*ದೇವ ದೇವನೋಲಿದ ಕುಲವೇ ಸತ್ಕುಲಂ*
ಸಮಯ ಇದೇ 2025ನೇ ಇಸ್ವಿ ನವೆಂಬರ್ ಡಿಸೆಂಬರ್ ತಿಂಗಳು. ಬಾಲ್ಯದಿಂದಲೂ ವೇದ ಶಿಕ್ಷಣ ಪಡೆದ ಆಹಾರ ಕ್ರಮದಲ್ಲಿಯೂ ಪ್ರಾಣಿ ಹಿಂಸೆಯಿಲ್ಲದ ಒಬ್ಬ ಮಹಿಳೆ (ಆಚಾರ್ಯ ಶೃತಿ ಶಾಸ್ತ್ರಿ), ವೇದ ಮಂತ್ರಗಳನ್ನು ಉಚ್ಚರಿಸುತ್ತಾ ಗಾಯತ್ರಿ ಮಂತ್ರಗಳನ್ನು ಹೇಳುತ್ತಾ ಒಂದು ಮದುವೆ ಮಾಡಿಸುತ್ತಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಜಾಲತಾಣದಲ್ಲಿ (ಫೆಸ್ ಬುಕ್) ಹಾಕುತ್ತಾರೆ. ಅಲ್ಲಿಗೆ ಬರುವ ಕೆಲವು ಜನರು, ಒಬ್ಬ ಮಹಿಳೆ ವೇದ ಮಂತ್ರ ಹೇಳುವುದು, ಗಾಯತ್ರಿ ಮಂತ್ರ ಹೇಳುವುದು ಮೂರ್ಖತನದ ಪರಮಾವಧಿ. ಇದರಿಂದ ಪಾಪ ಹತ್ತುತ್ತದೆ. ಮತ್ತು ನೀವು ನರಕಕ್ಕೆ ಹೋಗುತ್ತೀರಿ ಎಂದು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ ..
ಇದಕ್ಕೆ ಪ್ರತಿಕ್ರಿಯೆಯಾಗಿ ಆ ಮಹಿಳೆಯ ಬೆಂಬಲಿಗರು "ಹುಟ್ಟಿನಿಂದ ಎಲ್ಲರೂ ಶೂದ್ರರೇ. ಒಳ್ಳೆಯ ಸಂಸ್ಕಾರದಿಂದ ಮಾತ್ರ ಒಬ್ಬ ವ್ಯಕ್ತಿ ಬ್ರಾಹ್ಮಣನಾಗುತ್ತಾನೆ.
(ಜನ್ಮನಾ ಜಾಯತೇ ಶೂದ್ರಃ, ಸಂಸ್ಕಾರಾತ್ ದ್ವಿಜ ಉಚ್ಚತ್ಯೇ -ಋಗ್ವೇದ ಹಾಗೂ ಸ್ಕಂದ ಪುರಾಣ ) ಎನ್ನುವ ಶ್ಲೋಕವನ್ನು ಹೇಳಿದಾಗಲೂ ಸಹ ಶಾಸ್ತ್ರಗಳ ಉದಾಹರಣೆ ಕೊಡುತ್ತಾ, ಆ ಮಹಿಳೆಯನ್ನು ಅವರು ಪುನಃ ವಿರೋಧಿಸುತ್ತಾರೆ.
ಈಗ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಹಾಗೂ ಎಲ್ಲರಿಗೂ ಸಮಾನ ಅವಕಾಶ ನೀಡುವ ಸಂವಿಧಾನದ ಮೂಲಕ ದೇಶ ನಡೆಯುವ ಈ ಸಮಯದಲ್ಲಿಯೂ ಒಬ್ಬ ಮಹಿಳೆ ವೇದ ಪಾಠ ಮಾಡುವುದನ್ನು ಗಾಯತ್ರಿ ಮಂತ್ರ ಹೇಳುವುದನ್ನು ಕೆಲವರು ವಿರೋಧಿಸುತ್ತಾರೆ ಎಂದರೆ, ಈಗಿನ ಸಮಾನ ಹಕ್ಕುಗಳ ಸಂವಿಧಾನವಿಲ್ಲದಿರುವಾಗ, ಮೇಲು ಕೀಳು ಎನ್ನುವ ವರ್ಣ ವ್ಯವಸ್ಥೆಯ 900 ವರ್ಷಗಳ ಹಿಂದಿನ ಸಮಯದಲ್ಲಿಯ ಪರಿಸ್ಥಿತಿ ಹೇಗಿರಬಹುದು ?
ಅಸ್ಪೃಶ್ಯತೆಯೆನ್ನುವುದು ಉಚ್ಛ್ರಾಯ, ಬಹು ಕಟ್ಟುನಿಟ್ಟಿನಲ್ಲಿ ಇದ್ದಂತಹ ಸ್ಥಿತಿಯಲ್ಲಿ, ಆ ಸಮಯವನ್ನು ಅರ್ಥ ಮಾಡಿಕೊಳ್ಳಲು ಕಲ್ಯಾಣ ಕ್ರಾಂತಿಯ ಘಟನೆ ಸೂಕ್ತ ಉದಾಹರಣೆ. ಸಮಗಾರ ಹರಳಯ್ಯನ ಮಗನನ್ನು ಬ್ರಾಹ್ಮಣ ಮಧುವರಸನ ಮಗಳ ಜೊತೆಗೆ ಮದುವೆ ಮಾಡಿದಾಗ ಹರಳಯ್ಯ, ಮಧುವರಸ ಹಾಗೂ ಶೀಲವಂತರನ್ನು ಆನೆಯ ಕಾಲಿಗೆ ಕಟ್ಟಿ ಕಲ್ಲು, ಮುಳ್ಳುಗಳು ನಡುವೆ ಹೊಟ್ಟೆಯಿಂದ ಎಳೆದು ಚಿತ್ರಹಿಂಸೆ ನೀಡಿ ಶೂಲಕ್ಕೆ ಏರಿಸುತ್ತಾರೆ.
ವರ್ಣ ವ್ಯವಸ್ಥೆಯ ಇಂತಹ ಘನಘೋರ ಪರಿಸ್ಥಿತಿಯಲ್ಲಿ ಹೆಚ್ಚು ಕಡಿಮೆ ಇದೇ ಸಮಯಕ್ಕೆ ಸೇರಿದಂತಹ ಒಂದು ರಾಜ್ಯದ ರಾಜನೇ ಊರ ಹೊರಗಿನ ಅಸ್ಪೃಶ್ಯರ ಗುಡಿಸಲಿಗೆ ತನ್ನ ರಾಜ ಪರಿವಾರ ಆನೆ ಅಂಬಾರಿಗಳೊಂದಿಗೆ ಬಂದು, ತನ್ನ ಕುದುರೆಗಳಿಗೆ ಹುಲ್ಲು ಹಾಕುವ ಒಬ್ಬ ಅಸ್ಪೃಶ್ಯ ವ್ಯಕ್ತಿಯ ಕಾಲು ಹಿಡಿದು ಆತನ ಕೃಪೆಗಾಗಿ ಪ್ರಾರ್ಥಿಸುತ್ತಾನೆ.
ಇಂದಿನ ಸಮಯದಲ್ಲಿ ಒಬ್ಬ ಮುಖ್ಯಮಂತ್ರಿ ಒಬ್ಬ ಬಡ ದಲಿತನ ಮನೆಗೆ ಹೋಗಿ ಆತನ ಕಾಲಿಗೆ ಬಿದ್ದಿರುವುದನ್ನು ಬಹುಶಃ ಯಾರೂ ನೋಡಿಲ್ಲ, ಕಲ್ಪಿಸಿಕೊಳ್ಳುವುದು ಇಲ್ಲ. ಆದರೆ ಅಂದಿನ ಕಾಲದ ಕಟ್ಟುನಿಟ್ಟಿನ ವರ್ಣ ವ್ಯವಸ್ಥೆ ಇರುವ ದಿನಗಳಲ್ಲಿಯೂ ಒಂದು ರಾಜ್ಯದ ರಾಜನಿಂದ ಅತಿ ದೊಡ್ಡ ಸನ್ಮಾನ ಪಡೆಯುವ ಆ ಅಸ್ಪೃಶ್ಯ ವ್ಯಕ್ತಿಯ ಮಟ್ಟ ಎಷ್ಟು ಎತ್ತರದ್ದು ಎನ್ನುವುದು ಈ ಘಟನೆ ತಿಳಿಸುತ್ತದೆ.
