ನಾಗರ ಪಂಚಮಿಯ ನಿಗೂಢ ರಹಸ್ಯ.


ಪ್ರಶ್ನೆ: ಜಗತ್ತಿನಲ್ಲಿ ಯಾವುದು ಅತಿ ಹೆಚ್ಚು ದೂರ ?


ಯಾವುದು ಹೆಚ್ಚು ದೂರ ಎನ್ನುವ ಪ್ರಶ್ನೆ ಯಾರನ್ನಾದರೂ ಕೇಳಿದಾಗ, ಅನೇಕ ಜನರು ಅನೇಕ ಉತ್ತರಗಳನ್ನು ಕೊಡಬಹುದು.


 ಕೆಲವರಿಗೆ ಬೆಂಗಳೂರು ದೂರ ಆಗಿರಬಹುದು. ಕೆಲವರಿಗೆ ದೆಹಲಿ ದೂರ ಆಗಿರುತ್ತದೆ. ಕೆಲವರು ಇಂಗ್ಲೇಂಡ ದೂರ ಎನ್ನಬಹುದು. ಕೆಲವರು ಅಮೇರಿಕಾ ದೂರ ಎನ್ನಬಹುದು. 


ಹೀಗೆ ಅನೇಕರು ಅನೇಕ ರೀತಿಯಲ್ಲಿ ದೂರದ ಸ್ಥಳಗಳನ್ನು ಹೇಳಬಹುದು. ಆದರೆ (ನಮ್ಮ ಚೈತನ್ಯ, ಪ್ರಜ್ಞೆಗೆ) ಇವೆಲ್ಲಕ್ಕಿಂತಲೂ ದೂರವಾಗಿ ಇರುವುದು ಕೇವಲ ನಾಲ್ಕು, ಐದು ಫೀಟ್ ಉದ್ದ ಇರುವ ಒಂದು ಸ್ಥಳ. 


ಇದು ವಿಚಿತ್ರವಾದರು, ಆಶ್ಚರ್ಯಕರವಾದರೂ ಇದೆ ಸತ್ಯ. ಜಗತ್ತಿನಲ್ಲಿ ಪ್ರಯಾಣಕ್ಕೆ ಅತಿ ಹೆಚ್ಚು ಸಮಯ ತೆಗೆದುಕೊಳ್ಳುವ ದೂರದ ಸ್ಥಳ ಎಂದರೆ ಇದೆ ಆಗಿದೆ. 


ಕೆಲವು ಸ್ಥಳಗಳಿಗೆ ತಲುಪಲು ಅನೇಕ ಗಂಟೆಗಳು ಬೇಕಾಗಬಹುದು. ಇನ್ನೂ ಕೆಲವು ಸ್ಥಳಗಳನ್ನು ತಲುಪಲು ದಿನಗಳು ಬೇಕಾಗಬಹುದು. ಕೆಲವಕ್ಕೆ ತಿಂಗಳು ವರ್ಷಗಳು ಬೇಕಾಗಬಹುದು. 


ಆದರೆ ಈಗ ಹೇಳುತ್ತಿರುವ ಸ್ಥಳಕ್ಕೆ ತಲುಪಲು‌ ಅನೇಕ ಜನ್ಮ ಜನ್ಮಗಳೇ ಬೇಕಾಗುತ್ತದೆ. ಅಷ್ಟೊಂದು ಸಮಯ ಬೇಕು, ಆದರೆ ಅದು ಇರುವ ಉದ್ದ ಬಹಳ ಕಡಿಮೆ. ಇದೇನು ವಿಚಿತ್ರ. ಅದು ಯಾವುದು ? ಅದು ಎಲ್ಲಿದೆ ? ಎನ್ನುವ ಕುತೂಹಲ ನಮ್ಮಲ್ಲಿ ಮೂಡಬಹುದು. 


ಅದು ಎಲ್ಲಿಯೋ ಬೇರೆ ಕಡೆ ಇಲ್ಲ. ನಮ್ಮಲ್ಲಿಯೇ ಇದೆ. 


ಅದುವೇ ಇಂದಿನ ನಾಗರ ಪಂಚಮಿ ಹಬ್ಬದ ಹಿಂದಿರುವ ನಿಗೂಢ ರಹಸ್ಯ.


