ಭರವಸೆ ಕಳೆದುಕೊಳ್ಳುವುದು

ವ್ಯಕ್ತಿತ್ವದ ಕೊಲೆ, ಭಾಗ -2. 

ದೃಢ ನಂಬಿಕೆಯಿಂದ ಸಮುದ್ರವನ್ನು ಬತ್ತಿಸುವ ಸಂಕಲ್ಪ ಮಾಡಿದ ಹಂಸ ಪಕ್ಷಿಯ ಕತೆ.

ಒಂದು ಹಂಸ ಪಕ್ಷಿ ತನ್ನ ಗುಂಪಿನೊಂದಿಗೆ ಸಮುದ್ರ ದಂಡೆಯಲ್ಲಿ ಸಂತೋಷದಿಂದ ವಾಸಿಸುತ್ತಿತ್ತು. ಸಮುದ್ರದ ದಂಡೆಯಲ್ಲಿ ಚಲಿಸುವಾಗ ಎಷ್ಟೋ ಬಾರಿ ಸಮುದ್ರದ ಅಲೆಗಳ ಪೆಟ್ಟನ್ನು ತಿನ್ನುತ್ತಿತ್ತು. ಸಮುದ್ರದ ಅಲೆಗಳು ಎಷ್ಟೋ ಸಲ ಹಂಸ ಪಕ್ಷಿಯಿಟ್ಟಿದ್ದ ಮೊಟ್ಟೆಗಳನ್ನು ಹೊಡೆದುಕೊಂಡು ಹೋಗಿದ್ದವು. ಆದರೂ ಸಮುದ್ರಕ್ಕೆ ಏನನ್ನು ಹೇಳದೆ, ಉತ್ತಮ ಸಂಬಂಧವನ್ನು ಕಾಯ್ದುಕೊಂಡಿತ್ತು.

 (ಆದರೆ ಸಮುದ್ರಕ್ಕೆ ಬಹುಶಃ ಮುದ್ದು ಮುದ್ದಾದ ಅದನ್ನು ಕಂಡರೆ ಏನೇನೋ ತುಂಟಾಟ ಮಾಡಿ ವಿಕೃತ ಖುಷಿ ಪಡುವ ಹಂಬಲವಿತ್ತೇನೋ ?) 

ಅನೇಕ ದಿನಗಳ ನಂತರ ಹಂಸ ಪಕ್ಷಿ ಪುನಃ ತನ್ನ ಮೊಟ್ಟೆಗಳನ್ನಿಟ್ಟು ಮರಿ ಮಾಡುವ ಸಂತಾನೋತ್ಪತ್ತಿಯ ಸಮಯ ಬಂದೀತು. ಆಗ ಅದು ಹಿಂದಿನ ಅನುಭವಗಳಿಂದ ಪಾಠ ಕಲಿತು, ಸಮುದ್ರದ ಅಲೆಗಳಿಗೆ ಹೆದರಿ, ಸಮುದ್ರ ದಂಡೆಯಿಂದ ಬಹು ದೂರದಲ್ಲಿ, ಅಲೆಗಳು ತಲುಪಲು ಆಗದ ಸ್ಥಳವನ್ನು ಹುಡುಕಿ, ಆ ಸ್ಥಳದಲ್ಲಿ ತನ್ನ ಮೊಟ್ಟೆಗಳನ್ನು ಇಟ್ಟಿತ್ತು. 

