ಸರ್ವೇ ಪ್ರದೀಪಾ - ಭಾಗ (1)
ಈ ಲೇಖನದ ಆರಂಭದಲ್ಲಿ ಕೆಲವು ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಬರುವ ನಿಮ್ಮ ಉತ್ತರವನ್ನು ಲೇಖನದ ಕೊನೆಗೆ ವಿಮರ್ಶೆ ಮಾಡಿ.
ನಿಮ್ಮಲ್ಲಿ ಈಗ ಯಾವ ಇಚ್ಛೆಯಿದೆ ? ಯಾವ ಬಯಕೆಯಿದೆ ? ಯಾವ ಯೋಚನೆಯಿದೆ ? ಯಾವ ನಡವಳಿಕೆಯಿದೆ ? ಯಾವ ಹವ್ಯಾಸಯಿದೆ ? ಯಾವ ಚಟವಿದೆ ? ನೀವು ಹೇಗೆ ? ನಿಮ್ಮ ವ್ಯಕ್ತಿತ್ವ ಹೇಗೆ ?
ಇವುಗಳು ನಮ್ಮ ಹುಟ್ಟಿನಿಂದಲೇ ಬಂದಿತ್ತೆ ? ಅಥವಾ ಒಂದು ಸಮಯದ ನಂತರ ?
ಹುಟ್ಟಿದ ಒಂದು ಸಮಯದ ನಂತರ ಬಂದರೆ ಇವು ಯಾವಾಗ ಆರಂಭವಾದವು ?
*ಸರ್ವೆ ಪ್ರದೀಪಾ* ಎಂದರೆ ಏನು ಎನ್ನುವುದನ್ನು ತಿಳಿದುಕೊಳ್ಳುವ ಮುಂಚೆ ಒಂದು ಉದಾಹರಣೆಯನ್ನು ನೋಡೋಣ. ಇದರಿಂದ *ಸರ್ವೆ ಪ್ರದೀಪಾ* ಸ್ಪಷ್ಟವಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.
ನಾವು ಜೀವಂತವಾಗಿರಲು ಅನೇಕ ರೀತಿಯ ಆಹಾರವನ್ನು ಸೇವಿಸುತ್ತೇವೆ. ನಾವು ನಾಲಿಗೆಯ ರುಚಿಗೋಸ್ಕರವಾಗಲಿ ಅಥವಾ ಹೊಟ್ಟೆಯ ಹಸಿವೆಗೋಸ್ಕರವಾಗಲಿ ಯಾವುದೇ ಉದ್ದೇಶದಿಂದ ನಾವು ಸೇವಿಸುವ ಆಹಾರ, ನಮ್ಮ ದೇಹವನ್ನು ನಿರ್ಧಾರ ಮಾಡುತ್ತದೆ. ನಾವು ಸೇವಿಸುವ ಆಹಾರ ಕೊನೆಗೆ ನಮ್ಮ ದೇಹವೇ ಆಗಿ ಪರಿವರ್ತನೆಯಾಗುತ್ತದೆ.
ಬಾಯಿಯಿಂದ ಯಾವುದೇ ಆಹಾರ ಹೊಟ್ಟೆಯಲ್ಲಿ ಹೋದಾಗ, ಕಾಲಾನಂತರದಲ್ಲಿ ಅದು ದೇಹದ ಒಂದು ಭಾಗವೇ ಆಗುತ್ತದೆ. ಆ ದೇಹವೇ ಆರೋಗ್ಯ, ಅನಾರೋಗ್ಯವನ್ನು ನೀಡಿ ನಮ್ಮನ್ನು ನಿಯಂತ್ರಿಸುತ್ತದೆ.
ಹೀಗಾಗಿ ನಾವು ಏನನ್ನು ಊಟ ಮಾಡುತ್ತೇವೆ ಅದರ ಬಗ್ಗೆ ಕಾಳಜಿ ವಹಿಸುವುದು ಅವಶ್ಯ.
