್ರಜ್ಞಾವಂತ ವೈಚಾರಿಕತೆಯನ್ನು ಕೊಲೆ ಮಾಡಿದೆ.

ಜೀವಿಯ ಅವಶ್ಯಕತೆ ಹೆಸರಿನಲ್ಲಿ ಭೋಗ ವಿಜೃಂಭಿಸುತಲಿದೆ. ತ್ಯಾಗ ಎಂಬುದು ವಿನೋದದ, ಹಾಸ್ಯದ, ನಗೆಪಾಟಲಿನ ವಸ್ತುವಾಗಿದೆ. ಈ ಕಥೆಯಲ್ಲಿ ಹುಚ್ಚರಾದವರಿಗೆ ತಾವು ಹುಚ್ಚರಾಗಿದ್ದೇವೆ ಎನ್ನುವುದು, ಹೇಗೆ ಗೊತ್ತಿರಲಿಲ್ಲವೋ ? 

ಹಾಗೆಯೇ ಇವತ್ತಿನ ಜಗತ್ತಿನ ಎಷ್ಟೋ ಜನರಿಗೆ ತಾವು ತಪ್ಪು ಮಾಡುತ್ತಿದ್ದೇವೆ ಎಂದು ಗೊತ್ತಾಗುತ್ತಿಲ್ಲ. ಕಥೆಯಲ್ಲಿ ಹುಚ್ಚರಾದವರು ತಮ್ಮ ಅವಶ್ಯಕತೆಗಳಾದ ಊಟ, ಬಟ್ಟೆ ನಿದ್ರೆ, ಮೈಥುನ ಹೇಗೇಗೋ ಪೊರೈಸಿಕೊಳ್ಳುತ್ತಿದ್ದರೋ, ಅದೇ ರೀತಿ ಕಥೆಯಲ್ಲಿನ ಹುಚ್ಚರಂತೆ ಇಂದಿನ ಮನುಷ್ಯರು ತಮ್ಮ ಅವಶ್ಯಕತೆಗಳನ್ನು ಪೋರೈಸಿಕೊಳ್ಳುತ್ತಿದ್ದಾರೆ.

ಯಾವ ರೀತಿ ಹುಚ್ಚರಿಗೆ ತಾವು ಮಾಡುವ ಅನಾಚಾರದ ಕೆಲಸ ಅನಾಚಾರವೆಂದು ಅನ್ನಿಸುತ್ತಿರಲಿಲ್ಲವೋ, ಅದೇ ರೀತಿ ಇಂದಿನ ಜನರಿಗೂ ತಾವು ಮಾಡುವ ಅನಾಚಾರದ ಕೆಲಸ ಅನಾಚಾರ ಅನಿಸುತ್ತಿಲ್ಲ. ಅನಾಚಾರ ಮಾಡಿದರೂ ತಾವು ಆಚಾರವನ್ನೆ ಮಾಡುತ್ತಿದ್ದೇವೆಂದು ಸಮರ್ಥಿಸಿಕೊಳ್ಳುತ್ತಾರೆ.

ಇದಕ್ಕೆ ಕಾರಣ ಎಲ್ಲಾ ಪ್ರಾಣಿಗಳಿಗೆ ಆದರ್ಶವಾಗಬೇಕಾದ ಮನುಷ್ಯ, ಪ್ರಾಣಿಗಳ ವರ್ತನೆಯನ್ನೇ ತನಗೆ ಆದರ್ಶ ಮಾಡಿಕೊಂಡಿದ್ದಾನೆ. ತಾವು ಪ್ರಾಣಿಗಳಿಗಿಂತಲೂ ಹೆಚ್ಚು, ತಾವು ಮನುಷ್ಯ ಎನ್ನುವ ಭಾವನೆಯೇ ಬರುತ್ತಿಲ್ಲ.

  ಎಲ್ಲರೂ ತಮ್ಮದೇ ಸಂತೋಷದಲ್ಲಿ ಮಗ್ನರಾಗಿದ್ದಾರೆ. ತಮ್ಮದೇ ಅಭಿಮಾನದಲ್ಲಿ ಮುಳುಗಿದ್ದಾರೆ. ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಮನೋಭಾವವೇ ಇಲ್ಲ. ಹುಚ್ಚನಲ್ಲದ ವ್ಯಕ್ತಿಯನ್ನು ಎಲ್ಲರೂ ಧೀಕ್ಕಾರ ಕೂಗಿ ಆತನ ವರ್ತನೆಯನ್ನೇ ಹೇಗೆ ಪ್ರಶ್ನಿಸಿದರೋ ? ಅದೇ ರೀತಿ ಮಾನವೀಯ ಮೌಲ್ಯಗಳನ್ನು, ಉತ್ತಮ ಸಂಸ್ಕಾರ ಹೊಂದಿರುವವರ ನಡೆಯನ್ನು ಪ್ರಶ್ನಿಸಲಾಗುತ್ತಿದೆ. ಅಪಹಾಸ್ಯ ಮಾಡಲಾಗುತ್ತಿದೆ.

