ಅಲ್ಪ ಕಲ್ಪನೆ, ಅಲ್ಪ ಸತ್ಯ ಕಥೆ ಭಾಗ -1
(ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ, ಸರಣಿಯ ಮೂರನೇ ಲೇಖನ.)
ನಾಗೇಶ ಮತ್ತು ಸುರೇಶ ಇಬ್ಬರು ಬಾಲ್ಯ ಸ್ನೇಹಿತರು. ಬಾಲ್ಯದಿಂದಲೂ ಇಬ್ಬರೂ ಅನೋನ್ಯ ಸಂಬಂಧವನ್ನು ಹೊಂದಿದವರು. ಓದಿನಲ್ಲಿ, ಕ್ರೀಡೆಯಲ್ಲಿ, ಇನ್ನಿತರ ಸ್ಪರ್ಧೆಗಳಲ್ಲಿ ತರಗತಿ ಮತ್ತು ಶಾಲೆಯಲ್ಲಿಯೇ ಗುರುತಿಸುವಂತಹವರು. ಬೇರೆಯವರಿಗೆ ಒಂದು ರೀತಿ ಪರಸ್ಪರ ಸ್ಪರ್ಧಿಗಳಂತೆ ಕಂಡರು ಸಹ ಎಂದಿಗೂ ತಮ್ಮ ತಮ್ಮಲ್ಲಿ ಮತ್ಸರ ಪಡದೆ ಓದಿನಲ್ಲಿ ಇತರ ವಿಷಯಗಳಲ್ಲಿ ಒಬ್ಬರಿಗೊಬ್ಬರು ಸಹಕಾರ ಕೊಟ್ಟುಕೊಳ್ಳುತ್ತಿದ್ದರು..
ಸುರೇಶ, ನಾಗೇಶನನ್ನು ಆದರ್ಶ ವಿದ್ಯಾರ್ಥಿಯಂತೆ ಕಾಣುತ್ತಿದ್ದ. ನಾಗೇಶ ಸಹ ಕೆಲವು ವಿಷಯಗಳಲ್ಲಿ ಸುರೇಶನನ್ನು ಅನುಸರಿಸುತ್ತಿದ್ದ.
ನಾಗೇಶನ ಜೀವನ ಬಾಲ್ಯದಲ್ಲಿ ಎಲ್ಲರೂ ಅಂದುಕೊಂಡಂತೆ ಏರುಗತಿಯಲ್ಲಿಯೇ ಮುಂದುವರಿಯಿತು. ಆದರೆ ಸುರೇಶನ ಜೀವನ ಪಿಯುಸಿ ಯಲ್ಲಿ ಯಾರು ಊಹಿಸದ ರೀತಿ ಅನಿರೀಕ್ಷಿತವಾಗಿ ಕೆಳಮುಖವಾಗಿ ತಿರುವು ಪಡೆಯಿತು.
ನಾಗೇಶ ಚಿಕ್ಕಂದಿನಲ್ಲಿ ಎಲ್ಲರೂ ಊಹಿಸಿದಂತೆ ಪಿಯುಸಿ ಯಲ್ಲಿ ಕಷ್ಟಪಟ್ಟು ಓದಿ ಪಾಸಾಗಿ ವೈದ್ಯಕೀಯ ಸೀಟನ್ನು ಪಡೆದುಕೊಳ್ಳುತ್ತಾನೆ. ಮುಂದೆ ನಿರಂತರ ಪರಿಶ್ರಮದಿಂದ ವೈದ್ಯನೂ ಆಗಿ ಸರಕಾರಿ ನೌಕರಿಯನ್ನು ಪಡೆದುಕೊಂಡು ತಾನು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ವೈದ್ಯನೆಂಬ ಕೀರ್ತಿ ಪ್ರಶಸ್ತಿ ಪಡೆದುಕೊಂಡ.
