ಪರಮವಂದನೆ ಶ್ಲೋಕ -1


ಕಣ್ಣು ಹುಡುಕುವುದು ಏನು ?

ಕಿವಿ ಬಯಸುವುದು ಏನು?

ನಾಲಿಗೆ ಇಚ್ಛಿಸುವುದು ಏನು ?

ಚರ್ಮ ಬಯಸುವುದು ಏನು?

ಮೂಗು ಹುಡುಕುವುದು ಏನು?

ಮನಸ್ಸು ಇಷ್ಟಪಡುವುದು ಏನು ?


ಸುಂದರ ದೃಶ್ಯಗಳ ಸಂತೋಷ ಕಣ್ಣು ಬಯಸುವುದು. 


ಸುಮಧುರ ರಾಗಗಳ ಆನಂದ ಕಿವಿ ಬಯಸುವುದು. 


ರುಚಿ ರುಚಿಯಾದ ಆಹಾರ ತಿನಿಸುಗಳನ್ನು ನಾಲಿಗೆ ಬಯಸುವುದು. 


ಸುಗಂಧದ ವಾಸನೆ ಮೂಗು ಬಯಸುವುದು.


ಮೃದುವಾದ ಮೆತ್ತನೆಯ ಸ್ಪರ್ಶ ಚರ್ಮ ಬಯಸುವುದು.


ತನ್ನ ಅಹಂಕಾರವನ್ನು ಪುಷ್ಟಿ ಗೊಳಿಸುವ ಹೊಗಳಿಕೆ, ಸತ್ಕಾರ, ಗೌರವ, ಮರ್ಯಾದೆಗಳನ್ನು ಮನಸ್ಸು ಬಯಸುವುದು. 


ನಮ್ಮ ನಿತ್ಯ ಕ್ರಿಯೆ. ಹೋರಾಟ, ಹಾರಾಟ, ಪ್ರಯತ್ನ ಎಲ್ಲವೂ ಇವುಗಳ ಹಿಂದೆಯೇ ಬಿದ್ದಿರುತ್ತದೆ.


ಮಗು ಇರುವಾಗಿನಿಂದ ಮುದುಕನಾಗುವವರೆಗೂ, ಹುಟ್ಟಿನಿಂದ ಸಾಯುವವರೆಗೆ ಇವುಗಳ ಚಿಂತೆಯೇ ನಮ್ಮನ್ನು ಕಾಡುತ್ತಿರುತ್ತದೆ. ಇವುಗಳನ್ನು ಪಡೆಯಲು ಹರ ಸಾಹಸ ನಡೆಯುತ್ತಿರುತ್ತದೆ. 


ನಮ್ಮ ಚಟ, ದುಶ್ಚಟ, ಹವ್ಯಾಸ, ಅಭ್ಯಾಸ ಎಲ್ಲವೂ ಇದರ ಹಿಂದೆಯೇ ಬಿದ್ದಿದೆ. 


ಯಾಕೆ ಹೀಗೆ ? ಎಂದು ಪ್ರಶ್ನಿಸಿದರೆ, ಉತ್ತರ ನಮಗೆಲ್ಲರಿಗೂ ಬೇಕಾಗಿರುವುದು ಸಂತೋಷ, ಸುಖ, ಆನಂದ ಖುಷಿ. 


ನಮನ್ನು ನಾವು ನಮ್ಮ ಜೀವನದ ಉದ್ದೇಶದ ಬಗ್ಗೆ ಪ್ರಶ್ನಿಸಿಕೊಂಡಾಗ, ನಮ್ಮೆಲ್ಲರಿಗೂ ಸಿಗುವ ಉತ್ತರವೇ,  ಸುಖ ಪಡುವುದು ಸಂತೋಷ ಪಡುವುದು, ಆನಂದ ಪಡುವುದು, ಖುಷಿಯಿಂದ ತೃಪ್ತಿಪಡುವುದು, ಇವೆ ನಮ್ಮ ಜೀವನದ ಪರಮ ಉದ್ದೇಶಗಳಿವೆ. ಇವುಗಳಿಗೆ ಕಣ್ಣು, ಕಿವಿ, ನಾಲಿಗೆ, ಮೂಗು, ಚರ್ಮ, ಮನಸ್ಸುಗಳೇ ದಾರಿಗಳು.


ಇದಕ್ಕಾಗಿ ಯಾರ್ಯಾರೋ, ಏನೇನೋ ಪ್ರಯತ್ನ ಮಾಡುತ್ತಾರೆ. ಅನೇಕ ಕೆಲಸಗಳು, ಚಟಗಳು , ದುಶ್ಚಟಗಳು, ಹವ್ಯಾಸ, ಅಭ್ಯಾಸಗಳ ಮೊರೆ ಹೋಗಿ ಅವುಗಳ ಗುಲಾಮರೇ ಆಗುತ್ತಾರೆ. 


ಏನೇನೋ ಪ್ರಯತ್ನ ಮಾಡಿದ ನಂತರ ಸುಖ, ಸಂತೋಷ, ಆನಂದ ಸಿಕ್ಕರು ಅದು ಶಾಶ್ವತವಾಗಿ ನಿಲ್ಲುವುದೇನು ?