ಆ ದೂರ ಪ್ರಯಾಣದ ಸ್ಥಳ ಯಾವುದೆಂದರೆ, ಅದೇ ನಮ್ಮ ಬೆನ್ನು ಮೂಳೆಯ ಕೆಳಗಿನ ಕೊನೆಯಿಂದ ನಮ್ಮ ತಲೆಯ ತುದಿಯವರೆಗಿರುವ ಸ್ಥಳ, ಬ್ರಹ್ಮ ರಂದ್ರ. 


ನಮ್ಮ ದೇಹದ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ಪ್ರಮುಖ ನಾಡಿ ಇಲ್ಲಿದೆ. ಅದೇ ಸುಷುಮ್ನಾ ನಾಡಿ. ಈ ನಾಡಿ ಬೆನ್ನು ಮೂಳೆಯಲ್ಲಿ ಇದೆ. ಬೆನ್ನು ಮೂಳೆಯ ಕೆಳಗೆ ಪ್ರಜನನದ ದಿವ್ಯಶಕ್ತಿಯಿದೆ. (ಇದರಿಂದ ಇನ್ನೊಂದು ಮಾನವನನ್ನೇ ಪುನರುತ್ಪತ್ತಿ ಮಾಡುತ್ತದೆ .)


ಈ ಶಕ್ತಿಯೂ ಒಂದು ಕಲ್ಪನೆಯಂತೆ ಸುರುಳಿ ಸುತ್ತಿಕೊಂಡಿರುವ ಹಾವಿನ ರೀತಿ ಬೆನ್ನು ಮೂಳೆಯ ಕೆಳಗೆ ಇದೆ. ಈ ಶಕ್ತಿಯನ್ನು ಬಡಿದೆಬ್ಬಿಸಿ ಶಿರದ ತುದಿಯಲ್ಲಿರುವ ಬ್ರಹ್ಮ ರಂದ್ರ ಸ್ಥಾನವನ್ನು ತಲುಪಿಸಬೇಕು. ಆಗ ಮನುಷ್ಯ ಜನ್ಮದ ಉದ್ದೇಶ ಪೂರ್ಣಗೊಳ್ಳುತ್ತದೆ. 


ಆಗ ಜೀವ ಶಿವನಾಗುತ್ತಾನೆ. 


ಆತ್ಮ, ಪರಮಾತ್ಮವಾಗುತ್ತದೆ. 


ಆದರೆ, ಇದು ಅಷ್ಟು ಸುಲಭವೂ ಅಲ್ಲ. ಅಷ್ಟು ಸರಳವೂ ಅಲ್ಲ. ಇದು ಎಲ್ಲರಿಗೂ ತಿಳಿಯುವಂತಹದ್ದು ಸಹ ಅಲ್ಲ.


ಹೀಗಾಗಿಯೇ ಇದರ ಬಗ್ಗೆ ತಿಳಿವಳಿಕೆ ಮೂಡಿಸಲು ಸರ್ಪ ಆರಾಧನೆಯನ್ನು ಮಾಡಲಾಗಿದೆ. ನಾವು ನಾಗರ ಪಂಚಮಿಯಂದು ಸರ್ಪಕ್ಕೆ ಪೂಜಿಸುತ್ತೇವೆ, ಆರಾಧಿಸುತ್ತೇವೆ. ಇದರ ಮುಖ್ಯ ಉದ್ದೇಶ ನಮ್ಮ ದೇಹದ ಒಳಗಡೆ ಇರುವ ಸರ್ಪದ ಹಾಗೆ ಸುರುಳಿ ಸುತ್ತಿಕೊಂಡು ಕುಳಿತಿರುವ ಶಕ್ತಿಯನ್ನು, ಶಿರದ ತುದಿಯಲ್ಲಿರುವ ಶಿವನ ಜೊತೆ ಒಂದುಗೂಡಿಸಬೇಕು ಎಂದು ನೆನಪಿಸುವುದಾಗಿದೆ.


