ಗುರು ಏಕೆ ಬೇಕು ಬಾಳಲಿ ?


ಒಬ್ಬ ಪ್ರವಚನಕಾರರು ಪ್ರವಚನ ನೀಡುತ್ತಾ, ಜನರನ್ನು ಉದ್ದೇಶಿಸಿ *ನಿಗುರಾ* ಎನ್ನುವುದು ದೊಡ್ಡ ಅಪಮಾನಕರ ಶಬ್ದ ನೀವು ನಿಮ್ಮ ಜೀವನದಲ್ಲಿ *ನಿಗುರಾ* ಎಂದು ಕರೆಸಿಕೊಳ್ಳಬಾರದು ಎಂದು ಹೇಳಿದರು.


ಸಭಿಕರಲ್ಲಿದ್ದ ಒಬ್ಬ ವ್ಯಕ್ತಿ, ನಿಗುರಾ ಎಂದರೇನು ? ಎಂದು ಕೇಳುತ್ತಾನೆ. ಆಗ ಅವರು, ಯಾರು ತಮ್ಮ ಜೀವನದಲ್ಲಿ ಗುರುವನ್ನು ಹೊಂದಿರುವುದಿಲ್ಲವೋ, ಆತನೇ ನಿಗುರಾ ಎನ್ನುತ್ತಾರೆ.


ಆಗ ಆತ ಅವರ ಮಾತನ್ನು ಅಪಹಾಸ್ಯ ಮಾಡುತ್ತಾ ಗುರು ಹೊಂದದೆ ಇರುವುದು ಹೇಗೆ ಒಂದು ನಿಂದನೆಯ ಶಬ್ದವಾಗುತ್ತದೆ ? ಅಷ್ಟಕ್ಕೂ ಜೀವನದಲ್ಲಿ ಗುರುವಿನ ಅವಶ್ಯಕತೆ ಏನಿದೆ ? ಎಂದು ಕೇಳುತ್ತಾನೆ. 


ಆಗ ಪ್ರವಚನಕಾರರು, ಒಂದು ಕತೆ ಹೇಳುತ್ತೇನೆ, ಕೇಳು ಆಗ ಗುರುವಿನ ಅವಶ್ಯಕತೆ ತಿಳಿಯುತ್ತದೆ, ಎಂದು ಒಂದು ಕತೆಯನ್ನು ಹೇಳಲು ಆರಂಭಿಸುತ್ತಾರೆ.. 


ಒಬ್ಬ ವ್ಯಕ್ತಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಕೆಲವೊಂದು ಸಾಮಾನುಗಳ ಗಂಟನ್ನು ಹೊತ್ತುಕೊಂಡು ಹೋಗುತ್ತಿರುತ್ತಾನೆ. ಆಗ ಆತನ ಸ್ನೇಹಿತರಾದ ಇನ್ನೊಂದು ಹಳ್ಳಿಯ ವ್ಯಕ್ತಿಗಳು ಬಂಡಿಯ ಮೇಲೆ ಕುಳಿತು ಆತನ ಎದುರಾಗುತ್ತಾರೆ. 


ಬಂಡಿಯಲ್ಲಿದ್ದ ಸ್ನೇಹಿತರು ಆತನ ಕುಶಲವನ್ನು ವಿಚಾರಿಸಿ, ಎಲ್ಲಾ ಮಾತು ಮುಗಿದ ನಂತರ "ಏನು ನೀನೆ ಸಾಮಾನನ್ನು ಹೊತ್ತುಕೊಂಡು ಹೊರಟಿರುವಿಯಲ್ಲ. ನಿನ್ನಲ್ಲಿ ಒಂದು ಕತ್ತೆ ಇತ್ತಲ್ಲ. ಅದಕ್ಕೆ ಹುಷಾರಿಲ್ಲವೇನು ?" ಎಂದು ಕೇಳುತ್ತಾರೆ. ಆಗ ಆತ, "ಕತ್ತೇನಾ ? ಅದು ನದಿಯ ನೀರನ್ನು ದಾಟುವಾಗ ಬೆಂಕಿ ಹತ್ತಿತ್ತು. ಆ ಬೆಂಕಿಯಲ್ಲಿ ಕತ್ತೆ ಸತ್ತೊಯ್ತು ಎಂದು ಹೇಳಿದ.  