ಮೊಟ್ಟೆ ಇಟ್ಟ ನಂತರ ಹಂಸ ಪಕ್ಷಿ ಅದರಿಂದ ಹೊರಬರುವ ತನ್ನ ಮುದ್ದು ಕಂದಮ್ಮಗಳನ್ನು ನೆನೆದು ಪುಳಕಗೊಳ್ಳುತ್ತಿರುತ್ತದೆ. ಅವುಗಳ ಚಿನ್ನಾಟಗಳನ್ನು ಕಲ್ಪಿಸಿಕೊಂಡು ಮನಸ್ಸಿನಲ್ಲಿಯೇ ಖುಷಿ ಪಡುತ್ತಿರುತ್ತದೆ.‌ ಯಾವಾಗ ಮೊಟ್ಟೆಯಿಂದ ಮರಿಗಳು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಹೊರಗಡೆ ಬರುವವೋ ? ಯಾವಾಗ ತನ್ನ ಮರಿಗಳ ತೊದಲು ನುಡಿಗಳನ್ನು ಕೇಳುತ್ತೇನೆಯೋ ? ತಾನು ತನ್ನ ರೆಕ್ಕೆಗಳಿಂದ ಯಾವಾಗ ಅವುಗಳನ್ನು ಅಪ್ಪಿಕೊಂಡು ಮುದ್ದಾಡುತ್ತೆನೆಯೋ ?ಎಂದು ಚಡಪಡಿಸುತ್ತಿರುತ್ತದೆ. ಮರಿಗಳಿಗೆ ತನ್ನ ಮಾತೃ ವಾತ್ಸಲ್ಯ ತೋರಲು ಒಂದೇ ಸಮನೆ ಕಾಯುತ್ತಿರುತ್ತದೆ. 

ಆದರೆ ಒಂದು ದಿನ ಸಮುದ್ರದ ದುರುದ್ದೇಶ ಎನ್ನಬೇಕೋ, ಹಂಸ ಪಕ್ಷಿಯ ದುರದೃಷ್ಟವೆನ್ನಬೇಕೋ, ಹಂಸ ಪಕ್ಷಿ ಸುರಕ್ಷಿತ ಪ್ರದೇಶವೆಂದು ಭಾವಿಸಿ ಮೊಟ್ಟೆಗಳನ್ನಿಟ್ಟ ಅಷ್ಟು ದೂರದ ಸ್ಥಳಕ್ಕೂ ಸಮುದ್ರದ ಭೀಕರ ಅಲೆಗಳು, ರಕ್ಕಸದ ರೂಪ ತಾಳಿ ಹಂಸ ಪಕ್ಷಿಯ ಎಲ್ಲಾ ಮೊಟ್ಟೆಗಳನ್ನು ಹೊಡೆದುಕೊಂಡು ಹೋಗುತ್ತವೆ.

 ತಾನಿಟ್ಟಿದ್ದ ಮೊಟ್ಟೆಗಳಿಂದ ತನ್ನ ಮುದ್ದು ಮುದ್ದಾದ ಕಂದಮ್ಮಗಳು ಹೊರಬರುತ್ತವೆ. ಅವುಗಳನ್ನು ತಾನು ಲಾಲಿಸುತ್ತೇನೆ, ಪೋಷಿಸುತ್ತೇನೆ, ಮುದ್ದಿಸುತ್ತೇನೆ. ಅವುಗಳ ಜೊತೆ ಪ್ರೀತಿಯಿಂದ ಆಟವಾಡುತ್ತೇನೆ. ನಾನು ಸಂತಾನದ ಸುಖವನ್ನು, ಸಂತೋಷವನ್ನು ಅನುಭವಿಸುತ್ತೇನೆಂದು, ಸುಮಧುರ ಕನಸುಗಳನ್ನು ಕಟ್ಟಿಕೊಂಡಿದ್ದ, ಆ ಕನಸುಗಳಲ್ಲಿಯೇ ಸಂತೋಷದಿಂದ ತೇಲುತ್ತಿದ್ದ ಹಂಸ ಪಕ್ಷಿಗೆ ಸಮುದ್ರದ ಈ ನಡೆ ಪುನಃ ಆಘಾತ ನೀಡುತ್ತದೆ. ಇದರಿಂದ ಅದು ಸಮುದ್ರದಿಂದ ಮತ್ತೆ ಮತ್ತೆ ಹತಾಶೆಗೊಳಗಾಗಿ ಬಹಳಷ್ಟು ದುಃಖ ನೋವನ್ನು ಅನುಭವಿಸುತ್ತದೆ. ಒಂದೇ ಸಮನೆ ಕಣ್ಣಿರನ್ನು ಸುರಿಸುತ್ತದೆ.

ಹಂಸ ಪಕ್ಷಿಯ ದುಃಖ, ನೋವು ಸಮುದ್ರದ ಮೇಲಿನ ಸಿಟ್ಟಿನ ರೂಪ ಪಡೆದುಕೊಳ್ಳುತ್ತದೆ. ಸಿಟ್ಟು, ಆಕ್ರೋಶಕ್ಕೆ ಕಾರಣವಾಗಿ ಸೇಡಿನ ರೂಪ ಪಡೆದುಕೊಳ್ಳುತ್ತದೆ. 