ಇಲ್ಲ ಅನೇಕ ಪ್ರಯತ್ನಗಳ ನಂತರ ಸುಖ, ಸಂತೋಷ, ಆನಂದ, ಖುಷಿ ಸಿಕ್ಕರೂ ಅದು ಇರುವುದು ಸ್ವಲ್ಪ ಸಮಯದವರೆಗೆ ಮಾತ್ರ.


ಆ ಸ್ವಲ್ಪ ಸಮಯದ ನಂತರ ಮತ್ತೆ ಅದೇ ಬೇಜಾರುತನ, ಖಾಲಿ, ಖಾಲಿಯ ಅನುಭವ ಕಾಡುತ್ತದೆ.


ಇದಕ್ಕೆ ವಿರುದ್ಧವಾಗಿ ಸಂತೋಷ, ಸುಖ, ಖುಷಿಯ ಇನ್ನೊಂದು ಮಗ್ಗುಲು ದುಃಖ, ಕಷ್ಟ, ನೋವು ನಮ್ಮನ್ನು ಯಾವಾಗ ಆವರಿಸಬೇಕು ಎಂದು ಕಾಯ್ದುಕೊಂಡಿರುತ್ತವೆ. 


ಸಮಯ ಸಿಕ್ಕ ಕೂಡಲೇ ಅವುಗಳು ನಮ್ಮನ್ನು ಆವರಿಸಿಬಿಡುತ್ತದೆ. ಆಗ ಮತ್ತೆ ದುಃಖ, ಕಷ್ಟ, ನೋವುಗಳ ನರಳುವಿಕೆ ಆರಂಭ. 


ಈ ದೃಷ್ಟಿಯಿಂದ ನಮ್ಮ ಸುಖ ಸಂತೋಷ ಆನಂದದ ಹುಡುಕಾಟದ ದಾರಿಗಳ ಬಗ್ಗೆ ನಾವು ಒಮ್ಮೆ ವಿಮರ್ಶೆ ಮಾಡಿಕೊಳ್ಳಬೇಕು. 


ಈ ದಾರಿ ಎಷ್ಟು ಸರಿ ? ಎಷ್ಟು ತಪ್ಪು ? ಇದು ತಪ್ಪು ದಾರಿಯಾದರೆ ಸರಿ ದಾರಿ ಯಾವುದು ?


ಈ ಪ್ರಶ್ನೆಗಳಿಗೆ ಗುರುವಂದನೆ ಶ್ಲೋಕದ ಮೊದಲ ಸಾಲುಗಳು ಉತ್ತರ ನೀಡುತ್ತವೆ.


ಅದುವೇ


ಬ್ರಹ್ಮಾನಂದಂ ಪರಮ ಸುಖದಂ

ಕೇವಲಂ ಜ್ಞಾನ ಮೂರ್ತಿಂ


ಎಲ್ಲರ ಜೀವನದ ಹುಡುಕಾಟ ಆನಂದ ಮತ್ತು ಸುಖ. ಆದರೆ ಇಲ್ಲಿ ಹೇಳುತ್ತಿರುವುದು ಸಾಧಾರಣ ಆನಂದ ಸುಖದ ಬಗ್ಗೆ ಅಲ್ಲ. ಬ್ರಹ್ಮಾನಂದ, ಪರಮ ಸುಖದ ಬಗ್ಗೆ. 


ಆನಂದದಲ್ಲಿ ಶ್ರೇಷ್ಠ ಆನಂದ ಬ್ರಹ್ಮಾನಂದ. ಸುಖದಲ್ಲಿ ಶ್ರೇಷ್ಠ ಸುಖ ಪರಮಸುಖ. ಇವುಗಳು ನಮಗೂ ಲಭಿಸಲಿವೆ ಎಂದು ಈ ಶ್ಲೋಕ ಹೇಳುತ್ತದೆ. 


ಅದು ಹೇಗೆ ? 


ಕೇವಲ ಜ್ಞಾನಮೂರ್ತಿಂ


ಕೇವಲ ಜ್ಞಾನದಿಂದ ನಮಗೆ ಬ್ರಹ್ಮಾನಂದ ಹಾಗೂ ಪರಮ ಸುಖ ಲಭಿಸಲಿದೆ. ಈ ಜ್ಞಾನ ಇರುವುದು, ಜ್ಞಾನ ಮೂರ್ತಿಗಳಾದ ಗುರುವಿನ ಹತ್ತಿರ.  