ದೇಹದ ಆರೋಗ್ಯಕ್ಕಾಗಿ ಕೇವಲ ಬಾಯಿ ಒಂದರ ಕಡೆ ಮಾತ್ರ ಧ್ಯಾನ ಕೊಟ್ಟರೆ ಸಾಕು. ಆದರೆ ನಮ್ಮ ವ್ಯಕ್ತಿತ್ವ ಹಾಗಲ್ಲ. ನಮ್ಮ ವ್ಯಕ್ತಿತ್ವಕ್ಕಾಗಿ ಹಲವು ಮಾರ್ಗಗಳ ಕಡೆ ಧ್ಯಾನ ಕೊಡುವುದು ಅವಶ್ಯವಾಗಿದೆ.
ನಮ್ಮ ವ್ಯಕ್ತಿತ್ವ ವ್ಯಕ್ತವಾಗುವುದು ನಮ್ಮ ನಡೆ ನುಡಿ, ನಮ್ಮ ಆಚಾರ ವಿಚಾರಗಳಿಂದ.
ನಮ್ಮ ನಡೆ ನುಡಿ ಆಚಾರ ವಿಚಾರ ಅವಲಂಬಿತವಾಗಿರುವುದು ನಮ್ಮ ಮನಸ್ಸಿನ ಮೇಲೆ.
ದೇಹ ಬೆಳವಣಿಗೆಗೆ ಆಹಾರ ಸ್ವೀಕರಿಸಲು ಒಂದು ಮಾರ್ಗವಿದೆ. ಅದು ನಮ್ಮ ಬಾಯಿ. ಆದರೆ ಮನಸ್ಸಿಗೆ ಒಂದಲ್ಲ ಹಲವು ಬಾಯಿಗಳು.
ನಮ್ಮ ಮನಸ್ಸಿಗೆ ವಿಷಯ, ವಿಚಾರಗಳು ಎನ್ನುವ ಆಹಾರ ಬಂದು ಸೇರಿಕೊಳ್ಳುವುದು, ಕಣ್ಣಿನ ನೋಟದಿಂದ, ಕಿವಿಯ ಕೇಳುವಿಕೆಯಿಂದ, ಮೂಗಿನ ವಾಸನೆಯಿಂದ ನಾಲಿಗೆಯ ರುಚಿಯಿಂದ, ಚರ್ಮದ ಸ್ಪರ್ಶದಿಂದ, ಚಿತ್ತದ ನೆನಪಿನಿಂದ ಹಾಗೂ ಕರ್ಮೆಂದ್ರಿಯಗಳಿಂದ.
ಯಾವ ರೀತಿ ನಾವು ಬಾಯಿಯಿಂದ ಸೇವಿಸುವ ಆಹಾರ ನಮ್ಮ ದೇಹವನ್ನು ನಿರ್ಮಾಣ ಮಾಡುವುದೋ ಅದೇ ರೀತಿ ಕಣ್ಣು, ಕಿವಿ, ನಾಲಿಗೆ ಮೂಗು, ಚರ್ಮ, ಚಿತ್ತದಿಂದ ಬರುವ ಸೂಚನೆಗಳು, ಮಾಹಿತಿ, ವಿಷಯಗಳು ವಿಚಾರಗಳು ನಮ್ಮ ಮನಸ್ಥಿತಿಯನ್ನು ನಿರ್ಮಾಣ ಮಾಡುತ್ತವೆ. ಈ ಮನಸ್ಥಿತಿಯೇ ನಮ್ಮ ವ್ಯಕ್ತಿತ್ವಕ್ಕೆ ಕಾರಣವಾಗುತ್ತದೆ.