ವರ್ಣ ವ್ಯವಸ್ಥೆಯ ಕಟ್ಟು ನಿಟ್ಟಿನ ಸಮಯದಲ್ಲಿ ಒಂದು ದೇಶದ ರಾಜನಿಂದ ಅತಿ ದೊಡ್ಡ ಸನ್ಮಾನ ಪಡೆದ ಆ ವ್ಯಕ್ತಿಯೇ ಮಾದಿಗ ಜನಾಂಗದ ಮಾದರ ಚೆನ್ನಯ್ಯ. ರಾಜನ ದೃಷ್ಟಿಯಲ್ಲಿ ಚೆನ್ನಯ್ಯನವರು ಅತಿ ಎತ್ತರದ ಸ್ಥಾನ ಪಡೆಯಲು ಕಾರಣವೇ ಶಿವ ಭಕ್ತ ರಾಜ ಕರೀಕಾಳ ಚೋಳನಿಗೂ, ದುರ್ಲಭವಾದಂತಹ *ಶಿವನೊಲುಮೆಯ ಸಾಕ್ಷಾತ್ಕಾರ*.
ಅಂತಹ ಶಿವನೊಲಿಮೆಯ ಸಾಕ್ಷಾತ್ಕಾರಿ ಶ್ರೀ ಮಾದರ ಚೆನ್ನಯ್ಯನವರ ಮೂರ್ತಿ ಇದೇ 28 ರಂದು ಸೇಡಂನಲ್ಲಿ ಅನಾವರಣಗೊಳ್ಳಲಿದೆ. ತನ್ನಿಮಿತ್ತ ಈ ಲೇಖನ.
ಮಾದರ ಚೆನ್ನಯ್ಯನವರು ರಾಜಕೀಯ ಬದಲಾವಣೆಯ ಕಾರಣದಿಂದ ತಮ್ಮ ಹುಟ್ಟೂರಿನಲ್ಲಿ ಜೀವಿಸಲು ಸಾಧ್ಯವಿಲ್ಲವೆಂದು ಈಗಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಿಂದ ಶಿವ ಭಕ್ತ ಕರೀಕಾಳ ಚೋಳನ ರಾಜ್ಯಕ್ಕೆ ಬರುತ್ತಾರೆ. ಆ ಸಮಯದಲ್ಲಿ ಸಿಕ್ಕಂತಹ ಕುದುರೆಗಳ ಲಾಯಕ್ಕೆ ಹುಲ್ಲು ತಂದು ಹಾಕುವ ಕೆಲಸವನ್ನು ಚೆನ್ನಯ್ಯನವರು ಆಯ್ಕೆ ಮಾಡಿಕೊಳ್ಳುತ್ತಾರೆ.
ಕಾಡಿನಲ್ಲಿ ಹುಲ್ಲು ಕೊಯ್ಯುವಾಗ ಬಿಡುವಿನ ಸಮಯದಲ್ಲಿ ಗುಪ್ತವಾಗಿ ಶಿವನ ಆರಾಧನೆ ಮಾಡುತ್ತಿರುತ್ತಾರೆ. (ಈ ಮೊದಲೆ ಅಸ್ಪೃಶ್ಯ ಜಾತಿಗೆ ಸೇರಿದ ತನಗೆ ಅನ್ಯರಿಂದ ಅಡಚಣೆ ಉಂಟಾಗದಿರಲಿ ಎನ್ನುವುದು ಸಹ ಚನ್ನಯ್ಯರ ಗುಪ್ತ ಭಕ್ತಿಗೆ ಕಾರಣವಾಗಿರಬಹುದು.) ಕೆಲಸ ಮುಗಿದ ನಂತರ ಮನೆಗೆ ಹೋಗಿ ಪತ್ನಿ ನೀಡಿದ ಅಂಬಲಿಯನ್ನು ಶಿವನಿಗೆ ಅರ್ಪಿಸಿ ತಾವು ಸಹ ಸೇವಿಸುತ್ತಿರುತ್ತಾರೆ. ಇದೇ ರೀತಿ ಮಾಡುತ್ತಾ ತಮ್ಮ ಜೀವನದ 60 ವರ್ಷಗಳನ್ನು ಕಳೆಯುತ್ತಾರೆ.
60 ವರ್ಷಗಳವರೆಗೆ ಕೆಲಸದ ಬಿಡುವಿನಲ್ಲಿ ನಿರಂತರವಾಗಿ ಅವರು ಮಾಡುತ್ತಿದ್ದ ಶಿವನ ಆರಾಧನೆ ಎಷ್ಟೊಂದು ಭಕ್ತಿಯಿಂದ ಶರಣಾಗತಿಯಿಂದ ಪ್ರೀತಿಯಿಂದ ನಿಸ್ವಾರ್ಥತೆಯಿಂದ ಕೂಡಿತ್ತೆಂದರೆ ಚೆನ್ನಯ್ಯನವರ ಭಕ್ತಿ ಶಿವನಿಗೆ ಪ್ರಿಯವಾಗುತ್ತದೆ.
ಒಮ್ಮೆ ಚೆನ್ನಯ್ಯ ಮನೆಗೆ ಬಂದು ಅಂಬಲಿ ಸೇವಿಸುವ ಮುಂಚೆ ನಿತ್ಯದಂತೆ ಶಿವನಿಗೆ ಅಂಬಲಿ ಅರ್ಪಿಸುತ್ತಾರೆ. ಇದೇ ಸಮಯಕ್ಕೆ ಚನ್ನಯ್ಯನಿಗೆ ಭಕ್ತಿಯ ಫಲವನ್ನು ನೀಡಬೇಕು ಹಾಗೂ ಗುಪ್ತ ಭಕ್ತಿ ಎಲ್ಲರಿಗೂ ತಿಳಿಯುವಂತೆ ಮಾಡಬೇಕೆನ್ನುವ ಉದ್ದೇಶದಿಂದ ಚೆನ್ನಯ್ಯನ ಮನೆಗೆ ಶಿವನು, ಶರಣರ ವೇಷದಲ್ಲಿ ಬಂದು ಬಿಕ್ಷೆ ಕೇಳುತ್ತಾರೆ. ಆಗ ಚೆನ್ನಯ್ಯನವರು ಶರಣರನ್ನು ಒಳಗೆ ಕರೆದು ತನ್ನ ಹೆಂಡತಿ ಗಂಗಮ್ಮ ತನಗಾಗಿ ಮಾಡಿದ ಅಂಬಲಿಯನ್ನೆ ನೀಡುತ್ತಾರೆ. ಬಡವರ ಮನೆಯ ಅಂಬಲಿಯಾದರೂ ಶಿವಭಕ್ತಿ, ಪ್ರೀತಿ ಅದರಲ್ಲಿ ತುಂಬಿರುವ ಕಾರಣದಿಂದ ಶಿವನಿಗೆ ಅದು ಅಮೃತದಂತಹ ರುಚಿ ನೀಡುತ್ತದೆ. ಆಗ ಶಿವ ಇನ್ನಷ್ಟು ಅಂಬಲಿ ನೀಡಲು ಕೇಳುತ್ತಾನೆ. ಆಗ ಗಡಿಗೆಯಲ್ಲಿ ಉಳಿದಿದ್ದ ಅಂಬಲಿಯನ್ನು ಚನ್ನಯ್ಯ ದಂಪತಿಗಳು ಶರಣ ವೇಷಧಾರಿ ಶಿವನಿಗೆ ಅರ್ಪಿಸುತ್ತಾರೆ.