ನಾವು ಗುರು ಮಾರ್ಗಿಗಳಾಗಿ  ಕಷ್ಟ ನೋವು ದುಃಖಗಳಿಗೆ ಕಾರಣವಾಗುವ ಲೌಕಿಕ ಆನಂದ, ಲೌಕಿಕ ಸುಖಗಳಿಂದ ಬ್ರಹ್ಮಾನಂದ, ಬ್ರಹ್ಮ ಸುಖದ ಕಡೆಗೆ ಹೊರಳೋಣ. ಏಕೆಂದರೆ ಯಾವ ಪ್ರಾಣಿ ಜನ್ಮದಲ್ಲಿಯೂ ಬ್ರಹ್ಮಾನಂದ, ಪರಮ ಸುಖ ಹೊಂದುವ ದಾರಿಯಲ್ಲಿ ಚಲಿಸಲು ಸಾಧ್ಯವಿಲ್ಲ. ಮನುಷ್ಯ ಜನ್ಮದಲ್ಲಿ ಮಾತ್ರ ಈ ಮಾರ್ಗ ಸಾಧ್ಯ. 


ಗುರುಗಳ ಕೃಪೆಯಿಂದ ನಾವು ಇಲ್ಲಿ ಮುನ್ನಡೆಯಲು ಸಾಧ್ಯ.


ಇದನ್ನು ಈಗ ಹೇಳುತ್ತಿರುವುದಕ್ಕೆ ಕಾರಣವೆಂದರೆ, ನಮಗೆ ನಮ್ಮ ಜೀವನದ ಪರಮ ಗುರಿಯಾಗಿರುವ ಬ್ರಹ್ಮಾನಂದ, ಪರಮ ಸುಖಗಳನ್ನು ನೀಡುವ ಗುರುಗಳ ಮಹಿಮೆಯನ್ನು ಕೊಂಡಾಡುವ, ಆದರಿಸುವ, ಗೌರವಿಸುವ, ಗುರುಗಳಿಗೆ ಧನ್ಯವಾದ ಹೇಳುವ, ಕೃತಜ್ಞತೆ ವ್ಯಕ್ತಪಡಿಸುವ ದಿನವೇ ಗುರು ಪೂರ್ಣಿಮೆ.


ಇದು ಇದೇ 10 ನೇ ಜುಲೈ 2025 ಗುರುವಾರದಂದು ಬರಲಿದೆ. ಅಂದು ನಮ್ಮ ಗುರುಗಳನ್ನು ಆರಾಧಿಸಿ ಅವರಿಗೆ ಕೃತಜ್ಞತೆ ಸಲ್ಲಿಸೋಣ.


 ಗುರುವಂದನೆ ಶ್ಲೋಕದ 

ಮೊದಲ ಸಾಲುಗಳು

ಬ್ರಹ್ಮಾನಂದಂ ಪರಮ ಸುಖದಂ

ಕೇವಲಂ ಜ್ಞಾನ ಮೂರ್ತಿಂ ಹೇಳುವುದು ಇದನ್ನೇ ‌.


ಬ್ರಹ್ಮಾನಂದ ಪರಮ ಸುಖ ಹೊಂದಿದವರು ಹಾಗೂ ಅದನ್ನು ಬೇರೆಯವರಿಗೆ ದಯಪಾಲಿಸುವವರು ಜ್ಞಾನ ಮೂರ್ತಿಗಳಾದ ಗುರುಗಳಾಗಿದ್ದಾರೆ. ಅವರಿಗೆ ಕೃತಜ್ಞತೆ, ಗೌರವ, ಧನ್ಯವಾದ ಅರ್ಪಿಸಿ ನಾವು ಆ ಮಾರ್ಗದಲ್ಲಿ ನಡೆಯೋಣ. ಹಾಗೂ ಜೀವನದ ಪರಮ ಉದ್ದೇಶಿಸಿವಾಗಿರುವ ಬ್ರಹ್ಮಾನಂದ ಪರಮ ಸುಖಗಳನ್ನು ಪಡೆಯೋಣ. 


ಎಲ್ಲರಿಗೂ ವಂದನೆಗಳು. ಎಲ್ಲರಿಗೂ ಬ್ರಹ್ಮಾನಂದ, ಪರಮ ಸುಖ ಲಭಿಸಲಿ.


(ಮುಂದಿನ ಸಾಲುಗಳ ಅರ್ಥವನ್ನು ಮುಂದಿನ ದಿನಗಳಲ್ಲಿ ಸಾಧ್ಯವಾದರೆ ನೋಡೋಣ.


ಬ್ರಹ್ಮಾನಂದಂ ಪರಮ ಸುಖದಂ, ಕೇವಲಂ ಜ್ಞಾನಮೂರ್ತಿಮ್ |


ದ್ವಂದ್ವಾತೀತಂ, ಗಗನ ಸದೃಶಂ, ತತ್ವಮಸ್ಯಾಽಽಽಽಽದ್ಯಾಲಕ್ಷ್ಯಮ್ |


ಏಕಂ ನಿತ್ಯಂ ವಿಮಲಂ, ಅಚಲಂ, ಸರ್ವಧೀ ಸಾಕ್ಷಿಭೂತಮ್ |


ಭಾವಾತೀತಂ ತ್ರಿಗುಣರಹಿತಂ, ಸದ್ಗುರುಂ ತಂ ನಮಾಮಿ ||)


ಓಂ ನಮಃ ಶಿವಾಯ


✍️ URAIN NAMAH 


(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್)

Comments

Popular posts from this blog

ಅಂಧ ಹೇಳವರು