ನಾವು ಯಾವುದನ್ನೇ ನೋಡಲಿ, ಯಾವುದೇ ವ್ಯಕ್ತಿಯ ಸಂಪರ್ಕಕ್ಕೆ ಬರಲಿ (ದೇಹದಿಂದ ಅಥವಾ ಮನಸ್ಸಿನಿಂದ ಅಥವಾ ವಿಚಾರಗಳಿಂದ ), ಯಾವುದನ್ನೆ ಅಥವಾ ಯಾರ ಮಾತುಗಳನ್ನು ಕೇಳಲಿ, ಏನನ್ನೆ ಯೋಚನೆ ಮಾಡಲಿ ಅದು ನಮ್ಮ ಮೇಲೆ ತನ್ನ ಸ್ವಲ್ಪ ಅಚ್ಚನ್ನಾದರೂ ಒತ್ತುತ್ತದೆ. ಸ್ವಲ್ಪ ಪ್ರಭಾವವಾದರೂ ಬೀರುತ್ತದೆ.
ನಾವು ಯಾರ ಸಂಪರ್ಕಕ್ಕೆ ಬರುತ್ತೇವೆಯೋ, ಆತನ ಗುಣ ಅವಗುಣಗಳು ನಮ್ಮಲ್ಲಿ ಸ್ವಲ್ಪವಾದರೂ ಪ್ರತಿಫಲಿಸಲು ಆರಂಭಿಸುತ್ತವೆ. ಅಂದರೆ ನಾವು ಸ್ವಲ್ಪವಾದರೂ ಆ ವ್ಯಕ್ತಿಯಂತೆ ಆಗಲೂ ಆರಂಭಿಸುತ್ತೇವೆ.
ಉದಾಹರಣೆಗೆ : ಇಂದು ಜನಪ್ರಿಯವಾಗಿರುವ ಮೊಬೈಲ್ ನಲ್ಲಿ ನಾವು ಯಾವುದೋ ಸಿನಿಮಾವನ್ನು ನೋಡಿದಾಗ, ಯಾವುದೋ ವಿಡಿಯೋ ನೋಡಿದಾಗ, ಯಾವುದೋ ರಿಲ್ಸ ಅಥವಾ ಯಾವುದೋ ಚಿತ್ರ ನೋಡಿದಾಗ ಅವುಗಳು ಕೊನೆಗೆ ಯಾವ ಸಂದೇಶ ನೀಡುತ್ತದೆಯೋ ಅದು ನಮ್ಮ ಮನಸ್ಸಿನ ಮೇಲೆ ತಾತ್ಕಾಲಿಕ ಮನಸ್ಥಿತಿಯನ್ನಾದರೂ ಉತ್ಪತ್ತಿ ಮಾಡುತ್ತದೆ. ಅದೇ ನೆನಪು, ಅದೇ ಹಾಡು, ಅದೇ ಚಿತ್ರ ಸ್ವಲ್ಪ ಸಮಯದವರೆಗಾದರೂ ನಮ್ಮನ್ನು ಕಾಡಲು ಆರಂಭಿಸುತ್ತವೆ. ಅದು ಒಳ್ಳೆಯದಾಗಿದ್ದರೆ ನಮ್ಮಲ್ಲಿ ಸದ್ಭಾವನೆ ಉತ್ಪತ್ತಿಯಾಗಿ ಒಳ್ಳೆಯ ವ್ಯಕ್ತಿಯಂತೆ ಕಾಣುತ್ತೇವೆ. ಅದು ಕೆಟ್ಟದಾಗಿದ್ದರೆ ನಮ್ಮಲ್ಲಿ ದುರ್ಭಾವನೆ ಉತ್ಪತ್ತಿಯಾಗಿ ನಾವು ಕೆಟ್ಟ ವ್ಯಕ್ತಿಗಳಾಗಿ ಕಾಣುತ್ತೇವೆ.