ಕೆಲವು ವರ್ಷಗಳ ನಂತರ ತಾನು ಕಲಿತ ಶಾಲೆ, ಶಿಕ್ಷಕರು ಸಹಪಾಠಿಗಳು ಹೆಮ್ಮೆಯಿಂದ ತಮ್ಮ ವಿದ್ಯಾರ್ಥಿ, ತಮ್ಮ ಸ್ನೇಹಿತ, ತಮ್ಮ ಸಹಪಾಠಿ ಎಂದು ಹೇಳಿಕೊಳ್ಳುವಂತೆ ತಾನು ಹುಟ್ಟಿ ಬೆಳೆದು ದೊಡ್ಡವನಾದ ಊರಿಗೆ ವೈದ್ಯನಾಗಿ ಬಂದ. ತನ್ನ ದಕ್ಷತೆಯಿಂದ ತನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮುಖ್ಯ ವೈದ್ಯನಾಗಿ ಪದನ್ನೋತಿಯನ್ನು ಸಹ ಪಡೆಯುತ್ತಾನೆ.
ಆದರೆ ಸುರೇಶ ಪಿಯುಸಿಯಲ್ಲಿ ಮೊದಲಿಗೆ ಫೇಲ್ ಆಗಿ, ಮತ್ತೆ ಮತ್ತೆ ಪರೀಕ್ಷೆ ಬರೆದು ತೇರ್ಗಡೆ ಆಗಿ. ಬಿಎಸ್ಸಿ ಮಾಡಿ ಅದನ್ನು ಸಹ ಪೂರ್ಣ ಮಾಡದೆ ಸ್ಥಳೀಯವಾಗಿ ಒಂದು ನೌಕರಿ ಮಾಡುತ್ತಿರುತ್ತಾನೆ.
ಒಮ್ಮೆ ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿದ್ದ ದೇಶಮುಖ ಸರ್ ಚಿಕಿತ್ಸೆ ನಿಮಿತ್ತ ಡಾ.ನಾಗೇಶರನ್ನು ಭೇಟಿಯಾದಾಗ ಹಿಂದಿನದನ್ನು ನೆನಪಿಸಿಕೊಂಡು, ನೀನು ನಮ್ಮ ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದಕ್ಕೆ ನಮಗೆಲ್ಲರಿಗೂ ಒಂದು ಖುಷಿ, ಒಂದು ಹೆಮ್ಮೆ ಆಗುತ್ತದೆ, ಎಂದರು.
ಶಿಕ್ಷಕರ ಜೀವನದಲ್ಲಿ ನಿನ್ನಂತಹ ವಿದ್ಯಾರ್ಥಿಗಳು ಸಿಗುವುದು ಬಹಳ ಕಡಿಮೆ. ನಿನ್ನಿಂದ ನಮ್ಮ ಶಾಲೆಗೆ ಒಂದು ಕೀರ್ತಿ, ಗೌರವ ಎಂದು ಬಹಳ ಸಂತೋಷದಿಂದ, ಅಭಿಮಾನದಿಂದ, ಧನ್ಯತೆಯಿಂದ ಅಭಿನಂದನೆ ನುಡಿಗಳನ್ನು ನುಡಿಯುತ್ತಾರೆ.
ದೇಶಮುಖ ಸರ್ ಮುಂದುವರಿದು, ಆದರೆ ಸರಿ ಸುಮಾರು ನಿನ್ನ ಮಟ್ಟದಲ್ಲಿಯೇ ಇದ್ದ ಸುರೇಶನ ಜೀವನದ ಸ್ಥಿತಿ ಹೇಗಾಯಿತು ನೋಡು ? ಅವನನ್ನು ನೋಡಿದಾಗ ಯಾರಿಗಾದರೂ ಕನಿಕರ ಬರುತ್ತದೆ, ಎಂದು ಬೇಸರದಿಂದ ಹಾಗೂ ನೋವಿನಿಂದ ಹೇಳುತ್ತಾರೆ.