ಇದೇ ಸಂದರ್ಭದಲ್ಲಿ ಪ್ರತಿದಿನ ಶಿವನ ದೇವಾಲಯದಲ್ಲಿ ಶಿವ ಭಕ್ತ ರಾಜ ಕರೀಕಾಳ ಚೋಳನಿಂದ ಶಿವಾಲಯದ ಶಿವ ಲಿಂಗಕ್ಕೆ ಅರ್ಪಿಸುತ್ತಿದ್ದ ಭಕ್ಷ ಭೋಜ್ಯಗಳನ್ನು ಸ್ವೀಕರಿಸುತ್ತಿದ್ದ ಶಿವ, ಅಂದು ರಾಜನ ಮೃಷ್ಟಾನ್ನ ನೈವೇದ್ಯವನ್ನು ಸ್ವೀಕರಿಸುವುದಿಲ್ಲ.
ಎಷ್ಟು ಹೊತ್ತು ಕಾದರೂ, ಮರೆಯಲ್ಲಿ ನಿಂತರೂ ಶಿವನು ಪ್ರಸಾದ ಸ್ವೀಕರಿಸದಿದ್ದಾಗ ತನ್ನಲ್ಲಿಯೇ ಏನೋ ದೋಷವಿದೆ, ತನ್ನಿಂದಲೇ ಏನೋ ತಪ್ಪಾಗಿದೆ. ಈ ಕಾರಣದಿಂದ ಶಿವ ಪ್ರಸಾದ ಸ್ವೀಕರಿಸುತ್ತಿಲ್ಲ. ತಾನಿನ್ನೂ ಜೀವಂತವಿರಬಾರದೆಂದು, ರಾಜ ತನ್ನ ಖಡ್ಗ ತೆಗೆದು ತನ್ನ ರುಂಡವನ್ನೇ ಕತ್ತರಿಸಲು ಮುಂದಾಗುತ್ತಾನೆ. ಆಗ ಶಿವಲಿಂಗದಿಂದ ಒಂದು ಧ್ವನಿ ಬರುತ್ತದೆ. "ನಿಲ್ಲು ರಾಜ ನಿನ್ನಲ್ಲಿ ಏನು ದೋಷವಿಲ್ಲ. ನಿನ್ನಿಂದ ಏನು ತಪ್ಪಾಗಿಲ್ಲ. ನಿನ್ನ ರಾಜ್ಯದಲ್ಲಿರುವ ಒಬ್ಬ ಭಕ್ತನ ಮನೆಯ ಅಂಬಲಿ ಸೇವಿಸಿರುವ ಕಾರಣ ನಿನ್ನ ನೈವೇದ್ಯಕ್ಕೆ ನನ್ನ ಹೊಟ್ಟೆಯಲ್ಲಿ ಸ್ವಲ್ಪವೂ ಸ್ಥಳವಿಲ್ಲ. ಅದಕ್ಕಾಗಿ ನಾನು ಪ್ರಸಾದ ಸೇವಿಸಲು ಆಗಲಿಲ್ಲವೆಂದು" ಹೇಳಿ ಧ್ವನಿ ಸ್ತಬ್ಧವಾಗುತ್ತದೆ.
ಇದನ್ನು ಕೇಳಿದ ರಾಜನಿಗೆ, ನನ್ನ ರಾಜ್ಯದಲ್ಲಿ ನನಗಿಂತಲೂ ಶ್ರೇಷ್ಠ ಭಕ್ತರಿದ್ದಾರೆಂದು ತಿಳಿದು ದಿಗ್ಭ್ರಮೆಯಾಗುತ್ತದೆ. ಹಾಗೂ ತಾನೇ ಶ್ರೇಷ್ಠ ಶಿವ ಭಕ್ತನೆನ್ನುವ ಅಹಂಕಾರವೂ ಅಳಿಯುತ್ತದೆ. ತನ್ನ ಸೈನಿಕರಿಂದ, ಸಾಕ್ಷಾತ್ ಶಿವನಿಗೆ ಅಂಬಲಿ ನೀಡಿದ ಮಾದಾರ ಚೆನ್ನಯ್ಯನ ವಾಸ್ತವ್ಯದ ಮಾಹಿತಿ ಪಡೆದು, ರಾಜ ತನ್ನ ಆನೆ ಅಂಬಾರಿ ಸೈನಿಕರ ಒಡ್ಡೋಲಗದೊಂದಿಗೆ ಚೆನ್ನಯ್ಯನ ಗುಡಿಸಿಲಿಗೆ ಬರುತ್ತಾನೆ. ಆಗ ಚೆನ್ನಯ್ಯ ಭಯಭೀತನಾಗುತ್ತಾನೆ. ತನ್ನಿಂದ ಏನು ತಪ್ಪಾಗಿದೆ ? ಹೀಗೇಕೆ ರಾಜ ತನ್ನ ಸೈನಿಕರೊಂದಿಗೆ ಬರುತ್ತಿದ್ದಾನೆ ಎಂದು ಮನದಲ್ಲೆ ಅಳಕುತ್ತಾರೆ.
ಆಗ ಬೇಗ ಬೇಗನೆ ಚೆನ್ನಯ್ಯರ ಸಮೀಪಕ್ಕೆ ಓಡೋಡಿ ಬಂದು ಚನ್ನಯ್ಯರಿಗೆ ಉದ್ದಂಡ ನಮಸ್ಕಾರ ಮಾಡುತ್ತಾರೆ. ಆಗ ರಾಜನ ಬಂಗಾರದ ಕೀರಿಟಕ್ಕೆ ಅಂಟಿದ ಫಳಫಳ ಹೊಳೆಯುವ ಮಣಿಯ ಬೆಳಕು ಚೆನ್ನಯ್ಯರ ಪಾದವನ್ನು ಮತ್ತು ಭೂಮಿಯನ್ನು ಬೆಳಗುತ್ತದೆ. ದಣಿವಾಗುವಷ್ಟು ಚೆನ್ನಯ್ಯರ ಪಾದದ ಧೂಳಿಯನ್ನು ರಾಜ ತಮ್ಮ ಹಣೆಗೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಅವಾಕ್ಕಾದ, ದಿಕ್ಕು ತೋಚದಂತಾದ ಚನ್ನಯ್ಯನವರು, ರಾಜನೇ ನಾನ್ಯಾರು ಎಂದು ತಿಳಿದಿದೆಯೇ ? ನನ್ನ ಜಾತಿಯನ್ನು ನೋಡದೆ, ನೀವು ಇಲ್ಲಿಗೆ ಬರಬಹುದೇ ? ನನ್ನ ಕುಲವನ್ನು ನೋಡದೆ ನೀವು ಹೀಗೆ ಮಾಡಬಹುದೇ ? ಎಂದು ಕೇಳುತ್ತಾರೆ..
ಆಗ ರಾಜ ಹೇಳಿದ ಮಾತುಗಳು ಅದ್ಭುತವಾದವು. ಆ ಮಾತುಗಳನ್ನು ಚೆನ್ನಯ್ಯರ ಸಮಯಕ್ಕೆ ಹತ್ತಿರದ ಹನ್ನೆರಡನೇ ಶತಮಾನದ ಹರಿಹರ ಕವಿ ತಮ್ಮ ರಗಳೆ ಕಾವ್ಯದಲ್ಲಿ ದಾಖಲಿಸಿದ್ದಾರೆ.
*ದೇವದೇವನೋಲಿದನ ಕುಲವೇ ಸತ್ಕುಲಂ
ಘನಮಹಿಮನೋಲಿದ ಜಾತಿಯೇ ಜಾತಿ ನಿರ್ಮಲಂ
ಸರ್ವನೋಡಗುಂಡ ನಿಮ್ಮಯ ಜಾತಿಗಾಂ ಸರಿಯೇ*
ಭಾವಾರ್ಥ : ಆ ಸಂದರ್ಭದಲ್ಲಿ ರಾಜ ಕರೀಕಾಳ ಚೋಳ ಚೆನ್ನಯ್ಯರಿಗೆ ಹೇಳುತ್ತಾರೆ, "ಶಿವನೊಂದಿಗೆ ಉಂಡ ನಿಮ್ಮ ಕುಲಕ್ಕೆ ನಾನು ಸಮನೆ ? ಘನಮಹಿಮನೊಲಿದ ಜಾತಿಯೇ ಶ್ರೇಷ್ಠ ಜಾತಿ.