ಮತ್ತೆ ಮತ್ತೆ ಯೋಚಿಸಿದ ನಂತರ ಹಂಸ ಪಕ್ಷಿ ಕಟ್ಟಕಡೆಗೆ ಒಂದು ನಿರ್ಧಾರಕ್ಕೆ ಬರುತ್ತದೆ. ಸುರಕ್ಷಿತ ಪ್ರದೇಶದಲ್ಲಿಟ್ಟರೂ ತನ್ನ ಮೊಟ್ಟೆಗಳನ್ನು ಕೊಳ್ಳೆ ಹೊಡೆದ "ಸಮುದ್ರವನ್ನೆ ನಾನು ಬತ್ತಿಸಿ ಬೀಡುತ್ತೇನೆ" ಎನ್ನುವ ಘರ್ಜನೆಯ ಧ್ವನಿಯ ಮೂಲಕ ದೊಡ್ಡ ಘೋಷಣೆಯನ್ನು ಹಾಗೂ ದಿಟ್ಟ ಸಂಕಲ್ಪವನ್ನು ಹಂಸ ಪಕ್ಷಿ ಮಾಡುತ್ತದೆ. 

ಗಂಭೀರತೆಯಿಂದ ಒಂದು ಕಡೆ ಹಂಸ ಪಕ್ಷಿ ದೃಢ ಸಂಕಲ್ಪ ಮಾಡಿದರೆ, ಇನ್ನೊಂದು ಕಡೆ ಈ ಸಂಕಲ್ಪವನ್ನು ಕೇಳಿದಂತಹ ಪಕ್ಷಿಯ ಸಹಚರ ಇತರ ಪಕ್ಷಿಗಳು ಗೇಲಿ ಮಾಡುತ್ತಾ, ಅಪಹಾಸ್ಯ ಮಾಡಿ ಗೊಳ್ಳೆಂದು ನಗುತ್ತವೆ. 

ಆ ಸಂಕಲ್ಪ ಮಾಡಿದ ಪಕ್ಷಿಯನ್ನು ಕುರಿತು ಅವೆಲ್ಲಾ ಹೇಳುತ್ತವೆ, 

"ನಿನಗೆ ಹುಚ್ಚು ಹಿಡಿದಿದೆಯೇನು ? ನೀನು ಏಷ್ಟಿರುವೆ ? ಸಮುದ್ರ ಎಷ್ಟಿದೆ ? ಎನ್ನುವುದರ ಅರಿವು ನಿನಗಿದೆಯೇ ?  

ನಿನ್ನ ಶಕ್ತಿ ಎಷ್ಟು ? ಸಮುದ್ರದ ಶಕ್ತಿ ಎಷ್ಟು ? ನಿನಗೆ ಗೊತ್ತೆ ?"

ಈ ಹುಡುಗಾಟವನ್ನು ಬಿಟ್ಟುಬಿಡು. ಬಲಿಷ್ಠ ಗೋಡೆಗೆ ಗುದ್ದಿದರೆ ನಮಗೆ ನೋವಾಗುತ್ತದೆ ಹೊರತು ಗೋಡೆಗೆ ಏನಾಗುವುದಿಲ್ಲ. ಆದ್ದರಿಂದ ನೀನು ಇಂತಹ ಹುಚ್ಚು ಸಂಕಲ್ಪವನ್ನು ಬಿಟ್ಟುಬಿಡು, ಎಂದು ಬುದ್ಧಿವಾದವನ್ನು ಎಲ್ಲಾ ಪಕ್ಷಿಗಳು ಒಂದೊಂದಾಗಿ, ನಾನಾ ರೀತಿಯಿಂದ ತಿಳಿಸಿ ಹೇಳುತ್ತವೆ.

ಆದರೆ ಈ ಹಿಂದೆ ಸಮುದ್ರದ ಅಲೆಗಳಿಂದ ನಿರಂತರ ಮೊಟ್ಟೆಗಳನ್ನು ಕಳೆದುಕೊಂಡ ಹಂಸ ಪಕ್ಷಿ ಇದು ನೈಸರ್ಗಿಕ ನಡೆ ಎಂದು ಭಾವಿಸಿ ಸಮುದ್ರವನ್ನು ಕ್ಷಮಿಸಿಬಿಡುತಿತ್ತು.