ಚಿಕ್ಕಂದಿನಲ್ಲಿ ನಾನು ಹೇಳುವ ಮಾತುಗಳನ್ನು ಆತ ಬಹಳ ನಿಷ್ಠೆಯಿಂದ ಪಾಲಿಸುತ್ತಿದ್ದ, ಹೀಗೆ ಹೇಳುತ್ತಿದ್ದ ಶಿಕ್ಷಕರನ್ನು ತಡೆದ ಡಾ.ನಾಗೇಶ, ನಗುತ್ತಾ ಹೌದು ಸರ್ ನಿಮಗೆ ಗೊತ್ತಿಲ್ಲ. ನಾವು ನಿಮ್ಮ ಮನೆ ಪಾಠಕ್ಕೆ ಬಂದಾಗ ಸಹಪಾಠಿಗಳು ಆತನನ್ನು ಕಿಚಾಯಿಸಲು ನಿಮ್ಮ ಹೆಸರಿನಿಂದ ಕರೆದು ದೇಶಮುಖ ಸರ್ ಬರುತ್ತಿದ್ದಾರೆ, ದಾರಿ ಬಿಡಿ ಎನ್ನುತಿದ್ದರು. ಆತ ಸಿಟ್ಟು ಮಾಡಿಕೊಳ್ಳದೆ, ತನ್ನನ್ನು ಹಾಗೆ ಸಹಪಾಠಿಗಳು ಗುರುತಿಸುವುದಕ್ಕೆ ಖುಷಿಯಿಂದ ನಗುತ್ತಿದ್ದ, ಎಂದು ಡಾ. ನಾಗೇಶ ಹೇಳಿದರು.
ಆಗ ದೇಶಮುಖ್ ಸರ್, ಹೌದಾ !! ? ಎಂದು ಖುಷಿಯಿಂದ ಮನದಲ್ಲಿಯೇ ನಕ್ಕು , ಆತನನ್ನು ಮನಸ್ಸಿನಲ್ಲಿಯೇ ನೆನಪಿಸಿಕೊಂಡು ಒಂದು ಕ್ಷಣ ಮೌನವಾದರು.
ಮುಂದುವರಿದು, ಚಿಕ್ಕಂದಿನಲ್ಲಿ ಆತನ ಬುದ್ದಿಮತ್ತೆ, ನನಗೆ ಆತನಲ್ಲಿ ಬಾಲ ಅಂಬೇಡ್ಕರ್ ಕಾಣುವಂತೆ ಮಾಡುತ್ತಿತ್ತು. ಮುಂದಿನ ಜೀವನದಲ್ಲಿ ಅಷ್ಟೆ ಎತ್ತರಕ್ಕೆ ಏರಬಹುದು ಎಂದೇ ನಾನು ಊಹಿಸಿದ್ದೆ. ಆದರೆ ನನ್ನ ಊಹೆ, ನಿರೀಕ್ಷೆಗಳು ಎಲ್ಲಾ ಉಲ್ಟಾ ಆಗಿವೆ, ಎಂದು ದುಃಖದಿಂದ, ನೋವಿನಿಂದ, ಹತಾಶೆಯಿಂದ ನುಡಿದರು.
ಆದರೆ ತನ್ನ ಸ್ನೇಹಿತನನ್ನು ಬಿಟ್ಟುಕೊಡದ ಡಾ. ನಾಗೇಶ, ಇಲ್ಲಾ ಸರ್ ಹಾಗೇನಿಲ್ಲ. ಆತನನ್ನು ನೋಡಿದಾಗ, ಆತ ಲೌಕಿಕ ಜೀವನದಲ್ಲಿ ವಿಫಲ ಅನಿಸುವಂತೆ ಕಾಣುತ್ತದೆ. ಇದಕ್ಕೆ ಕಾರಣ ಪಿಯುಸಿಯಲ್ಲಿ ನಡೆದ ಆ ಘಟನೆ. ಅದರ ನಂತರ ಲೌಕಿಕ ಜೀವನವನ್ನೆ ಆತ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಲೌಕಿಕ ಜೀವನದಲ್ಲಿ ಅತ ಫೆಲ್ ಆಗಿರುವಂತೆ ಮೇಲ್ನೋಟಕ್ಕೆ ಅನಿಸುತ್ತದೆ.
