ಯಾರು ಅವಳು ?

(Disclaimer : ಈ ಲೇಖನ ಎಲ್ಲರಿಗೂ ಸಂಬಂಧಪಟ್ಟಿದ್ದಲ್ಲ.  ಇದು 

ಆಧುನಿಕತೆಯ ಸೋಗಿನಲ್ಲಿ ಮಾನವೀಯ  ವಿವೇಚನಾ ಶಕ್ತಿಯನ್ನು ಕಳೆದುಕೊಂಡಿರುವವರಿಗೆ ಮಾತ್ರ. )


ಯಾರು ಅವಳು ?


ಆಕೆ ವಿದ್ಯಾವಂತೆಯಲ್ಲ

ವಿದ್ಯಾವಂತರು ಯಾಕೆ ? ಆಕೆಯ ಮುಂದೆ

ಆಕೆ ಮುಂದುವರಿದವಳಲ್ಲ

ಮುಂದುವರಿದವರು ಎಲ್ಲಿ ? ಆಕೆಯ ಮುಂದೆ ?


 ಸ್ತ್ರೀ ಹಕ್ಕು ಅರಿತವಳಲ್ಲ, ಆದರೆ

ಗೌರವದ ಹಕ್ಕು ದೊರಕಿ‌ಸಿದವಳು, ಅವಳು

ಕ್ರಾಂತಿಯ ಬಗ್ಗೆ  ತಿಳಿದಿರಲಿಲ್ಲ, ಆದರೆ

ರಾಜಪ್ರಭುತ್ವವನ್ನೆ ಬೆಚ್ಚಿಬೀಳಿಸಿದಳು, ಅವಳು


ಬಂಡಾಯವೂ ಅರಿತಿರಲಿಲ್ಲ, ಆದರೆ

ಅನ್ಯಾಯದ ವಿರುದ್ಧ ಸಿಡಿದೆದ್ದಳು, ಅವಳು

ಎಷ್ಟೋ ಅಮಾಯಕ ಮಹಿಳೆಯರಿಗೆ 

 ಸ್ಪೂರ್ತಿಯಾದಳು, ಧ್ವನಿಯಾದಳು,  ಅವಳು


ತನ್ನವರ ನ್ಯಾಯದ ಬದುಕಿಗಾಗಿ

ಬಲಿಯಾದಳು, ಅವಳು

ಸ್ತ್ರೀಯರ ಗೌರವದ ಬಾಳಿಗೆ

 ತನ್ನನ್ನೇ ಅರ್ಪಿಸಿಕೊಂಡಳು, ಆತ್ಮಾಹುತಿಯಾದಳು, ಅವಳು

     ‌.    ‌.    .   .    .    .


ಅವಳು ಯಾರು ? ಎಂದು ಹೇಳುವ ಮುಂಚೆ ಒಂದು ಸರಳ ಪ್ರಶ್ನೆ.


 ಕೆಲವು ಪ್ರಶ್ನೆಗಳು ಬಹಳ ಕಷ್ಟಕರವಾಗಿರುತ್ತವೆ. ಉತ್ತರಿಸಲು ಬರುವುದಿಲ್ಲ. 


ಆದರೆ ನಾನು ಈಗ ಕೇಳುತ್ತಿರುವ ಪ್ರಶ್ನೆ ಬಹಳ ಸರಳವಾದುದು. ಇದನ್ನು ನಾಗರಿಕರಾದ ಯಾರು ಬೇಕಾದರೂ ಬಹಳ ಸರಳವಾಗಿ ಉತ್ತರಿಸಬಹುದು. ಆದರೂ ತಟ್ಟನೆ ಸರ್ವರು ಉತ್ತರಿಸುತ್ತಾರೆಯೋ ? ಇಲ್ಲವೋ ? ಎನ್ನುವುದು ಒಂದು ಸಂಶಯ.


ಪ್ರಶ್ನೆ ಏನೆಂದರೆ,


ಬಟ್ಟೆ ಹಾಕುವುದು ದೇಹ ಮುಚ್ಚುವುದಕ್ಕಾಗಿಯೇ ? ಅಥವಾ


ದೇಹ ತೋರಿಸುವದಕ್ಕಾಗಿಯೇ ?