ನೋಟದಂತೆ, ಏನನ್ನೇ ಕೇಳಿದರೂ, ಯಾವ ವ್ಯಕ್ತಿಯ ಮಾತನ್ನೂ ಆಲಿಸಿದರು ಅಥವಾ ಏನಾದರೂ ಓದಿದರೂ ಅಥವಾ ಏನನ್ನಾದರೂ ಯೋಚನೆ ಮಾಡಿದರು ಅದು ಸ್ವಲ್ಪ ಸಮಯದವರೆಗಾದರೂ ನಮ್ಮ ಮೇಲೆ ಪ್ರಭಾವ ಬೀರಲು ಆರಂಭಿಸುತ್ತದೆ. ಒಂದು ವೇಳೆ ನಿರಂತರ ಒಂದನ್ನೆ ನೋಡುತ್ತಾ, ಒಂದನ್ನೆ ಓದುತ್ತಾ ಒಂದು ವಿಷಯವನ್ನೇ ಕೇಳುತ್ತಿದ್ದಲ್ಲಿ ನಮಗೆ ಗೊತ್ತಿಲ್ಲದಂತೆ ನಾವು ನೋಡಿದಂತೆ, ಕೇಳಿದಂತೆ ಯೋಚನೆ ಮಾಡಲು ಆರಂಭಿಸುತ್ತೇವೆ.
*ಇದು ಎಷ್ಟೊಂದು ನಮ್ಮನ್ನು ಆವರಿಸುವುದೆಂದರೆ ನಾವು ಯೋಚಿಸುವುದು ತಪ್ಪಿದ್ದರೂ, ಇದೆ ಸರಿ ಎಂದು ನಿರ್ಧಾರಕ್ಕೆ ಬರುತ್ತೇವೆ*.
*ಆ ಯೋಚನೆಗಳೇ ಬಹಳ ಸಮಯದಿಂದ ನಮ್ಮ ಮನಸ್ಸಿನಲ್ಲಿ ಬರುತ್ತಿದ್ದಲ್ಲಿ, ನಿಧಾನವಾಗಿ ಆ ಯೋಚನೆಗಳೇ ಕೆಲಸಗಳಾಗಿ ಪರಿವರ್ತನೆ ಹೊಂದುತ್ತವೆ*.
ಅದು ಕಾಮ ಆಗಿರಬಹುದು, ಕಪಟ ಆಗಿರಬಹುದು, ಅಹಂಕಾರ ಆಗಿರಬಹುದು, ದ್ವೇಷ ಆಗಿರಬಹುದು, ಪ್ರೇಮ ಆಗಿರಬಹುದು, ಸಹಾಯ ಆಗಿರಬಹುದು, ವೈರಾಗ್ಯ ಆಗಿರಬಹುದು ಇನ್ನಿತರ ಯಾವುದೇ ಯೋಚನೆ ನಿರಂತರವಾಗಿ ಬಂದಾಗ ಅದೇ ರೀತಿಯ ಕೆಲಸಗಳು ನಮ್ಮಿಂದ ಆಗಲು ಪ್ರಾರಂಭಿಸುತ್ತವೆ
*ಹೀಗೆ ನಾವು ಏನನ್ನು ಕೇಳುತ್ತೇವೆ, ನೋಡುತ್ತೇವೆ, ಯೋಚನೆ ಮಾಡುತ್ತೇವೆ ಅದೇ ಆಗಲು ಆರಂಭಿಸುತ್ತೇವೆ*. ಅಂತಹ ನಡೆ ನುಡಿ ಆಚಾರ ವಿಚಾರ ನಮ್ಮನ್ನು ಆವರಿಸಿ ಆ ವ್ಯಕ್ತಿತ್ವವನ್ನೇ ಹೊಂದುತ್ತೇವೆ. ಲೇಖನದ ಆರಂಭದಲ್ಲಿ ಪ್ರಶ್ನೆಗಳನ್ನು ಪುನಃ ನೆನಪಿಸಿಕೊಳ್ಳಿ. ನಮ್ಮ ಇಚ್ಛೆ, ಬಯಕೆ, ಆಸೆ, ಹವ್ಯಾಸ, ಯೋಚನೆ, ನಡವಳಿಕೆ, ಚಟಗಳು ನಾವು ಹುಟ್ಟುತ್ತಲೇ ಬಂದಿರುವಂತಹವೇ ?
ಇಲ್ಲಾ.
