*ಇಡೀ ರಾಜ್ಯದ ಜನ ನನಗೆ ಭಯಪಡುತ್ತಾರೆ. ನೀನು, ನನಗೆ ಅಂಜುವುದಿಲ್ಲವೇನು?*
ಈ ಮಾತನ್ನು ಭಗವಾನ್ ಬುದ್ಧನಿಗೆ ಹೇಳಿದವನು ಆಗಿನ ಮಗಧ ರಾಜ್ಯದ ಕುಖ್ಯಾತ ರಾಕ್ಷಸ *ಅಂಗುಲಿಮಾಲಿ* .
ಅಂಗುಲಿಮಾಲ ದಾರಿಯಲ್ಲಿ ಸಂಚರಿಸುವ ಜನರನ್ನು ತಡೆದು ಅವರಲ್ಲಿರುವ ಒಡವೆ ವಸ್ತ್ರ ಸಂಪತ್ತನ್ನು ದೋಚಿ ಅವರನ್ನು ಕೊಲೆ ಮಾಡುತ್ತಿದ್ದ.
ಕೊಂದ ನಂತರ ಅವರ ಬೆರಳನ್ನು ಕತ್ತರಿಸಿ ದಾರಕ್ಕೆ ಪೋಣಿಸಿ ಕೊರಳಲ್ಲಿ ಹಾಕಿಕೊಳ್ಳುತ್ತಿದ್ದ. ಹೀಗೆ ಸಾವಿರ ಬೆರಳುಗಳನ್ನು ಹಾಕಿಕೊಳ್ಳುವ ಶಪಥ ಮಾಡಿದ್ದ.
ಒಂದು ದಿನ ಭಗವಾನ್ ಬುದ್ಧ ದೇಶ ಸಂಚಾರ ಮಾಡುತ್ತಾ ಕಾಡಿನ ಸಮೀಪದ ಹಳ್ಳಿಗೆ ಬಂದಾಗ ಹಳ್ಳಿಯ ಜನ ಹೆದರುತ್ತಾ ಈ ವಿಷಯ ಹೇಳಿ, ನೀವು ಆ ಕಡೆ ಹೋಗಬೇಡಿ ಎಂದು ಹೇಳುತ್ತಾರೆ.
ಆದರೂ ಬುದ್ಧ ಆ ಕಾಡಿನ ಕಡೆ ಯಾವುದೇ ಅಂಜಿಕೆಯಿಲ್ಲದೆ ನಿರ್ಭೀತಿಯಿಂದ ನಡೆದ.
*ಆಗ ಅಂಗುಲಿಮಾಲ ನಿಲ್ಲು, ನಾನ್ಯಾರು ಎನ್ನುವುದು ಗೊತ್ತಿಲ್ಲವೇನು?*
*ಇಡೀ ದೇಶದ ಶಕ್ತಿಶಾಲಿ ವ್ಯಕ್ತಿ. ನನಗೆ ಇಡೀ ದೇಶದ ಜನ ಅಂಜಿ ಗಡ ಗಡ ನಡಗುತ್ತಾರೆ* ನಿನಗೆ ಸ್ವಲ್ಪವೂ ಭಯವಾಗುತ್ತಿಲ್ಲವೇನು ? ಎಂದು ಕೇಳುತ್ತಾನೆ.
*ಆಗ ಬುದ್ಧ ನನಗೇಕೆ ಭಯ?*
*ಯಾರಿಗೆ ಸಾವಿನ ಭಯವಿದೆ, ಅವರು ಅಂಜುತ್ತಾರೆ.* ನಾನು ಎನ್ನುವ ಅಹಂಕಾರದ ಸಾವು ನನಗೆ ಆಗಲೇ ಆಗಿದೆ. ನನಗೇಕೆ ಭಯ.
*ಯಾರು ತಪ್ಪು ಕೆಲಸ ಮಾಡುತ್ತಾರೆ, ಅವರು ಭಯಪಡುತ್ತಾರೆ.* ನನಗೇಕೆ ಭಯ.
ಈ ಜಗತ್ತಿನಲ್ಲಿ, ಕೆಟ್ಟ ಕೆಲಸ ಮಾಡುವವನು ನಾನು ಧೈರ್ಯವಂತನೆಂದು, ತೋರಿಸಿಕೊಳ್ಳುಬಹುದು.
ಆದರೆ ಆತನೊಳಗೆ ಭಯ ಒಂದೇ ಸಮನೆ ಆತನನ್ನು ಕೊರೆಯುತ್ತಿರುತ್ತದೆ. ತಾನು ಮಾಡಿದ ಕೆಟ್ಟ ಕೆಲಸಗಳು ಯಾವಾಗ ಹಿಂತಿರುಗಿ ತನಗೆ ಕೆಟ್ಟದ್ದು ಮಾಡುತ್ತವೆಯೋ ? ಎನ್ನುವ ಭಯದಲ್ಲಿ ತನ್ನ ಮನಸ್ಸಿನ ಶಾಂತಿಯನ್ನೆ ಆತ ಕಳೆದುಕೊಂಡಿರುತ್ತಾನೆ.