ಈ ಪ್ರಶ್ನೆ ಕೇಳಿದಾಗ ಅಮಾಯಕರು, ಮುಗ್ದರು ಯಾವುದೇ ಗೊಂದಲ ಇಲ್ಲದೆ, ದೇಹ ಮುಚ್ಚುವುದಕ್ಕೆ ಬಟ್ಟೆಯಿದೆ, ಎಂದು ಹೇಳುತ್ತಾರೆ.


ಆದರೆ ಆಧುನಿಕತೆಯ ಮೋಡಿಗೆ ಒಳಗಾದವರು ಸ್ವಲ್ಪ ಗೊಂದಲದಲ್ಲಿ ಬೀಳಬಹುದು. ಏನು ಹೇಳಬೇಕೆಂದು ಅವರಿಗೆ ಗೊತ್ತಾಗುವುದಿಲ್ಲ. ಸ್ವಲ್ಪ ಯೋಚನೆ ಮಾಡುತ್ತಾರೆ. 


ಈ ಪ್ರಶ್ನೆಗಳನ್ನೆ ವಿದೇಶಗಳಲ್ಲಿ ದೊಡ್ಡ ದೊಡ್ಡ  ನಗರಗಳಲ್ಲಿರುವವರಿಗೆ ಕೇಳಿದರೆ ಬಹುಶಃ ಬಟ್ಟೆಗಳು ಇರುವುದೇ ದೇಹ ತೋರಿಸಲು ಎನ್ನುವ ಉತ್ತರ ಬರುತ್ತದೆ. ಕಾರಣ ಅದೇ ರೀತಿಯ ವೇಷಭೂಷಣ, ದೇಹ ಭಾಷೆ ಅವರದಾಗಿರುತ್ತದೆ.


ಬಟ್ಟೆಯ ಮೂಲ ಉದ್ದೇಶ ದೇಹ ಮುಚ್ಚುವದೆ ಆಗಿದ್ದರೂ, ಅದು ಈಗ ದೇಹ ಮುಚ್ಚುವುದಕ್ಕೆ ಸೀಮಿತವಾಗಿಲ್ಲ. ಇಂದು ಬಟ್ಟೆಯೂ ವೃತ್ತಿ, ಆರ್ಥಿಕ ಸ್ಥಿತಿ, ಮನಸ್ಸಿನ ಸ್ಥಿತಿ, ಬುದ್ಧಿಯ ದ್ಯೋತಕವಾಗಿದೆ. 


ಇವುಗಳ ಜೊತೆಗೆ ಬುದ್ಧಿ ಭ್ರಷ್ಟವಾಗಿರುವದರ ಚಿಹ್ನೆಯೂ ಬಟ್ಟೆಯಾಗಿದೆ. 


ಮೂಲತಃ ದೇಹ ಮುಚ್ಚುವ ಉದ್ದೇಶ ಹೊಂದಿದ್ದ ಬಟ್ಟೆ ಇಂದು, ವಿದೇಶಗಳಿಂದ ದೇಶದ ದೊಡ್ಡ ದೊಡ್ಡ ನಗರಗಳಿಗೆ, ದೊಡ್ಡ ದೊಡ್ಡ ನಗರಗಳಿಂದ ಚಿಕ್ಕ ಚಿಕ್ಕ ನಗರಗಳಿಗೆ, ಚಿಕ್ಕ ನಗರಗಳಿಂದ ಊರು, ಹಳ್ಳಿ, ಕೇರಿಗಳಿಗೆ ಬಟ್ಟೆ ಎನ್ನುವುದು ದೇಹ ಮುಚ್ಚುವದಕ್ಕಿಂತ ದೇಹ ತೋರಿಸುವ ಸಾಧನವಾಗುತ್ತಿದೆ.


ವಿದೇಶಗಳಲ್ಲಿ, ದೊಡ್ಡ ದೊಡ್ಡ ಊರುಗಳಲ್ಲಿ ಅದು ದೊಡ್ಡ ಪ್ರಮಾಣದಲ್ಲಿದ್ದರೆ, ಸಣ್ಣ ಊರು ಹಳ್ಳಿ ಕೇರಿಗಳಲ್ಲಿ ಸಣ್ಣ ಪ್ರಮಾಣದಲ್ಲಿ, ನಗಣ್ಯ ಪ್ರಮಾಣದಲ್ಲಿದೆ.