ಇದು ಕೇಳಿದವರಿಗೆ ಆಶ್ಚರ್ಯವಾಯಿತು. ನೀರೇ ಬೆಂಕಿಯನ್ನು ನಂದಿಸಲು ಉಪಯೋಗಿಸುತ್ತಾರೆ. ನೀರಿಗೆ ಬೆಂಕಿ ಹೇಗೆ ಬಿತ್ತು ? ಎಂದು ಆತನನ್ನು ಕೇಳುತ್ತಾರೆ. ಆಗ ಆತ ಈಗ ಸಂಜೆಯಾಗುತ್ತಿದೆ. ನನಗೆ ಬೇಗ ಆ ಊರಿಗೆ ತಲುಪುವುದಿದೆ, ಆಮೇಲೆ ಯಾವಾಗಲಾದರೂ ಸಿಕ್ಕಾಗ ಹೇಳುತ್ತೇನೆ, ಎಂದು ಆತ ಬೇಗನೆ ಅಲ್ಲಿಂದ ಹೊರಡುತ್ತಾನೆ. 


ಆದರೆ ಇದನ್ನು ಕೇಳಿದ ಬಂಡೆಯಲ್ಲಿರುವ ವ್ಯಕ್ತಿಗಳಿಗೆ, ಇದು ಒಂದು ಬಿಡಿಸಲಾರದ ಕಗ್ಗಂಟಾಯಿತು. ಇದನ್ನು ಹೇಗಾದರೂ ತಿಳಿದುಕೊಳ್ಳಲೇಬೇಕೆಂದು ತೀರ್ಮಾನಿಸಿ, ತಮ್ಮ ಬಂಡಿಯನ್ನು ಅಲ್ಲಿಯೇ ಸಮೀಪದಲ್ಲಿದ್ದ ಗುರುವಿನ ಆಶ್ರಮಕ್ಕೆ ತೆಗೆದುಕೊಂಡು ಹೋಗುತ್ತಾರೆ. 


ಆಶ್ರಮಕ್ಕೆ ತಲುಪಿದ ನಂತರ ಗುರುಗಳಿಗೆ ವಂದಿಸುತ್ತಾರೆ. ಕುಶಲ ಮಾತುಗಳನ್ನು ಆಡಿದ ನಂತರ ಆ ವ್ಯಕ್ತಿಗಳು, "ಗುರುಗಳೇ ಬಿಡಿಸಲಾರದ ಒಂದು ಕಗ್ಗಂಟು ನಮ್ಮ ತಲೆಯನ್ನು ಕೊರೆಯುತ್ತಿದೆ. ಆ ಕಗ್ಗಂಟನ್ನು ಬಿಡಿಸಲು ಬಂದಿದ್ದೇವೆ", ದಯವಿಟ್ಟು ಇದನ್ನು ಪರಿಹರಿಸಿ ಎಂದು ಹೇಳುತ್ತಾರೆ. 


ಆಗ ಯಾವ ಕಗ್ಗಂಟು ? ಎಂದು ಗುರುಗಳು ಕೇಳಿದಾಗ, ಆ ಜನರು, "ಈಗ ತಾನೇ ನಮ್ಮ ಸ್ನೇಹಿತ ತನ್ನ ಕತ್ತೆ ನೀರಿನಲ್ಲಿ ಬೆಂಕಿ ತಾಗಿಸಿಕೊಂಡು, ಬೆಂಕಿಯಲ್ಲಿ ಸುಟ್ಟು ಸತ್ತೊಯ್ತು, ಎಂದು ಹೇಳಿದ. ಇದು ಹೇಗೆ ನೀರಿನಲ್ಲಿ ಬೆಂಕಿ ಹೊತ್ತಿಕೊಂಡಿತು ? ಆ ಬೆಂಕಿಯಲ್ಲಿ ಕತ್ತೆ ಹೇಗೆ ಸತ್ತಿತ್ತು ?ಎನ್ನುವುದು ಗೊತ್ತಾಗುತ್ತಿಲ್ಲ. ಇದನ್ನು ತಿಳಿದುಕೋಳ್ಳಲು ನಿಮ್ಮಲ್ಲಿ ಬಂದಿದ್ದೇವೆ", ಎನ್ನುತ್ತಾರೆ. 