 ಆದರೆ ಈ ಬಾರಿ ಹಂಸ ಪಕ್ಷಿ ಸಮುದ್ರದ ಅಲೆಗಳಿಂದ ಪಾರಾಗಲು ಮುನ್ನೆಚ್ಚರಿಕೆಯಿಂದ ಮೊಟ್ಟೆಗಳನ್ನು ಸುರಕ್ಷಿತ ಪ್ರದೇಶದಲ್ಲಿಟ್ಟರೂ, ಅವುಗಳನ್ನು ಸಹ ಕೊಳ್ಳೆ ಹೊಡೆದ ಸಮುದ್ರದ ನಡೆಯನ್ನು ಕ್ಷಮಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅದರ ಸಹಚರ ಪಕ್ಷಿಗಳು ಎಷ್ಟೇ ಬುದ್ದಿ ಮಾತು ಹೇಳಿದರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಸಮುದ್ರಕ್ಕೆ ತಕ್ಕುದಾದ ಪಾಠ ಕಲಿಸಲೇಬೇಕೆಂದು ದೃಢ ನಿಶ್ಚಯ ಮಾಡಿದ ಹಂಸ ಪಕ್ಷಿ ತನ್ನ ಸಂಕಲ್ಪದಿಂದ ಹಿಂದೆ ಸರಿಯುಲಿಲ್ಲ. 

ಅದು ತನ್ನ ಸಂಕಲ್ಪದಂತೆ ಕೆಲಸ ಆರಂಭಿಸಿತು. ಸಮುದ್ರವನ್ನು ಬತ್ತಿಸಲು ತನ್ನ ಚೊಂಚಿನಿಂದ ಸಮುದ್ರದ ನೀರನ್ನು ಆಚೆ ತಂದು ಹಾಕುತಿತ್ತು. 

 ನಿರಂತರವಾಗಿ ಸಮುದ್ರದಲ್ಲಿ ಹೋಗುವುದು ಅಲ್ಲಿಯ ನೀರನ್ನು ತನ್ನ ಚೊಂಚಿನಲ್ಲಿ ಸಂಗ್ರಹಿಸಿ, ದೂರದಲ್ಲಿ ಆ ನೀರನ್ನು ಚೆಲ್ಲುವುದು, ಇದೇ ಆ ಹಂಸ ಪಕ್ಷಿಯ ದಿನನಿತ್ಯದ ಬಿಟ್ಟುಬಿಡದ ನಿರಂತರ ಕೆಲಸವಾಯಿತು. ಇದಕ್ಕೆ ಯಾವುದೇ ಅಡ್ಡಿ ಅಡಚಣೆ ಬಂದರೂ ಮತ್ತೆ ಅವುಗಳನ್ನು ಸಾವರಿಸಿಕೊಂಡು ಪುನಃ ತನ್ನ ಪ್ರಯತ್ನವನ್ನು ಒಂದು ದಿನವೂ ಬಿಡದೆ ನಿರಂತರ ಮುಂದುವರಿಸಿತು.

 ದಿನಗಳು ಉರುಳಿದವು. ತಿಂಗಳುಗಳು ಉರುಳಿದವು. ಅಷ್ಟೇಕೆ ವರ್ಷಗಳು ಸಹ ಗತಿಸಿದವು. ಆದರೂ ಹಂಸ ಪಕ್ಷಿ ತನ್ನ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ನಿರಂತರವಾದ ಅದರ ಪ್ರಯತ್ನ ನಡೆಯುತ್ತಲೇ ಇತ್ತು. 

ಆಗ ಈ ವಿಷಯದ ಬಗ್ಗೆ ಎಲ್ಲಾ ಕಡೆ ಚರ್ಚೆ ಆರಂಭವಾಯಿತು. ಹಂಸ ಪಕ್ಷಿಯ ಸಂಕಲ್ಪ ಹಾಗೂ ಅದರ ನಿರಂತರ ಪ್ರಯತ್ನದ ಸಮಾಚಾರ ಎಲ್ಲಾ ಹತ್ತು ದಿಕ್ಕುಗಳಿಗೂ ಹಬ್ಬಿತ್ತು. ಪಕ್ಷಿಯಿಂದ ಪಕ್ಷಿಗೆ ಈ ವಿಷಯ ಪಕ್ಷಿಗಳ ರಾಜ ವೈಕುಂಠದ ಅಧಿಪತಿಯ ವಾಹನವಾದ ಗರುಡನವರೆಗೂ ತಲುಪಿತು. 