ಅರೆ ಹುಚ್ಚರು ಬದಲಾಗುವುದು ಸರಳ. ಆದರೆ ಪೂರ್ಣ ಹುಚ್ಚರನ್ನು ಬದಲಾಯಿಸಲು ಕಷ್ಟ ಸಾಧ್ಯ. ಏಕೆಂದರೆ ಯಾರಿಗೆ ತಾನು ಹುಚ್ಚ ಎಂದು ತಿಳಿದಿದೆಯೋ ಆತನು ಹುಚ್ಚಿನಿಂದ ಹೊರಗಡೆ ಬರುವ ಪ್ರಯತ್ನವಾದರೂ ಮಾಡುತ್ತಾನೆ. ಆದರೆ ಪೂರ್ಣ ಹುಚ್ಚರಿಗೆ ತಾವು ಹುಚ್ಚರು ಎನ್ನುವುದೇ ತಿಳಿದಿಲ್ಲ. ಆಗ ಅವರು ಅದರಿಂದ ಹೊರಗೆ ಬರುವುದಕ್ಕೆ ಪ್ರಯತ್ನಿಸುವುದಾದರೂ ಹೇಗೆ ?

* ನಡೆಯುವವನೇ ಎಡವುತ್ತಾನೆ. 
* ಯೋಚಿಸುವವನು ತಪ್ಪು ಯೋಚಿಸಲು ಬಹುದು. 
* ಕೆಲಸ ಮಾಡುವವನು ತಪ್ಪು ಕೆಲಸ ಮಾಡಲು ಬಹುದು...

ಆದರೆ ನಾವು ಯೋಚಿಸುವ ರೀತಿ, ನಾವು ಮಾಡುವ ಕೆಲಸ ತಪ್ಪೆಂದು ತಿಳಿದ ನಂತರ, ಒಂದಿಲ್ಲ ಒಂದು ದಿನ ನಾವು ತಪ್ಪಿನಿಂದ ಹೊರಬರಲು ಅವಕಾಶವಿದೆ. 

ಆದರೆ ನಾವು ಯೋಚಿಸುವುದೇ ಸರಿ. ನಾವು ಮಾಡುವ ಕೆಲಸವೇ ಸರಿ, ಎನ್ನುವ ಬಲವಾದ ನಂಬಿಕೆಯಿದ್ದಾಗ ಯೋಚನೆ ಮತ್ತು ಕೆಲಸಗಳ ಮೂಲಕ ಇನ್ನೂ  ಉತ್ತಮ ಹಂತಕ್ಕೆ ಏರಲು ಹೇಗೆ ಸಾಧ್ಯ ?

ಮಾನವರಾದ ನಾವು ಕೇವಲ ದೇಹ ಮಾತ್ರವಲ್ಲ. ದೇಹದ ಜೊತೆಗೆ ಮನಸ್ಸು, ಬುದ್ಧಿ, ಸಂಸ್ಕಾರ, ಆತ್ಮವು ನಾವಾಗಿದ್ದೇವೆ.

 ಹೀಗಾಗಿ ಉನ್ನತ ಶ್ರೇಣಿಯ ಮನುಷ್ಯ ಅಂದರೆ ಯಾರು ? ಎನ್ನುವುದನ್ನು ತಿಳಿಯಬೇಕಾಗಿದೆ. ಇದಕ್ಕಾಗಿ ನಮ್ಮ ಬಗ್ಗೆ ನಾವು ಹೊಂದಿರುವ ಬುದ್ದಿವಂತ, ಜ್ಞಾನಿ ಎನ್ನುವ ನಿರ್ಧಾರವನ್ನು ಸ್ವಲ್ಪ ಸಮಯಕ್ಕಾದರೂ ಪಕ್ಕಕ್ಕೆ ಇಟ್ಟು, ನಮ್ಮಲ್ಲಿ ಮನುಷ್ಯನ ಹೊಸ ಸಾಧ್ಯತೆಯ ಉನ್ನತ ಹಂತವು ಇದೆಯೇ ? ಎನ್ನುವುದನ್ನು ತಿಳಿಯಲು ಒಂದು ಸಣ್ಣ ಪ್ರಯತ್ನವನ್ನು ಮಾಡೋಣ. 