ಸರ್ವಜ್ಞರಾದ ನಿಮ್ಮ ಚಪ್ಪಲಿಗೂ ನಾನು ಸಮನಲ್ಲ.
ದೇವರ ದೇವನೂ ಯಾರಿಗೆ ಒಲಿದನೋ ಅವರ ಕುಲವೇ ಸತ್ಕುಲ. ಅವರ ಕುಲವೇ ಉತ್ತಮ ಕುಲವೆಂದು, ರಾಜ ಕರೀಕಾಳ ಚೋಳ ಚೆನ್ನಯ್ಯ ಸತ್ಕುಲದವನು ಎಂದು ಹೇಳುತ್ತಾರೆ. .....
( ಮುಂದುವರಿಯುವುದು).....
*ದೇವದೇವನೋಲಿದ ಕುಲವೇ ಸತ್ಕುಲಂ* ಭಾಗ -2
ರಾಜ ಕರೀ ಕಾಳ ಚೋಳ ಮಾದರ ಚೆನ್ನಯ್ಯನವರಿಗೆ ಉದ್ದಂಡ ನಮಸ್ಕಾರ ಮಾಡಿ ಶಿವನ ಸಾಕ್ಷಾತ್ಕಾರ ಮಾಡಿದ ನಿಮ್ಮ ಕುಲವೇ ಶ್ರೇಷ್ಠ ಕುಲವೆಂದು ಹೇಳಿದ ನಂತರ ಚೆನ್ನಯ್ಯರಿಗೆ ಇಷ್ಟವಿಲ್ಲದಿದ್ದರೂ ಅವರನ್ನು ಆನೆಯ ಅಂಬಾರಿ ಮೇಲೆ ಕೂಡಿಸಿ ಕಂಚಿ ಪಟ್ಟಣ ತುಂಬಾ ಮೆರವಣಿಗೆ ಮಾಡಿಸಿ ಶಿವಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ.
ಇಂದಿನ ಸಮಯದಲ್ಲಿ ಒಬ್ಬ ಶಾಸಕ ಅಥವಾ ಮಂತ್ರಿಗಳ ಜೊತೆ ಭಾವಚಿತ್ರ ತೆಗೆದುಕೊಂಡರೆ ನಮ್ಮ ಜನ್ಮ ಸಾರ್ಥಕವಾಯಿತು ಎಂದು ನಾವೆಲ್ಲಾ ಯೋಚಿಸುತ್ತೇವೆ. ಆದರೆ
ಇಡೀ ರಾಜ್ಯವನ್ನಾಳುವ ರಾಜನೇ ಕಾಲಿಗೆ ನಮಿಸಿ, ಖುದ್ದಾಗಿ ಇಷ್ಟೊಂದು ಮಾನ ಮರ್ಯಾದೆ ಮಾಡಿದಾಗ ಚೆನ್ನಯ್ಯನವರಿಗೆ ಸಹಜವಾಗಿ ಸಂತೋಷವಾಗಬೇಕಿತ್ತು. ಆದರೆ ಮಾನ ಸಮ್ಮಾನಗಳ ಅಪೇಕ್ಷೆಯಿಲ್ಲದ ನಿಷ್ಕಾಮ ಗುಪ್ತ ಭಕ್ತಿಯನ್ನು ಮಾಡುತ್ತಿದ್ದ ಚೆನ್ನಯ್ಯನವರು ದು:ಖಿತರಾಗುತ್ತಾರೆ.
ಶಿವನೇ ನನಗೆ ಏನೂ ಏನೇನು ಬೇಕಾಗಿರಲಿಲ್ಲ. ನಿನ್ನ ಒಲುಮೆ ಮಾತ್ರ ಬೇಕಾಗಿತ್ತು. ಇದಕ್ಕಾಗಿ ನಾನು ಗುಪ್ತವಾಗಿ ನಿನ್ನ ಆರಾಧನೆ ಮಾಡುತ್ತಿದ್ದೆ. ನೀನು ಇದನ್ನೇಕೆ ಬಹಿರಂಗಪಡಿಸಿದೆಯೆಂದು ಶಿವಾಲಯದಲ್ಲಿಯ ಕಂಬಕ್ಕೆ ತನ್ನ ತಲೆ ಹೊಡೆದುಕೊಂಡು ಜೀವ ತ್ಯಜಿಸಲು ಪ್ರಯತ್ನಿಸುತ್ತಾರೆ. ಆಗ ಶಿವ ಲಿಂಗದಿಂದ ಬಂದ ಧ್ವನಿ ಚನ್ನಯ್ಯರನ್ನು ತಡೆಯುತ್ತದೆ. ಚೆನ್ನಯ್ಯ ದುಡುಕಬೇಡ. ಈ ಜಗತ್ತಿನಲ್ಲಿಯೇ ನಿನ್ನ ಭಕ್ತಿ ಶ್ರೇಷ್ಠವಾದದ್ದು. ನಿನ್ನ ಭಕ್ತಿ ಎಲ್ಲಾ ಜನರಿಗೂ ತಿಳಿಯಲಿ. ಎಲ್ಲರಿಗೂ ಇದು ಮಾರ್ಗದರ್ಶನವಾಗಲಿ ಎಂದೇ ಹೀಗೆ ಮಾಡಿದೆ. ನಿನ್ನ ಭಕ್ತಿ ಮೆಚ್ಚಿದ್ದೇನೆ. ನಿನ್ನ ಅಂಬಲಿ ದಿವ್ಯ ಪ್ರಸಾದವಾಗಲಿ. ನಿನ್ನ ಭಕ್ತಿ ಎಲ್ಲರೂ ಅನುಸರಿಸುವಂತಾಗಲಿ. ನಿನ್ನ ಕೀರ್ತಿ ಜಗತ್ತಿನಲ್ಲಿ ಮೊಳಗಲಿ, ಎಂದು ಹೇಳಿ, ಶಿವಲಿಂಗ ನಿಶಬ್ಧವಾಗುತ್ತದೆ. ಚೋಳ ರಾಜ ಪುನಃ ಚೆನ್ನಯ್ಯನ ಕಾಲಿಗೆ ಬಿದ್ದು ಚನ್ನಯ್ಯನವರನ್ನು ಗುರುವಾಗಿ ಸ್ವೀಕರಿಸಿದ.
ಆದರೂ ಸಹ ಚೆನ್ನಯ್ಯನವರು, ತಾವು ಇನ್ನೂ ಕಂಚಿಯಲ್ಲಿ ಸಾಮಾನ್ಯ ಜೀವನ ನಡೆಸುವುದು ಸಾಧ್ಯವಿಲ್ಲವೆಂದು ಬಸವಣ್ಣನವರ ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿಯ ಅನುಭವ ಮಂಟಪದಲ್ಲಿ ಅನೇಕರು ಚೆನ್ನಯ್ಯನವರನ್ನು ಪ್ರೇರಕ ಶಕ್ತಿಯಾಗಿ ಚೆನ್ನಯ್ಯನವರ ಸಾನಿಧ್ಯವನ್ನು ಪಡೆಯುತ್ತಾರೆ.
