ಸೀತಾರಾಮರನ್ನು ಆರಾಧಿಸದಿದ್ದರೆ, ನೆನೆಯದಿದ್ದರೆ ನಡೆಯುವುದಿಲ್ಲವೇನು ?*

(17 ಏಪ್ರಿಲ್ 2024 ರಂದು ರಾಮ ನವಮಿಯಂದು ಬರೆದ ಲೇಖನ)


 *ನಾವು ಶ್ರೀರಾಮ ಸೀತೆಯನ್ನು ಏಕೆ ನೆನೆಯಬೇಕು ? ಸೀತಾರಾಮರನ್ನು ಆರಾಧಿಸದಿದ್ದರೆ, ನೆನೆಯದಿದ್ದರೆ ನಡೆಯುವುದಿಲ್ಲವೇನು ?*


ಶ್ರೀ ರಾಮ ಮತ್ತು ಸೀತೆ ಅರಮನೆಯ ರಾಜ ವೈಭೋಗಗಳಲ್ಲಿ ಬೆಳೆದವರು.


ಕಾಡಿನಲ್ಲಿ ವಾಸಿಸುವವರಿಗೆ ಕಲ್ಲು ಮುಳ್ಳುಗಳು ಚುಚ್ಚಿದರೂ ಅದೊಂದು ದೊಡ್ಡ ದುರ್ಘಟನೆಯ ರೀತಿ ಅನುಭವವಾಗುವದಿಲ್ಲ. ಅದು ಅವರಿಗೆ ಸಾಮಾನ್ಯ ವಿಷಯ. ಆದರೆ ಅರಮನೆಯ ಹುಲ್ಲು ಹಾಸಿಗೆಯ ಮೇಲೆ ನಡೆದವರಿಗೆ ಒಂದು ಮುಳ್ಳು ಚುಚ್ಚಿದರು ಒಂದು ದೊಡ್ಡ ಆಘಾತದ ಅನುಭವ ನೀಡುತ್ತದೆ..


ಅರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ರಾಮ ಸೀತೆಯರು, ಇಂತಹ ಕಲ್ಲು ಮುಳ್ಳುಗಳು ಹಾಗೂ ರಾಕ್ಷಸರಿಂದ ಕೂಡಿದ ದುರ್ಗಮ ಅರಣ್ಯದಲ್ಲಿ ಹದಿನಾಲ್ಕು ವರ್ಷಗಳ ವರೆಗೆ ವನವಾಸದಲ್ಲಿ ಕಳೆದರು.


ಅರಮನೆಯಲ್ಲಿ ಬೆಳೆದವರಿಗೆ ಕಾಡಿನ ವಾಸವೇ ಕಷ್ಟಕರವಾಗಿದ್ದಾಗ ರಾವಣ ಎನ್ನುವ ಶತ್ರುವಿನಿಂದ ತೊಂದರೆ ಆರಂಭವಾಯಿತು. ಅದರಲ್ಲಿಯೂ ಸೀತೆ ತನ್ನ ಹಿತ ಬಯಸುವ ಒಬ್ಬರೇ ಒಬ್ಬರು ಇಲ್ಲದ ಸ್ಥಳದಲ್ಲಿ, ತನಗೆ ಕೆಟ್ಟದ್ದನ್ನೇ ಬಯಸುವವನ ರಾಜ್ಯದಲ್ಲಿ, ತನ್ನ ಪತಿ ಶ್ರೀರಾಮನ ಆಶಾವಾದದ ಯಾವ ಸೂಚನೆಗಳು, ಸಂದೇಶಗಳು (WhatsApp, Facebook ಇಲ್ಲದ ಸಮಯ) ತಲುಪದೆ ಇರುವಂತಹ ಕಾಲದಲ್ಲಿ ಒಂಟಿಯಾಗಿ ಎಷ್ಟೋ ದಿನಗಳು ಕಳೆದಳು.