ದೇಹ ತೋರಿಸುವುದು ಕೆಲವರಿಗೆ ಸೌಂದರ್ಯ ಪ್ರಜ್ಞೆಯಾದರೆ,  ತಾವು ಆಧುನಿಕರು, ಮುಂದುವರಿದವರೆಂದು ತೋರಿಸುವುದು ಇನ್ನೂ ಕೆಲವರ ಉದ್ದೇಶ. ಇನ್ನೂ ಏನೂ ತಿಳಿಯದವರಿಗೆ, ತಾವು ಸಹ ಓದಿದವರಿಗಿಂತ ಮುಂದುವರಿದವರಿಗಿಂತ ತಾವು ಯಾವುದರಲ್ಲಿ ಕಮ್ಮಿ ಇಲ್ಲ ಎಂದು ತೋರಿಸುವುದು ಉದ್ದೇಶ.


ಜಗತ್ತಿನಲ್ಲಿ ಯಾವ ದೇಶದಲ್ಲಿಯೂ, ಯಾವ ನಾಗರಿಕತೆಯಲ್ಲಿಯೂ, ಯಾವ ಧರ್ಮದಲ್ಲಿಯೂ ಸ್ತ್ರೀಯನ್ನು ದೇವತೆ ರೂಪದಲ್ಲಿ ಪೂಜಿಸುವ ಸಂಪ್ರದಾಯವಿಲ್ಲ. ಆದರೆ ಅದು ಈ ನೆಲದ ಸಂಪ್ರದಾಯದಲ್ಲಿದೆ. 


ಜಗತ್ತೆಂಬುದು ದ್ವಂದ್ವಗಳ ಸಮಾಗಮ. ಇಲ್ಲಿ ಶ್ರೇಷ್ಠತೆ ಇರುವಂತೆ ಕನಿಷ್ಟತೆಯೂ ಇದೆ. ದೇವಿ ವೇಷದ ಹೆಣ್ಣನ್ನು ಸಹ ಕೀಳು ಮಟ್ಟದಲ್ಲಿ ಕಾಣುವ ಧೂರ್ತ ಜನರು ಇದ್ದಾರೆ.


ಆದರೆ ಸ್ವತಃ ಸ್ವಯಂ ಪ್ರೇರಣೆಯಿಂದ ತಮ್ಮನ್ನೇ ಕೆಳಮಟ್ಟದಲ್ಲಿ (ಅಥವಾ ಕೀಳು ಮಟ್ಟದಲ್ಲಿ) ತೋರಿಸಿಕೊಳ್ಳುವ ಹೆಣ್ಣನ್ನು ಒಬ್ಬ ಸಾಮಾನ್ಯ ವ್ಯಕ್ತಿ  ಶ್ರೇಷ್ಠ ಭಾವದಿಂದ ಶ್ರೇಷ್ಠ ರೀತಿಯಿಂದ ನೋಡುವುದಾದರೂ ಹೇಗೆ ಸಾಧ್ಯ ? 


ಇಂದಿನ ಸ್ವಾತಂತ್ರ್ಯ ಭಾರತದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಇಚ್ಛೆಯಂತೆ ಬದುಕುವ ಹಕ್ಕು ಇದೆ. ಯಾರಿಗೂ ಬಲವಂತದ ವಸ್ತ್ರ ಸಂಹಿತೆಯನ್ನು ಹೇರಿಲ್ಲ. ಆದರೆ ಇಂದು ಸ್ವಾತಂತ್ರ್ಯ ಸ್ವೇಚ್ಛೆಯಾಗುತ್ತಿದೆ. ದೇವಿ ಆಗಬೇಕಾದವರು ತಮ್ಮನ್ನು ಒಂದು ಭೋಗದ ವಸ್ತುವಾಗಿ ತೋರಿಸಿಕೊಳ್ಳುತ್ತಿದ್ದಾರೆ.