ಮುಚ್ಚಿದ ಮನಸ್ಸಿನವರಾಗದೆ, ನಾವು ತೆರೆದ ಮನಸ್ಸಿನವರಾಗೋಣ. ಹೊಸ ಸಾಧ್ಯತೆಗೆ ನಮ್ಮನ್ನು ತೆರೆದುಕೊಳ್ಳೋಣ.

 ಕಥೆಯಲ್ಲಿರುವಂತೆ ಹುಚ್ಚರಾಗುವ ಪ್ರಕ್ರಿಯೆ ವಿದೇಶಗಳಲ್ಲಿ ಈಗಾಗಲೇ ಒಂದು ಹಂತ ತಲುಪಿದೆ. ಅಲ್ಲಿ ಬಹಳಷ್ಟು ಅನಾಚಾರಗಳು ಆಚಾರದಂತೆ ಅಲ್ಲಿನ ಸಮಾಜ ಸಹಜವೆಂಬಂತೆ ಸ್ವೀಕರಿಸುತ್ತಿದೆ. 

ಇದೇ ರೀತಿ ಭಾರತದಲ್ಲಿಯೂ    ಅನಾಚಾರವೆಂಬುದು ಆಚಾರವೆಂದು ಸ್ವೀಕರಿಸುವ ಪ್ರಕ್ರಿಯೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಕೌಟುಂಬಿಕ, ರಾಜಕೀಯ, ನ್ಯಾಯಿಕ, ಧಾರ್ಮಿಕ, ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ. 

ಸಾಮಾಜಿಕ, ಕೌಟುಂಬಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇತ್ತಿತ್ತಲಾಗಿ  ಸಮಾಜದಿಂದ ಪ್ರಜ್ಞಾವಂತರೆಂದು ಮನ್ನಣೆ ಪಡೆದವರು ಸಹ ಅನಾಚಾರಗಳನ್ನು ಸಹ ಆಚಾರವೆಂದು ಸಮಾಜ ಸ್ವೀಕರಿಸಲು ಪ್ರೇರಣೆ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಉದಾಹರಣೆಯನ್ನು ಈ ಲೇಖನದಲ್ಲಿ ನೋಡಬಹುದು. 👇

ಮೊದಲೇ ಹೇಳಿದಂತೆ ತಾವು ಹುಚ್ಚರೆಂದು ಅರಿತಿರುವ ಅರೆ ಹುಚ್ಚರು ಅಥವಾ ತಾವು ಅಜ್ಞಾನದಲ್ಲಿದ್ದೇವೆ ಎಂದು ಭಾವಿಸಿರುವವರು ಮಾತ್ರ ಹೊಸ ಸಾಧ್ಯತೆಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. 

ತಮಗೆ ಈಗಾಗಲೇ ಪೂರ್ಣ ಜ್ಞಾನವಿದೆ ನಮಗೆ ಹೊಸ ಜ್ಞಾನದ ಅವಶ್ಯಕತೆಯಿಲ್ಲ ಎಂದು ಭಾವಿಸಿರುವವರು ಅಥವಾ ಕಥೆಯಲ್ಲಿದ್ದಂತಹ ಪೂರ್ಣ ಹುಚ್ಚರು ಹೊಸ ಸಾಧ್ಯತೆಗೆ ತಮ್ಮನ್ನು ತಾವು ತೆರೆದುಕೊಳ್ಳುವುದು ಬಹು ಕಷ್ಟ. ಅವರು ಹೊಸ ಸಾಧ್ಯತೆಗೆ ತಮ್ಮನ್ನು ತಾವು ತೆರೆದುಕೊಳ್ಳುವುದಕ್ಕಿಂತ ಹುಚ್ಚರ ಕಥೆಯಲ್ಲಿ ಹೇಗೆ ಹುಚ್ಚರಾಗದೆ ಇರುವವರನ್ನೇ ಹುಚ್ಚರೆಂದು ಭಾವಿಸಿ ಅವರನ್ನು ನಾಶ ಮಾಡಲು ಪ್ರಯತ್ನಿಸಿದರೋ ಅಂತಹ ವಿನಾಶಕಾರಿ ಪ್ರಯತ್ನವನ್ನು ಮಾಡುತ್ತಾರೆ.