ಅಂಗುಲಿಮಾಲ, ನಿನಗೆ ಯಾವುದೇ ರೀತಿಯ ತೊಂದರೆ ಕೊಡದವರನ್ನು ನೀನು ಕೊಲೆ ಮಾಡುತ್ತಿದ್ದಿಯಾ. ನೀನು ಹೊರಗಡೆ ನಿನ್ನ ಭಯ ತೋರಿಸದೇ ಇರಬಹುದು.
*ಆದರೆ ಯಾರು, ಯಾವಾಗ ನನಗೆ ಏನು ಮಾಡುತ್ತಾರೋ? ಎನ್ನುವ ಭಯ ಕ್ಷಣ ಕ್ಷಣವು ನಿನ್ನ ಒಳಗಡೆ ತುಂಬಿ ತುಳುಕುತ್ತಿದೆ.* ಬೇಕಾದರೆ ನಿನ್ನ ಮನಸನ್ನು ಒಮ್ಮೆ ನೋಡಿಕೋ, ಎಂದು ಬುದ್ದ ಹೇಳುತ್ತಾರೆ.
ಆಗ ಅಂಗುಲಿಮಾಲ, ಈ ಮಾತು ಸತ್ಯ. ನನ್ನ ಒಳಗಡೆ ಭಯ ಇದೆ, ಎಂದು ಒಪ್ಪಿಕೊಂಡು ಅರ್ಧ ಸೋತು ಹೋಗುತ್ತಾನೆ.
ಆದರೂ ಅದನ್ನು ತೋರಿಸಿಕೊಳ್ಳದೆ, *ತನ್ನ ಕೊರಳಲ್ಲಿ ಇರುವ, ತಾನು ಕೊಲೆ ಮಾಡಿದವರ ಬೆರಳುಗಳ ಹಾರ ತೋರಿಸುತ್ತಾ ನೋಡು ನಾನು ಎಷ್ಟು ಶಕ್ತಿಶಾಲಿ* ಎಂದು ಹೇಳುತ್ತಾನೆ.
ನೀನು ಶಕ್ತಿಶಾಲಿ ಆದರೆ ಆ ಗಿಡದ ಎಲೆಯನ್ನು ಕಡಿದು ತೋರಿಸು ಎಂದು ಬುದ್ದ ಹೇಳುತ್ತಾನೆ. ಆಗ ಅಂಗುಲಿಮಾಲ ಸಿಟ್ಟಿನಿಂದ ತಲೆ ಕಡಿಯುವವನಿಗೆ ಎಲೆ ಕಡಿಯಲು ಹೇಳುತ್ತಿದ್ದೀಯಲ್ಲ ? ಯಾವುದಾದರೂ ಸಣ್ಣ ಮಗುವಿಗೆ ಎಲೆ ಕಡಿಯಲು ಹೇಳು ಎನ್ನುತ್ತಾನೆ.
ಆಗ ಬುದ್ದ, ನೀನು ಎಲೆಯನ್ನು ಒಮ್ಮೆ ಕೀಳು. ಆಗ ನೀನು ಎಷ್ಟು ಶಕ್ತಿವಂತ ? ಎನ್ನುವುದನ್ನು ನಿನಗೆ ಮನದಟ್ಟು ಮಾಡಿಸುತ್ತೇನೆ, ಎಂದು ಹೇಳುತ್ತಾರೆ.
ಆಗ ಅಂಗುಲಿಮಾಲ ಎಲೆಯನ್ನು ಕಡಿದು ಬುದ್ಧನಿಗೆ, ಮುಂದೇನು ಎನ್ನುವಂತೆ ಪ್ರಶ್ನಾರ್ಥಕವಾಗಿ ಸಿಟ್ಟಿನಿಂದ ನೋಡುತ್ತಾನೆ.
*ಆಗ ಬುದ್ಧ, ಈಗ ನೀನು ಪುನಃ ಆ ಎಲೆ ಎಲ್ಲಿತ್ತು ಅಲ್ಲಿಯೇ ಪುನಃ ಅದನ್ನು ಜೋಡಿಸು* ಎಂದು ಹೇಳುತ್ತಾನೆ. ಆಗ ಅಂಗುಲಿಮಾಲ ಇದು ಸಾಧ್ಯವಿಲ್ಲ, ಎಂದು ಹೇಳುತ್ತಾನೆ.
ಆಗ ಬುದ್ಧ ಹೇಳುತ್ತಾನೆ, *ಯಾರು ಜೀವ ತೆಗೆದುಕೊಳ್ಳುತ್ತಾರೆ, ಅವನು ಶಕ್ತಿವಂತ ಅಲ್ಲ.* ತಲೆ ಕೆಟ್ಟರೆ, ಯಾರು ಬೇಕಾದರೂ ಆಯುಧಗಳಿಂದ ಯಾರ ಜೀವ ಬೇಕಾದರೂ ತೆಗೆಯಬಹುದು .