ಆಗ ಗುರುಗಳು ಸ್ವಲ್ಪ ಹೊತ್ತು ಶಾಂತರಾಗಿ, ಪುನಃ ಮಾತನ್ನು ಆರಂಭಿಸುತ್ತಾರೆ. "ನೀರು ಬೆಂಕಿಯನ್ನು ನಂದಿಸುತ್ತದೆ. ಇದೇನೋ ಸರಿ. ಆದರೆ ಒಂದು ವಸ್ತು ನೀರಿನ ಸಂಪರ್ಕಕ್ಕೆ ಬಂದಾಗ ಬೆಂಕಿ ಹೊತ್ತಿಕೊಳ್ಳುತ್ತದೆ", ಎನ್ನುತ್ತಾರೆ. ಆಗ ಅದು ಯಾವುದು ಗುರುಗಳೇ ? ಎಂದು ಆ ವ್ಯಕ್ತಿಗಳು ಕೇಳುತ್ತಾರೆ. 


ಆಗ ಗುರುಗಳು, "ಕತ್ತೆಯ ಮೇಲೆ ಸುಣ್ಣದ ಮೂಟೆಯನ್ನು ಹೇರಿಕೊಂಡು ನಿಮ್ಮ ಸ್ನೇಹಿತ ನದಿ ದಾಟುತ್ತಿರಬಹುದು. ಆಗ ಸುಣ್ಣ ಮತ್ತು ನೀರು ಒಂದಕ್ಕೊಂದು ಬೆರೆತು ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿಯಲ್ಲಿ ಕತ್ತೆ ಸತ್ತಿರಬಹುದು", ಎಂದು ಹೇಳುತ್ತಾರೆ. ಇದನ್ನು ಕೇಳಿದ ಅವರು ಅಬ್ಬಾ !! ಹೌದು, ಎಂದು ನಿಟ್ಟುಸಿರು ಬಿಡುತ್ತಾರೆ. ಹೀಗೆ ಆ ವ್ಯಕ್ತಿಗಳ ತಲೆ ತಿನ್ನುತ್ತಿದ್ದ ವಿಷಯ ಸರಳವಾಗಿ ತಿಳಿಯಿತು. ಇಂತಹ ಗುರುಗಳನ್ನು ಪಡೆದು ನಾವೇ ಧನ್ಯ ಎಂದು ಯೋಚಿಸುತ್ತಾ, ಗುರುಗಳಿಗೆ ಧನ್ಯವಾದಗಳನ್ನು ಹೇಳಿ ಆ ವ್ಯಕ್ತಿಗಳು ತಮ್ಮ ಪ್ರಯಾಣ ಮುಂದುವರಿಸುತ್ತಾರೆ. 


ಇಷ್ಟು ಕತೆಯನ್ನು ಹೇಳಿ ಪ್ರವಚನಕಾರರು, ಆ ವ್ಯಕ್ತಿಗೆ ಈಗ ನಿನಗೆ ಗುರು ಏಕೆ ಬೇಕು ಎನ್ನುವುದು ತಿಳಿಯಿತಲ್ಲ? ಎಂದು ಕೇಳುತ್ತಾರೆ. ಆಗ ಆ ವ್ಯಕ್ತಿ ವಿನಮ್ರತೆಯಿಂದ ತಲೆಯಾಡಿಸುತ್ತಾನೆ.


ಇಲ್ಲಿ ಪ್ರವಚನಕಾರರು ಹೇಳಿದ ಕತೆಯಂತೆ, ನಮ್ಮ ಜೀವನದಲ್ಲಿಯೂ ಅನೇಕ ವಿಚಾರಗಳು ಜೀವನದ ಕಗ್ಗಂಟಾಗಿರುತ್ತವೆ. ಅವುಗಳ ಬಗ್ಗೆ ಸರಿಯಾಗಿ ತಿಳಿಯದೆ ಪ್ರಾಣಿಗಳಂತೆ ಕೇವಲ ಆಹಾರ, ಭಯ, ನಿದ್ರೆ, ಮೈಥುನಗಳಿಗಾಗಿ ನಾವು ಜೀವಿಸುತ್ತಿರುತ್ತೇವೆ. ಅನೇಕ ಸಲ ನಮಗೆ ಎಲ್ಲವೂ ತಿಳಿದಿದೆ ಎಂದೇ ಅಹಂಕಾರದಲ್ಲಿ ಬದುಕುತ್ತಿರುತ್ತೇವೆ. ಆದರೆ ಗುರುವಿನ ಹತ್ತಿರ ಹೋದಾಗ ನನಗೆ ಏನೂ ತಿಳಿದಿಲ್ಲ ಎನ್ನುವ ಭಾವನೆ ಬರುತ್ತದೆ. 