ಆದರೆ ಜೀವನದ ಮೌಲ್ಯಗಳ ವಿಷಯದಲ್ಲಿ ಆತ ಫೇಲ್ ಆಗಿಲ್ಲ. ಒಮ್ಮೆ ಸುರೇಶನ ಡಿಗ್ರಿ ಉಪನ್ಯಾಸಕರಾದ ಭೀಮಾಶಂಕರ ಸರ್ ಭೇಟಿಯಾಗಿದ್ದರು. ಆಗ ಅವರು ಸುರೇಶ ನನ್ನ ಸಹಪಾಠಿ ಎನ್ನುವುದು ಗೊತ್ತಾಗಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ನಂತರ ನಿಮ್ಮ ಸ್ನೇಹಿತನಂತಹ ಪ್ರಾಮಾಣಿಕ ವಿಧ್ಯಾರ್ಥಿಗಳು ಈಗ ಸಿಗುವುದು ದುರ್ಲಭ, ಎನ್ನುತ್ತಾ ಡಿಗ್ರಿ ಕಾಲೇಜಿನಲ್ಲಿ ನಡೆದ ಒಂದು ಕುತೂಹಲಕಾರಿಯಾದ ಘಟನೆ ನನ್ನೊಂದಿಗೆ ಹಂಚಿಕೊಂಡರು.
"ನಮ್ಮ ಕಾಲೇಜಿಗೆ ಪ್ರಥಮ ಬಾರಿಗೆ ವಿಜ್ಞಾನ ವಿಷಯದ ಕಲಿಕೆಗೆ ಅನುಮತಿ ನೀಡಲಾಗಿತ್ತು. ಮೂಲಭೂತ ಸೌಲಭ್ಯಗಳ ಕೊರತೆಯಿದೆ. ವಿಷಯಗಳ ಕಲಿಕೆ ಪೂರ್ಣವಾಗಿಲ್ಲ. ಒಂದು ವೇಳೆ ಒಳ್ಳೆಯ ಫಲಿತಾಂಶ ಬರೆದಿದ್ದರೆ ವಿಜ್ಞಾನ ವಿಷಯದ ಮಾನ್ಯತೆ ರದ್ದಾಗುವದೆಂಬ ಭಯದಲ್ಲಿ ಉಪನ್ಯಾಸಕರು ಪರೀಕ್ಷೆಗಳಲ್ಲಿ ನಕಲಿಗೆ ತಾವೇ ಅವಕಾಶ ಮಾಡಿಕೊಟ್ಟಿದ್ದರು.
ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ತರ ಬರೆಯುತ್ತಿರುವಾಗ, ನಿನ್ನ ಸ್ನೇಹಿತ ಸುರೇಶ ಬೇಗನೆ ಉತ್ತರ ಪರೀಕ್ಷೆ ಕೊಟ್ಟು ನಡೆದ, ಆಗ ಅಲ್ಲಿದ್ದ ಉಪನ್ಯಾಸಕರು ಆಶ್ಚರ್ಯ ಮತ್ತು ಆತಂಕದಿಂದ, ಏಕೆ ಹೋಗುತ್ತಿರುವೆ ? ಏನಾಯಿತು ? ನಿನಗೆ ಉತ್ತರ ಬರೆಯಲು ಬೇರೆ ವಿದ್ಯಾರ್ಥಿಗಳಿಂದ ಸಹಕಾರ ಸಿಗುತ್ತಿಲ್ಲವೆ ? ನಾವು ಸಹಾಯ ಮಾಡುತ್ತೇವೆ. ಏನು ಬೇಕು ಹೇಳು. ಇಂತಹ ಅವಕಾಶ ಮತ್ತೆ ಸಿಗುವುದಿಲ್ಲ, ಎಂದರು.