ಒಂದಷ್ಟು ಸಮಯ ಸೀತೆ, ರಾಮರ ಜಾಗದಲ್ಲಿ ನಾವು ಇದ್ದುಕೊಂಡು ನೋಡೋಣ. ಆ ಕಷ್ಟದ, ನೋವಿನ ಸ್ಥಿತಿ ಹೇಗಿರಬಹುದು ? ಸೀತೆಗೆ ಹಾಗೂ ರಾಮನಿಗೆ ಒಂದೊಂದು ಕ್ಷಣವು ಎಷ್ಟು ದೀರ್ಘ ಕಾಲವಾಗಿ ಕಾಡಿರಬಹುದು ?


 ಯಾವುದೇ ಸಕಾರಾತ್ಮಕ ಸಂದೇಶ ಅವರಿಗೆ ತಲುಪದೆ ಇದ್ದಾಗ ಜೀವನದ ಬಗ್ಗೆ ಎಷ್ಟೊಂದು ನಿರಾಶೆ, ಹತಾಶೆ, ಜಿಗುಪ್ಸೆ ಪಟ್ಟಿರಬಹುದು ?


ಇದೆಲ್ಲವೂ ಮುಗಿದ ನಂತರ ಮತ್ತೆ ಗರ್ಭಿಣಿಯಾದ ಒಬ್ಬಂಟಿ ಸೀತೆಗೆ ಅಪವಾದದ ಕಾರಣ ವನವಾಸ (ರಾಮನಿಗೆ ಏಕಾಂತವಾಸ) ಲಭಿಸಿತು.


ಇದೆಲ್ಲವೂ ಅವರ ಜೀವನದಲ್ಲಿ ಘಟಿಸಿದರು ನಿರಾಶರಾಗಿ, ಹತಾಶರಾಗಿ ಜೀವನದ ಬಗ್ಗೆ ಕೆಟ್ಟ ಯೋಚನೆ ಮಾಡಲಿಲ್ಲ. 


ಇದಕ್ಕಿಂತ ಮಿಗಿಲಾಗಿ ಯಾವುದೇ ಕಷ್ಟಕರ ಪರಿಸ್ಥಿತಿಯಲ್ಲಿ ತಾವು ನಂಬಿದ ಆದರ್ಶವನ್ನು ತೋರೆಯಲಿಲ್ಲ.


ನಾವು ಶ್ರೀರಾಮ ಸೀತೆಯನ್ನು ನೆನೆಯುವಾಗ ಇವೆಲ್ಲವೂ ನಮ್ಮ ಕಣ್ಣ ಮುಂದೆ ಸ್ವಲ್ಪವಾದರೂ ಹಾದುಹೋಗದೆ ಇರುವುದು ಸಾಧ್ಯವೇ ?


ನಮ್ಮ ಜೀವನದ ಕಷ್ಟಗಳೇ ಬಹಳ ದೊಡ್ಡವು ಎಂದು ಯೋಚಿಸಿ, ಹತಾಶರಾಗಿ, ಜಿಗುಪ್ಸೆ ಹೊಂದಿ ಜೀವನದ ಬಗ್ಗೆ ತಪ್ಪು ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿರುವ ನಮಗೆ ಸೀತಾರಾಮರ ಜೀವನ ಚರಿತ್ರೆಯ ನಮ್ಮ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಮಾಡುವುದಿಲ್ಲವೇ ?


ಅದರಲ್ಲಿಯೂ ರಾಮ ಸೀತೆಯರು ಯಾರು ? ನಾವು ದೇವರೆಂದು ಪೂಜಿಸುವವರು. ದೇವರೆಂದು ಪೂಜಿಸುವ ಅವರಿಗೆ ಕಷ್ಟಗಳು ತಪ್ಪಲಿಲ್ಲ, ಎಂದರೆ ನಾವು ಮನುಷ್ಯನಾಗಿ ಅಥವಾ ಮನುಷ್ಯರಾಗಿ ಕಷ್ಟಗಳೇ ನಮ್ಮ ಜೀವನದಲ್ಲಿ ಬಾರದಿರಲಿ ಎಂದು ಯೋಚಿಸುವುದು ಎಷ್ಟು ಸರಿ ? ಎನ್ನುವ ಯೋಚನೆ ಸೀತಾರಾಮರನ್ನು ನೆನೆಯುವಾಗ, ಆರಾಧಿಸುವಾಗ ಕಿಂಚಿತ್ತಾದರೂ ನಮಗೆ ಬಾರದೆ ಇರುವುದು ಸಾಧ್ಯವೇ ?