ಒಂದು ಚಿಕ್ಕ ಹಂಸ ಪಕ್ಷಿಯ ದೃಢ ಸಂಕಲ್ಪ ಹಾಗೂ ನಿರಂತರ ಪ್ರಯತ್ನ ಗರುಡ ರಾಜನ ಮನಸ್ಸನ್ನು ವಿಚಲಿತಗೋಳಿಸಿತು.

 ತನ್ನ ಕುಲದ ಒಂದು ಚಿಕ್ಕ ಜೀವಿ, ತನ್ನ ಸಂಕಲ್ಪದಂತೆ ಮಾಡುತ್ತಿರುವ ನಿರಂತರ ಪ್ರಯತ್ನದಲ್ಲಿ ಅನುಭವಿಸುತ್ತಿರುವ ಕಷ್ಟ, ನೋವುಗಳನ್ನು ಕಂಡ ಗರುಡನ ಮನಸ್ಸು ವಿಹ್ವಲಗೊಂಡಿತು.

 ಪಕ್ಷಿಗಳ ರಾಜನಾದ ನಾನು ಹಂಸ ಪಕ್ಷಿಗೆ ಸಹಾಯ ಮಾಡದಿದ್ದರೆ ನಾನು ಪಕ್ಷಿಗಳ ರಾಜನಾಗಿದ್ದು ವ್ಯರ್ಥ ಎಂದು ಭಾವಿಸಿ, ವೈಕುಂಠದಿಂದ ಗರುಡ ರಾಜ ಭೂಲೋಕದ ಸಮುದ್ರದ ದಂಡೆಗೆ ಬಂದ. 

ಸಮುದ್ರವನ್ನು ಉದ್ದೇಶಿಸಿ ಗರುಡ ರಾಜ, "ನೀನು ಅನ್ಯಾಯವಾಗಿ ಹಂಸ ಪಕ್ಷಿಯ ಮೊಟ್ಟೆಗಳನ್ನು ಅಪಹರಿಸಿರುವೆ. ನ್ಯಾಯವಾಗಿ ನೀನು ಅದರ ಮೊಟ್ಟೆಗಳನ್ನು ಅದಕ್ಕೆ ವಾಪಸ್ಸು ನೀಡು," ಎಂದು ಹೇಳಿದ.

ಇದನ್ನು ಕೇಳಿದ ಸಮುದ್ರ, ಗರುಡನಿಗೆ ನಮಸ್ಕರಿಸಿ, "ಪಕ್ಷಿಗಳ ಒಡೆಯ ಗರುಡನೇ ನಾನು ಉದ್ದೇಶಪೂರ್ವಕವಾಗಿ ಅದರ ಮೊಟ್ಟೆಗಳನ್ನು ಪಡೆದಿಲ್ಲ. ಅಲೆಗಳ ರೂಪದಲ್ಲಿ ಚಲಿಸುವುದು ನನ್ನ ನೈಸರ್ಗಿಕ ಸ್ವಭಾವ. ಹಾಗೆ ಚಲಿಸಿದಾಗ ನನ್ನ ಒಳಗಡೆ ಆ ಮೊಟ್ಟೆಗಳು ಬಂದಿರಬಹುದು. ಇದರಲ್ಲಿ ನನ್ನದೇನು ತಪ್ಪಿಲ್ಲ," ಎನ್ನುತ್ತಾನೆ. 