ಕಲ್ಯಾಣ ಕ್ರಾಂತಿಯಿಂದಾಗಿ ಅಲ್ಲಿಯೂ ಬಹಳ ದಿನ ಇರಲು ಸಾಧ್ಯವಾಗದೇ ಚೋಳ ರಾಜ್ಯಕ್ಕೆ ಸೇರಿದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುರುಬನ ಕಟ್ಟೆ ಗ್ರಾಮಕ್ಕೆ ಆಗಮಿಸಿ ಜನರಿಗೆ ಉತ್ತಮ ಮಾರ್ಗದರ್ಶನ ಮಾಡುತ್ತಾ, ಅಂತಿಮ ದಿನಗಳನ್ನು ಕಳೆಯುತ್ತಾರೆ. ಈ ಸಂಕ್ಷಿಪ್ತ ವಿಷಯಗಳು ಹರಿಹರನ ರಗಳೆ, ತಮಿಳಿನ ಪೆರಿಯಾ ಪುರಾಣ ಹಾಗೂ ಕನ್ನಡ ಜನಪದ ಸಾಹಿತ್ಯದಲ್ಲಿ ತಿಳಿಸಲಾಗಿದೆ.
ಹನ್ನೆರಡನೇ ಶತಮಾನದಲ್ಲಿ ಅನೇಕ ಶರಣರು ಆಗಿಹೋಗಿದ್ದಾರೆ. ಅವರಲ್ಲಿ ಶಿವನ ಸಾಕ್ಷಾತ್ಕಾರ ಪಡೆದವರು ಅತಿವಿರಳ. ಚನ್ನಯ್ಯನವರ ಶಿವ ಸಾಕ್ಷಾತ್ಕಾರದ ಕುರಿತು, ಚನ್ನಯ್ಯರ ವ್ಯಕ್ತಿತ್ವದ ಕುರಿತು ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಬರೆಯುತ್ತಾರೆ.
ನಡೆ ಚೆನ್ನ, ನುಡಿ ಚೆನ್ನ ಎಲ್ಲಿ ನೋಡಿದೆಡೆ ಚೆನ್ನ
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ
ಸವಿ ನೋಡಿ ಅಂಬಲಿಯ, ರುಚಿಯಾಯಿತ್ತೆಂದು
ಕೂಡಲ ಸಂಗಮ ದೇವಂಗೆ ಬೇಕಂದು ಕೈದೆಗೆದ ನಮ್ಮ ಚೆನ್ನ
ಈ ವಚನದಲ್ಲಿ ಶಿವನಿಗೆ ಅರ್ಪಿಸಿದ ಅಂಬಲಿಯ ವಿಚಾರವೂ ಬರುತ್ತದೆ. ಅದೇ ರೀತಿ ಚೆನ್ನಯ್ಯನವರ ಹೆಸರು ಮಾತ್ರ *ಚೆನ್ನ* ವಾಗಿರದೆ, ಅವರ ನಡೆ, ನುಡಿ ವ್ಯಕ್ತಿತ್ವವೂ ಸಹ "ಚೆನ್ನ" ವಾಗಿತ್ತು, ಎಂದು ದಾಖಲಿಸಿದ್ದಾರೆ.
ಶಿವ ಸಾಕ್ಷಾತ್ಕಾರ ಪಡೆದ ಚೆನ್ನಯ್ಯನವರ ವ್ಯಕ್ತಿತ್ವ ಎಷ್ಟೊಂದು ಸತ್ಯ ನಿಷ್ಠೆ ಶಿವ ಭಕ್ತಿಯಿಂದ ಕೂಡಿತ್ತು ಎನ್ನುವುದನ್ನು ನಾವೆಲ್ಲರೂ ಇಂದು ತಿಳಿಯಬೇಕಾಗಿದೆ. ಅಂದಿನ ಅಸ್ಪೃಶ್ಯ ಜನರ ಸ್ಥಿತಿಗಿಂತ ಇಂದಿನ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಅಂತಹ ತಾರತಮ್ಯದ ಕಷ್ಟಕರವಾದ ಪರಿಸ್ಥಿತಿಯಲ್ಲಿ, ಕೂಲಿ ಮಾಡಿ ಬದುಕು ಸಾಗಿಸುವ ಬಡತನದ ಪರಿಸ್ಥಿತಿಯಲ್ಲಿ, ಸುಲಭವಾಗಿ ವಿದ್ಯೆ ಸಿಗದಂತಹ ಪರಿಸ್ಥಿತಿಯಲ್ಲಿ , ಕಾಯಕದಲ್ಲಿ ಸತ್ಯ ನಿಷ್ಠೆಯನ್ನು ಮೆರೆದು. ಬಿಡುವಿನ ಸಮಯದಲ್ಲಿ ಶಿವ ಧ್ಯಾನಕ್ಕೆ ಮೀಸಲಾಗಿಟ್ಟು ಸಾಕ್ಷಾತ ಶಿವನನ್ನೇ ಒಲಿಸಿಕೊಳ್ಳುವುದು, ಸಾಮಾನ್ಯವಾದ ವಿಷಯವಲ್ಲ . ಅಂದಿನ ವರ್ಣ ವ್ಯವಸ್ಥೆಯ ಕೆಳವರ್ಗದ ಸಮಾಜದಲ್ಲಿ ಜನಿಸಿದರೂ ಉನ್ನತ ಚಿಂತನೆ, ಅಪಾರ ಸತ್ಯ ನಿಷ್ಠೆಯ ನಡೆಯನ್ನು ಮಾದಾರ ಚೆನ್ನಯ್ಯನವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು.
ಅವರ ವಚನಗಳಲ್ಲಿಯೂ ಉನ್ನತ ಚಿಂತನೆಯನ್ನು, ಸತ್ಯ ನಿಷ್ಟೆಯನ್ನೆ ಪ್ರಸ್ತಾಪಿಸಿದ್ದಾರೆ. ಅವರು ಒಂದು ವಚನದಲ್ಲಿ ಹೇಳುತ್ತಾರೆ..
ನಡೆನುಡಿ ಸಿದ್ಧಾಂತವಾದಲ್ಲಿ , ಕುಲ ಹೊಲೆ ಸೂತಕವಿಲ್ಲ,
ನುಡಿ ಲೇಸು, ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ,
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ ?
ಆಚಾರವೇ ಕುಲ, ಅನಾಚಾರವೇ ಹೊಲೆ,
ಇಂತೀ ಉಭಯದ ತಿಳಿದರಿಯಬೇಕು.
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ,
ಅರಿ ನಿಜಾ[ತ್ಮಾ] ರಾಮ ರಾಮನಾ.
ನುಡಿದಂತೆ ನಡೆದರೆ ಹೊಲೆ ಎನ್ನುವ ಸೂತಕವಿಲ್ಲ. ಶ್ರೇಷ್ಠವಾದ ದೊಡ್ಡ ದೊಡ್ಡ ಮಾತುಗಳನ್ನಾಡಿ ಹೀನ ಕೆಲಸಗಳನ್ನು ಮಾಡಿದರೆ ಅದೇ ಬಿಡುಗಡೆಯಿಲ್ಲದ ಹೊಲೆಯಾಗಿದೆಯೆಂದು ಚನ್ನಯ್ಯನವರು ಹೇಳಿದ್ದಾರೆ.
ಮುಂದುವರಿದು ಕಳ್ಳತನ, ಸುಳ್ಳುತನ, ಲಂಪಟತನ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ ಮಾಡುತ್ತಾ ತನ್ನನ್ನೂ ತಾನು ಕುಲದಲ್ಲಿ ಶ್ರೇಷ್ಠ ಎಂದು ಹೇಳುತ್ತಾ ತಿರುಗುವುದು ಅಧಮ ಕೆಲಸ.
ಒಳಿತನ್ನು ಮಾಡುವವನೇ ಶ್ರೇಷ್ಠ ಕುಲದವ. ಅಧಮ ಕೆಡುಕನ್ನು ಮಾಡುವವನೆ ನೀಚ ಜಾತಿಯವನು, ಎಂದು ಮಾದರ ಚೆನ್ನಯ್ಯನವರು ಒತ್ತಿ ಒತ್ತಿ ಹೇಳಿದ್ದಾರೆ.