ತಂದೆ ತಾಯಿಯರನ್ನು, ನಮ್ಮ ಮಾತು ಕೃತಿಗಳಿಂದ ನೋಯಿಸುವಾಗ ಪಿತೃ ವಾಕ್ಯಪಾಲನೆಗಾಗಿ ಸುಖದ ಅರಮನೆಯನ್ನೆ ತೊರೆದು ಕಷ್ಟದ ಅರಣ್ಯವಾಸವನ್ನು ಅಪ್ಪಿಕೊಂಡ ಶ್ರೀರಾಮನ ಪಿತೃ ಭಕ್ತಿ ಸ್ವಲ್ಪವಾದರೂ ನಮ್ಮ ನೆನಪಿಗೆ ಬರದೇ ಇರಲು ಸಾಧ್ಯವೇ ?


ಸೀತಾ ರಾಮರ ಆರಾಧನೆ ಮಾಡಿದ ಚಂಚಲ ಚಿತ್ತದ ಸ್ತ್ರೀಗೆ ರಾವಣ ರಾಜ್ಯದಲ್ಲಿಯೂ ಪತಿವ್ರತಾ ಧರ್ಮ ತ್ಯಜಿಸದ ಸೀತೆಯ ಶ್ರೇಷ್ಠ ಗುಣದ ಧನಾತ್ಮಕ ಪ್ರಭಾವ ಕಿಂಚಿತ್ತಾದರೂ ಆಕೆಯ ಚಿತ್ತದಲ್ಲಿ ಪರಿವರ್ತನೆ ತರದೆ ಇರಲು ಸಾಧ್ಯವೇ ?


ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುವ (ಅಥವಾ ಕುಟುಂಬ ವ್ಯವಸ್ಥೆಯೇ ನಾಶವಾಗಿರುವ) ಮತ್ತು ಮದುವೆಯೇ ಇಲ್ಲದೆ ಹಲವರೊಂದಿಗೆ ಸಂಬಂಧ ಹೊಂದುವ ವಿದೇಶದ ಹೆಣ್ಣು , ಗಂಡುಗಳಿಗೆ ಒಮ್ಮೆಯಾದರೂ ಶ್ರೀರಾಮ ಸೀತೆಯಂತಹ ಉದಾಹರಣೆ ಸಿಕ್ಕಿದಲ್ಲಿ ಮತ್ತು, 

ಸೀತಾರಾಮ ಪಾತ್ರಗಳ ಪ್ರತಿ ಅವರಲ್ಲಿ ಶ್ರದ್ಧೆ ಭಕ್ತಿ ಭಾವನೆಗಳು ಇದ್ದಲ್ಲಿ ಇಂದು ಆ ದೇಶಗಳಲ್ಲಿ ಮನುಷ್ಯ ಸಂಸ್ಕೃತಿಯು  ನಾಶವಾಗುತ್ತಿತ್ತೇ ?


ಈ ಎಲ್ಲಾ ಮೇಲಿನ ಕಾರಣಗಳಿಗಾಗಿ, ಮನುಷ್ಯರಾದ ನಾವು ಮನುಷ್ಯರಾಗಿ ಮಾನವೀಯ ಗುಣಗಳಿಂದ ಬದುಕಲು ಉತ್ತಮ ಆದರ್ಶ ಪಾತ್ರಗಳ ಉದಾಹರಣೆಯ ಅವಶ್ಯಕತೆ ನಮ್ಮೆಲ್ಲರಿಗೂ ಇದೆ.


ಈ ಕಾರಣಕ್ಕಾಗಿ ನಾವು ಸೀತಾರಾಮರ ಸ್ಮರಣೆ ಮಾಡಬೇಕು. ಸೀತಾರಾಮ ಆರಾಧನೆ ಮಾಡಬೇಕು. ಸೀತಾರಾಮರನ್ನು ಶ್ರದ್ಧೆಯಿಂದ ನೆನೆಯಬೇಕು.

Comments