ನಾವು ಬೆಳೆಯುತ್ತಾ, ಬೆಳೆಯುತ್ತಾ ಅನೇಕ ಜನರ ದೈಹಿಕ ಮಾನಸಿಕ ವೈಚಾರಿಕ ಸಂಪರ್ಕಕ್ಕೆ ಬರುತ್ತೇವೆ. ಅವರ ಪ್ರಭಾವಕ್ಕೆ ಒಳಗಾಗಿ ನಮಗೆ ಆ ರೀತಿಯ ಇಚ್ಛೆ, ಹವ್ಯಾಸ, ಯೋಚನೆ, ನಡುವಳಿಕೆಗಳ ಮೂಲಕ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
ನಮ್ಮಲ್ಲಿ ಯಾವುದೇ ರೀತಿಯ ಸ್ವಭಾವ ಇರಬಹುದು, ಯಾವುದೇ ಗುಣ, ಅವಗುಣ ಹವ್ಯಾಸ ಏನೇ ಇರಬಹುದು. *ಅದನ್ನು ನಾವು ಬೇರೆಯವರಿಂದ ಅನುಕರಣೆ ಮಾಡಿರುವುದಾಗಿದೆ.*
*ಎಲ್ಲವೂ ನಾವು ಯಾರನ್ನೋ ನೋಡಿದ ಮೇಲೆ, ಯಾವದನ್ನೋ ಕೇಳಿದ ಮೇಲೆ ನಮ್ಮಲ್ಲಿ ಬರಲು ಆರಂಭಿಸಿತು.
ಇದನ್ನೇ ಸರ್ವೆ ಪ್ರದೀಪಾ ಎಂದು ಋಷಿ ಮುನಿಗಳು ಹೇಳಿದ್ದಾರೆ*.
ನಾವು ಅಭಿಮಾನದಿಂದ ನಾನು ಹಾಗೆ ಹೀಗೆ ಎಂದು ಹೇಳಿಕೊಳ್ಳುತ್ತೇವೆ. ಆದರೆ *ಮೂಲತಃ ನಾವು ಏನು ಇಲ್ಲ. ಎಲ್ಲವೂ ಬೇರೆಯವರಿಂದ ಬಂದಿರುವಂತಹದ್ದು.*
ಏಕೆಂದರೆ *ಮೂಲತಃ ನಾವು ಒಂದು ಕನ್ನಡಿ. ಕನ್ನಡಿಯಲ್ಲಿ ಏನು ಇಲ್ಲಾ. ಕನ್ನಡಿ ಮುಂದೆ ಯಾರು ನಿಲ್ಲುತ್ತಾರೋ ಅವರ ಪ್ರತಿಬಿಂಬ ಆ ಕನ್ನಡಿಯಲ್ಲಿ ಬೀಳುತ್ತದೆ. ಆಗ ಆ ಕನ್ನಡಿ ಸ್ವಲ್ಪ ಸಮಯಕ್ಕೆ ಅದೇ ಆಗುತ್ತದೆ.*
ಇದೇ ರೀತಿ ನಾವು ಯಾವ ಸಮಯದಲ್ಲಿ ಯಾರ ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ, ವೈಚಾರಿಕವಾಗಿ, ಭಾವನಾತ್ಮಕವಾಗಿ ಸಂಪರ್ಕದಲ್ಲಿ ಇರುತ್ತೇವೆಯೋ ಅವರ ಪ್ರತಿಬಿಂಬ ನಮ್ಮ ಮೇಲೆ ಬೀಳುತ್ತದೆ. *ಹೀಗೆ ಈ ಜಗತ್ತಿನಲ್ಲಿರುವ ಎಲ್ಲರೂ ಇನ್ನೊಬ್ಬರ ಅಥವಾ ಬೇರೆ, ಬೇರೆ ಅನೇಕ ರೀತಿಯ ಜನರ ಒಟ್ಟು ಪ್ರತಿಫಲನ ಆಗಿದ್ದಾರೆ*.