ಇಂದು ನಾವು ಹದಿನೆಂಟನೇ ಶತಮಾನದ ನಾಗರೀಕತೆಯೇ ತಲೆ ತಗ್ಗಿಸುವಂತಹ ರಾಜ ಆಳ್ವಿಕೆಯ ಹೇಯ ಆಡಳಿತ ನೀತಿ ನಿಯಮವನ್ನು ಸ್ಮರಣೆ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ.


ಅದು 18 ಮತ್ತು 19 ನೇ ಶತಮಾನದ ಕಾಲಘಟ್ಟ. ಈಗಿನ ಕೇರಳ ರಾಜ್ಯದ ಭೂಭಾಗವನ್ನು ತಿರುವಾಂಕೂರು ರಾಜಮನೆತನದವರು ಆಳುತ್ತಿದ್ದರು. ಕೆಳವರ್ಗ ಅನೇಕ ರೀತಿಯಿಂದ ಶೋಷಿತವಾಗುತ್ತಿದ್ದ ಆ ಕಾಲದಲ್ಲಿ ಜಗತ್ತಿನ ಯಾವ ಭಾಗದಲ್ಲಿಯೂ ಇಲ್ಲದ ಕಾನೂನನ್ನು ಈ ರಾಜ್ಯಾಡಳಿತ ಜಾರಿಗೆ ತಂದಿತ್ತು. 


ಈ ಕಾನೂನು ಪ್ರಕಾರ ಆ ರಾಜ್ಯದಲ್ಲಿ ಶೂದ್ರ ಸ್ತ್ರೀಯರು ಟೊಂಕದ ಮೇಲೆ ಬಟ್ಟೆ ಹಾಕಿಕೊಂಡರೆ ತೆರಿಗೆ ವಿಧಿಸಲಾಗುತ್ತಿತ್ತು. 


 ಕೆಳವರ್ಗದ ಸ್ತ್ರೀಯರು ಗೌರವದಿಂದ ಬದುಕಲು ತೆರಿಗೆ ಕಟ್ಟಬೇಕಾದ ಪರಿಸ್ಥಿತಿಯ ಕಾರಣ ತಮ್ಮ ದುಡಿಮೆಯನ್ನು ತೆರಿಗೆಗೆ ಮೀಸಲಿಡಬೇಕಾಗಿತ್ತು. 


ದುಡಿದು ತಿಂದು ಬದುಕುವ ಉಪಜೀವನವೇ ಕಷ್ಟಕರವಾದ ಆ ದಿನಗಳಲ್ಲಿ ಉಡುವ ಬಟ್ಟೆಗೆ ತೆರಿಗೆ ಕಟ್ಟುವುದು ಬಹಳ ನೋವಿನ ವಿಷಯವಾಗಿತ್ತು. 


ಮೊದಲೇ ಅನಕ್ಷರಸ್ಥ, ಶೋಷಿತ, ಅಸಂಘಟಿತ, ಆರ್ಥಿಕವಾಗಿ ಕೆಳಸ್ಥರದಲ್ಲಿದ್ದ ಸಮಾಜ ಬಲಾಡ್ಯ ರಾಜಪ್ರಭುತ್ವದೊಂದಿಗೆ ಹೋರಾಡುವುದಾದರೂ ಹೇಗೆ ? 


ಅನೇಕ ದಿನಗಳು ವರ್ಷಗಳು ಸಂಕಟದಲ್ಲಿಯೇ ಕಳೆದವು. ಒಂದು ದಿನ ಇದರಿಂದ ರೋಸಿ ಹೋದ ರಾಜ್ಯದ ಒಬ್ಬ ಮಹಿಳೆ, ಬೆತ್ತಲೆ ದೇಹ ತೋರಿಸಬೇಕೆಂಬ ರಾಜ್ಯಾಡಳಿತದ ಪರೋಕ್ಷ 

 (ತೆರಿಗೆ ರೂಪದ) ಹೀನ ಇಚ್ಛೆಗೆ ವಿರುದ್ಧವಾಗಿ, ತನ್ನ ಮಾನ ಗೌರವ ಕಾಪಾಡಿಕೊಳ್ಳುವ ಉದ್ದೇಶದಿಂದ ತೆರಿಗೆ ಕಟ್ಟದೆ ಬಟ್ಟೆ ಧರಿಸುತ್ತಾಳೆ.