ಇದಕ್ಕೆ ಒಂದು ಸಣ್ಣ ಉದಾಹರಣೆ. ನಾವೆಲ್ಲರೂ ಸಾಮಾನ್ಯವಾಗಿ ನಮಗೆ ಕಣ್ಣು ಜ್ಞಾನವನ್ನು ನೀಡುತ್ತದೆ ಎಂದು ಭಾವಿಸಿದ್ದೇವೆ. ಆದರೆ ಮುಖ್ಯವಾದ ಸಂಗತಿಗಳಲ್ಲಿ ನಮಗೆ ಕಣ್ಣು ಎನ್ನುವುದೇ ಅಜ್ಞಾನಕ್ಕೆ ಕಾರಣವಾಗಿರುತ್ತದೆ. 


ಇದಕ್ಕೊಂದು ಉದಾಹರಣೆಯೆಂದರೆ , ಕಣ್ಣಿನಿಂದ ನೋಡಿದಾಗ ಸೂರ್ಯ ದೇವರೇ ಭೂಮಿ ಸುತ್ತಾ ತಿರುಗುವಂತೆ ಕಾಣುತ್ತದೆ. ನಾವು ಇಲ್ಲಿ ಕಣ್ಣನ್ನೇ ಜ್ಞಾನದ ಸಾಧನವಾಗಿ ಪರಿಗಣಿಸಿದರೆ ನಾವು ಮೂರ್ಖರಾಗುತ್ತೇವೆ.


ಏಕೆಂದರೆ ನಿಜಕ್ಕೂ ಭೂ ತಾಯಿಯೇ ಸೂರ್ಯ ದೇವರ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಹೊರತು ಸೂರ್ಯ ದೇವರು ಭೂಮಿಯ ಸುತ್ತ ಪ್ರದಕ್ಷಿಣೆ ಹಾಕುವುದಿಲ್ಲ. 


ಇಂತಹ ವಿಷಯಗಳು ನಮಗೆ ಗುರು ಇಲ್ಲದಿದ್ದರೆ ತಿಳಿಯುವುದಿಲ್ಲ. ಹೀಗಾಗಿಯೇ ನಮ್ಮೆಲ್ಲರ ಜೀವನದಲ್ಲಿ ಗುರು ಬೇಕು. 


ಒಂದು ಇರುವೆ ತನ್ನ ಸ್ವ ಸಾಮರ್ಥ್ಯದಿಂದ ಬೆಂಗಳೂರಿನಿಂದ ದೆಹಲಿ ತಲುಪಬೇಕಾದರೆ ಎಷ್ಟೋ ಜನ್ಮಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆ ಇರುವೆಯನ್ನು ದೆಹಲಿಗೆ ಹೋಗುವ ವಿಮಾನದಲ್ಲಿ ಕೂಡಿಸಿದಾಗ ಕೆಲವು ಗಂಟೆಗಳಲ್ಲಿ ದೆಹಲಿ ತಲುಪುತ್ತದೆ. ಈ ಮೂಲಕ ಅದರ ಸಮಯ, ಶಕ್ತಿ ಉಳಿತಾಯವಾಗುತ್ತದೆ. ಇದೇ ರೀತಿ ನಾವು ನಮ್ಮ ಸ್ವಸಾಮರ್ಥ್ಯದಿಂದ ಮನುಷ್ಯ ಜನ್ಮದ ಗುರಿ ತಲುಪಲು ಜನ್ಮಗಳೇ ಬೇಕಾಗುತ್ತದೆ. ಅದೇ ನಾವು ಗುರುವೆನ್ನುವ ವಿಮಾನದ ಶರಣು ಹೋದಾಗ ನಮ್ಮ ಜೀವನದ ಗುರಿ ತಲುಪಲು ಬಹಳಷ್ಟು ಸಮಯ, ಶಕ್ತಿಯ ಉಳಿತಾಯವಾಗುತ್ತದೆ. ಹೀಗಾಗಿ ನಮ್ಮ ಜೀವನದಲ್ಲಿ ಗುರು ಬೇಕು.