ಆಗ ಸುರೇಶ ನಿರ್ವಿಕಾರ ಭಾವದಿಂದ ಇಲ್ಲಾ ಸರ್ ನನಗೆ ಬಂದಷ್ಟು ನಾನು ಬರೆದಿದ್ದೇನೆ. ನಾನು ಕಾಪಿ ಮಾಡುವುದಿಲ್ಲ. ನನ್ನ ಉತ್ತರ ಪತ್ರಿಕೆ ತೆಗೆದುಕೊಳ್ಳಿ ಎಂದು ಹೇಳಿ, ಉಪನ್ಯಾಸಕರ ಇನ್ನೊಂದು ಮಾತಿಗೂ ಕಾಯದೆ ಹೋಗೆಬಿಟ್ಟ. ಆಗ ಅಲ್ಲಿದ್ದ ಉಪನ್ಯಾಸಕರು, ವಿಧ್ಯಾರ್ಥಿಗಳು ಎಲ್ಲರೂ ಮೂಕವಿಸ್ಮಿತರಾದರು. ಆ ನಂತರ ಸ್ವಂತಿಕೆಯಿಂದ ಓದಿ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಆ ವರ್ಷದ ವಿಷಯಗಳನ್ನು ಪಾಸಾದ." ಎಂದು ಡಿಗ್ರಿ ಉಪನ್ಯಾಸಕರಾದ ಭೀಮಾಶಂಕರ ಸರ್ ನಿಷ್ಕಪಟತದಿಂದ ಹೇಳಿದರು.
ಇದನ್ನು ಕೇಳಿದ ನಂತರ ಸುರೇಶನ ಬಗ್ಗೆ ನನಗೆ ಇದ್ದ ಹೆಮ್ಮೆ ಇಮ್ಮಡಿಯಾಯಿತು, ಈಗಲೂ ಸಹ ಸಾಮಾಜಿಕ ಸೇವಾ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ, ಎಂದು ಸುರೇಶನ ಬಗ್ಗೆ ಹೆಮ್ಮೆಯಿಂದ ಡಾ. ನಾಗೇಶ ದೇಶಮುಖ್ ಸರ್ ಗೆ ಹೇಳಿದರು.
ಆಗ ದೇಶಮುಖ್ ಸರ್, ಹೌದಾ ನನಗೆ ಈ ವಿಷಯ ಗೊತ್ತೇ ಇರಲಿಲ್ಲ. ಅಂದರೆ ಆತ ಶಾಲೆಯಲ್ಲಿ ಕಲಿತ ಸಂಸ್ಕಾರ, ಗುಣಗಳನ್ನು ಇನ್ನೂ ಬಿಟ್ಟಿಲ್ಲ ಅಂತಾಯಿತು.
ಆದರೂ ನೀನು ಏನೇ ಹೇಳು, ಆತನ ಜೀವನ ನೋಡಿದಾಗ ಒಂದು ರೀತಿ ವ್ಯರ್ಥ ಆದಂತೆ ಅನಿಸುತ್ತಿದೆ. ಇವುಗಳನ್ನು ಇಂದಿನ ದಿನಗಳಲ್ಲಿ ಯಾರು ಕೇಳುತ್ತಾರೆ, ಯಾರು ಬೆಲೆ ಕೊಡುತ್ತಾರೆ, ಹೇಳು ?
ನಿನ್ನ ಜೊತೆ ಇದ್ದ ಇತರ ಸಹಪಾಠಿಗಳು ಮುಚಕುಂದ, ರವಿಕಿಶನ, ಮಧುಕರ, ಶಿವಣಗೌಡ, ಮುನಿರತ್ನಮ್ಮ, ಪ್ರಿಯಂವದಾ, ಶರಣಕೀರ್ತಿ, ಶ್ರೀವತ್ಸ ಮುಂತಾದವರು ಚಿಕ್ಕಂದಿನಲ್ಲಿ ಊಹಿಸಿದಂತೆ ಅಥವಾ ಅದಕ್ಕೂ ಎತ್ತರದ ಸ್ಥಾನ ತಲುಪಿದ್ದಾರೆ. ಎಷ್ಟೋ ಹುಡುಗರು ಇಂಜಿನೀಯರ್, ವಕೀಲರು, ಶಿಕ್ಷಕರು, ವ್ಯಾಪಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಆಗಿದ್ದಾರೆ. ನಿಮ್ಮ ಬ್ಯಾಚ್ ನ ಒಬ್ಬರು ತಹಶೀಲ್ದಾರ ಸಹ ಆಗಿದ್ದಾರೆ ಎಂದು ಕೇಳಿದ್ದೆ.