 ಈ ಸುದ್ದಿ ಆಡಳಿತಕ್ಕೆ ತಲುಪಿ ಅವರು ತೆರಿಗೆ ಕೇಳಲು ಆಕೆಯಲ್ಲಿಗೆ ಬರುತ್ತಾರೆ. ಇದರಿಂದ ಕ್ರುದ್ಧಳಾದ ಅವಳು ತೆರಿಗೆ ತರುತ್ತೇನೆಂದು ಮನೆಯ ಒಳಗೆ ಹೋಗುತ್ತಾಳೆ.


ಒಳಗಿನಿಂದ ಬರುವಾಗ ಆಕೆಯ ಒಂದು ಕೈಯಲ್ಲಿ ಕುಡಗೋಲು ಇರುತ್ತದೆ. ಇನ್ನೊಂದು ಕೈಯಲ್ಲಿ ಬಾಳೆ ಎಲೆಯ ತಟ್ಟೆ ಇರುತ್ತದೆ. ಆ ತಟ್ಟೆಯಲ್ಲಿ ಆಕೆ ಕುಡಗೋಲಿನಿಂದ ಕತ್ತರಿಸಿದ ತನ್ನ ಸ್ಥನವನ್ನು ಇಟ್ಟಿರುತ್ತಾಳೆ. ಆಕೆಯ ದೇಹದಿಂದ ಒಂದೇ ಸಮನೆ ರಕ್ತ ಸೋರುತ್ತಿರುತ್ತದೆ. ನೋವಿನಿಂದ ಆಕೆಯ ದೇಹ ಕಂಪಿಸುತ್ತಿರುತ್ತದೆ. ಅದನ್ನು ಲೆಕ್ಕಿಸದೆ ಬೆಂಕಿ ಕಾರುವ ಕಣ್ಣುಗಳನ್ನು ತೋರಿಸುತ್ತಾ ನಿಮಗೆ ತೆರಿಗೆ ಬೇಕಾ, ಇದೋ ತೆಗೆದುಕೊಳ್ಳಿ ತೆರಿಗೆ, ಎಂದು ತಟ್ಟೆಯಲ್ಲಿಟ್ಟಿದ ತನ್ನ ಸ್ಥನವನ್ನು ಮುಂದೆ ಮಾಡುತ್ತಾಳೆ.


ಇಷ್ಟು ಹೇಳಿ, ಅಧಿಕ ರಕ್ತಸ್ರಾವದ ಕಾರಣ ಆಕೆ ಅಲ್ಲಿಯೇ ಬಿದ್ದು ಸಾವನ್ನಪ್ಪುತ್ತಾಳೆ. ಇದನ್ನು ನೋಡಿದ ರಾಜನ ಸೇವಕರಿಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ಈ ಸುದ್ದಿ ಎಲ್ಲಾ ಕಡೆ ಹಬ್ಬಿ ಎಲ್ಲ ಶೋಷಿತರಲ್ಲಿದ್ದ ಅಸಮಾಧಾನ ರೋಷಾಗ್ನಿ ರೂಪ ತಾಳುತ್ತದೆ. ಈ ಜನರ ಉಗ್ರ ರೂಪದಿಂದ ಭಯಪಟ್ಟ ರಾಜ್ಯಾಡಳಿತ ತನ್ನ ಕಾನೂನು ವಾಪಸ್ಸು ತೆಗೆದುಕೊಂಡು ಎಲ್ಲಾ ಸ್ತ್ರೀಯರಿಗೆ ತಮ್ಮ ಮಾನ ಮರ್ಯಾದೆ ಗೌರವ ಕಾಪಾಡಿಕೊಳ್ಳುವ ಬಟ್ಟೆಯನ್ನು ಧರಿಸುವ ಸ್ವಾತಂತ್ರವನ್ನು ನೀಡುತ್ತದೆ.

(ಈ ಕೆಟ್ಟ ಕಾನೂನು ಸಹ ಹಂತ ಹಂತವಾಗಿ ನಿಷೇಧಿಸಲ್ಪಟ್ಟಿತ್ತೆಂದು ಇತಿಹಾಸಕಾರರು ಹೇಳುತ್ತಾರೆ.)