ಆಗ ಗರುಡ ರಾಜ, "ನಿನ್ನಿಂದ ಹಂಸ ಪಕ್ಷಿಯು ನಿರಂತರ ಮೊಟ್ಟೆಗಳು ಕಳೆದುಕೊಂಡಿದೆ. ಅದಕ್ಕಾಗಿಯೇ ಈ ಬಾರಿ ನಿನ್ನ ಅಲೆಗಳಿಗೆ ನಿಲುಕದ ಸುರಕ್ಷಿತ ಪ್ರದೇಶದಲ್ಲಿ ಮೊಟ್ಟೆಗಳನ್ನು ಇಟ್ಟರು, ಅಲ್ಲಿಂದಲೂ ನಿನ್ನ ಅಲೆಗಳು ಮೊಟ್ಟೆಗಳನ್ನು ಹೊಡೆದುಕೊಂಡು ಹೋಗಿವೆ. ‌ ನಿನ್ನಲ್ಲಿ ದುರುದ್ದೇಶವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಿನ್ನೊಳಗೆ ಮೊಟ್ಟೆಗಳು ಬಂದಿರುವುದು ಖಚಿತ.
 ಹೀಗಾಗಿ ಇನ್ನೊಂದು ಮರುಮಾತಾಡದೆ ಮೊಟ್ಟೆಗಳನ್ನು ಹಿಂದಿರುಗಿಸು. ಇಲ್ಲದಿದ್ದರೆ ಹಂಸ ಪಕ್ಷಿಯ ಸಂಕಲ್ಪದಂತೆ ನಾನೇ ನಿನ್ನನ್ನು ಬತ್ತಿಸಿಬಿಡುವೆ", ಎಂದು ಹೇಳುತ್ತಾನೆ. 

ಆಗ ಭಯದಿಂದ ನಡುಗಿದ ಸಮುದ್ರ ಮರು ಮಾತಾಡದೆ, ಹಂಸ ಪಕ್ಷಿಯ ಮೊಟ್ಟೆಗಳನ್ನು ಹಿಂದಿರುಗಿಸುತ್ತದೆ. 

ಹೀಗೆ ಹಂಸ ಪಕ್ಷಿ ತನ್ನ ಗಾತ್ರ, ತನ್ನ ಶಕ್ತಿ ಸಮುದ್ರದ ಮುಂದೆ ಏನೇನು ಅಲ್ಲದಿದ್ದರೂ, ಕೇವಲ ಅದರ ದೃಢ ಸಂಕಲ್ಪ ಹಾಗೂ ನಿರಂತರ ಪ್ರಯತ್ನದಿಂದ ತಾನು ಕಳೆದುಕೊಂಡ ಮೊಟ್ಟೆಗಳನ್ನು ಪುನಃ ಮರಳಿ ಪಡೆಯುತ್ತದೆ. ಹಾಗೂ ಸಮುದ್ರಕ್ಕೆ ತಕ್ಕುದಾದ ಪಾಠ ಕಲಿಸುತ್ತದೆ.

ಹಂಸ ಪಕ್ಷಿಯ ದೃಢ ಸಂಕಲ್ಪ ಹಾಗೂ ನಿರಂತರ ಪ್ರಯತ್ನದ ಹಿಂದೆ ಒಂದು ಸಂಗತಿ ಬಹಳ ಪ್ರಬಲವಾಗಿ ಕೆಲಸ ಮಾಡಿತು. ಅದುವೇ ಹಂಸ ಪಕ್ಷಿಗೆ ತನ್ನ ಮೇಲೆ ಇದ್ದಂತಹ ದೃಡವಾದ ನಂಬಿಕೆ. ಇಂತಹ ನಂಬಿಕೆ ಇಲ್ಲದಿದ್ದರೆ ಅದರ ಸಂಕಲ್ಪವು ಗಟ್ಟಿಯಾಗಿರುತ್ತಿರಲಿಲ್ಲ. ಹಾಗೂ ಅದು ನಿರಂತರ ಪ್ರಯತ್ನವನ್ನು ಸಹ ಮಾಡುತ್ತಿರಲಿಲ್ಲ. 

ಹಂಸ ಪಕ್ಷಿಗೆ ತನ್ನ ಮೇಲಿದ್ದ ನಂಬಿಕೆ ಮೊಟ್ಟೆ ಮರಳಿ ಪಡೆಯುವಂತೆ ಮಾಡಿತು. ಹಾಗೂ ಹಂಸ ಪಕ್ಷಿಯ ವ್ಯಕ್ತಿತ್ವದ ಕೊಲೆಯಾಗುವುದನ್ನು ರಕ್ಷಿಸಿತು.