*ಯಾರಿಗೂ ತಮ್ಮದು ಎನ್ನುವ ಸ್ವಂತಿಕೆಯಿಲ್ಲ. ಎಲ್ಲರೂ ಮೂಲತಃ ಕನ್ನಡಿಯಂತೆ ಖಾಲಿ, ಖಾಲಿ. ಏನು ಇಲ್ಲ.*
ಇದಕ್ಕಾಗಿ ಇನ್ನೊಂದು ಉದಾಹರಣೆಯನ್ನು ನೋಡೋಣ. ನಾವು ಇಂದು ಯಾವುದೋ ಜಾತಿಯವರಾಗಿರಬಹುದು. ಯಾವುದೋ ಧರ್ಮದವರಾಗಿರಬಹುದು, ಯಾವುದೇ ಭಾಷೆಯವರಾಗಿರಬಹುದು, ಯಾವುದೇ ನಾಡು ದೇಶದವರಾಗಿರಬಹುದು. ಹೀಗಾಗಿ ನಮ್ಮ ಜಾತಿ, ಧರ್ಮದ, ನಾಡು ನುಡಿ, ದೇಶ, ಭಾಷೆ ಬಗ್ಗೆ ನಮ್ಮಲ್ಲಿ ಅಭಿಮಾನ ಇರಬಹುದು. ಬೇರೆಯದರ ಪ್ರತಿ ವಿರೋಧ ಇರಬಹುದು.
ಜಾತಿ, ಧರ್ಮ ಈ ಕಾರಣದಿಂದ ನಮ್ಮಲ್ಲಿ ಏನೇನೋ ಊಟ ತಿಂಡಿ ಸಸ್ಯಾಹಾರ ಮಾಂಸಾಹಾರ ಏನೇನೋ ಆಚಾರ ವಿಚಾರ ಗುಣಗಳಿರಬಹುದು.
ಆದರೆ ಒಂದು ವೇಳೆ ನಾವು ಹುಟ್ಟುತ್ತಲೇ ನಮ್ಮನ್ನು ಇನ್ನೊಂದು ಜಾತಿ, ಇನ್ನೊಂದು ಧರ್ಮ, ಇನ್ನೊಂದು ಭಾಷೆ , ಇನ್ನೊಂದು ನಾಡು, ಇನ್ನೊಂದು ದೇಶದ ವ್ಯಕ್ತಿಗಳು ದತ್ತು ಪಡೆದುಕೊಂಡಿದ್ದರೆ ಏನಾಗುತ್ತಿತ್ತು ?
ನಾವು ಆ ಸಮೂಹದ ನಡುವೆಯೇ ಬೆಳೆದಿದ್ದಲ್ಲಿ, ಆ ಊಟ ತಿಂಡಿ, ಸಸ್ಯಾಹಾರ ಮಾಂಸಾಹಾರ ಗುಣ, ಆ ಆಚಾರ ವಿಚಾರ, ಆ ನಡುವಳಿಕೆ ನೋಡುತ್ತಾ ಕೇಳುತ್ತಾ ಯೋಚನೆ ಮಾಡುತ್ತಾ ಬೆಳೆದಿದ್ದಲ್ಲಿ ನಾವು ಇಂದು ಏನಾಗಿರುತ್ತಿದ್ದೇವು ?
ಈಗ ಹೇಗೆ ಇದ್ದೇವೆ ? ಹಾಗೆ ಇರುತ್ತಿದ್ದೆವೆಯೇ ?
ಇಲ್ಲಾ ನಾವು ಬೇರೆಯೇ ಆಗಿರುತ್ತಿದ್ದೇವು. ಕಾರಣ ಆಗ ನಮ್ಮ ಕನ್ನಡಿಯ ಮೇಲೆ ಬೇರೆಯವರ ಚಿತ್ರಗಳು ಪ್ರತಿಫಲನ ಆಗುತಿತ್ತು. ಇದನ್ನೆ ಸರ್ವೇ ಪ್ರದೀಪ ಅಂದರೆ ಎಲ್ಲರೂ ಇನ್ನೊಬ್ಬರ ಪ್ರತಿಫಲನ ಎಂದು ಹೇಳಲಾಗಿದೆ.