ಜೀವಕ್ಕಿಂತ ಗೌರವಕ್ಕೆ ಮಹತ್ವ ಕೊಟ್ಟ, 

ದೇಹ ಪ್ರದರ್ಶನಕ್ಕಿಂತ ಮಾನ ಮರ್ಯಾದೆಗೆ ಪ್ರಾಧಾನ್ಯತೆ ನೀಡಿದ ಹಾಗೂ ಅದಕ್ಕಾಗಿ ತನ್ನನ್ನು ತಾನು ಬಲಿ ಕೊಟ್ಟ ಆ ದಿಟ್ಟ ಧೀರ ಮಹಿಳೆಯೇ ನಂಗೇಲಿ.


ಸ್ತ್ರೀ ಗೌರವಕ್ಕೆ ಬಲಿಯಾದ ಆ ಮಹಿಳೆ ಕೆಳ ಮಟ್ಟದ ಸಮಾಜಕ್ಕೆ ಸೇರಿದವಳಾಗಿರಬಹುದು. ಆದರೆ ದೇಹ ಪ್ರದರ್ಶನಕ್ಕಿಂತ, ಸ್ತ್ರೀ ಗೌರವಕ್ಕೆ ಪ್ರಾಮುಖ್ಯತೆ ನೀಡಿದ ಆಕೆ ನಿಜಕ್ಕೂ ಕೆಳ ಸ್ಥರದ ಹೆಣ್ಣೇ ?


ಇಂದಿನ ಜಗತ್ತಿನಲ್ಲಿ ಒಂದು ಕಡೆ ನಂಗೇಲಿಯನ್ನಿಟ್ಟು ನೋಡಿದಾಗ, ರಾಜನ ದೌರ್ಜನ್ಯದ ಆಡಳಿತದಲ್ಲಿದ್ದ, ಹಿಂದುಳಿದ ಜನಾಂಗದ, ಅನಕ್ಷರಸ್ಥ, ಬಡತನದ ರೇಖೆ ಕೆಳಗಿದ್ದ ನಂಗೇಲಿ ಎಲ್ಲಿ ನಿಲ್ಲುತ್ತಾಳೆ ?


 ಹಾಗೂ ಇಂದಿನ ಸರ್ವರಿಗೂ ಸ್ವಾತಂತ್ರ್ಯವಿರುವ ಭಾರತ ದೇಶದ, ಮುಂದುವರಿದ, ಅಕ್ಷರಸ್ಥ ಬಡತನ ರೇಖೆ ಮೇಲಿರುವ (ಅಥವಾ ಶ್ರೀಮಂತ) ಆಧುನಿಕತೆಗೆ ಮಾರು ಹೋಗಿರುವ ಸ್ತ್ರೀ ಎಲ್ಲಿ ನಿಲ್ಲುತ್ತಾಳೆ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.


ಅಂದಿನ ಪುರುಷ ಪ್ರಭುತ್ವದ ರಾಜ್ಯಾಡಳಿತಕ್ಕೆ ದುರ್ಬಲ ಹೆಣ್ಣಿನ ಆತ್ಮ ಗೌರವದೊಂದಿಗೆ ಚೆಲ್ಲಾಟವಾಡುವ ಬಹಿರಂಗ ಉದ್ದೇಶ ಹೊಂದಿ ಅಂದಿನ ಹೆಣ್ಣನ್ನು ಬೆತ್ತಲಾಗಿ ಕಾಣಲು ಬಯಸಿತ್ತು.


 ಅದೇ ರೀತಿ ಇಂದು ಸಹ ಒಂದು ಪುರುಷ ವರ್ಗ ಅಂತರಂಗದಲ್ಲಿ ಇದೇ ರೀತಿಯ ದೃಷ್ಟಿಕೋನ ಹೊಂದಿರಬಹುದು. ಪುರುಷ ವರ್ಗದಲ್ಲಿ ಯಾವುದೇ ಬದಲಾವಣೆಯಾಗಿಲ್ಲದೆಯೂ ಇರಬಹುದು.


ಆದರೆ ಇಂದು ಎಲ್ಲಾ ರೀತಿಯ ಸ್ವಾತಂತ್ರ ಸರ್ವರಿಗೂ ಇದ್ದರೂ ದೇಹ ಪ್ರದರ್ಶನಕ್ಕಿಂತ ಆತ್ಮ ಗೌರವವೇ ಮುಖ್ಯ ಎನ್ನುವ ಅಂದಿನ  ಸ್ತ್ರೀಯ ಮನೋಭಾವ, ಇಂದು ಬದಲಾಗುತ್ತಿರುವುದು ಏಕೆ ? 