ಗಾತ್ರ ಹಾಗೂ ಶಕ್ತಿಯಲ್ಲಿ ನಗಣ್ಯವಾದ ಹಾಗೂ ಯಾವುದೇ ದೈವಿ ಶಕ್ತಿಯಿಲ್ಲದ ಹಂಸ ಪಕ್ಷಿಯು ಸಮುದ್ರವನ್ನು ಬತ್ತಿಸುವ ಸಂಕಲ್ಪ ಮಾಡಿತು. ಬಲಿಷ್ಠ ನಂಬಿಕೆಯೇ ಅದರ ಕಾರ್ಯದ ಹಿಂದಿನ ಶಕ್ತಿ. 

 ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ನಿಭಾಯಿಸುವ ಇಂತಹ ನಂಬಿಕೆಯನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು. 

ಹಾಗೆಯೇ ಇನ್ನೊಬ್ಬರು ನಮ್ಮ ಮೇಲಿಟ್ಟ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎನ್ನುವುದನ್ನು, ನನ್ನ ಶಾಲೆಯ 6 ನೇ ತರಗತಿಯಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿ ಲೇಖನದ ಮೊದಲ ಭಾಗದಲ್ಲಿ ಹೇಳಿದ್ದೆ. 

ಈ ಘಟನೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ನನ್ನ ಮೇಲಿದ್ದ ಪ್ರೀತಿ ಅಭಿಮಾನಕ್ಕೆ ಗೌರವ ಸಮರ್ಪಿಸಲು ಆಹ್ವಾನಿಸಿದ ಕಾರ್ಯಕ್ರಮದಲ್ಲಿ ನಾನು, ನನ್ನ ಮುಂದಿನ ಜೀವನದ ಉದ್ದೇಶ ಕುರಿತು ಮಾಡಿದ ಘೋಷಣೆ, ಹಲವರಿಗೆ "ಒಂದು ಗುಬ್ಬಿ ಸಮುದ್ರವನ್ನು ಬತ್ತಿಸಲು ಮಾಡಿದ ಸಂಕಲ್ಪದಂತೆ" ಕಾಣಬಹುದು ಎನ್ನುವುದನ್ನು ಹೇಳಿದ್ದೆ. 

ಇದಕ್ಕೆ ಸಂಬಂಧಿಸಿದಂತೆ ಹಂಸ ಪಕ್ಷಿಯು ಸಮುದ್ರವನ್ನು ಬತ್ತಿಸುವ ಸಂಕಲ್ಪದ ಈ ಕಥೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ.

ನನ್ನ ಘೋಷಣೆಗೆ ಸಂಬಂಧಿಸಿದಂತೆ ನಾನು ಈಗ ಬಯಸಿರುವುದು ಹಂಸ ಪಕ್ಷಿಯಂತಹ ಅಚಲವಾದ, ದೃಢವಾದ ನಂಬಿಕೆ.

ಕಾರ್ಯಕ್ರಮದಲ್ಲಿ ಮಾಡಿದ ಘೋಷಣೆ ಏನು ? ಘೋಷಣೆಯ ಹಿಂದಿರುವ ಕಾರಣಗಳೇನು ? ಎನ್ನುವುದನ್ನು "ನಂಬಿಕೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ, ಭಾಗ -3" ರಲ್ಲಿ ಹೇಳುತ್ತೇನೆ. 

ತಾವು ಸಹ ತಮ್ಮ ಜೀವನದ ಮೇಲಿನ ಉತ್ತಮ ನಂಬಿಕೆ ಕಳೆದುಕೊಳ್ಳದಿರಲಿ ಎಂದು ಪ್ರಾರ್ಥಿಸುತ್ತಾ..

ಇದನ್ನು ಓದಿದ ತಮ್ಮೆಲ್ಲರಿಗೂ ವಂದನೆಗಳು. 

ಓಂ ನಮಃ ಶಿವಾಯ 

✍️ URAIN NAMAH 
(ಈ ಪದ ಸತ್ಯ ಯುಗದ ಮುನ್ನುಡಿ 
ಈ ಪದ ಯುಗ ಪರಿವರ್ತನೆಗೆ ನಾಂದಿ)

(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ.)

Comments

Popular posts from this blog

ಅಂಧ ಹೇಳವರು