*ನಮ್ಮಲ್ಲಿ ಕೆಲವು ಆಸೆ ಕೆಲವರಿಂದ ಬಂದಿರುತ್ತದೆ. ಕೆಲವು ವಿಚಾರ ಕೆಲವರಿಂದ ಬಂದಿರುತ್ತದೆ. ಕೆಲವು ನಡುವಳಿಕೆ ಕೆಲವರಿಂದ ಬಂದಿರುತ್ತದೆ. ಕೆಲವು ಹವ್ಯಾಸ ಮತ್ತೆ ಕೆಲವರಿಂದ ಬಂದಿರುತ್ತದೆ. ಹೀಗೆ ಒಟ್ಟಾರೆಯಾಗಿ ನಾವು ಬೇರೆ ಬೇರೆ ಜನರ ಒಟ್ಟು ಪ್ರತಿಫಲನ ಆಗಿರುತ್ತೇವೆ. ಮೂಲತಃ ನಾವು ಏನು ಇಲ್ಲ. ನಮ್ಮದು ಅನ್ನುವುದು ಏನು ಇಲ್ಲಾ.*
ನಾವು ಒಳ್ಳೆಯವರು ಆಗಬೇಕು ಎಂದು ಬಯಸುತ್ತೇವೆಯೋ ಅಥವಾ ಕೆಟ್ಟವರಾಗಲು ಬಯಸುತ್ತೇವೆಯೋ ಎಲ್ಲವೂ ನಮ್ಮ ಮನಸ್ಸು ಯಾರನ್ನು ನಿರಂತರ ಸಂಪರ್ಕಿಸುತ್ತಿದೆ, ಎನ್ನುವದರ ಮೇಲೆ ಅವಲಂಬಿತವಾಗಿದೆ.
*ಯಾವುದನ್ನು ಮನಸ್ಸು ನೋಟದಿಂದ, ಕೇಳುವಿಕೆಯಿಂದ, ಯೋಚನೆಯಿಂದ ಸಂಪರ್ಕಿಸುತ್ತದೆಯೋ ಅದರ ಪ್ರತಿಫಲನ ನಮ್ಮ ಮನಸ್ಸಿನ ಮೇಲೆ ಬೀಳುತ್ತದೆ. ಮನಸ್ಸು ಅವುಗಳನ್ನು ಚಿಂತಿಸುತ್ತದೆ. ನಿರಂತರವಾದ ಚಿಂತನೆಯೂ ಆ ರೀತಿಯ ಕೆಲಸಗಳನ್ನು ಮಾಡಿಸಲು ಆರಂಭಿಸುತ್ತದೆ. ಹೀಗೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.*
ಆದ್ದರಿಂದ ಸದಾಕಾಲ ನಮ್ಮ ಕಣ್ಣುಗಳ ನೋಟದಿಂದ, ಕಿವಿಗಳ, ಕೇಳುವಿಕೆಯಿಂದ, ಚಿತ್ತದ ನೆನಪುಗಳಿಂದ ನಮ್ಮ ಮನಸ್ಸಿನ ಮೇಲೆ ಯಾವ ವಿಚಾರಗಳ ಪ್ರತಿಫಲನ ಆಗುತ್ತಿದೆ ? ಎನ್ನುವುದರ ಕುರಿತು ನಾವು ಎಚ್ಚರಿಕೆಯಿಂದಿರಬೇಕು.
ನಮ್ಮ ಮನಸ್ಸಿನ ಸಂಪರ್ಕವು ಯಾವ ಗುಣಗಳ, ಯಾವ ದುರ್ಗುಣಗಳ, ಯಾವ ವಿಕಾರಗಳ ಮುದ್ರೆಗಳನ್ನು ತನ್ನ ಮೇಲೆ ಅಚ್ಚೊತ್ತಿಕೊಳ್ಳುತ್ತಿದೆ ? ಎನ್ನುವುದರ ಕುರಿತು ಜಾಗೃತೆಯಿಂದಿರಬೇಕು.