ಹೀಗಾಗಿ ಜೀವಿಗಳ ಉನ್ನತ ಶ್ರೇಣಿಗೆ ಏರಲು ಇಚ್ಛೆ ಉಳ್ಳವರು ಪರಸ್ಪರ ಸಂಘಟಿತರಾಗಿ, ಪರಸ್ಪರ ಬೆಳವಣಿಗೆಗೆ ಪೂರಕವಾಗಿರುವಂತಹ ಅವಶ್ಯಕತೆ ಇದೆ.

ಜೀವಿಗಳ (ಮನುಷ್ಯ) ಶ್ರೇಣಿಯ ಕುರಿತು ಮೇಲಿನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ನಾನು ಬರೆದಂತಹ ಈ ಕೆಳಗಿನ ಲೇಖನದಲ್ಲಿ ಹೇಳಿದ್ದೇನೆ.

  #ಜೀವಿಗಳ_ಶ್ರೇಣಿ 
(👇 ಇದನ್ನು ಕ್ಲಿಕ್ ಮಾಡಿ)


ಅಥವಾ ನೀವು ಫೇಸ್ಬುಕ್ ನಲ್ಲಿ ಇದ್ದರೆ ಕೆಳಗಿನ ಲಿಂಕ್ 👇



ದಯವಿಟ್ಟು ಈ ಲೇಖನ ಓದಿ. ತಾವು ಸಹ ಮನುಷ್ಯನ ಉನ್ನತ ಶ್ರೇಣಿಯ ಹಂತಕ್ಕೆ ಏರುವ ಇಚ್ಛೆಯನ್ನು ಹೊಂದುವಿರಿ ಎಂದು ಭಾವಿಸುತ್ತೇನೆ.

(ಮುಂದಿನ ದಿನಗಳಲ್ಲಿ  ಜೀವಿಗಳ ಶ್ರೇಣಿಯ ಕುರಿತು ಇನ್ನೂ ಸ್ಪಷ್ಟವಾಗಿ ಹೇಳುತ್ತೇನೆ. ಹಾಗೂ ಇದರಲ್ಲಿರುವ ಇನ್ನೂ ಉನ್ನತ ಹಂತಗಳನ್ನು ತಿಳಿಸುತ್ತೇನೆ.)

ಎಲ್ಲರಿಗೂ ಅಕ್ಷಯ ತೃತೀಯದ ಹಾರ್ಧಿಕ ಶುಭಾಶಯಗಳು.

ಓಂ ನಮಃ ಶಿವಾಯ

✍️ URAIN NAMAH #urain_namah 

ಸೂರ್ಯ ನಾರಾಯಣ ಜಿ. ಚಿಮ್ಮನಚೋಡಕರ್.

**********

(ಮಾನವೀಯ ಮೌಲ್ಯಗಳ ಅಧ:ಪತನಕ್ಕೆ ಕಾರಣ ಕಲಿಯು ಎಲ್ಲರ ಬುದ್ಧಿ ಭ್ರಷ್ಟ ಮಾಡಿರುವುದು. ಇದಕ್ಕಾಗಿ ಕಲಿಯ ನೆರಳಿನಿಂದ, ನಾವು ಸತ್ಯದ ನೆರಳಿನಲ್ಲಿ ಇದ್ದೇವೆ ಎನ್ನುವ ಭಾವನೆ ಎಲ್ಲರಲ್ಲಿ ಮೂಡಬೇಕಿದೆ. ಇದಕ್ಕಾಗಿ ಎಲ್ಲರ ಮನಸ್ಸು ಬುದ್ಧಿಗಳಲ್ಲಿ ಸತ್ಯ ನೆಲೆಸಬೇಕಾಗಿದೆ.   ಆಗ ಸತ್ಯ ಯುಗವೇ ಆರಂಭವಾಗಲಿದೆ. ಈ ಸಂಕಲ್ಪ ಕ್ಷಯ ಆಗದಂತೆ ಇಂದಿನ ಅಕ್ಷಯ ತೃತೀಯ ತಿಥಿ ಬಲ ನೀಡಲಿದೆ ಎನ್ನುವ ಭರವಸೆಯಲ್ಲಿ ಈ ಲೇಖನವನ್ನು ಇಂದು ಹಂಚಿಕೊಳ್ಳುತ್ತಿದ್ದೇನೆ. 
ಎಲ್ಲರಿಗೂ ಶುಭವಾಗಲಿ)
#ಅಕ್ಷಯ_ತೃತಿಯಾ #ಜೀವಿಗಳ_ಶ್ರೇಣಿ  #urain_namah

Comments

Popular posts from this blog

ಅಂಧ ಹೇಳವರು