ರಘುಕುಮಾರ, ನಾಗಕುಮಾರ ಅಂತು ಯಾರು ಊಹಿಸದ ರೀತಿ ವಿದೇಶದಲ್ಲಿ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ, ಎಂದು ಕೇಳಿದೆ. ಅವರೆಲ್ಲಾ ಜೀವನದ ಉನ್ನತ ಸ್ಥಾನದಲ್ಲಿ ಇಂದು ಇದ್ದಾರೆ.
ಆದರೆ ಅಂದು ನಿನ್ನ ಮಟ್ಟದಲ್ಲಿದ್ದ ಸುರೇಶ ಇಂದು ಎಲ್ಲಿದ್ದಾನೆ ನೀನೇ ಹೇಳು. ಇದು ನನ್ನ ಒಬ್ಬನ ವಿಚಾರವಲ್ಲ. ಬಹಳಷ್ಟು ಜನ ಹೀಗೆಯೇ ಆತನ ಬಗ್ಗೆ ಯೋಚಿಸುತ್ತಾರೆ.
ಸುರೇಶನ ಜೀವನಕ್ಕೆ ಒಂದು ದಿಕ್ಕು ಗುರಿ ಇದ್ದಂತೆ ಕಾಣುತ್ತಿಲ್ಲ. ಇತ್ತೀಚೆಗೆ ಆತ ಜಾಲತಾಣದಲ್ಲಿ ಕಂಡಾಗ, ಆತ ಬಹಳ ಅಂತರ್ಮುಖಿ ಆದಂತೆ ಅನಿಸಿತು. ಆತನಲ್ಲಿ ಸಂತೋಷ ಕಾಣಲಿಲ್ಲ, ಎಂದರು.
ಆಗ ಡಾ. ನಾಗೇಶ, "ಇತ್ತೀಚೆಗೆ ನಾನು ಆತನಿಗೆ ಫೋನ್ ಕಾಲ ಮಾಡಿದ್ದೆ. ನನಗೂ ಸಹ ಆತ ಅಂತರ್ಮುಖಿಯಾಗಿರುವಂತೆ ಆನಿಸಿತ್ತು. ಮುಕ್ತವಾಗಿ ಮಾತನಾಡಲಿಲ್ಲ. ಏಕೆ ಹೀಗೆ ಸರಿಯಾಗಿ ಮಾತನಾಡುತ್ತಿಲ್ಲ ? ಎಂದು ಕೇಳಿದಾಗ, ನಾನು ಈಗ ಕೆಲಸದಲ್ಲಿ ಬ್ಯುಸಿ ಇದ್ದೇನೆ, ಆಮೇಲೆ ಫೋನ್ ಮಾಡುತ್ತೇನೆ ಎಂದು ಹೇಳಿ, ಫೋನ್ ಕಟ್ ಮಾಡಿದ.
ಸ್ವಲ್ಪ ಸಮಯದ ನಂತರ ಫೋನಿಗೆ ಮೆಸೇಜ್ ಮಾಡಿದ. ಆತ ಅದರಲ್ಲಿ ಬರೆದ ಸಾಲುಗಳು ನನ್ನನ್ನು ಭಯಕ್ಕೆ ದೂಡಿವೆ, ಎಂದು ಡಾ. ನಾಗೇಶ ಹೇಳಿದರು.
ಯಾಕೆ ಏನು ಬರೆದಿದ್ದ ? ಎಂದು ದೇಶಮುಖ್ ಸರ್ ಗಾಬರಿಯಿಂದ ಕೇಳಿದರು.