*ಏಕೆಂದರೆ ಸರ್ವರೂ ಇನ್ನೊಬ್ಬರ ಪ್ರತಿಫಲನವೇ ಆಗಿದ್ದಾರೆ*. ಯಾರ ಜೊತೆ ನಾವು ಬಹಳ ಕಾಲ ದೇಹದಿಂದ ಅಥವಾ ಮನಸ್ಸಿನಿಂದ, ವಿಚಾರಗಳಿಂದ ಜೊತೆಯಲ್ಲಿ ಇರುತ್ತೇವೆಯೋ ಆ ವ್ಯಕ್ತಿತ್ವದವರೇ ನಾವಾಗುತ್ತೇವೆ. ಏಕೆಂದರೆ *ಸರ್ವೇ ಪ್ರದೀಪಾ...*
ಎಲ್ಲವೂ, ಎಲ್ಲರೂ ಬೇರೆ ಇನ್ನೊಂದರ ಪ್ರತಿಫಲನ. *ಸರ್ವೇ ಪ್ರದೀಪಾ...*.
*ನಾವು ಸದಾ ಒಳ್ಳೆಯ ವ್ಯಕ್ತಿತ್ವದೊಂದಿಗೆ ಇಂದ್ರಿಯಗಳ ಮೂಲಕ, ಮನಸ್ಸಿನ ಯೋಚನೆಗಳ ಮೂಲಕ ವೈಚಾರಿಕವಾಗಿ ಸಂಪರ್ಕದಲ್ಲಿದ್ದರೆ, ನಮ್ಮಲ್ಲಿಯೂ ಒಳ್ಳೆಯ ವ್ಯಕ್ತಿತ್ವವೇ ಪ್ರತಿಫಲಿಸುತ್ತದೆ*.
ನಾವು ಸದಾ ಕೆಟ್ಟ ವ್ಯಕ್ತಿತ್ವದೊಂದಿಗೆ ಇಂದ್ರಿಯಗಳ ಮೂಲಕ, ಮನಸ್ಸಿನ ಯೋಚನೆಗಳ ಮೂಲಕ ಸಂಪರ್ಕದಲ್ಲಿದ್ದರೆ, ನಮ್ಮಲ್ಲಿಯೂ ಕೆಟ್ಟ ವ್ಯಕ್ತಿತ್ವವೇ ಪ್ರತಿಫಲಿಸುತ್ತದೆ.
ಹೀಗಾಗಿ ನಮ್ಮ ಮನಸ್ಸಿನ ಮೇಲೆ ನಿರಂತರವಾಗಿ ಯಾವುದು ಪ್ರತಿಫಲನ ಆಗುತ್ತಿದೆ ಎನ್ನುವುದರ ಕುರಿತು ಸದಾ ಎಚ್ಚರಿಕೆಯಿಂದಿರೋಣ.
*ಸರ್ವೇ ಪ್ರದೀಪಾ*
*ಸ ರ್ವೇ ಪ್ರ ದೀ ಪಾ*
*ಸ ರ್ವೇ ಪ್ರ ದೀ. ಪಾ*
ಎಲ್ಲರ ಮೇಲೆ ಕಣ್ಣಿನಿಂದ, ಕಿವಿಯಿಂದ, ಚಿತ್ತದಿಂದ, ಯೋಚನೆಯಿಂದ, ಒಳ್ಳೆಯ ವ್ಯಕ್ತಿತ್ವದ ಬಿಂಬಗಳೇ ಪ್ರತಿಫಲನವಾಗಲಿ...
ಎಲ್ಲರಿಗೂ ಒಳ್ಳೆಯದಾಗಲಿ.
ಓಂ ನಮ್ಮ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ
ಈ ಪದ ಯುಗ ಪರಿವರ್ತನೆಗೆ ನಾಂದಿ.
ಕಲಿಯುಗ ಕೊನೆಗೊಳ್ಳಲಿ.
ಸತ್ಯ ಯುಗ ಪುನಃ ಆರಂಭವಾಗಲಿ.
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್)
Comments
Post a Comment