ಮಾದರ ಚೆನ್ನಯ್ಯನವರ ಶ್ರೇಷ್ಠ ವ್ಯಕ್ತಿತ್ವವನ್ನು, ಅವರ ಉನ್ನತ ಚಿಂತನೆಯನ್ನು, ತತ್ವಜ್ಞಾನವನ್ನು ಜೇಡರ ದಾಸಿಮಯ್ಯ, ಚಾಮರಸ, ಸೊಡ್ಡಲ ಬಾಚರಸ, ಅಮಗಿದೇವ, ವೈಧ್ಯಸಂಗಣ್ಣ, ಸಂಗಮೇಶ್ವರ, ಅಪ್ಪಣ್ಣ, ಶರಣೆ ನೀಲಮ್ಮ, ಚೆನ್ನಬಸವಣ್ಣ ಮುಂತಾದವರು ಸ್ತುತಿ ಮಾಡಿದ್ದಾರೆ. ಬಸವಣ್ಣನವರಂತೂ 33 ವಚನಗಳಲ್ಲಿ ಸ್ತುತಿಸಿದ್ದಾರೆ. ಇನ್ನೂ ಮುಂದೆ ಹೋಗಿ "ಮಾದಾರ ಚೆನ್ನಯ್ಯನ ಮನೆ ಮಗ ನಾನಯ್ಯ" ಎಂದು ಬಸವಣ್ಣನವರು ಕೊಂಡಾಡಿದ್ದಾರೆ. ಇವು ಮಾದಾರ ಚೆನ್ನಯ್ಯನವರ ಉನ್ನತ ವ್ಯಕ್ತಿತ್ವಕ್ಕೆ ಸಿಗುವ ದಾಖಲೆಗಳಾಗಿವೆ.
....................
*ದೇವದೇವನೋಲಿದ ಕುಲವೇ ಸತ್ಕುಲಂ* -3
ಉನ್ನತ ವ್ಯಕ್ತಿತ್ವ ಹೊಂದಿದ, ಎತ್ತರದ ಜೀವಚೈತನ್ಯವೇ ಶಿವಭಕ್ತ ಮಾದರ ಚೆನ್ನಯ್ಯ. ಅಂತಹ ಶಿವಶರಣರ ಮೂರ್ತಿ ಅನಾವರಣ ಇದೇ ತಿಂಗಳ 28 ರಂದು ಭಾನುವಾರ ಸೇಡಂ ನಗರದಲ್ಲಿ ನಡೆಯಲಿದೆ.
ಮಾದರ ಚೆನ್ನಯ್ಯನವರ ಜೀವನ ಕಾಲದ ಹತ್ತಿರದ ಅಂದರೆ 11 ,12 ಮತ್ತು13 ನೇ ಶತಮಾನದ ಸತ್ಯ ನಿಷ್ಠ ಶ್ರೇಷ್ಠ ವ್ಯಕ್ತಿಗಳನ್ನು ಹೊರತುಪಡಿಸಿ, ಕಾಲದ ಪ್ರವಾಹದಲ್ಲಿ ಮುಂದೆ ಬಂದಂತಹ ವಿದ್ವತ ಜನರು ಮಾದರ ಚೆನ್ನಯ್ಯನವರ ಜೀವನದ ಮೇಲೆ ಬೆಳಕು ಚೆಲ್ಲುವ ಸಂಶೋಧನೆಯಾಗಲಿ ಅಥವಾ ಅವರ ಜೀವನವನ್ನು, ಅವರ ಚಿಂತನೆಯನ್ನು ಸಮಾಜದ ಎಲ್ಲಾ ಜನರಿಗೂ ತಲುಪಿಸುವ ಕೆಲಸವಾಗಲಿ ಮಾಡಿಲ್ಲ . ಹೀಗಾಗಿಯೇ ಚನ್ನಯ್ಯನವರ ಸೀಮಿತ ಜೀವನ ಚರಿತ್ರೆ ಹಾಗೂ ಕೇವಲ 10 ರಿಂದ 13 ವಚನಗಳು ಮಾತ್ರ ಇಂದು ಲಭ್ಯವಿದೆ.
ಇದರಿಂದಲೇ ಬಲು ಕಷ್ಟದ ಶಿವನೊಲುಮೆಯ ಸಾಕ್ಷಾತ್ಕಾರ ಪಡೆದ ಚೆನ್ನಯ್ಯನವರ ಅರ್ಹತೆ ಯೋಗ್ಯತೆ ಇನ್ನೂ ಅನೇಕ ವಿಷಯಗಳು ತಿಳಿದಿಲ್ಲ. ಕಾರಣ ಚೆನ್ನಯ್ಯನವರ ಜೀವನದ ಪ್ರತಿ ಹೆಜ್ಜೆಯನ್ನು ದಾಖಲಿಸುವಲ್ಲಿ ವಿದ್ವಾಂಸರು ತೋರಿದ ಉದಾಸೀನತೆ ಹಾಗೂ ನಿರ್ಲಕ್ಷವು ಇಲ್ಲಿ ಎದ್ದು ಕಾಣುತ್ತದೆ.
ಉಡುಪಿ ಶ್ರೀಕೃಷ್ಣನನ್ನು ನೆನೆಯುವಾಗ ಭಕ್ತ ಶ್ರೇಷ್ಠ ಕನಕನ ಕಿಂಡಿ ಎಲ್ಲರ ನೆನಪಿನಲ್ಲಿ ಬರುತ್ತದೆ. ಸೋಲಾಪುರವೆಂದಾಗ ಕಾಯಕ ನಿಷ್ಠ ಶರಣ ಸಿದ್ಧರಾಮೇಶ್ವರರ ನೆನಪಾಗುತ್ತದೆ. ಕಲ್ಯಾಣವೆಂದರೆ ಭಕ್ತಿ ಭಂಡಾರಿ ಬಸವಣ್ಣನವರೇ ಕಣ್ಣಲ್ಲಿ ಬರುತ್ತಾರೆ. ಆದರೆ ಶಿವನ ಸಾಕ್ಷಾತ್ಕಾರ ಪಡೆದರು ಸಹ ಆಧ್ಯಾತ್ಮ ಸಾಧಕರ ಚರಿತ್ರೆಯಲ್ಲಿ ಚನ್ನಯ್ಯನವರ ಹೆಸರು ಬಹುತೇಕ ಕಣ್ಮರೆಯಾಗಿದೆ.
ಎರಡು ಮೂರು ದಶಕಗಳಿಗೂ ಮುಂಚೆ, ಚಿತ್ರದುರ್ಗದಲ್ಲಿ ಮಾದರ ಚೆನ್ನಯ್ಯ ಪೀಠ ಸ್ಥಾಪನೆಗೂ ಮೊದಲು ಬಸವ ಕಲ್ಯಾಣದಂತಹ ಪುಣ್ಯ ಕ್ಷೇತ್ರವನ್ನು ಹೊರತುಪಡಿಸಿ ಚೆನ್ನಯ್ಯನವರ ಹೆಸರು, ಚೆನ್ನಯ್ಯನವರ ಜೀವನ ಚರಿತ್ರೆ ಅನ್ಯ ಸಮಾಜದವರಿಗೆ ಒತ್ತಟ್ಟಿಗಿರಲಿ ಸ್ವತಃ ಅನೇಕ ಮಾದಿಗ ಕುಲ ಬಾಂಧವರಿಗೆ ತಿಳಿದಿರಲಿಲ್ಲ. ನಾವು ಸಹ ಬಾಲಕರಾಗಿದ್ದಾಗ ಎಷ್ಟೋ ಶಿವಶರಣರ ಜೀವನ ಚರಿತ್ರೆ ಕೇಳಿದ್ದೇವೆ. ಎಷ್ಟೋ ವಚನಗಳನ್ನು ಹಾಡಿದ್ದೇವೆ. ಆದರೆ ಆ ಸಂದರ್ಭದಲ್ಲಿ ಮಾದರ ಚೆನ್ನಯ್ಯನವರ ಹೆಸರನ್ನು ಕೇಳಿಲ್ಲ. ಅವರ ವಚನಗಳನ್ನು ಸಹ ಹಾಡಿಲ್ಲ. ಇದು ಚೆನ್ನಯನವರ ಕುರಿತು ವಿದ್ವತ ಜನರ ನಿರ್ಲಕ್ಷಕ್ಕೆ ಕನ್ನಡಿಯಾಗಿದೆ
ಇಂತಹವರ ಮೂರ್ತಿ ಸ್ಥಾಪನೆಯಿಂದಲಾದರೂ ಇಂತಹ ಶಿವಶರಣರ ಜೀವನ, ಚಿಂತನೆ ನಡೆ ನುಡಿಯ ಸ್ಮರಣೆ ನಮಗೂ ಹಾಗೂ ಮುಂಬರುವ ಪೀಳಿಗೆಗೂ ತಲುಪುವುದಕ್ಕೆ ಸಹಾಯವಾಗುತ್ತದೆ. ಅವರ ಜೀವನ, ಅವರ ನಡೆ ನುಡಿ ಜಾತಿ ,ಮತ, ಪಂಥವೆನ್ನದೆ ಎಲ್ಲಾ ಸಮಾಜದ ಜನರಿಗೂ ದಾರಿದೀಪವಾಗಲಿದೆ.