ಈ ಪ್ರಶ್ನೆಯನ್ನು ನಾವು ಪುನಃ ಪುನಃ ಕೇಳಿಕೊಳ್ಳಬೇಕಾಗಿದೆ. ಮನುಷ್ಯರಾದ ನಮಗೆ ಬಟ್ಟೆಯ ಮೂಲಕ ದೇಹ ತೋರಿಸುವುದು ಮುಖ್ಯವೋ ? ದೇಹ ಎನ್ನುವ ದೇವಾಲಯದ ಗೌರವ ಕಾಪಾಡಿಕೊಳ್ಳುವುದು ಮುಖ್ಯವೋ ? ಎನ್ನುವುದನ್ನು ಚಿಂತಿಸಬೇಕಾಗಿದೆ.


ಖಾಸಗಿಯಾಗಿ ಹೇಗಿದ್ದರೂ ಅದು ವೈಯಕ್ತಿಕ ವಿಷಯ. ಸಾರ್ವಜನಿಕವಾಗಿ ಶಿಷ್ಟಾಚಾರದ ಪಾಲನೆ ಅವಶ್ಯವಾಗಿದೆ. ನಾಗರಿಕ ಸಮಾಜದಲ್ಲಿ ನಾಗರಿಕರಂತೆ ಬದುಕುವುದು ನಾಗರಿಕರ ಲಕ್ಷಣ. ದೇಹ ಎನ್ನುವುದು ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವದಕ್ಕೆ ಇರುವ  ಮನೆ. ಅದನ್ನು ಅಸಹ್ಯವಾಗಿ ತೋರಿಸುವುದು, ನಡೆಸಿಕೊಳ್ಳುವುದು ಸರಿಯಲ್ಲ.


ಕೊನೆಯಲ್ಲಿ ಒಂದು ಪ್ರಶ್ನೆ, 


ಎಷ್ಟೋ ನಾರಿಯರ ಧ್ವನಿಯಾದ ನಂಗೇಲಿ

ಮುಂದುವರಿದವಳೇ ? 

ಇಂದಿನ ಮುಂದುವರಿದವರ ಕಣ್ಣಲ್ಲಿ ?


ಇನ್ನೊಂದು ಪ್ರಶ್ನೆ 

ರಾಜ ಪ್ರಭುತ್ವವೇ ಬೆಚ್ಚಿ ಬೀಳಿಸಿದ ಆಕೆ

ಆದರ್ಶಳೇ ? 

ಇಂದಿನ ಆಧುನಿಕರ ನೋಟದಲ್ಲಿ ?


(ಇದು ಸಮಾಜದಲ್ಲಿ ಚರ್ಚೆಯಾಗಬೇಕಾದ ವಿಷಯ ಎಂದು ಭಾವಿಸುವವರು ದಯವಿಟ್ಟು ಪೋಸ್ಟನ್ನು ಷೇರ್ ಮಾಡಿ)


✍️. URAIN NAMAH 

(    ☝️ಈ ಪದ, ಯುಗ ಪರಿವರ್ತನೆಯ ಮುನ್ನುಡಿ. ಈ ಪದ #ಸತ್ಯಯುಗ ಕ್ಕೆ ನಾಂದಿ - ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್, ಸೇಡಂ)


Disclaimer : ಈ ಲೇಖನ ಎಲ್ಲರಿಗೂ ಸಂಬಂಧಪಟ್ಟಿದ್ದಲ್ಲ.  ಇದು ಆಧುನಿಕತೆಯ ಸೋಗಿನಲ್ಲಿ ಮಾನವೀಯ  ವಿವೇಚನಾ ಶಕ್ತಿಯನ್ನು ಕಳೆದುಕೊಂಡಿರುವವರಿಗೆ ಮಾತ್ರ.  

 


 #urain_namah #ಬಟ್ಟೆ #ವೇಷಭೂಷಣ   #nangeli #breast_tax #expose

Comments