*ಜೀವ ತೆಗೆದ ನಂತರ ಯಾರು ಪುನಃ ಜೀವನ ಕೊಡುತ್ತಾರೆ, ಅವರು ನಿಜವಾದ ಶಕ್ತಿವಂತನೆಂದು* ಹೇಳುತ್ತಾರೆ.
ಆಗ ಅಂಗುಲಿಮಾಲ ಪೂರ್ಣ ಕುಸಿದು ಹೋಗಿ ಬುದ್ಧನಿಗೆ ಶರಣಾಗಿ, ಬುದ್ಧನ ಶಿಷ್ಯನಾಗುತ್ತಾನೆ.
ಇಂದು ಸಹ ಸಮಾಜದಲ್ಲಿ, ದೇಶದಲ್ಲಿ ಅಂಗುಲಿಮಾಲ ನಂತಹವರು ಬಹಳ ಜನ ಇದ್ದಾರೆ.
ಅನೇಕ ಅನ್ಯಾಯ, ಅಧರ್ಮ, ಅನೀತಿಯ ಕೆಲಸಗಳನ್ನು ಮಾಡುತ್ತಾ, *ತಮ್ಮನ್ನು ತಾವು ಶಕ್ತಿವಂತರೆಂದು* ಭಾವಿಸುತ್ತಾರೆ. *ಜನರೆಲ್ಲಾ ತಮ್ಮನ್ನು ಅಂಜುತ್ತಾರೆ ಎನ್ನುವ ಭ್ರಮೆಯಲ್ಲಿರುತ್ತಾರೆ.*
ಆದರೆ *ಏಕಾಂತದಲ್ಲಿ ಇದ್ದಾಗ ಅವರ ಮನಸ್ಸು, ಅವರ ಆತ್ಮ ಸಾಕ್ಷಿಯನ್ನು ತಾವೇ ನೋಡಿಕೊಂಡಾಗ* ತನ್ನಷ್ಟು ಅಂಜುವವನು ಯಾರು ಇಲ್ಲಾ, ಎಂದು ತಿಳಿಯುತ್ತದೆ.
ಒಂದು *ಚೆಂಡನ್ನು ನಾವು ಗೋಡೆಗೆ ಹೊಡೆದಾಗ, ನಾವು ಎಷ್ಟು ಶಕ್ತಿಯಿಂದ ಹೊಡೆಯುತ್ತೇವೆಯೋ ಅಷ್ಟೇ ಶಕ್ತಿಯಿಂದ ಪುನಃ ಹಿಂತಿರುಗಿ ಬಂದು ನಮಗೆ ಬಡಿಯುತ್ತದೆ.*
ಇದೇ ಕರ್ಮದ ನಿಯಮವಾಗಿದೆ.
ಆದ್ದರಿಂದ ನಾವು ಕೆಟ್ಟ ಕೆಲಸಗಳನ್ನು ಮಾಡಿ, ನಮ್ಮನ್ನು ನಾವು ಧೈರ್ಯವಂತರು, ಶಕ್ತಿಶಾಲಿಗಳು ಎನ್ನುವ ಸುಳ್ಳು ಭ್ರಮೆಯಲ್ಲಿ ಇರದೆ, *ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಬೇರೆಯವರಿಗೆ ಒಳ್ಳೆಯದನ್ನು ಮಾಡಿ ಬುದ್ಧನಂತೆ ನಿರ್ಭಯದ ಬದುಕನ್ನು, ಬದುಕೋಣ.*
(ಇಲ್ಲದಿದ್ದರೆ, *ಕ್ಷಣ ಕ್ಷಣವು ಯಾರು, ಯಾವಾಗ ನನಗೆ ಏನು ಮಾಡುತ್ತಾರೋ ?* ಎನ್ನುವ ಭಯದಲ್ಲಿ ಬದುಕಬೇಕಾಗುತ್ತದೆ.
*ಕಾರಣ, ಯಾರು ತಪ್ಪು ಮಾಡುತ್ತಾರೆ? ಅವರು ಅಂಜುತ್ತಾರೆ.*
*ಯಾರು ಯಾವ ತಪ್ಪನ್ನು ಮಾಡಿರುವುದಿಲ್ಲವೋ ಹಾಗೂ ಯಾರಿಗೆ ಸಾವಿನ ಭಯವಿಲ್ಲವೋ, ಅವರು ಎಂದಿಗೂ ಅಂಜುವುದಿಲ್ಲ.* )
ಎಲ್ಲರಿಗೆ ಬುದ್ದ ಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು.
✍️ URAIN NAMAH
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ.)

Comments
Post a Comment