ಅವರಿಂದ ಪ್ರೇರಣೆ ಪಡೆದು ನಾವು ಸಹ ನಮ್ಮ ನಡೆ ನುಡಿಗಳಲ್ಲಿ ಭೇದವಿಲ್ಲದೆ, ನಮ್ಮ ಮಾತು ಹಾಗೂ ಕೆಲಸ ಎರಡನ್ನು ಒಂದೇ ಆಗಿಸುವತ್ತಾ ಮುನ್ನಡೆಯೋಣ.
ಅವರು ತಮ್ಮ ವಚನದಲ್ಲಿ ಹೇಳಿದಂತೆ ನಾವು ಅನ್ಯಾಯ, ಅಧರ್ಮ, ಅನೀತಿ, ಸುಳ್ಳುತನ, ಕಳ್ಳತನ, ಭ್ರಷ್ಟಾಚಾರದ ಅನಾಚಾರದ ಹೊಲೆಯನ್ನು ತ್ಯಜಿಸಿ, ನ್ಯಾಯ, ನೀತಿ, ಧರ್ಮ, ಸತ್ಯತೆಯ ಆಚಾರದ ಮನುಷ್ಯ ಕುಲದತ್ತ ಸಾಗೋಣ.
ಇದೇ ಮಾದಾರ ಚೆನ್ನಯ್ಯನವರು ನಮ್ಮೆಲ್ಲರಿಂದ ಬಯಸಿದ ಆಶಯವಾಗಿದೆ. ನಾವೆಲ್ಲರೂ ಅವರ ನಿರೀಕ್ಷೆಗಳನ್ನು ತಲುಪೋಣ. ಅವರ ನಿಜವಾದ ಅನುಯಾಯಿಗಳಾಗೋಣ. ಇದೇ ನಾವು ಶಿವನೊಲುಮೆಯ ಸಾಕ್ಷಾತ್ಕಾರಿ ಮಾದರ ಚೆನ್ನಯ್ಯನವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.
ಬರುವ ದಿನಗಳಲ್ಲಿ ಮಾದರ ಚೆನ್ನಯ್ಯನವರು ನಮ್ಮೆಲ್ಲರಲ್ಲಿ ತಮ್ಮ ಚಿಂತನೆಯನ್ನು ತುಂಬಿ, ಸತ್ಯ ಕಾಯಕ ನಿಷ್ಠೆಯ ಪಥದಲ್ಲಿ ನಮ್ಮನ್ನು ಸಹ ಮುನ್ನಡೆಸಿ ತಮ್ಮ ದಿವ್ಯ ಚೇತನದೆತ್ತರಕ್ಕೆ ನಮ್ಮನ್ನು ಏರಿಸುವ ಕೆಲಸವಾಗಲಿ.
ಮಾದಿಗ ಸಮಾಜದ ಇತಿಹಾಸ :
ಯಾರು ಇತಿಹಾಸವನ್ನು ಅರಿಯುವುದಿಲ್ಲವೋ, ಅವರು ಹೊಸ ಇತಿಹಾಸವನ್ನು ಸೃಷ್ಟಿಸುವುದಿಲ್ಲ. ಹಾಗೆಯೇ ಯಾರು ತಮ್ಮ ಹಿರಿಯರನ್ನು ಗೌರವಿಸುವುದಿಲ್ಲವೋ, ಅವರನ್ನು ಅವರ ಕಿರಿಯರು ಸಹ ಗೌರವಿಸುವುದಿಲ್ಲ. ಹೀಗಾಗಿ ಇತಿಹಾಸವನ್ನು ಅರಿಯುವುದು. ಹಿರಿಯರನ್ನು ಗೌರವಿಸುವುದು ಬಹಳ ಮುಖ್ಯವಾಗಿದೆ.
ಆದಿ ಜಾಂಬುವಂತ ಸಮಾಜದ ಮೂಲ ಪುರುಷರಾಗಿದ್ದಾರೆ. ಇವರು ಸತ್ಯಯುಗಕ್ಕಿಂತ ಮೊದಲು ಅಂದರೆ ಸೃಷ್ಠಿಯ ಆರಂಭಕ್ಕಿಂತ ಮೊದಲು ಸ್ವತಃ ಬ್ರಹ್ಮದೇವನಿಂದ (ಬ್ರಹ್ಮ ಆಕಳಿಸುವ ಸಮಯದಲ್ಲಿ) ಜನಿಸಿದಂತಹ ಬ್ರಹ್ಮನ ಮಾನಸ ಪುತ್ರರಾಗಿದ್ದಾರೆ. ಸತ್ಯ ಯುಗ ತೇತ್ರಾಯುಗ, ದ್ವಾಪರಯುಗದಲ್ಲಿಯೂ ಇವರ ಕುರಿತು ಗ್ರಂಥಗಳಲ್ಲಿ ಉಲ್ಲೇಖವಿದೆ. ಹನುಮ ದೇವರಂತೆ ಇವರು ಸಹ ಚಿರಂಜೀವಿ ಇರಬಹುದು ಎಂದು ನಂಬಲಾಗಿದೆ.
ಆದಿಜಾಂಬವಂತರೇ ತೇತ್ರಾಯುಗದಲ್ಲಿ ಶ್ರೀರಾಮನಿಗೆ ಯುದ್ಧದಲ್ಲಿ ಸಹಾಯ ಮಾಡಿದವರು. ಹನುಮ ದೇವರಿಗೆ ತಮ್ಮ ಶಕ್ತಿ ಸ್ಮರಣೆ ಮಾಡಿಸಿದವರು ಸಹ ಇವರೇ.
ದ್ವಾಪರದಲ್ಲಿ ಶ್ರೀಕೃಷ್ಣನಿಗೆ ಇವರೇ ತನ್ನ ಮಗಳು ಜಾಂಬವತಿಯನ್ನು ಕೊಟ್ಟು ಮದುವೆ ಮಾಡಿದರು. (ಶ್ರೀಕೃಷ್ಣ ಮತ್ತು ಜಾಂಬುವಂತಿ ಸುಪುತ್ರನೇ ಸಾಂಬ) ಜಾಂಬವಂತರ ಕುರುಹುಗಳು ಮಧ್ಯಪ್ರದೇಶ ಗುಜರಾತ ರಾಜ್ಯದಲ್ಲಿ ಇಂದಿಗೂ ಕಾಣಬಹುದು. ಈಗಲೂ ಆದಿ ಜಾಂಬವ ಮಠ ಕರ್ನಾಟಕದಲ್ಲಿದೆ.