ಇನ್ನೂ ರಾಮಕೃಷ್ಣ ಪರಮಹಂಸರ ಜೀವನವನ್ನು ನೋಡಿದಾಗ ಗುರು ಏಕೆ ಅನಿವಾರ್ಯ ? ಎನ್ನುವುದು ತಿಳಿಯುತ್ತದೆ. ರಾಮಕೃಷ್ಣ ಪರಮಹಂಸರು ಎಷ್ಟೊಂದು ಉನ್ನತ ಭಕ್ತರಾಗಿದ್ದರೆಂದರೆ, ಸಾಕ್ಷಾತ ಕಾಳಿ ಮಾತೆಯೇ ಅವರಿಗೆ ದರ್ಶನ ಕೊಡುತ್ತಿದ್ದರು. ಆದಾಗ್ಯೂ ಕಾಳಿ ಮಾತೆ ಆತ್ಮ ಸಾಕ್ಷಾತ್ಕರಕ್ಕಾಗಿ, ರಾಮಕೃಷ್ಣರಿಗೆ ತೋತಾಪುರಿ ಗುರುಗಳ ಶಿಷ್ಯತ್ವ ಪಡೆಯಲು ಹೇಳುತ್ತಾರೆ. ಆಗ ಸಾಕ್ಷಾತ ದೇವರ ದರ್ಶನವಾಗಿದ್ದರೂ ಸಹ ರಾಮಕೃಷ್ಣ ಪರಮಹಂಸರು ತೋತಾಪುರಿ ಗುರುಗಳ ಶಿಷ್ಯತ್ವ ಪಡೆಯುತ್ತಾರೆ. ಇದರಿಂದ ಗುರುವಿನ ಮಹತ್ವ ಏನು ? ಗುರು ಏಕೆ ಅನಿವಾರ್ಯ ಎನ್ನುವುದು ನಮಗೆ ತಿಳಿಯುತ್ತದೆ. 


ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲಿ "ನಾನು ಯಾರು?" ಎನ್ನುವ ತನ್ನರಿವನ್ನು ಮೂಡಿಸುವ ಸಲುವಾಗಿ ಹಾಗೂ ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುವದಕ್ಕಾಗಿ ಗುರುವಿನ ಅವಶ್ಯಕತೆಯಿದೆ.


ಪ್ರವಚನಕಾರರು ಹೇಳಿದಂತೆ ನಿಗುರಾ ಎನ್ನುವುದು ಮನುಷ್ಯ ಮಾತ್ರರಾದವರಿಗೆ ಒಂದು ನಿಂದನೀಯ ಪದ. 


ಇದರ ಅರ್ಥವೇನೆಂದರೆ, "ಆಹಾರ, ಭಯ, ನಿದ್ರಾ, ಮೈಥುನದ ಚಕ್ರದಲ್ಲಿಯೇ ಪ್ರಾಣಿಗಳಂತೆ ಬದುಕುತ್ತಿರುವವರೇ ನಿಗುರಾಗಳು. ಮನುಷ್ಯ ಜೀವನದ ಪ್ರಯಾಣ ಇನ್ನೂ ಯಾರಲ್ಲಿ ಆರಂಭವಾಗಿಲ್ಲವೋ ಹಾಗೂ ಮನುಷ್ಯ ಜನ್ಮದಲ್ಲಿ ಮಾತ್ರ ಸಾಧ್ಯವಿರುವ ಪರಮಾತ್ಮನನ್ನು ಸೇರುವ ಜ್ಞಾನದ ಬಾಗಿಲು ಯಾರ ಜೀವನದಲ್ಲಿ ಇನ್ನೂ ತೆರೆದಿಲ್ಲವೋ ಅವರು ನಿಗುರಾ.*


ಆದ್ದರಿಂದ ನಾವೆಲ್ಲರೂ ನಮ್ಮ ಜೀವನದಲ್ಲಿ ಗುರುಗಳನ್ನು ಹೊಂದೋಣ. ಅವರು ಮಾಡುತ್ತಿರುವ ಸೇವೆಗೆ ಕೃತಜ್ಞತೆ ಸಲ್ಲಿಸಿ, ಅವರ ಕೃಪೆಗೆ ಪಾತ್ರರಾಗಿ ಮನುಷ್ಯರಿಂದ ಮಾತ್ರ ಸಾಧ್ಯವಿರುವ ಜ್ಞಾನದ ಮಾರ್ಗದಲ್ಲಿ ಮುನ್ನಡೆಯೋಣ.


ಎಲ್ಲರಿಗೂ ಗುರುಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು. 


✍️ URAIN NAMAH 


(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್)

Comments

Popular posts from this blog

ಅಂಧ ಹೇಳವರು