ಗೃಹಸ್ಥ ಆಶ್ರಮದಲ್ಲಿರುವರಿಗೆ ಮಾಯೆ ಕಾರಣದಿಂದ ಈ ಕಡೆ ಧ್ಯಾನವೇ ಹಾಕುವುದಿಲ್ಲ. ಹಾಗೂ ಸಾಂಸಾರಿಕರಿಗೆ ತಮ್ಮ ದೈನಂದಿನ ಬದುಕನ್ನು ಸರಾಗವಾಗಿ ಸಾಗಿಸುವುದೇ ಒಂದು ದೊಡ್ಡ ವಿಷಯವಾಗಿರುತ್ತದೆ. ಆದ್ದರಿಂದ ಯೋಗ ಇನ್ನಿತರ ಸಾಧನೆ ಮೂಲಕ ನಮ್ಮ ದೇಹದ ಬೆನ್ನ ಕೆಳಗಿರುವ ಶಕ್ತಿ, ಶಿವನನ್ನು ಸೇರಿಸುವ ಪ್ರಯತ್ನದಲ್ಲಿ ತೊಡಗುವುದು ಬಹಳ ದೂರದ ವಿಷಯವೇ. 


ಆದರೂ ಕನಿಷ್ಟ ಮನುಷ್ಯ ಜನ್ಮದ ಮುಖ್ಯ ಉದ್ದೇಶವೇನು ? ಎನ್ನುವುದರ ನೆನಪಾದರು ಇರಲಿ ಎನ್ನುವ ಉದ್ದೇಶದಿಂದ ಈ ಸರ್ಪ ಆರಾಧನೆ ನಾಗಾರಾಧನೆ ಇದೆ. 


ಮನುಷ್ಯ ಶರೀರದಲ್ಲಿ ಮಾತ್ರ ಬೆನ್ನು ಮೂಳೆ ನೇರವಾಗಿರುತ್ತದೆ. ಪ್ರಾಣಿಗಳಲ್ಲಿ ಬೆನ್ನು ಮೂಳೆ ಅಡ್ಡವಾಗಿರುತ್ತದೆ. ಹೀಗಾಗಿ ಪ್ರಾಣಿಗಳ ಬೆನ್ನಿನ ಕೆಳಗಿರುವ ಪ್ರಜನನ ಶಕ್ತಿ ಕೇವಲ ಸಂತಾನೋತ್ಪತ್ತಿಗಾಗಿ ಮಾತ್ರ ಬಳಕೆಯಾಗುತ್ತದೆ. ಆದರೆ ಮನುಷ್ಯ ಜನ್ಮದಲ್ಲಿ ಮಾತ್ರ ಸಾಧನೆಯಿಂದ ಈ ಶಕ್ತಿ ಮೇಲಕ್ಕೂ ಹರಿಯುತ್ತದೆ. ಬ್ರಹ್ಮ ರಂದ್ರಕ್ಕೂ ತಲುಪುತ್ತದೆ.


ಆದ್ದರಿಂದ ನಾವೆಲ್ಲರೂ ಇಂದು ಈ ನಾಗರ ಪಂಚಮಿಯ ಮುಖ್ಯ ಉದ್ದೇಶವನ್ನು ಅರಿತು. ನಮ್ಮ ಒಳಗೆ ಸರ್ಪದಂತೆ ಸುರುಳಿ ಸುತ್ತಿಕೊಂಡು ಕುಳಿತಿರುವ ಶಕ್ತಿಯನ್ನು, ಶಿರದ ತುದಿಯಲ್ಲಿರುವ ಬ್ರಹ್ಮ ರಂದ್ರ ತಲುಪಿಸುವ ಕುರಿತು ಚಿಂತನೆ ಮಾಡೋಣ. ಅದಕ್ಕಾಗಿ ಸಂಕಲ್ಪವನ್ನು ಮಾಡೋಣ. ಅದಕ್ಕಾಗಿ ನಿರಂತರ ಸಾಧನೆಯಲ್ಲಿ ತೊಡಗೋಣ.  


ನಾಗರ ಪಂಚಮಿಯ ಈ ನಿಗೂಢ ರಹಸ್ಯವನ್ನು ಅರಿಯೋಣ. ಅರಿತು ಸಾಧನೆಯಲ್ಲಿ ತೊಡಗಿ ಮನುಷ್ಯ ಜನ್ಮ ಸಾರ್ಥಕಪಡಿಸಿಕೊಳ್ಳಲು ಪ್ರಯತ್ನಿಸೋಣ. 


ಎಲ್ಲರಿಗೂ ಶುಭವಾಗಲಿ. 


ಎಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು. 


ಓಂ ನಮಃ ಶಿವಾಯ


✍️ URAIN NAMAH 

ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆಗೆ ನಾಂದಿ.


(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್)

Comments

Popular posts from this blog

ಅಂಧ ಹೇಳವರು