"ನನ್ನ ಜೀವನದ ಗಾತ್ರ ಬಹಳ ಕಿರಿದಾಗುತ್ತಿರುವಂತೆ ಅನಿಸುತ್ತಿದೆ. ಜಗತ್ತಿನಲ್ಲಿರುವ ಬಹು ಆಯ್ಕೆಗಳು ನನ್ನ ಪಾಲಿಗೆ ಮುಚ್ಚಲ್ಪಟ್ಟಿವೆ, ಅನಿಸುತ್ತಿದೆ. ಒಂದೇ ಆಯ್ಕೆ ಮಾತ್ರ ನನ್ನ ಜೀವನದಲ್ಲಿ ಇದೆ ಏನೋ ? ಎಂಬಂತೆ ಅನಿಸುತ್ತಿದೆ. ರಸ ರಹಿತ ಜೀವನ ಎಂಬಂತಹ ಸಾಲುಗಳಿದ್ದ ಮೆಸೇಜ್ ಎಂದು ಡಾ. ನಾಗೇಶ, ದೇಶಮುಖ್ ಸರ್ ಗೆ ಹೇಳಿದರು,
ಆಗ ಶಿಕ್ಷಕರು ಗಾಬರಿಯಿಂದ, ಅಷ್ಟೆ ಕಾಳಜಿಯಿಂದ ಏಕೆ ಏನಾಯಿತು ? ಆತ ಮತ್ತೊಮ್ಮೆ ಮಾನಸಿಕ ಸಮಸ್ಯೆಗೆ ಸಿಲುಕಿದನೆ ? ಇಲ್ಲಾ, ಮದುವೆ ಮಕ್ಕಳಿಲ್ಲದ ಒಂಟಿ ಬದುಕಿನಿಂದ ಬೇಸತ್ತು ಖಿನ್ನತೆಗೆ ಸಿಲುಕಿದನೆ ? ಎಂದು ಅವಸರವಸರವಾಗಿ ಕೇಳಿದರು.
ದೇಶಮುಖ ಸರ್ ಪ್ರಶ್ನೆಗೆ ಪ್ರತಿಕ್ರಿಯಿಸಬೇಕು ಎನ್ನುವಷ್ಟರಲ್ಲಿ, ಆಸ್ಪತ್ರೆಯ ನರ್ಸ್ ಎದೆಸುರು ಬಿಡುತ್ತಾ, ಓಡುತ್ತಾ ಬಂದು, ಡಾಕ್ಟರ್ ಸರ್ ಬೇಗ ಬನ್ನಿ , ಬೇಗ ಬನ್ನಿ, ಒಂದು ಸಿರಿಯಸ್ ಪೆಷೆಂಟ್ ಬಂದಿದೆ, ಇದು MLC (medical legal case) ಕೇಸ್ ಇದೆ, ಎಂದು ಹೇಳಿದಳು.
ಆಗ ಡಾ. ನಾಗೇಶ, ಸರ್ ನೀವು ಸ್ವಲ್ಪ ಹೊತ್ತು ಕುಳಿತಿರಿ. ನಾನು ಪೇಷೆಂಟ್ ಅಟೆಂಡ್ ಮಾಡಿ ಬರುತ್ತೇನೆ ಎಂದು ಸ್ಟೇಥೆಸ್ಕೋಪ ಎತ್ತಿಕೊಂಡು ಗಡಿಬಿಡಿಯಿಂದ ಎದ್ದು ಹೋದರು.
ಅಲ್ಲಿ ಕುಳಿತಿದ್ದ ದೇಶಮುಖ್ ಸರ್ ಅಯ್ಯೋ ಏನಾಯಿತೋ ? ಈ ಕಡೆ ಸುರೇಶನ ಚಿಂತಾಜನಕ ಸಂದೇಶ ಬಗ್ಗೆ ಕೇಳುತ್ತಿರುವಾಗಲೇ ಆ ಕಡೆ ಅಂತಹ ಪೆಷಂಟ್ ಬಂತಲ್ಲಾ ? ದೇವರೇ ಎರಡು ವ್ಯಕ್ತಿಗಳು ಬೇರೆ ಬೇರೆ ಆಗಿರಲಿ, ಎಂದು ದೇವರಿಗೆ ಕೈ ಮುಗಿದು ಪ್ರಾರ್ಥನೆ ಮಾಡಿದರು.
( ಮುಂದುವರಿಯುವುದು....)
✍️ URAIN NAMAH
(ಈ ಪದ ಸತ್ಯ ಯುಗದ ಮುನ್ನುಡಿ
ಈ ಪದ ಯುಗ ಪರಿವರ್ತನೆಗೆ ನಾಂದಿ)
(ಸೂರ್ಯನಾರಾಯಣ ಜಿ.ಚಿಮ್ಮನಚೋಡಕರ್ ಸೇಡಂ )
.jpeg)
Comments
Post a Comment