ಮಾದಿಗ ಸಮಾಜವನ್ನು ಮಾತಂಗ ಸಮಾಜ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ, ಮಾತಂಗಿ ದೇವತೆ. ಮಾದಿಗ ಸಮಾಜದವರು ಮುಖ್ಯವಾಗಿ ಆದಿಶಕ್ತಿಯ ವಿವಿಧ ಅವತಾರಗಳನ್ನು ಮುಖ್ಯವಾಗಿ ರೇಣುಕಾ ಯಲ್ಲಮ್ಮನನ್ನು ಆರಾಧಿಸುವವರಾಗಿದ್ದಾರೆ. ಆದಿಶಕ್ತಿ ದೇವಿಯ ದಶ ವಿದ್ಯೆಗಳಲ್ಲಿ ಮಾತಂಗಿ ವಿದ್ಯೆಯೂ ಒಂದಾಗಿದೆ. ಕಲೆ, ಸಂಗೀತ, ವಿಧ್ಯೆಯ ದೇವತೆ ಈಕೆಯಾಗಿದ್ದಾಳೆ. ಈಕೆಯ ಮಕ್ಕಳನ್ನೆ ಮಾತಂಗಿಗಳು ಎಂದು ಕರೆಯಲಾಗಿದೆ.
ಇದಕ್ಕೆ ಸಾಕ್ಷಿಯಾಗಿ ಯಾವುದೇ ದೇವಿಯ ಪುರಾತನ ದೇವಾಲಯದ ಹತ್ತಿರ ಮಾತಂಗಿಯ ದೇವಾಲಯವನ್ನು ಈಗಲೂ ಕಾಣಬಹುದು. ಈ ದೇವಾಲಯದ ಪೂಜಾರಿಗಳು ಇಂದಿಗೂ ಮಾದಿಗ ಸಮಾಜದವರೇ ಆಗಿರುತ್ತಾರೆ. ಇಂದಿಗೂ ನವರಾತ್ರಿ ಮುಂತಾದ ಸಮಯಗಳಲ್ಲಿ ದೇವಿ ಪೂಜೆಯ ಸಂದರ್ಭದಲ್ಲಿ ದೇವಿಗೆ ನೈವೇದ್ಯ ನೀಡಲು ಎಲ್ಲಾ ಸಮಾಜದ ಜನರು ಮಾದಿಗ ಸಮಾಜದ ಮಹಿಳೆಯರನ್ನೆ ಪೂಜಾರಿಗಳಾಗಿ ಪೂಜೆ ಮಾಡಲು ತಮ್ಮ ಮನೆಗಳಿಗೆ ಕರೆದು ನೈವೇದ್ಯ ಅರ್ಪಿಸುತ್ತಾರೆ.
ಶ್ರೀರಾಮನಿಗೆ ಬಾರೆ ಹಣ್ಣುಗಳನ್ನು ತಿನ್ನಿಸಿ ತನ್ನ ಭಕ್ತಿ ತೋರಿದ ಶಬರಿಯ ಗುರುಗಳು ಇದೇ ಸಮಾಜದ ಮಾತಂಗ ಮುನಿಗಳಾಗಿದ್ದಾರೆ. ಇವರ ಮಾತಂಗ ಆಶ್ರಮ ಈ ಹಿಂದಿನ ಕಿಷ್ಕಿಂದಾ, ಇಂದಿನ ಹಂಪಿ ಹತ್ತಿರದ ಹೋಸಪೇಟೆಯಲ್ಲಿ ಈಗಲೂ ಇದೆ.
ಉತ್ತರ ಭಾರತದಲ್ಲಿ ಇದೆ ಸಮಾಜದ ಸಂತ ರವಿದಾಸ ಎನ್ನುವ ಶ್ರೇಷ್ಠ ಭಕ್ತರು ಆಗಿ ಹೋಗಿದ್ದಾರೆ. ಶ್ರೇಷ್ಠ ಭಕ್ತಳಾದ ಕ್ಷತ್ರಿಯ ಕುಲದ ರಾಜಕುಮಾರಿ ಮೀರಾಬಾಯಿ ಇವರಿಂದ ಶಿಷತ್ವ ಪಡೆದವಳಾಗಿದ್ದಾಳೆ.
ಹೀಗೆ ಮಾದಿಗ ಸಮಾಜ ತಳ ಸಮುದಾಯಗಳಲ್ಲಿ ಬಂದರೂ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಆದರೂ ವರ್ಣ ವ್ಯವಸ್ಥೆಯ ಪ್ರಭಾವದಿಂದ ಶೂದ್ರರು ಎನ್ನುವ ನಾಮ ಹೊಂದಿ ಶತಮಾನಗಳವರೆಗೂ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಬಂಧನದಲ್ಲಿ ಸಮಾಜವಿತ್ತು. ಸಮಾಜವನ್ನು ಈ ಬಂಧನದಿಂದ ಬಿಡುಗಡೆಗೊಳಿಸಿದ ಬಾಬಾಸಾಹೇಬ ಅಂಬೇಡ್ಕರನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನೆಯಬೇಕಾಗುತ್ತದೆ. ಮಾದಿಗ ಸಮಾಜದವರ ಮೂಲ ಕುಲ ಕಸಬು ಚಮ್ಮಾರಿಕೆಯಾಗಿದ್ದು. ದೇಶದ ಮೊದಲ ಉಪ ಪ್ರಧಾನಿ ಬಾಬು ಜಗಜೀವನರಾಂರವರು ಚಮ್ಮಾರಿಕೆ ವೃತ್ತಿಯ ಸಮುದಾಯದಿಂದಲೇ ಬಂದವರಾಗಿದ್ದಾರೆ. ರಾಜಕೀಯ ಸ್ವಾತಂತ್ರ್ಯ ಪಡೆದ ನಂತರ ದಲಿತ ಪಂಗಡದಲ್ಲಿಯೇ (ಛಲವಾದಿ) ಬರುವ ದಿ. ಜಮದಣ್ಣ ಪಾಪಣ್ಣ ಸರ್ವೇಶ (ಜೆ.ಪಿ.ಸರ್ವೇಶ) ನಾಲ್ಕು ಅವಧಿಗೆ ಸೇಡಂ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಲಬುರ್ಗಿಯ ಈ ಭಾಗದಲ್ಲಿ ಬಾಬುಜಿ ಅವರಿಗೆ ನಿಕಟವರ್ತಿಗಳಾಗಿದ್ದ ದಿ. ಮಲ್ಲೇಶಪ್ಪಾ ಚಿಮ್ಮನಚೋಡಕರರವರು ಈ ಭಾಗದ ಸಮುದಾಯದ ಮೊಟ್ಟಮೊದಲ ಸರ್ಕಾರಿ ಅಧಿಕಾರಿಗಳಾಗಿ ಬಾಬೂಜಿ ಅವರ ಆಶಯದಂತೆ ಈ ಭಾಗದಲ್ಲಿನ ಅನೇಕ ಅಸ್ಪೃಶ್ಯ ಆಚರಣೆಗಳಾದ ಸಾರ್ವಜನಿಕ ಹೋಟೆಲ್ಗಳಲ್ಲಿ ಅಸ್ಪೃಶ್ಯರಿಗೆ ಚಹಾ ನೀಡದಿರುವುದು, ಕ್ಷೌರ ಮಾಡದಿರುವುದು, ಇನ್ನೂ ಅನೇಕ ಕುನೀತಿಗಳನ್ನು ನಿಲ್ಲಿಸಿದರು. ಈ ಮೊದಲು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು. ನಿವೃತ್ತಿ ನಂತರ ಈ ಭಾಗದ ಅಸ್ಪೃಶ್ಯ ಸಮಾಜದ ವ್ಯಕ್ತಿ ಗೌರವ, ಆಸ್ತಿಗಳ ಹಕ್ಕುಗಳ ಹೋರಾಟಗಳಿಗೆ, ಸಮಾಜ ಸಂಘಟನೆಗೆ ಭದ್ರ ಬುನಾದಿ ಹಾಕಿದವರಾಗಿದ್ದಾರೆ.
ಇದು ಸೃಷ್ಟಿಯ ಆರಂಭದಿಂದ ಇಲ್ಲಿಯವರೆಗೆ ಸಮಾಜದ ಮತ್ತು ಈ ಭಾಗದ ಸಂಕ್ಷಿಪ್ತ ಇತಿಹಾಸವಾಗಿದೆ
✍️ URAIN NAMAH.
.............
Comments
Post a Comment